014 ದ್ರೌಪದೀಸುರಾಹರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಕೀಚಕವಧ ಪರ್ವ

ಅಧ್ಯಾಯ 14

ಸಾರ

ದ್ರೌಪದಿಯು ಹೋಗುವುದಿಲ್ಲವೆಂದು ಹೇಳಿದರೂ ಒತ್ತಾಯಿಸಿ ಸುದೇಷ್ಣೆಯು ಅವಳನ್ನು ಪಾನೀಯವನ್ನು ತರಲು ಅವಳಿಗೇ ಸಿದ್ಧನಾಗಿ ಕಾದು ಕುಳಿತಿದ್ದ ಕೀಚಕನಲ್ಲಿಗೆ ಕಳುಹಿಸುವುದು (1-17). ದೈವದ ಶರಣು ಹೊಕ್ಕು ಸೂರ್ಯನನ್ನು ಪ್ರಾರ್ಥಿಸಿದ ದ್ರೌಪದಿಗೆ ಅವನು ಅವಳ ರಕ್ಷಣೆಗೆಂದು ಅಗೋಚರ ರಾಕ್ಷಸನೋರ್ವನನ್ನು ನೇಮಿಸುವುದು (18-21).

04014001 ವೈಶಂಪಾಯನ ಉವಾಚ।
04014001a ಪ್ರತ್ಯಾಖ್ಯಾತೋ ರಾಜಪುತ್ರ್ಯಾ ಸುದೇಷ್ಣಾಂ ಕೀಚಕೋಽಬ್ರವೀತ್।
04014001c ಅಮರ್ಯಾದೇನ ಕಾಮೇನ ಘೋರೇಣಾಭಿಪರಿಪ್ಲುತಃ।।

ವೈಶಂಪಾಯನನು ಹೇಳಿದನು: “ರಾಜಪುತ್ರಿ ದ್ರೌಪದಿಯಿಂದ ಈ ರೀತಿಯ ಉತ್ತರವನ್ನು ಪಡೆದ ಕೀಚಕನು ಮಿತಿಯಿಲ್ಲದ ಘೋರ ಕಾಮದಿಂದ ತುಂಬಿದವನಾಗಿ ಸುದೇಷ್ಣೆಗೆ ಹೇಳಿದನು:

04014002a ಯಥಾ ಕೈಕೇಯಿ ಸೈರಂಧ್ರ್ಯಾ ಸಮೇಯಾಂ ತದ್ವಿಧೀಯತಾಂ।
04014002c ತಾಂ ಸುದೇಷ್ಣೇ ಪರೀಪ್ಸಸ್ವ ಮಾಹಂ ಪ್ರಾಣಾನ್ಪ್ರಹಾಸಿಷಂ।।

“ಕೈಕೇಯೀ! ಸುದೇಷ್ಣೇ! ನನ್ನ ಪ್ರಾಣವು ಹೋಗಬಾರದು ಎನ್ನುವುದಾದರೆ ನಾನು ಸೈರಂಧ್ರಿಯನ್ನು ಸೇರುವಂತೆ ಮಾಡು. ಅವಳು ನನ್ನನ್ನು ಬಯಸುವಂತೆ ಮಾಡು.”

04014003a ತಸ್ಯ ತಾಂ ಬಹುಶಃ ಶ್ರುತ್ವಾ ವಾಚಂ ವಿಲಪತಸ್ತದಾ।
04014003c ವಿರಾಟಮಹಿಷೀ ದೇವೀ ಕೃಪಾಂ ಚಕ್ರೇ ಮನಸ್ವಿನೀ।।

ಅವನ ಆ ಅತಿಯಾದ ರಗಳೆಯ ಮಾತುಗಳನ್ನು ಕೇಳಿ, ಮನಸ್ವಿನೀ ವಿರಾಟಮಹಿಷಿ ದೇವಿಯು ಅವನ ಮೇಲೆ ಕೃಪೆದೋರಿದಳು.

