ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಕೀಚಕವಧ ಪರ್ವ
ಅಧ್ಯಾಯ 13
ಸಾರ
ದ್ರೌಪದಿಯನ್ನು ನೋಡಿ ಮೋಹಿತನಾದ ಕೀಚಕನು ಅಕ್ಕ ಸುದೇಷ್ಣೆಯಲ್ಲಿ ಅವಳ್ಯಾರೆಂದು ವಿಚಾರಿಸುವುದು (1-9). ಕೀಚಕನು ದ್ರೌಪದಿಯನ್ನು ಪುಸಲಾಯಿಸಿದುದು (10-12) ಮತ್ತು ದ್ರೌಪದಿಯು ಅವನನ್ನು ಎಚ್ಚರಿಸುವುದು (13-21).
04013001 ವೈಶಂಪಾಯನ ಉವಾಚ।
04013001a ವಸಮಾನೇಷು ಪಾರ್ಥೇಷು ಮತ್ಸ್ಯಸ್ಯ ನಗರೇ ತದಾ।
04013001c ಮಹಾರಥೇಷು ಚನ್ನೇಷು ಮಾಸಾ ದಶ ಸಮತ್ಯಯುಃ।।
ವೈಶಂಪಾಯನನು ಹೇಳಿದನು: “ಮಹಾರಥಿ ಪಾರ್ಥರು ಮತ್ಯ್ಸನಗರದಲ್ಲಿ ವೇಷಮರೆಸಿ ವಾಸಿಸುತ್ತಿರಲು ಹತ್ತು ತಿಂಗಳುಗಳು ಕಳೆದವು.
04013002a ಯಾಜ್ಞಸೇನೀ ಸುದೇಷ್ಣಾಂ ತು ಶುಶ್ರೂಷಂತೀ ವಿಶಾಂ ಪತೇ।
04013002c ಅವಸತ್ಪರಿಚಾರಾರ್ಹಾ ಸುದುಃಖಂ ಜನಮೇಜಯ।।
ರಾಜ ಜನಮೇಜಯ! ಪರಿಚಾರ ಯೋಗ್ಯಳಾದ ಯಾಜ್ಞಸೇನಿ ದ್ರೌಪದಿಯು ಸುದೇಷ್ಣೆಯ ಶುಶ್ರೂಷೆ ಮಾಡುತ್ತಾ ಬಹುದುಃಖದಲ್ಲಿ ವಾಸಿಸುತ್ತಿದ್ದಳು.
04013003a ತಥಾ ಚರಂತೀಂ ಪಾಂಚಾಲೀಂ ಸುದೇಷ್ಣಾಯಾ ನಿವೇಶನೇ।
04013003c ಸೇನಾಪತಿರ್ವಿರಾಟಸ್ಯ ದದರ್ಶ ಜಲಜಾನನಾಂ।।
ಹೀಗೆ ಸುದೇಷ್ಣೆಯ ಅರಮನೆಯಲ್ಲಿ ಸುಳಿದಾಡುತ್ತಿದ್ದ ಕಮಲ ಮುಖಿ ಪಾಂಚಾಲಿಯನ್ನು ವಿರಾಟನ ಸೇನಾಪತಿಯು ನೋಡಿದನು.
04013004a ತಾಂ ದೃಷ್ಟ್ವಾ ದೇವಗರ್ಭಾಭಾಂ ಚರಂತೀಂ ದೇವತಾಮಿವ।
04013004c ಕೀಚಕಃ ಕಾಮಯಾಮಾಸ ಕಾಮಬಾಣಪ್ರಪೀಡಿತಃ।।
ದೇವಕನ್ಯೆಯಂತಿದ್ದ, ದೇವತೆಯಂತೆ ಸುಳಿದಾಡುತ್ತಿದ್ದ ಅವಳನ್ನು ನೋಡಿ ಕಾಮಬಾಣಪೀಡಿತನಾದ ಕೀಚಕನು ಅವಳನ್ನು ಕಾಮಿಸಿದನು.
