297 ಯಕ್ಷಪ್ರಶ್ನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಆರಣೇಯ ಪರ್ವ

ಅಧ್ಯಾಯ 297

ಸಾರ

ಯುಧಿಷ್ಠಿರನು ನೀರುಕುಡಿಯಲು ಹೋದಾಗ ಸರೋವರದಲ್ಲಿದ್ದ ಯಕ್ಷನು ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ಕುಡಿಯಲು ಹೇಳಿದುದು (1-12). ಪ್ರಶ್ನೆಗಳೇನೆಂದು ಯುಧಿಷ್ಠಿರನು ಕೇಳುವುದು (13-25). ಯಕ್ಷನ ಪ್ರಶ್ನೆಗಳಿಗೆ ಯುಧಿಷ್ಠಿರನು ಉತ್ತರಿಸಿದುದು (26-64). ಯಕ್ಷನು ಯುಧಿಷ್ಠಿರನ ತಮ್ಮಂದಿರನ್ನು ಬದುಕಿಸಿದುದು (65-74).

03297001 ವೈಶಂಪಾಯನ ಉವಾಚ।
03297001a ಸ ದದರ್ಶ ಹತಾನ್ಭ್ರಾತೄನ್ಲೋಕಪಾಲಾನಿವ ಚ್ಯುತಾನ್।
03297001c ಯುಗಾಂತೇ ಸಮನುಪ್ರಾಪ್ತೇ ಶಕ್ರಪ್ರತಿಮಗೌರವಾನ್।।

ವೈಶಂಪಾಯನನು ಹೇಳಿದನು: “ಅಲ್ಲಿ ಅವನು ಶಕ್ರನಂತೆ ಗೌರವದಿಂದಿರುವ, ಯುಗಾಂತದಲ್ಲಿ ಕೆಳಗುರುಳಿಬಿದ್ದ ಲೋಕಪಾಲಕರಂತೆ ಹತರಾಗಿದ್ದ, ತಮ್ಮಂದಿರನ್ನು ನೋಡಿದನು.

03297002a ವಿಪ್ರಕೀರ್ಣಧನುರ್ಬಾಣಂ ದೃಷ್ಟ್ವಾ ನಿಹತಮರ್ಜುನಂ।
03297002c ಭೀಮಸೇನಂ ಯಮೌ ಚೋಭೌ ನಿರ್ವಿಚೇಷ್ಟಾನ್ಗತಾಯುಷಃ।।
03297003a ಸ ದೀರ್ಘಮುಷ್ಣಂ ನಿಃಶ್ವಸ್ಯ ಶೋಕಬಾಷ್ಪಪರಿಪ್ಲುತಃ।

ಧನುರ್ಬಾಣಗಳು ಚೆಲ್ಲಿ ನಿಹತನಾಗಿದ್ದ ಅರ್ಜುನನನ್ನು, ಭೀಮಸೇನ ಮತ್ತು ಯಮಳರಿಬ್ಬರೂ ಆಯುಷ್ಯವನ್ನು ಕಳೆದುಕೊಂಡು ನಿರ್ವಿಚೇಷ್ಟರಾಗಿರುವುದನ್ನು ನೋಡಿ ಅವನು ದೀರ್ಘ ಬಿಸಿ‌ಉಸಿರನ್ನು ಬಿಟ್ಟು, ಕಣ್ಣೀರಿನಿಂದ ತುಂಬಿದವನಾಗಿ ಶೋಕಿಸಿದನು.

03297003c ಬುದ್ಧ್ಯಾ ವಿಚಿಂತಯಾಮಾಸ ವೀರಾಃ ಕೇನ ನಿಪಾತಿತಾಃ।।
03297004a ನೈಷಾಂ ಶಸ್ತ್ರಪ್ರಹಾರೋಽಸ್ತಿ ಪದಂ ನೇಹಾಸ್ತಿ ಕಸ್ಯ ಚಿತ್।

“ಈ ವೀರರು ಯಾರಿಂದ ಕೆಳಗುರುಳಿಸಲ್ಪಟ್ಟರು?” ಎಂದು ಬುದ್ಧಿಯಿಂದ ಚಿಂತಿಸತೊಡಗಿದನು. “ಇಲ್ಲಿ ಏನೂ ಶಸ್ತ್ರಪ್ರಹಾರವಾಗಿಲ್ಲ. ಯಾರ ಹೆಜ್ಜೆಯೂ ಇಲ್ಲಿ ಕಾಣಿಸುತ್ತಿಲ್ಲ.

03297004c ಭೂತಂ ಮಹದಿದಂ ಮನ್ಯೇ ಭ್ರಾತರೋ ಯೇನ ಮೇ ಹತಾಃ।।
03297004e ಏಕಾಗ್ರಂ ಚಿಂತಯಿಷ್ಯಾಮಿ ಪೀತ್ವಾ ವೇತ್ಸ್ಯಾಮಿ ವಾ ಜಲಂ।।

ನನ್ನ ಈ ತಮ್ಮಂದಿರನ್ನು ಕೊಂದಿರುವುದು ಒಂದು ಮಹಾಭೂತವೆಂದು ನನಗನ್ನಿಸುತ್ತದೆ. ಈ ನೀರನ್ನು ಕುಡಿದ ನಂತರ ಏಕಾಗ್ರಚಿತ್ತದಿಂದ ಯೋಚಿಸುತ್ತೇನೆ.

03297005a ಸ್ಯಾತ್ತು ದುರ್ಯೋಧನೇನೇದಮುಪಾಂಶುವಿಹಿತಂ ಕೃತಂ।
03297005c ಗಾಂಧಾರರಾಜರಚಿತಂ ಸತತಂ ಜಿಹ್ಮಬುದ್ಧಿನಾ।।

ಅಥವಾ ಇದು ಸತತವೂ ಕೆಟ್ಟಬುದ್ಧಿಯ ಗಾಂಧಾರರಾಜನು ದುರ್ಯೋಧನನ ಆದೇಶದಂತೆ ನಡೆಸಿದ ಕೆಲಸವಿರಬಹುದೇ?

03297006a ಯಸ್ಯ ಕಾರ್ಯಮಕಾರ್ಯಂ ವಾ ಸಮಮೇವ ಭವತ್ಯುತ।
03297006c ಕಸ್ತಸ್ಯ ವಿಶ್ವಸೇದ್ವೀರೋ ದುರ್ಮತೇರಕೃತಾತ್ಮನಃ।।

ಕಾರ್ಯ ಅಕಾರ್ಯಗಳನ್ನು ಸಮವೆಂದೇ ತಿಳಿದಿರುವ ಯಾರ ಮೇಲೆ ತಾನೇ ದುರ್ಮತಿ ಅಕೃತಾತ್ಮ ವೀರನು ವಿಶ್ವಾಸವನ್ನಿಡುತ್ತಾನೆ?

03297007a ಅಥ ವಾ ಪುರುಷೈರ್ಗೂಢೈಃ ಪ್ರಯೋಗೋಽಯಂ ದುರಾತ್ಮನಃ।
03297007c ಭವೇದಿತಿ ಮಹಾಬಾಹುರ್ಬಹುಧಾ ಸಮಚಿಂತಯತ್।।

ಅಥವಾ ಇದು ದುರಾತ್ಮ ಪುರುಷರ ಗೂಢ ಪ್ರಯೋಗವಿರಬಹುದೇ?” ಹೀಗೆ ಆ ಮಹಾಬಾಹುವು ಬಹುವಿಧದಲ್ಲಿ ಚಿಂತಿಸಿದನು.

03297008a ತಸ್ಯಾಸೀನ್ನ ವಿಷೇಣೇದಮುದಕಂ ದೂಷಿತಂ ಯಥಾ।
03297008c ಮುಖವರ್ಣಾಃ ಪ್ರಸನ್ನಾ ಮೇ ಭ್ರಾತೄಣಾಮಿತ್ಯಚಿಂತಯತ್।।

“ನನ್ನ ತಮ್ಮಂದಿರ ಮುಖವರ್ಣವು ಪ್ರಸನ್ನವಾಗಿಯೇ ಇದ್ದುದರಿಂದ ಈ ನೀರು ವಿಷದಿಂದ ದೂಷಿತವಾಗಿರಲಿಕ್ಕಿಲ್ಲ” ಎಂದೂ ಯೋಚಿಸಿದನು.

03297009a ಏಕೈಕಶಶ್ಚೌಘಬಲಾನಿಮಾನ್ಪುರುಷಸತ್ತಮಾನ್।
03297009c ಕೋಽನ್ಯಃ ಪ್ರತಿಸಮಾಸೇತ ಕಾಲಾಂತಕಯಮಾದೃತೇ।।

“ಯಮನಲ್ಲದೇ ಇನ್ನ್ಯಾರು ಈ ಮಹಾಬಲಶಾಲಿ ಪುರುಷಸತ್ತಮರನ್ನು ಒಬ್ಬೊಬ್ಬರನ್ನೇ ಅಲೆಗಳಂತೆ ಹೊಡೆದು ಉರುಳಿಸಿದ್ದಾರು?”

03297010a ಏತೇನಾಧ್ಯವಸಾಯೇನ ತತ್ತೋಯಮವಗಾಢವಾನ್।
03297010c ಗಾಹಮಾನಶ್ಚ ತತ್ತೋಯಮಂತರಿಕ್ಷಾತ್ಸ ಶುಶ್ರುವೇ।।

ಹೀಗೆ ನಿರ್ಧರಿಸಿದ ಅವನು ಆ ನೀರಿನ ಬಳಿಹೋಗಿ ನೀರನ್ನು ತೆಗೆದುಕೊಳ್ಳಲು, ಅಂತರಿಕ್ಷದಿಂದ ಕೇಳಿದನು.

