ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ವೈರಾಟ ಪರ್ವ
ಅಧ್ಯಾಯ 4
ಸಾರ
ರಾಜನ ಅರಮನೆಯಲ್ಲಿ/ಆಸ್ಥಾನದಲ್ಲಿ ಸಾಮಾನ್ಯನಾಗಿ ಹೇಗಿರಬೇಕಾಗುತ್ತದೆ ಎಂದು ಧೌಮ್ಯನು ಪಾಂಡವರಿಗೆ ಉಪದೇಶಿಸುವುದು (1-44). ಅಗ್ನಿಕಾರ್ಯವನ್ನು ಮಾಡಿ ಬ್ರಾಹ್ಮಣರನ್ನು ನಮಸ್ಕರಿಸಿ ಪಾಂಡವರು ಹೊರಟಿದ್ದಿದು (45-49).
04004001 ಯುಧಿಷ್ಠಿರ ಉವಾಚ।
04004001a ಕರ್ಮಾಣ್ಯುಕ್ತಾನಿ ಯುಷ್ಮಾಭಿರ್ಯಾನಿ ತಾನಿ ಕರಿಷ್ಯಥ।
04004001c ಮಮ ಚಾಪಿ ಯಥಾಬುದ್ಧಿ ರುಚಿತಾನಿ ವಿನಿಶ್ಚಯಾತ್।।
ಯುಧಿಷ್ಠಿರನು ಹೇಳಿದನು: “ನೀವು ಹೇಳಿದ ಕೆಲಸಗಳನ್ನೇ ಮಾಡಿ. ನನಗೆ ಕೂಡ ಆಲೋಚಿಸಿದ ಈ ವಿನಿಶ್ಚಯವು ಹಿಡಿಸುತ್ತದೆ.
04004002a ಪುರೋಹಿತೋಽಯಮಸ್ಮಾಕಮಗ್ನಿಹೋತ್ರಾಣಿ ರಕ್ಷತು।
04004002c ಸೂದಪೌರೋಗವೈಃ ಸಾರ್ಧಂ ದ್ರುಪದಸ್ಯ ನಿವೇಶನೇ।।
ಈ ನಮ್ಮ ಪುರೋಹಿತನು ಅಡುಗೆಯವರೊಡನೆ ದ್ರುಪದನ ಅರಮನೆಯನ್ನು ಸೇರಿ ಅಗ್ನಿಹೋತ್ರಗಳನ್ನು ರಕ್ಷಿಸಲಿ.
04004003a ಇಂದ್ರಸೇನಮುಖಾಶ್ಚೇಮೇ ರಥಾನಾದಾಯ ಕೇವಲಾನ್।
04004003c ಯಾಂತು ದ್ವಾರವತೀಂ ಶೀಘ್ರಮಿತಿ ಮೇ ವರ್ತತೇ ಮತಿಃ।।
ಇಂದ್ರಸೇನಮೊದಲಾದವರು ಬರಿದಾದ ರಥಗಳನ್ನು ತೆಗೆದುಕೊಂಡು ಶೀಘ್ರವೇ ದ್ವಾರವತಿಗೆ ಹೋಗಲಿ ಎಂದು ನನಗನ್ನಿಸುತ್ತದೆ.
04004004a ಇಮಾಶ್ಚ ನಾರ್ಯೋ ದ್ರೌಪದ್ಯಾಃ ಸರ್ವಶಃ ಪರಿಚಾರಿಕಾಃ।
04004004c ಪಾಂಚಾಲಾನೇವ ಗಚ್ಛಂತು ಸೂದಪೌರೋಗವೈಃ ಸಹ।।
ದ್ರೌಪದಿಯ ಸರ್ವ ಸ್ತ್ರೀ ಪರಿಚಾರಿಕೆಯರೂ ಸಹ ಅಡುಗೆಯವರೊಂದಿಗೆ ಪಾಂಚಾಲಕ್ಕೇ ಹೋಗಲಿ.
04004005a ಸರ್ವೈರಪಿ ಚ ವಕ್ತವ್ಯಂ ನ ಪ್ರಜ್ಞಾಯಂತ ಪಾಂಡವಾಃ।
04004005c ಗತಾ ಹ್ಯಸ್ಮಾನಪಾಕೀರ್ಯ ಸರ್ವೇ ದ್ವೈತವನಾದಿತಿ।।
ಎಲ್ಲರೂ ಕೂಡ ಪಾಂಡವರು ಎಲ್ಲಿದ್ದಾರೆಂದು ನಮಗೆ ಗೊತ್ತಿಲ್ಲ. ಅವರೆಲ್ಲರೂ ನಮ್ಮನ್ನು ತೊರೆದು ದ್ವೈತವನದಿಂದ ಹೊರಟು ಹೋದರು ಎಂದು ಹೇಳಬೇಕು.”
04004006 ಧೌಮ್ಯ ಉವಾಚ।
04004006a ವಿದಿತೇ ಚಾಪಿ ವಕ್ತವ್ಯಂ ಸುಹೃದ್ಭಿರನುರಾಗತಃ।
04004006c ಅತೋಽಹಮಪಿ ವಕ್ಷ್ಯಾಮಿ ಹೇತುಮಾತ್ರಂ ನಿಬೋಧತ।।
ಧೌಮ್ಯನು ಹೇಳಿದನು: “ತಿಳಿದಿದ್ದರೂ ಸ್ನೇಹಿತರು ಪ್ರೀತಿಯಿಂದ ಹೇಳುತ್ತಾರೆ. ಹಾಗೆ ನಾನು ಕೂಡ ಹೇತುಮಾತ್ರವಾಗಿ ಹೇಳುತ್ತೇನೆ. ತಿಳಿದುಕೊಳ್ಳಿ.
