ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಕೀಚಕವಧ ಪರ್ವ
ಅಧ್ಯಾಯ 16
ಸಾರ
ರಾತ್ರಿ ದ್ರೌಪದಿಯು ಭೀಮಸೇನನನ್ನು ನಿದ್ದೆಯಿಂದ ಎಬ್ಬಿಸಿದುದು (1-10). ಏಕೆ ದುಃಖಿಸುತ್ತಿರುವೆಯೆಂದು ಭೀಮನು ಕೇಳುವುದು (11-16).
04016001 ವೈಶಂಪಾಯನ ಉವಾಚ।
04016001a ಸಾ ಹತಾ ಸೂತಪುತ್ರೇಣ ರಾಜಪುತ್ರೀ ಸಮಜ್ವಲತ್।
04016001c ವಧಂ ಕೃಷ್ಣಾ ಪರೀಪ್ಸಂತೀ ಸೇನಾವಾಹಸ್ಯ ಭಾಮಿನೀ।
04016001e ಜಗಾಮಾವಾಸಮೇವಾಥ ತದಾ ಸಾ ದ್ರುಪದಾತ್ಮಜಾ।।
ವೈಶಂಪಾಯನನು ಹೇಳಿದನು: “ಸೂತಪುತ್ರನಿಂದ ಪೆಟ್ಟುತಿಂದ ಆ ದ್ರುಪದಾತ್ಮಜೆ, ಭಾಮಿನೀ ರಾಜಪುತ್ರಿ ಕೃಷ್ಣೆಯು ಕೋಪದಿಂದ ಉರಿಯುತ್ತಾ, ಆ ಸೇನಾಪತಿಯ ವಧೆಯನ್ನು ಬಯಸುತ್ತಾ ತನ್ನ ನಿವಾಸಕ್ಕೆ ಹೋದಳು.
04016002a ಕೃತ್ವಾ ಶೌಚಂ ಯಥಾನ್ಯಾಯಂ ಕೃಷ್ಣಾ ವೈ ತನುಮಧ್ಯಮಾ।
04016002c ಗಾತ್ರಾಣಿ ವಾಸಸೀ ಚೈವ ಪ್ರಕ್ಷಾಲ್ಯ ಸಲಿಲೇನ ಸಾ।।
04016003a ಚಿಂತಯಾಮಾಸ ರುದತೀ ತಸ್ಯ ದುಃಖಸ್ಯ ನಿರ್ಣಯಂ।
04016003c ಕಿಂ ಕರೋಮಿ ಕ್ವ ಗಚ್ಛಾಮಿ ಕಥಂ ಕಾರ್ಯಂ ಭವೇನ್ಮಮ।।
ಆ ತನುಮಧ್ಯಮೆ ಕೃಷ್ಣೆಯು ಯಥೋಚಿತವಾಗಿ ನೀರಿನಿಂದ ಸ್ನಾನಮಾಡಿ ಬಟ್ಟೆಯನ್ನು ತೊಳೆದು, ಅಳುತ್ತಲೇ - “ಈ ದುಃಖವನ್ನು ಹೋಗಲಾಡಿಸಲು ನಾನು ಏನು ಮಾಡಲಿ? ಎಲ್ಲಿಗೆ ಹೋಗಲಿ? ನನ್ನ ಈ ಕಾರ್ಯವನ್ನು ಹೇಗೆ ನೆರವೇರಿಸಲಿ?” ಎಂದು ಚಿಂತಿಸಿದಳು.
04016004a ಇತ್ಯೇವಂ ಚಿಂತಯಿತ್ವಾ ಸಾ ಭೀಮಂ ವೈ ಮನಸಾಗಮತ್।
04016004c ನಾನ್ಯಃ ಕರ್ತಾ ಋತೇ ಭೀಮಾನ್ಮಮಾದ್ಯ ಮನಸಃ ಪ್ರಿಯಂ।।
ಹೀಗೆ ಚಿಂತಿಸುತ್ತಿರುವಾಗ ಅವಳಿಗೆ ಭೀಮನ ನೆನಪಾಯಿತು. “ಈಗ ಭೀಮನನ್ನು ಬಿಟ್ಟರೆ ಬೇರೆ ಯಾರೂ ನನ್ನ ಮನಸ್ಸಿಗೆ ಬೇಕಾಗಿರುವುದನ್ನು ಮಾಡುವವರಿಲ್ಲ.”
