ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಕೀಚಕವಧ ಪರ್ವ
ಅಧ್ಯಾಯ 21
ಸಾರ
ಕೀಚಕನನ್ನು ಅಂದಿನ ರಾತ್ರಿ ನರ್ತನಶಾಲೆಗೆ ಬರುವಂತೆ ಮಾಡು ಎಂದು ಹೇಳಿ ಭೀಮನು ದ್ರೌಪದಿಯನ್ನು ಕಳುಹಿಸಿದುದು (1-6). ಮರುದಿನ ಕೀಚಕನು ದ್ರೌಪದಿಯನ್ನು ಮತ್ತೆ ಕಾಡಲು, ರಾತ್ರಿ ನರ್ತನಶಾಲೆಯಲ್ಲಿ ಪರಸ್ಪರರ ಮಿಲನಕ್ಕೆ ಒಪ್ಪಿಕೊಳ್ಳುವುದು (7-17). ಕೀಚಕನು ರಾತ್ರಿಯ ಮಿಲನಕ್ಕೆ ಕಾತರದಿಂದ ಸಿದ್ಧನಾಗುತ್ತಿರಲು ದ್ರೌಪದಿಯು ಭೀಮನಲ್ಲಿಗೆ ಹೋಗಿ ರಾತ್ರಿಯ ವ್ಯವಸ್ಥೆಯ ಕುರಿತು ತಿಳಿಸುವುದು, ಭೀಮನು ಕೀಚಕನನ್ನು ಕೊಲ್ಲುವೆನೆಂದು ಭರವಸೆಯನ್ನಿತ್ತಿದ್ದುದು (18-37). ಭೀಮ-ಕೀಚಕರ ಮಲ್ಲಯುದ್ಧ, ಕೀಚಕನ ಮರಣ (38-67).
04021001 ಭೀಮಸೇನ ಉವಾಚ।
04021001a ತಥಾ ಭದ್ರೇ ಕರಿಷ್ಯಾಮಿ ಯಥಾ ತ್ವಂ ಭೀರು ಭಾಷಸೇ।
04021001c ಅದ್ಯ ತಂ ಸೂದಯಿಷ್ಯಾಮಿ ಕೀಚಕಂ ಸಹಬಾಂಧವಂ।।
ಭೀಮಸೇನನು ಹೇಳಿದನು: “ಭದ್ರೇ! ಭೀರು! ನೀನು ಹೇಳಿದಂತೆಯೇ ಮಾಡುತ್ತೇನೆ. ಇಂದು ಕೀಚಕನನ್ನು ಅವನ ಬಾಂಧವರೊಡನೆ ಕೊಲ್ಲುತ್ತೇನೆ.
04021002a ಅಸ್ಯಾಃ ಪ್ರದೋಷೇ ಶರ್ವರ್ಯಾಃ ಕುರುಷ್ವಾನೇನ ಸಂಗಮಂ।
04021002c ದುಃಖಂ ಶೋಕಂ ಚ ನಿರ್ಧೂಯ ಯಾಜ್ಞಸೇನಿ ಶುಚಿಸ್ಮಿತೇ।।
ಶುಚಿಸ್ಮಿತೇ! ಯಾಜ್ಞಸೇನಿ! ದುಃಖ ಶೋಕಗಳನ್ನು ಕೊಡವಿ ಇಂದು ಸಾಯಂಕಾಲ ಅವನನ್ನು ಭೇಟಿಯಾಗು.
04021003a ಯೈಷಾ ನರ್ತನಶಾಲಾ ವೈ ಮತ್ಸ್ಯರಾಜೇನ ಕಾರಿತಾ।
04021003c ದಿವಾತ್ರ ಕನ್ಯಾ ನೃತ್ಯಂತಿ ರಾತ್ರೌ ಯಾಂತಿ ಯಥಾಗೃಹಂ।।
ಮತ್ಸ್ಯರಾಜನಿಂದ ನಿರ್ಮಿತವಾದ ನರ್ತನಶಾಲೆಯಲ್ಲಿ ಕನ್ಯೆಯರು ಹಗಲು ಹೊತ್ತು ನೃತ್ಯಮಾಡಿ ರಾತ್ರಿ ಹೊತ್ತು ಮನೆಗೆ ಹೋಗುತ್ತಾರೆ.
04021004a ತತ್ರಾಸ್ತಿ ಶಯನಂ ಭೀರು ದೃಢಾಂಗಂ ಸುಪ್ರತಿಷ್ಠಿತಂ।
04021004c ತತ್ರಾಸ್ಯ ದರ್ಶಯಿಷ್ಯಾಮಿ ಪೂರ್ವಪ್ರೇತಾನ್ಪಿತಾಮಹಾನ್।।
ಭೀರು! ಅಲ್ಲಿ ಸುಸ್ಥಿತಿಯಲ್ಲಿರುವ ಗಟ್ಟಿಮುಟ್ಟಾದ ಮಂಚವೊಂದಿದೆ. ಅಲ್ಲಿಯೇ ಅವನಿಗೆ ಅವನ ಪೂರ್ವ ಪಿತಾಮಹರ ಪ್ರೇತಗಳನ್ನು ತೋರಿಸಿಕೊಡುತ್ತೇನೆ.
04021005a ಯಥಾ ಚ ತ್ವಾಂ ನ ಪಶ್ಯೇಯುಃ ಕುರ್ವಾಣಾಂ ತೇನ ಸಂವಿದಂ।
04021005c ಕುರ್ಯಾಸ್ತಥಾ ತ್ವಂ ಕಲ್ಯಾಣಿ ಯಥಾ ಸನ್ನಿಹಿತೋ ಭವೇತ್।।
ಕಲ್ಯಾಣಿ! ಅವನೊಂದಿಗೆ ನೀನು ಒಪ್ಪಂದ ಮಾಡಿಕೊಳ್ಳುವಾಗ ನಿನ್ನನ್ನು ಯಾರೂ ಕಾಣದಂತೆ ನೋಡಿಕೊಳ್ಳಬೇಕು. ಅವನು ಅಲ್ಲಿ ಹಾಜರಿರುವಂತೆ ಮಾಡು.””
04021006 ವೈಶಂಪಾಯನ ಉವಾಚ।
04021006a ತಥಾ ತೌ ಕಥಯಿತ್ವಾ ತು ಬಾಷ್ಪಮುತ್ಸೃಜ್ಯ ದುಃಖಿತೌ।
04021006c ರಾತ್ರಿಶೇಷಂ ತದತ್ಯುಗ್ರಂ ಧಾರಯಾಮಾಸತುರ್ ಹೃದಾ।।
ವೈಶಂಪಾಯನನು ಹೇಳಿದನು: “ಅವರಿಬ್ಬರೂ ಹಾಗೆ ಮಾತನಾಡಿಕೊಂಡು, ದುಃಖದಿಂದ ಕಂಬನಿಗರೆದು ಹೃದಯವನ್ನು ಗಟ್ಟಿಮಾಡಿಕೊಂಡು ಅತ್ಯುಗ್ರವಾದ ಆ ಇರುಳಿನ ಉಳಿದ ಭಾಗವನ್ನು ಸಹಿಸಿಕೊಂಡರು.
