018 ದ್ರೌಪದೀಭೀಮಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಕೀಚಕವಧ ಪರ್ವ

ಅಧ್ಯಾಯ 18

ಸಾರ

ದ್ರೌಪದಿಯು ಭೀಮನಲ್ಲಿ ತನ್ನ ದುಃಖಕ್ಕೆ ಕಾರಣವನ್ನು ಹೇಳಿಕೊಳ್ಳುವುದು (1-36).

04018001 ದ್ರೌಪದ್ಯುವಾಚ।
04018001a ಇದಂ ತು ಮೇ ಮಹದ್ದುಃಖಂ ಯತ್ಪ್ರವಕ್ಷ್ಯಾಮಿ ಭಾರತ।
04018001c ನ ಮೇಽಭ್ಯಸೂಯಾ ಕರ್ತವ್ಯಾ ದುಃಖಾದೇತದ್ಬ್ರವೀಮ್ಯಹಂ।।

ದ್ರೌಪದಿಯು ಹೇಳಿದಳು: “ಭಾರತ! ನನ್ನ ಈ ಮಹಾದುಃಖವನ್ನು ನಿನಗೆ ಹೇಳುತ್ತಿದ್ದೇನೆಂದು ನನ್ನನ್ನು ಅಪೇಕ್ಷಿಸಬೇಡ. ದುಃಖದಿಂದ ಇದನ್ನು ಹೇಳುತ್ತಿದ್ದೇನೆ.

04018002a ಶಾರ್ದೂಲೈರ್ಮಹಿಷೈಃ ಸಿಂಹೈರಾಗಾರೇ ಯುಧ್ಯಸೇ ಯದಾ।
04018002c ಕೈಕೇಯ್ಯಾಃ ಪ್ರೇಕ್ಷಮಾಣಾಯಾಸ್ತದಾ ಮೇ ಕಶ್ಮಲೋ ಭವೇತ್।।

ಕೈಕೇಯಿ ಸುದೇಷ್ಣೆಯು ನೋಡಿ ಆನಂದಿಸಲೆಂದು ನೀನು ಅರಮನೆಯಲ್ಲಿ ಹುಲಿ, ಕಾಡು ಕೋಣ ಮತ್ತು ಸಿಂಹಗಳೊಡನೆ ಕಾದಾಡುವಾಗ ನನ್ನ ಮನಸ್ಸು ಕುಗ್ಗುತ್ತದೆ.

04018003a ಪ್ರೇಕ್ಷಾಸಮುತ್ಥಿತಾ ಚಾಪಿ ಕೈಕೇಯೀ ತಾಃ ಸ್ತ್ರಿಯೋ ವದೇತ್।
04018003c ಪ್ರೇಕ್ಷ್ಯ ಮಾಮನವದ್ಯಾಂಗೀ ಕಶ್ಮಲೋಪಹತಾಮಿವ।।

ಅದನ್ನು ನೋಡಿ ಮೇಲೆದ್ದ ಸುಂದರಿ ಕೈಕೇಯಿಯು ದುಃಖದಿಂದ ಹತಳಾಗಿರುವಂತೆ ತೋರುತ್ತಿದ್ದ ನನ್ನನ್ನು ನೋಡಿ ಆ ಸ್ತ್ರೀಯರಿಗೆ ಹೇಳುತ್ತಾಳೆ:

04018004a ಸ್ನೇಹಾತ್ಸಂವಾಸಜಾನ್ಮನ್ಯೇ ಸೂದಮೇಷಾ ಶುಚಿಸ್ಮಿತಾ।
04018004c ಯೋಧ್ಯಮಾನಂ ಮಹಾವೀರ್ಯೈರಿಮಂ ಸಮನುಶೋಚತಿ।।

“ಈ ಅಡುಗೆಯವನ ಮೇಲೆ ಇರುವ ಸ್ನೇಹದಿಂದಾಗಿ ಈ ಶುಚಿಸ್ಮಿತೆಯು ಮಹಾವೀರ್ಯರೊಂದಿಗೆ ಹೋರಾಡುತ್ತಿರುವ ಇವನ ಕುರಿತು ಶೋಚಿಸುತ್ತಿದ್ದಾಳೆ!

