012 ಸಮಯಪಾಲನೇ ಜೀಮೂತವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ವೈರಾಟ ಪರ್ವ

ಅಧ್ಯಾಯ 12

ಸಾರ

ವಿರಾಟನಗರಿಯಲ್ಲಿ ಯುಧಿಷ್ಠಿರನ ಸಮಯಪಾಲನೆ (1-5). ಭೀಮನ ಸಮಯಪಾಲನೆ (6-29). ಇತರ ಪಾಂಡವರ ಸಮಯಪಾಲನೆ (30-32).

04012001 ಜನಮೇಜಯ ಉವಾಚ।
04012001a ಏವಂ ಮತ್ಸ್ಯಸ್ಯ ನಗರೇ ವಸಂತಸ್ತತ್ರ ಪಾಂಡವಾಃ।
04012001c ಅತ ಊರ್ಧ್ವಂ ಮಹಾವೀರ್ಯಾಃ ಕಿಮಕುರ್ವಂತ ವೈ ದ್ವಿಜ।।

ಜನಮೇಜಯನು ಹೇಳಿದನು: “ದ್ವಿಜ! ಹೀಗೆ ಮತ್ಸ್ಯನ ನಗರಿಯಲ್ಲಿ ವಾಸಿಸುತ್ತಿದ್ದ ಮಹಾವಿಕ್ರಮಿ ಪಾಂಡವರು ಮುಂದೆ ಏನು ಮಾಡಿದರು?”

04012002 ವೈಶಂಪಾಯನ ಉವಾಚ।
04012002a ಏವಂ ತೇ ನ್ಯವಸಂಸ್ತತ್ರ ಪ್ರಚ್ಛನ್ನಾಃ ಕುರುನಂದನಾಃ।
04012002c ಆರಾಧಯಂತೋ ರಾಜಾನಂ ಯದಕುರ್ವಂತ ತಚ್ಚೃಣು।।

ವೈಶಂಪಾಯನನು ಹೇಳಿದನು: “ಹೀಗೆ ವೇಷಮರೆಸಿಕೊಂಡು ಅಲ್ಲಿ ವಾಸಿಸುತ್ತಿದ್ದ ಕುರುನಂದನರು ರಾಜನ ಸೇವೆ ಮಾಡುತ್ತಾ ಏನು ಮಾಡಿದರೆಂದು ಕೇಳು.

04012003a ಯುಧಿಷ್ಠಿರಃ ಸಭಾಸ್ತಾರಃ ಸಭ್ಯಾನಾಮಭವತ್ಪ್ರಿಯಃ।
04012003c ತಥೈವ ಚ ವಿರಾಟಸ್ಯ ಸಪುತ್ರಸ್ಯ ವಿಶಾಂ ಪತೇ।।

ವಿಶಾಂಪತೇ! ಸಭಾಸದನಾಗಿದ್ದ ಯುಧಿಷ್ಠಿರನು ಸಭಾಜನರಿಗೂ ಅಂತೆಯೇ ವಿರಾಟನಿಗೂ ಆತನ ಪುತ್ರರಿಗೂ ಪ್ರಿಯನಾದನು.

04012004a ಸ ಹ್ಯಕ್ಷಹೃದಯಜ್ಞಸ್ತಾನ್ಕ್ರೀಡಯಾಮಾಸ ಪಾಂಡವಃ।
04012004c ಅಕ್ಷವತ್ಯಾಂ ಯಥಾಕಾಮಂ ಸೂತ್ರಬದ್ಧಾನಿವ ದ್ವಿಜಾನ್।।

ಪಗಡೆಯಾಟದ ರಹಸ್ಯವನ್ನು ತಿಳಿದಿದ್ದ ಆ ಪಾಂಡವನು ದಾರದಿಂದ ಕಟ್ಟಿದ ಹಕ್ಕಿಯನ್ನು ಆಡಿಸುವಂತೆ ಅವರನ್ನು ಪಗಡೆಯಾಟದಲ್ಲಿ ಆಟವಾಡಿಸುತ್ತಿದ್ದನು.

