015 ದ್ರೌಪದೀಪರಿಭವಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಕೀಚಕವಧ ಪರ್ವ

ಅಧ್ಯಾಯ 15

ಸಾರ

ಕೀಚಕನು ಕೈ ಹಿಡಿಯಲು ಅವಳು ಓಡಿ ಹೋಗುತ್ತಿದ್ದಾಗ ದ್ರೌಪದಿಯ ಕೂದಲನ್ನು ಎಳೆದು ಒದೆದು ವಿರಾಟನ ಆಸ್ಥಾನದಲ್ಲಿ ಕೆಡಹುವುದು (1-7). ಅಗೋಚರ ರಾಕ್ಷಸನಿಂದ ಹೊಡೆಯಲ್ಪಟ್ಟು ಕೀಚಕನು ಮೂರ್ಛಿತನಾಗಿ ಬೀಳುವುದು (8-9). ಸಿಟ್ಟಿಗೆದ್ದ ಭೀಮಸೇನನನ್ನು ಯುಧಿಷ್ಠಿರನು ತಡೆದುದು (10-12). ಕುಪಿತಳಾದ ದ್ರೌಪದಿಯು ಆಸ್ಥಾನದಲ್ಲಿ ವಿರಾಟನನ್ನುದ್ದೇಶಿಸಿ ರೋದಿಸುವುದು (13-26). ವಿರಾಟ, ಯುಧಿಷ್ಠಿರ ಮತ್ತು ಸಭಾಸದರು ಅವಳನ್ನು ಅರಮನೆಗೆ ಮರಳಲು ಹೇಳಿದುದು (27-36). ದ್ರೌಪದಿಯು ಸುದೇಷ್ಣೆಯಲ್ಲಿಗೆ ಮರಳಿ ಅವಳ ಗಂಡಂದಿರು ಕೀಚಕನನ್ನು ಅವಶ್ಯವಾಗಿ ಕೊಲ್ಲುವರೆಂದು ಹೇಳುವುದು (37-41).

04015001 ಕೀಚಕ ಉವಾಚ।
04015001a ಸ್ವಾಗತಂ ತೇ ಸುಕೇಶಾಂತೇ ಸುವ್ಯುಷ್ಟಾ ರಜನೀ ಮಮ।
04015001c ಸ್ವಾಮಿನೀ ತ್ವಮನುಪ್ರಾಪ್ತಾ ಪ್ರಕುರುಷ್ವ ಮಮ ಪ್ರಿಯಂ।।

ಕೀಚಕನು ಹೇಳಿದನು: “ಚೆಲುಗೂದಲಿನವಳೇ! ನಿನಗೆ ಸ್ವಾಗತ. ಇರುಳು ನನಗೆ ಸುಪ್ರಭಾತವನ್ನು ತಂದಿದೆ. ನನ್ನ ಒಡತಿಯಂತೆ ನೀನು ಬಂದಿರುವೆ. ನನ್ನನ್ನು ಸಂತೋಷಗೊಳಿಸು.

04015002a ಸುವರ್ಣಮಾಲಾಃ ಕಂಬೂಶ್ಚ ಕುಂಡಲೇ ಪರಿಹಾಟಕೇ।
04015002c ಆಹರಂತು ಚ ವಸ್ತ್ರಾಣಿ ಕೌಶಿಕಾನ್ಯಜಿನಾನಿ ಚ।।

ಚಿನ್ನದ ಸರಗಳನ್ನೂ, ಬಳೆಗಳನ್ನು, ಸುವರ್ಣಕುಂಡಲಗಳನ್ನೂ, ರೇಷ್ಮೆ ವಸ್ತ್ರಗಳನ್ನೂ, ಜಿಂಕೆಯ ಚರ್ಮಗಳನ್ನೂ ತರಿಸುತ್ತೇನೆ.

04015003a ಅಸ್ತಿ ಮೇ ಶಯನಂ ಶುಭ್ರಂ ತ್ವದರ್ಥಮುಪಕಲ್ಪಿತಂ।
04015003c ಏಹಿ ತತ್ರ ಮಯಾ ಸಾರ್ಧಂ ಪಿಬಸ್ವ ಮಧುಮಾಧವೀಂ।।

ನಿನಗಾಗಿ ನನ್ನ ಹಾಸಿಗೆ ಶುಭ್ರವಾಗಿ ಅಣಿಯಾಗಿದೆ. ಅಲ್ಲಿಗೆ ಬಾ. ನನ್ನೊಡನೆ ಮಾಧವೀ ಮಧುವನ್ನು ಕುಡಿ.”