04018005a ಕಲ್ಯಾಣರೂಪಾ ಸೈರಂಧ್ರೀ ಬಲ್ಲವಶ್ಚಾತಿಸುಂದರಃ।
04018005c ಸ್ತ್ರೀಣಾಂ ಚ ಚಿತ್ತಂ ದುರ್ಜ್ಞೇಯಂ ಯುಕ್ತರೂಪೌ ಚ ಮೇ ಮತೌ।।

ಸೈರಂಧ್ರಿಯು ಸುಂದರಿ ಮತ್ತು ಬಲ್ಲವನೂ ಅತಿ ಸುಂದರ. ಸ್ತ್ರೀಯರ ಮನಸ್ಸನ್ನು ತಿಳಿಯಲು ಅಸಾಧ್ಯ. ಆದರೂ ಇವರಿಬ್ಬರೂ ಅನುರೂಪರು ಎಂದು ನನ್ನ ಅಭಿಪ್ರಾಯ.

04018006a ಸೈರಂಧ್ರೀ ಪ್ರಿಯಸಂವಾಸಾನ್ನಿತ್ಯಂ ಕರುಣವೇದಿನೀ।
04018006c ಅಸ್ಮಿನ್ರಾಜಕುಲೇ ಚೇಮೌ ತುಲ್ಯಕಾಲನಿವಾಸಿನೌ।।

ಇವನೊಂದಿಗಿನ ಪ್ರಿಯಸಹವಾಸದಿಂದ ಸೈರಂಧ್ರಿಯು ನಿತ್ಯವೂ ಇವನ ಮೇಲೆ ಕರುಣೆ ತೋರಿಸುತ್ತಾಳೆ. ಈ ರಾಜಕುಲದಲ್ಲಿ ಇವರಿಬ್ಬರೂ ಒಂದೇ ಸಮಯದಿಂದ ವಾಸಿಸುತ್ತಿದ್ದಾರೆ.”

04018007a ಇತಿ ಬ್ರುವಾಣಾ ವಾಕ್ಯಾನಿ ಸಾ ಮಾಂ ನಿತ್ಯಮವೇದಯತ್।
04018007c ಕ್ರುಧ್ಯಂತೀಂ ಮಾಂ ಚ ಸಂಪ್ರೇಕ್ಷ್ಯ ಸಮಶಂಕತ ಮಾಂ ತ್ವಯಿ।।

ಹೀಗಿನ ಮಾತುಗಳನ್ನಾಡಿ ಅವಳು ಯಾವಾಗಲೂ ನನ್ನನ್ನು ನೋಯಿಸುತ್ತಿರುತ್ತಾಳೆ. ನಾನು ಸಿಟ್ಟಾಗಿರುವುದನ್ನು ನೋಡಿ ನನ್ನನ್ನು ಮತ್ತು ನಿನ್ನನ್ನು ಶಂಕಿಸುತ್ತಾಳೆ.

04018008a ತಸ್ಯಾಂ ತಥಾ ಬ್ರುವತ್ಯಾಂ ತು ದುಃಖಂ ಮಾಂ ಮಹದಾವಿಶತ್।
04018008c ಶೋಕೇ ಯೌಧಿಷ್ಠಿರೇ ಮಗ್ನಾ ನಾಹಂ ಜೀವಿತುಮುತ್ಸಹೇ।।

ಅವಳು ನನ್ನಲ್ಲಿ ಹೀಗೆ ಹೇಳುವಾಗ ನನಗೆ ಮಹಾ ದುಃಖವಾಗುತ್ತದೆ. ಯುಧಿಷ್ಠಿರನ ಶೋಕದಲ್ಲಿ ಮುಳುಗಿರುವ ನನಗೆ ಬದುಕುವ ಆಸೆಯಿಲ್ಲ.