04012005a ಅಜ್ಞಾತಂ ಚ ವಿರಾಟಸ್ಯ ವಿಜಿತ್ಯ ವಸು ಧರ್ಮರಾಟ್।
04012005c ಭ್ರಾತೃಭ್ಯಃ ಪುರುಷವ್ಯಾಘ್ರೋ ಯಥಾರ್ಹಂ ಸ್ಮ ಪ್ರಯಚ್ಛತಿ।।

ಆ ಪುರುಷವ್ಯಾಘ್ರ ಧರ್ಮರಾಜನು ವಿರಾಟನ ಸಂಪತ್ತನ್ನು ಗೆದ್ದು ಯಾರಿಗೂ ತಿಳಿಯದ ಹಾಗೆ ತನ್ನ ತಮ್ಮಂದಿರಿಗೆ ಬೇಕಾದಷ್ಟನ್ನು ಕೊಡುತ್ತಿದ್ದನು.

04012006a ಭೀಮಸೇನೋಽಪಿ ಮಾಂಸಾನಿ ಭಕ್ಷ್ಯಾಣಿ ವಿವಿಧಾನಿ ಚ।
04012006c ಅತಿಸೃಷ್ಟಾನಿ ಮತ್ಸ್ಯೇನ ವಿಕ್ರೀಣಾತಿ ಯುಧಿಷ್ಠಿರೇ।।

ಭೀಮಸೇನನೂ ಮತ್ಸ್ಯರಾಜನಿಂದ ದೊರಕಿದ ಮಾಂಸ ಮತ್ತು ವಿವಿಧ ಭಕ್ಷ್ಯಗಳನ್ನು ಯುಧಿಷ್ಠಿರನಿಗೆ ಮಾರುತ್ತಿದ್ದನು.

04012007a ವಾಸಾಂಸಿ ಪರಿಜೀರ್ಣಾನಿ ಲಬ್ಧಾನ್ಯಂತಃಪುರೇಽರ್ಜುನಃ।
04012007c ವಿಕ್ರೀಣಾನಶ್ಚ ಸರ್ವೇಭ್ಯಃ ಪಾಂಡವೇಭ್ಯಃ ಪ್ರಯಚ್ಛತಿ।।

ಅರ್ಜುನನು ಅಂತಃಪುರದಲ್ಲಿ ದೊರೆತ ಹಳೆಯ ಬಟ್ಟೆಗಳನ್ನು ಪಾಂಡವರೆಲ್ಲರಿಗೂ ಮಾರುತ್ತಿದ್ದನು.

04012008a ಸಹದೇವೋಽಪಿ ಗೋಪಾನಾಂ ವೇಷಮಾಸ್ಥಾಯ ಪಾಂಡವಃ।
04012008c ದಧಿ ಕ್ಷೀರಂ ಘೃತಂ ಚೈವ ಪಾಂಡವೇಭ್ಯಃ ಪ್ರಯಚ್ಛತಿ।।

ಗೊಲ್ಲನ ವೇಷದಲ್ಲಿದ್ದ ಪಾಂಡವ ಸಹದೇವನು ಇತರ ಪಾಂಡವರಿಗೆ ಹಾಲು ತುಪ್ಪಗಳನ್ನು ಕೊಡುತ್ತಿದ್ದನು.

04012009a ನಕುಲೋಽಪಿ ಧನಂ ಲಬ್ಧ್ವಾ ಕೃತೇ ಕರ್ಮಣಿ ವಾಜಿನಾಂ।
04012009c ತುಷ್ಟೇ ತಸ್ಮಿನ್ನರಪತೌ ಪಾಂಡವೇಭ್ಯಃ ಪ್ರಯಚ್ಛತಿ।।

ನಕುಲನು ಅಶ್ವನಿರ್ವಹಣೆಯಿಂದ ಸಂತುಷ್ಟನಾದ ರಾಜನಿಂದ ಧನವನ್ನು ಪಡೆದು ಪಾಂಡವರಿಗೆ ಕೊಡುತ್ತಿದ್ದನು.

