019 ದ್ರೌಪದೀಭೀಮಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಕೀಚಕವಧ ಪರ್ವ

ಅಧ್ಯಾಯ 19

ಸಾರ

ದ್ರೌಪದಿಯು ಭೀಮನಲ್ಲಿ ತನ್ನ ದುಃಖಕ್ಕೆ ಕಾರಣವನ್ನು ಹೇಳಿಕೊಳ್ಳುವುದು (1-30).

04019001 ದ್ರೌಪದ್ಯುವಾಚ।
04019001a ಅಹಂ ಸೈರಂಧ್ರಿವೇಷೇಣ ಚರಂತೀ ರಾಜವೇಶ್ಮನಿ।
04019001c ಶೌಚದಾಸ್ಮಿ ಸುದೇಷ್ಣಾಯಾ ಅಕ್ಷಧೂರ್ತಸ್ಯ ಕಾರಣಾತ್।।

ದ್ರೌಪದಿಯು ಹೇಳಿದಳು: “ಆ ಕೆಟ್ಟ ಜೂಜಾಳಿಯ ಕಾರಣದಿಂದ ನಾನು ಸೈರಂಧ್ರಿಯ ವೇಷವನ್ನು ಧರಿಸಿ ಅರಮನೆಯಲ್ಲಿ ಇದ್ದುಕೊಂಡು ಸುದೇಷ್ಣೆಯ ಪರಿಚಾರಿಕೆ ಮಾಡುತ್ತಿದ್ದೇನೆ.

04019002a ವಿಕ್ರಿಯಾಂ ಪಶ್ಯ ಮೇ ತೀವ್ರಾಂ ರಾಜಪುತ್ರ್ಯಾಃ ಪರಂತಪ।
04019002c ಆಸೇ ಕಾಲಮುಪಾಸೀನಾ ಸರ್ವಂ ದುಃಖಂ ಕಿಲಾರ್ತವತ್।।

ಪರಂತಪ! ರಾಜಪುತ್ರಿಯಾದ ನನ್ನ ಈ ಅತೀವ ಅಸುಖವನ್ನು ನೋಡು. ಆರ್ತಳಂತೆ ದುಃಖವೆಲ್ಲ ಮುಗಿಯುವ ಸಮಯವನ್ನು ಕಾಯುತ್ತಿದ್ದೇನೆ.

04019003a ಅನಿತ್ಯಾ ಕಿಲ ಮರ್ತ್ಯಾನಾಮರ್ಥಸಿದ್ಧಿರ್ಜಯಾಜಯೌ।
04019003c ಇತಿ ಕೃತ್ವಾ ಪ್ರತೀಕ್ಷಾಮಿ ಭರ್ತೄಣಾಮುದಯಂ ಪುನಃ।।

ಮನುಷ್ಯರ ಸಂಪತ್ತು, ಸಾಧನೆಗಳು, ಜಯ ಅಪಜಯಗಳು ಅನಿತ್ಯ ಎಂದು ತಿಳಿದು ಪತಿಗಳ ಪುನರೋದಯವನ್ನು ಕಾಯುತ್ತಿದ್ದೇನೆ.

04019004a ಯ ಏವ ಹೇತುರ್ಭವತಿ ಪುರುಷಸ್ಯ ಜಯಾವಹಃ।
04019004c ಪರಾಜಯೇ ಚ ಹೇತುಃ ಸ ಇತಿ ಚ ಪ್ರತಿಪಾಲಯೇ।।

ಪುರುಷನ ಜಯಕ್ಕೆ ಯಾವುದು ಕಾರಣವೋ ಅದೇ ಪರಾಜಯಕ್ಕೂ ಕಾರಣವಾಗುವುದೆಂದು ಕಾಯುತ್ತಿದ್ದೇನೆ.