04016005a ತತ ಉತ್ಥಾಯ ರಾತ್ರೌ ಸಾ ವಿಹಾಯ ಶಯನಂ ಸ್ವಕಂ।
04016005c ಪ್ರಾದ್ರವನ್ನಾಥಮಿಚ್ಛಂತೀ ಕೃಷ್ಣಾ ನಾಥವತೀ ಸತೀ।।
04016005e ದುಃಖೇನ ಮಹತಾ ಯುಕ್ತಾ ಮಾನಸೇನ ಮನಸ್ವಿನೀ।।
ಆಗ ರಾತ್ರಿಯಲ್ಲಿ ಬಹುದುಃಖದಿಂದ ಕೂಡಿದ ಮನಸ್ಸುಳ್ಳವಳಾದ ಆ ಮನಸ್ವಿನೀ ನಾಥವತೀ ಸತೀ ಕೃಷ್ಣೆಯು ತನ್ನ ಹಾಸಿಗೆಯನ್ನು ಬಿಟ್ಟು ಮೇಲೆದ್ದು ರಕ್ಷಣೆಯನ್ನರಸಿ ಓಡಿದಳು.
04016006a ಸಾ ವೈ ಮಹಾನಸೇ ಪ್ರಾಪ್ಯ ಭೀಮಸೇನಂ ಶುಚಿಸ್ಮಿತಾ।
04016006c ಸರ್ವಶ್ವೇತೇವ ಮಾಹೇಯೀ ವನೇ ಜಾತಾ ತ್ರಿಹಾಯನೀ।
04016006e ಉಪಾತಿಷ್ಠತ ಪಾಂಚಾಲೀ ವಾಶಿತೇವ ಮಹಾಗಜಂ।।
ವನದಲ್ಲಿ ಹುಟ್ಟಿದ ಮೂರು ವರ್ಷ ವಯಸ್ಸಿನ ಸರ್ವಶ್ವೇತವರ್ಣದ ಹಸುವಿನಂತಿದ್ದ ಆ ಬೆಳ್ನಗೆಯ ಪಾಂಚಾಲಿಯು ಹೆಣ್ಣಾನೆಯು ಮಹಾಗಜವನ್ನು ಸಮೀಪಿಸುವಂತೆ ಅಡುಗೆಯ ಮನೆಯಲ್ಲಿದ್ದ ಭೀಮಸೇನನ ಹತ್ತಿರ ಬಂದಳು.
04016007a ಸಾ ಲತೇವ ಮಹಾಶಾಲಂ ಫುಲ್ಲಂ ಗೋಮತಿತೀರಜಂ।
04016007c ಬಾಹುಭ್ಯಾಂ ಪರಿರಭ್ಯೈನಂ ಪ್ರಾಬೋಧಯದನಿಂದಿತಾ।
04016007e ಸಿಂಹಂ ಸುಪ್ತಂ ವನೇ ದುರ್ಗೇ ಮೃಗರಾಜವಧೂರಿವ।।
ಗೋಮತೀ ತೀರದಲ್ಲಿ ಹೂಬಿಟ್ಟು ನಿಂತ ಮಹಾಶಾಲವನ್ನು ಲತೆಯು ಅಪ್ಪಿಕೊಳ್ಳುವಂತೆ ಅವನನ್ನು ಆ ಸುಂದರಿಯು ಅಪ್ಪಿಕೊಂಡು, ದುರ್ಗಮ ವನದಲ್ಲಿ ಹೆಣ್ಣುಸಿಂಹವೊಂದು ಮಲಗಿದ ಸಿಂಹವನ್ನು ಎಚ್ಚರಿಸುವಂತೆ ಎಚ್ಚರಿಸಿದಳು.