04018009a ಯಃ ಸದೇವಾನ್ಮನುಷ್ಯಾಂಶ್ಚ ಸರ್ಪಾಂಶ್ಚೈಕರಥೋಽಜಯತ್।
04018009c ಸೋಽಯಂ ರಾಜ್ಞೋ ವಿರಾಟಸ್ಯ ಕನ್ಯಾನಾಂ ನರ್ತಕೋ ಯುವಾ।।

ದೇವಮಾನವರನ್ನೂ ಸರ್ಪರನ್ನೂ ಏಕರಥನಾಗಿ ಗೆದ್ದ ಯುವಕನು ಇಂದು ವಿರಾಟ ರಾಜನ ಕನ್ಯೆಯರಿಗೆ ನರ್ತಕನಾಗಿದ್ದಾನೆ.

04018010a ಯೋಽತರ್ಪಯದಮೇಯಾತ್ಮಾ ಖಾಂಡವೇ ಜಾತವೇದಸಂ।
04018010c ಸೋಽಅಂತಃಪುರಗತಃ ಪಾರ್ಥಃ ಕೂಪೇಽಗ್ನಿರಿವ ಸಂವೃತಃ।।

ಖಾಂಡವದಲ್ಲಿ ಜಾತವೇದಸನನ್ನು ತೃಪ್ತಿಗೊಳಿಸಿದ ಅಮೇಯಾತ್ಮ ಪಾರ್ಥನು ಇಂದು ಬಾವಿಯಲ್ಲಿ ಅಡಗಿಕೊಂಡ ಅಗ್ನಿಯಂತೆ ಅಂತಃಪುರವನ್ನು ಸೇರಿದ್ದಾನೆ.

04018011a ಯಸ್ಮಾದ್ಭಯಮಮಿತ್ರಾಣಾಂ ಸದೈವ ಪುರುಷರ್ಷಭಾತ್।
04018011c ಸ ಲೋಕಪರಿಭೂತೇನ ವೇಷೇಣಾಸ್ತೇ ಧನಂಜಯಃ।।

ಯಾವ ಪುರುಷರ್ಷಭನಿಂದ ಯಾವಾಗಲೂ ಶತ್ರುಗಳು ಭಯಪಡುತ್ತಿದ್ದರೋ ಆ ಧನಂಜಯನು ಇಂದು ಲೋಕನಿಂದ್ಯವಾದ ವೇಷದಲ್ಲಿದ್ದಾನೆ.

04018012a ಯಸ್ಯ ಜ್ಯಾತಲನಿರ್ಘೋಷಾತ್ಸಮಕಂಪಂತ ಶತ್ರವಃ।
04018012c ಸ್ತ್ರಿಯೋ ಗೀತಸ್ವನಂ ತಸ್ಯ ಮುದಿತಾಃ ಪರ್ಯುಪಾಸತೇ।।

ಯಾರ ಬಿಲ್ಲಿನ ಹೆದೆಯ ಘೋಷದಿಂದ ಶತ್ರುಗಳು ನಡುಗುತ್ತಿದ್ದರೋ ಅವನ ಗೀತಸ್ವನವನ್ನು ಸ್ತ್ರೀಯರು ಇಂದು ಸಂತೋಷದಿಂದ ಆಲಿಸುತ್ತಿದ್ದಾರೆ.

04018013a ಕಿರೀಟಂ ಸೂರ್ಯಸಂಕಾಶಂ ಯಸ್ಯ ಮೂರ್ಧನಿ ಶೋಭತೇ।
04018013c ವೇಣೀವಿಕೃತಕೇಶಾಂತಃ ಸೋಽಯಮದ್ಯ ಧನಂಜಯಃ।।

ಯಾರ ತಲೆಯ ಮೇಲೆ ಸೂರ್ಯನಂತೆ ಬಿರುಗುತ್ತಿದ್ದ ಕಿರೀಟವು ಶೋಭಿಸುತ್ತಿತ್ತೋ ಆ ಧನಂಜಯನ ತಲೆಗೂದಲು ಇಂದು ಜಡೆಯಿಂದ ವಿಕೃತವಾಗಿದೆ.