04013005a ಸ ತು ಕಾಮಾಗ್ನಿಸಂತಪ್ತಃ ಸುದೇಷ್ಣಾಮಭಿಗಮ್ಯ ವೈ।
04013005c ಪ್ರಹಸನ್ನಿವ ಸೇನಾನೀರಿದಂ ವಚನಮಬ್ರವೀತ್।।
ಕಾಮಾಗ್ನಿಸಂತಪ್ತನಾದ ಆ ಸೇನಾನಿಯು ಸುದೇಷ್ಣೆಯ ಬಳಿ ಹೋಗಿ ನಗುತ್ತಾ ಹೇಳಿದನು:
04013006a ನೇಯಂ ಪುರಾ ಜಾತು ಮಯೇಹ ದೃಷ್ಟಾ। ರಾಜ್ಞೋ ವಿರಾಟಸ್ಯ ನಿವೇಶನೇ ಶುಭಾ।
04013006c ರೂಪೇಣ ಚೋನ್ಮಾದಯತೀವ ಮಾಂ ಭೃಶಂ। ಗಂಧೇನ ಜಾತಾ ಮದಿರೇವ ಭಾಮಿನೀ।।
“ಇಲ್ಲಿ ವಿರಾಟರಾಜನ ಮನೆಯಲ್ಲಿ ಈ ಮಂಗಳೆಯನ್ನು ನಾನು ಹಿಂದೆಂದೂ ಕಂಡಿಲ್ಲ. ಈಗತಾನೇ ತಯಾರಾದ ಮದ್ಯವು ತನ್ನ ಗಂಧದಿಂದಲೇ ಉನ್ಮಾದಿಸುವಂತೆ ಈ ಭಾಮಿನಿಯು ತನ್ನ ರೂಪದಿಂದಲೇ ವಿಶೇಷವಾಗಿ ನನ್ನನ್ನು ಉನ್ಮಾದಗೊಳಿಸುತ್ತಿದ್ದಾಳೆ.
04013007a ಕಾ ದೇವರೂಪಾ ಹೃದಯಂಗಮಾ ಶುಭೇ। ಆಚಕ್ಷ್ವ ಮೇ ಕಾ ಚ ಕುತಶ್ಚ ಶೋಭನಾ।
04013007c ಚಿತ್ತಂ ಹಿ ನಿರ್ಮಥ್ಯ ಕರೋತಿ ಮಾಂ ವಶೇ। ನ ಚಾನ್ಯದತ್ರೌಷಧಮದ್ಯ ಮೇ ಮತಂ।।
ಶುಭೇ! ಈ ದೇವರೂಪಿ ಹೃದಯಂಗಮೆ ಯಾರು? ಈ ಶೋಭನೆಯು ಯಾರು ಮತ್ತು ಎಲ್ಲಿಂದ ಬಂದವಳು ಎನ್ನುವುದನ್ನು ನನಗೆ ಹೇಳು. ನನ್ನ ಚಿತ್ತವನ್ನು ಕಡೆದು ನನ್ನನ್ನು ವಶಪಡಿಸಿಕೊಳ್ಳುತ್ತಿದ್ದಾಳೆ. ಇದಕ್ಕೆ ಇವಳಲ್ಲದೇ ಬೇರೆ ಔಷಧವೇ ಇಲ್ಲ ಎಂದು ನನ್ನ ಮನಸ್ಸು ಹೇಳುತ್ತಿದೆ.
04013008a ಅಹೋ ತವೇಯಂ ಪರಿಚಾರಿಕಾ ಶುಭಾ। ಪ್ರತ್ಯಗ್ರರೂಪಾ ಪ್ರತಿಭಾತಿ ಮಾಮಿಯಂ।
04013008c ಅಯುಕ್ತರೂಪಂ ಹಿ ಕರೋತಿ ಕರ್ಮ ತೇ। ಪ್ರಶಾಸ್ತು ಮಾಂ ಯಚ್ಚ ಮಮಾಸ್ತಿ ಕಿಂ ಚನ।।
ಅಹಾ! ಶುಭೆಯಾದ ನಿನ್ನ ಈ ಪರಿಚಾರಿಕೆ ನನಗೆ ನೂತನರೂಪಿಣಿಯಾಗಿ ತೋರುತ್ತಿದ್ದಾಳೆ. ಇಂಥವಳು ನಿನ್ನ ಕೆಲಸಗಾರ್ತಿಯಾಗಿರುವುದು ಸರಿಯಲ್ಲ. ಇವಳು ನನ್ನನ್ನೂ ನನ್ನದೆಲ್ಲವನ್ನೂ ಆಳಲಿ.
