299 ಅಜ್ಞಾತವಾಸಮಂತ್ರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಆರಣೇಯ ಪರ್ವ

ಅಧ್ಯಾಯ 299

ಸಾರ

ಯುಧಿಷ್ಠಿರನು ಹದಿಮೂರನೆಯ ಅಜ್ಞಾತವಾಸದ ವರ್ಷಕ್ಕೆ ಹೊರಡಲು ಸಿದ್ಧನಾಗಿ ಬ್ರಾಹ್ಮಣರೊಂದಿಗೆ ಬೀಳ್ಕೊಳ್ಳುವಾಗ ದುಃಖಿತನಾಗಿ ಮೂರ್ಛೆಗೊಂಡಿದುದು (1-7). ಆಗ ಧೌಮ್ಯನು ಸಮಾಧಾನಗೊಳಿಸಿದುದು (8-19). ಪಾಂಡವರು ಅಜ್ಞಾತವಾಸಕ್ಕೆ ತೆರಳಿದುದು (20-29).

03299001 ವೈಶಂಪಾಯನ ಉವಾಚ।
03299001a ಧರ್ಮೇಣ ತೇಽಭ್ಯನುಜ್ಞಾತಾಃ ಪಾಂಡವಾಃ ಸತ್ಯವಿಕ್ರಮಾಃ।
03299001c ಅಜ್ಞಾತವಾಸಂ ವತ್ಸ್ಯಂತಶ್ಚನ್ನಾ ವರ್ಷಂ ತ್ರಯೋದಶಂ।।
03299001e ಉಪೋಪವಿಶ್ಯ ವಿದ್ವಾಂಸಃ ಸಹಿತಾಃ ಸಂಶಿತವ್ರತಾಃ।।

ವೈಶಂಪಾಯನನು ಹೇಳಿದನು: “ಧರ್ಮನಿಂದ ಅಪ್ಪಣೆಯನ್ನು ಪಡೆದು ಸತ್ಯವಿಕ್ರಮ ಸಂಶಿತವ್ರತ ಪಾಂಡವರು ಹದಿಮೂರನೆಯ ವರ್ಷವನ್ನು ಅಜ್ಞಾತವಾಸದಲ್ಲಿ ಕಳೆಯಲು ಸಿದ್ಧರಾಗಿ ವಿನೀತರಾಗಿ ವಿಧ್ವಾಂಸರ ಸಹಿತ ಕುಳಿತುಕೊಂಡರು.

03299002a ಯೇ ತದ್ಭಕ್ತಾ ವಸಂತಿ ಸ್ಮ ವನವಾಸೇ ತಪಸ್ವಿನಃ।
03299002c ತಾನಬ್ರುವನ್ಮಹಾತ್ಮಾನಃ ಶಿಷ್ಟಾಃ ಪ್ರಾಂಜಲಯಸ್ತದಾ।
03299002e ಅಭ್ಯನುಜ್ಞಾಪಯಿಷ್ಯಂತಸ್ತಂ ನಿವಾಸಂ ಧೃತವ್ರತಾಃ।।

ಶಿಷ್ಠರಾದ ಆ ಮಹಾತ್ಮ ಧೃತವ್ರತರು ಅಂಜಲೀಬದ್ಧರಾಗಿ, ಅವರ ಮೇಲಿನ ಭಕ್ತಿಯಿಂದ ಅವರೊಂದಿಗೆ ವನದಲ್ಲಿ ವಾಸಿಸುತ್ತಿರುವ ತಪಸ್ವಿಗಳಿಗೆ ಆ ವನವಾಸದ ಕೊನೆಯಲ್ಲಿ ಬೀಳ್ಕೊಂಡರು.

03299003a ವಿದಿತಂ ಭವತಾಂ ಸರ್ವಂ ಧಾರ್ತರಾಷ್ಟ್ರೈರ್ಯಥಾ ವಯಂ।
03299003c ಚದ್ಮನಾ ಹೃತರಾಜ್ಯಾಶ್ಚ ನಿಃಶ್ವಾಶ್ಚ ಬಹುಶಃ ಕೃತಾಃ।।

“ಧಾರ್ತರಾಷ್ಟ್ರರಿಂದ ನಾವು ಹೇಗೆ ಬಹು ವಿಧಗಳಲ್ಲಿ ರಾಜ್ಯ ಮತ್ತು ನಮ್ಮದೆಲ್ಲವನ್ನೂ ಕಳೆದುಕೊಂಡೆವು ನಿಮಗೆ ತಿಳಿದೇ ಇದೆ.