04016008a ವೀಣೇವ ಮಧುರಾಭಾಷಾ ಗಾಂಧಾರಂ ಸಾಧು ಮೂರ್ಚ್ಛಿತಾ।
04016008c ಅಭ್ಯಭಾಷತ ಪಾಂಚಾಲೀ ಭೀಮಸೇನಮನಿಂದಿತಾ।।
ಆ ಅನಿಂದಿತೆ ಪಾಂಚಾಲಿಯು ಒಳ್ಳೆಯ ಮೂರ್ಛನೆಯುಳ್ಳ ವೀಣೆಯ ಗಾಂಧಾರಸ್ವರದಂತೆ ಸವಿಯಾದ ಧ್ವನಿಯಿಂದ ಭೀಮಸೇನನನ್ನು ಮಾತನಾಡಿಸಿದಳು.
04016009a ಉತ್ತಿಷ್ಠೋತ್ತಿಷ್ಠ ಕಿಂ ಶೇಷೇ ಭೀಮಸೇನ ಯಥಾ ಮೃತಃ।
04016009c ನಾಮೃತಸ್ಯ ಹಿ ಪಾಪೀಯಾನ್ಭಾರ್ಯಾಮಾಲಭ್ಯ ಜೀವತಿ।।
“ಏಳು! ಎದ್ದೇಳು! ಸತ್ತವನಂತೆ ಏಕೆ ಮಲಗಿರುವೆ ಭೀಮಸೇನ? ಬದುಕಿರುವವನ ಹೆಂಡತಿಯನ್ನು ಅಪಮಾನಿಸಿದ ಪಾಪಿಯು ಜೀವಿಸಿರಬಾರದು.
04016010a ತಸ್ಮಿಂ ಜೀವತಿ ಪಾಪಿಷ್ಠೇ ಸೇನಾವಾಹೇ ಮಮ ದ್ವಿಷಿ।
04016010c ತತ್ಕರ್ಮ ಕೃತವತ್ಯದ್ಯ ಕಥಂ ನಿದ್ರಾಂ ನಿಷೇವಸೇ।।
ನನ್ನ ವೈರಿ ಆ ಪಾಪಿಷ್ಟ ಸೇನಾಪತಿಯು ಈ ಕೆಲಸವನ್ನು ಮಾಡಿಯೂ ಜೀವಿಸಿರುವಾಗ ನೀನು ಇಂದು ಹೇಗೆ ತಾನೇ ನಿದ್ದೆ ಮಾಡುತ್ತಿರುವೆ?”
04016011a ಸ ಸಂಪ್ರಹಾಯ ಶಯನಂ ರಾಜಪುತ್ರ್ಯಾ ಪ್ರಬೋಧಿತಃ।
04016011c ಉಪಾತಿಷ್ಠತ ಮೇಘಾಭಃ ಪರ್ಯಂಕೇ ಸೋಪಸಂಗ್ರಹೇ।।
ರಾಜಪುತ್ರಿಯಿಂದ ಎಬ್ಬಿಸಲ್ಪಟ್ಟ ಮೇಘಸಮಾನನಾದ ಅವನು ಸುಪ್ಪತ್ತಿಗೆಯ ಪರ್ಯಂಕದ ಮೇಲೆ ನಿದ್ದೆಯಿಂದ ಎದ್ದು ಕುಳಿತನು.
04016012a ಅಥಾಬ್ರವೀದ್ರಾಜಪುತ್ರೀಂ ಕೌರವ್ಯೋ ಮಹಿಷೀಂ ಪ್ರಿಯಾಂ।
04016012c ಕೇನಾಸ್ಯರ್ಥೇನ ಸಂಪ್ರಾಪ್ತಾ ತ್ವರಿತೇವ ಮಮಾಂತಿಕಂ।।
ನಂತರ ಆ ಕೌರವ್ಯನು ರಾಜಪುತ್ರಿ ಪ್ರಿಯ ರಾಣಿಗೆ ಕೇಳಿದನು: “ಹೀಗೆ ಅವಸರದಲ್ಲಿ ನನ್ನ ಬಳಿ ಬರಲು ಕಾರಣವೇನು?