04018014a ಯಸ್ಮಿನ್ನಸ್ತ್ರಾಣಿ ದಿವ್ಯಾನಿ ಸಮಸ್ತಾನಿ ಮಹಾತ್ಮನಿ।
04018014c ಆಧಾರಃ ಸರ್ವವಿದ್ಯಾನಾಂ ಸ ಧಾರಯತಿ ಕುಂಡಲೇ।।

ಸಮಸ್ತ ದಿವ್ಯಾಸ್ತ್ರಗಳನ್ನುಳ್ಳ ಸರ್ವವಿದ್ಯೆಗಳಿಗೂ ಆಧಾರನಾಗಿರುವ ಮಹಾತ್ಮನು ಇಂದು ಕುಂಡಲಗಳನ್ನು ಧರಿಸಿದ್ದಾನೆ.

04018015a ಯಂ ಸ್ಮ ರಾಜಸಹಸ್ರಾಣಿ ತೇಜಸಾಪ್ರತಿಮಾನಿ ವೈ।
04018015c ಸಮರೇ ನಾತಿವರ್ತಂತೇ ವೇಲಾಮಿವ ಮಹಾರ್ಣವಃ।।

ದಾಟಲಾಗದ ಮಹಾಸಾಗರದಂತಿರುವ ಇವನನ್ನು ಅಪ್ರತಿಮ ತೇಜಸರಾದ ಸಹಸ್ರಾರು ರಾಜರುಗಳಿಂದಲೂ ಸಮರದಲ್ಲಿ ಜಯಿಸಲಾಗುತ್ತಿರಲಿಲ್ಲ.

04018016a ಸೋಽಯಂ ರಾಜ್ಞೋ ವಿರಾಟಸ್ಯ ಕನ್ಯಾನಾಂ ನರ್ತಕೋ ಯುವಾ।
04018016c ಆಸ್ತೇ ವೇಷಪ್ರತಿಚ್ಛನ್ನಃ ಕನ್ಯಾನಾಂ ಪರಿಚಾರಕಃ।।

ಆ ಯುವಕನೇ ಇಂದು ರಾಜ ವಿರಾಟನ ಕನ್ಯೆಯರ ನರ್ತಕನಾಗಿದ್ದಾನೆ. ವೇಷ ಮರೆಸಿಕೊಂಡು ಆ ಕನ್ಯೆಯರ ಪರಿಚಾರಕನಾಗಿದ್ದಾನೆ.

04018017a ಯಸ್ಯ ಸ್ಮ ರಥಘೋಷೇಣ ಸಮಕಂಪತ ಮೇದಿನೀ।
04018017c ಸಪರ್ವತವನಾ ಭೀಮ ಸಹಸ್ಥಾವರಜಂಗಮಾ।।

ಭೀಮ! ಇವನ ರಥಘೋಷದಿಂದ ಪರ್ವತ ವನಗಳೊಂದಿಗೆ, ಸ್ಥಾವರಜಂಗಮಗಳೊಂದಿಗೆ ಇಡೀ ಮೇದಿನಿಯು ಕಂಪಿಸುತ್ತಿತ್ತು.

04018018a ಯಸ್ಮಿಂ ಜಾತೇ ಮಹಾಭಾಗೇ ಕುಂತ್ಯಾಃ ಶೋಕೋ ವ್ಯನಶ್ಯತ।
04018018c ಸ ಶೋಚಯತಿ ಮಾಮದ್ಯ ಭೀಮಸೇನ ತವಾನುಜಃ।।

ಭೀಮಸೇನ! ಯಾರ ಹುಟ್ಟಿನಿಂದ ಕುಂತಿಯ ಶೋಕವು ಅಳಿಯಿತೋ ಆ ಮಹಾಭಾಗ, ನಿನ್ನ ತಮ್ಮನ ಕುರಿತು ನನಗೆ ದುಃಖವಾಗುತ್ತದೆ.

