017 ದ್ರೌಪದೀಭೀಮಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಕೀಚಕವಧ ಪರ್ವ

ಅಧ್ಯಾಯ 17

ಸಾರ

ದ್ರೌಪದಿಯು ಭೀಮನಲ್ಲಿ ತನ್ನ ದುಃಖಕ್ಕೆ ಕಾರಣವನ್ನು ಹೇಳಿಕೊಳ್ಳುವುದು (1-29).

04017001 ದ್ರೌಪದ್ಯುವಾಚ।
04017001a ಅಶೋಚ್ಯಂ ನು ಕುತಸ್ತಸ್ಯಾ ಯಸ್ಯಾ ಭರ್ತಾ ಯುಧಿಷ್ಠಿರಃ।
04017001c ಜಾನನ್ಸರ್ವಾಣಿ ದುಃಖಾನಿ ಕಿಂ ಮಾಂ ತ್ವಂ ಪರಿಪೃಚ್ಛಸಿ।।

ದ್ರೌಪದಿಯು ಹೇಳಿದಳು: “ಯುಧಿಷ್ಠಿರನಿಗೆ ಪತ್ನಿಯಾಗಿರುವವಳಿಗೆ ಯಾವಾಗ ತಾನೇ ಶೋಕವೆನ್ನುವುದಿರುವುದಿಲ್ಲ? ನನ್ನ ದುಃಖದ ಕುರಿತು ಎಲ್ಲವನ್ನು ತಿಳಿದೂ ನನ್ನನ್ನು ಏಕೆ ಪ್ರಶ್ನಿಸುತ್ತಿರುವೆ?

04017002a ಯನ್ಮಾಂ ದಾಸೀಪ್ರವಾದೇನ ಪ್ರಾತಿಕಾಮೀ ತದಾನಯತ್।
04017002c ಸಭಾಯಾಂ ಪಾರ್ಷದೋ ಮಧ್ಯೇ ತನ್ಮಾಂ ದಹತಿ ಭಾರತ।।

ಭಾರತ! ಅಂದು ನನ್ನನ್ನು ಸೇವಕ ಪ್ರತಿಕಾಮಿಯು ದಾಸೀ ಎಂದು ಕರೆಯುತ್ತಾ ಸಭೆಯ ಮಧ್ಯೆ ಎಳೆದುಕೊಂಡು ಹೋದನಲ್ಲ ಅದು ನನ್ನನ್ನು ಸುಡುತ್ತಿದೆ.

04017003a ಪಾರ್ಥಿವಸ್ಯ ಸುತಾ ನಾಮ ಕಾ ನು ಜೀವೇತ ಮಾದೃಶೀ।
04017003c ಅನುಭೂಯ ಭೃಶಂ ದುಃಖಮನ್ಯತ್ರ ದ್ರೌಪದೀಂ ಪ್ರಭೋ।।

ಪ್ರಭೋ! ಈ ದ್ರೌಪದಿಯಲ್ಲದೇ ಬೇರೆ ಯಾವ ರಾಜಪುತ್ರಿಯು ತಾನೇ ನನ್ನ ಹಾಗೆ ರೋಷವನ್ನು ಅನುಭವಿಸಿ ಜೀವಿಸಿದ್ದಾಳು?

04017004a ವನವಾಸಗತಾಯಾಶ್ಚ ಸೈಂಧವೇನ ದುರಾತ್ಮನಾ।
04017004c ಪರಾಮರ್ಶಂ ದ್ವಿತೀಯಂ ಚ ಸೋಢುಮುತ್ಸಹತೇ ನು ಕಾ।।

ಎರಡನೆಯ ಬಾರಿ, ವನವಾಸದಲ್ಲಿದ್ದಾಗ ದುರಾತ್ಮ ಸೈಂಧವನು ಮಾಡಿದ್ದುದನ್ನೂ ಸಹಿಸಿಕೊಂಡು ಯಾರುತಾನೇ ಇದ್ದಾಳು?

