005 ಪುರಪ್ರವೇಶೇ ಅಸ್ತ್ರಸಂಸ್ಥಾಪನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ವೈರಾಟ ಪರ್ವ

ಅಧ್ಯಾಯ 5

ಸಾರ

ಪಾಂಡವರು ವಿರಾಟನಗರದ ಬಳಿ ತಲುಪಿದುದು (1-8). ತಮ್ಮ ತಮ್ಮ ಆಯುಧಗಳನ್ನು ಇಳಿಸಿ, ಒಟ್ಟಿಗೇ ಕಟ್ಟಿ, ನಗರದ ಹೊರಗಿನ ಶ್ಮಶಾನದ ಸಮೀಪದಲ್ಲಿದ್ದ ಶಮೀವೃಕ್ಷದ ಮೇಲಿರಿಸಿ, ಮರದ ರೆಂಬೆಗೆ ಒಂದು ಶವವನ್ನು ನೇತುಹಾಕಿಸಿ ಪಾಂಡವರು ವಿರಾಟನಗರವನ್ನು ಪ್ರವೇಶಿಸಿದುದು (9-31).

04005001 ವೈಶಂಪಾಯನ ಉವಾಚ।
04005001a ತೇ ವೀರಾ ಬದ್ಧನಿಸ್ತ್ರಿಂಶಾಸ್ತತಾಯುಧಕಲಾಪಿನಃ।
04005001c ಬದ್ಧಗೋಧಾಂಗುಲಿತ್ರಾಣಾಃ ಕಾಲಿಂದೀಮಭಿತೋ ಯಯುಃ।।

ವೈಶಂಪಾಯನನು ಹೇಳಿದನು: “ಆ ವೀರರು ಖಡ್ಗಗಳನ್ನು ಬಿಗಿದು, ಆಯುಧಧಾರಿಗಳಾಗಿ, ತೋಳ್ಬಂದಿ ಮತ್ತು ಬೆರಳು ಬಂದಿಗಳನ್ನು ಕಟ್ಟಿಕೊಂಡು ಕಾಲಿಂದೀ ನದಿಯೆಡೆಗೆ ನಡೆದರು.

04005002a ತತಸ್ತೇ ದಕ್ಷಿಣಂ ತೀರಮನ್ವಗಚ್ಛನ್ಪದಾತಯಃ।
04005002c ವಸಂತೋ ಗಿರಿದುರ್ಗೇಷು ವನದುರ್ಗೇಷು ಧನ್ವಿನಃ।।

ನಂತರ ಆ ಧನ್ವಿಗಳು ಗಿರಿದುರ್ಗ ವನದುರ್ಗಗಳಲ್ಲಿ ತಂಗುತ್ತಾ ಕಾಲ್ನಡುಗೆಯಲ್ಲಿ ದಕ್ಷಿಣ ತೀರಕ್ಕೆ ಸಾಗಿದರು.

04005003a ವಿಧ್ಯಂತೋ ಮೃಗಜಾತಾನಿ ಮಹೇಷ್ವಾಸಾ ಮಹಾಬಲಾಃ।
04005003c ಉತ್ತರೇಣ ದಶಾರ್ಣಾಂಸ್ತೇ ಪಾಂಚಾಲಾನ್ದಕ್ಷಿಣೇನ ತು।।
04005004a ಅಂತರೇಣ ಯಕೃಲ್ಲೋಮಾಂ ಶೂರಸೇನಾಂಶ್ಚ ಪಾಂಡವಾಃ।
04005004c ಲುಬ್ಧಾ ಬ್ರುವಾಣಾ ಮತ್ಸ್ಯಸ್ಯ ವಿಷಯಂ ಪ್ರಾವಿಶನ್ವನಾತ್।।