04019005a ದತ್ತ್ವಾ ಯಾಚಂತಿ ಪುರುಷಾ ಹತ್ವಾ ವಧ್ಯಂತಿ ಚಾಪರೇ।
04019005c ಪಾತಯಿತ್ವಾ ಚ ಪಾತ್ಯಂತೇ ಪರೈರಿತಿ ಚ ಮೇ ಶ್ರುತಂ।।

ದಾನನೀಡುವವರು ಬೇಡುತ್ತಾರೆ. ಕೊಲ್ಲುವವರು ಇತರರಿಂದ ಕೊಲ್ಲಿಸಿಕೊಳ್ಳುತ್ತಾರೆ. ಬೀಳಿಸುವವರು ಇತರರಿಂದ ಬೀಳಿಸಿಕೊಳ್ಳುತ್ತಾರೆ ಎಂದು ನಾನು ಕೇಳಿದ್ದೇನೆ.

04019006a ನ ದೈವಸ್ಯಾತಿಭಾರೋಽಸ್ತಿ ನ ದೈವಸ್ಯಾತಿವರ್ತನಂ।
04019006c ಇತಿ ಚಾಪ್ಯಾಗಮಂ ಭೂಯೋ ದೈವಸ್ಯ ಪ್ರತಿಪಾಲಯೇ।।

ದೈವಕ್ಕೆ ಯಾವುದೂ ಅತಿ ಭಾರವಲ್ಲ. ದೈವವನ್ನು ಮೀರುವಂತಿಲ್ಲ ಎಂದು ತಿಳಿದು ಅದೃಷ್ಟದ ಪುನರಾಗಮನವನ್ನು ಕಾಯುತ್ತಿದ್ದೇನೆ.

04019007a ಸ್ಥಿತಂ ಪೂರ್ವಂ ಜಲಂ ಯತ್ರ ಪುನಸ್ತತ್ರೈವ ತಿಷ್ಠತಿ।
04019007c ಇತಿ ಪರ್ಯಾಯಮಿಚ್ಛಂತೀ ಪ್ರತೀಕ್ಷಾಮ್ಯುದಯಂ ಪುನಃ।।

ಹಿಂದೆ ನೀರು ಎಲ್ಲಿ ನಿಲ್ಲುತ್ತಿತ್ತೋ ಅಲ್ಲಿಯೇ ಮತ್ತೆ ನಿಲ್ಲುತ್ತದೆ ಎಂದು ತಿಳಿದು ಬದಲಾವಣೆಯನ್ನು ಬಯಸುತ್ತಾ ಪುನರುದಯವನ್ನು ಪ್ರತೀಕ್ಷಿಸುತ್ತಿದ್ದೇನೆ.

04019008a ದೈವೇನ ಕಿಲ ಯಸ್ಯಾರ್ಥಃ ಸುನೀತೋಽಪಿ ವಿಪದ್ಯತೇ।
04019008c ದೈವಸ್ಯ ಚಾಗಮೇ ಯತ್ನಸ್ತೇನ ಕಾರ್ಯೋ ವಿಜಾನತಾ।।

ಚೆನ್ನಾಗಿ ನಡೆಸಿದರೂ ಯಾರ ಉದ್ದೇಶವು ದೈವದಿಂದ ವಿಪತ್ತಿಗೀಡಾಗುತ್ತದೆಯೋ ಅಂಥವನು ವಿವೇಕಿಯಾಗಿ ಮತ್ತೆ ದೈವವೊದಗುವಂತೆ ಪ್ರಯತ್ನಿಸಬೇಕು.

04019009a ಯತ್ತು ಮೇ ವಚನಸ್ಯಾಸ್ಯ ಕಥಿತಸ್ಯ ಪ್ರಯೋಜನಂ।
04019009c ಪೃಚ್ಛ ಮಾಂ ದುಃಖಿತಾಂ ತತ್ತ್ವಮಪೃಷ್ಟಾ ವಾ ಬ್ರವೀಮಿ ತೇ।।

ದುಃಖಿತೆಯಾಗಿ ನಾನು ಹೇಳುವ ಮಾತುಗಳ ಪ್ರಯೋಜನವೇನೆಂದು ನೀನು ಕೇಳು ಅಥವಾ ಕೇಳದಿರು. ನಾನು ಹೇಳುವ ಈ ಮಾತಿನ ಉದ್ದೇಶವನ್ನು ನಿನಗೆ ತಿಳಿಸುತ್ತೇನೆ.