04004007a ಹಂತೇಮಾಂ ರಾಜವಸತಿಂ ರಾಜಪುತ್ರಾ ಬ್ರವೀಮಿ ವಃ।
04004007c ಯಥಾ ರಾಜಕುಲಂ ಪ್ರಾಪ್ಯ ಚರನ್ಪ್ರೇಷ್ಯೋ ನ ರಿಷ್ಯತಿ।।
ರಾಜಪುತ್ರರೇ! ಅರಮನೆಯ ಸೇವಕನಾದವನು ಅರಮನೆಯಲ್ಲಿದ್ದುಕೊಂಡು ವಿಪತ್ತಿಗೀಡಾಗದಂತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ನಿಮಗೆ ಹೇಳುತ್ತೇನೆ.
04004008a ದುರ್ವಸಂ ತ್ವೇವ ಕೌರವ್ಯಾ ಜಾನತಾ ರಾಜವೇಶ್ಮನಿ।
04004008c ಅಮಾನಿತೈಃ ಸುಮಾನಾರ್ಹಾ ಅಜ್ಞಾತೈಃ ಪರಿವತ್ಸರಂ।।
ಸುಮನಾರ್ಹ ಕೌರವರೇ! ನೀವು ಬಲ್ಲವರಿಗೆ ಅಜ್ಞಾತರಾಗಿ ರಾಜಗೃಹದಲ್ಲಿ ಒಂದು ವರ್ಷ ವಾಸ ಮಾಡುವುದು ಕಷ್ಟವೇ ಸರಿ.
04004009a ದಿಷ್ಟದ್ವಾರೋ ಲಭೇದ್ದ್ವಾರಂ ನ ಚ ರಾಜಸು ವಿಶ್ವಸೇತ್।
04004009c ತದೇವಾಸನಮನ್ವಿಚ್ಛೇದ್ಯತ್ರ ನಾಭಿಷಜೇತ್ಪರಃ।।
ಬಾಗಿಲಲ್ಲಿ ಅಪ್ಪಣೆಪಡೆದು ಹೋಗಬೇಕು. ರಾಜನಲ್ಲಿ ವಿಶ್ವಾಸವಿಡಬಾರದು. ಬೇರೆಯವರು ಬಯಸದ ಆಸನವನ್ನೇ ಬಯಸಬೇಕು.
04004010a ನಾಸ್ಯ ಯಾನಂ ನ ಪರ್ಯಂಕಂ ನ ಪೀಠಂ ನ ಗಜಂ ರಥಂ।
04004010c ಆರೋಹೇತ್ಸಮ್ಮತೋಽಸ್ಮೀತಿ ಸ ರಾಜವಸತಿಂ ವಸೇತ್।।
ಅವನಿಗೆ ಸಮ್ಮತನೆಂದು ತಿಳಿದು ಅವನ ವಾಹನವನ್ನಾಗಲೀ, ಹಾಸಿಗೆಯನ್ನಾಗಲೀ, ಪೀಠವನ್ನಾಗಲೀ, ಗಜವನ್ನಾಗಲೀ, ರಥವನ್ನಾಗಲೀ ಏರದಿರುವವನು ರಾಜನ ಅರಮನೆಯಲ್ಲಿ ವಾಸಿಸಬಹುದು.
04004011a ಅಥ ಯತ್ರೈನಮಾಸೀನಂ ಶಂಕೇರನ್ದುಷ್ಟಚಾರಿಣಃ।
04004011c ನ ತತ್ರೋಪವಿಶೇಜ್ಜಾತು ಸ ರಾಜವಸತಿಂ ವಸೇತ್।।
ಮತ್ತು ಎಲ್ಲಿ ಕುಳಿತುಕೊಂಡರೆ ದುಷ್ಟಚಾರಿಗಳು ಸಂಶಯಪಡುತ್ತಾರೋ ಅಲ್ಲಿ ಕುಳಿತುಕೊಳ್ಳದೇ ಇರುವವನು ರಾಜವಸತಿಯಲ್ಲಿ ವಾಸಿಸಬಹುದು.
04004012a ನ ಚಾನುಶಿಷ್ಯೇದ್ರಾಜಾನಮಪೃಚ್ಛಂತಂ ಕದಾ ಚನ।
04004012c ತೂಷ್ಣೀಂ ತ್ವೇನಮುಪಾಸೀತ ಕಾಲೇ ಸಮಭಿಪೂಜಯನ್।।
ಕೇಳದೇ ರಾಜನಿಗೆ ಉಪದೇಶವನ್ನು ನೀಡಬಾರದು. ಕಾಲೋಚಿತವಾಗಿ ಗೌರವಿಸುತ್ತಾ, ಸುಮ್ಮನೇ ಅವನ ಸೇವೆ ಮಾಡುತ್ತಿರಬೇಕು.
