ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಆರಣೇಯ ಪರ್ವ
ಅಧ್ಯಾಯ 298
ಸಾರ
ಯಕ್ಷನು ತಾನು ಯುಧಿಷ್ಠಿರನ ತಂದೆ ಧರ್ಮನೆಂದು ಹೇಳಿಕೊಳ್ಳುವುದು; ಯುಧಿಷ್ಠಿರನು ಬ್ರಾಹ್ಮಣನ ಅರಣಿಗಳನ್ನು, ಹದಿಮೂರನೆಯ ವರ್ಷ ಯಾರೂ ತಮ್ಮನ್ನು ಗುರುತಿಸದಿರಲೆಂದೂ, ಧರ್ಮದಲ್ಲಿ ನೆಲೆಸಿರುವಂತೆಯೂ ವರಗಳನ್ನು ಪಡೆಯುವುದು (1-28).
03298001 ವೈಶಂಪಾಯನ ಉವಾಚ।
03298001a ತತಸ್ತೇ ಯಕ್ಷವಚನಾದುದತಿಷ್ಠಂತ ಪಾಂಡವಾಃ।
03298001c ಕ್ಷುತ್ಪಿಪಾಸೇ ಚ ಸರ್ವೇಷಾಂ ಕ್ಷಣೇ ತಸ್ಮಿನ್ವ್ಯಗಚ್ಚತಾಂ।।
ವೈಶಂಪಾಯನನು ಹೇಳಿದನು: “ಆಗ ಆ ಯಕ್ಷನ ವಚನದಂತೆ ಪಾಂಡವರು ಎದ್ದು ನಿಂತರು ಮತ್ತು ಅವರೆಲ್ಲರ ಹಸಿವು ಬಾಯಾರಿಕೆಗಳು ಕ್ಷಣಮಾತ್ರದಲ್ಲಿ ಇಲ್ಲವಾದವು.
03298002 ಯುಧಿಷ್ಠಿರ ಉವಾಚ।
03298002a ಸರಸ್ಯೇಕೇನ ಪಾದೇನ ತಿಷ್ಠಂತಮಪರಾಜಿತಂ।
03298002c ಪೃಚ್ಚಾಮಿ ಕೋ ಭವಾನ್ದೇವೋ ನ ಮೇ ಯಕ್ಷೋ ಮತೋ ಭವಾನ್।।
ಯುದಿಷ್ಠಿರನು ಹೇಳಿದನು: “ಈ ಸರೋವರದಲ್ಲಿ ಒಂದೇ ಕಾಲಿನ ಮೇಲೆ ಅಪರಾಜಿತನಾಗಿ ನಿಂತಿರುವ ನೀನು ಯಾವ ದೇವತೆಯೆಂದು ಕೇಳುತ್ತೇನೆ. ನೀನು ಯಕ್ಷನಾಗಿರಲಿಕ್ಕಿಲ್ಲ ಎಂದು ನನ್ನ ಅಭಿಪ್ರಾಯ.
03298003a ವಸೂನಾಂ ವಾ ಭವಾನೇಕೋ ರುದ್ರಾಣಾಮಥ ವಾ ಭವಾನ್।
03298003c ಅಥ ವಾ ಮರುತಾಂ ಶ್ರೇಷ್ಠೋ ವಜ್ರೀ ವಾ ತ್ರಿದಶೇಶ್ವರಃ।।
ನೀನು ವಸುಗಳಲ್ಲಿ ಒಬ್ಬನಾಗಿರಬಹುದೇ ಅಥವಾ ರುದ್ರರಲ್ಲಿ ಒಬ್ಬನಾಗಿರಬಹುದೇ? ಅಥವಾ ಮರುತರ ಶ್ರೇಷ್ಠನಾಗಿರಬಹುದೇ? ಅಥವಾ ವಜ್ರಿ ತ್ರಿದಶೇಶ್ವರನಿರಬಹುದೇ?