ಆ ಮಹೇಷ್ವಾಸ ಮಹಾಬಲ ಪಾಂಡವರು ಮೃಗಗಳನ್ನು ಬೇಟೆಯಾಡುತ್ತಾ ಉತ್ತರದಲ್ಲಿ ದಶಾರ್ಣ ಮತ್ತು ದಕ್ಷಿಣದಲ್ಲಿ ಪಾಂಚಾಲಗಳ ಮಧ್ಯೆ ಯಕೃಲ್ಲೋಮ ಶೂರಸೇನಗಳ ಮೂಲಕ, ಬೇಡರೆಂದು ಹೇಳಿಕೊಳ್ಳುತ್ತಾ, ಕಾಡಿನ ಕಡೆಯಿಂದ ಮತ್ಸ್ಯದೇಶವನ್ನು ಪ್ರವೇಶಿಸಿದರು.

04005005a ತತೋ ಜನಪದಂ ಪ್ರಾಪ್ಯ ಕೃಷ್ಣಾ ರಾಜಾನಮಬ್ರವೀತ್।
04005005c ಪಶ್ಯೈಕಪದ್ಯೋ ದೃಶ್ಯಂತೇ ಕ್ಷೇತ್ರಾಣಿ ವಿವಿಧಾನಿ ಚ।।

ಜನಪದವನ್ನು ಸೇರಿದ ನಂತರ ಕೃಷ್ಣೆಯು ರಾಜನಿಗೆ ಹೇಳಿದಳು: “ಒಂದು ಕಾಲುದಾರಿಯೂ ಹಲವಾರು ಹೊಲಗದ್ದೆಗಳೂ ಕಾಣುತ್ತಿವೆ. ನೋಡು!

04005006a ವ್ಯಕ್ತಂ ದೂರೇ ವಿರಾಟಸ್ಯ ರಾಜಧಾನೀ ಭವಿಷ್ಯತಿ।
04005006c ವಸಾಮೇಹ ಪರಾಂ ರಾತ್ರಿಂ ಬಲವಾನ್ಮೇ ಪರಿಶ್ರಮಃ।।

ವಿರಾಟನ ರಾಜಧಾನಿಯು ಇನ್ನೂ ದೂರದಲ್ಲಿದೆ ಎಂದು ತೋರುತ್ತದೆ. ಬಲವಾನ್! ಇನ್ನೊಂದು ರಾತ್ರಿಯನ್ನು ಇಲ್ಲಿಯೇ ಕಳೆಯೋಣ. ನನಗೆ ಆಯಾಸವಾಗುತ್ತಿದೆ. ”

04005007 ಯುಧಿಷ್ಠಿರ ಉವಾಚ।
04005007a ಧನಂಜಯ ಸಮುದ್ಯಮ್ಯ ಪಾಂಚಾಲೀಂ ವಹ ಭಾರತ।
04005007c ರಾಜಧಾನ್ಯಾಂ ನಿವತ್ಸ್ಯಾಮೋ ವಿಮುಕ್ತಾಶ್ಚ ವನಾದಿತಃ।।

ಯುಧಿಷ್ಠಿರನು ಹೇಳಿದನು: “ಭಾರತ! ಧನಂಜಯ! ಪಾಂಚಾಲಿಯನ್ನು ಎತ್ತಿಕೊಂಡು ನಡೆ! ಕಾಡನ್ನು ದಾಟಿ ರಾಜಧಾನಿಯಲ್ಲಿಯೇ ತಂಗೋಣ!””

04005008 ವೈಶಂಪಾಯನ ಉವಾಚ।
04005008a ತಾಮಾದಾಯಾರ್ಜುನಸ್ತೂರ್ಣಂ ದ್ರೌಪದೀಂ ಗಜರಾಡಿವ।
04005008c ಸಂಪ್ರಾಪ್ಯ ನಗರಾಭ್ಯಾಶಮವತಾರಯದರ್ಜುನಃ।।

ವೈಶಂಪಾಯನನು ಹೇಳಿದನು: “ಅರ್ಜುನನು ಗಜರಾಜನಂತೆ ದ್ರೌಪದಿಯನ್ನು ಎತ್ತಿಕೊಂಡು ನಗರವನ್ನು ತಲುಪಿ ಅವಳನ್ನು ಕೆಳಗಿಳಿಸಿದನು.