03297011 ಯಕ್ಷ ಉವಾಚ।
03297011a ಅಹಂ ಬಕಃ ಶೈವಲಮತ್ಸ್ಯಭಕ್ಷೋ। ಮಯಾ ನೀತಾಃ ಪ್ರೇತವಶಂ ತವಾನುಜಾಃ।
03297011c ತ್ವಂ ಪಂಚಮೋ ಭವಿತಾ ರಾಜಪುತ್ರ। ನ ಚೇತ್ ಪ್ರಶ್ನಾನ್ ಪೃಚ್ಚತೋ ವ್ಯಾಕರೋಷಿ।।

ಯಕ್ಷನು ಹೇಳಿದನು: “ಶೈವಲ ಮತ್ತು ಮೀನುಗಳನ್ನು ತಿನ್ನುವ ಬಕನು ನಾನು. ನಿನ್ನ ತಮ್ಮಂದಿರು ನನ್ನಿಂದಲೇ ಪ್ರೇತವಶವನ್ನು ಪಡೆದಿದ್ದಾರೆ. ರಾಜಪುತ್ರ! ನಾನು ಕೇಳುವ ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಡದೇ ಇದ್ದರೆ ನೀನು ಐದನೆಯವನಾಗುತ್ತೀಯೆ.

03297012a ಮಾ ತಾತ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ।
03297012c ಪ್ರಶ್ನಾನುಕ್ತ್ವಾ ತು ಕೌಂತೇಯ ತತಃ ಪಿಬ ಹರಸ್ವ ಚ।।

ಮಗೂ! ಸಾಹಸವನ್ನು ಮಾಡಬೇಡ. ಇದು ನನ್ನ ಪೂರ್ವಪರಿಗ್ರಹ. ಕೌಂತೇಯ! ಪ್ರಶ್ನೆಗಳಿಗೆ ಉತ್ತರಿಸಿ ನೀರನ್ನು ಹಿಡಿದು ಕುಡಿ.”

03297013 ಯುಧಿಷ್ಠಿರ ಉವಾಚ।
03297013a ರುದ್ರಾಣಾಂ ವಾ ವಸೂನಾಂ ವಾ ಮರುತಾಂ ವಾ ಪ್ರಧಾನಭಾಕ್।
03297013c ಪೃಚ್ಚಾಮಿ ಕೋ ಭವಾನ್ದೇವೋ ನೈತಚ್ಚಕುನಿನಾ ಕೃತಂ।।

ಯುಧಿಷ್ಠಿರನು ಹೇಳಿದನು: “ನಾನು ಕೇಳುತ್ತಿದ್ದೇನೆ - ನೀನು ಯಾರು? ರುದ್ರರ, ವಸುಗಳ ಅಥವಾ ಮರುತರ ನಾಯಕನೋ? ಅಥವಾ ದೇವನೋ? ಇದು ಪಕ್ಷಿಯ ಕೃತ್ಯವಲ್ಲ!

03297014a ಹಿಮವಾನ್ಪಾರಿಯಾತ್ರಶ್ಚ ವಿಂಧ್ಯೋ ಮಲಯ ಏವ ಚ।
03297014c ಚತ್ವಾರಃ ಪರ್ವತಾಃ ಕೇನ ಪಾತಿತಾ ಭುವಿ ತೇಜಸಾ।।

ಯಾರು ತನ್ನ ತೇಜಸ್ಸಿನಿಂದ ನಾಲ್ಕು ಪರ್ವತಗಳನ್ನು – ಹಿಮಾಲಯ, ಪಾರಿಯಾತ್ರ, ವಿಂಧ್ಯ ಮತ್ತು ಮಲಯಗಳನ್ನು – ಕೆಳಗುರುಳಿಸಿದ್ದಾನೆ?

03297015a ಅತೀವ ತೇ ಮಹತ್ಕರ್ಮ ಕೃತಂ ಬಲವತಾಂ ವರ।
03297015c ಯನ್ನ ದೇವಾ ನ ಗಂಧರ್ವಾ ನಾಸುರಾ ನ ಚ ರಾಕ್ಷಸಾಃ।
03297015e ವಿಷಹೇರನ್ಮಹಾಯುದ್ಧೇ ಕೃತಂ ತೇ ತನ್ಮಹಾದ್ಭುತಂ।।

ಬಲವಂತರಲ್ಲಿ ಶ್ರೇಷ್ಠನೇ! ನೀನು ಅತೀವ ಮಹತ್ಕಾರ್ಯವನ್ನು ಮಾಡಿದ್ದೀಯೆ. ದೇವತೆಗಳೂ, ಗಂಧರ್ವರೂ, ಅಸುರರೂ, ರಾಕ್ಷಸರೂ ಮಾಡಲಾಗದ ಮಹಾದ್ಭುತವನ್ನು ನೀನು ಮಾಡಿದ್ದೀಯೆ.

03297016a ನ ತೇ ಜಾನಾಮಿ ಯತ್ಕಾರ್ಯಂ ನಾಭಿಜಾನಾಮಿ ಕಾಂಕ್ಷಿತಂ।
03297016c ಕೌತೂಹಲಂ ಮಹಜ್ಜಾತಂ ಸಾಧ್ವಸಂ ಚಾಗತಂ ಮಮ।।

ನಾನು ನಿನ್ನ ಕಾರ್ಯವನ್ನು ತಿಳಿದಿಲ್ಲ. ನಿನ್ನ ಇಂಗಿತವನ್ನು ತಿಳಿದಿಲ್ಲ. ಮಹಾ ಕುತೂಹಲವು ನನ್ನಲ್ಲಿ ಹುಟ್ಟಿದೆ ಮತ್ತು ಮಹಾ ಉದ್ವೇಗವು ನನಗಾಗಿದೆ.

03297017a ಯೇನಾಸ್ಮ್ಯುದ್ವಿಗ್ನಹೃದಯಃ ಸಮುತ್ಪನ್ನಶಿರೋಜ್ವರಃ।
03297017c ಪೃಚ್ಚಾಮಿ ಭಗವಂಸ್ತಸ್ಮಾತ್ಕೋ ಭವಾನಿಹ ತಿಷ್ಠತಿ।।

ಯಾರಿಂದ ಈ ರೀತಿ ಉದ್ವಿಗ್ನಹೃದಯನಾಗಿದ್ದೇನೋ ಮತ್ತು ತಲೆಯಲ್ಲಿ ಜ್ವರವು ಉಂಟಾಗಿದೆಯೋ ಆ ಭಗವಾನನಲ್ಲಿ ಕೇಳುತ್ತಿದ್ದೇನೆ. ಇಲ್ಲಿ ನಿಂತಿರುವವನು ಯಾರು?”

03297018 ಯಕ್ಷ ಉವಾಚ।
03297018a ಯಕ್ಷೋಽಹಮಸ್ಮಿ ಭದ್ರಂ ತೇ ನಾಸ್ಮಿ ಪಕ್ಷೀ ಜಲೇಚರಃ।
03297018c ಮಯೈತೇ ನಿಹತಾಃ ಸರ್ವೇ ಭ್ರಾತರಸ್ತೇ ಮಹೌಜಸಃ।।

ಯಕ್ಷನು ಹೇಳಿದನು: “ನಿನಗೆ ಮಂಗಳವಾಗಲಿ! ನಾನು ಯಕ್ಷ. ಜಲಚರ ಪಕ್ಷಿಯಲ್ಲ. ನನ್ನಿಂದಲೇ ನಿನ್ನ ಈ ಮಹೌಜಸ ತಮ್ಮಂದಿರೆಲ್ಲರೂ ಹತರಾಗಿದ್ದಾರೆ.””

03297019 ವೈಶಂಪಾಯನ ಉವಾಚ।
03297019a ತತಸ್ತಾಮಶಿವಾಂ ಶ್ರುತ್ವಾ ವಾಚಂ ಸ ಪರುಷಾಕ್ಷರಾಂ।
03297019c ಯಕ್ಷಸ್ಯ ಬ್ರುವತೋ ರಾಜನ್ನುಪಕ್ರಮ್ಯ ತದಾ ಸ್ಥಿತಃ।।

ವೈಶಂಪಾಯನನು ಹೇಳಿದನು: “ರಾಜನ್! ಯಕ್ಷನು ಹೇಳಿದ ಆ ಅಮಂಗಳ ಒರಟು ಮಾತನ್ನು ಕೇಳಿದ ಅವನು ಹತ್ತಿರ ಹೋದನು.

03297020a ವಿರೂಪಾಕ್ಷಂ ಮಹಾಕಾಯಂ ಯಕ್ಷಂ ತಾಲಸಮುಚ್ಚ್ರಯಂ।
03297020c ಜ್ವಲನಾರ್ಕಪ್ರತೀಕಾಶಮಧೃಷ್ಯಂ ಪರ್ವತೋಪಮಂ।।
03297021a ಸೇತುಮಾಶ್ರಿತ್ಯ ತಿಷ್ಠಂತಂ ದದರ್ಶ ಭರತರ್ಷಭಃ।
03297021c ಮೇಘಗಂಭೀರಯಾ ವಾಚಾ ತರ್ಜಯಂತಂ ಮಹಾಬಲಂ।।

ಆಗ ಆ ಭರತರ್ಷಭನು ಸೇತುವೆಯ ಮೇಲೆ ನಿಂತಿದ್ದ ವಿರೂಪಾಕ್ಷ, ತಾಳೆಯ ವೃಕ್ಷದಂತೆ ಮಹಾಕಾಯ, ಸುಡುತ್ತಿರುವ ಸೂರ್ಯನಂತಿರುವ, ಪರ್ವತೋಪಮವಾಗಿ ನಿಂತು ಅದೃಶ್ಯನಾಗಿ ಗುಡುಗಿನಂತೆ ಗಂಭೀರಧ್ವನಿಯಲ್ಲಿ ಮಾತನಾಡಿ ಹೆದರಿಕೆಯುನ್ನುಂಟುಮಾಡುತ್ತಿದ್ದ ಮಹಾಬಲನನ್ನು ನೋಡಿದನು.