03299004a ಉಷಿತಾಶ್ಚ ವನೇ ಕೃಚ್ಚ್ರಂ ಯತ್ರ ದ್ವಾದಶ ವತ್ಸರಾನ್।
03299004c ಅಜ್ಞಾತವಾಸಸಮಯಂ ಶೇಷಂ ವರ್ಷಂ ತ್ರಯೋದಶಂ।
03299004e ತದ್ವತ್ಸ್ಯಾಮೋ ವಯಂ ಚನ್ನಾಸ್ತದನುಜ್ಞಾತುಮರ್ಹಥ।।

ಈಗ ತುಂಬಾ ಕಷ್ಟಪಟ್ಟು ನಾವು ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಿದೆವು. ಉಳಿದ ಹದಿಮೂರನೆಯ ವರ್ಷವನ್ನು ಒಪ್ಪಂದದಂತೆ ಅಜ್ಞಾತವಾಸವನ್ನೂ ಕೂಡ ನಾವು ಕಷ್ಟದಿಂದಲೇ ಕಳೆಯುತ್ತೇವೆ. ನಮಗೆ ಅನುಜ್ಞೆಯನ್ನು ನೀಡಿ.

03299005a ಸುಯೋಧನಶ್ಚ ದುಷ್ಟಾತ್ಮಾ ಕರ್ಣಶ್ಚ ಸಹಸೌಬಲಃ।
03299005c ಜಾನಂತೋ ವಿಷಮಂ ಕುರ್ಯುರಸ್ಮಾಸ್ವತ್ಯಂತವೈರಿಣಃ।
03299005e ಯುಕ್ತಾಚಾರಾಶ್ಚ ಯುಕ್ತಾಶ್ಚ ಪೌರಸ್ಯ ಸ್ವಜನಸ್ಯ ಚ।।

ನಮಗೆ ಅತ್ಯಂತ ವೈರಿ, ದುಷ್ಟಾತ್ಮ ಸುಯೋಧನನು ಕರ್ಣ ಮತ್ತು ಸೌಬಲನೊಡಗೂಡಿ ನಮ್ಮನ್ನು ಹುಡಿಕಿದರೆ ನಮಗೆ, ನಮ್ಮ ಪುರಜನರಿಗೆ, ಸ್ವಜನರಿಗೆ ತೊಂದರೆಯನ್ನು ನೀಡಬಹುದು.

03299006a ಅಪಿ ನಸ್ತದ್ಭವೇದ್ಭೂಯೋ ಯದ್ವಯಂ ಬ್ರಾಹ್ಮಣೈಃ ಸಹ।
03299006c ಸಮಸ್ತಾಃ ಸ್ವೇಷು ರಾಷ್ಟ್ರೇಷು ಸ್ವರಾಜ್ಯಸ್ಥಾ ಭವೇಮಹಿ।।

ಮುಂದೆ ನಾವು ಬ್ರಾಹ್ಮಣರೊಡನೆ ನಮ್ಮ ರಾಷ್ಟ್ರದಲ್ಲಿ ನಮ್ಮ ರಾಜ್ಯದಲ್ಲಿ ಒಟ್ಟಿಗೇ ಇರುವಂತೆ ಆಗುವುದೋ ಇಲ್ಲವೋ!”

03299007a ಇತ್ಯುಕ್ತ್ವಾ ದುಃಖಶೋಕಾರ್ತಃ ಶುಚಿರ್ಧರ್ಮಸುತಸ್ತದಾ।
03299007c ಸಮ್ಮೂರ್ಚಿತೋಽಭವದ್ರಾಜಾ ಸಾಶ್ರುಕಂಠೋ ಯುಧಿಷ್ಠಿರಃ।।

ಕಣ್ಣೀರು ತುಂಬಿದ ಕಂಠದಲ್ಲಿ ಹೀಗೆ ಮಾತನಾಡಿ ದುಃಖಶೋಕಾರ್ತನಾದ ಆ ಶುಚಿ ಧರ್ಮಸುತ ರಾಜಾ ಯುಧಿಷ್ಠಿರನು ಮೂರ್ಛಿತನಾದನು.