04021007a ತಸ್ಯಾಂ ರಾತ್ರ್ಯಾಂ ವ್ಯತೀತಾಯಾಂ ಪ್ರಾತರುತ್ಥಾಯ ಕೀಚಕಃ।
04021007c ಗತ್ವಾ ರಾಜಕುಲಾಯೈವ ದ್ರೌಪದೀಮಿದಮಬ್ರವೀತ್।।
ಆ ರಾತ್ರಿಯು ಕಳೆಯಲು ಬೆಳಿಗ್ಗೆ ಎದ್ದು ಕೀಚಕನು ಅರಮನೆಗೆ ಹೋಗಿ ದ್ರೌಪದಿಗೆ ಹೀಗೆಂದು ಹೇಳಿದನು:
04021008a ಸಭಾಯಾಂ ಪಶ್ಯತೋ ರಾಜ್ಞಃ ಪಾತಯಿತ್ವಾ ಪದಾಹನಂ।
04021008c ನ ಚೈವಾಲಭಥಾಸ್ತ್ರಾಣಮಭಿಪನ್ನಾ ಬಲೀಯಸಾ।।
“ಸಭೆಯಲ್ಲಿ ರಾಜನ ಕಣ್ಮುಂದೆಯೇ ನಿನ್ನನ್ನು ಬೀಳಿಸಿ ಕಾಲಿನಿಂದ ಒದ್ದೆ. ನಿನ್ನ ಮೇಲೆ ಬಿದ್ದ ಬಲಿಷ್ಟನಾದ ನನ್ನಿಂದ ನಿನಗೆ ರಕ್ಷಣೆಯೇ ದೊರೆಯಲಿಲ್ಲ.
04021009a ಪ್ರವಾದೇನ ಹಿ ಮತ್ಸ್ಯಾನಾಂ ರಾಜಾ ನಾಮ್ನಾಯಮುಚ್ಯತೇ।
04021009c ಅಹಮೇವ ಹಿ ಮತ್ಸ್ಯಾನಾಂ ರಾಜಾ ವೈ ವಾಹಿನೀಪತಿಃ।।
ವಿರಾಟನನ್ನು ಮತ್ಸ್ಯರಾಜನೆಂದು ಹೆಸರಿಗೆ ಮಾತ್ರ ಕರೆಯುತ್ತಾರೆ. ಸೇನಾಪತಿಯಾಗಿರುವ ನಾನೇ ಮತ್ಸ್ಯರಾಜ.
04021010a ಸಾ ಸುಖಂ ಪ್ರತಿಪದ್ಯಸ್ವ ದಾಸೋ ಭೀರು ಭವಾಮಿ ತೇ।
04021010c ಅಹ್ನಾಯ ತವ ಸುಶ್ರೋಣಿ ಶತಂ ನಿಷ್ಕಾನ್ದದಾಮ್ಯಹಂ।।
ಭೀರು! ಸುಶ್ರೋಣೀ! ನೀನು ಸುಖವನ್ನು ಪಡೆ. ನಾನು ನಿನಗೆ ದಾಸನಾಗುತ್ತೇನೆ. ದಿನಕ್ಕೆ ನೂರು ನಾಣ್ಯಗಳನ್ನು ನಿನಗೆ ಕೊಡುತ್ತೇನೆ.
04021011a ದಾಸೀಶತಂ ಚ ತೇ ದದ್ಯಾಂ ದಾಸಾನಾಮಪಿ ಚಾಪರಂ।
04021011c ರಥಂ ಚಾಶ್ವತರೀಯುಕ್ತಮಸ್ತು ನೌ ಭೀರು ಸಂಗ। ಮಃ।
ನೂರು ದಾಸಿಯರನ್ನೂ ಮತ್ತು ನೂರು ದಾಸರನ್ನೂ, ಹೇಸರೆಗತ್ತೆಗಳನ್ನು ಹೂಡಿದ ರಥವನ್ನೂ ಕೊಡುತ್ತೇನೆ. ಭೀರು! ನಮ್ಮಿಬ್ಬರ ಸಮಾಗಮವಾಗಲಿ!”
04021012 ದ್ರೌಪದ್ಯುವಾಚ।
04021012a ಏಕಂ ಮೇ ಸಮಯಂ ತ್ವದ್ಯ ಪ್ರತಿಪದ್ಯಸ್ವ ಕೀಚಕ।
04021012c ನ ತ್ವಾಂ ಸಖಾ ವಾ ಭ್ರಾತಾ ವಾ ಜಾನೀಯಾತ್ಸಂಗತಂ ಮಯಾ।।
ದ್ರೌಪದಿಯು ಹೇಳಿದಳು: “ಕೀಚಕ! ಇಂದು ನನ್ನದೊಂದು ನಿಬಂಧನೆಯುಂಟು. ಅದನ್ನು ನೀನು ನಡೆಸಿಕೊಡು. ನನ್ನೊಡನೆ ನಿನ್ನ ಈ ಸಮಾಗಮವು ನಿನ್ನ ಸ್ನೇಹಿತರಿಗಾಗಲೀ ಸಹೋದರರಿಗಾಗಲೀ ಗೊತ್ತಾಗಕೂಡದು.
04021013a ಅವಬೋಧಾದ್ಧಿ ಭೀತಾಸ್ಮಿ ಗಂಧರ್ವಾಣಾಂ ಯಶಸ್ವಿನಾಂ।
04021013c ಏವಂ ಮೇ ಪ್ರತಿಜಾನೀಹಿ ತತೋಽಹಂ ವಶಗಾ ತವ।।
ಆ ಯಶಸ್ವಿ ಗಂಧರ್ವರಿಗೆ ಇದು ತಿಳಿದುಬಿಡುತ್ತದೆಯೆಂದು ನಾನು ಹೆದರುತ್ತಿದ್ದೇನೆ. ಹೀಗೆ ನೀನು ನನಗೆ ಆಣೆ ಕೊಡು. ಅನಂತರ ನಾನು ನಿನ್ನ ವಶಳಾಗುತ್ತೇನೆ.”
04021014 ಕೀಚಕ ಉವಾಚ।
04021014a ಏವಮೇತತ್ಕರಿಷ್ಯಾಮಿ ಯಥಾ ಸುಶ್ರೋಣಿ ಭಾಷಸೇ।
04021014c ಏಕೋ ಭದ್ರೇ ಗಮಿಷ್ಯಾಮಿ ಶೂನ್ಯಮಾವಸಥಂ ತವ।।
04021015a ಸಮಾಗಮಾರ್ಥಂ ರಂಭೋರು ತ್ವಯಾ ಮದನಮೋಹಿತಃ।
04021015c ಯಥಾ ತ್ವಾಂ ನಾವಭೋತ್ಸ್ಯಂತಿ ಗಂಧರ್ವಾಃ ಸೂರ್ಯವರ್ಚಸಃ।।
ಕೀಚಕನು ಹೇಳಿದನು: “ಸುಶ್ರೋಣಿ! ಆಗಲಿ. ನೀನು ಹೇಳಿದಂತೆಯೇ ಮಾಡುತ್ತೇನೆ. ಭದ್ರೇ! ರಂಭೋರು! ಸೂರ್ಯವರ್ಚಸ್ವಿಗಳಾದ ಗಂಧರ್ವರು ನಿನ್ನನ್ನು ಕಂಡುಹಿಡಿಯದಂತೆ, ನಿನ್ನಿಂದ ಮದನಮೋಹಿತನಾದ ನಾನು ನಿನ್ನೊಡನೆ ಸಮಾಗಮಕ್ಕಾಗಿ ಯಾರೂ ಇಲ್ಲದ ನಿನ್ನ ಆವಾಸಕ್ಕೆ ನಾನು ಒಬ್ಬನೇ ಬರುತ್ತೇನೆ.”
