003 ಯುಧಿಷ್ಠಿರಾದಿಮಂತ್ರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ವೈರಾಟ ಪರ್ವ

ಅಧ್ಯಾಯ 3

ಸಾರ

ವಿರಾಟನೃಪನಲ್ಲಿ ಗ್ರಂಥಿಕನೆಂಬ ಹೆಸರನ್ನಿಟ್ಟುಕೊಂಡು ಅಶ್ವಬಂಧುವಾಗುತ್ತೇನೆಂದು ನಕುಲನು (1-4) ಮತ್ತು ವಿರಾಟನಲ್ಲಿ ತಂತಿಪಾಲನೆಂಬ ಗೋಸಂಖ್ಯಾತನಾಗುತ್ತೇನೆಂದು ಸಹದೇವನು (5-11) ನಿರ್ಧರಿಸುವುದು. ಕೇಶಕರ್ಮದಲ್ಲಿ ಕುಶಲಳಾದ ಸೈರಂಧ್ರಿ ಎಂದು ಹೇಳಿಕೊಂಡು ನನ್ನನ್ನು ಅಡಗಿಸಿಕೊಂಡಿರುತ್ತೇನೆ ಎಂದು ದ್ರೌಪದಿಯು ಹೇಳುವುದು (12-19).

04003001 ಯುಧಿಷ್ಠಿರ ಉವಾಚ।
04003001a ಕಿಂ ತ್ವಂ ನಕುಲ ಕುರ್ವಾಣಸ್ತತ್ರ ತಾತ ಚರಿಷ್ಯಸಿ।
04003001c ಸುಕುಮಾರಶ್ಚ ಶೂರಶ್ಚ ದರ್ಶನೀಯಃ ಸುಖೋಚಿತಃ।।

ಯುಧಿಷ್ಠಿರನು ಹೇಳಿದನು: “ಮಗು ನಕುಲ! ಸುಕುಮಾರನೂ, ಸುಂದರನೂ, ಸುಖಾರ್ಹನೂ, ಶೂರನೂ ಆದ ನೀನು ಅಲ್ಲಿ ಏನು ಮಾಡುವೆ? ”

04003002 ನಕುಲ ಉವಾಚ।
04003002a ಅಶ್ವಬಂಧೋ ಭವಿಷ್ಯಾಮಿ ವಿರಾಟನೃಪತೇರಹಂ।
04003002c ಗ್ರಂಥಿಕೋ ನಾಮ ನಾಮ್ನಾಹಂ ಕರ್ಮೈತತ್ಸುಪ್ರಿಯಂ ಮಮ।।

ನಕುಲನು ಹೇಳಿದನು: “ನಾನು ವಿರಾಟನೃಪನಲ್ಲಿ ಅಶ್ವಬಂಧುವಾಗುತ್ತೇನೆ. ಗ್ರಂಥಿಕನೆಂಬ ಹೆಸರನ್ನಿಟ್ಟುಕೊಂಡು ನನಗೆ ಪ್ರಿಯವಾದ ಈ ಕೆಲಸವನ್ನು ಮಾಡುತ್ತೇನೆ.

04003003a ಕುಶಲೋಽಸ್ಮ್ಯಶ್ವಶಿಕ್ಷಾಯಾಂ ತಥೈವಾಶ್ವಚಿಕಿತ್ಸಿತೇ।
04003003c ಪ್ರಿಯಾಶ್ಚ ಸತತಂ ಮೇಽಶ್ವಾಃ ಕುರುರಾಜ ಯಥಾ ತವ।।

ಕುರುರಾಜ! ಅಶ್ವಶಿಕ್ಷೆಯಲ್ಲಿ ಹಾಗೂ ಅಶ್ವ ಚಿಕಿತ್ಸೆಯಲ್ಲಿ ಕುಶಲನಾಗಿರುವ ನನಗೂ ಕೂಡ ನಿನ್ನಂತೆ ಅಶ್ವಗಳು ಸತತವೂ ಪ್ರಿಯ.

04003004a ಯೇ ಮಾಮಾಮಂತ್ರಯಿಷ್ಯಂತಿ ವಿರಾಟನಗರೇ ಜನಾಃ।
04003004c ತೇಭ್ಯ ಏವಂ ಪ್ರವಕ್ಷ್ಯಾಮಿ ವಿಹರಿಷ್ಯಾಮ್ಯಹಂ ಯಥಾ।।

ವಿರಾಟನಗರದ ಜನರು ನನ್ನನ್ನು ಕೇಳಿದರೆ ಇದನ್ನೇ ಹೇಳಿಕೊಂಡು ವಾಸಿಸುತ್ತೇನೆ.”