04017005a ಮತ್ಸ್ಯರಾಜ್ಞಃ ಸಮಕ್ಷಂ ಚ ತಸ್ಯ ಧೂರ್ತಸ್ಯ ಪಶ್ಯತಃ।
04017005c ಕೀಚಕೇನ ಪದಾ ಸ್ಪೃಷ್ಟಾ ಕಾ ನು ಜೀವೇತ ಮಾದೃಶೀ।।

ಮತ್ಸ್ಯರಾಜನ ಸಮಕ್ಷಮದಲ್ಲಿಯೇ, ಆ ದೂರ್ತನು ನೋಡುತ್ತಿದ್ದಂತೆಯೇ, ಕೀಚಕನ ಕಾಲಿನಿಂದ ಒದೆಸಿಕೊಂಡ ಯಾರುತಾನೇ ನನ್ನಹಾಗೆ ಜೀವಿಸಿದ್ದಾಳು?

04017006a ಏವಂ ಬಹುವಿಧೈಃ ಕ್ಲೇಶೈಃ ಕ್ಲಿಶ್ಯಮಾನಾಂ ಚ ಭಾರತ।
04017006c ನ ಮಾಂ ಜಾನಾಸಿ ಕೌಂತೇಯ ಕಿಂ ಫಲಂ ಜೀವಿತೇನ ಮೇ।।

ಭಾರತ! ಹೀಗೆ ಬಹುವಿಧದ ದುಃಖಗಳಿಂದ ಬಾಧಿತಳಾದ ನಾನು ನಿನಗೆ ಅರ್ಥವಾಗುತ್ತಿಲ್ಲ. ಕೌಂತೇಯ! ನಾನು ಬದುಕಿದ್ದು ಫಲವೇನು?

04017007a ಯೋಽಯಂ ರಾಜ್ಞೋ ವಿರಾಟಸ್ಯ ಕೀಚಕೋ ನಾಮ ಭಾರತ।
04017007c ಸೇನಾನೀಃ ಪುರುಷವ್ಯಾಘ್ರ ಸ್ಯಾಲಃ ಪರಮದುರ್ಮತಿಃ।।
04017008a ಸ ಮಾಂ ಸೈರಂಧ್ರಿವೇಷೇಣ ವಸಂತೀಂ ರಾಜವೇಶ್ಮನಿ।
04017008c ನಿತ್ಯಮೇವಾಹ ದುಷ್ಟಾತ್ಮಾ ಭಾರ್ಯಾ ಮಮ ಭವೇತಿ ವೈ।।

ಭಾರತ! ಪುರುಷವ್ಯಾಘ್ರ! ಈ ರಾಜ ವಿರಾಟನ ಸೇನಾನಿಯೂ ಭಾವಮೈದುನನೂ ಆದ ಕೀಚಕ ಎಂಬ ಹೆಸರಿನ ಪರಮ ದುರ್ಮತಿ ದುಷ್ಟನು ರಾಜಭವನದಲ್ಲಿ ಸೈರಂಧ್ರಿಯ ವೇಷದಲ್ಲಿ ವಾಸಿಸುತ್ತಿರುವ ನನ್ನನ್ನು ನಿತ್ಯವೂ ನನಗೆ ಹೆಂಡತಿಯಾಗು ಎಂದು ಕಾಡುತ್ತಿರುತ್ತಾನೆ.

04017009a ತೇನೋಪಮಂತ್ರ್ಯಮಾಣಾಯಾ ವಧಾರ್ಹೇಣ ಸಪತ್ನಹನ್।
04017009c ಕಾಲೇನೇವ ಫಲಂ ಪಕ್ವಂ ಹೃದಯಂ ಮೇ ವಿದೀರ್ಯತೇ।।

ಶತ್ರುನಾಶಕನೇ! ವಧಾರ್ಹನಾದ ಅವನಿಂದ ಹೀಗೆ ಒತ್ತಾಯಕ್ಕೊಳಪಟ್ಟ ನನ್ನ ಹೃದಯವು ಬಹುಕಾಲದಿಂದ ಪಕ್ವವಾಗಿರುವ ಫಲದಂತೆ ಬಿರಿದುಹೋಗಿದೆ.