03299008a ತಮಥಾಶ್ವಾಸಯನ್ಸರ್ವೇ ಬ್ರಾಹ್ಮಣಾ ಭ್ರಾತೃಭಿಃ ಸಹ।
03299008c ಅಥ ಧೌಮ್ಯೋಽಬ್ರವೀದ್ವಾಕ್ಯಂ ಮಹಾರ್ಥಂ ನೃಪತಿಂ ತದಾ।।

ಎಲ್ಲ ಬ್ರಾಹ್ಮಣರೂ, ಸಹೋದರರೂ ಒಟ್ಟಿಗೇ ಅವನಿಗೆ ಆಶ್ವಾಸನೆಯನ್ನಿತ್ತರು. ಆಗ ಧೌಮ್ಯನು ಮಹಾರ್ಥವುಳ್ಳ ಈ ಮಾತುಗಳನ್ನು ನೃಪತಿಗೆ ಹೇಳಿದನು:

03299009a ರಾಜನ್ವಿದ್ವಾನ್ಭವಾನ್ದಾಂತಃ ಸತ್ಯಸಂಧೋ ಜಿತೇಂದ್ರಿಯಃ।
03299009c ನೈವಂವಿಧಾಃ ಪ್ರಮುಹ್ಯಂತಿ ನರಾಃ ಕಸ್ಯಾಂ ಚಿದಾಪದಿ।।

“ರಾಜನ್! ನೀನು ತಿಳಿದವನು. ನಿಯಂತ್ರಿಸಿಕೊಂಡಿರುವವನು. ಸತ್ಯಸಂಧನು. ಜಿತೇಂದ್ರಿಯನು. ಇಂಥಹ ನರರು ಈ ರೀತಿಯಲ್ಲಿ ಯಾವುದೇ ಆಪತ್ತಿನಲ್ಲಿಯೂ ಬುದ್ಧಿಯನ್ನು ಕಳೆದುಕೊಳ್ಳುವುದಿಲ್ಲ.

03299010a ದೇವೈರಪ್ಯಾಪದಃ ಪ್ರಾಪ್ತಾಶ್ಚನ್ನೈಶ್ಚ ಬಹುಶಸ್ತಥಾ।
03299010c ತತ್ರ ತತ್ರ ಸಪತ್ನಾನಾಂ ನಿಗ್ರಹಾರ್ಥಂ ಮಹಾತ್ಮಭಿಃ।।

ಮಹಾತ್ಮ ದೇವತೆಗಳು ಕೂಡ ಬಹಳ ಬಾರಿ ಆಪತ್ತನ್ನು ಪಡೆದಾಗ ಅವರ ವೈರಿಗಳನ್ನು ನಿಗ್ರಹಿಸಲು ಅಲ್ಲಲ್ಲಿ ವೇಷಮರೆಸಿಕೊಂಡು ಇದ್ದರು.

03299011a ಇಂದ್ರೇಣ ನಿಷಧಾನ್ಪ್ರಾಪ್ಯ ಗಿರಿಪ್ರಸ್ಥಾಶ್ರಮೇ ತದಾ।
03299011c ಚನ್ನೇನೋಷ್ಯ ಕೃತಂ ಕರ್ಮ ದ್ವಿಷತಾಂ ಬಲನಿಗ್ರಹೇ।।

ಇಂದ್ರನು ನಿಷಾಧರಲ್ಲಿಗೆ ಹೋಗಿ ಅಲ್ಲಿ ಗಿರಿತಪ್ಪಲಿನ ಆಶ್ರಮದಲ್ಲಿ ವೇಷಮರೆಸಿಕೊಂಡು ದ್ವೇಷಿಗಳ ಬಲವನ್ನು ನಿಗ್ರಹಿಸಿದನು.

