011 ನಕುಲಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ವೈರಾಟ ಪರ್ವ

ಅಧ್ಯಾಯ 11

ಸಾರ

ತನ್ನ ಆಸ್ಥಾನವನ್ನು ಪ್ರವೇಶಿಸಿದ ನಕುಲನನ್ನು ಯಾರೆಂದು ರಾಜಾ ವಿರಾಟನು ಪ್ರಶ್ನಿಸಿದುದು (1-5). ನಕುಲ-ವಿರಾಟರ ಸಂಭಾಷಣೆ ಮತ್ತು ನಕುಲನು ವಿರಾಟನ ಕುದುರೆಲಾಯದಲ್ಲಿ ನೇಮಕಗೊಳ್ಳುವುದು (6-13).

04011001 ವೈಶಂಪಾಯನ ಉವಾಚ।
04011001a ಅಥಾಪರೋಽದೃಶ್ಯತ ಪಾಂಡವಃ ಪ್ರಭುಃ। ವಿರಾಟರಾಜ್ಞಸ್ತುರಗಾನ್ಸಮೀಕ್ಷತಃ।
04011001c ತಮಾಪತಂತಂ ದದೃಶೇ ಪೃಥಗ್ಜನೋ। ವಿಮುಕ್ತಮಭ್ರಾದಿವ ಸೂರ್ಯಮಂಡಲಂ।।

ವೈಶಂಪಾಯನನು ಹೇಳಿದನು: “ಅನಂತರ ತನ್ನ ಕುದುರೆಗಳನ್ನು ನೋಡುತ್ತಿದ್ದ ವಿರಾಟರಾಜನಿಗೆ ಇನ್ನೊಬ್ಬ ಪಾಂಡವ ಪ್ರಭು ಕಾಣಿಸಿಕೊಂಡನು. ಮೋಡದಿಂದ ಮುಕ್ತನಾಗಿ ಮೇಲೇರಿ ಬರುತ್ತಿರುವ ಸೂರ್ಯಮಂಡಲದಂತಿದ್ದ ಅವನನ್ನು ಪ್ರತಿಯೊಬ್ಬರೂ ನೋಡಿದನು.

04011002a ಸ ವೈ ಹಯಾನೈಕ್ಷತ ತಾಂಸ್ತತಸ್ತತಃ। ಸಮೀಕ್ಷಮಾಣಂ ಚ ದದರ್ಶ ಮತ್ಸ್ಯರಾಟ್।
04011002c ತತೋಽಬ್ರವೀತ್ತಾನನುಗಾನಮಿತ್ರಹಾ। ಕುತೋಽಯಮಾಯಾತಿ ನರೋಽಮರಪ್ರಭಃ।।

ಅವನು ಕೂಡ ಕುದುರೆಗಳನ್ನು ನೋಡುತ್ತಿದ್ದನು. ಹಾಗೆ ನೋಡುತ್ತಿದ್ದ ಅವನನ್ನು ಮತ್ಸ್ಯರಾಜನು ಕಂಡನು. ಬಳಿಕ ಆ ಶತ್ರುನಾಶಕ ತನ್ನ ಅನುಚರರಲ್ಲಿ ಕೇಳಿದನು: “ದೇವತೆಗಳಂತೆ ಹೊಳೆಯುತ್ತಿರುವ ಈ ವ್ಯಕ್ತಿ ಎಲ್ಲಿಂದ ಬರುತ್ತಿದ್ದಾನೆ?

04011003a ಅಯಂ ಹಯಾನ್ವೀಕ್ಷತಿ ಮಾಮಕಾನ್ದೃಢಂ। ಧ್ರುವಂ ಹಯಜ್ಞೋ ಭವಿತಾ ವಿಚಕ್ಷಣಃ।
04011003c ಪ್ರವೇಶ್ಯತಾಮೇಷ ಸಮೀಪಮಾಶು ಮೇ। ವಿಭಾತಿ ವೀರೋ ಹಿ ಯಥಾಮರಸ್ತಥಾ।।

ನನ್ನ ಕುದುರೆಗಳನ್ನು ಚೆನ್ನಾಗಿ ನೋಡುತ್ತಿರುವ ಇವನು ವಿಚಕ್ಷಣನಾದ ಹಯಜ್ಞನಾಗಿರಲೇ ಬೇಕು. ದೇವತೆಯಂತೆ ಹೊಳೆಯುತ್ತಿರುವ ಆ ವೀರನನ್ನು ನನ್ನ ಬಳಿ ಬೇಗ ಬರಮಾಡಿ.”