03297022 ಯಕ್ಷ ಉವಾಚ।
03297022a ಇಮೇ ತೇ ಭ್ರಾತರೋ ರಾಜನ್ವಾರ್ಯಮಾಣಾ ಮಯಾಸಕೃತ್।
03297022c ಬಲಾತ್ತೋಯಂ ಜಿಹೀರ್ಷಂತಸ್ತತೋ ವೈ ಸೂದಿತಾ ಮಯಾ।।

ಯಕ್ಷನು ಹೇಳಿದನು: “ರಾಜನ್! ನಾನು ಎಷ್ಟು ತಡೆದರೂ ನಿನ್ನ ಈ ತಮ್ಮಂದಿರು ಬಲವಂತವಾಗಿ ನೀರನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದುದರಿಂದ ನಾನು ಅವರನ್ನು ಮುಗಿಸಿದೆ.

03297023a ನ ಪೇಯಮುದಕಂ ರಾಜನ್ಪ್ರಾಣಾನಿಹ ಪರೀಪ್ಸತಾ।
03297023c ಪಾರ್ಥ ಮಾ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ।
03297023e ಪ್ರಶ್ನಾನುಕ್ತ್ವಾ ತು ಕೌಂತೇಯ ತತಃ ಪಿಬ ಹರಸ್ವ ಚ।।

ರಾಜನ್! ಪ್ರಾಣದಿಂದ ಉಳಿಯಲು ಬಯಸುವ ಯಾರಿಗೂ ಈ ನೀರು ಕುಡಿಯಲಿಕ್ಕಿಲ್ಲ. ಪಾರ್ಥ! ನನ್ನ ಹಳೆಯ ಆಸ್ತಿಯಾದ ಇದರ ಮೇಲೆ ಸಾಹಸಮಾಡಬೇಡ. ಕೌಂತೇಯ! ನನ್ನ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಈ ನೀರನ್ನು ತೆಗೆದು ಕುಡಿಯಬಹುದು.”

03297024 ಯುಧಿಷ್ಠಿರ ಉವಾಚ।
03297024a ನೈವಾಹಂ ಕಾಮಯೇ ಯಕ್ಷ ತವ ಪೂರ್ವಪರಿಗ್ರಹಂ।
03297024c ಕಾಮಂ ನೈತತ್ಪ್ರಶಂಸಂತಿ ಸಂತೋ ಹಿ ಪುರುಷಾಃ ಸದಾ।।

ಯುಧಿಷ್ಠಿರನು ಹೇಳಿದನು: “ಯಕ್ಷ! ನಾನು ನಿನ್ನ ಈ ಹಳೆಯ ಆಸ್ತಿಯನ್ನು ಉಲ್ಲಂಘಿಸಲು ಬಯಸುವುದಿಲ್ಲ. ಯಾಕೆಂದರೆ ಸಂತನು ಇದನ್ನು ಒಪ್ಪುವುದಿಲ್ಲ.

03297025a ಯದಾತ್ಮನಾ ಸ್ವಮಾತ್ಮಾನಂ ಪ್ರಶಂಸೇತ್ಪುರುಷಃ ಪ್ರಭೋ।
03297025c ಯಥಾಪ್ರಜ್ಞಂ ತು ತೇ ಪ್ರಶ್ನಾನ್ಪ್ರತಿವಕ್ಷ್ಯಾಮಿ ಪೃಚ್ಚ ಮಾಂ।।

ಪ್ರಭೋ! ಪುರುಷನು ತನ್ನ ಆತ್ಮನಿಂದ ಆತ್ಮನಿಗೆ ಹೇಗೆ ಹೇಳಿಕೊಳ್ಳುತ್ತಾನೋ ಹಾಗೆ ನಿನ್ನ ಪ್ರಶ್ನೆಗಳಿಗೆ, ನನಗೆ ತಿಳಿದಹಾಗೆ, ಉತ್ತರಿಸುತ್ತೇನೆ. ನನ್ನನ್ನು ಕೇಳು.”

03297026 ಯಕ್ಷ ಉವಾಚ।
03297026a ಕಿಂ ಸ್ವಿದಾದಿತ್ಯಮುನ್ನಯತಿ ಕೇ ಚ ತಸ್ಯಾಭಿತಶ್ಚರಾಃ।
03297026c ಕಶ್ಚೈನಮಸ್ತಂ ನಯತಿ ಕಸ್ಮಿಂಶ್ಚ ಪ್ರತಿತಿಷ್ಠತಿ।।

ಯಕ್ಷನು ಹೇಳಿದನು: “ಆದಿತ್ಯ1ನನ್ನು ಯಾವುದು ಉದಯಿಸುತ್ತದೆ ಮತ್ತು ಅವನೊಂದಿಗೆ ಸಂಚರಿಸುವವರು ಯಾರು? ಯಾವುದು ಅವನನ್ನು ಮುಳುಗಿಸುತ್ತದೆ ಮತ್ತು ಅವನು ಯಾವುದರ ಆಧಾರದ ಮೇಲಿದ್ದಾನೆ?”

03297027 ಯುಧಿಷ್ಠಿರ ಉವಾಚ।
03297027a ಬ್ರಹ್ಮಾದಿತ್ಯಮುನ್ನಯತಿ ದೇವಾಸ್ತಸ್ಯಾಭಿತಶ್ಚರಾಃ।
03297027c ಧರ್ಮಶ್ಚಾಸ್ತಂ ನಯತಿ ಚ ಸತ್ಯೇ ಚ ಪ್ರತಿತಿಷ್ಠತಿ।।

ಯುಧಿಷ್ಠಿರನು ಹೇಳಿದನು: “ಬ್ರಹ್ಮ2ನು ಆದಿತ್ಯನನ್ನು ಉದಯಿಸುತ್ತಾನೆ. ದೇವತೆಗಳು ಅವನ ಅಭಿಚರರು. ಧರ್ಮವು ಅವನನ್ನು ಅಸ್ತಗೊಳಿಸುತ್ತದೆ ಮತ್ತು ಸತ್ಯದಲ್ಲಿ ಅವನು ಪ್ರತಿಷ್ಠಿತನಾಗಿದ್ದಾನೆ3.”

03297028 ಯಕ್ಷ ಉವಾಚ।
03297028a ಕೇನ ಸ್ವಿಚ್ಚ್ರೋತ್ರಿಯೋ ಭವತಿ ಕೇನ ಸ್ವಿದ್ವಿಂದತೇ ಮಹತ್।
03297028c ಕೇನ ದ್ವಿತೀಯವಾನ್ಭವತಿ ರಾಜನ್ಕೇನ ಚ ಬುದ್ಧಿಮಾನ್।।

ಯಕ್ಷನು ಹೇಳಿದನು: “ಯಾವುದರಿಂದ ಓರ್ವನು ಶ್ರೋತ್ರಿಯಾಗುತ್ತಾನೆ? ಯಾವುದರ ಮೂಲಕ ಓರ್ವನು ಮಹಾಗತಿಯನ್ನು ಪಡೆಯುತ್ತಾನೆ? ರಾಜನ್! ಯಾವುದರಿಂದ ಎರಡನೆಯದನ್ನು ಪಡೆಯುತ್ತಾನೆ ಮತ್ತು ಯಾವುದರಿಂದ ಓರ್ವನು ಬುದ್ಧಿವಂತನಾಗುತ್ತಾನೆ?”

03297029 ಯುಧಿಷ್ಠಿರ ಉವಾಚ।
03297029a ಶ್ರುತೇನ ಶ್ರೋತ್ರಿಯೋ ಭವತಿ ತಪಸಾ ವಿಂದತೇ ಮಹತ್।
03297029c ಧೃತ್ಯಾ ದ್ವಿತೀಯವಾನ್ಭವತಿ ಬುದ್ಧಿಮಾನ್ವೃದ್ಧಸೇವಯಾ।।

ಯುಧಿಷ್ಠಿರನು ಹೇಳಿದನು: “ಶೃತಿಯಿಂದ ಶ್ರೋತ್ರನಾಗುತ್ತಾನೆ. ತಪಸ್ಸಿನಿಂದ ಮಹತ್ತನ್ನು ಪಡೆಯುತ್ತಾನೆ. ಧೃತಿಯಿಂದ ಎರಡನೆಯವನಾಗುತ್ತಾನೆ. ವೃದ್ಧರ ಸೇವೆಯಿಂದ ಬುದ್ಧಿವಂತನಾಗುತ್ತಾನೆ.”

03297030 ಯಕ್ಷ ಉವಾಚ।
03297030a ಕಿಂ ಬ್ರಾಹ್ಮಣಾನಾಂ ದೇವತ್ವಂ ಕಶ್ಚ ಧರ್ಮಃ ಸತಾಮಿವ।
03297030c ಕಶ್ಚೈಷಾಂ ಮಾನುಷೋ ಭಾವಃ ಕಿಮೇಷಾಮಸತಾಮಿವ।।

ಯಕ್ಷನು ಹೇಳಿದನು: “ಬ್ರಾಹ್ಮಣರ ದೇವತ್ವವು ಯಾವುದು? ಸಂತರಿಗಿರುವಂತೆ ಅವರ ಧರ್ಮ ಯಾವುದು? ಅವರ ಮನುಷ್ಯತ್ವವೇನು? ಅಸಂತರಿಗಿರುವಂತೆ ಅವರಲ್ಲಿರುವುದು ಯಾವುದು?”