04012010a ಕೃಷ್ಣಾಪಿ ಸರ್ವಾನ್ಭ್ರಾತೄಂಸ್ತಾನ್ನಿರೀಕ್ಷಂತೀ ತಪಸ್ವಿನೀ।
04012010c ಯಥಾ ಪುನರವಿಜ್ಞಾತಾ ತಥಾ ಚರತಿ ಭಾಮಿನೀ।।

ಆ ತಪಸ್ವಿನಿ ಭಾಮಿನಿ ದ್ರೌಪದಿಯಾದರೋ ಆ ಸಹೋದರರನ್ನು ನೋಡುತ್ತಾ ತನ್ನ ಗುರುತು ಸಿಗದಂತೆ ನಡೆದುಕೊಳ್ಳುತ್ತಿದ್ದಳು.

04012011a ಏವಂ ಸಂಪಾದಯಂತಸ್ತೇ ತಥಾನ್ಯೋನ್ಯಂ ಮಹಾರಥಾಃ।
04012011c ಪ್ರೇಕ್ಷಮಾಣಾಸ್ತದಾ ಕೃಷ್ಣಾಮೂಷುಶ್ಚನ್ನಾ ನರಾಧಿಪ।।

ನರಾಧಿಪ! ಹೀಗೆ ಆ ಮಹಾರಥಿಗಳು ಅನ್ಯೋನ್ಯರ ಬೇಕುಬೇಡಗಳನ್ನು ಪೂರೈಸುತ್ತಾ ದ್ರೌಪದಿಯನ್ನು ನೋಡಿಕೊಳ್ಳುತ್ತಾ ವೇಷಮರೆಸಿಕೊಂಡಿದ್ದರು.

04012012a ಅಥ ಮಾಸೇ ಚತುರ್ಥೇ ತು ಬ್ರಹ್ಮಣಃ ಸುಮಹೋತ್ಸವಃ।
04012012c ಆಸೀತ್ಸಮೃದ್ಧೋ ಮತ್ಸ್ಯೇಷು ಪುರುಷಾಣಾಂ ಸುಸಮ್ಮತಃ।।

ನಾಲ್ಕನೆಯ ತಿಂಗಳಿನಲ್ಲಿ ಸಮೃದ್ಧ ಮತ್ಸ್ಯದ ಜನರಿಗೆ ಸಂತೋಷವನ್ನು ತರುವ ಬ್ರಹ್ಮಮಹೋತ್ಸವವು ಬಂದಿತು.

04012013a ತತ್ರ ಮಲ್ಲಾಃ ಸಮಾಪೇತುರ್ದಿಗ್ಭ್ಯೋ ರಾಜನ್ಸಹಸ್ರಶಃ।
04012013c ಮಹಾಕಾಯಾ ಮಹಾವೀರ್ಯಾಃ ಕಾಲಖಂಜಾ ಇವಾಸುರಾಃ।।

ರಾಜನ್! ಕಾಲಖಂಜ ರಾಕ್ಷಸರಂತಿರುವ ಮಹಾಕಾಯ, ಮಹಾವೀರ ಮಲ್ಲರು ಸಹಸ್ರಾರು ಸಂಖ್ಯೆಗಳಲ್ಲಿ ದಿಕ್ಕುದಿಕ್ಕುಗಳಿಂದ ಅಲ್ಲಿಗೆ ಆಗಮಿಸಿದರು.

04012014a ವೀರ್ಯೋನ್ನದ್ಧಾ ಬಲೋದಗ್ರಾ ರಾಜ್ಞಾ ಸಮಭಿಪೂಜಿತಾಃ।
04012014c ಸಿಂಹಸ್ಕಂಧಕಟಿಗ್ರೀವಾಃ ಸ್ವವದಾತಾ ಮನಸ್ವಿನಃ।।
04012014E ಅಸಕೃಲ್ಲಬ್ಧಲಕ್ಷಾಸ್ತೇ ರಂಗೇ ಪಾರ್ಥಿವಸನ್ನಿಧೌ।।

