ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ವೈರಾಟ ಪರ್ವ
ಅಧ್ಯಾಯ 6
ಸಾರ
ತನ್ನ ಆಸ್ಥಾನವನ್ನು ಪ್ರವೇಶಿಸಿದ ಯುಧಿಷ್ಠಿರನನ್ನು ಯಾರೆಂದು ರಾಜಾ ವಿರಾಟನು ತರ್ಕಿಸಿದುದು (1-6). ಯುಧಿಷ್ಠಿರ-ವಿರಾಟರ ಸಂಭಾಷಣೆ ಮತ್ತು ಯುಧಿಷ್ಠಿರನು ಕಂಕನೆಂಬ ಹೆಸರಿನಲ್ಲಿ ವಿರಾಟನ ಆಸ್ಥಾನದಲ್ಲಿರುವುದು (7-16).
04006001 ವೈಶಂಪಾಯನ ಉವಾಚ।
04006001a ತತೋ ವಿರಾಟಂ ಪ್ರಥಮಂ ಯುಧಿಷ್ಠಿರೋ। ರಾಜಾ ಸಭಾಯಾಮುಪವಿಷ್ಟಮಾವ್ರಜತ್।
04006001c ವೈಡೂರ್ಯರೂಪಾನ್ಪ್ರತಿಮುಚ್ಯ ಕಾಂಚನಾನ್। ಅಕ್ಷಾನ್ಸ ಕಕ್ಷೇ ಪರಿಗೃಹ್ಯ ವಾಸಸಾ।।
ವೈಶಂಪಾಯನನು ಹೇಳಿದನು: “ಅನಂತರ ಮೊದಲು ವೈಡೂರ್ಯರೂಪದ ಚಿನ್ನದ ದಾಳಗಳನ್ನು ವಸ್ತ್ರದಲ್ಲಿ ಕಟ್ಟಿ ಕಂಕುಳಲ್ಲಿ ಇಟ್ಟುಕೊಂಡು ರಾಜ ಯುಧಿಷ್ಠಿರನು ಸಭೆಯಲ್ಲಿ ಕುಳಿತಿದ್ದ ವಿರಾಟನ ಬಳಿ ಬಂದನು.
04006002a ನರಾಧಿಪೋ ರಾಷ್ಟ್ರಪತಿಂ ಯಶಸ್ವಿನಂ। ಮಹಾಯಶಾಃ ಕೌರವವಂಶವರ್ಧನಃ।
04006002c ಮಹಾನುಭಾವೋ ನರರಾಜಸತ್ಕೃತೋ। ದುರಾಸದಸ್ತೀಕ್ಷ್ಣವಿಷೋ ಯಥೋರಗಃ।।
ಆ ನರಾಧಿಪ, ರಾಷ್ಟ್ರಪತಿ, ಯಶಸ್ವಿನಿ, ಮಹಾಯಶ, ಕೌರವವಂಶವರ್ಧನ, ಮಹಾನುಭಾವ, ನರರಾಜಸತ್ಕೃತನು ಜಯಿಸಲಸಾಧ್ಯ ತೀಕ್ಷ್ಣವಿಷದ ಸರ್ಪದಂತಿದ್ದನು.
04006003a ಬಲೇನ ರೂಪೇಣ ನರರ್ಷಭೋ ಮಹಾನ್। ಅಥಾರ್ಚಿರೂಪೇಣ ಯಥಾಮರಸ್ತಥಾ।
04006003c ಮಹಾಭ್ರಜಾಲೈರಿವ ಸಂವೃತೋ ರವಿಃ। ಯಥಾನಲೋ ಭಸ್ಮವೃತಶ್ಚ ವೀರ್ಯವಾನ್।।
ಅಮರರಂತೆ ಬಲದಲ್ಲಿ ವೀರ್ಯವಂತನೂ, ರೂಪದಲ್ಲಿ ಕಾಂತಿಯುಕ್ತನೂ ಆಗಿದ್ದ ಆ ಮಹಾ ನರರ್ಷಭನು ಭಾರಿ ಮೋಡಗಳಿಂದ ಆವೃತ ಸೂರ್ಯನಂತೆ ಮತ್ತು ಬೂದಿಮುಚ್ಚಿದ ಕೆಂಡದಂತಿದ್ದನು.