04004013a ಅಸೂಯಂತಿ ಹಿ ರಾಜಾನೋ ಜನಾನನೃತವಾದಿನಃ।
04004013c ತಥೈವ ಚಾವಮನ್ಯಂತೇ ಮಂತ್ರಿಣಂ ವಾದಿನಂ ಮೃಷಾ।।
ಸುಳ್ಳುಹೇಳುವ ಜನರನ್ನು ರಾಜರು ಸಹಿಸುವುದಿಲ್ಲ. ಹಾಗೆಯೇ ಸುಳ್ಳುಹೇಳುವ ಮಂತ್ರಿಗಳನ್ನು ಅವರು ಅವಮಾನಿಸುತ್ತಾರೆ.
04004014a ನೈಷಾಂ ದಾರೇಷು ಕುರ್ವೀತ ಮೈತ್ರೀಂ ಪ್ರಾಜ್ಞಃ ಕಥಂ ಚನ।
04004014c ಅಂತಃಪುರಚರಾ ಯೇ ಚ ದ್ವೇಷ್ಟಿ ಯಾನಹಿತಾಶ್ಚ ಯೇ।।
ಪ್ರಾಜ್ಞರು ಯಾವಕಾರಣಕ್ಕೂ ಇವರ ಪತ್ನಿಯರೊಂದಿಗಾಗಲೀ ಅಂತಃಪುರದ ಜನರೊಡನೆಯಾಗಲೀ, ದ್ವೇಷಿಗಳೊಡನೆಯಾಗಲೀ, ಅಹಿತರೊಡನೆಯಾಗಲೀ ಮೈತ್ರಿಯನ್ನು ಮಾಡುವುದಿಲ್ಲ.
04004015a ವಿದಿತೇ ಚಾಸ್ಯ ಕುರ್ವೀತ ಕಾರ್ಯಾಣಿ ಸುಲಘೂನ್ಯಪಿ।
04004015c ಏವಂ ವಿಚರತೋ ರಾಜ್ಞೋ ನ ಕ್ಷತಿರ್ಜಾಯತೇ ಕ್ವ ಚಿತ್।।
ಅತ್ಯಂತ ಹಗುರಾದ ಕೆಲಸವನ್ನೂ ಕೂಡ ಅವನಿಗೆ ತಿಳಿಯುವಂತೆಯೇ ಮಾಡಬೇಕು. ರಾಜನೊಡನೆ ಹೀಗೆ ನಡೆದುಕೊಳ್ಳುವವನಿಗೆ ಯಾವಾಗಲೂ ಹಾನಿಯುಂಟಾಗುವುದಿಲ್ಲ.
04004016a ಯತ್ನಾಚ್ಚೋಪಚರೇದೇನಮಗ್ನಿವದ್ದೇವವಚ್ಚ ಹ।
04004016c ಅನೃತೇನೋಪಚೀರ್ಣೋ ಹಿ ಹಿಂಸ್ಯಾದೇನಮಸಂಶಯಂ।।
ಅಗ್ನಿ ದೇವನಂತೆ ಅವನನ್ನು ಯತ್ನಪೂರ್ವಕವಾಗಿ ಉಪಚರಿಸಬೇಕಾಗುತ್ತದೆ. ನಿಸ್ಸಂಶಯವಾಗಿಯೂ ಅವನು ಹುಸಿ ಉಪಚಾರಮಾಡುವವನನ್ನು ಹಿಂಸಿಸುತ್ತಾನೆ.
04004017a ಯಚ್ಚ ಭರ್ತಾನುಯುಂಜೀತ ತದೇವಾಭ್ಯನುವರ್ತಯೇತ್।
04004017c ಪ್ರಮಾದಮವಹೇಲಾಂ ಚ ಕೋಪಂ ಚ ಪರಿವರ್ಜಯೇತ್।।
ಒಡೆಯನು ಏನನ್ನು ವಿಧಿಸುತ್ತಾನೋ ಅದನ್ನೇ ಅನುಸರಿಸಬೇಕು. ಪ್ರಮಾದ, ಅವಹೇಳನೆ ಮತ್ತು ಕೋಪವನ್ನು ಬಿಟ್ಟುಬಿಡಬೇಕು.
04004018a ಸಮರ್ಥನಾಸು ಸರ್ವಾಸು ಹಿತಂ ಚ ಪ್ರಿಯಮೇವ ಚ।
04004018c ಸಂವರ್ಣಯೇತ್ತದೇವಾಸ್ಯ ಪ್ರಿಯಾದಪಿ ಹಿತಂ ವದೇತ್।।
ಸಮರ್ಥನೆ ನೀಡಬೇಕಾಗಿ ಬಂದಾಗಲೆಲ್ಲಾ ಹಿತ ಮತ್ತು ಪ್ರಿಯವಾದುದನ್ನೇ ಪ್ರತಿಪಾದಿಸಬೇಕು. ಅದರಲ್ಲೂ ಪ್ರಿಯವಾದುದಕ್ಕಿಂತ ಹಿತವಾದುದನ್ನು ಹೇಳಬೇಕು.
04004019a ಅನುಕೂಲೋ ಭವೇಚ್ಚಾಸ್ಯ ಸರ್ವಾರ್ಥೇಷು ಕಥಾಸು ಚ।
04004019c ಅಪ್ರಿಯಂ ಚಾಹಿತಂ ಯತ್ಸ್ಯಾತ್ತದಸ್ಮೈ ನಾನುವರ್ಣಯೇತ್।।
ಎಲ್ಲ ವಿಷಯಗಳಲ್ಲಿಯೂ ಮಾತುಕಥೆಗಳಲ್ಲಿಯೂ ಅನುಕೂಲಕರನಾಗಿರಬೇಕು. ಅಪ್ರಿಯವೂ ಅಹಿತವೂ ಆಗಿದ್ದುದನ್ನು ಹೇಳಬಾರದು.