04005009a ಸ ರಾಜಧಾನೀಂ ಸಂಪ್ರಾಪ್ಯ ಕೌಂತೇಯೋಽರ್ಜುನಮಬ್ರವೀತ್।
04005009c ಕ್ವಾಯುಧಾನಿ ಸಮಾಸಜ್ಯ ಪ್ರವೇಕ್ಷ್ಯಾಮಃ ಪುರಂ ವಯಂ।।

ರಾಜಧಾನಿಯನ್ನು ತಲುಪಿ ಕೌಂತೇಯನು ಅರ್ಜುನನಿಗೆ ಹೇಳಿದನು: “ಆಯುಧಗಳನ್ನು ನಾವು ಎಲ್ಲಿರಿಸಿ ಪುರವನ್ನು ಪ್ರವೇಶಿಸೋಣ?

04005010a ಸಾಯುಧಾಶ್ಚ ವಯಂ ತಾತ ಪ್ರವೇಕ್ಷ್ಯಾಮಃ ಪುರಂ ಯದಿ।
04005010c ಸಮುದ್ವೇಗಂ ಜನಸ್ಯಾಸ್ಯ ಕರಿಷ್ಯಾಮೋ ನ ಸಂಶಯಃ।।

ಮಗೂ! ಆಯುಧಗಳೊಂದಿಗೆ ನಾವು ಪುರವನ್ನು ಪ್ರವೇಶಿಸಿದರೆ ಜನರಲ್ಲಿ ಉದ್ವೇಗವನ್ನುಂಟುಮಾಡುತ್ತೇವೆ ಎನ್ನುವುದರಲ್ಲಿ ಸಂಶಯವಿಲ್ಲ.

04005011a ತತೋ ದ್ವಾದಶ ವರ್ಷಾಣಿ ಪ್ರವೇಷ್ಟವ್ಯಂ ವನಂ ಪುನಃ।
04005011c ಏಕಸ್ಮಿನ್ನಪಿ ವಿಜ್ಞಾತೇ ಪ್ರತಿಜ್ಞಾತಂ ಹಿ ನಸ್ತಥಾ।।

ನಮ್ಮವರಲ್ಲಿ ಒಬ್ಬರಾದರೂ ಗುರುತಿಸಲ್ಪಟ್ಟರು ಎಂದರೆ ಪುನಃ ಹನ್ನೆರಡು ವರ್ಷಗಳ ವನವಾಸವನ್ನು ಪ್ರವೇಶಿಸುತ್ತೇವೆ ಎಂದು ಪ್ರತಿಜ್ಞೆಯನ್ನೇ ಮಾಡಿಲ್ಲವೇ?”

04005012 ಅರ್ಜುನ ಉವಾಚ।
04005012a ಇಯಂ ಕೂಟೇ ಮನುಷ್ಯೇಂದ್ರ ಗಹನಾ ಮಹತೀ ಶಮೀ।
04005012c ಭೀಮಶಾಖಾ ದುರಾರೋಹಾ ಶ್ಮಶಾನಸ್ಯ ಸಮೀಪತಃ।।

ಅರ್ಜುನನು ಹೇಳಿದನು: “ಮನುಷ್ಯೇಂದ್ರ! ಈ ದುರಾರೋಹ ಶ್ಮಶಾನದ ಸಮೀಪದಲ್ಲಿಯೇ ಗುಡ್ಡದ ಮೇಲೆ ದಟ್ಟವಾದ ವಿಶಾಲ ರೆಂಭೆಗಳನ್ನುಳ್ಳ ದೊಡ್ಡ ಶಮೀ ವೃಕ್ಷವಿದೆ.