ವೀರ್ಯೋನ್ಮತ್ತರೂ, ಬಲದಲ್ಲಿ ಮೇಲಾದವರೂ, ರಾಜನಿಂದ ಪುರಸ್ಕರಿಸಲ್ಪಟ್ಟವರೂ, ಸಿಂಹದಂಥಹ ಹೆಗಲು, ಸೊಂಟ ಮತ್ತು ಕೊರಳುಗಳುಳ್ಳವರೂ, ಸ್ವಚ್ಛ ಶರೀರಿಗಳೂ, ದೃಢಮನಸ್ಕರೂ ಆದ ಅವರು ರಾಜನ ಸಮ್ಮುಖದಲ್ಲಿ ಕಣದಲ್ಲಿ ಮಲ್ಲಯುದ್ಧಮಾಡಿ ಗೆಲ್ಲುತ್ತಿದ್ದರು.

04012015a ತೇಷಾಮೇಕೋ ಮಹಾನಾಸೀತ್ಸರ್ವಮಲ್ಲಾನ್ಸಮಾಹ್ವಯತ್।
04012015c ಆವಲ್ಗಮಾನಂ ತಂ ರಂಗೇ ನೋಪತಿಷ್ಠತಿ ಕಶ್ಚನ।।

ಅವರಲ್ಲಿಯೇ ಒಬ್ಬ ಮಹಾಮಲ್ಲನು ಇತರ ಮಲ್ಲರೆಲ್ಲರನ್ನೂ ಕೂಗಿ ಕರೆದು ಕಣದಲ್ಲಿ ಸುತ್ತುವರೆಯುತ್ತಿದ್ದ. ಆದರೆ ಅವನನ್ನು ಎದುರಿಸಲು ಯಾರೂ ಮುಂದೆಬರಲಿಲ್ಲ.

04012016a ಯದಾ ಸರ್ವೇ ವಿಮನಸಸ್ತೇ ಮಲ್ಲಾ ಹತಚೇತಸಃ।
04012016c ಅಥ ಸೂದೇನ ತಂ ಮಲ್ಲಂ ಯೋಧಯಾಮಾಸ ಮತ್ಸ್ಯರಾಟ್।।

ಆ ಜಟ್ಟಿಗಳೆಲ್ಲ ನಿರುತ್ಸಾಹಗೊಂಡು ಹತಚೇತಸರಾದಾಗ ಮತ್ಸ್ಯರಾಜನು ತನ್ನ ಅಡುಗೆಯವ ಆ ಮಲ್ಲನೊಡನೆ ಹೋರಾಡಲು ಹೇಳಿದನು.

04012017a ಚೋದ್ಯಮಾನಸ್ತತೋ ಭೀಮೋ ದುಃಖೇನೈವಾಕರೋನ್ಮತಿಂ।
04012017c ನ ಹಿ ಶಕ್ನೋತಿ ವಿವೃತೇ ಪ್ರತ್ಯಾಖ್ಯಾತುಂ ನರಾಧಿಪಂ।।

ಈ ರೀತಿ ರಾಜನಿಂದ ಪ್ರಚೋದಿತನಾದ ಬೀಮನು ಈ ರಾಜನೆದುರು ಬಹಿರಂಗವಾಗಿ ಹೋರಾಡಲು ಅವಕಾಶವಿಲ್ಲವಲ್ಲಾ ಎಂದು ದುಃಖಿಸಿದನು.

04012018a ತತಃ ಸ ಪುರುಷವ್ಯಾಘ್ರಃ ಶಾರ್ದೂಲಶಿಥಿಲಂ ಚರನ್।
04012018c ಪ್ರವಿವೇಶ ಮಹಾರಂಗಂ ವಿರಾಟಮಭಿಹರ್ಷಯನ್।।

ಆಗ ಆ ಪುರುಷವ್ಯಾಘ್ರನು ಶಾರ್ದೂಲದಂತೆ ಸಲೀಸಾಗಿ ಹೆಜ್ಜೆಗಳನ್ನಿಡುತ್ತಾ ಮಹಾರಂಗವನ್ನು ಪ್ರವೇಶಿಸಿ ವಿರಾಟನಿಗೆ ಸಂತೋಷವನ್ನಿತ್ತನು.