03297031 ಯುಧಿಷ್ಠಿರ ಉವಾಚ।
03297031a ಸ್ವಾಧ್ಯಾಯ ಏಷಾಂ ದೇವತ್ವಂ ತಪ ಏಷಾಂ ಸತಾಮಿವ।
03297031c ಮರಣಂ ಮಾನುಷೋ ಭಾವಃ ಪರಿವಾದೋಽಸತಾಮಿವ।।

ಯುಧಿಷ್ಠಿರನು ಹೇಳಿದನು: “ಸ್ವಾಧ್ಯಾಯವು ಇವರ ದೇವತ್ವವು. ತಪಸ್ಸು ಇವರ ಸತ್ವ. ಮರಣವು ಇವರ ಮನುಷ್ಯ ಭಾವ ಮತ್ತು ಪರಿವಾದವು ಇವರ ಅಸತ್ವ.”

03297032 ಯಕ್ಷ ಉವಾಚ।
03297032a ಕಿಂ ಕ್ಷತ್ರಿಯಾಣಾಂ ದೇವತ್ವಂ ಕಶ್ಚ ಧರ್ಮಃ ಸತಾಮಿವ।
03297032c ಕಶ್ಚೈಷಾಂ ಮಾನುಷೋ ಭಾವಃ ಕಿಮೇಷಾಮಸತಾಮಿವ।।

ಯಕ್ಷನು ಹೇಳಿದನು: “ಕ್ಷತ್ರಿಯರ ದೇವತ್ವವು ಯಾವುದು? ಸಂತರಿಗಿರುವಂತೆ ಅವರ ಧರ್ಮವು ಯಾವುದು? ಅವರ ಮನುಷ್ಯತ್ವವೇನು? ಅಸಂತರಿಗಿರುವಂತೆ ಅವರಲ್ಲಿರುವುದು ಯಾವುದು?”

03297033 ಯುಧಿಷ್ಠಿರ ಉವಾಚ।
03297033a ಇಷ್ವಸ್ತ್ರಮೇಷಾಂ ದೇವತ್ವಂ ಯಜ್ಞ ಏಷಾಂ ಸತಾಮಿವ।
03297033c ಭಯಂ ವೈ ಮಾನುಷೋ ಭಾವಃ ಪರಿತ್ಯಾಗೋಽಸತಾಮಿವ।।

ಯುಧಿಷ್ಠಿರನು ಹೇಳಿದನು: “ಆಯುಧಗಳು ಇವರ ದೇವತ್ವ. ಯಜ್ಞವು ಇವರ ಸತ್ವ. ಭಯವೇ ಇವರ ಮನುಷ್ಯ ಭಾವ ಮತ್ತು ಪರಿತ್ಯಾಗವು ಇವರ ಅಸತ್ವ.”

03297034 ಯಕ್ಷ ಉವಾಚ।
03297034a ಕಿಮೇಕಂ ಯಜ್ಞಿಯಂ ಸಾಮ ಕಿಮೇಕಂ ಯಜ್ಞಿಯಂ ಯಜುಃ।
03297034c ಕಾ ಚೈಕಾ ವೃಶ್ಚತೇ ಯಜ್ಞಂ ಕಾಂ ಯಜ್ಞೋ ನಾತಿವರ್ತತೇ।।

ಯಕ್ಷನು ಹೇಳಿದನು: “ಯಜ್ಞದಲ್ಲಿ ಒಂದು ಸಾಮವು ಯಾವುದು? ಯಜ್ಞದಲ್ಲಿ ಒಂದು ಯಜುವು ಯಾವುದು? ಯಜ್ಞವನ್ನು ಕಡಿಮೆಮಾಡುವ ಒಂದು ಯಾವುದು? ಯಜ್ಞವು ಅತಿಯಾಗದಂತೆ ಮಾಡುವ ಒಂದು ಯಾವುದು?”

03297035 ಯುಧಿಷ್ಠಿರ ಉವಾಚ।
03297035a ಪ್ರಾಣೋ ವೈ ಯಜ್ಞಿಯಂ ಸಾಮ ಮನೋ ವೈ ಯಜ್ಞಿಯಂ ಯಜುಃ।
03297035c ವಾಗೇಕಾ ವೃಶ್ಚತೇ ಯಜ್ಞಂ ತಾಂ ಯಜ್ಞೋ ನಾತಿವರ್ತತೇ।।

ಯುಧಿಷ್ಠಿರನು ಹೇಳಿದನು: “ಪ್ರಾಣವೇ ಯಜ್ಞದ ಒಂದು ಸಾಮ. ಮನಸ್ಸೇ ಯಜ್ಞದ ಯಜು. ಮಾತೇ ಯಜ್ಞವನ್ನು ಕಡಿಮೆಮಾಡುವಂತಹುದು. ಯಜ್ಞವೇ ಯಜ್ಞವನ್ನು ಮೀರಬಲ್ಲದು.”

03297036 ಯಕ್ಷ ಉವಾಚ।
03297036a ಕಿಂ ಸ್ವಿದಾಪತತಾಂ ಶ್ರೇಷ್ಠಂ ಕಿಂ ಸ್ವಿನ್ನಿಪತತಾಂ ವರಂ।
03297036c ಕಿಂ ಸ್ವಿತ್ಪ್ರತಿಷ್ಠಮಾನಾನಾಂ ಕಿಂ ಸ್ವಿತ್ಪ್ರವದತಾಂ ವರಂ।।

ಯಕ್ಷನು ಹೇಳಿದನು: “ಕೇಳಗೆ ಬೀಳುವುದರಲ್ಲಿ ಶ್ರೇಷ್ಠವು ಯಾವುದು? ಕೆಳಗೆ ಹೋಗುವವುಗಳಲ್ಲಿ ಶ್ರೇಷ್ಠವು ಯಾವುದು? ನಿಂತಿರುವವುಗಳಲ್ಲಿ ಶ್ರೇಷ್ಠವು ಯಾವುದು? ಮಾತನಾಡುವವುಗಳಲ್ಲಿ ಶ್ರೇಷ್ಠವು ಯಾವುದು?”

03297037 ಯುಧಿಷ್ಠಿರ ಉವಾಚ।
03297037a ವರ್ಷಮಾಪತತಾಂ ಶ್ರೇಷ್ಠಂ ಬೀಜಂ ನಿಪತತಾಂ ವರಂ।
03297037c ಗಾವಃ ಪ್ರತಿಷ್ಠಮಾನಾನಾಂ ಪುತ್ರಃ ಪ್ರವದತಾಂ ವರಃ।।

ಯುಧಿಷ್ಠಿರನು ಹೇಳಿದನು: “ಕೆಳಗೆ ಬೀಳುವವುಗಳಲ್ಲಿ ಮಳೆಯೇ ಶ್ರೇಷ್ಠ. ಕೆಳಗೆ ಹೋಗುವವುಗಳಲ್ಲಿ ಬೀಜವೇ ಶ್ರೇಷ್ಠ. ನಿಂತಿರುವವುಗಳಲ್ಲಿ ಗೋವುಗಳೇ ಶ್ರೇಷ್ಠ. ಮಾತನಾಡುವವರಲ್ಲಿ ಪುತ್ರನೇ ಶ್ರೇಷ್ಠ.”

03297038 ಯಕ್ಷ ಉವಾಚ।
03297038a ಇಂದ್ರಿಯಾರ್ಥಾನನುಭವನ್ಬುದ್ಧಿಮಾನ್ಲೋಕಪೂಜಿತಃ।
03297038c ಸಮ್ಮತಃ ಸರ್ವಭೂತಾನಾಮುಚ್ಚ್ವಸನ್ಕೋ ನ ಜೀವತಿ।।

ಯಕ್ಷನು ಹೇಳಿದನು: “ಯಾರು ಇಂದ್ರಿಯಗಳಿಂದ ವಿಷಯಗಳನ್ನು ಅನುಭವಿಸುತ್ತಾನೆ, ಬುದ್ಧಿವಂತನಾಗಿದ್ದಾನೆ, ಲೋಕಪೂಜಿತನಾಗಿದ್ದಾನೆ, ಸರ್ವಭೂತಗಳಿಂದ ಗೌರವಿಸಲ್ಪಡುತ್ತಾನೆ, ಉಸಿರಾಡುತ್ತಾನೆ ಆದರೂ ಜೀವಂತನಾಗಿಲ್ಲ?”

03297039 ಯುಧಿಷ್ಠಿರ ಉವಾಚ।
03297039a ದೇವತಾತಿಥಿಭೃತ್ಯಾನಾಂ ಪಿತೄಣಾಮಾತ್ಮನಶ್ಚ ಯಃ।
03297039c ನ ನಿರ್ವಪತಿ ಪಂಚಾನಾಮುಚ್ಚ್ವಸನ್ನ ಸ ಜೀವತಿ।।

ಯುಧಿಷ್ಠಿರನು ಹೇಳಿದನು: “ಯಾರು ಐವರಿಗೆ - ದೇವತೆಗಳಿಗೆ, ಅತಿಥಿಗಳಿಗೆ, ಭೃತ್ಯರಿಗೆ, ಪಿತೃಗಳಿಗೆ ಮತ್ತು ಆತ್ಮನಿಗೆ - ಕೊಡುವುದಿಲ್ಲವೋ ಅವನು ಉಸಿರಾಡುತ್ತಿದ್ದರೂ ಜೀವಿತನಾಗಿರುವವನಲ್ಲ.”