04005013a ನ ಚಾಪಿ ವಿದ್ಯತೇ ಕಶ್ಚಿನ್ಮನುಷ್ಯ ಇಹ ಪಾರ್ಥಿವ।
04005013c ಉತ್ಪಥೇ ಹಿ ವನೇ ಜಾತಾ ಮೃಗವ್ಯಾಲನಿಷೇವಿತೇ।।

ಪಾರ್ಥಿವ! ಮೃಗಸರ್ಪಗಳಿಂದ ಕೂಡಿದ ಕಾಡಿನ ದಾರಿಯಲ್ಲಿರುವ ಈ ಮರದ ಬಳಿ ಯಾವ ಮನುಷ್ಯರ ಸುಳಿಯೂ ಕಾಣುತ್ತಿಲ್ಲ.

04005014a ಸಮಾಸಜ್ಯಾಯುಧಾನ್ಯಸ್ಯಾಂ ಗಚ್ಛಾಮೋ ನಗರಂ ಪ್ರತಿ।
04005014c ಏವಮತ್ರ ಯಥಾಜೋಷಂ ವಿಹರಿಷ್ಯಾಮ ಭಾರತ।।

ಭಾರತ! ಆಯುಧಗಳನ್ನು ಇದರಲ್ಲಿ ಕಟ್ಟಿಟ್ಟು ನಾವು ನಗರಕ್ಕೆ ಹೋಗೋಣ. ಅಲ್ಲಿ ನಾವು ಬೇಕಾದಷ್ಟು ಸಮಯ ಇರಬಹುದು.””

04005015 ವೈಶಂಪಾಯನ ಉವಾಚ।
04005015a ಏವಮುಕ್ತ್ವಾ ಸ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಂ।
04005015c ಪ್ರಚಕ್ರಮೇ ನಿಧಾನಾಯ ಶಸ್ತ್ರಾಣಾಂ ಭರತರ್ಷಭ।।

ವೈಶಂಪಾಯನನು ಹೇಳಿದನು: “ಭರತರ್ಷಭ! ಧರ್ಮಾತ್ಮ ಯುಧಿಷ್ಠಿರನಿಗೆ ಈ ರೀತಿ ಹೇಳಿ ಅವನು ಶಸ್ತ್ರಗಳನ್ನು ಇರಿಸಲು ಹೊರಟನು.

04005016a ಯೇನ ದೇವಾನ್ಮನುಷ್ಯಾಂಶ್ಚ ಸರ್ಪಾಂಶ್ಚೈಕರಥೋಽಜಯತ್।
04005016c ಸ್ಫೀತಾಂಜನಪದಾಂಶ್ಚಾನ್ಯಾನಜಯತ್ಕುರುನಂದನಃ।।
04005017a ತದುದಾರಂ ಮಹಾಘೋಷಂ ಸಪತ್ನಗಣಸೂದನಂ।
04005017c ಅಪಜ್ಯಮಕರೋತ್ಪಾರ್ಥೋ ಗಾಂಡೀವಮಭಯಂಕರಂ।।

ಯಾವುದರಿಂದ ದೇವ-ಮನುಷ್ಯ-ಸರ್ಪಗಳನ್ನೂ, ಅನೇಕ ಜನಪದಗಳನ್ನೂ ಏಕರಥನಾಗಿ ಜಯಿಸಿದನೋ ಆ ಉದಾರ ಮಹಾಘೋಷವನ್ನುಂಟುಮಾಡುವ, ಶತ್ರುಗಣಗಳನ್ನು ಸಂಹರಿಸುವ ಆ ಭಯಂಕರ ಗಾಂಡೀವದ ಹೆದೆಯನ್ನು ಕುರುನಂದನನು ಸಡಿಲಿಸಿದನು.

04005018a ಯೇನ ವೀರಃ ಕುರುಕ್ಷೇತ್ರಮಭ್ಯರಕ್ಷತ್ಪರಂತಪಃ।
04005018c ಅಮುಂಚದ್ಧನುಷಸ್ತಸ್ಯ ಜ್ಯಾಮಕ್ಷಯ್ಯಾಂ ಯುಧಿಷ್ಠಿರಃ।।

ಪರಂತಪ ವೀರ ಯುಧಿಷ್ಠಿರನು ಯಾವುದರಿಂದ ಕುರುಕ್ಷೇತ್ರವನ್ನು ರಕ್ಷಿಸಿದನೋ ಆ ಸವೆಯದ ಧನುಸ್ಸಿನ ಹೆದೆಯನ್ನು ಬಿಚ್ಚಿದನು.