04012019a ಬಬಂಧ ಕಕ್ಷ್ಯಾಂ ಕೌಂತೇಯಸ್ತತಸ್ತಂ ಹರ್ಷಯಂ ಜನಂ।
04012019c ತತಸ್ತಂ ವೃತ್ರಸಂಕಾಶಂ ಭೀಮೋ ಮಲ್ಲಂ ಸಮಾಹ್ವಯತ್।।

ಅಲ್ಲಿದ್ದ ಜನರಿಗೆ ಹರ್ಷವನ್ನೀಯುತ್ತಾ ಕೌಂತೇಯ ಭೀಮನು ಸೊಂಟಕ್ಕೆ ಕಟ್ಟನ್ನು ಕಟ್ಟಿ ಆ ವೃತ್ರಾಸುರನಂತಿದ್ದ ಮಲ್ಲನನ್ನು ಎದುರಿಸಿದನು.

04012020a ತಾವುಭೌ ಸುಮಹೋತ್ಸಾಹಾವುಭೌ ತೀವ್ರಪರಾಕ್ರಮೌ।
04012020c ಮತ್ತಾವಿವ ಮಹಾಕಾಯೌ ವಾರಣೌ ಷಷ್ಟಿಹಾಯನೌ।।

ಮಹೋತ್ಸಾಹಿಗಳಾದ ತೀವ್ರಪರಾಕ್ರಮಿಗಳಾಗಿದ್ದ ಅವರೀರ್ವರೂ ಮತ್ತೇರಿದ ಅರವತ್ತು ವರ್ಷದ ಅತೀದೊಡ್ಡ ಆನೆಗಳಂತೆ ಕಾಣುತ್ತಿದ್ದರು.

04012021a ಚಕರ್ಷ ದೋರ್ಭ್ಯಾಮುತ್ಪಾಟ್ಯ ಭೀಮೋ ಮಲ್ಲಮಮಿತ್ರಹಾ।
04012021c ವಿನದಂತಮಭಿಕ್ರೋಶಂ ಶಾರ್ದೂಲ ಇವ ವಾರಣಂ।।

ಶತ್ರುಹಂತಕ ಭೀಮನು ಘೀಳಿಡುತ್ತಿರುವ ಆನೆಯನ್ನು ಶಾರ್ದೂಲವು ಎತ್ತಿ ಹಿಡಿಯುವಂತೆ ಆ ಮಲ್ಲನ ತೋಳುಗಳಿಂದ ಮೇಲೆತ್ತಿ ಹಿಡಿದು ಗರ್ಜಿಸಿದನು.

04012022a ತಮುದ್ಯಮ್ಯ ಮಹಾಬಾಹುರ್ಭ್ರಾಮಯಾಮಾಸ ವೀರ್ಯವಾನ್।
04012022c ತತೋ ಮಲ್ಲಾಶ್ಚ ಮತ್ಸ್ಯಾಶ್ಚ ವಿಸ್ಮಯಂ ಚಕ್ರಿರೇ ಪರಂ।।

ಆ ವೀರ್ಯವಂತನು ಅವನನ್ನು ಮೇಲೆತ್ತಿ ತಿರುಗಿಸುತ್ತಿದ್ದನ್ನುನೋಡಿ ಮಲ್ಲರೂ ಮತ್ಸ್ಯ ಜನರೂ ಪರಮ ವಿಸ್ಮಿತರಾದರು.

04012023a ಭ್ರಾಮಯಿತ್ವಾ ಶತಗುಣಂ ಗತಸತ್ತ್ವಮಚೇತನಂ।
04012023c ಪ್ರತ್ಯಪಿಂಷನ್ಮಹಾಬಾಹುರ್ಮಲ್ಲಂ ಭುವಿ ವೃಕೋದರಃ।।

ಮಹಾಬಾಹು ವೃಕೋದರನು ಆ ಮಲ್ಲನನ್ನು ನೂರುಸಲ ತಿರುಗಿಸಿ ಸತ್ವವನ್ನು ಕಳೆದುಕೊಂಡು ಮೂರ್ಛೆ ಹೋಗಿದ್ದ ಅವನನ್ನು ನೆಲಕ್ಕಿಕ್ಕಿ ಹುಡಿಗುಟ್ಟಿದನು.