04015004 ದ್ರೌಪದ್ಯುವಾಚ।
04015004a ಅಪ್ರೈಷೀದ್ರಾಜಪುತ್ರೀ ಮಾಂ ಸುರಾಹಾರೀಂ ತವಾಂತಿಕಂ।
04015004c ಪಾನಮಾನಯ ಮೇ ಕ್ಷಿಪ್ರಂ ಪಿಪಾಸಾ ಮೇತಿ ಚಾಬ್ರವೀತ್।।

ದ್ರೌಪದಿಯು ಹೇಳಿದಳು: “ರಾಜಪುತ್ರಿಯು ನನ್ನನ್ನು ನಿನ್ನ ಬಳಿ ಸುರೆಯನ್ನು ತರುವುದಕ್ಕಾಗಿ ಕಳುಹಿಸಿದ್ದಾಳೆ. ‘ನನಗೆ ಪಾನೀಯವನ್ನು ಬೇಗ ತಾ. ಬಾಯಾರಿಕೆಯಾಗಿದೆ!’ ಎಂದು ಹೇಳಿ ಕಳುಹಿಸಿದ್ದಾಳೆ.”

04015005 ಕೀಚಕ ಉವಾಚ।
04015005a ಅನ್ಯಾ ಭದ್ರೇ ನಯಿಷ್ಯಂತಿ ರಾಜಪುತ್ರ್ಯಾಃ ಪರಿಸ್ರುತಂ।

ಕೀಚಕನು ಹೇಳಿದನು: “ಭದ್ರೇ! ರಾಜಪುತ್ರಿಗೆ ಮದ್ಯವನ್ನು ಬೇರೆಯವರು ಒಯ್ಯುತ್ತಾರೆ.””

04015006 ವೈಶಂಪಾಯನ ಉವಾಚ।
04015006a ಇತ್ಯೇನಾಂ ದಕ್ಷಿಣೇ ಪಾಣೌ ಸೂತಪುತ್ರಃ ಪರಾಮೃಶತ್।
04015006c ಸಾ ಗೃಹೀತಾ ವಿಧುನ್ವಾನಾ ಭೂಮಾವಾಕ್ಷಿಪ್ಯ ಕೀಚಕಂ।।
04015006e ಸಭಾಂ ಶರಣಮಾಧಾವದ್ಯತ್ರ ರಾಜಾ ಯುಧಿಷ್ಠಿರಃ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಸೂತಪುತ್ರನು ಅವಳ ಬಲಗೈಯನ್ನು ಹಿಡಿದುಕೊಂಡನು. ಹಿಡಿತಕ್ಕೆ ಸಿಕ್ಕಿದ ಅವಳು ನಡುಗುತ್ತಾ ಕೀಚಕನನ್ನು ನೆಲಕ್ಕೆ ಕೆಡವಿ ರಾಜ ಯುಧಿಷ್ಠಿರನಿದ್ದ ಸಭೆಗೆ ರಕ್ಷಣೆಗಾಗಿ ಓಡಿದಳು.

04015007a ತಾಂ ಕೀಚಕಃ ಪ್ರಧಾವಂತೀಂ ಕೇಶಪಕ್ಷೇ ಪರಾಮೃಶತ್।
04015007c ಅಥೈನಾಂ ಪಶ್ಯತೋ ರಾಜ್ಞಃ ಪಾತಯಿತ್ವಾ ಪದಾವಧೀತ್।।

ಓಡುತ್ತಿದ್ದ ಅವಳ ಕೇಶವನ್ನು ಕೀಚಕನು ಹಿಡಿದುಕೊಂಡು ರಾಜನು ನೋಡುತ್ತಿದ್ದಂತೆಯೇ ಅವಳನ್ನು ಬೀಳಿಸಿ ಕಾಲಿನಿಂದ ಒದೆದನು.

04015008a ತತೋ ಯೋಽಸೌ ತದಾರ್ಕೇಣ ರಾಕ್ಷಸಃ ಸಂನಿಯೋಜಿತಃ।
04015008c ಸ ಕೀಚಕಮಪೋವಾಹ ವಾತವೇಗೇನ ಭಾರತ।।

ಭಾರತ! ಆಗ ಸೂರ್ಯನಿಂದ ನಿಯೋಜಿತನಾಗಿದ್ದ ರಾಕ್ಷಸನು ಭಿರುಗಾಳಿಯ ವೇಗದಿಂದ ಕೀಚಕನನ್ನು ತಳ್ಳಿದನು. v04015009a ಸ ಪಪಾತ ತತೋ ಭೂಮೌ ರಕ್ಷೋಬಲಸಮಾಹತಃ।

04015009c ವಿಘೂರ್ಣಮಾನೋ ನಿಶ್ಚೇಷ್ಟಶ್ಚಿನ್ನಮೂಲ ಇವ ದ್ರುಮಃ।।

ರಾಕ್ಷಸನ ಶಕ್ತಿಯುತ ಹೊಡೆತಕ್ಕೆ ಸಿಕ್ಕಿದ ಕೀಚಕನು ತಿರುಗುತ್ತಾ ಬೇರು ಕಡಿದ ಮರದಂತೆ ಪ್ರಜ್ಞೆತಪ್ಪಿ ನೆಲದ ಮೇಲೆ ಬಿದ್ದನು.