04005019a ಪಾಂಚಾಲಾನ್ಯೇನ ಸಂಗ್ರಾಮೇ ಭೀಮಸೇನೋಽಜಯತ್ಪ್ರಭುಃ।
04005019c ಪ್ರತ್ಯಷೇಧದ್ಬಹೂನೇಕಃ ಸಪತ್ನಾಂಶ್ಚೈವ ದಿಗ್ಜಯೇ।।
04005020a ನಿಶಮ್ಯ ಯಸ್ಯ ವಿಸ್ಫಾರಂ ವ್ಯದ್ರವಂತ ರಣೇ ಪರೇ।
04005020c ಪರ್ವತಸ್ಯೇವ ದೀರ್ಣಸ್ಯ ವಿಸ್ಫೋಟಮಶನೇರಿವ।।
04005021a ಸೈಂಧವಂ ಯೇನ ರಾಜಾನಂ ಪರಾಮೃಷತ ಚಾನಘ।
04005021c ಜ್ಯಾಪಾಶಂ ಧನುಷಸ್ತಸ್ಯ ಭೀಮಸೇನೋಽವತಾರಯತ್।।

ಅನಘ! ಯಾವುದರಿಂದ ಪ್ರಭು ಭೀಮಸೇನನು ಸಂಗ್ರಾಮದಲ್ಲಿ ಪಾಂಚಾಲರನ್ನು ಜಯಿಸಿದ್ದನೋ, ದಿಗ್ವಿಜಯದಲ್ಲಿ ಬಹುಶತ್ರುಗಳನ್ನು ಏಕಾಂಗಿಯಾಗಿ ತಡೆಡಿದ್ದನೋ, ಛೇದಿತ ಪರ್ವತದ ಅಥವಾ ಸಿಡಿಲಿನ ಸ್ಫೋಟದಂತಿದ್ದ ಯಾವುದರ ಠೇಂಕಾರವನ್ನು ಕೇಳಿ ಶತ್ರುಗಳು ರಣದಿಂದ ಓಡಿಹೋಗುತ್ತಿದ್ದರೋ, ಯಾವುದರಿಂದ ರಾಜ ಸೈಂಧವನನ್ನು ಸದೆಬಡಿದಿದ್ದನೋ, ಆ ಬಿಲ್ಲಿನ ಹೆದೆಯನ್ನು ಭೀಮಸೇನನು ಇಳಿಸಿದನು.

04005022a ಅಜಯತ್ಪಶ್ಚಿಮಾಮಾಶಾಂ ಧನುಷಾ ಯೇನ ಪಾಂಡವಃ।
04005022c ತಸ್ಯ ಮೌರ್ವೀಮಪಾಕರ್ಷಚ್ಚೂರಃ ಸಂಕ್ರಂದನೋ ಯುಧಿ।।

ಯಾವುದರಿಂದ ಪಶ್ಚಿಮ ದಿಕ್ಕನ್ನು ಗೆದ್ದಿದ್ದನೋ, ಯಾವುದನ್ನು ಎಳೆದು ಯುದ್ಧದಲ್ಲಿ ಅರಿಗಳನ್ನು ಗೋಳಾಡಿಸಿದ್ದನೋ ಆ ಬಿಲ್ಲಿನ ಹೆದೆಯನ್ನು ಪಾಂಡವನು ಸಡಿಸಿಲಿದನು.