04021016 ದ್ರೌಪದ್ಯುವಾಚ।
04021016a ಯದಿದಂ ನರ್ತನಾಗಾರಂ ಮತ್ಸ್ಯರಾಜೇನ ಕಾರಿತಂ।
04021016c ದಿವಾತ್ರ ಕನ್ಯಾ ನೃತ್ಯಂತಿ ರಾತ್ರೌ ಯಾಂತಿ ಯಥಾಗೃಹಂ।।
ದ್ರೌಪದಿಯು ಹೇಳಿದಳು: “ಮತ್ಯ್ಸರಾಜನಿಂದ ನಿರ್ಮಿತವಾದ ಆ ನೃತ್ಯಮಂದಿರದಲ್ಲಿ ಕನ್ಯೆಯರು ಹಗಲು ನರ್ತಿಸಿ ರಾತ್ರಿ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ.
04021017a ತಮಿಸ್ರೇ ತತ್ರ ಗಚ್ಛೇಥಾ ಗಂಧರ್ವಾಸ್ತನ್ನ ಜಾನತೇ।
04021017c ತತ್ರ ದೋಷಃ ಪರಿಹೃತೋ ಭವಿಷ್ಯತಿ ನ ಸಂಶಯಃ।।
ಕತ್ತಲಲ್ಲಿ ನೀನು ಅಲ್ಲಿಗೆ ಬಾ. ಗಂಧರ್ವರಿಗೆ ಅದು ತಿಳಿಯದು. ಅಲ್ಲಿ ನಮ್ಮ ತಪ್ಪು ಯಾರಿಗೂ ಗೊತ್ತಾಗುವುದಿಲ್ಲ. ಇದರಲ್ಲಿ ಸಂಶಯವಿಲ್ಲ.””
04021018 ವೈಶಂಪಾಯನ ಉವಾಚ।
04021018a ತಮರ್ಥಂ ಪ್ರತಿಜಲ್ಪಂತ್ಯಾಃ ಕೃಷ್ಣಾಯಾಃ ಕೀಚಕೇನ ಹ।
04021018c ದಿವಸಾರ್ಧಂ ಸಮಭವನ್ಮಾಸೇನೈವ ಸಮಂ ನೃಪ।।
ವೈಶಂಪಾಯನನು ಹೇಳಿದನು: “ನೃಪ! ಈ ಅಭಿಪ್ರಾಯವನ್ನು ಕೀಚಕನಿಗೆ ತಿಳಿಸುವಾಗ ಕೃಷ್ಣೆಗೆ ಅರ್ಧ ದಿವಸವು ತಿಂಗಳಿಗೆ ಸಮಾನವಾಯಿತು.
04021019a ಕೀಚಕೋಽಥ ಗೃಹಂ ಗತ್ವಾ ಭೃಶಂ ಹರ್ಷಪರಿಪ್ಲುತಃ।
04021019c ಸೈರಂಧ್ರೀರೂಪಿಣಂ ಮೂಢೋ ಮೃತ್ಯುಂ ತಂ ನಾವಬುದ್ಧವಾನ್।।
ಆ ಮೇಲೆ ತುಂಬುಹರ್ಷದಲ್ಲಿ ಮುಳುಗಿ ಮನೆಗೆ ಹೋದ ಮೂಢ ಕೀಚಕನಿಗೆ ಸೈರಂಧ್ರೀ ರೂಪದ ಮೃತ್ಯುವಿನ ಅರಿವಾಗಲಿಲ್ಲ.
04021020a ಗಂಧಾಭರಣಮಾಲ್ಯೇಷು ವ್ಯಾಸಕ್ತಃ ಸ ವಿಶೇಷತಃ।
04021020c ಅಲಂಚಕಾರ ಸೋಽಆತ್ಮಾನಂ ಸತ್ವರಃ ಕಾಮಮೋಹಿತಃ।।
ಕಾಮಮೋಹಿತನಾದ ಅವನು ಗಂಧ, ಆಭರಣ ಮತ್ತು ಮಾಲೆಗಳಿಂದ ತನ್ನನ್ನು ತಾನು ಬೇಗ ವಿಶೇಷವಾಗಿ ಅಲಂಕರಿಸಿಕೊಳ್ಳುವುದರಲ್ಲಿ ಮಗ್ನನಾದನು.
04021021a ತಸ್ಯ ತತ್ಕುರ್ವತಃ ಕರ್ಮ ಕಾಲೋ ದೀರ್ಘ ಇವಾಭವತ್।
04021021c ಅನುಚಿಂತಯತಶ್ಚಾಪಿ ತಾಮೇವಾಯತಲೋಚನಾಂ।।
ಆ ವಿಶಾಲಾಕ್ಷಿಯ ಕುರಿತು ಚಿಂತಿಸುತ್ತ ಕೆಲಸಮಾಡುತ್ತಿದ್ದ ಅವನಿಗೆ ತುಂಬಾ ಸಮಯವು ಕಳೆದಂತಾಯಿತು.
04021022a ಆಸೀದಭ್ಯಧಿಕಾ ಚಾಸ್ಯ ಶ್ರೀಃ ಶ್ರಿಯಂ ಪ್ರಮುಮುಕ್ಷತಃ।
04021022c ನಿರ್ವಾಣಕಾಲೇ ದೀಪಸ್ಯ ವರ್ತೀಮಿವ ದಿಧಕ್ಷತಃ।।
ಶೋಭೆಯನ್ನು ತ್ಯಜಿಸಲಿದ್ದ ಅವನ ಶೋಭೆಯು ಆರುವ ಕಾಲದಲ್ಲಿ ಬತ್ತಿಯನ್ನು ಸುಡುವ ದೀಪದಂತೆ ಅತ್ಯಧಿಕವಾಗಿತ್ತು.
04021023a ಕೃತಸಂಪ್ರತ್ಯಯಸ್ತತ್ರ ಕೀಚಕಃ ಕಾಮಮೋಹಿತಃ।
04021023c ನಾಜಾನಾದ್ದಿವಸಂ ಯಾಂತಂ ಚಿಂತಯಾನಃ ಸಮಾಗಮಂ।।
ದ್ರೌಪದಿಯು ಮೂಡಿಸಿದ್ದ ನಂಬಿಕೆಯಿಂದ ಸಮಾಗಮವನ್ನು ಚಿಂತಿಸುತ್ತಿದ್ದ ಕಾಮಮೋಹಿತ ಕೀಚಕನಿಗೆ ದಿವಸ ಕಳೆದು ಹೋದುದೇ ತಿಳಿಯಲಿಲ್ಲ.
04021024a ತತಸ್ತು ದ್ರೌಪದೀ ಗತ್ವಾ ತದಾ ಭೀಮಂ ಮಹಾನಸೇ।
04021024c ಉಪಾತಿಷ್ಠತ ಕಲ್ಯಾಣೀ ಕೌರವ್ಯಂ ಪತಿಮಂತಿಕಾತ್।।
ಅನಂತರ ಕಲ್ಯಾಣಿ ದ್ರೌಪದಿಯು ಅಡುಗೆ ಮನೆಗೆ ಹೋಗಿ ಪತಿ ಕೌರವ್ಯ ಭೀಮನ ಸಮೀಪದಲ್ಲಿ ನಿಂತಳು.