04006004a ತಮಾಪತಂತಂ ಪ್ರಸಮೀಕ್ಷ್ಯ ಪಾಂಡವಂ। ವಿರಾಟರಾಡಿಂದುಮಿವಾಭ್ರಸಂವೃತಂ।
04006004c ಮಂತ್ರಿದ್ವಿಜಾನ್ಸೂತಮುಖಾನ್ವಿಶಸ್ತಥಾ। ಯೇ ಚಾಪಿ ಕೇ ಚಿತ್ಪರಿಷತ್ಸಮಾಸತೇ।।
04006004e ಪಪ್ರಚ್ಛ ಕೋಽಯಂ ಪ್ರಥಮಂ ಸಮೇಯಿವಾನ್। ಅನೇನ ಯೋಽಯಂ ಪ್ರಸಮೀಕ್ಷತೇ ಸಭಾಂ।।
ಮೋಡಮುಸುಕಿದ ಚಂದ್ರನಂತೆ ಹತ್ತಿರ ಬರುತ್ತಿದ್ದ ಆ ಪಾಂಡವನನ್ನು ಕಂಡು “ಮೊದಲಬಾರಿ ಸಭೆಯಲ್ಲಿ ತೋರಿಸಿಕೊಂಡ ಇವನು ಯಾರು?” ಎಂದು ಸಭೆಯಲ್ಲಿ ಕುಳಿತಿದ್ದ ಮಂತ್ರಿದ್ವಿಜರನ್ನು, ಸೂತಮುಖ್ಯರನ್ನು ಮತ್ತು ಇತರ ಸಭಾಸದರನ್ನು ಕೇಳಿದನು.
04006005a ನ ತು ದ್ವಿಜೋಽಯಂ ಭವಿತಾ ನರೋತ್ತಮಃ। ಪತಿಃ ಪೃಥಿವ್ಯಾ ಇತಿ ಮೇ ಮನೋಗತಂ।
04006005c ನ ಚಾಸ್ಯ ದಾಸೋ ನ ರಥೋ ನ ಕುಂಡಲೇ। ಸಮೀಪತೋ ಭ್ರಾಜತಿ ಚಾಯಮಿಂದ್ರವತ್।।
“ಈ ನರೋತ್ತಮನು ದ್ವಿಜನಿರಲಾರ. ಇವನು ರಾಜನೆಂದು ನನ್ನ ಅಭಿಪ್ರಾಯ. ಆದರೂ ಇವನಲ್ಲಿ ದಾಸರಿಲ್ಲ, ರಥವಿಲ್ಲ, ಕುಂಡಲಗಳಿಲ್ಲ! ಆದರೆ ಇವನು ಇಂದ್ರನಂತೆ ಹೊಳೆಯುತ್ತಿದ್ದಾನೆ.
04006006a ಶರೀರಲಿಂಗೈರುಪಸೂಚಿತೋ ಹ್ಯಯಂ। ಮೂರ್ಧಾಭಿಷಿಕ್ತೋಽಯಮಿತೀವ ಮಾನಸಂ।
04006006c ಸಮೀಪಮಾಯಾತಿ ಚ ಮೇ ಗತವ್ಯಥೋ। ಯಥಾ ಗಜಸ್ತಾಮರಸೀಂ ಮದೋತ್ಕಟಃ।।
ಇವನು ಮೂರ್ಧಾಭಿಷಿಕ್ತನಾಗಿದ್ದಾನೆಂದು ಇವನ ಶರೀರ ಲಕ್ಷಣಗಳು ನನ್ನ ಮನಸ್ಸಿಗೆ ಸೂಚಿಸುತ್ತಿವೆ. ಮದೋತ್ಕಟ ಆನೆಯು ತಾವರೆಕೊಳಕ್ಕೆ ಬರುವಂತೆ ಇವನು ನಿಶ್ಚಿಂತನಾಗಿ ನನ್ನ ಕಡೆ ಬರುತ್ತಿದ್ದಾನೆ! ”
04006007a ವಿತರ್ಕಯಂತಂ ತು ನರರ್ಷಭಸ್ತದಾ। ಯುಧಿಷ್ಠಿರೋಽಭ್ಯೇತ್ಯ ವಿರಾಟಮಬ್ರವೀತ್।
04006007c ಸಮ್ರಾಡ್ವಿಜಾನಾತ್ವಿಹ ಜೀವಿತಾರ್ಥಿನಂ। ವಿನಷ್ಟಸರ್ವಸ್ವಮುಪಾಗತಂ ದ್ವಿಜಂ।।
ಆಗ ಆ ನರರ್ಷಭ ಯುದಿಷ್ಠಿರನು ಹೀಗೆ ತರ್ಕಿಸುತ್ತಿರುವ ವಿರಾಟನಿಗೆ ಹೇಳಿದನು: “ಸಾಮ್ರಾಟ! ಸರ್ವವನ್ನೂ ಕಳೆದುಕೊಂಡು ಜೀವಿತಾರ್ಥಿಯಾಗಿ ಬಂದಿರುವ ದ್ವಿಜನೆಂದು ತಿಳಿ!