03297040 ಯಕ್ಷ ಉವಾಚ।
03297040a ಕಿಂ ಸ್ವಿದ್ಗುರುತರಂ ಭೂಮೇಃ ಕಿಂ ಸ್ವಿದುಚ್ಚತರಂ ಚ ಖಾತ್।
03297040c ಕಿಂ ಸ್ವಿಚ್ಚೀಘ್ರತರಂ ವಾಯೋಃ ಕಿಂ ಸ್ವಿದ್ಬಹುತರಂ ನೃಣಾಂ।।

ಯಕ್ಷನು ಹೇಳಿದನು: “ಭೂಮಿಗಿಂತಲೂ ಭಾರವಾದುದು ಯಾವುದು? ಆಕಾಶಕ್ಕಿಂತಲೂ ಎತ್ತರವಾದುದು ಯಾವುದು? ಗಾಳಿಗಿಂತಲೂ ವೇಗವಾದುದ್ದು ಯಾವುದು? ಮನುಷ್ಯರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವುದು ಯಾವುದು?”

03297041 ಯುಧಿಷ್ಠಿರ ಉವಾಚ।
03297041a ಮಾತಾ ಗುರುತರಾ ಭೂಮೇಃ ಪಿತಾ ಉಚ್ಚತರಶ್ಚ ಖಾತ್।
03297041c ಮನಃ ಶೀಘ್ರತರಂ ವಾಯೋಶ್ಚಿಂತಾ ಬಹುತರೀ ನೃಣಾಂ।।

ಯುಧಿಷ್ಠಿರನು ಹೇಳಿದನು:” ತಾಯಿಯು ಭೂಮಿಗಿಂತಲೂ ಭಾರ. ತಂದೆಯು ಆಕಾಶಕ್ಕಿಂತಲೂ ಎತ್ತರ. ಮನಸ್ಸು ಗಾಳಿಗಿಂತಲೂ ಶೀಘ್ರ. ಸಂಖ್ಯೆಯಲ್ಲಿ ಚಿಂತೆಗಳು ಮನುಷ್ಯರಿಗಿಂತಲೂ ಹೆಚ್ಚು.”

03297042 ಯಕ್ಷ ಉವಾಚ।
03297042a ಕಿಂ ಸ್ವಿತ್ಸುಪ್ತಂ ನ ನಿಮಿಷತಿ ಕಿಂ ಸ್ವಿಜ್ಜಾತಂ ನ ಚೋಪತಿ।
03297042c ಕಸ್ಯ ಸ್ವಿದ್ಧೃದಯಂ ನಾಸ್ತಿ ಕಿಂ ಸ್ವಿದ್ವೇಗೇನ ವರ್ಧತೇ।।

ಯಕ್ಷನು ಹೇಳಿದನು: “ಯಾವುದು ಮಲಗಿರುವಾಗಲೂ ಕಣ್ಣುಮುಚ್ಚುವುದಿಲ್ಲ? ಯಾವುದು ಹುಟ್ಟಿದರೂ ಚಲಿಸುವುದಿಲ್ಲ? ಯಾವುದಕ್ಕೆ ಹೃದಯವಿಲ್ಲ? ಯಾವುದು ವೇಗವಾಗಿರುವಾಗ ಬೆಳೆಯುತ್ತದೆ?”

03297043 ಯುಧಿಷ್ಠಿರ ಉವಾಚ।
03297043a ಮತ್ಸ್ಯಃ ಸುಪ್ತೋ ನ ನಿಮಿಷತ್ಯಂಡಂ ಜಾತಂ ನ ಚೋಪತಿ।
03297043c ಅಶ್ಮನೋ ಹೃದಯಂ ನಾಸ್ತಿ ನದೀ ವೇಗೇನ ವರ್ಧತೇ।।

ಯುಧಿಷ್ಠಿರನು ಹೇಳಿದನು: “ಮೀನು ಮಲಗಿದ್ದರೂ ಕಣ್ಣನ್ನು ಮುಚ್ಚುವುದಿಲ್ಲ. ಅಂಡವು ಹುಟ್ಟಿದರೂ ಚಲಿಸುವುದಿಲ್ಲ. ಕಲ್ಲಿಗೆ ಹೃದಯವಿಲ್ಲ. ನದಿಯು ವೇಗದಲ್ಲಿರುವಾಗ ಬೆಳೆಯುತ್ತದೆ.”

03297044 ಯಕ್ಷ ಉವಾಚ।
03297044a ಕಿಂ ಸ್ವಿತ್ಪ್ರವಸತೋ ಮಿತ್ರಂ ಕಿಂ ಸ್ವಿನ್ಮಿತ್ರಂ ಗೃಹೇ ಸತಃ।
03297044c ಆತುರಸ್ಯ ಚ ಕಿಂ ಮಿತ್ರಂ ಕಿಂ ಸ್ವಿನ್ಮಿತ್ರಂ ಮರಿಷ್ಯತಃ।।

ಯಕ್ಷನು ಹೇಳಿದನು: “ಪ್ರಯಾಣಿಕನ ಮಿತ್ರನು ಯಾರು? ಮನೆಯಲ್ಲಿ ಮಿತ್ರನು ಯಾರು? ರೋಗಿಯ ಮಿತ್ರನು ಯಾರು? ಮೃತ್ಯುಹೊಂದಿದವನ ಮಿತ್ರನಾರು?”

03297045 ಯುಧಿಷ್ಠಿರ ಉವಾಚ।
03297045a ಸಾರ್ಥಃ ಪ್ರವಸತೋ ಮಿತ್ರಂ ಭಾರ್ಯಾ ಮಿತ್ರಂ ಗೃಹೇ ಸತಃ।
03297045c ಆತುರಸ್ಯ ಭಿಷಮ್ಮಿತ್ರಂ ದಾನಂ ಮಿತ್ರಂ ಮರಿಷ್ಯತಃ।।

ಯುಧಿಷ್ಠಿರನು ಹೇಳಿದನು: “ಜೊತೆಗೆ ಪ್ರಯಾಣಿಸುವವನು ಪ್ರಯಾಣಿಕನ ಮಿತ್ರ. ಮನೆಯಲ್ಲಿ ಪತ್ನಿಯು ಮಿತ್ರಳು. ರೋಗಿಗೆ ವೈದ್ಯನು ಮಿತ್ರ. ಮರಣಹೊಂದಿದವನಿಗೆ ದಾನವು ಮಿತ್ರ.”

03297046 ಯಕ್ಷ ಉವಾಚ।
03297046a ಕಿಂ ಸ್ವಿದೇಕೋ ವಿಚರತಿ ಜಾತಃ ಕೋ ಜಾಯತೇ ಪುನಃ।
03297046c ಕಿಂ ಸ್ವಿದ್ಧಿಮಸ್ಯ ಭೈಷಜ್ಯಂ ಕಿಂ ಸ್ವಿದಾವಪನಂ ಮಹತ್।।

ಯಕ್ಷನು ಹೇಳಿದನು: “ಒಂಟಿಯಾಗಿ ಸಂಚರಿಸುವುದು ಯಾವುದು? ಯಾವುದು ಹುಟ್ಟಿ ಪುನಃ ಹುಟ್ಟುತ್ತದೆ? ಹಿಮಕ್ಕೆ ಚಿಕಿತ್ಸೆಯು ಯಾವುದು? ಅತಿ ದೊಡ್ಡ ಜಾಗವು ಯಾವುದು?”

03297047 ಯುಧಿಷ್ಠಿರ ಉವಾಚ।
03297047a ಸೂರ್ಯ ಏಕೋ ವಿಚರತಿ ಚಂದ್ರಮಾ ಜಾಯತೇ ಪುನಃ।
03297047c ಅಗ್ನಿರ್ಹಿಮಸ್ಯ ಭೈಷಜ್ಯಂ ಭೂಮಿರಾವಪನಂ ಮಹತ್।।

ಯುಧಿಷ್ಠಿರನು ಹೇಳಿದನು: “ಸೂರ್ಯನು ಒಂಟಿಯಾಗಿ ಸಂಚರಿಸುತ್ತಾನೆ. ಚಂದ್ರನು ಪುನಃ ಹುಟ್ಟುತ್ತಾನೆ. ಅಗ್ನಿಯು ಹಿಮದ ಚಿಕಿತ್ಸೆ. ಭೂಮಿಯು ಅತಿ ದೊಡ್ಡ ಜಾಗ.”

03297048 ಯಕ್ಷ ಉವಾಚ।
03297048a ಕಿಂ ಸ್ವಿದೇಕಪದಂ ಧರ್ಮ್ಯಂ ಕಿಂ ಸ್ವಿದೇಕಪದಂ ಯಶಃ।
03297048c ಕಿಂ ಸ್ವಿದೇಕಪದಂ ಸ್ವರ್ಗ್ಯಂ ಕಿಂ ಸ್ವಿದೇಕಪದಂ ಸುಖಂ।।

ಯಕ್ಷನು ಹೇಳಿದನು: “ಧರ್ಮದ ಒಂದು ಪದವು ಯಾವುದು? ಯಸಸ್ಸಿನ ಒಂದು ಪದವು ಯಾವುದು? ಸ್ವರ್ಗದ ಒಂದು ಪದವು ಯಾವುದು? ಸುಖದ ಒಂದು ಪದವು ಯಾವುದು?”