04004020a ನಾಹಮಸ್ಯ ಪ್ರಿಯೋಽಸ್ಮೀತಿ ಮತ್ವಾ ಸೇವೇತ ಪಂಡಿತಃ।
04004020c ಅಪ್ರಮತ್ತಶ್ಚ ಯತ್ತಶ್ಚ ಹಿತಂ ಕುರ್ಯಾತ್ಪ್ರಿಯಂ ಚ ಯತ್।।
ಪಂಡಿತನಾದವನು ನಾನು ಇವನಿಗೆ ಪ್ರಿಯನಾದವನಲ್ಲ ಎಂದು ತಿಳಿದುಕೊಂಡೇ ಸೇವಿಸುತ್ತಾನೆ. ಅಪ್ರಮತ್ತನಾಗಿದ್ದುಕೊಂಡು ಸಂಯಮದಿಂದ ಹಿತವನ್ನೂ ಪ್ರಿಯವನ್ನೂ ಉಂಟುಮಾಡಬೇಕು.
04004021a ನಾಸ್ಯಾನಿಷ್ಟಾನಿ ಸೇವೇತ ನಾಹಿತೈಃ ಸಹ ಸಂವಸೇತ್।
04004021c ಸ್ವಸ್ಥಾನಾನ್ನ ವಿಕಂಪೇತ ಸ ರಾಜವಸತಿಂ ವಸೇತ್।।
ಅವನಿಗೆ ಇಷ್ಟವಲ್ಲದ್ದನ್ನು ಮಾಡಕೂಡದು. ಅಹಿತರಾದವರೊಡನೆ ಇರಕೂಡದು. ಸ್ವಸ್ಥಾನದಿಂದ ಕದಲಬಾರದು. ಅಂಥವನು ರಾಜವಸತಿಯಲ್ಲಿ ವಾಸಿಸಬಹುದು.
04004022a ದಕ್ಷಿಣಂ ವಾಥ ವಾಮಂ ವಾ ಪಾರ್ಶ್ವಮಾಸೀತ ಪಂಡಿತಃ।
04004022c ರಕ್ಷಿಣಾಂ ಹ್ಯಾತ್ತಶಸ್ತ್ರಾಣಾಂ ಸ್ಥಾನಂ ಪಶ್ಚಾದ್ವಿಧೀಯತೇ।।
04004022e ನಿತ್ಯಂ ವಿಪ್ರತಿಷಿದ್ಧಂ ತು ಪುರಸ್ತಾದಾಸನಂ ಮಹತ್।।
ಪಂಡಿತನು ರಾಜನ ಪಕ್ಕ ಎಡಗಡೆ ಅಥವಾ ಬಲಗಡೆ ಕುಳಿತುಕೊಳ್ಳುಬೇಕು. ಶಸ್ತ್ರಧಾರಿ ರಕ್ಷಕರ ಸ್ಥಾನವು ಹಿಂದುಗಡೆ. ಎದುರುಗಡೆಯ ಎತ್ತರದ ಆಸನವು ಎಂದೂ ನಿಷಿದ್ಧವಾದುದು.
04004023a ನ ಚ ಸಂದರ್ಶನೇ ಕಿಂ ಚಿತ್ಪ್ರವೃದ್ಧಮಪಿ ಸಂಜಪೇತ್।
04004023c ಅಪಿ ಹ್ಯೇತದ್ದರಿದ್ರಾಣಾಂ ವ್ಯಲೀಕಸ್ಥಾನಮುತ್ತಮಂ।।
ಸಂದರ್ಶನದ ಸಮಯದಲ್ಲಿ ಅತಿ ದೊಡ್ಡ ಮಾತುಗಳನ್ನು ಆಡಬಾರದು. ಇದು ಅತ್ಯಂತ ದರಿದ್ರ ಮತ್ತು ಕೆಳಸ್ಥಾನಕ್ಕೆ ಕಾರಣವಾಗುತ್ತದೆ.
04004024a ನ ಮೃಷಾಭಿಹಿತಂ ರಾಜ್ಞೋ ಮನುಷ್ಯೇಷು ಪ್ರಕಾಶಯೇತ್।
04004024c ಯಂ ಚಾಸೂಯಂತಿ ರಾಜಾನಃ ಪುರುಷಂ ನ ವದೇಚ್ಚ ತಂ।।
ರಾಜನಾಡಿದ ಸುಳ್ಳನ್ನು ಜನರಮುಂದೆ ಪ್ರಕಟಿಸಬಾರದು. ರಾಜನು ಸೈರಿಸದ ವ್ಯಕ್ತಿಯೊಡನೆ ಮಾತನಾಡಕೂಡದು.