04006008a ಇಹಾಹಮಿಚ್ಛಾಮಿ ತವಾನಘಾಂತಿಕೇ। ವಸ್ತುಂ ಯಥಾ ಕಾಮಚರಸ್ತಥಾ ವಿಭೋ।
04006008c ತಮಬ್ರವೀತ್ಸ್ವಾಗತಮಿತ್ಯನಂತರಂ। ರಾಜಾ ಪ್ರಹೃಷ್ಟಃ ಪ್ರತಿಸಂಗೃಹಾಣ ಚ।।
ವಿಭೋ! ಅನಘ! ಸ್ವತಂತ್ರವಾಗಿ ಇಲ್ಲಿ ನಿನ್ನಲ್ಲಿ ವಾಸಿಸಬಯಸುತ್ತೇನೆ!” ಅನಂತರ ಸಂತೋಷಗೊಂಡ ರಾಜನು “ಸ್ವಾಗತ!” ಎಂದು ಹೇಳಿ ಅವನನ್ನು ಪರಿಗ್ರಹಿಸಿದನು.
04006009a ಕಾಮೇನ ತಾತಾಭಿವದಾಮ್ಯಹಂ ತ್ವಾಂ। ಕಸ್ಯಾಸಿ ರಾಜ್ಞೋ ವಿಷಯಾದಿಹಾಗತಃ।
04006009c ಗೋತ್ರಂ ಚ ನಾಮಾಪಿ ಚ ಶಂಸ ತತ್ತ್ವತಃ। ಕಿಂ ಚಾಪಿ ಶಿಲ್ಪಂ ತವ ವಿದ್ಯತೇ ಕೃತಂ।।
“ಮಗೂ! ಪ್ರೀತಿಯಿಂದ ನಾನು ನಿನ್ನನ್ನು ಕೇಳುತ್ತಿದ್ದೇನೆ - ಯಾವ ರಾಜನ ನಾಡಿನಿಂದ ನೀನು ಇಲ್ಲಿಗೆ ಬಂದಿದ್ದೀಯೆ? ನಿನ್ನ ನಿಜವಾದ ಗೋತ್ರವನ್ನೂ ಹೆಸರನ್ನೂ, ಮತ್ತು ನೀನು ಮಾಡಲು ಯಾವ ಉದ್ಯೋಗವನ್ನು ಬಲ್ಲೆ ಎನ್ನುವುದನ್ನೂ ಹೇಳು.”
04006010 ಯುಧಿಷ್ಠಿರ ಉವಾಚ।
04006010a ಯುಧಿಷ್ಠಿರಸ್ಯಾಸಮಹಂ ಪುರಾ ಸಖಾ। ವೈಯಾಘ್ರಪದ್ಯಃ ಪುನರಸ್ಮಿ ಬ್ರಾಹ್ಮಣಃ।
04006010c ಅಕ್ಷಾನ್ಪ್ರವಪ್ತುಂ ಕುಶಲೋಽಸ್ಮಿ ದೇವಿತಾ। ಕಂಕೇತಿ ನಾಮ್ನಾಸ್ಮಿ ವಿರಾಟ ವಿಶ್ರುತಃ।।
ಯುಧಿಷ್ಠಿರನು ಹೇಳಿದನು: “ಹಿಂದೆ ನಾನು ಯುಧಿಷ್ಠಿರನ ಸಖನಾಗಿದ್ದೆ. ಮತ್ತು ವೈಯಾಘ್ರಪದ ಗೋತ್ರದ ಬ್ರಾಹ್ಮಣ. ಜೂಜಿನಲ್ಲಿ ದಾಳಗಳನ್ನು ಎಸೆಯುವುದರಲ್ಲಿ ಪರಿಣಿತನಾಗಿದ್ದೇನೆ. ವಿರಾಟ! ಕಂಕ ಎಂಬ ಹೆಸರಿನಿಂದ ಕರೆಯಲ್ಪಡುತ್ತೇನೆ.”