03298004a ಮಮ ಹಿ ಭ್ರಾತರ ಇಮೇ ಸಹಸ್ರಶತಯೋಧಿನಃ।
03298004c ನ ತಂ ಯೋಗಂ ಪ್ರಪಶ್ಯಾಮಿ ಯೇನ ಸ್ಯುರ್ವಿನಿಪಾತಿತಾಃ।।
ಯಾಕೆಂದರೆ ನನ್ನ ಈ ತಮ್ಮಂದಿರು ನೂರಾರು ಸಹಸ್ರಾರು ಯೋಧರನ್ನು ಹೋರಾಡಬಲ್ಲರು. ಅವರು ಹೇಗೆ ಕೆಳಗುರಿಳಿಸಲ್ಪಟ್ಟರು ಎನ್ನುವುದೇ ನನಗೆ ತೋಚದಾಗಿದೆ.
03298005a ಸುಖಂ ಪ್ರತಿವಿಬುದ್ಧಾನಾಮಿಂದ್ರಿಯಾಣ್ಯುಪಲಕ್ಷಯೇ।
03298005c ಸ ಭವಾನ್ಸುಹೃದಸ್ಮಾಕಮಥ ವಾ ನಃ ಪಿತಾ ಭವಾನ್।।
ಅವರು ತಮ್ಮ ಬುದ್ಧಿಯನ್ನೂ ಇಂದ್ರಿಯಗಳನ್ನೂ ಸುಖವಾಗಿ ಪಡೆದಿರುವುದನ್ನು ನೋಡಿದರೆ ನೀನು ನಮ್ಮ ಸುಹೃದಯನಿರಬಹುದು. ಅಥವಾ ನೀನು ನನ್ನ ತಂದೆಯಲ್ಲವೇ?”
03298006 ಯಕ್ಷ ಉವಾಚ।
03298006a ಅಹಂ ತೇ ಜನಕಸ್ತಾತ ಧರ್ಮೋ ಮೃದುಪರಾಕ್ರಮ।
03298006c ತ್ವಾಂ ದಿದೃಕ್ಷುರನುಪ್ರಾಪ್ತೋ ವಿದ್ಧಿ ಮಾಂ ಭರತರ್ಷಭ।।
ಯಕ್ಷನು ಹೇಳಿದನು: “ಮಗೂ! ಮೃದುಪರಾಕ್ರಮಿ! ನಾನು ನಿನ್ನ ಜನಕ ಧರ್ಮ. ಭರತರ್ಷಭ! ನಿನ್ನನ್ನು ನೋಡಲು ನಾನು ಬಂದಿದ್ದೇನೆ ಎಂದು ತಿಳಿ.
03298007a ಯಶಃ ಸತ್ಯಂ ದಮಃ ಶೌಚಮಾರ್ಜವಂ ಹ್ರೀರಚಾಪಲಂ।
03298007c ದಾನಂ ತಪೋ ಬ್ರಹ್ಮಚರ್ಯಮಿತ್ಯೇತಾಸ್ತನವೋ ಮಮ।।
ಯಶಸ್ಸು, ಸತ್ಯ, ದಮ, ಶೌಚ, ಆರ್ಜವ, ವಿನಯತೆ, ಅಚಪಲತೆ, ದಾನ, ತಪಸ್ಸು, ಬ್ರಹ್ಮಚರ್ಯ ಇವೇ ನನ್ನ ದೇಹ.
03298008a ಅಹಿಂಸಾ ಸಮತಾ ಶಾಂತಿಸ್ತಪಃ ಶೌಚಮಮತ್ಸರಃ।
03298008c ದ್ವಾರಾಣ್ಯೇತಾನಿ ಮೇ ವಿದ್ಧಿ ಪ್ರಿಯೋ ಹ್ಯಸಿ ಸದಾ ಮಮ।।
ಅಹಿಂಸೆ, ಸಮತೆ, ಶಾಂತಿ, ತಪಸ್ಸು, ಶೌಚ, ಅಮಾತ್ಸರ್ಯ, ಇವು ನನ್ನ ದ್ವಾರಗಳು ಮತ್ತು ನನಗೆ ಸದಾ ಪ್ರಿಯವಾದುವುಗಳೆಂದು ತಿಳಿ.