04005023a ದಕ್ಷಿಣಾಂ ದಕ್ಷಿಣಾಚಾರೋ ದಿಶಂ ಯೇನಾಜಯತ್ಪ್ರಭುಃ।
04005023c ಅಪಜ್ಯಮಕರೋದ್ವೀರಃ ಸಹದೇವಸ್ತದಾಯುಧಂ।।

ವೀರ, ದಾಕ್ಷಿಣ್ಯಶೀಲ ಪ್ರಭು ಸಹದೇವನು ದಕ್ಷಿಣ ದಿಕ್ಕನ್ನು ಜಯಿಸಿದ ಆಯುಧದ ಹೆದೆಯನ್ನು ಬಿಚ್ಚಿದನು.

04005024a ಖಡ್ಗಾಂಶ್ಚ ಪೀತಾನ್ದೀರ್ಘಾಂಶ್ಚ ಕಲಾಪಾಂಶ್ಚ ಮಹಾಧನಾನ್।
04005024c ವಿಪಾಠಾನ್ ಕ್ಷುರಧಾರಾಂಶ್ಚ ಧನುರ್ಭಿರ್ನಿದಧುಃ ಸಹ।।

ಹೊಂಬಣ್ಣದ ನೀಳ ಖಡ್ಗಗಳನ್ನೂ, ಬಹುಬೆಲೆಯ ಭತ್ತಳಿಕೆಗಳನ್ನೂ, ಚೂಪಾದ ಮೊನೆಯ ಬಾಣಗಳನ್ನೂ, ಬಿಲ್ಲುಗಳೊಡನೆ ಇರಿಸಿದರು.

04005025a ತಾಮುಪಾರುಹ್ಯ ನಕುಲೋ ಧನೂಂಷಿ ನಿದಧತ್ಸ್ವಯಂ।
04005025c ಯಾನಿ ತಸ್ಯಾವಕಾಶಾನಿ ದೃಢರೂಪಾಣ್ಯಮನ್ಯತ।।

ಸ್ವತಃ ನಕುಲನೇ ಆ ಮರವನ್ನು ಹತ್ತಿ ಸುರಕ್ಷಿತವಾಗಿರಲೆಂದು ತಾನು ತಿಳಿದೆಡೆಗಳಲ್ಲಿ ಬಿಲ್ಲುಗಳನ್ನು ಇರಿಸಿದನು.

04005026a ಯತ್ರ ಚಾಪಶ್ಯತ ಸ ವೈ ತಿರೋ ವರ್ಷಾಣಿ ವರ್ಷತಿ।
04005026c ತತ್ರ ತಾನಿ ದೃಢೈಃ ಪಾಶೈಃ ಸುಗಾಢಂ ಪರ್ಯಬಂಧತ।।

ಮಳೆಯ ನೀರಿನಿಂದ ತೋಯುತ್ತದೆಯೆಂದು ಕಂಡುಬಂದಲ್ಲೆಲ್ಲಾ ಅವುಗಳನ್ನು ಗಟ್ಟಿ ಹಗ್ಗಗಳಿಂದ ಬಿಗಿಯಾಗಿ ಕಟ್ಟಿದನು.

04005027a ಶರೀರಂ ಚ ಮೃತಸ್ಯೈಕಂ ಸಮಬಧ್ನಂತ ಪಾಂಡವಾಃ।
04005027c ವಿವರ್ಜಯಿಷ್ಯಂತಿ ನರಾ ದೂರಾದೇವ ಶಮೀಮಿಮಾಂ।।
04005027e ಆಬದ್ಧಂ ಶವಮತ್ರೇತಿ ಗಂಧಮಾಘ್ರಾಯ ಪೂತಿಕಂ।।

ದೂರದಿಂದಲೇ ದುರ್ಗಂಧವನ್ನು ಮೂಸಿ ಇಲ್ಲಿ ಶವವನ್ನು ಕಟ್ಟಿದೆಯೆಂದು ತಿಳಿದು ಮನುಷ್ಯರು ಈ ಶಮೀ ವೃಕ್ಷವನ್ನು ವರ್ಜಿಸುವರೆಂದು ಪಾಂಡವರು ಮೃತಶರೀರವೊಂದನ್ನು ಅದಕ್ಕೆ ಕಟ್ಟಿದರು.