04017010a ಭ್ರಾತರಂ ಚ ವಿಗರ್ಹಸ್ವ ಜ್ಯೇಷ್ಠಂ ದುರ್ದ್ಯೂತದೇವಿನಂ।
04017010c ಯಸ್ಯಾಸ್ಮಿ ಕರ್ಮಣಾ ಪ್ರಾಪ್ತಾ ದುಃಖಮೇತದನಂತಕಂ।।

ಮಹಾಜೂಜುಕೋರನಾದ ನಿನ್ನ ಅಣ್ಣನನ್ನು ನಿಂದಿಸು. ಅವನ ಕೆಲಸದಿಂದಲೇ ನಾನು ಈ ಕೊನೆಯಿಲ್ಲದ ದುಃಖವನ್ನು ಅನುಭವಿಸುತ್ತಿದ್ದೇನೆ.

04017011a ಕೋ ಹಿ ರಾಜ್ಯಂ ಪರಿತ್ಯಜ್ಯ ಸರ್ವಸ್ವಂ ಚಾತ್ಮನಾ ಸಹ।
04017011c ಪ್ರವ್ರಜ್ಯಾಯೈವ ದೀವ್ಯೇತ ವಿನಾ ದುರ್ದ್ಯೂತದೇವಿನಂ।।

ಆ ಜೂಜಾಳಿಯ ಹೊರತು ಬೇರೆ ಯಾರು ತಾನೇ ತನ್ನನ್ನೂ, ರಾಜ್ಯವನ್ನೂ, ಸರ್ವಸ್ವವನ್ನೂ ತೊರೆದು ವನವಾಸಕ್ಕಾಗಿಯೇ ಜೂಜಾಡುತ್ತಾನೆ?

04017012a ಯದಿ ನಿಷ್ಕಸಹಸ್ರೇಣ ಯಚ್ಚಾನ್ಯತ್ಸಾರವದ್ಧನಂ।
04017012c ಸಾಯಂಪ್ರಾತರದೇವಿಷ್ಯದಪಿ ಸಂವತ್ಸರಾನ್ಬಹೂನ್।।
04017013a ರುಕ್ಮಂ ಹಿರಣ್ಯಂ ವಾಸಾಂಸಿ ಯಾನಂ ಯುಗ್ಯಮಜಾವಿಕಂ।
04017013c ಅಶ್ವಾಶ್ವತರಸಂಘಾಂಶ್ಚ ನ ಜಾತು ಕ್ಷಯಮಾವಹೇತ್।।

ಸಾವಿರ ನಾಣ್ಯಗಳನ್ನೂ ಮತ್ತು ಇನ್ನೂ ಸಾರವತ್ತಾದ ಧನವನ್ನಿಟ್ಟು ಅನೇಕ ವರ್ಷಗಳ ವರೆಗೆ ಬೆಳಿಗ್ಗೆ-ಸಂಜೆ ಜೂಜಾಡುತ್ತಿದ್ದರೂ ಅವನ ಚಿನ್ನ, ಬೆಳ್ಳಿ, ವಸ್ತ್ರ, ವಾಹನ, ರಥ, ಮೇಕೆ ಹಿಂಡು, ಕುದುರೆ, ಮತ್ತು ಹೇಸರಗತ್ತೆಗಳ ಸಮೂಹಗಳು ಕರಗುತ್ತಿರಲಿಲ್ಲ.

04017014a ಸೋಽಯಂ ದ್ಯೂತಪ್ರವಾದೇನ ಶ್ರಿಯಾ ಪ್ರತ್ಯವರೋಪಿತಃ।
04017014c ತೂಷ್ಣೀಮಾಸ್ತೇ ಯಥಾ ಮೂಢಃ ಸ್ವಾನಿ ಕರ್ಮಾಣಿ ಚಿಂತಯನ್।।

ಜೂಜಿನ ಹುಚ್ಚಿನಲ್ಲಿ ಸಂಪತ್ತನ್ನು ಕಳೆದುಕೊಂಡು ತಾನು ಮಾಡಿದ್ದುದರ ಕುರಿತು ಚಿಂತಿಸುತ್ತಾ ಈಗ ಮೂಢನಂತೆ ಸುಮ್ಮನೆ ಕುಳಿತಿದ್ದಾನೆ.