04014004a ಸ್ವಮರ್ಥಮಭಿಸಂಧಾಯ ತಸ್ಯಾರ್ಥಮನುಚಿಂತ್ಯ ಚ।
04014004c ಉದ್ವೇಗಂ ಚೈವ ಕೃಷ್ಣಾಯಾಃ ಸುದೇಷ್ಣಾ ಸೂತಮಬ್ರವೀತ್।।

ತನ್ನ ಹಿತವನ್ನೂ, ಅವನ ಉದ್ದೇಶವನ್ನೂ ಮತ್ತು ಕೃಷ್ಣೆಯ ಉದ್ವೇಗವನ್ನೂ ಆಲೋಚಿಸಿ ಸುದೇಷ್ಣೆಯು ಸೂತನಿಗೆ ಹೇಳಿದಳು:

04014005a ಪರ್ವಿಣೀಂ ತ್ವಂ ಸಮುದ್ದಿಷ್ಯ ಸುರಾಮನ್ನಂ ಚ ಕಾರಯ।
04014005c ತತ್ರೈನಾಂ ಪ್ರೇಷಯಿಷ್ಯಾಮಿ ಸುರಾಹಾರೀಂ ತವಾಂತಿಕಂ।।

“ಹಬ್ಬದ ದಿನದಂದು ನೀನು ಮದ್ಯವನ್ನೂ ಊಟವನ್ನೂ ಸಿದ್ಧಗೊಳಿಸು. ಆಗ ಮದ್ಯವನ್ನು ತರಲು ಅವಳನ್ನು ನಿನ್ನ ಬಳಿ ಕಳುಹಿಸುತ್ತೇನೆ.

04014006a ತತ್ರ ಸಂಪ್ರೇಷಿತಾಮೇನಾಂ ವಿಜನೇ ನಿರವಗ್ರಹಾಂ।
04014006c ಸಾಂತ್ವಯೇಥಾ ಯಥಾಕಾಮಂ ಸಾಂತ್ವ್ಯಮಾನಾ ರಮೇದ್ಯದಿ।।

ಅಲ್ಲಿಗೆ ಕಳುಹಲಾಗುವ ಅವಳನ್ನು ಏಕಾಂತದಲ್ಲಿ ಯಾವ ಅಡತಡೆಯೂ ಇಲ್ಲದೇ ಮನಬಂದಂತೆ ಪ್ರಲೋಭನೆಗೊಳಿಸು. ಸಾಂತ್ವನಗೊಂಡು ಅವಳು ನಿನಗೆ ಒಲಿಯಬಹುದು.”

04014007a ಕೀಚಕಸ್ತು ಗೃಹಂ ಗತ್ವಾ ಭಗಿನ್ಯಾ ವಚನಾತ್ತದಾ।
04014007c ಸುರಾಮಾಹಾರಯಾಮಾಸ ರಾಜಾರ್ಹಾಂ ಸುಪರಿಸ್ರುತಾಂ।।

ಅಕ್ಕನ ಮಾತಿನಂತೆ ಕೀಚಕನಾದರೋ ಮನೆಗೆ ತೆರಳಿ ರಾಜಯೋಗ್ಯವಾದ ಚೆನ್ನಾಗಿ ಸೋಸಿದ ಮದ್ಯವನ್ನು ತರಿಸಿದನು.

04014008a ಆಜೌರಭ್ರಂ ಚ ಸುಭೃಶಂ ಬಹೂಂಶ್ಚೋಚ್ಚಾವಚಾನ್ಮೃಗಾನ್।
04014008c ಕಾರಯಾಮಾಸ ಕುಶಲೈರನ್ನಪಾನಂ ಸುಶೋಭನಂ।।

ಆಡುಕುರಿಗಳ ಮತ್ತು ಬಗೆಬಗೆಯ ಪ್ರಾಣಿಗಳ ಮಾಂಸದ ಅಡುಗೆಯನ್ನು ಅನ್ನಪಾನಗಳನ್ನು ತಜ್ಞರಿಂದ ಚೆನ್ನಾಗಿ ಅಡುಗೆಮಾಡಿಸಿದನು.