04004025a ಶೂರೋಽಸ್ಮೀತಿ ನ ದೃಪ್ತಃ ಸ್ಯಾದ್ಬುದ್ಧಿಮಾನಿತಿ ವಾ ಪುನಃ।
04004025c ಪ್ರಿಯಮೇವಾಚರನ್ರಾಜ್ಞಃ ಪ್ರಿಯೋ ಭವತಿ ಭೋಗವಾನ್।।
ನಾನು ಶೂರ, ಬುದ್ಧಿವಂತ ಎಂದು ಅಹಂಕಾರ ಪಡಬಾರದು. ರಾಜನಿಗೆ ಮೆಚ್ಚಿಗೆಯಾಗುವಂತೆ ನಡೆದುಕೊಳ್ಳುವವನು ಸುಖಿಯೂ ಭೋಗವಂತನೂ ಆಗುತ್ತಾನೆ.
04004026a ಐಶ್ವರ್ಯಂ ಪ್ರಾಪ್ಯ ದುಷ್ಪ್ರಾಪಂ ಪ್ರಿಯಂ ಪ್ರಾಪ್ಯ ಚ ರಾಜತಃ।
04004026c ಅಪ್ರಮತ್ತೋ ಭವೇದ್ರಾಜ್ಞಃ ಪ್ರಿಯೇಷು ಚ ಹಿತೇಷು ಚ।।
ಪಡೆಯಲಾಗದ ಐಶ್ವರ್ಯವನ್ನೂ ಪ್ರೀತಿಯನ್ನೂ ರಾಜನಿಂದ ಪಡೆದು, ರಾಜನಿಗೆ ಪ್ರಿಯವಾದವುಗಳಲ್ಲಿ ಮತ್ತು ಹಿತವಾದವುಗಳಲ್ಲಿ ಅಪ್ರಮತ್ತನಾಗಿರಬೇಕು.
04004027a ಯಸ್ಯ ಕೋಪೋ ಮಹಾಬಾಧಃ ಪ್ರಸಾದಶ್ಚ ಮಹಾಫಲಃ।
04004027c ಕಸ್ತಸ್ಯ ಮನಸಾಪೀಚ್ಛೇದನರ್ಥಂ ಪ್ರಾಜ್ಞಸಮ್ಮತಃ।।
ಯಾರ ಕೋಪವು ಮಹಾಬಾಧೆಯೂ ಪ್ರಸಾದವು ಮಹಾಫಲವೂ ಆಗಿರುತ್ತದೆಯೋ ಅವನಿಗೆ ಪ್ರಾಜ್ಞಸಮ್ಮತನಾದ ಯಾರು ತಾನೇ ಮನಸ್ಸಿನಲ್ಲಿಯಾದರೂ ಅನರ್ಥವನ್ನು ಬಯಸುತ್ತಾನೆ?
04004028a ನ ಚೋಷ್ಠೌ ನಿರ್ಭುಜೇಜ್ಜಾತು ನ ಚ ವಾಕ್ಯಂ ಸಮಾಕ್ಷಿಪೇತ್।
04004028c ಸದಾ ಕ್ಷುತಂ ಚ ವಾತಂ ಚ ಷ್ಠೀವನಂ ಚಾಚರೇಚ್ಚನೈಃ।।
ರಾಜನ ಮುಂದೆ ತುಟಿಗಳನ್ನು ಕಚ್ಚಬಾರದು, ಸುಮ್ಮನೇ ಬಾಯಿ ಹಾಕಬಾರದು, ಮತ್ತು ಯಾವಾಗಲೂ ಮೆಲ್ಲಗೆ ಸೀನಬೇಕು, ಹೂಸಬೇಕು ಮತ್ತು ಉಗುಳಬೇಕು.
04004029a ಹಾಸ್ಯವಸ್ತುಷು ಚಾಪ್ಯಸ್ಯ ವರ್ತಮಾನೇಷು ಕೇಷು ಚಿತ್।
04004029c ನಾತಿಗಾಢಂ ಪ್ರಹೃಷ್ಯೇತ ನ ಚಾಪ್ಯುನ್ಮತ್ತವದ್ಧಸೇತ್।।
ಅವನೇನಾದರೂ ಹಾಸ್ಯಾಸ್ಪದವಾಗಿ ನಡೆದುಕೊಂಡರೆ, ಜೋರಾಗಿ ನಗಬಾರದು ಮತ್ತು ಉನ್ಮತ್ತನಂತೆ ಖುಷಿಪಡಬಾರದು.
04004030a ನ ಚಾತಿಧೈರ್ಯೇಣ ಚರೇದ್ಗುರುತಾಂ ಹಿ ವ್ರಜೇತ್ತಥಾ।
04004030c ಸ್ಮಿತಂ ತು ಮೃದುಪೂರ್ವೇಣ ದರ್ಶಯೇತ ಪ್ರಸಾದಜಂ।।
ಅತಿ ಧೈರ್ಯದಿಂದ ವರ್ತಿಸಬಾರದು ಮತ್ತು ಗಾಂಭೀರ್ಯವನ್ನು ತಾಳಬಾರದು. ಪ್ರಸನ್ನತೆಯ ಮೃದುವಾದ ನಸುನಗೆಯನ್ನು ತೋರಿಸಬೇಕು.
04004031a ಲಾಭೇ ನ ಹರ್ಷಯೇದ್ಯಸ್ತು ನ ವ್ಯಥೇದ್ಯೋಽವಮಾನಿತಃ।
04004031c ಅಸಮ್ಮೂಢಶ್ಚ ಯೋ ನಿತ್ಯಂ ಸ ರಾಜವಸತಿಂ ವಸೇತ್।।
ಲಾಭವಾದಾಗ ಹಿಗ್ಗದವನು, ಅವಮಾನವಾದಾಗ ವ್ಯಥೆಪಡೆದಿರುವವನು, ಯಾವಾಗಲೂ ಜಾಗರೂಕನಾಗಿರುವವನು ರಾಜವಸತಿಯಲ್ಲಿ ವಾಸಿಸಬಲ್ಲನು.