03298009a ದಿಷ್ಟ್ಯಾ ಪಂಚಸು ರಕ್ತೋಽಸಿ ದಿಷ್ಟ್ಯಾ ತೇ ಷಟ್ಪದೀ ಜಿತಾ।
03298009c ದ್ವೇ ಪೂರ್ವೇ ಮಧ್ಯಮೇ ದ್ವೇ ಚ ದ್ವೇ ಚಾಂತೇ ಸಾಂಪರಾಯಿಕೇ।।
ಅದೃಷ್ಟವೆಂದರೆ ನೀವು ಐದರಲ್ಲಿ ಅನುರಕ್ತರಾಗಿದ್ದೀರಿ. ಪರಲೋಕವನ್ನು ನೀಡುವ ಆರನ್ನು – ಮೊದಲು ಬರುವ ಎರಡು, ಮಧ್ಯದಲ್ಲಿ ಬರುವ ಎರಡು ಮತ್ತು ಕೊನೆಯಲ್ಲಿ ಬರುವ ಎರಡು - ಗೆದ್ದಿದ್ದೀರಿ.
03298010a ಧರ್ಮೋಽಹಮಸ್ಮಿ ಭದ್ರಂ ತೇ ಜಿಜ್ಞಾಸುಸ್ತ್ವಾಮಿಹಾಗತಃ।
03298010c ಆನೃಶಂಸ್ಯೇನ ತುಷ್ಟೋಽಸ್ಮಿ ವರಂ ದಾಸ್ಯಾಮಿ ತೇಽನಘ।।
ನಾನು ಧರ್ಮ! ನಿನಗೆ ಮಂಗಳವಾಗಲಿ! ನಿನ್ನೊಡನೆ ಜಿಜ್ಞಾಸಿಸಲು ಇಲ್ಲಿಗೆ ಬಂದಿದ್ದೇನೆ. ಅನಘ! ನಿನ್ನ ಸತ್ಯತೆಯಿಂದ ತುಷ್ಟನಾಗಿದ್ದೇನೆ. ನಿನಗೆ ವರವನ್ನು ಕೊಡುತ್ತೇನೆ.
03298011a ವರಂ ವೃಣೀಷ್ವ ರಾಜೇಂದ್ರ ದಾತಾ ಹ್ಯಸ್ಮಿ ತವಾನಘ।
03298011c ಯೇ ಹಿ ಮೇ ಪುರುಷಾ ಭಕ್ತಾ ನ ತೇಷಾಮಸ್ತಿ ದುರ್ಗತಿಃ।।
ರಾಜೇಂದ್ರ! ಅನಘ! ವರವನ್ನು ಬೇಡು. ಕೊಡುತ್ತಿದ್ದೇನೆ. ನನ್ನ ಭಕ್ತ ಪುರುಷರಿಗೆ ದುರ್ಗತಿಯುಂಟಾಗುವುದಿಲ್ಲ.”
03298012 ಯುಧಿಷ್ಠಿರ ಉವಾಚ।
03298012a ಅರಣೀಸಹಿತಂ ಯಸ್ಯ ಮೃಗ ಆದಾಯ ಗಚ್ಚತಿ।
03298012c ತಸ್ಯಾಗ್ನಯೋ ನ ಲುಪ್ಯೇರನ್ಪ್ರಥಮೋಽಸ್ತು ವರೋ ಮಮ।।
ಯುಧಿಷ್ಠಿರನು ಹೇಳಿದನು: “ಯಾರ ಅರಣಿಗಳನ್ನು ಎತ್ತಿಕೊಂಡು ಜಿಂಕೆಯು ಓಡಿಹೋಯಿತೋ ಅವನ ಅಗ್ನಿಯು ನಿಲ್ಲದಿರಲಿ. ಇದೇ ನನ್ನ ಮೊದಲನೆಯ ವರ.”