04018019a ಭೂಷಿತಂ ತಮಲಂಕಾರೈಃ ಕುಂಡಲೈಃ ಪರಿಹಾಟಕೈಃ।
04018019c ಕಂಬುಪಾಣಿನಮಾಯಾಂತಂ ದೃಷ್ಟ್ವಾ ಸೀದತಿ ಮೇ ಮನಃ।।

ಚಿನ್ನದ ಕುಂಡಲಗಳಿಂದ ಅಲಂಕೃತನಾಗಿ ಕೈಯಲ್ಲಿ ಚಿಪ್ಪಿನ ಬಳೆಗಳನ್ನು ತೊಟ್ಟು ಬರುವ ಅವನನ್ನು ನೋಡಿ ನನ್ನ ಮನಸ್ಸು ನೋಯುತ್ತದೆ.

04018020a ತಂ ವೇಣೀಕೃತಕೇಶಾಂತಂ ಭೀಮಧನ್ವಾನಮರ್ಜುನಂ।
04018020c ಕನ್ಯಾಪರಿವೃತಂ ದೃಷ್ಟ್ವಾ ಭೀಮ ಸೀದತಿ ಮೇ ಮನಃ।।

ಭಯಂಕರ ಬಿಲ್ಗಾರನಾದ ಅರ್ಜುನನು ತಲೆಗೂದಲನ್ನು ಜಡೆ ಹೆಣೆದುಕೊಂಡು ಕನ್ಯೆಯರಿಂದ ಸುತ್ತುವರೆದಿರುವುದನ್ನು ಕಂಡು ನನ್ನ ಮನಸ್ಸು ನೋಯುತ್ತದೆ.

04018021a ಯದಾ ಹ್ಯೇನಂ ಪರಿವೃತಂ ಕನ್ಯಾಭಿರ್ದೇವರೂಪಿಣಂ।
04018021c ಪ್ರಭಿನ್ನಮಿವ ಮಾತಂಗಂ ಪರಿಕೀರ್ಣಂ ಕರೇಣುಭಿಃ।।
04018022a ಮತ್ಸ್ಯಮರ್ಥಪತಿಂ ಪಾರ್ಥಂ ವಿರಾಟಂ ಸಮುಪಸ್ಥಿತಂ।
04018022c ಪಶ್ಯಾಮಿ ತೂರ್ಯಮಧ್ಯಸ್ಥಂ ದಿಶೋ ನಶ್ಯಂತಿ ಮೇ ತದಾ।।

ಮತ್ಸ್ಯರಾಜ ವಿರಾಟನ ಸಮುಪಸ್ಥಿತಿಯಲ್ಲಿ ಹೆಣ್ಣಾನೆಗಳಿಂದ ಸುತ್ತುವರೆಯಲ್ಪಟ್ಟ ಮದ್ದಾನೆಯಂತೆ ಈ ಕನ್ಯೆಯರಿಂದ ಸುತ್ತುವರೆಯಲ್ಪಟ್ಟು ವಾದ್ಯಗಳಿಗೆ ನರ್ತಿಸುವ ಆ ದೇವರೂಪಿಯನ್ನು ನೋಡಿ ನನಗೆ ದಿಕ್ಕೇ ತೋಚದಂತಾಗುತ್ತದೆ.

04018023a ನೂನಮಾರ್ಯಾ ನ ಜಾನಾತಿ ಕೃಚ್ಛ್ರಂ ಪ್ರಾಪ್ತಂ ಧನಂಜಯಂ।
04018023c ಅಜಾತಶತ್ರುಂ ಕೌರವ್ಯಂ ಮಗ್ನಂ ದುರ್ದ್ಯೂತದೇವಿನಂ।।

ಜೂಜಿನ ಹುಚ್ಚುಹಿಡಿದಿರುವ ಅಜಾತಶತ್ರು ಕೌರವ್ಯ ಯುಧಿಷ್ಠಿರನಿಗೂ ಮತ್ತು ಧನಂಜಯನಿಗೂ ಬಂದೊದಗಿರುವ ಕಷ್ಟಗಳನ್ನು ಖಂಡಿತವಾಗಿಯೂ ಆರ್ಯೆ ಕುಂತಿಯು ತಿಳಿದಿರಲಾರಳು.