04019010a ಮಹಿಷೀ ಪಾಂಡುಪುತ್ರಾಣಾಂ ದುಹಿತಾ ದ್ರುಪದಸ್ಯ ಚ।
04019010c ಇಮಾಮವಸ್ಥಾಂ ಸಂಪ್ರಾಪ್ತಾ ಕಾ ಮದನ್ಯಾ ಜಿಜೀವಿಷೇತ್।।

ಪಾಂಡುಪುತ್ರರ ರಾಣಿಯಾಗಿದ್ದು ದ್ರುಪದನ ಮಗಳಾಗಿದ್ದು ಈ ಅವಸ್ಥೆಯನ್ನು ಪಡೆದಿರುವ ನನ್ನಂಥಹ ಇನ್ನ್ಯಾರು ತಾನೆ ಜೀವಿಸಿರಲು ಬಯಸುತ್ತಾರೆ?

04019011a ಕುರೂನ್ಪರಿಭವನ್ಸರ್ವಾನ್ಪಾಂಚಾಲಾನಪಿ ಭಾರತ।
04019011c ಪಾಂಡವೇಯಾಂಶ್ಚ ಸಂಪ್ರಾಪ್ತೋ ಮಮ ಕ್ಲೇಶೋ ಹ್ಯರಿಂದಮ।।

ಅರಿಂದಮ! ಭಾರತ! ನನಗೊದಗಿದ ಈ ಕ್ಲೇಶವು ಎಲ್ಲ ಕುರುಗಳನ್ನೂ, ಪಾಂಚಾಲರನ್ನೂ ಮತ್ತು ಪಾಂಡವರನ್ನೂ ಅಪಮಾನಗೊಳಿಸಿದೆ.

04019012a ಭ್ರಾತೃಭಿಃ ಶ್ವಶುರೈಃ ಪುತ್ರೈರ್ಬಹುಭಿಃ ಪರವೀರಹನ್।
04019012c ಏವಂ ಸಮುದಿತಾ ನಾರೀ ಕಾ ನ್ವನ್ಯಾ ದುಃಖಿತಾ ಭವೇತ್।।

ಪರವೀರಹನ್! ಬಹುಜನ ಸೋದರರಿಂದಲೂ, ಮಾವಂದಿರಿಂದಲೂ, ಪುತ್ರರಿಂದಲೂ ಪರಿವೃತಳಾಗಿ ಸಂತೋಷದಿಂದಿರಬೇಕಾದ ಬೇರೆ ಯಾರು ತಾನೇ ಹೀಗೆ ದುಃಖಪಡುತ್ತಾಳೆ?

04019013a ನೂನಂ ಹಿ ಬಾಲಯಾ ಧಾತುರ್ಮಯಾ ವೈ ವಿಪ್ರಿಯಂ ಕೃತಂ।
04019013c ಯಸ್ಯ ಪ್ರಸಾದಾದ್ದುರ್ನೀತಂ ಪ್ರಾಪ್ತಾಸ್ಮಿ ಭರತರ್ಷಭ।।

ಭರತರ್ಷಭ! ಬಾಲೆಯಾಗಿದ್ದಾಗ ನಾನು ನಿಶ್ಚಯವಾಗಿಯೂ ವಿಧಿಗೆ ಅಪರಾಧಮಾಡಿದ್ದಿರಬೇಕು. ಅದರ ಪ್ರಸಾದದಿಂದ ಈ ದುರವಸ್ಥೆಗೀಡಾಗಿದ್ದೇನೆ.