04017015a ದಶ ನಾಗಸಹಸ್ರಾಣಿ ಪದ್ಮಿನಾಂ ಹೇಮಮಾಲಿನಾಂ।
04017015c ಯಂ ಯಾಂತಮನುಯಾಂತೀಹ ಸೋಽಯಂ ದ್ಯೂತೇನ ಜೀವತಿ।।

ತಾನು ಹೊರಟಾಗ ಚಿನ್ನದ ಹಾರಗಳಿಂದ ಮತ್ತು ತಾವರೆಗಳಿಂದ ಅಲಂಕೃತವಾದ ಹತ್ತು ಸಾವಿರ ಆನೆಗಳಿಂದ ಹಿಂಬಾಲಿಸಲ್ಪಡುತ್ತಿದ್ದವನು ಇಂದು ಜೂಜಾಡಿಕೊಂಡು ಅದರಿಂದ ಜೀವಿಸುತ್ತಿದ್ದಾನೆ!

04017016a ತಥಾ ಶತಸಹಸ್ರಾಣಿ ನೃಣಾಮಮಿತತೇಜಸಾಂ।
04017016c ಉಪಾಸತೇ ಮಹಾರಾಜಮಿಂದ್ರಪ್ರಸ್ಥೇ ಯುಧಿಷ್ಠಿರಂ।।

ಇಂದ್ರಪ್ರಸ್ಥದಲ್ಲಿ ಮಹಾರಾಜ ಯುಧಿಷ್ಠಿರನನ್ನು ನೂರಾರು ಸಾವಿರಾರು ಅಮಿತತೇಜಸ ಜನರು ಪೂಜಿಸುತ್ತಿದ್ದರು.

04017017a ಶತಂ ದಾಸೀಸಹಸ್ರಾಣಿ ಯಸ್ಯ ನಿತ್ಯಂ ಮಹಾನಸೇ।
04017017c ಪಾತ್ರೀಹಸ್ತಂ ದಿವಾರಾತ್ರಮತಿಥೀನ್ಭೋಜಯಂತ್ಯುತ।।

ಅವನ ಅಡುಗೆ ಮನೆಯಲ್ಲಿ ನಿತ್ಯವೂ ಸಹಸ್ರ ದಾಸಿಯರು ಕೈಯಲ್ಲಿ ಪಾತ್ರೆಗಳನ್ನು ಹಿಡಿದು ಹಗಲಿರುಳು ಅತಿಥಿಗಳಿಗೆ ಊಟ ಬಡಿಸುತ್ತಿದ್ದರು.

04017018a ಏಷ ನಿಷ್ಕಸಹಸ್ರಾಣಿ ಪ್ರದಾಯ ದದತಾಂ ವರಃ।
04017018c ದ್ಯೂತಜೇನ ಹ್ಯನರ್ಥೇನ ಮಹತಾ ಸಮುಪಾವೃತಃ।।

ಸಹಸ್ರನಾಣ್ಯಗಳನ್ನು ದಾನಮಾಡುತ್ತಿದ್ದ ಶ್ರೇಷ್ಠ ದಾನಿಯು ಇಂದು ದ್ಯೂತದಿಂದಾದ ದೊಡ್ಡ ಅನರ್ಥಕ್ಕೆ ಸಿಲುಕಿಕೊಂಡಿದ್ದಾನೆ.

04017019a ಏನಂ ಹಿ ಸ್ವರಸಂಪನ್ನಾ ಬಹವಃ ಸೂತಮಾಗಧಾಃ।
04017019c ಸಾಯಂಪ್ರಾತರುಪಾತಿಷ್ಠನ್ಸುಮೃಷ್ಟಮಣಿಕುಂಡಲಾಃ।।

ವಿಮಲ ಮಣಿಕುಂಡಲಗಳನ್ನು ಧರಿಸಿದ್ದ ಸ್ವರಸಂಪನ್ನರಾದ ಬಹುಮಂದಿ ಹೊಗಳು ಭಟರು ಅವನನ್ನು ಸಂಜೆ ಮತ್ತು ಮುಂಜಾನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.

04017020a ಸಹಸ್ರಮೃಷಯೋ ಯಸ್ಯ ನಿತ್ಯಮಾಸನ್ಸಭಾಸದಃ।
04017020c ತಪಃಶ್ರುತೋಪಸಂಪನ್ನಾಃ ಸರ್ವಕಾಮೈರುಪಸ್ಥಿತಾಃ।।

ತಪಃಸ್ಸಂಪನ್ನರೂ ವೇದಸಂಪನ್ನರೂ ಎಲ್ಲ ಬಯಕೆಗಳ ಸಿದ್ಧಿಸಿದ್ಧರೂ ಆದ ಸಹಸ್ರ ಋಷಿಗಳು ನಿತ್ಯವೂ ಅವನ ಸಭಾಸದರಾಗಿರುತ್ತಿದ್ದರು.