03299012a ವಿಷ್ಣುನಾಶ್ವಶಿರಃ ಪ್ರಾಪ್ಯ ತಥಾದಿತ್ಯಾಂ ನಿವತ್ಸ್ಯತಾ।
03299012c ಗರ್ಭೇ ವಧಾರ್ಥಂ ದೈತ್ಯಾನಾಮಜ್ಞಾತೇನೋಷಿತಂ ಚಿರಂ।।

ದೈತ್ಯರ ವಧೆಗಾಗಿ ಅದಿತಿಯ ಗರ್ಭದಲ್ಲಿ ವಾಸಿಸುವ ಮೊದಲು ವಿಷ್ಣುವು ಕುದುರೆಯ ಮುಖವನ್ನು ಪಡೆದು ಬಹುಕಾಲದವರೆಗೆ ಅಡಗಿದ್ದನು.

03299013a ಪ್ರಾಪ್ಯ ವಾಮನರೂಪೇಣ ಪ್ರಚ್ಚನ್ನಂ ಬ್ರಹ್ಮರೂಪಿಣಾ।
03299013c ಬಲೇರ್ಯಥಾ ಹೃತಂ ರಾಜ್ಯಂ ವಿಕ್ರಮೈಸ್ತಚ್ಚ ತೇ ಶ್ರುತಂ।।

ಆ ಬ್ರಹ್ಮರೂಪಿಣಿಯು ವಾಮನರೂಪವನ್ನು ಪಡೆದು ಅಡಗಿ ವಿಕ್ರಮದಿಂದ ಬಲಿಯ ರಾಜ್ಯವನ್ನು ಕಸಿದುಕೊಂಡನು ಎನ್ನುವುದನ್ನು ನೀನು ಕೇಳಿದ್ದೀಯೆ.

03299014a ಔರ್ವೇಣ ವಸತಾ ಚನ್ನಮೂರೌ ಬ್ರಹ್ಮರ್ಷಿಣಾ ತದಾ।
03299014c ಯತ್ಕೃತಂ ತಾತ ಲೋಕೇಷು ತಚ್ಚ ಸರ್ವಂ ಶ್ರುತಂ ತ್ವಯಾ।।

ಮಗೂ! ಬ್ರಹ್ಮರ್ಷಿ ಔರ್ವನು ತನ್ನ ತಾಯಿಯ ತೊಡೆಯೊಳಗೆ ಅಡಗಿ ಲೋಕದಲ್ಲಿ ಏನೆಲ್ಲ ಸಾಧಿಸಿದನು ಎನ್ನುವುದೆಲ್ಲವನ್ನೂ ನೀನು ಕೇಳಿದ್ದೀಯೆ.

03299015a ಪ್ರಚ್ಚನ್ನಂ ಚಾಪಿ ಧರ್ಮಜ್ಞ ಹರಿಣಾ ವೃತ್ರನಿಗ್ರಹೇ।
03299015c ವಜ್ರಂ ಪ್ರವಿಶ್ಯ ಶಕ್ರಸ್ಯ ಯತ್ಕೃತಂ ತಚ್ಚ ತೇ ಶ್ರುತಂ।।

ಧರ್ಮಜ್ಞ! ಹರಿಯು ಶಕ್ರನ ವಜ್ರವನ್ನು ಪ್ರವೇಶಿಸಿ ವೃತ್ರನನ್ನು ನಿಗ್ರಹಿಸಿದುದನ್ನು ಕೂಡ ನೀನು ಕೇಳಿದ್ದೀಯೆ.

03299016a ಹುತಾಶನೇನ ಯಚ್ಚಾಪಃ ಪ್ರವಿಶ್ಯ ಚನ್ನಮಾಸತಾ।
03299016c ವಿಬುಧಾನಾಂ ಕೃತಂ ಕರ್ಮ ತಚ್ಚ ಸರ್ವಂ ಶ್ರುತಂ ತ್ವಯಾ।।

ಹುತಾಶನನು ಸಾಗರವನ್ನು ಪ್ರವೇಶಿಸಿ ಅಡಗಿ ಕುಳಿತುಕೊಂಡು ದೇವತೆಗಳಿಗೆ ಏನು ಮಾಡಿದನೆಂದು ಎಲ್ಲವನ್ನೂ ನೀನು ಕೇಳಿದ್ದೀಯೆ.