04019014a ವರ್ಣಾವಕಾಶಮಪಿ ಮೇ ಪಶ್ಯ ಪಾಂಡವ ಯಾದೃಶಂ।
04019014c ಯಾದೃಶೋ ಮೇ ನ ತತ್ರಾಸೀದ್ದುಃಖೇ ಪರಮಕೇ ತದಾ।।

ಪಾಂಡವ! ನನ್ನ ಬಣ್ಣವು ಹೇಗಾಗಿದೆಯೆಂಬುದನ್ನು ನೋಡು. ಅಂದು ಅಲ್ಲಿ ಪರಮ ದುಃಖದಲ್ಲಿಯೂ ಹೀಗಾಗಿರಲಿಲ್ಲ.

04019015a ತ್ವಮೇವ ಭೀಮ ಜಾನೀಷೇ ಯನ್ಮೇ ಪಾರ್ಥ ಸುಖಂ ಪುರಾ।
04019015c ಸಾಹಂ ದಾಸತ್ವಮಾಪನ್ನಾ ನ ಶಾಂತಿಮವಶಾ ಲಭೇ।।

ಭೀಮ! ಪಾರ್ಥ! ಹಿಂದಿನ ನನ್ನ ಸುಖವನ್ನು ನೀನೊಬ್ಬನೇ ಬಲ್ಲೆ. ಅಂತಹ ನಾನು ದಾಸಿಯಾಗಿದ್ದೇನೆ. ಅವಶಳಾದ ನನಗೆ ಶಾಂತಿ ‌ಎನ್ನುವುದೇ ಸಿಗುತ್ತಿಲ್ಲ.

04019016a ನಾದೈವಿಕಮಿದಂ ಮನ್ಯೇ ಯತ್ರ ಪಾರ್ಥೋ ಧನಂಜಯಃ।
04019016c ಭೀಮಧನ್ವಾ ಮಹಾಬಾಹುರಾಸ್ತೇ ಶಾಂತ ಇವಾನಲಃ।।

ಭೀಮಧನ್ವಿ ಮಹಾಬಾಹು ಪಾರ್ಥ ಧನಂಜಯನು ತಣ್ಣಗಾದ ಬೆಂಕಿಯಂತಿರುವುದು ದೈವವಲ್ಲದೇ ಬೇರೆಯಲ್ಲ ಎಂದು ಭಾವಿಸುತ್ತೇನೆ.

04019017a ಅಶಕ್ಯಾ ವೇದಿತುಂ ಪಾರ್ಥ ಪ್ರಾಣಿನಾಂ ವೈ ಗತಿರ್ನರೈಃ।
04019017c ವಿನಿಪಾತಮಿಮಂ ಮನ್ಯೇ ಯುಷ್ಮಾಕಮವಿಚಿಂತಿತಂ।।

ಭೀಮ! ಜೀವಿಗಳ ಗತಿಯನ್ನು ತಿಳಿಯಲು ನರರಿಗೆ ಸಾಧ್ಯವಿಲ್ಲ. ನಿಮ್ಮ ಈ ಪತನವು ಮೊದಲೇ ತಿಳಿದಿರಲಿಲ್ಲ ಎಂದು ಭಾವಿಸುತ್ತೇನೆ.

04019018a ಯಸ್ಯಾ ಮಮ ಮುಖಪ್ರೇಕ್ಷಾ ಯೂಯಮಿಂದ್ರಸಮಾಃ ಸದಾ।
04019018c ಸಾ ಪ್ರೇಕ್ಷೇ ಮುಖಮನ್ಯಾಸಾಮವರಾಣಾಂ ವರಾ ಸತೀ।।

ಇಂದ್ರಸಮಾನರಾದ ನೀವು ಅಪ್ಪಣೆಗಾಗಿ ಸದಾ ನನ್ನ ಮುಖವನ್ನು ನೋಡುತ್ತಿದ್ದಿರಿ. ಅಂಥಹ ಶ್ರೇಷ್ಠ ಸತಿ ನಾನೇ ಇಂದು ಅಪ್ಪಣೆಗಾಗಿ ಕೀಳಾದ ಇತರರ ಮುಖವನ್ನು ನೋಡುವವಳಂತಾಗಿದ್ದೇನೆ.