04004032a ರಾಜಾನಂ ರಾಜಪುತ್ರಂ ವಾ ಸಂವರ್ತಯತಿ ಯಃ ಸದಾ।
04004032c ಅಮಾತ್ಯಃ ಪಂಡಿತೋ ಭೂತ್ವಾ ಸ ಚಿರಂ ತಿಷ್ಠತಿ ಶ್ರಿಯಂ।।
ರಾಜನನ್ನು ರಾಜಪುತ್ರರನ್ನು ಸದಾ ಅನುಸರಿಸುವ ಪಂಡಿತನು ಅಮಾತ್ಯನಾಗಿ ಚಿರವಾದ ಸಂಪತ್ತನ್ನು ಹೊಂದುತ್ತಾನೆ.
04004033a ಪ್ರಗೃಹೀತಶ್ಚ ಯೋಽಮಾತ್ಯೋ ನಿಗೃಹೀತಶ್ಚ ಕಾರಣೈಃ।
04004033c ನ ನಿರ್ಬಧ್ನಾತಿ ರಾಜಾನಂ ಲಭತೇ ಪ್ರಗ್ರಹಂ ಪುನಃ।।
ಪುರಸ್ಕೃತನಾಗಿದ್ದ ಅಮಾತ್ಯನು ಯಾವುದೋ ಕಾರಣಗಳಿಂದ ತಿರಸ್ಕೃತನಾಗಿದ್ದರೆ, ಅದಕ್ಕಾಗಿ ರಾಜನನ್ನು ವಿರೋಧಿಸದಿದ್ದರೆ ಅವನು ಪುನಃ ಅನುಗ್ರಹವನ್ನು ಪಡೆಯುವನು.
04004034a ಪ್ರತ್ಯಕ್ಷಂ ಚ ಪರೋಕ್ಷಂ ಚ ಗುಣವಾದೀ ವಿಚಕ್ಷಣಃ।
04004034c ಉಪಜೀವೀ ಭವೇದ್ರಾಜ್ಞೋ ವಿಷಯೇ ಚಾಪಿ ಯೋ ವಸೇತ್।।
ರಾಜನ ಉಪಜೀವಿಯಾಗಿ ಅವನ ನಾಡಿನಲ್ಲಿ ವಾಸಿಸುವ ವಿಚಕ್ಷಣನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವನ ಗುಣವಾದಿಯಾಗಿರಬೇಕು.
04004035a ಅಮಾತ್ಯೋ ಹಿ ಬಲಾದ್ಭೋಕ್ತುಂ ರಾಜಾನಂ ಪ್ರಾರ್ಥಯೇತ್ತು ಯಃ।
04004035c ನ ಸ ತಿಷ್ಠೇಚ್ಚಿರಂ ಸ್ಥಾನಂ ಗಚ್ಛೇಚ್ಚ ಪ್ರಾಣಸಂಶಯಂ।।
ಬಲವಂತದಿಂದ ಭೋಗಿಸಲು ರಾಜನನ್ನು ಪ್ರಾರ್ಥಿಸುವ ಅಮಾತ್ಯನು ಬಹುಕಾಲ ಸ್ಥಾನದಲ್ಲಿರುವುದಿಲ್ಲ ಮತ್ತು ಪ್ರಾಣಾಪಾಯಕ್ಕೆ ಗುರಿಯಾಗುವನು.
04004036a ಶ್ರೇಯಃ ಸದಾತ್ಮನೋ ದೃಷ್ಟ್ವಾ ಪರಂ ರಾಜ್ಞಾ ನ ಸಂವದೇತ್।
04004036c ವಿಶೇಷಯೇನ್ನ ರಾಜಾನಂ ಯೋಗ್ಯಾಭೂಮಿಷು ಸರ್ವದಾ।।
ತನ್ನ ಶ್ರೇಯಸ್ಸನ್ನೇ ನೋಡಿಕೊಂಡು ರಾಜನ ಶತ್ರುವಿನೊಡನೆ ಎಂದೂ ಮಾತನಾಡಬಾರದು. ಯೋಗ್ಯತೆಯ ವಿಷಯದಲ್ಲಿ ರಾಜನನ್ನು ಎಂದೂ ಕೀಳಾಗಿ ಕಾಣಬಾರದು.
04004037a ಅಮ್ಲಾನೋ ಬಲವಾನ್ ಶೂರಶ್ಚಾಯೇವಾನಪಗಃ ಸದಾ।
04004037c ಸತ್ಯವಾದೀ ಮೃದುರ್ದಾಂತಃ ಸ ರಾಜವಸತಿಂ ವಸೇತ್।।
ಕಳೆಗುಂದದವನು, ಬಲವಂತನು, ಶೂರನು, ನೆರಳಿನಂತೆ ಸದಾ ಒಡನಿರುವವನು, ಸತ್ಯವಾದೀ, ಮೃದು, ಮತ್ತು ಸಂಯಮಿಯಾದವನು ರಾಜವಸತಿಯಲ್ಲಿ ವಾಸಿಸಬಲ್ಲನು.