04018024a ತಥಾ ದೃಷ್ಟ್ವಾ ಯವೀಯಾಂಸಂ ಸಹದೇವಂ ಯುಧಾಂ ಪತಿಂ।
04018024c ಗೋಷು ಗೋವೇಷಮಾಯಾಂತಂ ಪಾಂಡುಭೂತಾಸ್ಮಿ ಭಾರತ।।

ಹಾಗೆಯೇ ಭಾರತ! ಯುದ್ಧದಲ್ಲಿ ನಾಯಕನಾದ ನಿಮ್ಮ ಕಿರಿಯವನಾದ ಸಹದೇವನು ಗೋಪಾಲನ ವೇಷದಲ್ಲಿ ಗೋವುಗಳ ಮಧ್ಯೆ ಇರುವುದನ್ನು ನೋಡಿ ನಾನು ಬಿಳಿಚಿಕೊಳ್ಳುತ್ತೇನೆ.

04018025a ಸಹದೇವಸ್ಯ ವೃತ್ತಾನಿ ಚಿಂತಯಂತೀ ಪುನಃ ಪುನಃ।
04018025c ನ ವಿಂದಾಮಿ ಮಹಾಬಾಹೋ ಸಹದೇವಸ್ಯ ದುಷ್ಕೃತಂ।
04018025e ಯಸ್ಮಿನ್ನೇವಂವಿಧಂ ದುಃಖಂ ಪ್ರಾಪ್ನುಯಾತ್ಸತ್ಯವಿಕ್ರಮಃ।।

ಮಹಾಬಾಹೋ! ಸಹದೇವನ ಕುರಿತು ಮತ್ತೆ ಮತ್ತೆ ಚಿಂತಿಸುವ ನನಗೆ ಸಹದೇವನು ಯಾವ ಕೆಟ್ಟ ಕೆಲಸವನ್ನು ಮಾಡಿದನೆಂದು ಆ ಸತ್ಯವಿಕ್ರಮನಿಗೆ ಈ ರೀತಿಯ ದುಃಖವು ಪ್ರಾಪ್ತವಾಯಿತು ಎಂದು ನನಗೆ ತಿಳಿಯದಾಗಿದೆ.

04018026a ದೂಯಾಮಿ ಭರತಶ್ರೇಷ್ಠ ದೃಷ್ಟ್ವಾ ತೇ ಭ್ರಾತರಂ ಪ್ರಿಯಂ।
04018026c ಗೋಷು ಗೋವೃಷಸಂಕಾಶಂ ಮತ್ಸ್ಯೇನಾಭಿನಿವೇಶಿತಂ।।

ಭರತಶ್ರೇಷ್ಠ! ಮತ್ಸ್ಯರಾಜನಿಂದ ಗೋವುಗಳ ಮೇಲ್ವಿಚಾರಣೆಗೆ ನೇಮಕಗೊಂಡಿರುವ ಗೂಳಿಯಂತಿರುವ ನಿನ್ನ ಪ್ರಿಯ ತಮ್ಮನನ್ನು ನೋಡಿ ನನಗೆ ನೋವಾಗುತ್ತದೆ.

04018027a ಸಂರಬ್ಧಂ ರಕ್ತನೇಪಥ್ಯಂ ಗೋಪಾಲಾನಾಂ ಪುರೋಗಮಂ।
04018027c ವಿರಾಟಮಭಿನಂದಂತಮಥ ಮೇ ಭವತಿ ಜ್ವರಃ।।

ಸ್ವಾಭಿಮಾನಿಯಾದ ಅವನು ಹೀಗೆ ಕೆಂಪು ಉಡುಗೆಯನ್ನುಟ್ಟು ಗೋಪಾಲ ಪ್ರಮುಖನಾಗಿ ವಿರಾಟನನ್ನು ಸಂತಸಪಡಿಸುತ್ತಿರುವುದನ್ನು ನೋಡಿ ನನಗೆ ಸಂತಾಪವಾಗುತ್ತದೆ.