04021025a ತಮುವಾಚ ಸುಕೇಶಾಂತಾ ಕೀಚಕಸ್ಯ ಮಯಾ ಕೃತಃ।
04021025c ಸಂಗಮೋ ನರ್ತನಾಗಾರೇ ಯಥಾವೋಚಃ ಪರಂತಪ।।
ಆ ಸುಕೇಶಿಯು ಅವನಿಗೆ ಹೇಳಿದಳು: “ಪರಂತಪ! ನೀನು ಹೇಳಿದಂತೆ ನರ್ತನ ಗೃಹದಲ್ಲಿ ಕೀಚಕನೊಂದಿಗೆ ನನ್ನ ಸಮಾಗಮವು ವ್ಯವಸ್ಥಿತವಾಗಿದೆ.
04021026a ಶೂನ್ಯಂ ಸ ನರ್ತನಾಗಾರಮಾಗಮಿಷ್ಯತಿ ಕೀಚಕಃ।
04021026c ಏಕೋ ನಿಶಿ ಮಹಾಬಾಹೋ ಕೀಚಕಂ ತಂ ನಿಷೂದಯ।।
ಆ ನಿರ್ಜನ ನರ್ತನಮಂದಿರಕ್ಕೆ ಕೀಚಕನು ಕತ್ತಲಲ್ಲಿ ಏಕಾಂಗಿಯಾಗಿ ಬರುವನು. ಮಹಾಬಾಹು! ಆ ಕೀಚಕನನ್ನು ಕೊಲ್ಲು.
04021027a ತಂ ಸೂತಪುತ್ರಂ ಕೌಂತೇಯ ಕೀಚಕಂ ಮದದರ್ಪಿತಂ।
04021027c ಗತ್ವಾ ತ್ವಂ ನರ್ತನಾಗಾರಂ ನಿರ್ಜೀವಂ ಕುರು ಪಾಂಡವ।।
ಕೌಂತೇಯ! ಪಾಂಡವ! ನರ್ತನಾಗಾರಕ್ಕೆ ಹೋಗಿ ಆ ಮದದರ್ಪಿತ ಸೂತಪುತ್ರ ಕೀಚಕನನ್ನು ನಿರ್ಜೀವನನ್ನಾಗಿ ಮಾಡು.
04021028a ದರ್ಪಾಚ್ಚ ಸೂತಪುತ್ರೋಽಸೌ ಗಂಧರ್ವಾನವಮನ್ಯತೇ।
04021028c ತಂ ತ್ವಂ ಪ್ರಹರತಾಂ ಶ್ರೇಷ್ಠ ನಡಂ ನಾಗ ಇವೋದ್ಧರ।।
ಆ ಸೂತಪುತ್ರನು ದರ್ಪದಿಂದ ಗಂಧರ್ವರನ್ನು ಅವಮಾನಿಸುತ್ತಾನೆ. ಹೊಡೆಯುವವರಲ್ಲಿ ಶ್ರೇಷ್ಠನೇ! ಆನೆಯು ಲಾಳದ ಕಡ್ಡಿಯನ್ನು ಕಿತ್ತೊಗೆಯುವಂತೆ ಅವನನ್ನು ಕಿತ್ತೊಗೆ.
04021029a ಅಶ್ರು ದುಃಖಾಭಿಭೂತಾಯಾ ಮಮ ಮಾರ್ಜಸ್ವ ಭಾರತ।
04021029c ಆತ್ಮನಶ್ಚೈವ ಭದ್ರಂ ತೇ ಕುರು ಮಾನಂ ಕುಲಸ್ಯ ಚ।।
ಭಾರತ! ದುಃಖಾಕ್ರಾಂತೆಯಾದ ನನ್ನ ಕಂಬನಿಯನ್ನು ಒರೆಸು. ನಿನಗೂ ನಿನ್ನ ಕುಲಕ್ಕೂ ಗೌರವವನ್ನು ತಾ. ನಿನಗೆ ಮಂಗಳವಾಗಲಿ.”
04021030 ಭೀಮಸೇನ ಉವಾಚ।
04021030a ಸ್ವಾಗತಂ ತೇ ವರಾರೋಹೇ ಯನ್ಮಾ ವೇದಯಸೇ ಪ್ರಿಯಂ।
04021030c ನ ಹ್ಯಸ್ಯ ಕಂ ಚಿದಿಚ್ಛಾಮಿ ಸಹಾಯಂ ವರವರ್ಣಿನಿ।।
ಭೀಮಸೇನನು ಹೇಳಿದನು: “ವರಾರೋಹೇ! ನಿನಗೆ ಸ್ವಾಗತ! ವರವರ್ಣಿನಿ! ನನಗೆ ಪ್ರಿಯವಾದುದನ್ನು ಹೇಳುತ್ತಿರುವೆ. ಇನ್ನು ನನಗೆ ಯಾರ ಸಹಾಯವೂ ಬೇಡ.
04021031a ಯಾ ಮೇ ಪ್ರೀತಿಸ್ತ್ವಯಾಖ್ಯಾತಾ ಕೀಚಕಸ್ಯ ಸಮಾಗಮೇ।
04021031c ಹತ್ವಾ ಹಿಡಿಂಬಂ ಸಾ ಪ್ರೀತಿರ್ಮಮಾಸೀದ್ವರವರ್ಣಿನಿ।।
ವರವರ್ಣಿನೀ! ಕೀಚಕನ ಸಮಾಗಮದ ಕುರಿತು ನೀನು ಹೇಳಿದುದನ್ನು ಕೀಳಿ ನನಗೆ ಹಿಡಿಂಬನನ್ನು ಕೊಂದಾಗ ಉಂಟಾದ ಸಂತೋಷವೇ ಆಯಿತು.
04021032a ಸತ್ಯಂ ಭ್ರಾತೄಂಶ್ಚ ಧರ್ಮಂ ಚ ಪುರಸ್ಕೃತ್ಯ ಬ್ರವೀಮಿ ತೇ।
04021032c ಕೀಚಕಂ ನಿಹನಿಷ್ಯಾಮಿ ವೃತ್ರಂ ದೇವಪತಿರ್ಯಥಾ।।
ಸತ್ಯಧರ್ಮಗಳ ಮೇಲೆ ಮತ್ತು ಸೋದರರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ದೇವೇಂದ್ರನು ವೃತ್ರನನ್ನು ಕೊಂದಂತೆ ನಾನು ಕೀಚಕನನ್ನು ಕೊಲ್ಲುತ್ತೇನೆ.
04021033a ತಂ ಗಹ್ವರೇ ಪ್ರಕಾಶೇ ವಾ ಪೋಥಯಿಷ್ಯಾಮಿ ಕೀಚಕಂ।
04021033c ಅಥ ಚೇದವಭೋತ್ಸ್ಯಂತಿ ಹಂಸ್ಯೇ ಮತ್ಸ್ಯಾನಪಿ ಧ್ರುವಂ।।
ಆ ಕೀಚಕನನ್ನು ರಹಸ್ಯದಲ್ಲಾಗಲೀ ಬಹಿರಂಗದಲ್ಲಾಗಲೀ ಜಜ್ಜಿ ಹಾಕುವೆನು. ಮತ್ಸ್ಯರಿಗೆ ಇದು ತಿಳಿದರೆ ಅವರನ್ನೂ ಖಂಡಿತವಾಗಿ ಕೊಲ್ಲುವೆನು.