04019019a ಪಶ್ಯ ಪಾಂಡವ ಮೇಽವಸ್ಥಾಂ ಯಥಾ ನಾರ್ಹಾಮಿ ವೈ ತಥಾ।
04019019c ಯುಷ್ಮಾಸು ಧ್ರಿಯಮಾಣೇಷು ಪಶ್ಯ ಕಾಲಸ್ಯ ಪರ್ಯಯಂ।।

ಪಾಂಡವ! ನನ್ನ ಈ ಅವಸ್ಥೆಯನ್ನು ನೋಡು. ನೀವು ಬದುಕಿರುವಾಗ ನನಗೆ ಇದು ತಕ್ಕುದಲ್ಲ. ಕಾಲವಿಪರ್ಯವನ್ನು ನೋಡು.

04019020a ಯಸ್ಯಾಃ ಸಾಗರಪರ್ಯಂತಾ ಪೃಥಿವೀ ವಶವರ್ತಿನೀ।
04019020c ಆಸೀತ್ಸಾದ್ಯ ಸುದೇಷ್ಣಾಯಾ ಭೀತಾಹಂ ವಶವರ್ತಿನೀ।।

ಸಾಗರಪರ್ಯಂತವಾದ ಪೃಥ್ವಿ ಯಾರ ವಶವರ್ತಿನಿಯಾಗಿತ್ತೋ ಆ ನಾನು ಇಂದು ಸುದೇಷ್ಣೆಯ ವಶವರ್ತಿನಿಯಾಗಿ ಅವಳಿಗೆ ಹೆದರುತ್ತೇನೆ.

04019021a ಯಸ್ಯಾಃ ಪುರಃಸ್ಸರಾ ಆಸನ್ಪೃಷ್ಠತಶ್ಚಾನುಗಾಮಿನಃ।
04019021c ಸಾಹಮದ್ಯ ಸುದೇಷ್ಣಾಯಾಃ ಪುರಃ ಪಶ್ಚಾಚ್ಚ ಗಾಮಿನೀ।।
04019021e ಇದಂ ತು ದುಃಖಂ ಕೌಂತೇಯ ಮಮಾಸಹ್ಯಂ ನಿಬೋಧ ತತ್।।

ಯಾರ ಹಿಂದೆ ಮತ್ತು ಮುಂದೆ ಅನುಚರರು ಇರುತ್ತಿದ್ದರೋ ಆ ನಾನು ಇಂದು ಸುದೇಷ್ಣೇಯ ಹಿಂದೆ ಮುಂದೆ ತಿರುಗುತ್ತಿದ್ದೇನೆ. ಕೌಂತೇಯ! ನನ್ನ ಈ ಅಸಹ್ಯ ದುಃಖವನ್ನು ಅರ್ಥಮಾಡಿಕೋ.

04019022a ಯಾ ನ ಜಾತು ಸ್ವಯಂ ಪಿಂಷೇ ಗಾತ್ರೋದ್ವರ್ತನಮಾತ್ಮನಃ।
04019022c ಅನ್ಯತ್ರ ಕುಂತ್ಯಾ ಭದ್ರಂ ತೇ ಸಾದ್ಯ ಪಿಂಷಾಮಿ ಚಂದನಂ।
04019022e ಪಶ್ಯ ಕೌಂತೇಯ ಪಾಣೀ ಮೇ ನೈವಂ ಯೌ ಭವತಃ ಪುರಾ।।