04018028a ಸಹದೇವಂ ಹಿ ಮೇ ವೀರಂ ನಿತ್ಯಮಾರ್ಯಾ ಪ್ರಶಂಸತಿ।
04018028c ಮಹಾಭಿಜನಸಂಪನ್ನೋ ವೃತ್ತವಾಂ ಶೀಲವಾನಿತಿ।।
04018029a ಹ್ರೀನಿಷೇಧೋ ಮಧುರವಾಗ್ಧಾರ್ಮಿಕಶ್ಚ ಪ್ರಿಯಶ್ಚ ಮೇ।
04018029c ಸ ತೇಽರಣ್ಯೇಷು ಬೋದ್ಧವ್ಯೋ ಯಾಜ್ಞಸೇನಿ ಕ್ಷಪಾಸ್ವಪಿ।।

ವೀರ ಸಹದೇವನನನ್ನು ನಿತ್ಯವೂ ಆರ್ಯೆ ಕುಂತಿಯು ನನಗೆ ಈ ರೀತಿ ಹೇಳಿ ಪ್ರಶಂಸಿಸುತ್ತಿದ್ದಳು: “ಅವನು ಸತ್ಕುಲ ಸಂಪನ್ನ. ಒಳ್ಳೆಯ ವರ್ತನೆಯುಳ್ಳವನು. ಶೀಲವಂತ. ಲಜ್ಜಾಪ್ರವೃತ್ತಿಯುಳ್ಳವನು. ಸವಿಯಾಗಿ ಮಾತನಾಡುವವನು. ಧಾರ್ಮಿಕ. ನನಗೆ ಪ್ರಿಯನಾದವನು. ದ್ರೌಪದಿ! ಅವನನ್ನು ನೀನು ಇರುಳಿನಲ್ಲಿಯೂ ಎಚ್ಚರದಿಂದ ನೋಡಿಕೊಳ್ಳಬೇಕು.”

04018030a ತಂ ದೃಷ್ಟ್ವಾ ವ್ಯಾಪೃತಂ ಗೋಷು ವತ್ಸಚರ್ಮಕ್ಷಪಾಶಯಂ।
04018030c ಸಹದೇವಂ ಯುಧಾಂ ಶ್ರೇಷ್ಠಂ ಕಿಂ ನು ಜೀವಾಮಿ ಪಾಂಡವ।।

ಗೋವುಗಳ ಆರೈಕೆಯಲ್ಲಿ ನಿರತನಾದ, ರಾತ್ರಿಯಲ್ಲಿ ಕರುವಿನ ಚರ್ಮದ ಮೇಲೆ ಮಲಗುವ ಆ ಯೋಧಶ್ರೇಷ್ಠ ಸಹದೇವನನ್ನು ನೋಡಿಯೂ ನಾನು ಬದುಕಬೇಕೆ ಪಾಂಡವ!

04018031a ಯಸ್ತ್ರಿಭಿರ್ನಿತ್ಯಸಂಪನ್ನೋ ರೂಪೇಣಾಸ್ತ್ರೇಣ ಮೇಧಯಾ।
04018031c ಸೋಽಶ್ವಬಂಧೋ ವಿರಾಟಸ್ಯ ಪಶ್ಯ ಕಾಲಸ್ಯ ಪರ್ಯಯಂ।।

ರೂಪ, ಅಸ್ತ್ರ, ಬುದ್ಧಿ ಮೂರರಲ್ಲೂ ಸದಾ ಸಂಪನ್ನನಾಗಿರುವ ಆ ನಕುಲನು ವಿರಾಟನ ಅಶ್ವಪಾಲಕನಾಗಿದ್ದಾನೆ. ಕಾಲದ ವೈಪರೀತ್ಯವನ್ನು ನೋಡು.