04021034a ತತೋ ದುರ್ಯೋಧನಂ ಹತ್ವಾ ಪ್ರತಿಪತ್ಸ್ಯೇ ವಸುಂಧರಾಂ।
04021034c ಕಾಮಂ ಮತ್ಸ್ಯಮುಪಾಸ್ತಾಂ ಹಿ ಕುಂತೀಪುತ್ರೋ ಯುಧಿಷ್ಠಿರಃ।।
ಬಳಿಕ ದುರ್ಯೋಧನನನ್ನು ವಧಿಸಿ ಭೂಮಿಯನ್ನು ಮರಳಿ ಪಡೆಯುವೆನು. ಕುಂತೀಪುತ್ರ ಯುಧಿಷ್ಠಿರನು ಮತ್ಯ್ಸನನ್ನು ಮನಬಂದಂತೆ ಓಲೈಸಿಕೊಂಡಿರಲಿ.”
04021035 ದ್ರೌಪದ್ಯುವಾಚ।
04021035a ಯಥಾ ನ ಸಂತ್ಯಜೇಥಾಸ್ತ್ವಂ ಸತ್ಯಂ ವೈ ಮತ್ಕೃತೇ ವಿಭೋ।
04021035c ನಿಗೂಢಸ್ತ್ವಂ ತಥಾ ವೀರ ಕೀಚಕಂ ವಿನಿಪಾತಯ।।
ದ್ರೌಪದಿಯು ಹೇಳಿದಳು: “ವಿಭೋ! ವೀರ! ಸತ್ಯವು ಹೊರಬಾರದ ರೀತಿಯಲ್ಲಿ ನನಗಾಗಿ ನೀನು ಕೀಚಕನನ್ನು ರಹಸ್ಯವಾಗಿ ಉರುಳಿಸು.”
04021036 ಭೀಮಸೇನ ಉವಾಚ।
04021036a ಏವಮೇತತ್ಕರಿಷ್ಯಾಮಿ ಯಥಾ ತ್ವಂ ಭೀರು ಭಾಷಸೇ।
04021036c ಅದೃಶ್ಯಮಾನಸ್ತಸ್ಯಾದ್ಯ ತಮಸ್ವಿನ್ಯಾಮನಿಂದಿತೇ।।
04021037a ನಾಗೋ ಬಿಲ್ವಮಿವಾಕ್ರಮ್ಯ ಪೋಥಯಿಷ್ಯಾಮ್ಯಹಂ ಶಿರಃ।
04021037c ಅಲಭ್ಯಾಮಿಚ್ಛತಸ್ತಸ್ಯ ಕೀಚಕಸ್ಯ ದುರಾತ್ಮನಃ।।
ಭೀಮಸೇನನು ಹೇಳಿದನು: “ಭೀರು! ನೀನು ಹೇಳಿದಂತೆಯೇ ಮಾಡುತ್ತೇನೆ. ಅನಿಂದಿತೇ! ಅಲಭ್ಯಳಾದ ನಿನ್ನನ್ನು ಬಯಸುವ ಆ ದುರಾತ್ಮ ಕೀಚಕನನ್ನು ಅವನಿಗೆ ಕಾಣಿಸಿಕೊಳ್ಳದಂತೆ ಆಕ್ರಮಿಸಿ, ಆನೆಯು ಬಿಲ್ವವನ್ನು ಜಜ್ಜಿಹಾಕುವಂತೆ ಅವನ ತಲೆಯನ್ನು ಇಂದು ಕತ್ತಲಲ್ಲಿ ಜಜ್ಜಿಹಾಕುವೆನು.””
04021038 ವೈಶಂಪಾಯನ ಉವಾಚ।
04021038a ಭೀಮೋಽಥ ಪ್ರಥಮಂ ಗತ್ವಾ ರಾತ್ರೌ ಚನ್ನ ಉಪಾವಿಶತ್।
04021038c ಮೃಗಂ ಹರಿರಿವಾದೃಶ್ಯಃ ಪ್ರತ್ಯಾಕಾಮ್ಕ್ಷತ್ಸ ಕೀಚಕಂ।।
ವೈಶಂಪಾಯನನು ಹೇಳಿದನು: “ಬಳಿಕ ಆ ಭೀಮನು ರಾತ್ರಿಯಲ್ಲಿ ವೇಷ ಮರೆಸಿಕೊಂಡು ಅಲ್ಲಿಗೆ ಮೊದಲೇ ಹೋಗಿ ಕಣ್ಣಿಗೆ ಬೀಳದಂತೆ, ಸಿಂಹವು ಜಿಂಕೆಗಾಗಿ ಕಾಯುವಂತೆ ಕಾದು ಕುಳಿತುಕೊಂಡನು.
04021039a ಕೀಚಕಶ್ಚಾಪ್ಯಲಂಕೃತ್ಯ ಯಥಾಕಾಮಮುಪಾವ್ರಜತ್।
04021039c ತಾಂ ವೇಲಾಂ ನರ್ತನಾಗಾರೇ ಪಾಂಚಾಲೀಸಂಗಮಾಶಯಾ।।
ಕೀಚಕನಾದರೋ ಯಥೇಚ್ಛವಾಗಿ ಸಿಂಗರಿಸಿಕೊಂಡು ದ್ರೌಪದಿಯನ್ನು ಕೂಡುವ ಆಸೆಯಿಂದ ಆ ವೇಳೆಗೆ ನರ್ತನ ಶಾಲೆಗೆ ಹೋದನು.
04021040a ಮನ್ಯಮಾನಃ ಸ ಸಂಕೇತಮಾಗಾರಂ ಪ್ರಾವಿಶಚ್ಚ ತಂ।
04021040c ಪ್ರವಿಶ್ಯ ಚ ಸ ತದ್ವೇಶ್ಮ ತಮಸಾ ಸಂವೃತಂ ಮಹತ್।।
04021041a ಪೂರ್ವಾಗತಂ ತತಸ್ತತ್ರ ಭೀಮಮಪ್ರತಿಮೌಜಸಂ।
04021041c ಏಕಾಂತಮಾಸ್ಥಿತಂ ಚೈನಮಾಸಸಾದ ಸುದುರ್ಮತಿಃ।।
ಅವನು ಸಂಕೇತವನ್ನು ಸೂಚಿಸುತ್ತಾ ಆ ನರ್ತನ ಶಾಲೆಯನ್ನು ಪ್ರವೇಶಿಸಿದನು. ಗಾಢಾಂಧಕಾರದಿಂದ ಆವೃತವಾಗಿದ್ದ ಆ ಭವನವನ್ನು ಪ್ರವೇಸಿಸಿದ ಆ ದುರ್ಮತಿಯು ಮೊದಲೇ ಅಲ್ಲಿಗೆ ಬಂದು ಏಕಾಂತದಲ್ಲಿದ್ದ ಅಪ್ರತಿಮ ಪರಾಕ್ರಮಿ ಭೀಮನನ್ನು ಸಮೀಪಿಸಿದನು.