04013009a ಪ್ರಭೂತನಾಗಾಶ್ವರಥಂ ಮಹಾಧನಂ। ಸಮೃದ್ಧಿಯುಕ್ತಂ ಬಹುಪಾನಭೋಜನಂ।
04013009c ಮನೋಹರಂ ಕಾಂಚನಚಿತ್ರಭೂಷಣಂ। ಗೃಹಂ ಮಹಚ್ಚೋಭಯತಾಮಿಯಂ ಮಮ।।
ಹೇರಳವಾದ ಆನೆ, ಕುದುರೆ, ತೇರುಗಳನ್ನುಳ್ಳ; ಮಹಾಧನವುಳ್ಳ, ಸಮೃದ್ಧವಾದ ಪಾನ-ಭೋಜನ ವಿಪುಲತೆಯುಳ್ಳ, ಮನೋಹರ ಚಿನ್ನದ ಚಿತ್ರಗಳಿಂದ ಭೂಷಿತವಾದ ನನ್ನ ದೊಡ್ಡ ಅರಮನೆಯನ್ನು ಇವಳು ಬೆಳಗಲಿ.”
04013010a ತತಃ ಸುದೇಷ್ಣಾಮನುಮಂತ್ರ್ಯ ಕೀಚಕಸ್। ತತಃ ಸಮಭ್ಯೇತ್ಯ ನರಾಧಿಪಾತ್ಮಜಾಂ।
04013010c ಉವಾಚ ಕೃಷ್ಣಾಮಭಿಸಾಂತ್ವಯಂಸ್ತದಾ। ಮೃಗೇಂದ್ರಕನ್ಯಾಮಿವ ಜಂಬುಕೋ ವನೇ।।
ಕೀಚಕನು ಸುದೇಷ್ಣೆಯೊಡನೆ ಆಲೋಚಿಸಿದ ನಂತರ ರಾಜಪುತ್ರಿ ದ್ರೌಪದಿಯ ಬಳಿಸಾರಿ ವನದಲ್ಲಿ ಸಿಂಹದ ಕನ್ಯೆಯನ್ನು ನರಿಯು ಪುಸಲಾಯಿಸುವಂತೆ ಪುಸಲಾಯಿಸುತ್ತಾ ಹೇಳಿದನು:
04013011a ಇದಂ ಚ ರೂಪಂ ಪ್ರಥಮಂ ಚ ತೇ ವಯೋ। ನಿರರ್ಥಕಂ ಕೇವಲಮದ್ಯ ಭಾಮಿನಿ।
04013011c ಅಧಾರ್ಯಮಾಣಾ ಸ್ರಗಿವೋತ್ತಮಾ ಯಥಾ। ನ ಶೋಭಸೇ ಸುಂದರಿ ಶೋಭನಾ ಸತೀ।।
“ಭಾಮಿನಿ! ನಿನ್ನ ಈ ರೂಪ ಮತ್ತು ಈ ಯೌವನ ಇಂದು ಕೇವಲ ನಿರರ್ಥಕವಾಗಿವೆ. ಧರಿಸದೇ ಇರುವ ಸುಂದರವಾದ ಮಾಲೆಯಂತೆ ಶೋಭನಾ! ಸತೀ! ನೀನು ಶೋಭಿಸುತ್ತಿದ್ದೀಯೆ.
04013012a ತ್ಯಜಾಮಿ ದಾರಾನ್ಮಮ ಯೇ ಪುರಾತನಾ। ಭವಂತು ದಾಸ್ಯಸ್ತವ ಚಾರುಹಾಸಿನಿ।
04013012c ಅಹಂ ಚ ತೇ ಸುಂದರಿ ದಾಸವತ್ಸ್ಥಿತಃ। ಸದಾ ಭವಿಷ್ಯೇ ವಶಗೋ ವರಾನನೇ।।
ಚಾರುಹಾಸಿನೀ! ನನ್ನ ಮೊದಲಿನ ಪತ್ನಿಯರನ್ನು ತೊರೆದು ಅವರನ್ನು ನಿನ್ನ ದಾಸ್ಯದಲ್ಲಿರುಸುತ್ತೇನೆ. ವರಾನನೇ! ನಾನೂ ಕೂಡ ನಿನ್ನ ದಾಸನಾಗಿದ್ದು ಯಾವಾಗಲೂ ನಿನ್ನ ವಶನಾಗಿರುತ್ತೇನೆ.”