04017021a ಅಂಧಾನ್ವೃದ್ಧಾಂಸ್ತಥಾನಾಥಾನ್ಸರ್ವಾನ್ರಾಷ್ಟ್ರೇಷು ದುರ್ಗತಾನ್।
04017021c ಬಿಭರ್ತ್ಯವಿಮನಾ ನಿತ್ಯಮಾನೃಶಂಸ್ಯಾದ್ಯುಧಿಷ್ಠಿರಃ।।

ಯುಧಿಷ್ಠಿರನು ರಾಷ್ಟ್ರದಲ್ಲಿದ್ದ ಎಲ್ಲ ಕುರುಡರನ್ನೂ, ವೃದ್ಧರನ್ನೂ, ಅನಾಥರನ್ನೂ ಮತ್ತು ದುರ್ಗತಿಕರನ್ನು ವಿಮನಸ್ಕನಾಗದೇ ಕರುಣೆಯಿಂದ ನಿತ್ಯವೂ ಪೋಷಿಸುತ್ತಿದ್ದನು.

04017022a ಸ ಏಷ ನಿರಯಂ ಪ್ರಾಪ್ತೋ ಮತ್ಸ್ಯಸ್ಯ ಪರಿಚಾರಕಃ।
04017022c ಸಭಾಯಾಂ ದೇವಿತಾ ರಾಜ್ಞಃ ಕಂಕೋ ಬ್ರೂತೇ ಯುಧಿಷ್ಠಿರಃ।।

ಅದೇ ರಾಜ ಯುಧಿಷ್ಠಿರನು ಈಗ ದುರವಸ್ಥೆಗೀಡಾಗಿ ಮತ್ಸ್ಯರಾಜನ ಪರಿಚಾರಕನಾಗಿ ಅವನೊಂದಿಗೆ ಸಭೆಯಲ್ಲಿ ದ್ಯೂತವಾಡುತ್ತಾ ಕಂಕನೆಂದು ಕರೆಯಲ್ಪಡುತ್ತಿದ್ದಾನೆ.

04017023a ಇಂದ್ರಪ್ರಸ್ಥೇ ನಿವಸತಃ ಸಮಯೇ ಯಸ್ಯ ಪಾರ್ಥಿವಾಃ।
04017023c ಆಸನ್ಬಲಿಭೃತಃ ಸರ್ವೇ ಸೋಽದ್ಯಾನ್ಯೈರ್ಭೃತಿಮಿಚ್ಛತಿ।।

ಇಂದ್ರಪ್ರಸ್ಥದಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ರಾಜರೆಲ್ಲರೂ ಯಾರಿಗೆ ಕಪ್ಪವನ್ನು ಕೊಡುತ್ತಿದ್ದರೋ ಅವನೇ ಇಂದು ಇತರರ ಆಶ್ರಯವನ್ನು ಕೇಳಿಕೊಂಡಿದ್ದಾನೆ.

04017024a ಪಾರ್ಥಿವಾಃ ಪೃಥಿವೀಪಾಲಾ ಯಸ್ಯಾಸನ್ವಶವರ್ತಿನಃ।
04017024c ಸ ವಶೇ ವಿವಶೋ ರಾಜಾ ಪರೇಷಾಮದ್ಯ ವರ್ತತೇ।।

ಪೃಥಿವೀಪಾಲರಾದ ದೊರೆಗಳು ಯಾರ ವಶವರ್ತಿಗಳಾಗಿದ್ದರೋ ಆ ರಾಜನೇ ಇಂದು ಅಸ್ವತಂತ್ರನಾಗಿ ಇತರರ ವಶದಲ್ಲಿದ್ದಾನೆ.