04021042a ಶಯಾನಂ ಶಯನೇ ತತ್ರ ಮೃತ್ಯುಂ ಸೂತಃ ಪರಾಮೃಶತ್।
04021042c ಜಾಜ್ವಲ್ಯಮಾನಂ ಕೋಪೇನ ಕೃಷ್ಣಾಧರ್ಷಣಜೇನ ಹ।।
ಕೃಷ್ಣೆಯ ಅಪಮಾನದಿಂದ ಹುಟ್ಟಿದ ಕೋಪದಿಂದ ಉರಿಯುತ್ತ ಅಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ಮೃತ್ಯುವನ್ನು ಆ ಸೂತನು ಮುಟ್ಟಿದನು.
04021043a ಉಪಸಂಗಮ್ಯ ಚೈವೈನಂ ಕೀಚಕಃ ಕಾಮಮೋಹಿತಃ।
04021043c ಹರ್ಷೋನ್ಮಥಿತಚಿತ್ತಾತ್ಮಾ ಸ್ಮಯಮಾನೋಽಭ್ಯಭಾಷತ।।
ಕಾಮಮೋಹಿತನಾದ ಆ ಕೀಚಕನು ಅವನನ್ನು ಸಮೀಪಿಸಿ ಹರ್ಷದಿಂದ ಮನಸ್ಸು ಮತ್ತು ಆತ್ಮಗಳು ಕಲಕಿದವನಾಗಿ ನಸುನಗುತ್ತಾ ಹೇಳಿದನು:
04021044a ಪ್ರಾಪಿತಂ ತೇ ಮಯಾ ವಿತ್ತಂ ಬಹುರೂಪಮನಂತಕಂ।
04021044c ತತ್ಸರ್ವಂ ತ್ವಾಂ ಸಮುದ್ದಿಶ್ಯ ಸಹಸಾ ಸಮುಪಾಗತಃ।।
“ಕೊನೆಯಿಲ್ಲದ ಬಹುವಿಧದ ಐಶ್ವರ್ಯವನ್ನು ನಾನು ನಿನಗೆಂದು ತೆಗೆದುಕೊಂಡು ಆತುರದಿಂದ ಬಂದಿದ್ದೇನೆ.
04021045a ನಾಕಸ್ಮಾನ್ಮಾಂ ಪ್ರಶಂಸಂತಿ ಸದಾ ಗೃಹಗತಾಃ ಸ್ತ್ರಿಯಃ।
04021045c ಸುವಾಸಾ ದರ್ಶನೀಯಶ್ಚ ನಾನ್ಯೋಽಸ್ತಿ ತ್ವಾದೃಶಃ ಪುಮಾನ್।।
ಮನೆಯಲ್ಲಿರುವ ಹೆಂಗಸರು ಸುವಸ್ತ್ರಶೋಭಿತನೂ ಸುಂದರನೂ ಆದ ನಿನ್ನಂತಹ ಪುರುಷನು ಬೇರೊಬ್ಬನಿಲ್ಲ ಎಂದು ಹೊಗಳುತ್ತಿರುತ್ತಾರೆ. ಅದೇನೂ ಆಕಸ್ಮಿಕವಿಲ್ಲ ತಾನೇ?”
04021046 ಭೀಮಸೇನ ಉವಾಚ।
04021046a ದಿಷ್ಟ್ಯಾ ತ್ವಂ ದರ್ಶನೀಯೋಽಸಿ ದಿಷ್ಟ್ಯಾತ್ಮಾನಂ ಪ್ರಶಂಸಸಿ।
04021046c ಈದೃಶಸ್ತು ತ್ವಯಾ ಸ್ಪರ್ಶಃ ಸ್ಪೃಷ್ಟಪೂರ್ವೋ ನ ಕರ್ಹಿ ಚಿತ್।।
ಭೀಮಸೇನನು ಹೇಳಿದನು: “ಅದೃಷ್ಟವಶಾತ್ ನೀನು ಸುಂದರನಾಗಿರುವೆ. ಅದೃಷ್ಟವಶಾತ್ ನಿನ್ನನ್ನು ನೀನೇ ಹೊಗಳಿಕೊಳ್ಳುತ್ತಿರುವೆ. ಇಂತಹ ಸ್ಪರ್ಶವನ್ನು ನೀನು ಹಿಂದೆಂದೂ ಅನುಭವಿಸಿರಲಾರೆ.””
04021047 ವೈಶಂಪಾಯನ ಉವಾಚ।
04021047a ಇತ್ಯುಕ್ತ್ವಾ ತಂ ಮಹಾಬಾಹುರ್ಭೀಮೋ ಭೀಮಪರಾಕ್ರಮಃ।
04021047c ಸಮುತ್ಪತ್ಯ ಚ ಕೌಂತೇಯಃ ಪ್ರಹಸ್ಯ ಚ ನರಾಧಮಂ।
04021047e ಭೀಮೋ ಜಗ್ರಾಹ ಕೇಶೇಷು ಮಾಲ್ಯವತ್ಸು ಸುಗಂಧಿಷು।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಆ ಮಹಾಬಾಹು ಭೀಮಪರಾಕ್ರಮಿ ಕೌಂತೇಯ ಭೀಮನು ನಕ್ಕು ಮೇಲೆ ನೆಗೆದು ಆ ನರಾಧಮನ ಮಾಲೆಗಳಿಂದ ಕೂಡಿ ಸುಗಂಧಯುತವಾದ ಕೂದಲನ್ನು ಹಿಡಿದುಕೊಂಡನು.
04021048a ಸ ಕೇಶೇಷು ಪರಾಮೃಷ್ಟೋ ಬಲೇನ ಬಲಿನಾಂ ವರಃ।
04021048c ಆಕ್ಷಿಪ್ಯ ಕೇಶಾನ್ವೇಗೇನ ಬಾಹ್ವೋರ್ಜಗ್ರಾಹ ಪಾಂಡವಂ।।
ಭೀಮನು ಹೀಗೆ ಬಲವಾಗಿ ಕೂದಲನ್ನು ಹಿಡಿಯಲು ಬಲಿಗಳಲ್ಲಿ ಶ್ರೇಷ್ಠನಾದ ಕೀಚಕನು ರಭಸದಿಂದ ಕೂದಲನ್ನು ಕಿತ್ತು ಬಿಡಿಸಿಕೊಂಡು ಪಾಂಡವನ ತೋಳುಗಳನ್ನು ಹಿಡಿದನು.
04021049a ಬಾಹುಯುದ್ಧಂ ತಯೋರಾಸೀತ್ಕ್ರುದ್ಧಯೋರ್ನರಸಿಂಹಯೋಃ।
04021049c ವಸಂತೇ ವಾಶಿತಾಹೇತೋರ್ಬಲವದ್ಗಜಯೋರಿವ।।
ವಸಂತ ಋತುವಿನಲ್ಲಿ ಹೆಣ್ಣಾನೆಗಾಗಿ ಎರಡು ಬಲವಾದ ಆನೆಗಳ ನಡುವೆ ನಡೆಯುವಂತೆ ಆ ಇಬ್ಬರು ಕೃದ್ಧರಾದ ನರಶ್ರೇಷ್ಠರ ನಡುವೆ ಬಾಹು ಯುದ್ಧವು ನಡೆಯಿತು.