04015010a ತಾಂ ಚಾಸೀನೌ ದದೃಶತುರ್ಭೀಮಸೇನಯುಧಿಷ್ಠಿರೌ।
04015010c ಅಮೃಷ್ಯಮಾಣೌ ಕೃಷ್ಣಾಯಾಃ ಕೀಚಕೇನ ಪದಾ ವಧಂ।।

ಅಲ್ಲಿ ಕುಳಿತಿದ್ದ ಭೀಮಸೇನ-ಯುಧಿಷ್ಠಿರರಿಬ್ಬರೂ ಕೀಚಕನು ಕೃಷ್ಣೆಯನ್ನು ಕಾಲಿನಿಂದ ಒದೆದುದನ್ನು ನೋಡಿ ಕುಪಿತರಾದರು.

04015011a ತಸ್ಯ ಭೀಮೋ ವಧಪ್ರೇಪ್ಸುಃ ಕೀಚಕಸ್ಯ ದುರಾತ್ಮನಃ।
04015011c ದಂತೈರ್ದಂತಾಂಸ್ತದಾ ರೋಷಾನ್ನಿಷ್ಪಿಪೇಷ ಮಹಾಮನಾಃ।।

ಆ ಮಹಾಮನ ಭೀಮನು ಅಲ್ಲಿಯೇ ದುರಾತ್ಮ ಕೀಚಕನನ್ನು ಕೊಲ್ಲ ಬಯಸಿ ರೋಷದಿಂದ ಹಲ್ಲು ಕಡಿದನು.

04015012a ಅಥಾಂಗುಷ್ಠೇನಾವಮೃದ್ನಾದಂಗುಷ್ಠಂ ತಸ್ಯ ಧರ್ಮರಾಟ್।
04015012c ಪ್ರಬೋಧನಭಯಾದ್ರಾಜನ್ಭೀಮಸ್ಯ ಪ್ರತ್ಯಷೇಧಯತ್।।

ರಾಜನ್! ಆಗ ಧರ್ಮರಾಜನು ತಮ್ಮ ಕುರಿತು ತಿಳಿದುಬಿಡುತ್ತದೆಯೋ ಎನ್ನುವ ಭಯದಿಂದ ಅವನ ಅಂಗುಷ್ಠದಿಂದ ಭೀಮನ ಅಂಗುಷ್ಠವನ್ನು ಅದುಮಿ ತಡೆದನು.

04015013a ಸಾ ಸಭಾದ್ವಾರಮಾಸಾದ್ಯ ರುದತೀ ಮತ್ಸ್ಯಮಬ್ರವೀತ್।
04015013c ಅವೇಕ್ಷಮಾಣಾ ಸುಶ್ರೋಣೀ ಪತೀಂಸ್ತಾನ್ದೀನಚೇತಸಃ।।
04015014a ಆಕಾರಮಭಿರಕ್ಷಂತೀ ಪ್ರತಿಜ್ಞಾಂ ಧರ್ಮಸಂಹಿತಾಂ।
04015014c ದಹ್ಯಮಾನೇವ ರೌದ್ರೇಣ ಚಕ್ಷುಷಾ ದ್ರುಪದಾತ್ಮಜಾ।।

ಆ ಸುಂದರಿ ದ್ರೌಪದಿಯು ಅಳುತ್ತಾ, ದೀನಚೇತಸರಾದ ತನ್ನ ಆ ಪತಿಗಳನ್ನು ನೋಡುತ್ತಾ, ಮಾರುವೇಷವನ್ನೂ ಧರ್ಮಸಂಹಿತ ಪ್ರತಿಜ್ಞೆಯನ್ನೂ ಕಾಪಾಡಿಕೊಳ್ಳುತ್ತಾ, ಸಭಾದ್ವಾರವನ್ನು ಸೇರಿ ರೌದ್ರಾಕಾರದ ಕಣ್ಣುಗಳಿಂದ ಮತ್ಸ್ಯನಿಗೆ ಹೇಳಿದಳು.

04015015 ದ್ರೌಪದ್ಯುವಾಚ।
04015015a ಯೇಷಾಂ ವೈರೀ ನ ಸ್ವಪಿತಿ ಪದಾ ಭೂಮಿಮುಪಸ್ಪೃಶನ್।
04015015c ತೇಷಾಂ ಮಾಂ ಮಾನಿನೀಂ ಭಾರ್ಯಾಂ ಸೂತಪುತ್ರಃ ಪದಾವಧೀತ್।।

ದ್ರೌಪದಿಯು ಹೇಳಿದಳು: “ಭೂಮಿಯನ್ನು ಕಾಲಿನಿಂದ ಮೆಟ್ಟಿ ಯಾರ ವೈರಿಯು ನಿದ್ರಿಸಲಾರನೋ ಅವರ ಭಾರ್ಯೆಯಾದ ಮಾನಿನಿಯಾದ ನನ್ನನ್ನು ಸೂತಪುತ್ರನು ಒದೆದನಲ್ಲ!