03298013 ಧರ್ಮ ಉವಾಚ।
03298013a ಅರಣೀಸಹಿತಂ ತಸ್ಯ ಬ್ರಾಹ್ಮಣಸ್ಯ ಹೃತಂ ಮಯಾ।
03298013c ಮೃಗವೇಷೇಣ ಕೌಂತೇಯ ಜಿಜ್ಞಾಸಾರ್ಥಂ ತವ ಪ್ರಭೋ।।
ಧರ್ಮನು ಹೇಳಿದನು: “ಕೌಂತೇಯ! ಪ್ರಭೋ! ನಿನ್ನನ್ನು ಪರೀಕ್ಷಿಸಲೋಸುಗ ಮೃಗವೇಷದಿಂದ ನಾನೇ ಆ ಬ್ರಾಹ್ಮಣನ ಅರಣಿಗಳನ್ನು ಅಪಹರಿಸಿದ್ದೆ.””
03298014 ವೈಶಂಪಾಯನ ಉವಾಚ।
03298014a ದದಾನೀತ್ಯೇವ ಭಗವಾನುತ್ತರಂ ಪ್ರತ್ಯಪದ್ಯತ।
03298014c ಅನ್ಯಂ ವರಯ ಭದ್ರಂ ತೇ ವರಂ ತ್ವಮಮರೋಪಮ।।
ವೈಶಂಪಾಯನನು ಹೇಳಿದನು: ““ಇದನ್ನು ಕೊಡುತ್ತೇನೆ” ಎಂದು ಭಗವಾನನು ಉತ್ತರವನ್ನಿತ್ತನು. “ನಿನಗೆ ಮಂಗಳವಾಗಲಿ! ಅಮರೋಪಮ! ನೀನು ಬೇರೆ ವರವನ್ನು ಕೇಳು.”
03298015 ಯುಧಿಷ್ಠಿರ ಉವಾಚ।
03298015a ವರ್ಷಾಣಿ ದ್ವಾದಶಾರಣ್ಯೇ ತ್ರಯೋದಶಮುಪಸ್ಥಿತಂ।
03298015c ತತ್ರ ನೋ ನಾಭಿಜಾನೀಯುರ್ವಸತೋ ಮನುಜಾಃ ಕ್ವ ಚಿತ್।।
ಯುಧಿಷ್ಠಿರನು ಹೇಳಿದನು: “ಅರಣ್ಯದಲ್ಲಿ ಹನ್ನೆರಡು ವರ್ಷಗಳು ಕಳೆದವು. ಹದಿಮೂರನೆಯ ವರ್ಷವು ಉಳಿದಿದೆ. ನಾವೆಲ್ಲಿ ವಾಸಿಸಿದರೂ ಅಲ್ಲಿ ಮನುಷ್ಯರು ನಮ್ಮನ್ನು ಗುರುತಿಸದೇ ಇರಲಿ.””
03298016 ವೈಶಂಪಾಯನ ಉವಾಚ।
03298016a ದದಾನೀತ್ಯೇವ ಭಗವಾನುತ್ತರಂ ಪ್ರತ್ಯಪದ್ಯತ।
03298016c ಭೂಯಶ್ಚಾಶ್ವಾಸಯಾಮಾಸ ಕೌಂತೇಯಂ ಸತ್ಯವಿಕ್ರಮಂ।।
ವೈಶಂಪಾಯನನು ಹೇಳಿದನು: ““ಅದನ್ನೂ ಕೊಟ್ಟಿದ್ದೇನೆ” ಎಂದು ಭಗವಾನನು ಉತ್ತರಿಸಿದನು ಮತ್ತು ಮತ್ತೊಮ್ಮೆ ಸತ್ಯವಿಕ್ರಮಿ ಕೌಂತೇಯನಿಗೆ ಆಶ್ವಾಸನೆಯನ್ನಿತ್ತನು.