04006011 ವಿರಾಟ ಉವಾಚ।
04006011a ದದಾಮಿ ತೇ ಹಂತ ವರಂ ಯಮಿಚ್ಛಸಿ। ಪ್ರಶಾಧಿ ಮತ್ಸ್ಯಾನ್ವಶಗೋ ಹ್ಯಹಂ ತವ।
04006011c ಪ್ರಿಯಾ ಹಿ ಧೂರ್ತಾ ಮಮ ದೇವಿನಃ ಸದಾ। ಭವಾಂಶ್ಚ ದೇವೋಪಮ ರಾಜ್ಯಮರ್ಹತಿ।।
ವಿರಾಟನು ಹೇಳಿದನು: “ಅಯ್ಯಾ! ನೀನು ಬಯಸಿದ ವರವನ್ನು ನಿನಗೆ ಕೊಡುತ್ತೇನೆ. ನಾನು ನಿನ್ನ ವಶನಾಗಿದ್ದೇನೆ. ಮತ್ಸ್ಯರನ್ನು ಆಳು! ಧೂರ್ತ ಜೂಜುಕೋರರು ನನಗೆ ಯಾವಾಗಲೂ ಪ್ರಿಯರು. ದೇವಸದೃಶನಾದ ನೀನು ರಾಜ್ಯಕ್ಕೆ ಅರ್ಹನಾಗಿದ್ದೀಯೆ!”
04006012 ಯುಧಿಷ್ಠಿರ ಉವಾಚ।
04006012a ಆಪ್ತೋ ವಿವಾದಃ ಪರಮೋ ವಿಶಾಂ ಪತೇ। ನ ವಿದ್ಯತೇ ಕಿಂ ಚನ ಮತ್ಸ್ಯ ಹೀನತಃ।
04006012c ನ ಮೇ ಜಿತಃ ಕಶ್ಚನ ಧಾರಯೇದ್ಧನಂ। ವರೋ ಮಮೈಷೋಽಸ್ತು ತವ ಪ್ರಸಾದತಃ।।
ಯುಧಿಷ್ಠಿರನು ಹೇಳಿದನು: “ವಿಶಾಂಪತೇ! ನನ್ನಿಂದ ಸೋತವನು ನನ್ನೊಂದಿಗೆ ಎಂದೂ ಜಗಳವಾಡಬಾರದು ಮುತ್ತು ಗೆದ್ದವನು ಎಂದೂ ನನ್ನಿಂದ ಪಣವನ್ನು ಕೇಳಬಾರದು! ನಿನ್ನ ಕೃಪೆಯಿಂದ ಈ ವರವು ನನ್ನದಾಗಲಿ!”
04006013 ವಿರಾಟ ಉವಾಚ।
04006013a ಹನ್ಯಾಮವಧ್ಯಂ ಯದಿ ತೇಽಪ್ರಿಯಂ ಚರೇತ್। ಪ್ರವ್ರಾಜಯೇಯಂ ವಿಷಯಾದ್ದ್ವಿಜಾಂಸ್ತಥಾ।
04006013c ಶೃಣ್ವಂತು ಮೇ ಜಾನಪದಾಃ ಸಮಾಗತಾಃ। ಕಂಕೋ ಯಥಾಹಂ ವಿಷಯೇ ಪ್ರಭುಸ್ತಥಾ।।
ವಿರಾಟನು ಹೇಳಿದನು: ನಿನಗೆ ಅಪ್ರಿಯವಾಗಿ ನಡೆದುಕೊಂಡವರನ್ನು ಅವಧ್ಯರಾಗಿದ್ದರೂ ಕೊಲ್ಲುತ್ತೇನೆ! ಅಥವಾ ಅಂಥಹ ದ್ವಿಜರನ್ನು ದೇಶದ ಹೊರಹಾಕುತ್ತೇನೆ! ಇಲ್ಲಿ ನೆರೆದಿರುವ ಪ್ರಜೆಗಳೆಲ್ಲರೂ ಕೇಳಿಸಿಕೊಳ್ಳಿ! ನಾನು ಈ ದೇಶಕ್ಕೆ ಹೇಗೋ ಹಾಗೆ ಈ ಕಂಕನೂ ಪ್ರಭು!