04011004a ಅಭ್ಯೇತ್ಯ ರಾಜಾನಮಮಿತ್ರಹಾಬ್ರವೀಜ್। ಜಯೋಽಸ್ತು ತೇ ಪಾರ್ಥಿವ ಭದ್ರಮಸ್ತು ಚ।
04011004c ಹಯೇಷು ಯುಕ್ತೋ ನೃಪ ಸಮ್ಮತಃ ಸದಾ। ತವಾಶ್ವಸೂತೋ ನಿಪುಣೋ ಭವಾಮ್ಯಹಂ।।

ಆ ಶತ್ರುನಾಶಕನು ರಾಜನ ಬಳಿ ಹೋಗಿ ಹೇಳಿದನು: “ಅರಸ! ನಿನಗೆ ಜಯವಾಗಲಿ! ಮಂಗಳವಾಗಲಿ! ದೊರೆಯೇ! ಕುದುರೆಗಳ ವಿಷಯದಲ್ಲಿ ಚೆನ್ನಾಗಿ ತಿಳಿದಿರುವ ನಾನು ಸದಾ ಸಮ್ಮತನಾಗಿದ್ದೇನೆ. ನಾನು ನಿನ್ನ ಕುದುರೆಗಳಿಗೆ ನಿಪುಣನಾದ ಸೂತನಾಗುವೆ.”

04011005 ವಿರಾಟ ಉವಾಚ।
04011005a ದದಾಮಿ ಯಾನಾನಿ ಧನಂ ನಿವೇಶನಂ। ಮಮಾಶ್ವಸೂತೋ ಭವಿತುಂ ತ್ವಮರ್ಹಸಿ।
04011005c ಕುತೋಽಸಿ ಕಸ್ಯಾಸಿ ಕಥಂ ತ್ವಮಾಗತಃ। ಪ್ರಬ್ರೂಹಿ ಶಿಲ್ಪಂ ತವ ವಿದ್ಯತೇ ಚ ಯತ್।।

ವಿರಾಟನು ಹೇಳಿದನು: “ನಿನಗೆ ವಾಹನಗಳನ್ನೂ, ಹಣವನ್ನೂ, ಮನೆಯನ್ನೂ ಕೊಡುತ್ತೇನೆ. ನನ್ನ ಕುದುರೆಗಳಿಗೆ ಸೂತನಾಗಲು ಅರ್ಹನಾಗಿದ್ದೀಯೆ. ನೀನು ಎಲ್ಲಿಂದ ಬಂದೆ, ಯಾರ ಮಗ, ಹೇಗೆ ಬಂದೆ ಎನ್ನುವುದನ್ನೂ ನೀನು ಬಲ್ಲ ಕುಶಲತೆಯನ್ನೂ ತಿಳಿಸು.”

04011006 ನಕುಲ ಉವಾಚ।
04011006a ಪಂಚಾನಾಂ ಪಾಂಡುಪುತ್ರಾಣಾಂ ಜ್ಯೇಷ್ಠೋ ರಾಜಾ ಯುಧಿಷ್ಠಿರಃ।
04011006c ತೇನಾಹಮಶ್ವೇಷು ಪುರಾ ಪ್ರಕೃತಃ ಶತ್ರುಕರ್ಶನ।।

ನಕುಲನು ಹೇಳಿದನು: “ಶತ್ರುಕರ್ಶನ! ಐವರು ಪಾಂಡುಪುತ್ರರಲ್ಲಿ ಹಿರಿಯನಾದವನು ರಾಜಾ ಯುಧಿಷ್ಠಿರ. ಅವನು ತನ್ನ ಕುದುರೆಗಳನ್ನು ನೋಡಿಕೊಳ್ಳಲು ನನ್ನನ್ನು ಹಿಂದೆ ನೇಮಿಸಿಕೊಂಡಿದ್ದನು.