ಯಾರು ಕುಂತಿಯ ಹೊರತು ತನಗಾಗಿ ಕೂಡ ಸುಗಂಧದ್ರವ್ಯವನ್ನು ತೇಯುತ್ತಿರಲಿಲ್ಲವೋ ಆ ನಾನೇ ಇಂದು ಸುದೇಷ್ಣೇಗಾಗಿ ಚಂದನವನ್ನು ತೇಯುತ್ತಿದ್ದೇನೆ. ನನ್ನ ಕೈಗಳನ್ನು ನೋಡು ಕೌಂತೇಯ! ಹಿಂದೆ ಇವು ಹೀಗಿರಲಿಲ್ಲ. ನಿನಗೆ ಮಂಗಳವಾಗಲಿ!””

04019023 ವೈಶಂಪಾಯನ ಉವಾಚ।
04019023a ಇತ್ಯಸ್ಯ ದರ್ಶಯಾಮಾಸ ಕಿಣಬದ್ಧೌ ಕರಾವುಭೌ।

ವೈಶಂಪಾಯನನು ಹೇಳಿದನು: “ಹೀಗೆಂದು ಅವಳು ದಡ್ಡುಗಟ್ಟಿದ ಎರಡೂ ಕೈಗಳನ್ನೂ ಅವನಿಗೆ ತೋರಿಸಿದಳು.

04019024 ದ್ರೌಪದ್ಯುವಾಚ।
04019024a ಬಿಭೇಮಿ ಕುಂತ್ಯಾ ಯಾ ನಾಹಂ ಯುಷ್ಮಾಕಂ ವಾ ಕದಾ ಚನ।
04019024c ಸಾದ್ಯಾಗ್ರತೋ ವಿರಾಟಸ್ಯ ಭೀತಾ ತಿಷ್ಠಾಮಿ ಕಿಂಕರೀ।।
04019025a ಕಿಂ ನು ವಕ್ಷ್ಯತಿ ಸಮ್ರಾಣ್ಮಾಂ ವರ್ಣಕಃ ಸುಕೃತೋ ನ ವಾ।
04019025c ನಾನ್ಯಪಿಷ್ಟಂ ಹಿ ಮತ್ಸ್ಯಸ್ಯ ಚಂದನಂ ಕಿಲ ರೋಚತೇ।।

ದ್ರೌಪದಿಯು ಹೇಳಿದಳು: “ಕುಂತಿಗಾಗಲೀ ನಿಮಗಾಗಲೀ ಎಂದೂ ಹೆದರದಿದ್ದ ನಾನು ಇಂದು ವಿರಾಟನ ಮುಂದೆ ಸೇವಕಿಯಾಗಿ ಅನುಲೇಪನ ಚೆನ್ನಾಗಿ ಸಿದ್ಧವಾಗಿದೆಯೋ ಇಲ್ಲವೋ? ನನಗೆ ದೊರೆಯು ಏನೆನ್ನುತ್ತಾನೋ ಎಂದು ಅಳುಕುತ್ತಾ ನಿಂತಿರುತ್ತೇನೆ. ಬೇರೆಯವರು ತೇಯ್ದ ಚಂದನವು ವಿರಾಟನಿಗೆ ಹಿಡಿಸುವುದಿಲ್ಲ.””

04019026 ವೈಶಂಪಾಯನ ಉವಾಚ।
04019026a ಸಾ ಕೀರ್ತಯಂತೀ ದುಃಖಾನಿ ಭೀಮಸೇನಸ್ಯ ಭಾಮಿನೀ।
04019026c ರುರೋದ ಶನಕೈಃ ಕೃಷ್ಣಾ ಭೀಮಸೇನಮುದೀಕ್ಷತೀ।।

ವೈಶಂಪಾಯನನು ಹೇಳಿದನು: “ಈ ರೀತಿ ಭೀಮಸೇನನ ಭಾಮಿನಿ ಕೃಷ್ಣೆಯು ತನ್ನ ದುಃಖಗಳನ್ನು ಹೇಳಿಕೊಳ್ಳುತ್ತಾ ಭೀಮಸೇನನ ಮುಖವನ್ನೇ ನೋಡುತ್ತಾ ಮೌನವಾಗಿ ಅತ್ತಳು.