04012024a ತಸ್ಮಿನ್ವಿನಿಹತೇ ಮಲ್ಲೇ ಜೀಮೂತೇ ಲೋಕವಿಶ್ರುತೇ।
04012024c ವಿರಾಟಃ ಪರಮಂ ಹರ್ಷಮಗಚ್ಛದ್ಬಾಂಧವೈಃ ಸಹ।

ಲೋಕವಿಶ್ರುತ ಮಲ್ಲ ಜೀಮೂತನು ಈ ರೀತಿ ಹತನಾಗಲು ವಿರಾಟನು ತನ್ನ ಬಾಂಧವರೊಂದಿಗೆ ಅತೀವ ಸಂತೋಷಗೊಂಡನು.

04012025a ಸಂಹರ್ಷಾತ್ಪ್ರದದೌ ವಿತ್ತಂ ಬಹು ರಾಜಾ ಮಹಾಮನಾಃ।
04012025c ಬಲ್ಲವಾಯ ಮಹಾರಂಗೇ ಯಥಾ ವೈಶ್ರವಣಸ್ತಥಾ।।

ಆ ದೊಡ್ಡಮನಸ್ಸಿನ ರಾಜನು ಸಂತೋಷದಿಂದ ಆ ಮಹಾರಂಗದಲ್ಲಿಯೇ ಬಲ್ಲವನಿಗೆ ಕುಬೇರನಂತೆ ಬಹಳಷ್ಟು ಹಣವನ್ನಿತ್ತನು.

04012026a ಏವಂ ಸ ಸುಬಹೂನ್ಮಲ್ಲಾನ್ಪುರುಷಾಂಶ್ಚ ಮಹಾಬಲಾನ್।
04012026c ವಿನಿಘ್ನನ್ಮತ್ಸ್ಯರಾಜಸ್ಯ ಪ್ರೀತಿಮಾವಹದುತ್ತಮಾಂ।।

ಹೀಗೆ ಆ ಭೀಮನು ಬಹುಮಂದಿ ಮಲ್ಲರನ್ನೂ ಮಹಾಬಲಶಾಲಿ ಪುರುಷರನ್ನೂ ಕೊಂದು ಮತ್ಯ್ಸರಾಜನಿಗೆ ಅತಿಶಯ ಆನಂದವನ್ನು ತಂದನು.

04012027a ಯದಾಸ್ಯ ತುಲ್ಯಃ ಪುರುಷೋ ನ ಕಶ್ಚಿತ್ತತ್ರ ವಿದ್ಯತೇ।
04012027c ತತೋ ವ್ಯಾಘ್ರೈಶ್ಚ ಸಿಂಹೈಶ್ಚ ದ್ವಿರದೈಶ್ಚಾಪ್ಯಯೋಧಯತ್।

ಅವನಿಗೆ ಸರಿಸಮಾನ ವ್ಯಕ್ತಿಗಳು ಯಾರೂ ಅಲ್ಲಿ ಇಲ್ಲದಿದ್ದಾಗ ಅವನನ್ನು ಹುಲಿ, ಸಿಂಹ ಅಥವಾ ಆನೆಗಳೊಡನೆ ಕಾದಾಡಿಸುತ್ತಿದ್ದನು.

04012028a ಪುನರಂತಃಪುರಗತಃ ಸ್ತ್ರೀಣಾಂ ಮಧ್ಯೇ ವೃಕೋದರಃ।
04012028c ಯೋಧ್ಯತೇ ಸ್ಮ ವಿರಾಟೇನ ಸಿಂಹೈರ್ಮತ್ತೈರ್ಮಹಾಬಲೈಃ।।

ಮತ್ತು ವಿರಾಟನು ತನ್ನ ಅಂತಃಪುರದ ಸ್ತ್ರೀಯರ ನಡುವೆ, ಮದಿಸಿದ ಮಹಾಬಲಶಾಲಿ ಸಿಂಹಗಳೊಡನೆ ವೃಕೋದರನು ಕಾದುವಂತೆ ಮಾಡುತ್ತಿದ್ದನು.