03298017a ಯದ್ಯಪಿ ಸ್ವೇನ ರೂಪೇಣ ಚರಿಷ್ಯಥ ಮಹೀಮಿಮಾಂ।
03298017c ನ ವೋ ವಿಜ್ಞಾಸ್ಯತೇ ಕಶ್ಚಿತ್ತ್ರಿಷು ಲೋಕೇಷು ಭಾರತ।।
“ಭಾರತ! ಒಂದುವೇಳೆ ನಿಮ್ಮ ರೂಪದಲ್ಲಿಯೇ ಈ ಭೂಮಿಯಲ್ಲಿ ಸಂಚರಿಸಿದರೂ ಈ ಮೂರುಲೋಕಗಳಲ್ಲಿ ಯಾರೂ ನಿಮ್ಮನ್ನು ಗುರುತಿಸುವುದಿಲ್ಲ.
03298018a ವರ್ಷಂ ತ್ರಯೋದಶಂ ಚೇದಂ ಮತ್ಪ್ರಸಾದಾತ್ಕುರೂದ್ವಹಾಃ।
03298018c ವಿರಾಟನಗರೇ ಗೂಢಾ ಅವಿಜ್ಞಾತಾಶ್ಚರಿಷ್ಯಥ।।
ಕುರೂದ್ವಹರೇ! ನನ್ನ ಪ್ರಸಾದದಿಂದ ನೀವು ಈ ಹದಿಮೂರನೆಯ ವರ್ಷವನ್ನು ವಿರಾಟನಗರದಲ್ಲಿ ಗೂಢರಾಗಿ ಅವಿಜ್ಞಾತರಾಗಿ ವಾಸಮಾಡಿಕೊಂಡಿರುತ್ತೀರಿ.
03298019a ಯದ್ವಃ ಸಂಕಲ್ಪಿತಂ ರೂಪಂ ಮನಸಾ ಯಸ್ಯ ಯಾದೃಶಂ।
03298019c ತಾದೃಶಂ ತಾದೃಶಂ ಸರ್ವೇ ಚಂದತೋ ಧಾರಯಿಷ್ಯಥ।।
ನಿಮಗಿಷ್ಟವಾದ ಯಾವ ರೂಪದಲ್ಲಿರಬೇಕೆಂದು ನೀವು ಸಂಕಲ್ಪಿಸುತ್ತೀರೋ ಅದೇ ರೂಪವನ್ನು ನೀವೆಲ್ಲರೂ ಧರಿಸುತ್ತೀರಿ.
03298020a ಅರಣೀಸಹಿತಂ ಚೇದಂ ಬ್ರಾಹ್ಮಣಾಯ ಪ್ರಯಚ್ಚತ।
03298020c ಜಿಜ್ಞಾಸಾರ್ಥಂ ಮಯಾ ಹ್ಯೇತದಾಹೃತಂ ಮೃಗರೂಪಿಣಾ।।
ನಿನ್ನನ್ನು ಪರೀಕ್ಷಿಸಲು ಮೃಗರೂಪವನ್ನು ಧರಿಸಿ ನಾನು ಅಪಹರಿಸಿದ ಈ ಅರಣಿಗಳನ್ನು ಆ ಬ್ರಾಹ್ಮಣನಿಗೆ ತಲುಪಿಸಿ.
03298021a ತೃತೀಯಂ ಗೃಹ್ಯತಾಂ ಪುತ್ರ ವರಮಪ್ರತಿಮಂ ಮಹತ್।
03298021c ತ್ವಂ ಹಿ ಮತ್ಪ್ರಭವೋ ರಾಜನ್ವಿದುರಶ್ಚ ಮಮಾಂಶಭಾಕ್।।
ಪುತ್ರ! ಮೂರನೆಯ ಮಹತ್ತರ ಅಪ್ರತಿಮ ವರವನ್ನು ಸ್ವೀಕರಿಸು. ರಾಜನ್! ನೀನು ನನ್ನ ಪ್ರಭಾವದಿಂದಲೇ ಇದ್ದೀಯೆ. ವಿದುರನೂ ಕೂಡ ನನ್ನ ಅಂಶಕನೇ.”