04021050a ಈಷದಾಗಲಿತಂ ಚಾಪಿ ಕ್ರೋಧಾಚ್ಚಲಪದಂ ಸ್ಥಿತಂ।
04021050c ಕೀಚಕೋ ಬಲವಾನ್ಭೀಮಂ ಜಾನುಭ್ಯಾಮಾಕ್ಷಿಪದ್ಭುವಿ।।
ಬಲಶಾಲಿ ಕೀಚಕನು ತುಸು ತತ್ತರಿಸಿದರೂ ಕೋಪದಿಂದ ಹೆಜ್ಜೆ ಸಡಿಲಿಸಿದ ಭೀಮನನ್ನು ಮಂಡಿಯಿಂದ ಗುದ್ದಿ ನೆಲಕ್ಕೆ ಅದುಮಿದನು.
04021051a ಪಾತಿತೋ ಭುವಿ ಭೀಮಸ್ತು ಕೀಚಕೇನ ಬಲೀಯಸಾ।
04021051c ಉತ್ಪಪಾತಾಥ ವೇಗೇನ ದಂಡಾಹತ ಇವೋರಗಃ।।
ಬಲಶಾಲಿ ಕೀಚಕನಿಂದ ನೆಲಕ್ಕೆ ಕೆಡುಹಲ್ಪಟ್ಟ ಭೀಮನಾದರೂ ದೊಣ್ಣೆಯಿಂದ ಪೆಟ್ಟುತಿಂದ ಹಾವಿನಂತೆ ವೇಗವಾಗಿ ಮೇಲೆ ಚಿಮ್ಮಿದನು.
04021052a ಸ್ಪರ್ಧಯಾ ಚ ಬಲೋನ್ಮತ್ತೌ ತಾವುಭೌ ಸೂತಪಾಂಡವೌ।
04021052c ನಿಶೀಥೇ ಪರ್ಯಕರ್ಷೇತಾಂ ಬಲಿನೌ ನಿಶಿ ನಿರ್ಜನೇ।।
ಬಲಶಾಲಿಗಳಾದ ಆ ಕೀಚಕ-ಭೀಮರಿಬ್ಬರೂ ಸ್ಪರ್ಧೆಯಿಂದ ಬಲೋನ್ಮತ್ತರಾಗಿ ಆ ನಿರ್ಜನ ತಾಣದಲ್ಲಿ ನಟ್ಟಿರುಳು ಹೋರಾಡಿದರು.
04021053a ತತಸ್ತದ್ಭವನಶ್ರೇಷ್ಠಂ ಪ್ರಾಕಂಪತ ಮುಹುರ್ಮುಹುಃ।
04021053c ಬಲವಚ್ಚಾಪಿ ಸಂಕ್ರುದ್ಧಾವನ್ಯೋನ್ಯಂ ತಾವಗರ್ಜತಾಂ।।
ಹೀಗೆ ಸಂಕೃದ್ಧರಾದ ಅವರಿಬ್ಬರೂ ಪರಸ್ಪರ ಗರ್ಜಿಸುತ್ತಿರಲು ಆ ಶ್ರೇಷ್ಠ ಭವನವು ದೃಢವಾಗಿದ್ದರೂ ಕೂಡ ಮತ್ತೆ ಮತ್ತೆ ಕಂಪಿಸುತ್ತಿತ್ತು.
04021054a ತಲಾಭ್ಯಾಂ ತು ಸ ಭೀಮೇನ ವಕ್ಷಸ್ಯಭಿಹತೋ ಬಲೀ।
04021054c ಕೀಚಕೋ ರೋಷಸಂತಪ್ತಃ ಪದಾನ್ನ ಚಲಿತಃ ಪದಂ।।
ಭೀಮನು ಅಂಗೈಯಿಂದ ಎದೆಗೆ ಗುದ್ದಲು ರೋಷಸಂತಪ್ತನಾದ ಬಲಶಾಲಿ ಕೀಚಕನು ಒಂದು ಹೆಜ್ಜೆಯಷ್ಟೂ ವಿಚಲಿತನಾಗಲಿಲ್ಲ.
04021055a ಮುಹೂರ್ತಂ ತು ಸ ತಂ ವೇಗಂ ಸಹಿತ್ವಾ ಭುವಿ ದುಃಸ್ಸಹಂ।
04021055c ಬಲಾದಹೀಯತ ತದಾ ಸೂತೋ ಭೀಮಬಲಾರ್ದಿತಃ।।
ಭೀಮನಿಂದ ಬಲವಾಗಿ ಗುದ್ದಲ್ಪಟ್ಟ ಕೀಚಕನು ಲೋಕದಲ್ಲಿ ದುಃಸ್ಸಹವಾದ ಆ ರಭಸವನ್ನು ಮುಹೂರ್ತಕಾಲ ಸಹಿಸಿಕೊಂಡು ಅನಂತರ ಬಲಗುಂದಿದನು.
04021056a ತಂ ಹೀಯಮಾನಂ ವಿಜ್ಞಾಯ ಭೀಮಸೇನೋ ಮಹಾಬಲಃ।
04021056c ವಕ್ಷಸ್ಯಾನೀಯ ವೇಗೇನ ಮಮಂಥೈನಂ ವಿಚೇತಸಂ।।
ಅವನು ದುರ್ಬಲನಾದುದನ್ನು ಕಂಡು ಮಹಾಬಲಿ ಭೀಮಸೇನನು ವೇಗದಿಂದ ಅವನನ್ನು ತನ್ನೆಡೆಗೆ ಎಳೆದುಕೊಂಡು ಪ್ರಜ್ಞೆತಪ್ಪುವಂತೆ ಹಿಂಡತೊಡಗಿದನು.
04021057a ಕ್ರೋಧಾವಿಷ್ಟೋ ವಿನಿಃಸ್ಪೃಸ್ಯ ಪುನಶ್ಚೈನಂ ವೃಕೋದರಃ।
04021057c ಜಗ್ರಾಹ ಜಯತಾಂ ಶ್ರೇಷ್ಠಃ ಕೇಶೇಷ್ವೇವ ತದಾ ಭೃಶಂ।।
ವಿಜಯಿಗಳಲ್ಲಿ ಶ್ರೇಷ್ಠನೂ ಕ್ರೋಧಾವಿಷ್ಟನೂ ಆದ ವೃಕೋದರನು ಜೋರಾಗಿ ಉಸಿರಾಡುತ್ತಾ ಪುನಃ ಅವನ ಕೂದಲನ್ನು ಬಲವಾಗಿ ಹಿಡಿದುಕೊಂಡನು.
04021058a ಗೃಹೀತ್ವಾ ಕೀಚಕಂ ಭೀಮೋ ವಿರುರಾವ ಮಹಾಬಲಃ।
04021058c ಶಾರ್ದೂಲಃ ಪಿಶಿತಾಕಾಂಕ್ಷೀ ಗೃಹೀತ್ವೇವ ಮಹಾಮೃಗಂ।।
ಹುಲಿಯು ಮಾಂಸದ ಬಯಕೆಯಿಂದ ದೊಡ್ಡ ಜಿಂಕೆಯನ್ನು ಹಿಡಿದು ಗರ್ಜಿಸುವಂತೆ ಮಹಾಬಲಿ ಬೀಮನು ಕೀಚಕನನ್ನು ಹಿಡಿದುಕೊಂಡು ಗರ್ಜಿಸಿದನು.