04015016a ಯೇ ದದ್ಯುರ್ನ ಚ ಯಾಚೇಯುರ್ಬ್ರಹ್ಮಣ್ಯಾಃ ಸತ್ಯವಾದಿನಃ।
04015016c ತೇಷಾಂ ಮಾಂ ಮಾನಿನೀಂ ಭಾರ್ಯಾಂ ಸೂತಪುತ್ರಃ ಪದಾವಧೀತ್।।

ದಾನಿಗಳೂ, ಯಾಚಿಸದವರೂ, ಬ್ರಾಹ್ಮಣಪೂಜಕರೂ, ಸತ್ಯವಾದಿಗಳೂ ಆದವರ ಭಾರ್ಯೆಯಾದ ನನ್ನನ್ನು ಸೂತಪುತ್ರನು ಕಾಲಿನಿಂದ ಒದೆದನಲ್ಲ!

04015017a ಯೇಷಾಂ ದುಂದುಭಿನಿರ್ಘೋಷೋ ಜ್ಯಾಘೋಷಃ ಶ್ರೂಯತೇಽನಿಶಂ।
04015017c ತೇಷಾಂ ಮಾಂ ಮಾನಿನೀಂ ಭಾರ್ಯಾಂ ಸೂತಪುತ್ರಃ ಪದಾವಧೀತ್।।

ಯಾರ ದುಂದುಭಿಯ ನಿರ್ಘೋಷವೂ, ಬಿಲ್ಲಿನ ಹೆದೆಯ ಘೋಷವೂ ಸದಾ ಕೇಳಿಬರುತ್ತದೆಯೋ ಅವರ ಭಾರ್ಯೆಯಾದ ನನ್ನನ್ನು ಸೂತಪುತ್ರನು ಕಾಲಿನಿಂದ ಒದೆದನಲ್ಲ!

04015018a ಯೇ ತೇ ತೇಜಸ್ವಿನೋ ದಾಂತಾ ಬಲವಂತೋಽಭಿಮಾನಿನಃ।
04015018c ತೇಷಾಂ ಮಾಂ ಮಾನಿನೀಂ ಭಾರ್ಯಾಂ ಸೂತಪುತ್ರಃ ಪದಾವಧೀತ್।।

ತೇಜಸ್ವಿಗಳೂ ಉದಾರಿಗಳೂ, ಬಲಶಾಲಿಗಳೂ, ಅಭಿಮಾನಿಗಳೂ ಆದವರ ಭಾರ್ಯೆಯೂ ಮಾನಿನಿಯೂ ಆದ ನನ್ನನ್ನು ಸೂತಪುತ್ರನು ಕಾಲಿನಿಂದ ಒದೆದನಲ್ಲ!

04015019a ಸರ್ವಲೋಕಮಿಮಂ ಹನ್ಯುರ್ಧರ್ಮಪಾಶಸಿತಾಸ್ತು ಯೇ।
04015019c ತೇಷಾಂ ಮಾಂ ಮಾನಿನೀಂ ಭಾರ್ಯಾಂ ಸೂತಪುತ್ರಃ ಪದಾವಧೀತ್।।

ಯಾರು ಈ ಸಮಸ್ತ ಲೋಕವನ್ನೇ ನಾಶಮಾಡಬಲ್ಲರೋ, ಧರ್ಮಪಾಶಬದ್ಧರೋ, ಅವರ ಭಾರ್ಯೆಯೂ ಮಾನಿನಿಯೂ ಆದ ನನ್ನನ್ನು ಸೂತ ಪುತ್ರನು ಕಾಲಿನಿಂದ ಒದೆದನಲ್ಲ!

04015020a ಶರಣಂ ಯೇ ಪ್ರಪನ್ನಾನಾಂ ಭವಂತಿ ಶರಣಾರ್ಥಿನಾಂ।
04015020c ಚರಂತಿ ಲೋಕೇ ಪ್ರಚ್ಛನ್ನಾಃ ಕ್ವ ನು ತೇಽದ್ಯ ಮಹಾರಥಾಃ।।

ಮೊರೆಹೊಕ್ಕ ಶರಣಾರ್ಥಿಗಳಿಗೆ ಆಶ್ರಯವಾಗುವ, ಲೋಕದಲ್ಲಿ ಗುಪ್ತರಾಗಿ ಸಂಚರಿಸುವ ಆ ಮಹಾರಥರು ಇಂದು ಎಲ್ಲಿ?

04015021a ಕಥಂ ತೇ ಸೂತಪುತ್ರೇಣ ವಧ್ಯಮಾನಾಂ ಪ್ರಿಯಾಂ ಸತೀಂ।
04015021c ಮರ್ಷಯಂತಿ ಯಥಾ ಕ್ಲೀಬಾ ಬಲವಂತೋಽಮಿತೌಜಸಃ।।

ಪ್ರಿಯಪತ್ನಿಯನ್ನು ಸೂತಪುತ್ರನು ಒದೆಯುವುದನ್ನು ಬಲಶಾಲಿಗಳೂ, ಮಹಾತೇಜಸ್ವಿಗಳು ಆದ ಅವರು ನಪುಂಸಕರಂತೆ ಹೇಗೆ ತಾನೆ ಸಹಿಸಿಕೊಳ್ಳುತ್ತಾರೆ?