04004038a ಅನ್ಯಸ್ಮಿನ್ಪ್ರೇಷ್ಯಮಾಣೇ ತು ಪುರಸ್ತಾದ್ಯಃ ಸಮುತ್ಪತೇತ್।
04004038c ಅಹಂ ಕಿಂ ಕರವಾಣೀತಿ ಸ ರಾಜವಸತಿಂ ವಸೇತ್।।
ಇನ್ನೊಬ್ಬನನ್ನು ಕಳುಹಿಸುತ್ತಿರುವಾಗ ಮುಂದೆ ಬಂದು ನಾನೇನು ಮಾಡಲಿ ಎಂದು ಕೇಳುವವನು ರಾಜವಸತಿಯಲ್ಲಿ ವಾಸಿಸಬಲ್ಲನು.
04004039a ಉಷ್ಣೇ ವಾ ಯದಿ ವಾ ಶೀತೇ ರಾತ್ರೌ ವಾ ಯದಿ ವಾ ದಿವಾ।
04004039c ಆದಿಷ್ಟೋ ನ ವಿಕಲ್ಪೇತ ಸ ರಾಜವಸತಿಂ ವಸೇತ್।।
ಬೇಸಿಗೆಯಲ್ಲಾಗಲೀ, ಛಳಿಯಲ್ಲಾಗಲೀ, ರಾತ್ರಿಯಾಗಲೀ, ದಿನವಾಗಲೀ, ಅಪ್ಪಣೆ ಕೊಟ್ಟಾಗ ಹಿಂದೆಮುಂದೆ ನೋಡದವನು ರಾಜವಸತಿಯಲ್ಲಿ ವಾಸಿಸಬಲ್ಲನು.
04004040a ಯೋ ವೈ ಗೃಹೇಭ್ಯಃ ಪ್ರವಸನ್ಪ್ರಿಯಾಣಾಂ ನಾನುಸಂಸ್ಮರೇತ್।
04004040c ದುಃಖೇನ ಸುಖಮನ್ವಿಚ್ಛೇತ್ಸ ರಾಜವಸತಿಂ ವಸೇತ್।।
ಮನೆಯಿಂದ ದೂರವಿದ್ದೂ ಪ್ರಿಯರನ್ನು ನೆನೆಯದೆ ದುಃಖ ಮತ್ತು ಸುಖವನ್ನು ಅನುಭವಿಸುವವನು ರಾಜವಸತಿಯಲ್ಲಿ ವಾಸಿಸಬಲ್ಲನು.
04004041a ಸಮವೇಷಂ ನ ಕುರ್ವೀತ ನಾತ್ಯುಚ್ಚೈಃ ಸನ್ನಿಧೌ ಹಸೇತ್।
04004041c ಮಂತ್ರಂ ನ ಬಹುಧಾ ಕುರ್ಯಾದೇವಂ ರಾಜ್ಞಃ ಪ್ರಿಯೋ ಭವೇತ್।।
ತನ್ನಹಾಗಿನ ವಸ್ತ್ರವನ್ನು ಧರಿಸದ, ತನ್ನ ಸನ್ನಿಧಿಯಲ್ಲಿ ಗಟ್ಟಿಯಾಗಿ ನಗದ, ಮಂತ್ರಾಲೋಚನೆಯನ್ನು ಬಯಲು ಮಾಡದವನು ರಾಜನಿಗೆ ಪ್ರಿಯಕರನಾಗಿರುತ್ತಾನೆ.
04004042a ನ ಕರ್ಮಣಿ ನಿಯುಕ್ತಃ ಸನ್ಧನಂ ಕಿಂ ಚಿದುಪಸ್ಪೃಶೇತ್।
04004042c ಪ್ರಾಪ್ನೋತಿ ಹಿ ಹರನ್ದ್ರವ್ಯಂ ಬಂಧನಂ ಯದಿ ವಾ ವಧಂ।।
ಕೆಲಸದಲ್ಲಿ ನಿಯುಕ್ತನಾದವನು ಎಂದೂ ಸ್ವಲ್ಪವೂ ಧನವನ್ನು ಮುಟ್ಟಬಾರದು. ದ್ರವ್ಯಾಪಹರಣ ಮಾಡಿದವನು ಬಂಧನ ಅಥವಾ ವಧೆಗೆ ಗುರಿಯಾಗುತ್ತಾನೆ.
04004043a ಯಾನಂ ವಸ್ತ್ರಮಲಂಕಾರಂ ಯಚ್ಚಾನ್ಯತ್ಸಂಪ್ರಯಚ್ಛತಿ।
04004043c ತದೇವ ಧಾರಯೇನ್ನಿತ್ಯಮೇವಂ ಪ್ರಿಯತರೋ ಭವೇತ್।।
ಅವನು ಕೊಟ್ಟ ವಾಹನ, ವಸ್ತ್ರ, ಅಲಂಕಾರ ಮತ್ತು ಇತರ ವಸ್ತುಗಳನ್ನು ಯಾವಾಗಲೂ ಬಳಸಬೇಕು. ಇದರಿಂದ ಅವನಿಗೆ ಪ್ರಿಯಕನರಾಗುತ್ತಾನೆ.