04018032a ಅಭ್ಯಕೀರ್ಯಂತ ವೃಂದಾನಿ ದಾಮಗ್ರಂಥಿಮುದೀಕ್ಷತಾಂ।
04018032c ವಿನಯಂತಂ ಜವೇನಾಶ್ವಾನ್ಮಹಾರಾಜಸ್ಯ ಪಶ್ಯತಃ।।

ಮಹಾರಾಜನು ನೋಡಲೆಂದು ಕುದುರೆಗಳನ್ನು ವೇಗವಾಗಿ ಓಡಿಸುವ ದಾಮಗ್ರಂಥಿಯನ್ನು ನೋಡಲು ಜನಸಮೂಹ ಕಿಕ್ಕಿರಿಯುತ್ತದೆ.

04018033a ಅಪಶ್ಯಮೇನಂ ಶ್ರೀಮಂತಂ ಮತ್ಸ್ಯಂ ಭ್ರಾಜಿಷ್ಣುಮುತ್ತಮಂ।
04018033c ವಿರಾಟಮುಪತಿಷ್ಠಂತಂ ದರ್ಶಯಂತಂ ಚ ವಾಜಿನಃ।।

ಶ್ರೀಮಂತನೂ, ತೇಜಸ್ವಿಯೂ ಉತ್ತಮನೂ ಆದ ಮತ್ಸ್ಯರಾಜ ವಿರಾಟನ ಎದಿರು ಅವನು ಕುದುರೆಗಳನ್ನು ಪ್ರದರ್ಶಿಸುವುದನ್ನು ನಾನು ನೋಡಿದ್ದೇನೆ.

04018034a ಕಿಂ ನು ಮಾಂ ಮನ್ಯಸೇ ಪಾರ್ಥ ಸುಖಿತೇತಿ ಪರಂತಪ।
04018034c ಏವಂ ದುಃಖಶತಾವಿಷ್ಟಾ ಯುಧಿಷ್ಠಿರನಿಮಿತ್ತತಃ।।

ಪರಂತಪ! ಪಾರ್ಥ! ಯುಧಿಷ್ಠಿರನಿಂದ ಹೀಗೆ ನೂರಾರು ದುಃಖಗಳಿಗೆ ಒಳಗಾಗಿರುವ ನಾನು ಸುಖಿಯೆಂದು ಹೇಗೆ ತಾನೆ ಭಾವಿಸುವೆ?

04018035a ಅತಃ ಪ್ರತಿವಿಶಿಷ್ಟಾನಿ ದುಃಖಾನ್ಯನ್ಯಾನಿ ಭಾರತ।
04018035c ವರ್ತಂತೇ ಮಯಿ ಕೌಂತೇಯ ವಕ್ಷ್ಯಾಮಿ ಶೃಣು ತಾನ್ಯಪಿ।।

ಭಾರತ! ಕೌಂತೇಯ! ಇವುಗಳಿಗೂ ವಿಶೇಷವಾದ ಬೇರೆ ದುಃಖಗಳು ನನಗಿವೆ. ಅವುಗಳನ್ನೂ ಹೇಳುತ್ತೇನೆ. ಕೇಳು.

04018036a ಯುಷ್ಮಾಸು ಧ್ರಿಯಮಾಣೇಷು ದುಃಖಾನಿ ವಿವಿಧಾನ್ಯುತ।
04018036c ಶೋಷಯಂತಿ ಶರೀರಂ ಮೇ ಕಿಂ ನು ದುಃಖಮತಃ ಪರಂ।।

ನೀನು ಬದುಕಿರುವಾಗಲೇ ವಿವಿಧ ದುಃಖಗಳು ನನ್ನ ಶರೀರವನ್ನು ಬತ್ತಿಸುತ್ತಿವೆ. ಇದಕ್ಕಿಂತಲೂ ಮಿಗಿಲಾದ ದುಃಖ ಯಾವುದಿದೆ?”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಭೀಮಸಂವಾದೇ ಅಷ್ಟಾದಶೋಽಧ್ಯಾಯಃ ।
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಭೀಮಸಂವಾದದಲ್ಲಿ ಹದಿನೆಂಟನೆಯ ಅಧ್ಯಾಯವು.