04015022a ಕ್ವ ನು ತೇಷಾಮಮರ್ಷಶ್ಚ ವೀರ್ಯಂ ತೇಜಶ್ಚ ವರ್ತತೇ।
04015022c ನ ಪರೀಪ್ಸಂತಿ ಯೇ ಭಾರ್ಯಾಂ ವಧ್ಯಮಾನಾಂ ದುರಾತ್ಮನಾ।।

ದುರಾತ್ಮನಿಂದ ಒದೆಯಿಸಿಕೊಳ್ಳುತ್ತಿರುವ ಭಾರ್ಯೆಯ ಬಳಿ ಧಾವಿಸದಿರುವ ಅವರ ಕೋಪ, ಪರಾಕ್ರಮ, ತೇಜಸ್ಸು ಎಲ್ಲಿ ಹೋಯಿತು?

04015023a ಮಯಾತ್ರ ಶಕ್ಯಂ ಕಿಂ ಕರ್ತುಂ ವಿರಾಟೇ ಧರ್ಮದೂಷಣಂ।
04015023c ಯಃ ಪಶ್ಯನ್ಮಾಂ ಮರ್ಷಯತಿ ವಧ್ಯಮಾನಾಮನಾಗಸಂ।।

ತಪ್ಪಿಲ್ಲದೇ ಒದೆಯಿಸಿಕೊಳ್ಳುತ್ತಿರುವ ನನ್ನನ್ನು ನೋಡಿಯೂ ಈ ಧರ್ಮದೂಷಣವನ್ನು ಸಹಿಸಿಕೊಂಡಿರುವ ವಿರಾಟನ ವಿಷಯದಲ್ಲಿ ನಾನೇನು ತಾನೇ ಮಾಡಬಲ್ಲೆ?

04015024a ನ ರಾಜನ್ರಾಜವತ್ಕಿಂ ಚಿತ್ಸಮಾಚರಸಿ ಕೀಚಕೇ।
04015024c ದಸ್ಯೂನಾಮಿವ ಧರ್ಮಸ್ತೇ ನ ಹಿ ಸಂಸದಿ ಶೋಭತೇ।।

ರಾಜನ್! ಕೀಚಕನ ವಿಷಯದಲ್ಲಿ ನೀನು ರಾಜನಂತೆ ಸ್ವಲ್ಪವೂ ವರ್ತಿಸುತ್ತಿಲ್ಲ. ದಸ್ಯುಗಳದಂತಿರುವ ನಿನ್ನ ಈ ಧರ್ಮವು ಸಭೆಯಲ್ಲಿ ಶೋಭಿಸುವುದಿಲ್ಲ.

04015025a ನ ಕೀಚಕಃ ಸ್ವಧರ್ಮಸ್ಥೋ ನ ಚ ಮತ್ಸ್ಯಃ ಕಥಂ ಚನ।
04015025c ಸಭಾಸದೋಽಪ್ಯಧರ್ಮಜ್ಞಾ ಯ ಇಮಂ ಪರ್ಯುಪಾಸತೇ।।

ಕೀಚಕನು ಸ್ವಧರ್ಮವನ್ನು ಅನುಸರಿಸುತ್ತಿಲ್ಲ. ಮತ್ಸ್ಯರಾಜನೂ ಯಾವಾಗಲೂ ಸ್ವಧರ್ಮವನ್ನು ಪಾಲಿಸಲಿಲ್ಲ. ಈತನನ್ನು ಸೇವಿಸುತ್ತಿರುವ ಸಭಾಸದರೂ ಧರ್ಮಜ್ಞರಲ್ಲ.

04015026a ನೋಪಾಲಭೇ ತ್ವಾಂ ನೃಪತೇ ವಿರಾಟ ಜನಸಂಸದಿ।
04015026c ನಾಹಮೇತೇನ ಯುಕ್ತಾ ವೈ ಹಂತುಂ ಮತ್ಸ್ಯ ತವಾಂತಿಕೇ।
04015026e ಸಭಾಸದಸ್ತು ಪಶ್ಯಂತು ಕೀಚಕಸ್ಯ ವ್ಯತಿಕ್ರಮಂ।।

ವಿರಾಟ ರಾಜ! ಜನರ ಸಭೆಯಲ್ಲಿ ನಿನ್ನನ್ನು ನಿಂದಿಸುವುದಿಲ್ಲ. ಮತ್ಸ್ಯ! ನಿನ್ನ ಆಶ್ರಯದಲ್ಲಿದ್ದ ನಾನು ಇವನ ಹಿಂಸೆಗೊಳಗಾಗುವುದು ಯುಕ್ತವಲ್ಲ. ಕೀಚಕನ ಮಿತಿಮೀರಿದ ನಡತೆಯನ್ನು ಸಭಾಸದರೂ ನೋಡಲಿ.”