04006014a ಸಮಾನಯಾನೋ ಭವಿತಾಸಿ ಮೇ ಸಖಾ। ಪ್ರಭೂತವಸ್ತ್ರೋ ಬಹುಪಾನಭೋಜನಃ।
04006014c ಪಶ್ಯೇಸ್ತ್ವಮಂತಶ್ಚ ಬಹಿಶ್ಚ ಸರ್ವದಾ। ಕೃತಂ ಚ ತೇ ದ್ವಾರಮಪಾವೃತಂ ಮಯಾ।।
ನನ್ನ ಸಖನಾಗಿದ್ದು ವಾಹನಗಳಿಗೂ, ಉತ್ತಮ ವಸ್ತ್ರಗಳಿಗೂ, ಬಹಳಷ್ಟು ಪಾನ ಭೋಜನಗಳಿಗೂ ನೀನು ನನ್ನ ಸರಿಸಮನಾಗಿರುವೆ. ಯಾವಾಗಲೂ ನೀನು ನನ್ನ ಒಳಗಿನ ಮತ್ತು ಹೊರಗಿನ ವ್ಯವಹಾರಗಳಿಗೆ ಸಾಕ್ಷಿಯಾಗಿರುವೆ. ನಿನಗೆ ನನ್ನ ದ್ವಾರವು ತೆರೆದಿದೆ.
04006015a ಯೇ ತ್ವಾನುವಾದೇಯುರವೃತ್ತಿಕರ್ಶಿತಾ। ಬ್ರೂಯಾಶ್ಚ ತೇಷಾಂ ವಚನೇನ ಮೇ ಸದಾ।
04006015c ದಾಸ್ಯಾಮಿ ಸರ್ವಂ ತದಹಂ ನ ಸಂಶಯೋ। ನ ತೇ ಭಯಂ ವಿದ್ಯತಿ ಸನ್ನಿಧೌ ಮಮ।।
ಏನೂ ಮಾಡದೆಯೂ ತೊಂದರೆಗೊಳಗಾದವರು ನಿನ್ನಲ್ಲಿ ಹೇಳಿಕೊಂಡರೆ ಆ ಮಾತುಗಳನ್ನು ನನಗೆ ಯಾವಗಲೂ ನೀನು ಹೇಳಬೇಕು. ಆಗ ನಾನು ಎಲ್ಲವನ್ನೂ ಕೊಡುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲದಿರಲಿ. ನನ್ನ ಸನ್ನಿಧಿಯಲ್ಲಿ ನಿನಗೆ ಭಯವೆನ್ನುವುದಿರುವುದಿಲ್ಲ.””
04006016 ವೈಶಂಪಾಯನ ಉವಾಚ।
04006016a ಏವಂ ಸ ಲಬ್ಧ್ವಾ ತು ವರಂ ಸಮಾಗಮಂ। ವಿರಾಟರಾಜೇನ ನರರ್ಷಭಸ್ತದಾ।
04006016c ಉವಾಸ ವೀರಃ ಪರಮಾರ್ಚಿತಃ ಸುಖೀ। ನ ಚಾಪಿ ಕಶ್ಚಿಚ್ಚರಿತಂ ಬುಬೋಧ ತತ್।।
ವೈಶಂಪಾಯನನು ಹೇಳಿದನು: “ಹೀಗೆ ಆ ವೀರ ನರರ್ಷಭನು ವಿರಾಟರಾಜನನ್ನು ಸೇರಿ ವರವನ್ನು ಪಡೆದು ಪರಮ ಗೌರವದಿಂದ ಸುಖಿಯಾಗಿ ವಾಸಿಸಿದನು. ಅವನ ಕುರಿತು ಯಾರಿಗೂ ಏನೂ ತಿಳಿಯಲಿಲ್ಲ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಪುರಪ್ರವೇಶೇ ಯುಧಿಷ್ಠಿರಪ್ರವೇಶೋ ನಾಮ ಷಷ್ಠೋಽಧ್ಯಾಯಃ।।
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಪುರಪ್ರವೇಶದಲ್ಲಿ ಯುಧಿಷ್ಠಿರಪ್ರವೇಶವೆನ್ನುವ ಆರನೆಯ ಅಧ್ಯಾಯವು.