04005028a ಅಶೀತಿಶತವರ್ಷೇಯಂ ಮಾತಾ ನ ಇತಿ ವಾದಿನಃ।
04005028c ಕುಲಧರ್ಮೋಽಯಮಸ್ಮಾಕಂ ಪೂರ್ವೈರಾಚರಿತೋಽಪಿ ಚ।।
04005028e ಸಮಾಸಜಾನಾ ವೃಕ್ಷೇಽಸ್ಮಿನ್ನಿತಿ ವೈ ವ್ಯಾಹರಂತಿ ತೇ।।
04005029a ಆ ಗೋಪಾಲಾವಿಪಾಲೇಭ್ಯ ಆಚಕ್ಷಾಣಾಃ ಪರಂತಪಾಃ।
04005029c ಆಜಗ್ಮುರ್ನಗರಾಭ್ಯಾಶಂ ಪಾರ್ಥಾಃ ಶತ್ರುನಿಬರ್ಹಣಾಃ।।

ದನಕಾಯುವವರು ಮತ್ತು ಕುರಿಕಾಯುವವರು ಕೇಳಿದರೆ “ಇವಳು ನೋರೆಂಭತ್ತು ವರ್ಷಗಳ ನಮ್ಮ ತಾಯಿ. ನಮ್ಮು ಪೂರ್ವಜರು ನಡೆಸಿಕೊಂಡು ಬಂದ ಕುಲಧರ್ಮದಂತೆ ನಾವು ಅವಳ ಶರೀರವನ್ನು ಮರಕ್ಕೆ ತಗುಲಿಹಾಕಿದ್ದೇವೆ” ಎಂದು ಹೇಳುತ್ತಾ, ಆ ಪರಂತಪ, ಶತ್ರುನಾಶಕ ಪಾಂಡವರು ನಗರವನ್ನು ಪ್ರವೇಶಿಸಿದರು.

04005030a ಜಯೋ ಜಯಂತೋ ವಿಜಯೋ ಜಯತ್ಸೇನೋ ಜಯದ್ಬಲಃ।
04005030c ಇತಿ ಗುಹ್ಯಾನಿ ನಾಮಾನಿ ಚಕ್ರೇ ತೇಷಾಂ ಯುಧಿಷ್ಠಿರಃ।।

ಯುಧಿಷ್ಠಿರನು ತಮಗೆ ಜಯ, ಜಯಂತ, ವಿಜಯ, ಜಯತ್ಸೇನ ಮತ್ತು ಜಯದ್ಬಲ ಎಂದು ಗುಪ್ತನಾಮಗಳನ್ನು ಇಟ್ಟುಕೊಂಡನು.

04005031a ತತೋ ಯಥಾಪ್ರತಿಜ್ಞಾಭಿಃ ಪ್ರಾವಿಶನ್ನಗರಂ ಮಹತ್।
04005031c ಅಜ್ಞಾತಚರ್ಯಾಂ ವತ್ಸ್ಯಂತೋ ರಾಷ್ಟ್ರೇ ವರ್ಷಂ ತ್ರಯೋದಶಂ।।

ನಂತರ ಪ್ರತಿಜ್ಞೆಯಂತೆ ಹದಿಮೂರನೆಯ ವರ್ಷದಲ್ಲಿ ಜನರಮಧ್ಯೆ ವೇಷ ಮರೆಯಿಸಿಕೊಂಡು ವಾಸಿಸಲು ಆ ಮಹಾನಗರವನ್ನು ಪ್ರವೇಶಿಸಿದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಪುರಪ್ರವೇಶೇ ಅಸ್ತ್ರಸಂಸ್ಥಾಪನೇ ಪಂಚಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಪುರಪ್ರವೇಶದಲ್ಲಿ ಅಸ್ತ್ರಸಂಸ್ಥಾಪನೆಯೆನ್ನುವ ಐದನೆಯ ಅಧ್ಯಾಯವು.