04015027 ವಿರಾಟ ಉವಾಚ।
04015027a ಪರೋಕ್ಷಂ ನಾಭಿಜಾನಾಮಿ ವಿಗ್ರಹಂ ಯುವಯೋರಹಂ।
04015027c ಅರ್ಥತತ್ತ್ವಮವಿಜ್ಞಾಯ ಕಿಂ ನು ಸ್ಯಾತ್ಕುಶಲಂ ಮಮ।।

ವಿರಾಟನು ಹೇಳಿದನು: “ಪರೋಕ್ಷವಾಗಿ ನಡೆದ ನಿಮ್ಮಿಬ್ಬರ ಜಗಳವು ನನಗೆ ತಿಳಿಯದು. ವಸ್ತುಸ್ಥಿತಿಯನ್ನು ಸರಿಯಾಗಿ ತಿಳಿಯದೇ ನಾನು ಹೇಗೆ ತಾನೇ ತೀರ್ಮಾನ ನೀಡುವುದು ಉಚಿತ?””

04015028 ವೈಶಂಪಾಯನ ಉವಾಚ।
04015028a ತತಸ್ತು ಸಭ್ಯಾ ವಿಜ್ಞಾಯ ಕೃಷ್ಣಾಂ ಭೂಯೋಽಭ್ಯಪೂಜಯನ್।
04015028c ಸಾಧು ಸಾಧ್ವಿತಿ ಚಾಪ್ಯಾಹುಃ ಕೀಚಕಂ ಚ ವ್ಯಗರ್ಹಯನ್।।

ವೈಶಂಪಾಯನನು ಹೇಳಿದನು: “ಬಳಿಕ ಸಭಾಸದರು ಎಲ್ಲವನ್ನೂ ತಿಳಿದು “ಸಾಧು! ಸಾಧು!” ಎಂದು ಕೃಷ್ಣೆಯನ್ನು ಹೊಗಳಿದರು ಮತ್ತು ಕೀಚಕನನ್ನು ಹಳಿದರು.

04015029 ಸಭ್ಯಾ ಊಚುಃ।
04015029a ಯಸ್ಯೇಯಂ ಚಾರುಸರ್ವಾಂಗೀ ಭಾರ್ಯಾ ಸ್ಯಾದಾಯತೇಕ್ಷಣಾ।
04015029c ಪರೋ ಲಾಭಶ್ಚ ತಸ್ಯ ಸ್ಯಾನ್ನ ಸ ಶೋಚೇತ್ಕದಾ ಚನ।।

ಸಭಾಸದರು ಹೇಳಿದರು: “ಈ ಸುಂದರಿ ಸರ್ವಾಂಗೀ ಮತ್ತು ವಿಶಾಲ ಕಣ್ಣುಗಳುಳ್ಳವಳು ಯಾರ ಭಾರ್ಯೆಯೋ ಅವನಿಗೆ ಪರಮ ಲಾಭದೊರೆತು ಎಂದೂ ದುಃಖವನ್ನು ಪಡೆಯುವುದಿಲ್ಲ!””

04015030 ವೈಶಂಪಾಯನ ಉವಾಚ।
04015030a ಏವಂ ಸಂಪೂಜಯಂಸ್ತತ್ರ ಕೃಷ್ಣಾಂ ಪ್ರೇಕ್ಷ್ಯ ಸಭಾಸದಃ।
04015030c ಯುಧಿಷ್ಠಿರಸ್ಯ ಕೋಪಾತ್ತು ಲಲಾಟೇ ಸ್ವೇದ ಆಸಜತ್।।

ವೈಶಂಪಾಯನನು ಹೇಳಿದನು: “ಹೀಗೆ ಸಭಾಸದರು ಕೃಷ್ಣೆಯನ್ನು ಹೊಗಳುತ್ತಿರುವುದನ್ನು ನೋಡಿದ ಯುಧಿಷ್ಠಿರನ ಹಣೆಯಲ್ಲಿ ಕೋಪದ ಬೆವರು ಇಳಿಯಿತು.

04015031a ಅಥಾಬ್ರವೀದ್ರಾಜಪುತ್ರೀಂ ಕೌರವ್ಯೋ ಮಹಿಷೀಂ ಪ್ರಿಯಾಂ।
04015031c ಗಚ್ಛ ಸೈರಂಧ್ರಿ ಮಾತ್ರ ಸ್ಥಾಃ ಸುದೇಷ್ಣಾಯಾ ನಿವೇಶನಂ।।

ಆಗ ಆ ಕೌರವ್ಯನು ಪ್ರಿಯ ರಾಣಿ ರಾಜಪುತ್ರಿಗೆ ಹೇಳಿದನು: “ಸೈರಂಧ್ರಿ! ಇಲ್ಲಿ ನಿಲ್ಲಬೇಡ! ಸುದೇಷ್ಣೆಯ ಅರಮನೆಗೆ ಹೋಗು!

04015032a ಭರ್ತಾರಮನುರುಧ್ಯಂತ್ಯಃ ಕ್ಲಿಶ್ಯಂತೇ ವೀರಪತ್ನಯಃ।
04015032c ಶುಶ್ರೂಷಯಾ ಕ್ಲಿಶ್ಯಮಾನಾಃ ಪತಿಲೋಕಂ ಜಯಂತ್ಯುತ।।

ವೀರಪತ್ನಿಯರು ಪತಿಯನ್ನನುಸರಿಸಿ ಕಷ್ಟವನ್ನು ಸಹಿಸಿಕೊಳ್ಳುತ್ತಾರೆ. ಕಷ್ಟದಲ್ಲಿಯೂ ಅವನ ಒಳಿತನ್ನು ಬಯಸಿ ಪತಿಯ ಕಷ್ಟಗಳನ್ನು ಗೆಲ್ಲುತ್ತಾರೆ.