03299017a ಏವಂ ವಿವಸ್ವತಾ ತಾತ ಚನ್ನೇನೋತ್ತಮತೇಜಸಾ।
03299017c ನಿರ್ದಗ್ಧಾಃ ಶತ್ರವಃ ಸರ್ವೇ ವಸತಾ ಭುವಿ ಸರ್ವಶಃ।।

ಮಗೂ! ಹೀಗೆಯೇ ಉತ್ತಮ ತೇಜಸ್ವಿ ವಿವಸ್ವತನು ಭೂಮಿಯಲ್ಲಿ ಅಡಗಿ ವಾಸಿಸಿ ಎಲ್ಲೆಡೆಯಲ್ಲಿದ್ದ ಶತ್ರುಗಳನ್ನು ಸುಟ್ಟುಹಾಕಿದನು.

03299018a ವಿಷ್ಣುನಾ ವಸತಾ ಚಾಪಿ ಗೃಹೇ ದಶರಥಸ್ಯ ವೈ।
03299018c ದಶಗ್ರೀವೋ ಹತಶ್ಚನ್ನಂ ಸಂಯುಗೇ ಭೀಮಕರ್ಮಣಾ।।

ವೇಷಮರೆಸಿ ದಶರಥನ ಮನೆಯಲ್ಲಿ ವಾಸಿಸುತ್ತಿದ್ದ ವಿಷ್ಣುವು ಯುದ್ಧದಲ್ಲಿ ದಶಗ್ರೀವನನ್ನು ಕೊಲ್ಲುವ ಭಯಂಕರ ಕೃತ್ಯವನ್ನೆಸಗಿದನು.

03299019a ಏವಮೇತೇ ಮಹಾತ್ಮಾನಃ ಪ್ರಚ್ಚನ್ನಾಸ್ತತ್ರ ತತ್ರ ಹ।
03299019c ಅಜಯಂ ಶಾತ್ರವಾನ್ ಯುದ್ಧೇ ತಥಾ ತ್ವಮಪಿ ಜೇಷ್ಯಸಿ।।

ಹೇಗೆ ಈ ಮಹಾತ್ಮರು ಅಲ್ಲಲ್ಲಿ ವೇಷಮರೆಸಿಕೊಂಡಿದ್ದು ಯುದ್ಧದಲ್ಲಿ ಶತ್ರುಗಳನ್ನು ಜಯಿಸಿದರೋ ಹಾಗೆ ನೀನೂ ಕೂಡ ಜಯಿಸುತ್ತೀಯೆ.”

03299020a ತಥಾ ಧೌಮ್ಯೇನ ಧರ್ಮಜ್ಞೋ ವಾಕ್ಯೈಃ ಸಂಪರಿತೋಷಿತಃ।
03299020c ಶಾಸ್ತ್ರಬುದ್ಧ್ಯಾ ಸ್ವಬುದ್ಧ್ಯಾ ಚ ನ ಚಚಾಲ ಯುಧಿಷ್ಠಿರಃ।।

ಧರ್ಮಜ್ಞ ಧೌಮ್ಯನ ಮಾತುಗಳಿಂದ ಸಮಾಧಾನಗೊಂಡ ಯುಧಿಷ್ಠಿರನು ಶಾಸ್ತ್ರಬುದ್ಧಿ ಮತ್ತು ಸ್ವಬುದ್ಧಿಯಿಂದ ಚಂಚಲಿತನಾಗಲಿಲ್ಲ.

03299021a ಅಥಾಬ್ರವೀನ್ಮಹಾಬಾಹುರ್ಭೀಮಸೇನೋ ಮಹಾಬಲಃ।
03299021c ರಾಜಾನಂ ಬಲಿನಾಂ ಶ್ರೇಷ್ಠೋ ಗಿರಾ ಸಂಪರಿಹರ್ಷಯನ್।।

ಆಗ ಮಹಾಬಾಹು ಮಹಾಬಲಿ ಬಲಿಗಳಲ್ಲಿ ಶ್ರೇಷ್ಠ ಭೀಮಸೇನನು ರಾಜನಿಗೆ ಪ್ರೋತ್ಸಾಹಿಸುವ ಈ ಮಾತುಗಳನ್ನಾಡಿದನು.