03298022 ಯುಧಿಷ್ಠಿರ ಉವಾಚ।
03298022a ದೇವದೇವೋ ಮಯಾ ದೃಷ್ಟೋ ಭವಾನ್ ಸಾಕ್ಷಾತ್ಸನಾತನಃ।
03298022c ಯಂ ದದಾಸಿ ವರಂ ತುಷ್ಟಸ್ತಂ ಗ್ರಹೀಷ್ಯಾಮ್ಯಹಂ ಪಿತಃ।।
ಯುಧಿಷ್ಠಿರನು ಹೇಳಿದನು: “ದೇವದೇವ! ಸನಾತನನಾದ ನಿನ್ನನ್ನು ಸಾಕ್ಷಾತ್ ನೋಡಿ ನಾನು ಸಂತೋಷಗೊಂಡೆನು. ತಂದೆಯೇ! ನೀನಾಗಿಯೇ ನನಗೆ ಯಾವ ವರವನ್ನು ಕೊಡುತ್ತೀಯೋ ಅದನ್ನು ತೃಪ್ತಿಯಿಂದ ಸ್ವೀಕರಿಸುತ್ತೇನೆ.
03298023a ಜಯೇಯಂ ಲೋಭಮೋಹೌ ಚ ಕ್ರೋಧಂ ಚಾಹಂ ಸದಾ ವಿಭೋ।
03298023c ದಾನೇ ತಪಸಿ ಸತ್ಯೇ ಚ ಮನೋ ಮೇ ಸತತಂ ಭವೇತ್।।
ವಿಭೋ! ಸದಾ ನಾನು ಲೋಭ-ಮೋಹಗಳನ್ನು ಮತ್ತು ಕ್ರೋಧವನ್ನೂ ಜಯಿಸಿರಲಿ. ದಾನ, ತಪಸ್ಸು ಮತ್ತು ಸತ್ಯದಲ್ಲಿ ಸತತವೂ ನನ್ನ ಮನಸ್ಸು ಇರಲಿ.”
03298024 ಧರ್ಮ ಉವಾಚ।
03298024a ಉಪಪನ್ನೋ ಗುಣೈಃ ಸರ್ವೈಃ ಸ್ವಭಾವೇನಾಸಿ ಪಾಂಡವ।
03298024c ಭವಾನ್ಧರ್ಮಃ ಪುನಶ್ಚೈವ ಯಥೋಕ್ತಂ ತೇ ಭವಿಷ್ಯತಿ।।
ಧರ್ಮನು ಹೇಳಿದನು: “ಪಾಂಡವ! ಈ ಎಲ್ಲ ಗುಣಗಳೂ ನಿನ್ನಲ್ಲಿ ಸ್ವಾಭಾವಿಕವಾಗಿಯೇ ನೆಲಸಿವೆ. ನೀನೇ ಧರ್ಮ. ಪುನಃ ನೀನು ಹೇಳಿದುದೆಲ್ಲವೂ ಹಾಗೆಯೇ ಆಗುತ್ತವೆ.””
03298025 ವೈಶಂಪಾಯನ ಉವಾಚ।
03298025a ಇತ್ಯುಕ್ತ್ವಾಂತರ್ದಧೇ ಧರ್ಮೋ ಭಗವಾನ್ಲೋಕಭಾವನಃ।
03298025c ಸಮೇತಾಃ ಪಾಂಡವಾಶ್ಚೈವ ಸುಖಸುಪ್ತಾ ಮನಸ್ವಿನಃ।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಭಗವಾನ್ ಲೋಕಭಾವನ ಧರ್ಮನು ಅಂತರ್ಧಾನನಾದನು. ಮನಸ್ವಿ ಪಾಂಡವರೂ ಕೂಡ ಒಟ್ಟಿಗೇ ಮನಸ್ಸಿನಲ್ಲಿ ಸುಖವನ್ನು ಹೊಂದಿದರು.