04015033a ಮನ್ಯೇ ನ ಕಾಲಂ ಕ್ರೋಧಸ್ಯ ಪಶ್ಯಂತಿ ಪತಯಸ್ತವ।
04015033c ತೇನ ತ್ವಾಂ ನಾಭಿಧಾವಂತಿ ಗಂಧರ್ವಾಃ ಸೂರ್ಯವರ್ಚಸಃ।।

ನಿನ್ನ ಆ ಸೂರ್ಯವರ್ಚಸ ಗಂಧರ್ವ ಗಂಡಂದಿರು ಇದು ಸಿಟ್ಟಿಗೇಳುವ ಸಮಯವಲ್ಲವೆಂದು ತಿಳಿದು ನಿನ್ನನ್ನು ರಕ್ಷಿಸಲು ಇಲ್ಲಿಗೆ ಬರಲಿಲ್ಲವೆಂದು ಭಾವಿಸುತ್ತೇನೆ.

04015034a ಅಕಾಲಜ್ಞಾಸಿ ಸೈರಂಧ್ರಿ ಶೈಲೂಷೀವ ವಿಧಾವಸಿ।
04015034c ವಿಘ್ನಂ ಕರೋಷಿ ಮತ್ಸ್ಯಾನಾಂ ದೀವ್ಯತಾಂ ರಾಜಸಂಸದಿ।
04015034e ಗಚ್ಛ ಸೈರಂಧ್ರಿ ಗಂಧರ್ವಾಃ ಕರಿಷ್ಯಂತಿ ತವ ಪ್ರಿಯಂ।।

ಸೈರಂಧ್ರಿ! ನಿನಗೆ ಸಮಯ ಜ್ಞಾನವಿಲ್ಲ! ನಟಿಯಂತೆ ಇಲ್ಲಿ ಓಡಿಬಂದು ರಾಜಸಂಸದಿಯಲ್ಲಿ ಮತ್ಸ್ಯರಾಜನ ಪಗಡೆಯಾಟಕ್ಕೆ ವಿಘ್ನವನ್ನು ತಂದೊಡ್ಡುತ್ತಿದ್ದೀಯೆ! ಹೋಗು ಸೈರಂಧ್ರಿ! ಗಂಧರ್ವರು ನಿನಗೆ ಒಳ್ಳೆಯದನ್ನು ಮಾಡುತ್ತಾರೆ.”

04015035 ದ್ರೌಪದ್ಯುವಾಚ।
04015035a ಅತೀವ ತೇಷಾಂ ಘೃಣಿನಾಮರ್ಥೇಽಹಂ ಧರ್ಮಚಾರಿಣೀ।
04015035c ತಸ್ಯ ತಸ್ಯೇಹ ತೇ ವಧ್ಯಾ ಯೇಷಾಂ ಜ್ಯೇಷ್ಠೋಽಕ್ಷದೇವಿತಾ।।

ದ್ರೌಪದಿಯು ಹೇಳಿದಳು: “ಅತೀವ ಕೃಪಾಳುಗಳಾದ ಅವರಿಗೋಸ್ಕರವಾಗಿಯೇ ನಾನು ಧರ್ಮಚಾರಿಣಿಯಾಗಿದ್ದೇನೆ. ಅವರಲ್ಲಿ ಹಿರಿಯನಾದವನ ಜೂಜಿನಲ್ಲಿರುವ ಪರಮಾಸಕ್ತಿಯ ಕಾರಣದಿಂದಲೇ ಅವರು ಕಷ್ಟಕ್ಕೊಳಗಾಗಿದ್ದಾರೆ.””

04015036 ವೈಶಂಪಾಯನ ಉವಾಚ।
04015036a ಇತ್ಯುಕ್ತ್ವಾ ಪ್ರಾದ್ರವತ್ಕೃಷ್ಣಾ ಸುದೇಷ್ಣಾಯಾ ನಿವೇಶನಂ।
04015036c ಕೇಶಾನ್ಮುಕ್ತ್ವಾ ತು ಸುಶ್ರೋಣೀ ಸಂರಂಭಾಲ್ಲೋಹಿತೇಕ್ಷಣಾ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಆ ಸುಶ್ರೋಣಿಯು ಮುಡಿಬಿಚ್ಚಿಕೊಂಡು ಕೋಪದಿಂದ ಕೆಂಪಾದ ಕಣ್ಣುಗಳುಳ್ಳವಳಾಗಿ ಸುದೇಷ್ಣೆಯ ಅರಮನೆಗೆ ಓಡಿದಳು.