04014009a ತಸ್ಮಿನ್ ಕೃತೇ ತದಾ ದೇವೀ ಕೀಚಕೇನೋಪಮಂತ್ರಿತಾ।
04014009c ಸುದೇಷ್ಣಾ ಪ್ರೇಷಯಾಮಾಸ ಸೈರಂಧ್ರೀಂ ಕೀಚಕಾಲಯಂ।।

ಅದಾದ ನಂತರ ಕೀಚಕನು ಕೇಳಿಕೊಂಡಿದ್ದಂತೆ ದೇವಿ ಸುದೇಷ್ಣೆಯು ಸೈರಂಧ್ರಿಯನ್ನು ಕೀಚಕನ ಮನೆಗೆ ಕಳುಹಿಸಿದಳು.

04014010 ಸುದೇಷ್ಣೋವಾಚ।
04014010a ಉತ್ತಿಷ್ಠ ಗಚ್ಛ ಸೈರಂಧ್ರಿ ಕೀಚಕಸ್ಯ ನಿವೇಶನಂ।
04014010c ಪಾನಮಾನಯ ಕಲ್ಯಾಣಿ ಪಿಪಾಸಾ ಮಾಂ ಪ್ರಬಾಧತೇ।।

ಸುದೇಷ್ಣೆಯು ಹೇಳಿದಳು: “ಏಳು ಸೈರಂಧ್ರಿ! ಕೀಚಕನ ಮನೆಗೆ ಹೋಗು. ಕಲ್ಯಾಣಿ! ಪಾನೀಯವನ್ನು ತೆಗೆದುಕೊಂಡು ಬಾ. ಬಾಯಾರಿಕೆಯು ನನ್ನನ್ನು ಕಾಡುತ್ತಿದೆ.”

04014011 ದ್ರೌಪದ್ಯುವಾಚ।
04014011a ನ ಗಚ್ಛೇಯಮಹಂ ತಸ್ಯ ರಾಜಪುತ್ರಿ ನಿವೇಶನಂ।
04014011c ತ್ವಮೇವ ರಾಜ್ಞಿ ಜಾನಾಸಿ ಯಥಾ ಸ ನಿರಪತ್ರಪಃ।।

ದ್ರೌಪದಿಯು ಹೇಳಿದಳು: “ರಾಜಪುತ್ರಿ! ನಾನು ಅವನ ಮನೆಗೆ ಹೋಗಲಾರೆ. ರಾಣಿ! ಅವನು ಎಂತಹ ನಿರ್ಲಜ್ಜನೆಂದು ನಿನಗೇ ಗೊತ್ತು.

04014012a ನ ಚಾಹಮನವದ್ಯಾಂಗಿ ತವ ವೇಶ್ಮನಿ ಭಾಮಿನಿ।
04014012c ಕಾಮವೃತ್ತಾ ಭವಿಷ್ಯಾಮಿ ಪತೀನಾಂ ವ್ಯಭಿಚಾರಿಣೀ।।

ಭಾಮಿನೀ! ಅನವದ್ಯಾಂಗಿ! ನಿನ್ನ ಮನೆಯಲ್ಲಿ ಕಾಮಚಾರಣಿಯೂ ಪತಿಗಳಿಗೆ ವ್ಯಭಿಚಾರಿಣಿಯೂ ಆಗುವುದಿಲ್ಲ.

04014013a ತ್ವಂ ಚೈವ ದೇವಿ ಜಾನಾಸಿ ಯಥಾ ಸ ಸಮಯಃ ಕೃತಃ।
04014013c ಪ್ರವಿಶಂತ್ಯಾ ಮಯಾ ಪೂರ್ವಂ ತವ ವೇಶ್ಮನಿ ಭಾಮಿನಿ।।

ದೇವಿ! ಭಾಮಿನಿ! ಹಿಂದೆ ನಾನು ನಿನ್ನ ಮನೆಯನ್ನು ಪ್ರವೇಶಿಸುವಾಗ ಮಾಡಿಕೊಂಡ ಒಪ್ಪಂದವು ನಿನಗೆ ತಿಳಿದೇ ಇದೆ.