04016013a ನ ತೇ ಪ್ರಕೃತಿಮಾನ್ವರ್ಣಃ ಕೃಶಾ ಪಾಂಡುಶ್ಚ ಲಕ್ಷ್ಯಸೇ।
04016013c ಆಚಕ್ಷ್ವ ಪರಿಶೇಷೇಣ ಸರ್ವಂ ವಿದ್ಯಾಮಹಂ ಯಥಾ।।
ನಿನ್ನ ಬಣ್ಣವು ಸ್ವಾಭಾವಿಕವಾಗಿಲ್ಲ. ಕೃಶಳಾಗಿಯೂ ಬಿಳಿಚಿಕೊಂಡವಳಾಗಿಯೂ ಕಾಣುತ್ತಿರುವೆ. ಎಲ್ಲವನ್ನು ವಿವರವಾಗಿ ತಿಳಿಸಿ ಹೇಳು.
04016014a ಸುಖಂ ವಾ ಯದಿ ವಾ ದುಃಖಂ ದ್ವೇಷ್ಯಂ ವಾ ಯದಿ ವಾ ಪ್ರಿಯಂ।
04016014c ಯಥಾವತ್ಸರ್ವಮಾಚಕ್ಷ್ವ ಶ್ರುತ್ವಾ ಜ್ಞಾಸ್ಯಾಮಿ ಯತ್ಪರಂ।।
ಸುಖಕರವಾಗಿರಲಿ ದುಃಖಕರವಾಗಿರಲಿ, ಪ್ರೀತಿಯಿಂದ ಮಾಡಿದ್ದಾಗಿರಲಿ ಅಥವಾ ದ್ವೇಷದಿಂದ ಮಾಡಿದ್ದಾಗಿರಲಿ ಯಥಾವತ್ತಾಗಿ ಎಲ್ಲವನ್ನೂ ನನಗೆ ಹೇಳು. ಕೇಳಿದ ನಂತರ ಮುಂದಿನದ್ದರ ಕುರಿತು ಯೋಚಿಸುತ್ತೇನೆ.
04016015a ಅಹಮೇವ ಹಿ ತೇ ಕೃಷ್ಣೇ ವಿಶ್ವಾಸ್ಯಃ ಸರ್ವಕರ್ಮಸು।
04016015c ಅಹಮಾಪತ್ಸು ಚಾಪಿ ತ್ವಾಂ ಮೋಕ್ಷಯಾಮಿ ಪುನಃ ಪುನಃ।।
ಕೃಷ್ಣೇ! ನಾನೇ ನಿನ್ನ ಎಲ್ಲ ಕಾರ್ಯಗಳಲ್ಲಿ ವಿಶ್ವಾಸದಲ್ಲಿರುವವನು. ನಾನಾದರೋ ಪುನಃ ಪುನಃ ನಿನ್ನನ್ನು ಆಪತ್ತುಗಳಿಂದ ಪಾರುಮಾಡುತ್ತೇನೆ.
04016016a ಶೀಘ್ರಮುಕ್ತ್ವಾ ಯಥಾಕಾಮಂ ಯತ್ತೇ ಕಾರ್ಯಂ ವಿವಕ್ಷಿತಂ।
04016016c ಗಚ್ಛ ವೈ ಶಯನಾಯೈವ ಪುರಾ ನಾನ್ಯೋಽವಬುಧ್ಯತೇ।।
ನೀನು ಯಾವ ಕೆಲಸದ ಕುರಿತು ಹೇಳಬೇಕೆಂದಿರುವೆಯೋ ಅದನ್ನು ಬೇಗನೇ ಹೇಳಿ ಇತರರು ಯಾರೂ ಏಳುವುದರ ಮೊದಲೇ ನಿನ್ನ ಮಲಗುವ ಕೋಣೆಗೆ ಹೋಗು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಭೀಮಸಂವಾದೇ ಷಷ್ಠದಶೋಽಧ್ಯಾಯಃ ।
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಭೀಮಸಂವಾದದಲ್ಲಿ ಹದಿನಾರನೆಯ ಅಧ್ಯಾಯವು.