04015037a ಶುಶುಭೇ ವದನಂ ತಸ್ಯಾ ರುದಂತ್ಯಾ ವಿರತಂ ತದಾ।
04015037c ಮೇಘಲೇಖಾವಿನಿರ್ಮುಕ್ತಂ ದಿವೀವ ಶಶಿಮಂಡಲಂ।।

ಒಂದೇಸಮನೆ ಅಳುತ್ತಿದ್ದ ಅವಳ ಮುಖವು ಆಕಾಶದಲ್ಲಿ ಮೋಡಗಳಿಂದ ಬಿಡುಗಡೆಹೊಂದಿದ ಚಂದ್ರಮಂಡಲದಂತೆ ಶೋಭಿಸುತ್ತಿತ್ತು.

04015038 ಸುದೇಷ್ಣೋವಾಚ।
04015038a ಕಸ್ತ್ವಾವಧೀದ್ವರಾರೋಹೇ ಕಸ್ಮಾದ್ರೋದಿಷಿ ಶೋಭನೇ।
04015038c ಕಸ್ಯಾದ್ಯ ನ ಸುಖಂ ಭದ್ರೇ ಕೇನ ತೇ ವಿಪ್ರಿಯಂ ಕೃತಂ।।

ಸುದೇಷ್ಣೆಯು ಹೇಳಿದಳು: “ವರಾರೋಹೇ! ಯಾರು ನಿನ್ನನ್ನು ಹೊಡೆದರು? ಏತಕ್ಕೆ ಅಳುತ್ತಿರುವೆ ಶೋಭನೇ? ಭದ್ರೇ! ಯಾರಿಂದ ನಿನಗೆ ಈ ದುಃಖವು ಪ್ರಾಪ್ತವಾಯಿತು? ಯಾರಿಂದ ನಿನಗೆ ಈ ಅಪ್ರಿಯವಾದುದು ನಡೆಯಿತು?”

04015039 ದ್ರೌಪದ್ಯುವಾಚ।
04015039a ಕೀಚಕೋ ಮಾವಧೀತ್ತತ್ರ ಸುರಾಹಾರೀಂ ಗತಾಂ ತವ।
04015039c ಸಭಾಯಾಂ ಪಶ್ಯತೋ ರಾಜ್ಞೋ ಯಥೈವ ವಿಜನೇ ತಥಾ।।

ದ್ರೌಪದಿಯು ಹೇಳಿದಳು: “ನಿನಗೆ ಸುರೆಯನ್ನು ತರಲು ಹೋದಾಗ ಅಲ್ಲಿ ನನ್ನನ್ನು ಕೀಚಕನು ಸಭೆಯಲ್ಲಿ ರಾಜನು ನೋಡುತ್ತಿದ್ದಂತೆಯೇ ಯಾರೂ ಇಲ್ಲದೆಡೆಯಲ್ಲಿ ಹೇಗೆ ಒದೆಯುತ್ತಾರೋ ಹಾಗೆ ಒದೆದನು.”

04015040 ಸುದೇಷ್ಣೋವಾಚ।
04015040a ಘಾತಯಾಮಿ ಸುಕೇಶಾಂತೇ ಕೀಚಕಂ ಯದಿ ಮನ್ಯಸೇ।
04015040c ಯೋಽಸೌ ತ್ವಾಂ ಕಾಮಸಮ್ಮತ್ತೋ ದುರ್ಲಭಾಮಭಿಮನ್ಯತೇ।।

ಸುದೇಷ್ಣೆಯು ಹೇಳಿದಳು: “ಸುಂದರ ಕೂದಲಿನವಳೇ! ನೀನು ಇಷ್ಟಪಟ್ಟರೆ ಕೀಚಕನನ್ನು ಕೊಲ್ಲಿಸುತ್ತೇನೆ. ಕಾಮದಿಂದ ಹುಚ್ಚನಾದ ನಿನ್ನನ್ನು ಪೀಡಿಸುತ್ತಿದ್ದಾನೆ.”

04015041 ದ್ರೌಪದ್ಯುವಾಚ।
04015041a ಅನ್ಯೇ ವೈ ತಂ ವಧಿಷ್ಯಂತಿ ಯೇಷಾಮಾಗಃ ಕರೋತಿ ಸಃ।
04015041c ಮನ್ಯೇ ಚಾದ್ಯೈವ ಸುವ್ಯಕ್ತಂ ಪರಲೋಕಂ ಗಮಿಷ್ಯತಿ।।

ದ್ರೌಪದಿಯು ಹೇಳಿದಳು: “ಯಾರಿಗೆ ಅವನು ಅಪರಾದವನ್ನೆಸಗಿದ್ದಾನೆಯೋ ಅವರೇ ಅವನನ್ನು ವಧಿಸುತ್ತಾರೆ. ಇಂದೇ ಅವನು ಪರಲೋಕಕ್ಕೆ ಹೋಗುತ್ತಾನೆ ಎನ್ನುವುದು ಸ್ಪಷ್ಟವೆಂದು ಭಾವಿಸುತ್ತೇನೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಪರಿಭವೇ ಪಂಚದಶೋಽಧ್ಯಾಯಃ ।
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಪರಿಭವದಲ್ಲಿ ಹದಿನೈದನೆಯ ಅಧ್ಯಾಯವು.