04003005 ಯುಧಿಷ್ಠಿರ ಉವಾಚ।
04003005a ಸಹದೇವ ಕಥಂ ತಸ್ಯ ಸಮೀಪೇ ವಿಹರಿಷ್ಯಸಿ।
04003005c ಕಿಂ ವಾ ತ್ವಂ ತಾತ ಕುರ್ವಾಣಃ ಪ್ರಚ್ಛನ್ನೋ ವಿಚರಿಷ್ಯಸಿ।।

ಯುಧಿಷ್ಠಿರನು ಹೇಳಿದನು: “ಮಗು ಸಹದೇವ! ಅವನಲ್ಲಿ ನೀನು ಹೇಗೆ ವಾಸಿಸುವೆ? ನೀನು ಹೇಗೆ ವೇಷ ಮರೆಸಿಕೊಂಡಿರುವೆ?”

04003006 ಸಹದೇವ ಉವಾಚ।
04003006a ಗೋಸಂಖ್ಯಾತಾ ಭವಿಷ್ಯಾಮಿ ವಿರಾಟಸ್ಯ ಮಹೀಪತೇಃ।
04003006c ಪ್ರತಿಷೇದ್ಧಾ ಚ ದೋಗ್ಧಾ ಚ ಸಂಖ್ಯಾನೇ ಕುಶಲೋ ಗವಾಂ।।

ಸಹದೇವನು ಹೇಳಿದನು: “ಮಹೀಪತಿ ವಿರಾಟನ ಗೋಸಂಖ್ಯಾತನಾಗುತ್ತೇನೆ. ಗೋವುಗಳನ್ನು ಪಳಗಿಸುವುದರಲ್ಲಿ, ಹಾಲುಕರೆಯುವುದರಲ್ಲಿ ಮತ್ತು ಎಣಿಸುವುದರಲ್ಲಿ ನಾನು ಕುಶಲ.

04003007a ತಂತಿಪಾಲ ಇತಿ ಖ್ಯಾತೋ ನಾಮ್ನಾ ವಿದಿತಮಸ್ತು ತೇ।
04003007c ನಿಪುಣಂ ಚ ಚರಿಷ್ಯಾಮಿ ವ್ಯೇತು ತೇ ಮಾನಸೋ ಜ್ವರಃ।।

ತಂತಿಪಾಲನೆಂಬ ಖ್ಯಾತನಾಮದಿಂದ ನಿಪುಣನಾಗಿ ನಡೆದುಕೊಳ್ಳುತ್ತೇನೆ. ಇದನ್ನು ತಿಳಿದು ನಿನ್ನ ಮಾನಸಿಕ ಕಳವಳ ತೊಲಗಲಿ.

04003008a ಅಹಂ ಹಿ ಭವತಾ ಗೋಷು ಸತತಂ ಪ್ರಕೃತಃ ಪುರಾ।
04003008c ತತ್ರ ಮೇ ಕೌಶಲಂ ಕರ್ಮ ಅವಬುದ್ಧಂ ವಿಶಾಂ ಪತೇ।।

ವಿಶಾಂಪತೇ! ಹಿಂದೆ ನಾನೇ ನಿನ್ನ ಗೋವುಗಳ ಕೆಲಸವನ್ನು ಸತತವೂ ನಿರ್ವಹಿಸುತ್ತಿದ್ದೆ. ಆ ಕೆಲಸದಲ್ಲಿ ನನ್ನ ಕೌಶಲ್ಯವನ್ನು ನೀನು ತಿಳಿದಿದ್ದೀಯೆ.

04003009a ಲಕ್ಷಣಂ ಚರಿತಂ ಚಾಪಿ ಗವಾಂ ಯಚ್ಚಾಪಿ ಮಂಗಲಂ।
04003009c ತತ್ಸರ್ವಂ ಮೇ ಸುವಿದಿತಮನ್ಯಚ್ಚಾಪಿ ಮಹೀಪತೇ।।

ಮಹೀಪತೇ! ಗೋವುಗಳ ಲಕ್ಷಣ, ಚರಿತ ಮತ್ತು ಮಂಗಲ ಎಲ್ಲವನ್ನೂ ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ.