04014014a ಕೀಚಕಶ್ಚ ಸುಕೇಶಾಂತೇ ಮೂಢೋ ಮದನದರ್ಪಿತಃ।
04014014c ಸೋಽವಮಂಸ್ಯತಿ ಮಾಂ ದೃಷ್ಟ್ವಾ ನ ಯಾಸ್ಯೇ ತತ್ರ ಶೋಭನೇ।।

ಸುಂದರ ಕೂದಲಿನವಳೇ! ಮೂಢ ಕೀಚಕನಾದರೋ ಮದನದರ್ಪಿತ. ಅವನು ನನ್ನನ್ನು ಅಪಮಾನಗೊಳಿಸುತ್ತಾನೆ. ಶೋಭನೇ! ನಾನು ಅಲ್ಲಿಗೆ ಹೋಗುವುದಿಲ್ಲ.

04014015a ಸಂತಿ ಬಹ್ವ್ಯಸ್ತವ ಪ್ರೇಷ್ಯಾ ರಾಜಪುತ್ರಿ ವಶಾನುಗಾಃ।
04014015c ಅನ್ಯಾಂ ಪ್ರೇಷಯ ಭದ್ರಂ ತೇ ಸ ಹಿ ಮಾಮವಮಂಸ್ಯತೇ।।

ರಾಜಪುತ್ರಿ! ನಿನಗೆ ಬಹಳ ಮಂದಿ ದಾಸಿಯರಿದ್ದಾರೆ. ಬೇರೆ ಯಾರನ್ನಾದರೂ ಕಳುಹಿಸು. ನಿನಗೆ ಒಳಿತಾಗಲಿ! ಅವನು ನನ್ನನ್ನು ಅಪಮಾನಗೊಳಿಸುತ್ತಾನೆ.”

04014016 ಸುದೇಷ್ಣೋವಾಚ।
04014016a ನೈವ ತ್ವಾಂ ಜಾತು ಹಿಂಸ್ಯಾತ್ಸ ಇತಃ ಸಂಪ್ರೇಷಿತಾಂ ಮಯಾ।

ಸುದೇಷ್ಣೆಯು ಹೇಳಿದಳು: “ಇಲ್ಲಿಂದ ನಾನು ಕಳುಹಿಸುತ್ತಿರುವ ನಿನ್ನನ್ನು ಅವನು ಹಿಂಸಿಸುವುದೇ ಇಲ್ಲ.””

04014017 ವೈಶಂಪಾಯನ ಉವಾಚ।
04014017a ಇತ್ಯಸ್ಯಾಃ ಪ್ರದದೌ ಕಾಂಸ್ಯಂ ಸಪಿಧಾನಂ ಹಿರಣ್ಮಯಂ।
04014017c ಸಾ ಶಂಕಮಾನಾ ರುದತೀ ದೈವಂ ಶರಣಮೀಯುಷೀ।।
04014017e ಪ್ರಾತಿಷ್ಠತ ಸುರಾಹಾರೀ ಕೀಚಕಸ್ಯ ನಿವೇಶನಂ।।

ವೈಶಂಪಾಯನನು ಹೇಳಿದನು: “ಇದನ್ನು ಹೇಳಿ ಅವಳಿಗೆ ಮುಚ್ಚಳವುಳ್ಳ ಚಿನ್ನದ ಪಾನಪಾತ್ರೆಯನ್ನು ಕೊಟ್ಟಳು. ಶಂಕಿತಳಾದ ಅವಳು ಅಳುತ್ತಾ ದೈವದ ಶರಣು ಹೊಕ್ಕು ಮದ್ಯವನ್ನು ತರುವುದಕ್ಕಾಗಿ ಕೀಚಕನ ಮನೆಗೆ ಹೊರಟಳು.