03299022a ಅವೇಕ್ಷಯಾ ಮಹಾರಾಜ ತವ ಗಾಂಡೀವಧನ್ವನಾ।
03299022c ಧರ್ಮಾನುಗತಯಾ ಬುದ್ಧ್ಯಾ ನ ಕಿಂ ಚಿತ್ಸಾಹಸಂ ಕೃತಂ।।

“ಮಹಾರಾಜ! ನಿನ್ನನ್ನು ನೋಡಿ ಮತ್ತು ಧರ್ಮವನ್ನು ಅನುಸರಿಸುವ ಬುದ್ಧಿಯಿಂದ ಈ ಗಾಂಡೀವಧನ್ವಿಯು ಏನೂ ಸಾಹಸ ಕೃತ್ಯವನ್ನು ಇನ್ನೂ ಮಾಡಿಲ್ಲ.

03299023a ಸಹದೇವೋ ಮಯಾ ನಿತ್ಯಂ ನಕುಲಶ್ಚ ನಿವಾರಿತೌ।
03299023c ಶಕ್ತೌ ವಿಧ್ವಂಸನೇ ತೇಷಾಂ ಶತ್ರುಘ್ನೌ ಭೀಮವಿಕ್ರಮೌ।।

ನಿತ್ಯವೂ ನಾನು ನಕುಲನನ್ನೂ ಸಹದೇವನನ್ನೂ ತಡೆಯುತ್ತಿದ್ದೇನೆ. ಈ ಭೀಮವಿಕ್ರಮಿ ಶತ್ರುಘ್ರ್ನರೀರ್ವರೂ ಅವರನ್ನು ವಿಧ್ವಂಸಿಸಲು ಶಕ್ತರಾಗಿದ್ದಾರೆ.

03299024a ನ ವಯಂ ತತ್ಪ್ರಹಾಸ್ಯಾಮೋ ಯಸ್ಮಿನ್ಯೋಕ್ಷ್ಯತಿ ನೋ ಭವಾನ್।
03299024c ಭವಾನ್ವಿಧತ್ತಾಂ ತತ್ಸರ್ವಂ ಕ್ಷಿಪ್ರಂ ಜೇಷ್ಯಾಮಹೇ ಪರಾನ್।।

ನೀನು ನಮಗೆ ಯಾವ ಕೆಲಸವನ್ನು ಕೊಡುತ್ತೀಯೋ ಅದನ್ನು ದೂರಕ್ಕಿಡುವುದಿಲ್ಲ. ನೀನೇ ನಮಗೆ ವಿಧಿಸಿದರೆ ಶೀಘ್ರದಲ್ಲಿಯೇ ನಾವು ಆ ಎಲ್ಲ ಶತ್ರುಗಳನ್ನೂ ಜಯಿಸುತ್ತೇವೆ.”

03299025a ಇತ್ಯುಕ್ತೇ ಭೀಮಸೇನೇನ ಬ್ರಾಹ್ಮಣಾಃ ಪರಮಾಶಿಷಃ।
03299025c ಪ್ರಯುಜ್ಯಾಪೃಚ್ಚ್ಯ ಭರತಾನ್ಯಥಾಸ್ವಾನ್ ಸ್ವಾನ್ಯಯುರ್ಗೃಹಾನ್।।

ಭೀಮಸೇನನು ಹೀಗೆ ಹೇಳಲು ಬ್ರಾಹ್ಮಣರು ಪರಮ ಆಶೀರ್ವಾದಗಳನ್ನಿತ್ತು, ಭಾರತರಿಂದ ಬೀಳ್ಕೊಂಡು ತಮ್ಮ ತಮ್ಮ ನಿವಾಸಗಳಿಗೆ ತೆರಳಿದರು.