04011007a ಅಶ್ವಾನಾಂ ಪ್ರಕೃತಿಂ ವೇದ್ಮಿ ವಿನಯಂ ಚಾಪಿ ಸರ್ವಶಃ।
04011007c ದುಷ್ಟಾನಾಂ ಪ್ರತಿಪತ್ತಿಂ ಚ ಕೃತ್ಸ್ನಂ ಚೈವ ಚಿಕಿತ್ಸಿತಂ।।

ಕುದುರೆಗಳ ಪ್ರಕೃತಿ, ಅವುಗಳಿಗೆ ಶಿಕ್ಷಣವನ್ನು ಕಲಿಸುವುದನ್ನೂ, ದುಷ್ಟ ಕುದುರೆಗಳನ್ನು ಪಳಗಿಸುವುದನ್ನೂ ಮತ್ತು ಅವುಗಳಿಗೆ ಎಲ್ಲ ರೀತಿಯ ಚಿಕಿತ್ಸೆಗಳನ್ನೂ ನಾನು ತಿಳಿದಿದ್ದೇನೆ.

04011008a ನ ಕಾತರಂ ಸ್ಯಾನ್ಮಮ ಜಾತು ವಾಹನಂ। ನ ಮೇಽಸ್ತಿ ದುಷ್ಟಾ ವಡವಾ ಕುತೋ ಹಯಾಃ।
04011008c ಜನಸ್ತು ಮಾಮಾಹ ಸ ಚಾಪಿ ಪಾಂಡವೋ। ಯುಧಿಷ್ಠಿರೋ ಗ್ರಂಥಿಕಮೇವ ನಾಮತಃ।।

ನನ್ನ ಕೈಯಲ್ಲಿ ಯಾವ ಕುದುರೆಯೂ ಬೆದರುವುದಿಲ್ಲ. ನಾನು ಪಳಗಿಸಿದ ಹೆಣ್ಣು ಕುದುರೆಗಳು ತಂಟೆ ಮಾಡುವುದಿಲ್ಲ. ಇನ್ನು ಗಂಡುಕುದುರುಗಳು ಹೇಗಿದ್ದಾವು! ಜನರು ಮತ್ತು ಪಾಂಡವ ಯುಧಿಷ್ಠಿರನೂ ನನ್ನನ್ನು ಗ್ರಂಥಿಕನೆಂಬ ಹೆಸರಿನಿಂದ ಕರೆಯುತ್ತಿದ್ದರು.”

04011009 ವಿರಾಟ ಉವಾಚ।
04011009a ಯದಸ್ತಿ ಕಿಂ ಚಿನ್ಮಮ ವಾಜಿವಾಹನಂ। ತದಸ್ತು ಸರ್ವಂ ತ್ವದಧೀನಮದ್ಯ ವೈ।
04011009c ಯೇ ಚಾಪಿ ಕೇ ಚಿನ್ಮಮ ವಾಜಿಯೋಜಕಾಸ್। ತ್ವದಾಶ್ರಯಾಃ ಸಾರಥಯಶ್ಚ ಸಂತು ಮೇ।।

ವಿರಾಟನು ಹೇಳಿದನು: “ಇಂದಿನಿಂದ ನನ್ನ ಕುದುರೆಗಳು ಮತ್ತು ರಥಗಳೆಲ್ಲವೂ ನಿನ್ನ ಅಧೀನದಲ್ಲಿರಲಿ. ನನ್ನ ಅಶ್ವಯೋಜಕರೂ ಸಾರಥಿಗಳೂ ನಿನ್ನ ಆಶ್ರಯದಲ್ಲಿರಲಿ.

04011010a ಇದಂ ತವೇಷ್ಟಂ ಯದಿ ವೈ ಸುರೋಪಮ। ಬ್ರವೀಹಿ ಯತ್ತೇ ಪ್ರಸಮೀಕ್ಷಿತಂ ವಸು।
04011010c ನ ತೇಽನುರೂಪಂ ಹಯಕರ್ಮ ವಿದ್ಯತೇ। ಪ್ರಭಾಸಿ ರಾಜೇವ ಹಿ ಸಮ್ಮತೋ ಮಮ।।

ಸುರೋಪಮ! ನಿನಗೆ ಇದು ಇಷ್ಟವಾದರೆ ನೀನು ಬಯಸುವ ವೇತನವನ್ನು ತಿಳಿಸು. ಹಯಕರ್ಮ ನಿನಗೆ ಅನುರೂಪವಾದದ್ದಲ್ಲ ಎಂದು ನನಗನ್ನಿಸುತ್ತದೆ. ರಾಜನಂತೆ ಹೊಳೆಯುತ್ತಿರುವ ನೀನು ನನ್ನ ಸಮ್ಮತನಾಗಿರುವೆ.