04014018 ದ್ರೌಪದ್ಯುವಾಚ।
04014018a ಯಥಾಹಮನ್ಯಂ ಪಾಂಡುಭ್ಯೋ ನಾಭಿಜಾನಾಮಿ ಕಂ ಚನ।
04014018c ತೇನ ಸತ್ಯೇನ ಮಾಂ ಪ್ರಾಪ್ತಾಂ ಕೀಚಕೋ ಮಾ ವಶೇ ಕೃಥಾಃ।।

ದ್ರೌಪದಿಯು ಹೇಳಿದಳು: “ಪಾಂಡವರನ್ನು ಹೊರತು ಇತರ ಯಾರನ್ನೂ ನಾನು ಅರಿತವಳಲ್ಲ ಎನ್ನುವುದು ಸತ್ಯವಾಗಿದ್ದರೆ ಅಲ್ಲಿಗೆ ಹೋಗುವ ನನ್ನನ್ನು ಕೀಚಕನು ವಶಪಡೆಸಿಕೊಳ್ಳದಿರಲಿ.””

04014019 ವೈಶಂಪಾಯನ ಉವಾಚ।
04014019a ಉಪಾತಿಷ್ಠತ ಸಾ ಸೂರ್ಯಂ ಮುಹೂರ್ತಮಬಲಾ ತತಃ।
04014019c ಸ ತಸ್ಯಾಸ್ತನುಮಧ್ಯಾಯಾಃ ಸರ್ವಂ ಸೂರ್ಯೋಽವಬುದ್ಧವಾನ್।।

ವೈಶಂಪಾಯನನು ಹೇಳಿದನು: “ಆಗ ಆ ಅಬಲೆಯು ಒಂದುಕ್ಷಣ ಸೂರ್ಯನನ್ನು ಧ್ಯಾನಿಸಿದಳು. ತಕ್ಷಣವೇ ಸೂರ್ಯನು ಆ ತನುಮಧ್ಯಳ ಕುರಿತು ಎಲ್ಲವನ್ನೂ ತಿಳಿದುಕೊಂಡನು.

04014020a ಅಂತರ್ಹಿತಂ ತತಸ್ತಸ್ಯಾ ರಕ್ಷೋ ರಕ್ಷಾರ್ಥಮಾದಿಶತ್।
04014020c ತಚ್ಚೈನಾಂ ನಾಜಹಾತ್ತತ್ರ ಸರ್ವಾವಸ್ಥಾಸ್ವನಿಂದಿತಾಂ।।

ಆಗ ಅವನು ಅವಳನ್ನು ಅಗೋಚರವಾಗಿ ರಕ್ಷಿಸುವಂತೆ ಒಬ್ಬ ರಾಕ್ಷಸನಿಗೆ ಆಜ್ಞಾಪಿಸಿದನು. ಆ ದೋಷರಹಿತೆಯನ್ನು ಅವನು ಎಲ್ಲ ಸಂದರ್ಭಗಳಲ್ಲಿ ಎಡೆಬಿಡದೆ ನೋಡಿಕೊಳ್ಳುತ್ತಿದ್ದನು.

04014021a ತಾಂ ಮೃಗೀಮಿವ ವಿತ್ರಸ್ತಾಂ ದೃಷ್ಟ್ವಾ ಕೃಷ್ಣಾಂ ಸಮೀಪಗಾಂ।
04014021c ಉದತಿಷ್ಠನ್ಮುದಾ ಸೂತೋ ನಾವಂ ಲಬ್ಧ್ವೇವ ಪಾರಗಃ।।

ಹೆದರಿದ ಹರಿಣಿಯಂತೆ ಸಮೀಪಕ್ಕೆ ಬಂದ ಕೃಷ್ಣೆಯನ್ನು ಕಂಡ ಆ ಸೂತನು ಸಮುದ್ರದ ದಡವನ್ನು ಸೇರಬಯಸುವವನಿಗೆ ನಾವೆ ಸಿಕ್ಕಿ ಸಂತೋಷಗೊಳ್ಳುವಂತೆ ಮೇಲೆದ್ದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಸುರಾಹರಣೇ ಚತುರ್ದಶೋಽಧ್ಯಾಯಃ ।
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಸುರಾಹರಣದಲ್ಲಿ ಹದಿನಾಲ್ಕನೆಯ ಅಧ್ಯಾಯವು.