04003010a ವೃಷಭಾನಪಿ ಜಾನಾಮಿ ರಾಜನ್ಪೂಜಿತಲಕ್ಷಣಾನ್।
04003010c ಯೇಷಾಂ ಮೂತ್ರಮುಪಾಘ್ರಾಯ ಅಪಿ ವಂಧ್ಯಾ ಪ್ರಸೂಯತೇ।।

ರಾಜನ್! ಯಾವುದರ ಕೇವಲ ಮೂತ್ರವನ್ನು ಮೂಸಿ ಗೊಡ್ಡು ಹಸುಗಳೂ ಕೂಡ ಈಯುತ್ತವೆಯೋ ಅಂಥಹ ಪೂಜಿತಲಕ್ಷಣಗಳನ್ನುಳ್ಳ ಹೋರಿಗಳನ್ನೂ ತಿಳಿದಿದ್ದೇನೆ.

04003011a ಸೋಽಹಮೇವಂ ಚರಿಷ್ಯಾಮಿ ಪ್ರೀತಿರತ್ರ ಹಿ ಮೇ ಸದಾ।
04003011c ನ ಚ ಮಾಂ ವೇತ್ಸ್ಯತಿ ಪರಸ್ತತ್ತೇ ರೋಚತು ಪಾರ್ಥಿವ।।

ಸದಾ ನನಗೆ ಸಂತೋಷವನ್ನು ನೀಡುವ ಈ ರೀತಿಯಲ್ಲಿಯೇ ಅಲ್ಲಿ ವಾಸಿಸುವೆನು. ಇತರರು ನನ್ನನ್ನು ತಿಳಿಯಲಾರರು. ಪಾರ್ಥಿವ! ನಿನಗೆ ಇದು ಇಷ್ಟವಾಗುತ್ತದೆ.”

04003012 ಯುಧಿಷ್ಠಿರ ಉವಾಚ।
04003012a ಇಯಂ ತು ನಃ ಪ್ರಿಯಾ ಭಾರ್ಯಾ ಪ್ರಾಣೇಭ್ಯೋಽಪಿ ಗರೀಯಸೀ।
04003012c ಮಾತೇವ ಪರಿಪಾಲ್ಯಾ ಚ ಪೂಜ್ಯಾ ಜ್ಯೇಷ್ಠೇವ ಚ ಸ್ವಸಾ।।
04003013a ಕೇನ ಸ್ಮ ಕರ್ಮಣಾ ಕೃಷ್ಣಾ ದ್ರೌಪದೀ ವಿಚರಿಷ್ಯತಿ।
04003013c ನ ಹಿ ಕಿಂ ಚಿದ್ವಿಜಾನಾತಿ ಕರ್ಮ ಕರ್ತುಂ ಯಥಾ ಸ್ತ್ರಿಯಃ।।

ಯುಧಿಷ್ಠಿರನು ಹೇಳಿದನು: “ಮಾತೆಯಂತೆ ಪರಿಪಾಲನ ಯೋಗ್ಯಳಾದ, ಅಕ್ಕನಂತೆ ಪೂಜನೀಯಳಾದ, ನಮ್ಮ ಪ್ರಾಣಗಳಿಗಿಂಥಲೂ ದೊಡ್ಡವಳಾದ ನಮ್ಮ ಪ್ರಿಯ ಭಾರ್ಯೆ, ಇತರ ಸ್ತ್ರೀಯರಂತೆ ಯಾವ ಕೆಲಸವನ್ನೂ ಮಾಡಲರಿಯದ ದ್ರೌಪದಿ ಕೃಷ್ಣೆಯು ಯಾವ ಕಾರ್ಯವನ್ನು ಮಾಡುವಳು?

04003014a ಸುಕುಮಾರೀ ಚ ಬಾಲಾ ಚ ರಾಜಪುತ್ರೀ ಯಶಸ್ವಿನೀ।
04003014c ಪತಿವ್ರತಾ ಮಹಾಭಾಗಾ ಕಥಂ ನು ವಿಚರಿಷ್ಯತಿ।।
04003015a ಮಾಲ್ಯಗಂಧಾನಲಂಕಾರಾನ್ವಸ್ತ್ರಾಣಿ ವಿವಿಧಾನಿ ಚ।
04003015c ಏತಾನ್ಯೇವಾಭಿಜಾನಾತಿ ಯತೋ ಜಾತಾ ಹಿ ಭಾಮಿನೀ।।

ಹುಟ್ಟಿದಾಗಿನಿಂದ ಮಾಲೆ, ಸುಗಂಧ, ಅಲಂಕಾರ ಮತ್ತು ವಿವಿಧವಸ್ತ್ರಗಳ ಹೊರತಾಗಿ ಬೇರೆ ಏನನ್ನೂ ತಿಳಿಯದಿರುವ ಈ ಭಾಮಿನೀ, ಸುಕುಮಾರಿ, ಬಾಲಕಿ, ರಾಜಪುತ್ರಿ, ಯಶಸ್ವಿನೀ, ಪತಿವ್ರತೆ, ಮಹಾಭಾಗೆಯು ಹೇಗೆ ನಡೆದುಕೊಳ್ಳುವಳು?”