04019027a ಸಾ ಬಾಷ್ಪಕಲಯಾ ವಾಚಾ ನಿಃಶ್ವಸಂತೀ ಪುನಃ ಪುನಃ।
04019027c ಹೃದಯಂ ಭೀಮಸೇನಸ್ಯ ಘಟ್ಟಯಂತೀದಮಬ್ರವೀತ್।।

ಅವಳು ಮತ್ತೆ ಮತ್ತೆ ನಿಟ್ಟುಸಿರುಬಿಡುತ್ತಾ ಭೀಮಸೇನನ ಹೃದಯವನ್ನು ಕಲಕುತ್ತಾ ಬಾಷ್ಪಗದ್ಗದ ಮಾತುಗಳಿಂದ ಹೀಗೆಂದಳು:

04019028a ನಾಲ್ಪಂ ಕೃತಂ ಮಯಾ ಭೀಮ ದೇವಾನಾಂ ಕಿಲ್ಬಿಷಂ ಪುರಾ।
04019028c ಅಭಾಗ್ಯಾ ಯತ್ತು ಜೀವಾಮಿ ಮರ್ತವ್ಯೇ ಸತಿ ಪಾಂಡವ।।

“ಭೀಮ! ಪಾಂಡವ! ಹಿಂದೆ ನಾನು ದೇವತೆಗಳಿಗೆಸಗಿದ ಅಪರಾಧವು ಅಲ್ಪವಾಗಿರಲಿಕ್ಕಿಲ್ಲ. ಸಾಯಬೇಕಾಗಿರುವ ಅಭಾಗ್ಯಳಾದ ನಾನು ಬದುಕಿದ್ದೇನೆ.”

04019029a ತತಸ್ತಸ್ಯಾಃ ಕರೌ ಶೂನೌ ಕಿಣಬದ್ಧೌ ವೃಕೋದರಃ।
04019029c ಮುಖಮಾನೀಯ ವೇಪಂತ್ಯಾ ರುರೋದ ಪರವೀರಹಾ।।

ಬಳಿಕ ಆ ಪರವೀರಹ ವೃಕೋದರನು ಕಂಪಿಸುತ್ತಿದ್ದ ದ್ರೌಪದಿಯ ದಡ್ಡುಗಟ್ಟಿ ಊದಿಕೊಂಡಿದ್ದ ಕೈಗಳನ್ನು ತನ್ನ ಮುಖದ ಮೇಲಿಟ್ಟುಕೊಂಡು ಅತ್ತುಬಿಟ್ಟನು.

04019030a ತೌ ಗೃಹೀತ್ವಾ ಚ ಕೌಂತೇಯೋ ಬಾಷ್ಪಮುತ್ಸೃಜ್ಯ ವೀರ್ಯವಾನ್।
04019030c ತತಃ ಪರಮದುಃಖಾರ್ತ ಇದಂ ವಚನಮಬ್ರವೀತ್।।

ಪರಾಕ್ರಮಿಯಾದ ಆ ಕೌಂತೇಯನು ಅವುಗಳನ್ನು ಹಿಡಿದುಕೊಂಡು ಪರಮ ದುಃಖಾರ್ತನಾಗಿ ಕಣ್ಣೀರ್ಗರೆಯುತ್ತಾ ಈ ಮಾತುಗಳನ್ನಾಡಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಭೀಮಸಂವಾದೇ ಏಕೋನವಿಂಶೋಽಧ್ಯಾಯಃ ।
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಭೀಮಸಂವಾದದಲ್ಲಿ ಹತ್ತೊಂಭತ್ತನೆಯ ಅಧ್ಯಾಯವು.