04017025a ಪ್ರತಾಪ್ಯ ಪೃಥಿವೀಂ ಸರ್ವಾಂ ರಶ್ಮಿವಾನಿವ ತೇಜಸಾ।
04017025c ಸೋಽಯಂ ರಾಜ್ಞೋ ವಿರಾಟಸ್ಯ ಸಭಾಸ್ತಾರೋ ಯುಧಿಷ್ಠಿರಃ।।

ಸಮಸ್ತ ಪೃಥ್ವಿಯನ್ನು ಸೂರ್ಯನಂತೆ ತೇಜಸ್ಸಿನಿಂದ ಬೆಳಗಿದ ಆ ಯುಧಿಷ್ಠಿರನು ಇಂದು ವಿರಾಟರಾಜನ ಸಭಾಸದನಾಗಿದ್ದಾನೆ.

04017026a ಯಮುಪಾಸಂತ ರಾಜಾನಃ ಸಭಾಯಾಮೃಷಿಭಿಃ ಸಹ।
04017026c ತಮುಪಾಸೀನಮದ್ಯಾನ್ಯಂ ಪಶ್ಯ ಪಾಂಡವ ಪಾಂಡವಂ।।

ಪಾಂಡವ! ಸಭೆಯಲ್ಲಿ ಯಾರನ್ನು ರಾಜರು ಮತ್ತು ಋಷಿಗಳು ಪೂಜಿಸುತ್ತಿದ್ದರೋ ಆ ಪಾಂಡವನೇ ಈಗ ಇತರರನ್ನು ಪೂಜಿಸುತ್ತಿರುವುದನ್ನು ನೋಡು.

04017027a ಅತದರ್ಹಂ ಮಹಾಪ್ರಾಜ್ಞಂ ಜೀವಿತಾರ್ಥೇಽಭಿಸಂಶ್ರಿತಂ।
04017027c ದೃಷ್ಟ್ವಾ ಕಸ್ಯ ನ ದುಃಖಂ ಸ್ಯಾದ್ಧರ್ಮಾತ್ಮಾನಂ ಯುಧಿಷ್ಠಿರಂ।।

ಜೀವಿತಾರ್ಥಕ್ಕಾಗಿ ಇತರರ ಆಶ್ರಯದಲ್ಲಿರುವ ಮಹಾಪ್ರಾಜ್ಞ ಧರ್ಮಾತ್ಮ ಯುಧಿಷ್ಠಿರನನ್ನು ನೋಡಿ ಯಾರಿಗೆ ತಾನೇ ದುಃಖವಾಗಲಾರದು?

04017028a ಉಪಾಸ್ತೇ ಸ್ಮ ಸಭಾಯಾಂ ಯಂ ಕೃತ್ಸ್ನಾ ವೀರ ವಸುಂಧರಾ।
04017028c ತಮುಪಾಸೀನಮದ್ಯಾನ್ಯಂ ಪಶ್ಯ ಭಾರತ ಭಾರತಂ।।

ವೀರ! ಭಾರತ! ಸಭೆಯಲ್ಲಿ ಯಾರನ್ನು ಇಡೀ ಭೂಮಿಯೇ ಪೂಜಿಸುತ್ತಿತ್ತೋ ಆ ಭಾರತನೇ ಇತರರನ್ನು ಉಪಾಸಿಸುತ್ತಿರುವುದನ್ನು ನೋಡು.

04017029a ಏವಂ ಬಹುವಿಧೈರ್ದುಃಖೈಃ ಪೀಡ್ಯಮಾನಾಮನಾಥವತ್।
04017029c ಶೋಕಸಾಗರಮಧ್ಯಸ್ಥಾಂ ಕಿಂ ಮಾಂ ಭೀಮ ನ ಪಶ್ಯಸಿ।।

ಭೀಮ! ಈ ರೀತಿಯಲ್ಲಿಬಹುವಿಧದ ದುಃಖಗಳಿಂದ ಶೋಕಸಾಗರದ ಮಧ್ಯದಲ್ಲಿ ನಿಂತು ಅನಾಥಳಂತೆ ಪೀಡೆಪಡುತ್ತಿರುವುದು ನಿನಗೆ ಕಾಣುತ್ತಿಲ್ಲವೇ?”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಭೀಮಸಂವಾದೇ ಸಪ್ತದಶೋಽಧ್ಯಾಯಃ ।
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಭೀಮಸಂವಾದದಲ್ಲಿ ಹದಿನೇಳನೆಯ ಅಧ್ಯಾಯವು.