04012029a ಬೀಭತ್ಸುರಪಿ ಗೀತೇನ ಸುನೃತ್ತೇನ ಚ ಪಾಂಡವಃ।
04012029c ವಿರಾಟಂ ತೋಷಯಾಮಾಸ ಸರ್ವಾಶ್ಚಾಂತಃಪುರಸ್ತ್ರಿಯಃ।।

ಪಾಂಡವ ಅರ್ಜುನನೂ ಕೂಡ ತನ್ನ ಗೀತ ನೃತ್ಯಗಳಿಂದ ಅಂತಃಪುರದ ಸ್ತ್ರೀಯರೊಂದಿಗೆ ವಿರಾಟನನ್ನು ಸಂತೋಷಗೊಳಿಸುತ್ತಿದ್ದನು.

04012030a ಅಶ್ವೈರ್ವಿನೀತೈರ್ಜವನೈಸ್ತತ್ರ ತತ್ರ ಸಮಾಗತೈಃ।
04012030c ತೋಷಯಾಮಾಸ ನಕುಲೋ ರಾಜಾನಂ ರಾಜಸತ್ತಮ।।

ರಾಜಸತ್ತಮ! ನಾನಾಕಡೆಗಳಿಂದ ಬಂದ ವೇಗಗಾಮಿ ಕುದುರೆಗಳಿಗೆ ತರಬೇತಿಯನ್ನಿತ್ತು ನಕುಲನು ರಾಜನನ್ನು ಸಂತೋಷಪಡಿಸುತ್ತಿದ್ದನು.

04012031a ತಸ್ಮೈ ಪ್ರದೇಯಂ ಪ್ರಾಯಚ್ಛತ್ಪ್ರೀತೋ ರಾಜಾ ಧನಂ ಬಹು।
04012031c ವಿನೀತಾನ್ವೃಷಭಾನ್ದೃಷ್ಟ್ವಾ ಸಹದೇವಸ್ಯ ಚಾಭಿಭೋ।।

ಪ್ರಭು! ಸಹದೇವನಿಂದ ಸುರಕ್ಷಿತವಾಗಿದ್ದ ಗೂಳಿಗಳನ್ನು ನೋಡಿ ರಾಜನು ಪ್ರೀತನಾಗಿ ಅವನಿಗೆ ಕೊಡಬೇಕಾದಷ್ಟು ಬಹುಧನವನ್ನು ನೀಡುತ್ತಿದ್ದನು.

04012032a ಏವಂ ತೇ ನ್ಯವಸಂಸ್ತತ್ರ ಪ್ರಚ್ಛನ್ನಾಃ ಪುರುಷರ್ಷಭಾಃ।
04012032c ಕರ್ಮಾಣಿ ತಸ್ಯ ಕುರ್ವಾಣಾ ವಿರಾಟನೃಪತೇಸ್ತದಾ।।

ಹೀಗೆ ಆ ಪುರುಷಶ್ರೇಷ್ಠರು ವಿರಾಟರಾಜನ ಕೆಲಸ ಮಾಡುತ್ತಾ ಅಲ್ಲಿ ವೇಷಮರೆಸಿಕೊಂಡು ವಾಸಿಸುತ್ತಿದ್ದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಸಮಯಪಾಲನೇ ಜೀಮೂತವಧೋ ನಾಮ ದ್ವಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಸಮಯಪಾಲನದಲ್ಲಿ ಜೀಮೂತವಧೆ ಎನ್ನುವ ಹನ್ನೆರಡನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವ ಸಮಾಪ್ತಿಃ।
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವ ಸಮಾಪ್ತಿ. ಇದೂವರೆಗಿನ ಒಟ್ಟು ಮಹಾಪರ್ವಗಳು-3/18, ಉಪಪರ್ವಗಳು-45/100, ಅಧ್ಯಾಯಗಳು-608/1995, ಶ್ಲೋಕಗಳು-20176/73784.