03299026a ಸರ್ವೇ ವೇದವಿದೋ ಮುಖ್ಯಾ ಯತಯೋ ಮುನಯಸ್ತಥಾ।
03299026c ಆಶೀರುಕ್ತ್ವಾ ಯಥಾನ್ಯಾಯಂ ಪುನರ್ದರ್ಶನಕಾಂಕ್ಷಿಣಃ।।

ಅವರನ್ನು ಪುನಃ ಕಾಣುವ ಇಚ್ಛೆಯುಳ್ಳವರಾಗಿ ಎಲ್ಲ ವೇದವಿದ ಮುಖ್ಯ ಯತಿ-ಮುನಿಗಳೂ ಯಥಾನ್ಯಾಯವಾಗಿ ಆಶೀರ್ವಚನಗಳನ್ನು ನೀಡಿದರು.

03299027a ಸಹ ಧೌಮ್ಯೇನ ವಿದ್ವಾಂಸಸ್ತಥಾ ತೇ ಪಂಚ ಪಾಂಡವಾಃ।
03299027c ಉತ್ಥಾಯ ಪ್ರಯಯುರ್ವೀರಾಃ ಕೃಷ್ಣಾಮಾದಾಯ ಭಾರತ।।

ಭಾರತ! ವಿದ್ವಾಂಸರಾದ ಆ ವೀರ ಪಂಚ ಪಾಂಡವರು ಧೌಮ್ಯನೊಂದಿಗೆ ಮೇಲೆದ್ದು ದ್ರೌಪದಿಯೊಡನೆ ಹೊರಟರು.

03299028a ಕ್ರೋಶಮಾತ್ರಮತಿಕ್ರಮ್ಯ ತಸ್ಮಾದ್ದೇಶಾನ್ನಿಮಿತ್ತತಃ।
03299028c ಶ್ವೋಭೂತೇ ಮನುಜವ್ಯಾಘ್ರಾಶ್ಚನ್ನವಾಸಾರ್ಥಮುದ್ಯತಾಃ।।
03299029a ಪೃಥಕ್ಶಾಸ್ತ್ರವಿದಃ ಸರ್ವೇ ಸರ್ವೇ ಮಂತ್ರವಿಶಾರದಾಃ।
03299029c ಸಂಧಿವಿಗ್ರಹಕಾಲಜ್ಞಾ ಮಂತ್ರಾಯ ಸಮುಪಾವಿಶನ್।।

ಯಾವುದೋ ಕಾರಣದಿಂದ ಆ ಪ್ರದೇಶದಿಂದ ಕ್ರೋಶಮಾತ್ರ ದೂರದವರೆಗೆ ಪ್ರಯಾಣ ಮಾಡಿದರು. ಮರುದಿನ ಆ ಮನುಜವ್ಯಾಘ್ರರು, ಅಜ್ಞಾತವಾಸವನ್ನು ಪ್ರಾರಂಭಿಸಲು ಸಿದ್ಧರಾಗಿ ಎಲ್ಲರೂ ಒಟ್ಟಿಗೇ ಕುಳಿತು ಸಮಾಲೋಚಿಸಿದರು. ಪ್ರತಿಯೊಬ್ಬರಿಗೂ ಅವರವರ ಕಲೆಯು ತಿಳಿದಿತ್ತು. ಮಂತ್ರವಿಶಾರದರಾಗಿದ್ದರು. ಹಾಗೂ ಶಾಂತಿ ಮತ್ತು ಕಲಹಗಳ ಕಾಲವನ್ನು ಚೆನ್ನಾಗಿ ತಿಳಿದಿದ್ದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವಣಿ ಅಜ್ಞಾತವಾಸಮಂತ್ರಣೇ ನವನವತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಆರಣೇಯಪರ್ವದಲ್ಲಿ ಅಜ್ಞಾತವಾಸಮಂತ್ರದಲ್ಲಿ ಇನ್ನೂರಾತೊಂಭತ್ತೊಂಭತ್ತನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವ ಸಮಾಪ್ತಿಃ।।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಆರಣೇಯಪರ್ವದ ಸಮಾಪ್ತಿ. ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಪರ್ವ ಸಮಾಪ್ತಿಃ।।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದ ಸಮಾಪ್ತಿ. ಇದೂವರೆಗಿನ ಒಟ್ಟು ಮಹಾಪರ್ವಗಳು-3/18, ಉಪಪರ್ವಗಳು-44/100, ಅಧ್ಯಾಯಗಳು-596/1995, ಶ್ಲೋಕಗಳು-19894/73784.