03297049 ಯುಧಿಷ್ಠಿರ ಉವಾಚ।
03297049a ದಾಕ್ಷ್ಯಮೇಕಪದಂ ಧರ್ಮ್ಯಂ ದಾನಮೇಕಪದಂ ಯಶಃ।
03297049c ಸತ್ಯಮೇಕಪದಂ ಸ್ವರ್ಗ್ಯಂ ಶೀಲಮೇಕಪದಂ ಸುಖಂ।।

ಯುಧಿಷ್ಠಿರನು ಹೇಳಿದನು: “ದಕ್ಷತೆಯು ಧರ್ಮದ ಒಂದು ಪದ. ದಾನವು ಯಶಸ್ಸಿನ ಒಂದು ಪದ. ಸತ್ಯವು ಸ್ವರ್ಗದ ಒಂದು ಪದ, ಶೀಲವು ಸುಖದ ಒಂದು ಪದ.”

03297050 ಯಕ್ಷ ಉವಾಚ।
03297050a ಕಿಂ ಸ್ವಿದಾತ್ಮಾ ಮನುಷ್ಯಸ್ಯ ಕಿಂ ಸ್ವಿದ್ದೈವಕೃತಃ ಸಖಾ।
03297050c ಉಪಜೀವನಂ ಕಿಂ ಸ್ವಿದಸ್ಯ ಕಿಂ ಸ್ವಿದಸ್ಯ ಪರಾಯಣಂ।।

ಯಕ್ಷನು ಹೇಳಿದನು: “ಮನುಷ್ಯನ ಆತ್ಮವು ಯಾವುದು? ದೈವಕೃತ ಸಖನು ಯಾರು? ಅವನ ಉಪಜೀವನವು ಯಾವುದು? ಅವನ ಪರಾಯಣವು ಯಾವುದು?”

03297051 ಯುಧಿಷ್ಠಿರ ಉವಾಚ।
03297051a ಪುತ್ರ ಆತ್ಮಾ ಮನುಷ್ಯಸ್ಯ ಭಾರ್ಯಾ ದೈವಕೃತಃ ಸಖಾ।
03297051c ಉಪಜೀವನಂ ಚ ಪರ್ಜನ್ಯೋ ದಾನಮಸ್ಯ ಪರಾಯಣಂ।।

ಯುಧಿಷ್ಠಿರನು ಹೇಳಿದನು: “ಪುತ್ರನು ಮನುಷ್ಯನ ಆತ್ಮ. ಭಾರ್ಯೆಯು ದೇವಕೃತ ಸಖಿ. ಪರ್ಜನ್ಯವು ಅವನ ಉಪಜೀವನ ಮತ್ತು ದಾನವು ಅವನ ಪರಾಯಣ.”

03297052 ಯಕ್ಷ ಉವಾಚ।
03297052a ಧನ್ಯಾನಾಮುತ್ತಮಂ ಕಿಂ ಸ್ವಿದ್ಧನಾನಾಂ ಕಿಂ ಸ್ವಿದುತ್ತಮಂ।
03297052c ಲಾಭಾನಾಮುತ್ತಮಂ ಕಿಂ ಸ್ವಿತ್ಕಿಂ ಸುಖಾನಾಂ ತಥೋತ್ತಮಂ।।

ಯಕ್ಷನು ಹೇಳಿದನು: “ಧನಿಗಳ ಉತ್ತಮತ್ವವು ಯಾವುದು? ಸಂಪತ್ತುಗಳಲ್ಲಿ ಯಾವುದು ಉತ್ತಮ ಸಂಪತ್ತು? ಲಾಭಗಳಲ್ಲಿ ಅನುತ್ತಮವಾದುದು ಯಾವುದು? ಸುಖಗಳಲ್ಲಿ ಉತ್ತಮವಾದುದು ಯಾವುದು?”

03297053 ಯುಧಿಷ್ಠಿರ ಉವಾಚ।
03297053a ಧನ್ಯಾನಾಮುತ್ತಮಂ ದಾಕ್ಷ್ಯಂ ಧನಾನಾಮುತ್ತಮಂ ಶ್ರುತಂ।
03297053c ಲಾಭಾನಾಂ ಶ್ರೇಷ್ಠಮಾರೋಗ್ಯಂ ಸುಖಾನಾಂ ತುಷ್ಟಿರುತ್ತಮಾ।।

ಯುಧಿಷ್ಠಿರನು ಹೇಳಿದನು: “ದಕ್ಷತೆಯು ಧನಿಗಳಿಗೆ ಉತ್ತಮ. ಧನವು ಉತ್ತಮವೆಂದು ಕೇಳಿದ್ದೇವೆ. ಆರೋಗ್ಯವು ಲಾಭಗಳಲ್ಲಿ ಶ್ರೇಷ್ಠ. ಸುಖಗಳಲ್ಲಿ ತೃಪ್ತಿಯು ಉತ್ತಮ.”

03297054 ಯಕ್ಷ ಉವಾಚ।
03297054a ಕಶ್ಚ ಧರ್ಮಃ ಪರೋ ಲೋಕೇ ಕಶ್ಚ ಧರ್ಮಃ ಸದಾಫಲಃ।
03297054c ಕಿಂ ನಿಯಮ್ಯ ನ ಶೋಚಂತಿ ಕೈಶ್ಚ ಸಂಧಿರ್ನ ಜೀರ್ಯತೇ।।

ಯಕ್ಷನು ಹೇಳಿದನು: “ಲೋಕದಲ್ಲಿ ಪರಮ ಧರ್ಮವು ಯಾವುದು? ಸದಾಫಲವನ್ನು ನೀಡುವು ಧರ್ಮವು ಯಾವುದು? ನಿಯಮದಲ್ಲಿದ್ದು ಯಾವುದು ಶೋಕಿಸುವುದಿಲ್ಲ? ಯಾವುದರಿಂದ ಸಂಬಂಧವು ಜೀರ್ಣವಾಗುವುದಿಲ್ಲ?”

03297055 ಯುಧಿಷ್ಠಿರ ಉವಾಚ।
03297055a ಆನೃಶಂಸ್ಯಂ ಪರೋ ಧರ್ಮಸ್ತ್ರಯೀಧರ್ಮಃ ಸದಾಫಲಃ।
03297055c ಮನೋ ಯಮ್ಯ ನ ಶೋಚಂತಿ ಸದ್ಭಿಃ ಸಂಧಿರ್ನ ಜೀರ್ಯತೇ।।

ಯುಧಿಷ್ಠಿರನು ಹೇಳಿದನು: “ಕ್ರೂರನಾಗಿಲ್ಲದಿರುವುದೇ ಪರಮ ಧರ್ಮ. ತ್ರಯೀಧರ್ಮವು ಸದಾ ಫಲವನ್ನು ನೀಡುತ್ತದೆ. ನಿಗ್ರಹಿಸಿದ ಮನವು ಶೋಕಿಸುವುದಿಲ್ಲ. ಸಜ್ಜನರೊಂದಿನ ಸಂಬಂಧವು ಜೀರ್ಣವಾಗುವುದಿಲ್ಲ.”

03297056 ಯಕ್ಷ ಉವಾಚ।
03297056a ಕಿಂ ನು ಹಿತ್ವಾ ಪ್ರಿಯೋ ಭವತಿ ಕಿಂ ನು ಹಿತ್ವಾ ನ ಶೋಚತಿ।
03297056c ಕಿಂ ನು ಹಿತ್ವಾರ್ಥವಾನ್ಭವತಿ ಕಿಂ ನು ಹಿತ್ವಾ ಸುಖೀ ಭವೇತ್।।

ಯಕ್ಷನು ಹೇಳಿದನು: “ಯಾವುದನ್ನು ತೊರೆದು ಪ್ರೀತಿಪಾತ್ರನಾಗುತ್ತಾನೆ? ಯಾವುದನ್ನು ತೊರೆದು ಶೋಕಿಸುವುದಿಲ್ಲ? ಯಾವುದನ್ನು ತೊರೆದು ಧನವಂತನಾಗುತ್ತಾನೆ? ಯಾವುದನ್ನು ತೊರೆದು ಸುಖಿಯಾಗುತ್ತಾನೆ?”

03297057 ಯುಧಿಷ್ಠಿರ ಉವಾಚ।
03297057a ಮಾನಂ ಹಿತ್ವಾ ಪ್ರಿಯೋ ಭವತಿ ಕ್ರೋಧಂ ಹಿತ್ವಾ ನ ಶೋಚತಿ।
03297057c ಕಾಮಂ ಹಿತ್ವಾರ್ಥವಾನ್ಭವತಿ ಲೋಭಂ ಹಿತ್ವಾ ಸುಖೀ ಭವೇತ್।।

ಯುಧಿಷ್ಠಿರನು ಹೇಳಿದನು: “ಅಭಿಮಾನವನ್ನು ತೊರೆದು ಪ್ರೀತಿಪಾತ್ರನಾಗುತ್ತಾನೆ. ಸಿಟ್ಟನ್ನು ತೊರೆದು ಶೋಕಿಸುವುದಿಲ್ಲ. ಆಸೆಗಳನ್ನು ತೊರೆದು ಧನವಂತನಾಗುತ್ತಾನೆ. ಲೋಭವನ್ನು ತೊರೆದು ಸುಖಿಯಾಗುತ್ತಾನೆ.”