04021059a ತಸ್ಯ ಪಾದೌ ಚ ಪಾಣೀ ಚ ಶಿರೋ ಗ್ರೀವಾಂ ಚ ಸರ್ವಶಃ।
04021059c ಕಾಯೇ ಪ್ರವೇಶಯಾಮಾಸ ಪಶೋರಿವ ಪಿನಾಕಧೃಕ್।।
ಪಿನಾಕಪಾಣಿ ಈಶ್ವರನು ಪಶುವಿಗೆ ಮಾಡಿದಂತೆ ಅವನ ಕೈ ಕಾಲು ತಲೆ ಮತ್ತು ಕತ್ತುಗಳನ್ನು ಸಂಪೂರ್ಣವಾಗಿ ಅವನ ದೇಹದೊಳಕ್ಕೆ ತುರುಕಿದನು.
04021060a ತಂ ಸಮ್ಮಥಿತಸರ್ವಾಂಗಂ ಮಾಂಸಪಿಂಡೋಪಮಂ ಕೃತಂ।
04021060c ಕೃಷ್ಣಾಯೈ ದರ್ಶಯಾಮಾಸ ಭೀಮಸೇನೋ ಮಹಾಬಲಃ।।
ಎಲ್ಲ ಅಂಗಗಳು ಜಜ್ಜಿಹೋಗಿ ಮಾಂಸದ ಮುದ್ದೆಯಂತಾಗಿದ್ದ ಅವನನ್ನು ಮಹಾಬಲಿ ಭೀಮನು ಕೃಷ್ಣೆಗೆ ತೋರಿಸಿದನು.
04021061a ಉವಾಚ ಚ ಮಹಾತೇಜಾ ದ್ರೌಪದೀಂ ಪಾಂಡುನಂದನಃ।
04021061c ಪಶ್ಯೈನಮೇಹಿ ಪಾಂಚಾಲಿ ಕಾಮುಕೋಽಯಂ ಯಥಾ ಕೃತಃ।।
ಮಹಾತೇಜಸ್ವಿ ಪಾಂಡುನಂದನನು ದ್ರೌಪದಿಗೆ ಹೀಗೆ ಹೇಳಿದನು: “ಪಾಂಚಾಲೀ! ಇವನನ್ನು ನೋಡು. ಈ ಕಾಮುಕನಿಗೆ ಏನಾಗಿದೆಯೆಂಬುದನ್ನು ನೋಡು.”
04021062a ತಥಾ ಸ ಕೀಚಕಂ ಹತ್ವಾ ಗತ್ವಾ ರೋಷಸ್ಯ ವೈ ಶಮಂ।
04021062c ಆಮಂತ್ರ್ಯ ದ್ರೌಪದೀಂ ಕೃಷ್ಣಾಂ ಕ್ಷಿಪ್ರಮಾಯಾನ್ಮಹಾನಸಂ।।
ಹೀಗೆ ಕೀಚಕನನ್ನು ಕೊಂದು ಕೋಪವನ್ನು ತಣಿಸಿಕೊಂಡ ಆ ಭೀಮನು ದ್ರೌಪದಿ ಕೃಷ್ಣೆಯನ್ನು ಬೀಳ್ಕೊಂಡು ಬೇಗ ಅಡುಗೆಮನೆಗೆ ಹೋದನು.
04021063a ಕೀಚಕಂ ಘಾತಯಿತ್ವಾ ತು ದ್ರೌಪದೀ ಯೋಷಿತಾಂ ವರಾ।
04021063c ಪ್ರಹೃಷ್ಟಾ ಗತಸಂತಾಪಾ ಸಭಾಪಾಲಾನುವಾಚ ಹ।।
ಸ್ತ್ರೀಯರಲ್ಲಿ ಶ್ರೇಷ್ಠಳಾದ ದ್ರೌಪದಿಯಾದರೋ ಕೀಚಕನನ್ನು ಕೊಲ್ಲಿಸಿ ಹರ್ಷಿತಳಾಗಿ ಸಂತಾಪವನ್ನು ನೀಗಿ ಭವನರಕ್ಷಕರಿಗೆ ಹೇಳಿದಳು:
04021064a ಕೀಚಕೋಽಯಂ ಹತಃ ಶೇತೇ ಗಂಧರ್ವೈಃ ಪತಿಭಿರ್ಮಮ।
04021064c ಪರಸ್ತ್ರೀಕಾಮಸಮ್ಮತ್ತಃ ಸಮಾಗಚ್ಛತ ಪಶ್ಯತ।।
“ಬಂದು ನೋಡಿ! ಪರಸ್ತ್ರೀಕಾಮದಿಂದ ಮತ್ತನಾದ ಈ ಕೀಚಕನು ನನ್ನ ಪತಿಗಳಾದ ಗಂಧರ್ವರಿಂದ ಹತನಾಗಿ ಮಲಗಿದ್ದಾನೆ!”
04021065a ತಚ್ಚ್ರುತ್ವಾ ಭಾಷಿತಂ ತಸ್ಯಾ ನರ್ತನಾಗಾರರಕ್ಷಿಣಃ।
04021065c ಸಹಸೈವ ಸಮಾಜಗ್ಮುರಾದಾಯೋಲ್ಕಾಃ ಸಹಸ್ರಶಃ।।
ಅವಳ ಈ ಮಾತುಗಳನ್ನು ಕೇಳಿದ ನಾಟ್ಯಶಾಲೆಯ ರಕ್ಷಕರು ಪಂಜುಗಳನ್ನು ಹಿಡಿದು ಸಹಸ್ರ ಸಂಖ್ಯೆಗಳಲ್ಲಿ ಆ ಕೂಡಲೇ ಬಂದರು.
04021066a ತತೋ ಗತ್ವಾಥ ತದ್ವೇಶ್ಮ ಕೀಚಕಂ ವಿನಿಪಾತಿತಂ।
04021066c ಗತಾಸುಂ ದದೃಶುರ್ಭೂಮೌ ರುಧಿರೇಣ ಸಮುಕ್ಷಿತಂ।।
ಅನಂತರ ಆ ಭವನಕ್ಕೆ ಹೋಗಿ ಪ್ರಾಣವಿಲ್ಲದೇ ರಕ್ತದಿಂದ ತೊಯ್ದು ನೆಲದ ಮೇಲೆ ಬಿದ್ದಿದ್ದ ಕೀಚಕನನ್ನು ಕಂಡರು.
04021067a ಕ್ವಾಸ್ಯ ಗ್ರೀವಾ ಕ್ವ ಚರಣೌ ಕ್ವ ಪಾಣೀ ಕ್ವ ಶಿರಸ್ತಥಾ।
04021067c ಇತಿ ಸ್ಮ ತಂ ಪರೀಕ್ಷಂತೇ ಗಂಧರ್ವೇಣ ಹತಂ ತದಾ।।
ಗಂಧರ್ವರಿಂದ ಹತನಾದ ಅವನನ್ನು ನೋಡಿ “ಇವನ ಕೊರಳೆಲ್ಲಿ? ಕಾಲುಗಳೆಲ್ಲಿ? ಕೈಗಳೆಲ್ಲಿ? ತಲೆಯಲ್ಲಿ?” ಎಂದು ಹುಡುಕಾಡಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ಕೀಚಕವಧೇ ಏಕವಿಂಶೋಽಧ್ಯಾಯಃ ।
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ಕೀಚಕವಧೆಯುಲ್ಲಿ ಇಪ್ಪತ್ತೊಂದನೆಯ ಅಧ್ಯಾಯವು.