04011011a ಯುಧಿಷ್ಠಿರಸ್ಯೇವ ಹಿ ದರ್ಶನೇನ ಮೇ। ಸಮಂ ತವೇದಂ ಪ್ರಿಯದರ್ಶ ದರ್ಶನಂ।
04011011c ಕಥಂ ತು ಭೃತ್ಯೈಃ ಸ ವಿನಾಕೃತೋ ವನೇ। ವಸತ್ಯನಿಂದ್ಯೋ ರಮತೇ ಚ ಪಾಂಡವಃ।।

ಸುಂದರಾಂಗ! ನಿನ್ನ ಈ ದರ್ಶನವು ನನಗೆ ಯುಧಿಷ್ಠಿರನ ದರ್ಶನಕ್ಕೆ ಸಮನಾಗಿದೆ. ದೋಷರಹಿತನಾದ ಆ ಪಾಂಡವನು ಸೇವಕರಿಲ್ಲದೇ ವನದಲ್ಲಿ ಹೇಗೆ ವಾಸಿಸುತ್ತಿದ್ದಾನೆ? ಹೇಗೆ ಸಂತೋಷಪಡುತ್ತಿದ್ದಾನೆ?””

04011012 ವೈಶಂಪಾಯನ ಉವಾಚ।
04011012a ತಥಾ ಸ ಗಂಧರ್ವವರೋಪಮೋ ಯುವಾ। ವಿರಾಟರಾಜ್ಞಾ ಮುದಿತೇನ ಪೂಜಿತಃ।
04011012c ನ ಚೈನಮನ್ಯೇಽಪಿ ವಿದುಃ ಕಥಂ ಚನ। ಪ್ರಿಯಾಭಿರಾಮಂ ವಿಚರಂತಮಂತರಾ।।

ವೈಶಂಪಾಯನನು ಹೇಳಿದನು: “ಹಾಗೆ ಆ ಗಂಧರ್ವರಾಜಸಮನಾದ ಯುವಕನು ಹರ್ಷಿತ ವಿರಾಟರಾಜನಿಂದ ಸತ್ಕೃತನಾದನು. ನಗರದಲ್ಲಿ ಪ್ರಿಯನೂ ಸಂತೋಷದಾಯಕನೂ ಆಗಿ ಓಡಾಡುತ್ತಿದ್ದ ಅವನನ್ನು ಬೇರೆ ಯಾರೂ ಗುರುತಿಸಲಿಲ್ಲ.

04011013a ಏವಂ ಹಿ ಮತ್ಸ್ಯೇ ನ್ಯವಸಂತ ಪಾಂಡವಾ। ಯಥಾಪ್ರತಿಜ್ಞಾಭಿರಮೋಘದರ್ಶನಾಃ।
04011013c ಅಜ್ಞಾತಚರ್ಯಾಂ ವ್ಯಚರನ್ಸಮಾಹಿತಾಃ। ಸಮುದ್ರನೇಮೀಪತಯೋಽತಿದುಃಖಿತಾಃ।

ಈ ರೀತಿಯಲ್ಲಿ ಆ ಅಮೋಘದರ್ಶನ ಪಾಂಡವರು ಮತ್ಸ್ಯರಾಜನ ಬಳಿಯಲ್ಲಿ ವಾಸಿಸುತ್ತಿದ್ದರು. ಸಮುದ್ರಪರ್ಯಂತವಾದ ಭೂಮಿಯ ಒಡೆಯರು ತಮ್ಮ ಪ್ರತಿಜ್ಞೆಗನುಸಾರವಾಗಿ ತುಂಬ ದುಃಖಿತರಾಗಿ ಆದರೂ ಸಮಾಧಾನಚಿತ್ತರಾಗಿ ಅಜ್ಞಾತವಾಸವನ್ನು ಮಾಡುತ್ತಿದ್ದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಪುರಪ್ರವೇಶೇ ನಕುಲಪ್ರವೇಶೋ ನಾಮ ಏಕಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಪುರಪ್ರವೇಶದಲ್ಲಿ ನಕುಲಪ್ರವೇಶವೆನ್ನುವ ಹನ್ನೊಂದನೆಯ ಅಧ್ಯಾಯವು.