03297058 ಯಕ್ಷ ಉವಾಚ।
03297058a ಮೃತಃ ಕಥಂ ಸ್ಯಾತ್ಪುರುಷಃ ಕಥಂ ರಾಷ್ಟ್ರಂ ಮೃತಂ ಭವೇತ್।
03297058c ಶ್ರಾದ್ಧಂ ಮೃತಂ ಕಥಂ ಚ ಸ್ಯಾತ್ಕಥಂ ಯಜ್ಞೋ ಮೃತೋ ಭವೇತ್।।

ಯಕ್ಷನು ಹೇಳಿದನು: “ಪುರುಷನು ಹೇಗೆ ಸಾಯುತ್ತಾನೆ? ರಾಷ್ಟ್ರವು ಹೇಗೆ ಸಾಯುತ್ತದೆ? ಶ್ರಾದ್ಧವು ಹೇಗೆ ಸಾಯುತ್ತದೆ? ಯಜ್ಞವು ಹೇಗೆ ಸಾಯುತ್ತದೆ?”

03297059 ಯುಧಿಷ್ಠಿರ ಉವಾಚ।
03297059a ಮೃತೋ ದರಿದ್ರಃ ಪುರುಷೋ ಮೃತಂ ರಾಷ್ಟ್ರಮರಾಜಕಂ।
03297059c ಮೃತಮಶ್ರೋತ್ರಿಯಂ ಶ್ರಾದ್ಧಂ ಮೃತೋ ಯಜ್ಞಸ್ತ್ವದಕ್ಷಿಣಃ।।

ಯುಧಿಷ್ಠಿರನು ಹೇಳಿದನು: “ಬಡತನದಲ್ಲಿ ಪುರುಷನು ಸಾಯುತ್ತಾನೆ. ರಾಜನಿಲ್ಲದೇ ರಾಷ್ಟ್ರವು ಸಾಯುತ್ತದೆ. ಶ್ರೋತ್ರಿಯಿಲ್ಲದೇ ಶ್ರಾದ್ಧವು ಸಾಯುತ್ತದೆ. ದಕ್ಷಿಣೆಯಿಲ್ಲದೇ ಯಜ್ಞವು ಸಾಯುತ್ತದೆ.”

03297060 ಯಕ್ಷ ಉವಾಚ।
03297060a ಕಾ ದಿಕ್ಕಿಮುದಕಂ ಪ್ರೋಕ್ತಂ ಕಿಮನ್ನಂ ಪಾರ್ಥ ಕಿಂ ವಿಷಂ।
03297060c ಶ್ರಾದ್ಧಸ್ಯ ಕಾಲಮಾಖ್ಯಾಹಿ ತತಃ ಪಿಬ ಹರಸ್ವ ಚ।।

ಯಕ್ಷನು ಹೇಳಿದನು: “ಪಾರ್ಥ! ಸರಿಯಾದ ದಿಕ್ಕು ಯಾವುದು? ಯಾವುದನ್ನು ನೀರೆಂದು ಹೇಳುತ್ತಾರೆ? ಯಾವುದು ಅನ್ನ? ಯಾವುದು ವಿಷ? ಶ್ರಾದ್ಧದ ಕಾಲವನ್ನು ಹೇಳಿ ನಂತರ ನೀರನ್ನು ತೆಗೆದು ಕುಡಿ.”

03297061 ಯುಧಿಷ್ಠಿರ ಉವಾಚ।
03297061a ಸಂತೋ ದಿಗ್ಜಲಮಾಕಾಶಂ ಗೌರನ್ನಂ ಪ್ರಾರ್ಥನಾ ವಿಷಂ।
03297061c ಶ್ರಾದ್ಧಸ್ಯ ಬ್ರಾಹ್ಮಣಃ ಕಾಲಃ ಕಥಂ ವಾ ಯಕ್ಷ ಮನ್ಯಸೇ।।

ಯುಧಿಷ್ಠಿರನು ಹೇಳಿದನು: “ಸಂತರು ದಿಕ್ಕು, ಆಕಾಶವು ನೀರು, ಗೋವು ಅನ್ನ, ಪ್ರಾರ್ಥನೆಯು ವಿಷ, ಬ್ರಾಹ್ಮಣನು ಶ್ರಾದ್ಧಕ್ಕೆ ಸರಿಯಾದ ಕಾಲ ಅಥವ ಯಕ್ಷ! ನಿನ್ನ ಅಭಿಪ್ರಾಯ ಬೇರೆಯಾಗಿದೆಯೇ?”

03297062 ಯಕ್ಷ ಉವಾಚ।
03297062a ವ್ಯಾಖ್ಯಾತಾ ಮೇ ತ್ವಯಾ ಪ್ರಶ್ನಾ ಯಾಥಾತಥ್ಯಂ ಪರಂತಪ।
03297062c ಪುರುಷಂ ತ್ವಿದಾನೀಮಾಖ್ಯಾಹಿ ಯಶ್ಚ ಸರ್ವಧನೀ ನರಃ।।

ಯಕ್ಷನು ಹೇಳಿದನು: “ಪರಂತಪ! ನೀನು ನನ್ನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದೀಯೆ. ಈಗ ಹೇಳು. ಪುರುಷನು ಯಾರು ಮತ್ತು ಯಾವ ನರನು ಸರ್ವ ಸಂಪತ್ತನ್ನೂ ಹೊಂದಿದ್ದಾನೆ?”

03297063 ಯುಧಿಷ್ಠಿರ ಉವಾಚ।
03297063a ದಿವಂ ಸ್ಪೃಶತಿ ಭೂಮಿಂ ಚ ಶಬ್ದಃ ಪುಣ್ಯಸ್ಯ ಕರ್ಮಣಃ।
03297063c ಯಾವತ್ಸ ಶಬ್ದೋ ಭವತಿ ತಾವತ್ಪುರುಷ ಉಚ್ಯತೇ।।

ಯುಧಿಷ್ಠಿರನು ಹೇಳಿದನು: “ಪ್ರಸಿದ್ಧ ಪುಣ್ಯ ಕರ್ಮಿಯು ದಿವ ಮತ್ತು ಭೂಮಿಗಳನ್ನು ಮುಟ್ಟುತ್ತಾನೆ. ಎಲ್ಲಿಯವರೆಗೆ ಅವನು ಪ್ರಸಿದ್ಧನಾಗಿರುತ್ತಾನೋ ಅಲ್ಲಿಯವರೆಗೆ ಅವನನ್ನು ಪುರುಷನೆಂದು ಕರೆಯುತ್ತಾರೆ.

03297064a ತುಲ್ಯೇ ಪ್ರಿಯಾಪ್ರಿಯೇ ಯಸ್ಯ ಸುಖದುಃಖೇ ತಥೈವ ಚ।
03297064c ಅತೀತಾನಾಗತೇ ಚೋಭೇ ಸ ವೈ ಸರ್ವಧನೀ ನರಃ।।

ಯಾರಿಗೆ ಪ್ರಿಯ-ಅಪ್ರಿಯಗಳು, ಸುಖ-ದುಃಖಗಳು ಮತ್ತು ಹಾಗೆಯೇ ಭೂತ-ಭವಿಷ್ಯಗಳು ಸಮನಾಗಿರುತ್ತವೆಯೋ ಆ ನರನೇ ಸರ್ವಧನಿಕ.”

03297065 ಯಕ್ಷ ಉವಾಚ।
03297065a ವ್ಯಾಖ್ಯಾತಃ ಪುರುಷೋ ರಾಜನ್ಯಶ್ಚ ಸರ್ವಧನೀ ನರಃ।
03297065c ತಸ್ಮಾತ್ತವೈಕೋ ಭ್ರಾತೄಣಾಂ ಯಮಿಚ್ಚಸಿ ಸ ಜೀವತು।।

ಯಕ್ಷನು ಹೇಳಿದನು: “ರಾಜನ್! ಪುರುಷ ಮತ್ತು ಸರ್ವಧನೀ ನರರನ್ನು ಸರಿಯಾಗಿ ವ್ಯಾಖ್ಯಾಯಿಸಿದ್ದೀಯೆ. ಆದುದರಿಂದ ನಿನ್ನ ತಮ್ಮಂದಿರಲ್ಲಿ ನೀನು ಬಯಸಿದ ಒಬ್ಬನು ಜೀವಿಸುತ್ತಾನೆ.”

03297066 ಯುಧಿಷ್ಠಿರ ಉವಾಚ।
03297066a ಶ್ಯಾಮೋ ಯ ಏಷ ರಕ್ತಾಕ್ಷೋ ಬೃಹಚ್ಚಾಲ ಇವೋದ್ಗತಃ।
03297066c ವ್ಯೂಢೋರಸ್ಕೋ ಮಹಾಬಾಹುರ್ನಕುಲೋ ಯಕ್ಷ ಜೀವತು।।

ಯುಧಿಷ್ಠಿರನು ಹೇಳಿದನು: “ಯಕ್ಷ! ಕೆಂಪುಕಣ್ಣಿನ, ಕಪ್ಪುಬಣ್ಣದ, ಶಾಲದಂತೆ ಎತ್ತರವಾಗಿ ಬೆಳೆದಿರುವ, ವಿಶಾಲ ಎದೆಯ, ಮಹಾಬಾಹು ನಕುಲನು ಜೀವಿಸಲಿ.”

03297067 ಯಕ್ಷ ಉವಾಚ।
03297067a ಪ್ರಿಯಸ್ತೇ ಭೀಮಸೇನೋಽಯಮರ್ಜುನೋ ವಃ ಪರಾಯಣಂ।
03297067c ಸ ಕಸ್ಮಾನ್ನಕುಲಂ ರಾಜನ್ಸಾಪತ್ನಂ ಜೀವಮಿಚ್ಚಸಿ।।

ಯಕ್ಷನು ಹೇಳಿದನು: “ರಾಜನ್! ನಿನಗೆ ಪ್ರಿಯನಾದವನು ಭೀಮಸೇನ. ಅರ್ಜುನನ ಮೇಲೆ ನೀನು ಅವಲಂಬಿಸಿರುವೆ. ಹೀಗಿರುವಾಗ ಯಾವಕಾರಣಕ್ಕೆ ಅವರ ಮಲಸಹೋದರ ನಕುಲನು ಜೀವಂತನಾಗಲು ಬಯಸುವೆ?