03298026a ಅಭ್ಯೇತ್ಯ ಚಾಶ್ರಮಂ ವೀರಾಃ ಸರ್ವ ಏವ ಗತಕ್ಲಮಾಃ।
03298026c ಆರಣೇಯಂ ದದುಸ್ತಸ್ಮೈ ಬ್ರಾಹ್ಮಣಾಯ ತಪಸ್ವಿನೇ।।
ಆಯಾಸವನ್ನೆಲ್ಲ ಕಳೆದುಕೊಂಡ ಆ ವೀರರೆಲ್ಲರೂ ಆಶ್ರಮಕ್ಕೆ ಬಂದು ಆರಣೇಯವನ್ನು ಆ ತಪಸ್ವಿ ಬ್ರಾಹ್ಮಣನಿಗೆ ಕೊಟ್ಟರು.
03298027a ಇದಂ ಸಮುತ್ಥಾನಸಮಾಗಮಂ ಮಹತ್। ಪಿತುಶ್ಚ ಪುತ್ರಸ್ಯ ಚ ಕೀರ್ತಿವರ್ಧನಂ।
03298027c ಪಠನ್ನರಃ ಸ್ಯಾದ್ವಿಜಿತೇಂದ್ರಿಯೋ ವಶೀ। ಸಪುತ್ರಪೌತ್ರಃ ಶತವರ್ಷಭಾಗ್ಭವೇತ್।।
ಈ ಕೀರ್ತಿವರ್ಧಕ ತಂದೆ ಮತ್ತು ಮಗನ ಮಹಾ ಸಮುತ್ಥಾನ ಸಮಾಗಮವನ್ನು ಜಿತೀಂದ್ರಿಯನಾಗಿದ್ದುಕೊಂಡು, ತನ್ನನ್ನು ತಾನು ವಶದಲ್ಲಿಟ್ಟುಕೊಂಡು, ಯಾವ ನರನು ಓದುತ್ತಾನೋ ಅವನು ತನ್ನ ಪುತ್ರ ಪೌತ್ರರೊಂದಿಗೆ ನೂರುವರ್ಷಗಳು ಜೀವಿಸುತ್ತಾನೆ.
03298028a ನ ಚಾಪ್ಯಧರ್ಮೇ ನ ಸುಹೃದ್ವಿಭೇದನೇ। ಪರಸ್ವಹಾರೇ ಪರದಾರಮರ್ಶನೇ।
03298028c ಕದರ್ಯಭಾವೇ ನ ರಮೇನ್ಮನಃ ಸದಾ। ನೃಣಾಂ ಸದಾಖ್ಯಾನಮಿದಂ ವಿಜಾನತಾಂ।।
ಈ ಸದಾಖ್ಯಾನವನ್ನು ತಿಳಿದ ನರರು ಅಧರ್ಮದಲ್ಲಿ ರುಚಿಯನ್ನಿಡುವುದಿಲ್ಲ, ಸುಹೃದರೊಂದಿಗೆ ಬೇರಾಗುವುದಿಲ್ಲ, ಪರರಿಂದ ಕದಿಯುವುದರಲ್ಲಿ ಮತ್ತು ಪರರ ಸ್ತ್ರೀಯರಲ್ಲಿ ಆಸೆಯಿಡುವುದಿಲ್ಲ. ಸದಾ ಕದರ್ಯಭಾವದಲ್ಲಿ ಮನಸ್ಸನ್ನು ರಂಜಿಸುವುದಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವಣಿ ನಕುಲಾದಿಜೀವನಾದಿವರಪ್ರಾಪ್ತೌ ಅಷ್ಟನವತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಆರಣೇಯಪರ್ವದಲ್ಲಿ ನಕುಲಾದಿಜೀವನಾದಿವರಪ್ರಾಪ್ತಿಯಲ್ಲಿ ಇನ್ನೂರಾತೊಂಭತ್ತೆಂಟನೆಯ ಅಧ್ಯಾಯವು.