04013013 ದ್ರೌಪದ್ಯುವಾಚ।
04013013a ಅಪ್ರಾರ್ಥನೀಯಾಮಿಹ ಮಾಂ ಸೂತಪುತ್ರಾಭಿಮನ್ಯಸೇ।
04013013c ವಿಹೀನವರ್ಣಾಂ ಸೈರಂಧ್ರೀಂ ಬೀಭತ್ಸಾಂ ಕೇಶಕಾರಿಕಾಂ।।
ದ್ರೌಪದಿಯು ಹೇಳಿದಳು: “ಸೂತಪುತ್ರ! ಕೀಳುಜಾತಿಯ, ಜುಗುಪ್ಸೆಯುಂಟುಮಾಡುವ, ಮುಡಿಮಾಡುವ ಸೈರಂಧ್ರಿ, ಅಪ್ರಾರ್ಥನೀಯ ನನ್ನನ್ನು ನೀನು ಬಯಸುತ್ತಿದ್ದೀಯೆ!
04013014a ಪರದಾರಾಸ್ಮಿ ಭದ್ರಂ ತೇ ನ ಯುಕ್ತಂ ತ್ವಯಿ ಸಾಂಪ್ರತಂ।
04013014c ದಯಿತಾಃ ಪ್ರಾಣಿನಾಂ ದಾರಾ ಧರ್ಮಂ ಸಮನುಚಿಂತಯ।।
ನಾನು ಪರ ಪತ್ನಿ. ನಿನಗೆ ಮಂಗಳವಾಗಲಿ! ಇದು ನಿನಗೆ ಯುಕ್ತವಲ್ಲ. ಮನುಷ್ಯರಿಗೆ ಅವರ ಪತ್ನಿಯರೇ ಪ್ರಿಯರು ಎನ್ನುವ ಧರ್ಮದ ಕುರಿತು ಚಿಂತಿಸು.
04013015a ಪರದಾರೇ ನ ತೇ ಬುದ್ಧಿರ್ಜಾತು ಕಾರ್ಯಾ ಕಥಂ ಚನ।
04013015c ವಿವರ್ಜನಂ ಹ್ಯಕಾರ್ಯಾಣಾಮೇತತ್ಸತ್ಪುರುಷವ್ರತಂ।।
ನಿನ್ನ ಬುದ್ಧಿಯು ಪರಸತಿಯರಲ್ಲಿ ಎಂದೂ ತೊಡಗದಿರಲಿ. ಮಾಡಬಾರದ ಕೆಲಸದಿಂದ ದೂರವಿರುವುದೇ ಸತ್ಪುರುಷರ ವ್ರತ.
04013016a ಮಿಥ್ಯಾಭಿಗೃಧ್ನೋ ಹಿ ನರಃ ಪಾಪಾತ್ಮಾ ಮೋಹಮಾಸ್ಥಿತಃ।
04013016c ಅಯಶಃ ಪ್ರಾಪ್ನುಯಾದ್ಘೋರಂ ಸುಮಹತ್ಪ್ರಾಪ್ನುಯಾದ್ಭಯಂ।।
ಅನುಚಿತ ಕಾಮಿಯೂ, ಪಾಪಾತ್ಮನೂ, ಮೋಹಮಗ್ನನೂ ಆದವನು ಘೋರ ಅಪಕೀರ್ತಿಯನ್ನು ಪಡೆಯುತ್ತಾನೆ ಮತ್ತು ಮಹಾಭಯಕ್ಕೆ ಗುರಿಯಾಗುತ್ತಾನೆ.
04013017a ಮಾ ಸೂತಪುತ್ರ ಹೃಷ್ಯಸ್ವ ಮಾದ್ಯ ತ್ಯಕ್ಷ್ಯಸಿ ಜೀವಿತಂ।
04013017c ದುರ್ಲಭಾಮಭಿಮನ್ವಾನೋ ಮಾಂ ವೀರೈರಭಿರಕ್ಷಿತಾಂ।।
ಸೂತಪುತ್ರ! ಹಿಗ್ಗಬೇಡ! ಅಭಿಮಾನಿ ವೀರರಿಂದ ರಕ್ಷಿತಳಾದ ದುರ್ಲಭಳಾದ ನನ್ನನ್ನು ಬಯಸಿ ನೀನು ಇಂದು ಜೀವವನ್ನು ತ್ಯಜಿಸಬೇಡ.
04013018a ನ ಚಾಪ್ಯಹಂ ತ್ವಯಾ ಶಕ್ಯಾ ಗಂಧರ್ವಾಃ ಪತಯೋ ಮಮ।
04013018c ತೇ ತ್ವಾಂ ನಿಹನ್ಯುಃ ಕುಪಿತಾಃ ಸಾಧ್ವಲಂ ಮಾ ವ್ಯನೀನಶಃ।।
ನಾನು ನಿನಗೆ ದೊರಕುವವಳಲ್ಲ. ಗಂಧರ್ವರು ನನ್ನ ಗಂಡಂದಿರು. ಕುಪಿತರಾದ ಅವರು ನಿನ್ನನ್ನು ಕೊಲ್ಲುತ್ತಾರೆ. ಸಾಕು. ಸುಮ್ಮನೆ ನಾಶಹೊಂದಬೇಡ.