03297068a ಯಸ್ಯ ನಾಗಸಹಸ್ರೇಣ ದಶಸಂಖ್ಯೇನ ವೈ ಬಲಂ।
03297068c ತುಲ್ಯಂ ತಂ ಭೀಮಮುತ್ಸೃಜ್ಯ ನಕುಲಂ ಜೀವಮಿಚ್ಚಸಿ।।

ಹತ್ತುಸಾವಿರ ಆನೆಗಳ ಸಮಾನ ಬಲವುಳ್ಳ ಭೀಮನನ್ನು ಬಿಟ್ಟು ನಕುಲನು ಜೀವಂತನಾಗಲು ಏಕೆ ಬಯಸುತ್ತೀಯೆ?

03297069a ತಥೈನಂ ಮನುಜಾಃ ಪ್ರಾಹುರ್ಭೀಮಸೇನಂ ಪ್ರಿಯಂ ತವ।
03297069c ಅಥ ಕೇನಾನುಭಾವೇನ ಸಾಪತ್ನಂ ಜೀವಮಿಚ್ಚಸಿ।।

ಭೀಮಸೇನನೇ ನಿನಗೆ ಪ್ರಿಯನಾದವನೆಂದು ಜನರು ಹೇಳುತ್ತಾರೆ. ಹಾಗಿರುವಾಗ ಯಾವ ಭಾವನೆಯಿಂದ ನಿನ್ನ ಈ ಮಲತಾಯಿಯ ಮಗನು ಜೀವಂತನಾಗಲು ಬಯಸುತ್ತೀಯೆ?

03297070a ಯಸ್ಯ ಬಾಹುಬಲಂ ಸರ್ವೇ ಪಾಂಡವಾಃ ಸಮುಪಾಶ್ರಿತಾಃ।
03297070c ಅರ್ಜುನಂ ತಮಪಾಹಾಯ ನಕುಲಂ ಜೀವಮಿಚ್ಚಸಿ।।

ಯಾರ ಬಾಹುಬಲವನ್ನು ಸರ್ವ ಪಾಂಡವರೂ ಆಶ್ರಯಿಸಿರುವರೋ ಆ ಅರ್ಜುನನನ್ನು ಬಿಟ್ಟು ಏಕೆ ನಕುಲನು ಜೀವಂತವಾಗಿರಲು ಬಯಸುತ್ತೀಯೆ?”

03297071 ಯುಧಿಷ್ಠಿರ ಉವಾಚ।
03297071a ಆನೃಶಂಸ್ಯಂ ಪರೋ ಧರ್ಮಃ ಪರಮಾರ್ಥಾಚ್ಚ ಮೇ ಮತಂ।
03297071c ಆನೃಶಂಸ್ಯಂ ಚಿಕೀರ್ಷಾಮಿ ನಕುಲೋ ಯಕ್ಷ ಜೀವತು।।

ಯುಧಿಷ್ಠಿರನು ಹೇಳಿದನು: “ಕ್ರೂರನಾಗಿರದೇ ಇರುವುದು ಪರಮ ಧರ್ಮ. ಇದರ ಪರಮ ಅರ್ಥವು ನನಗೆ ತಿಳಿದಿದೆ. ಯಕ್ಷ! ನಾನು ಕ್ರೂರನಾಗುವುದಿಲ್ಲ. ಆದುದರಿಂದ ನಕುಲನು ಜೀವಿಸಲಿ.

03297072a ಧರ್ಮಶೀಲಃ ಸದಾ ರಾಜಾ ಇತಿ ಮಾಂ ಮಾನವಾ ವಿದುಃ।
03297072c ಸ್ವಧರ್ಮಾನ್ನ ಚಲಿಷ್ಯಾಮಿ ನಕುಲೋ ಯಕ್ಷ ಜೀವತು।।

ನನ್ನನ್ನು ಧರ್ಮಶೀಲರಾಜನೆಂದು ಸದಾ ಮಾನವರು ತಿಳಿದಿದ್ದಾರೆ. ಸ್ವಧರ್ಮದಿಂದ ವಿಚಲಿತನಾಗುವುದಿಲ್ಲ. ಆದುದರಿಂದ ಯಕ್ಷ! ನಕುಲನು ಬದುಕಲಿ.

03297073a ಯಥಾ ಕುಂತೀ ತಥಾ ಮಾದ್ರೀ ವಿಶೇಷೋ ನಾಸ್ತಿ ಮೇ ತಯೋಃ।
03297073c ಮಾತೃಭ್ಯಾಂ ಸಮಮಿಚ್ಚಾಮಿ ನಕುಲೋ ಯಕ್ಷ ಜೀವತು।।

ಕುಂತಿಯು ಹೇಗೋ ಹಾಗೆ ಮಾದ್ರಿಯೂ ಕೂಡ. ಅವರಿಬ್ಬರ ಮಧ್ಯೆ ನನಗೆ ಭೇದವಿಲ್ಲ. ಇಬ್ಬರು ತಾಯಂದಿರೂ ಸಮವಾಗಿರಬಯಸುತ್ತೇನೆ. ಆದುದರಿಂದ ಯಕ್ಷ! ನಕುಲನು ಜೀವಿಸಲಿ.”

03297074 ಯಕ್ಷ ಉವಾಚ।
03297074a ಯಸ್ಯ ತೇಽರ್ಥಾಚ್ಚ ಕಾಮಾಚ್ಚ ಆನೃಶಂಸ್ಯಂ ಪರಂ ಮತಂ।
03297074c ತಸ್ಮಾತ್ತೇ ಭ್ರಾತರಃ ಸರ್ವೇ ಜೀವಂತು ಭರತರ್ಷಭ।।

ಯಕ್ಷನು ಹೇಳಿದನು: “ಭರತರ್ಷಭ! ಅರ್ಥ ಕಾಮಗಳಿಗಿಂಥ ಅಕ್ರೂರತ್ವವು ಪರಮವೆಂದು ನೀನು ತಿಳಿದಿದ್ದೀಯೆ. ಆದುದರಿಂದ ನಿನ್ನ ಎಲ್ಲ ತಮ್ಮಂದಿರೂ ಜೀವಿಸಲಿ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವಣಿ ಯಕ್ಷಪ್ರಶ್ನೇ ಸಪ್ತನವತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಆರಣೇಯಪರ್ವದಲ್ಲಿ ಯಕ್ಷಪ್ರಶ್ನೆಯಲ್ಲಿ ಇನ್ನೂರಾತೊಂಭತ್ತೇಳನೆಯ ಅಧ್ಯಾಯವು.


  1. ಇಲ್ಲಿ ಮಹಾಭಾರತ ವ್ಯಾಖ್ಯಾನಕಾರ ನೀಲಕಂಠನು ಆದಿತ್ಯ ಎಂಬ ಶಬ್ಧಕ್ಕೆ ಆತ್ಮ ಎಂದು ಅರ್ಥೈಸಿದ್ದಾನೆ. ↩︎

  2. ಇಲ್ಲಿ ನೀಲಕಂಠನು ಬ್ರಹ್ಮ ಎಂಬ ಶಬ್ಧಕ್ಕೆ ವೇದ ಎಂದು ಅರ್ಥೈಸಿದ್ದಾನೆ. ↩︎

  3. ನೀಲಕಂಠನ ಪ್ರಕಾರ ಈ ಎರಡು ಶ್ಲೋಕಗಳು (ಶ್ಲೋಕ 26 ಮತ್ತು 27) ಭೌತಿಕ ವಾದ ಸೂರ್ಯನ ಕುರಿತಲ್ಲದೇ ಆಧ್ಯಾತ್ಮಿಕವಾದ ಆತ್ಮನ ಕುರಿತಾಗಿದೆ. ಯಕ್ಷನ ಈ ಪ್ರಶ್ನೆಗಳು ಮತ್ತು ಯುಧಿಷ್ಠಿರನ ಉತ್ತರಗಳು ಆತ್ಮನ ಕುರಿತಾಗಿವೆ. ವೇದವು ಅಂದರೆ ಜ್ಞಾನವು ಆತ್ಮನನ್ನು ಉದಯಿಸುತ್ತದೆ. ಶಮ-ದಮ ಮೊದಲಾದವುಗಳೇ ಆತ್ಮನ ಪರಿಚರರು. ಧರ್ಮ ಅಂದರೆ ಕರ್ಮ-ಉಪಾಸನೆಗಳೇ ಆತ್ಮವನ್ನು ಅಸ್ತಗೊಳಿಸುತ್ತದೆ. ಸತ್ಯದಲ್ಲಿಯೇ ಆತ್ಮನ ನೆಲೆಯಿರುವುದು. ಯಕ್ಷನ ಪ್ರತಿಯೊಂದು ಪ್ರಶ್ನೆ ಮತ್ತು ಯುಧಿಷ್ಠಿರನ ಉತ್ತರದ ವಿಶ್ಲೇಷಣೆಯನ್ನು ಆಂಗ್ಲಭಾಷೆಯಲ್ಲಿ ಕೆ. ಬಾಲಸುಬ್ರಮಣಿಯ ಐಯರ್ ಮಾಡಿದ್ದಾರೆ. ↩︎