04003016 ದ್ರೌಪದ್ಯುವಾಚ।
04003016a ಸೈರಂಧ್ರ್ಯೋಽರಕ್ಷಿತಾ ಲೋಕೇ ಭುಜಿಷ್ಯಾಃ ಸಂತಿ ಭಾರತ।
04003016c ನೈವಮನ್ಯಾಃ ಸ್ತ್ರಿಯೋ ಯಾಂತಿ ಇತಿ ಲೋಕಸ್ಯ ನಿಶ್ಚಯಃ।।

ದ್ರೌಪದಿಯು ಹೇಳಿದಳು: “ಭಾರತ! ಲೋಕದಲ್ಲಿ ರಕ್ಷಣೆಯಿಲ್ಲದ ಸೈರಂಧ್ರಿಯರೆಂಬ ದಾಸಿಯರಿರುತ್ತಾರೆ. ಇತರ ಸ್ತ್ರೀಯರು ಇವರಂತೆ ಇರುವುದಿಲ್ಲವೆನ್ನುವುದು ಲೋಕನಿಶ್ಚಯ.

04003017a ಸಾಹಂ ಬ್ರುವಾಣಾ ಸೈರಂಧ್ರೀ ಕುಶಲಾ ಕೇಶಕರ್ಮಣಿ।
04003017c ಆತ್ಮಗುಪ್ತಾ ಚರಿಷ್ಯಾಮಿ ಯನ್ಮಾಂ ತ್ವಮನುಪೃಚ್ಛಸಿ।।

ನೀನು ನನ್ನನ್ನು ಕೇಳಿದುದಕ್ಕೆ ನಾನು ಕೇಶಕರ್ಮದಲ್ಲಿ ಕುಶಲಳಾದ ಸೈರಂಧ್ರಿ ಎಂದು ಹೇಳಿಕೊಂಡು ನನ್ನನ್ನು ಅಡಗಿಸಿಕೊಂಡಿರುತ್ತೇನೆ.

04003018a ಸುದೇಷ್ಣಾಂ ಪ್ರತ್ಯುಪಸ್ಥಾಸ್ಯೇ ರಾಜಭಾರ್ಯಾಂ ಯಶಸ್ವಿನೀಂ।
04003018c ಸಾ ರಕ್ಷಿಷ್ಯತಿ ಮಾಂ ಪ್ರಾಪ್ತಾಂ ಮಾ ತೇ ಭೂದ್ದುಃಖಮೀದೃಶಂ।।

ಯಶಸ್ವಿನೀ ರಾಜಭಾರ್ಯೆ ಸುದೇಷ್ಣೆಯ ಬಳಿ ಇರುತ್ತೇನೆ. ನನ್ನನ್ನು ಪಡೆದ ಅವಳು ರಕ್ಷಿಸುತ್ತಾಳೆ. ಇದರ ಕುರಿತು ನಿನಗೆ ದುಃಖ ಬೇಡ.”

04003019 ಯುಧಿಷ್ಠಿರ ಉವಾಚ।
04003019a ಕಲ್ಯಾಣಂ ಭಾಷಸೇ ಕೃಷ್ಣೇ ಕುಲೇ ಜಾತಾ ಯಥಾ ವದೇತ್।
04003019c ನ ಪಾಪಮಭಿಜಾನಾಸಿ ಸಾಧು ಸಾಧ್ವೀವ್ರತೇ ಸ್ಥಿತಾ।।

ಯುಧಿಷ್ಠಿರನು ಹೇಳಿದನು: “ಕೃಷ್ಣೇ! ಕುಲದಲ್ಲಿ ಹುಟ್ಟಿದವರಂತೆ ಮಂಗಳಕರ ಒಳ್ಳೆಯ ಮಾತುಗಳನ್ನೇ ಆಡಿದ್ದೀಯೆ. ಸಾಧ್ವೀವ್ರತದಲ್ಲಿರುವ ನೀನು ಪಾಪವನ್ನರಿತಿಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಯುಧಿಷ್ಠಿರಾದಿಮಂತ್ರಣೇ ತೃತೀಯೋಽಧ್ಯಾಯಃ।।
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಯುಧಿಷ್ಠಿರ ಮೊದಲಾದವರ ಸಮಾಲೋಚನೆಯಲ್ಲಿ ಮೂರನೆಯ ಅಧ್ಯಾಯವು.