04013019a ಅಶಕ್ಯರೂಪೈಃ ಪುರುಷೈರಧ್ವಾನಂ ಗಂತುಮಿಚ್ಛಸಿ।
04013019c ಯಥಾ ನಿಶ್ಚೇತನೋ ಬಾಲಃ ಕೂಲಸ್ಥಃ ಕೂಲಮುತ್ತರಂ।
04013019e ತರ್ತುಮಿಚ್ಛತಿ ಮಂದಾತ್ಮಾ ತಥಾ ತ್ವಂ ಕರ್ತುಮಿಚ್ಛಸಿ।।
ಮಾನವರಿಗೆ ಅಸಾಧ್ಯವಾದ ಮಾರ್ಗದಲ್ಲಿ ಹೋಗಬಯಸುತ್ತಿರುವೆ. ಮಂದಾತ್ಮನೂ ನಿರ್ಬಲನೂ ಆದ ಬಾಲಕನು ಒಂದು ದಡದಿಂದ ಮತ್ತೊಂದು ದಡಕ್ಕೆ ದಾಟಿಹೋಗಲು ಬಯಸುವಂತೆ ನೀನೂ ಬಯಸುತ್ತಿದ್ದೀಯೆ.
04013020a ಅಂತರ್ಮಹೀಂ ವಾ ಯದಿ ವೋರ್ಧ್ವಮುತ್ಪತೇಃ। ಸಮುದ್ರಪಾರಂ ಯದಿ ವಾ ಪ್ರಧಾವಸಿ।
04013020c ತಥಾಪಿ ತೇಷಾಂ ನ ವಿಮೋಕ್ಷಮರ್ಹಸಿ। ಪ್ರಮಾಥಿನೋ ದೇವಸುತಾ ಹಿ ಮೇ ವರಾಃ।।
ನೆಲದೊಳಗನ್ನು ಹೊಕ್ಕರೂ, ಆಕಾಶಕ್ಕೆ ಹಾರಿದರೂ, ಸಮುದ್ರದ ಆಚೆ ದಡಕ್ಕೆ ಓಡಿದರೂ ಅವರಿಂದ ನೀನು ತಪ್ಪಿಸಿಕೊಳ್ಳಲಾರೆ. ನನ್ನ ಪತಿಗಳು ಶತ್ರುಗಳನ್ನು ನಾಶಪಡಿಸುವ ದೇವಸುತರು.
04013021a ತ್ವಂ ಕಾಲರಾತ್ರೀಮಿವ ಕಶ್ಚಿದಾತುರಃ। ಕಿಂ ಮಾಂ ದೃಢಂ ಪ್ರಾರ್ಥಯಸೇಽದ್ಯ ಕೀಚಕ।
04013021c ಕಿಂ ಮಾತುರಮ್ಕೇ ಶಯಿತೋ ಯಥಾ ಶಿಶುಶ್। ಚಂದ್ರಂ ಜಿಘೃಕ್ಷುರಿವ ಮನ್ಯಸೇ ಹಿ ಮಾಂ।।
ಕೀಚಕ! ರೋಗಿಯೋರ್ವನು ಕಾಳರಾತ್ರಿಯನ್ನು ಹೇಗೋ ಹಾಗೆ ನೀನು ನನ್ನನ್ನು ಇಂದು ಏಕೆ ಒತ್ತಾಯಿಸಿ ಬಯಸುತ್ತಿರುವೆ? ತಾಯಿಯ ತೊಡೆಯಮೇಲೆ ಮಲಗಿದ್ದ ಮಗುವು ಚಂದ್ರನನ್ನು ಹಿಡಿಯಬಯಸುವಂತೆ ನನ್ನನ್ನೇಕೆ ಬಯಸುತ್ತಿರುವೆ?”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ಕೀಚಕಕೃಷ್ಣಾಸಂವಾದೇ ತ್ರಯೋದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ಕೀಚಕಕೃಷ್ಣಸಂವಾದದಲ್ಲಿ ಹದಿಮೂರನೆಯ ಅಧ್ಯಾಯವು.