04004044a ಸಂವತ್ಸರಮಿಮಂ ತಾತ ತಥಾಶೀಲಾ ಬುಭೂಷವಃ।
04004044c ಅಥ ಸ್ವವಿಷಯಂ ಪ್ರಾಪ್ಯ ಯಥಾಕಾಮಂ ಚರಿಷ್ಯಥ।।
ಮಕ್ಕಳೇ! ಈ ವರ್ಷವನ್ನು ಹೀಗೆಯೇ ನಡೆದುಕೊಂಡು ಕಳೆಯಿರಿ. ನಂತರ ಸ್ವದೇಶವನ್ನು ಸೇರಿ ನಿಮಗಿಷ್ಟಬಂದಂತೆ ನಡೆದುಕೊಳ್ಳಬಹುದು.”
04004045 ಯುಧಿಷ್ಠಿರ ಉವಾಚ।
04004045a ಅನುಶಿಷ್ಟಾಃ ಸ್ಮ ಭದ್ರಂ ತೇ ನೈತದ್ವಕ್ತಾಸ್ತಿ ಕಶ್ಚನ।
04004045c ಕುಂತೀಮೃತೇ ಮಾತರಂ ನೋ ವಿದುರಂ ಚ ಮಹಾಮತಿಂ।।
ಯುಧಿಷ್ಠಿರನು ಹೇಳಿದನು: “ಮಾತೆ ಕುಂತಿ ಮತ್ತು ಮಹಾಮತಿ ವಿದುರನನ್ನು ಬಿಟ್ಟು ಇದನ್ನೆಲ್ಲ ನಮಗೆ ಹೇಳುವವರು ಬೇರೆ ಯಾರೂ ಇಲ್ಲ. ನಿನ್ನಿಂದ ಅನುಶಿಷ್ಟರಾಗಿದ್ದೇವೆ. ನಿನಗೆ ಮಂಗಳವಾಗಲಿ.
04004046a ಯದೇವಾನಂತರಂ ಕಾರ್ಯಂ ತದ್ಭವಾನ್ಕರ್ತುಮರ್ಹತಿ।
04004046c ತಾರಣಾಯಾಸ್ಯ ದುಃಖಸ್ಯ ಪ್ರಸ್ಥಾನಾಯ ಜಯಾಯ ಚ।।
ದುಃಖವನ್ನು ದಾಟಲು ಈ ಪ್ರಯಾಣವು ವಿಜಯವಾಗಲೆಂದು ಮುಂದಿನ ಕಾರ್ಯಗಳನ್ನು ನೀನು ನಡೆಸಿಕೊಡಬೇಕು.””
04004047 ವೈಶಂಪಾಯನ ಉವಾಚ।
04004047a ಏವಮುಕ್ತಸ್ತತೋ ರಾಜ್ಞಾ ಧೌಮ್ಯೋಽಥ ದ್ವಿಜಸತ್ತಮಃ।
04004047c ಅಕರೋದ್ವಿಧಿವತ್ಸರ್ವಂ ಪ್ರಸ್ಥಾನೇ ಯದ್ವಿಧೀಯತೇ।।
ವೈಶಂಪಾಯನನು ಹೇಳಿದನು: “ರಾಜನು ಹೀಗೆ ಹೇಳಲು ದ್ವಿಜಸತ್ತಮ ಧೌಮ್ಯನು ಪ್ರಸ್ಥಾನವೇಳೆಗೆ ತಕ್ಕುದಾದ ಎಲ್ಲವನ್ನೂ ವಿಧಿವತ್ತಾಗಿ ನೆರವೇರಿಸಿದನು.
04004048a ತೇಷಾಂ ಸಮಿಧ್ಯ ತಾನಗ್ನೀನ್ಮಂತ್ರವಚ್ಚ ಜುಹಾವ ಸಃ।
04004048c ಸಮೃದ್ಧಿವೃದ್ಧಿಲಾಭಾಯ ಪೃಥಿವೀವಿಜಯಾಯ ಚ।।
ಅವರ ಸಮೃದ್ಧಿ, ವೃದ್ಧಿ, ಲಾಭ ಮತ್ತು ಪಥ್ವೀವಿಜಯಕ್ಕಾಗಿ ಉರಿಯುತ್ತಿರುವ ಅಗ್ನಿಯಲ್ಲಿ ಮಂತ್ರವತ್ತಾಗಿ ಹೋಮ ಮಾಡಿಸಿದನು.
04004049a ಅಗ್ನಿಂ ಪ್ರದಕ್ಷಿಣಂ ಕೃತ್ವಾ ಬ್ರಾಹ್ಮಣಾಂಶ್ಚ ತಪೋಧನಾನ್।
04004049c ಯಾಜ್ಞಸೇನೀಂ ಪುರಸ್ಕೃತ್ಯ ಷಡೇವಾಥ ಪ್ರವವ್ರಜುಃ।।
ಅಗ್ನಿಯನ್ನೂ ತಪೋಧನ ಬ್ರಾಹ್ಮಣರನ್ನೂ ಪ್ರದಕ್ಷಿಣೆಮಾಡಿ ಯಾಜ್ಞಸೇನಿಯನ್ನು ಮುಂದಿಟ್ಟುಕೊಂಡು ಆ ಆರು ಮಂದಿಯೂ ಹೊರಟರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಧೌಮ್ಯೋಪದೇಶೇ ಚತುರ್ಥೋಽಧ್ಯಾಯಃ।।
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಧೌಮ್ಯೋಪದೇಶದಲ್ಲಿ ನಾಲ್ಕನೆಯ ಅಧ್ಯಾಯವು.