295 ಮೃಗಾನ್ವೇಷಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಆರಣೇಯ ಪರ್ವ

ಅಧ್ಯಾಯ 295

ಸಾರ

ವನವಾಸವು ಅಂತ್ಯವಾಗುತ್ತಾ ಬರುವಾಗ ಯುಧಿಷ್ಠಿರನು ಕಾಮ್ಯಕದಿಂದ ಪುನಃ ದ್ವೈತವನಕ್ಕೆ ಬಂದುದು; ಒಮ್ಮೆ ಬ್ರಾಹ್ಮಣನೋರ್ವನು ತನ್ನ ಅರಣಿಗಳನ್ನು ಜಿಂಕೆಯೊಂದು ಕೋಡುಗಳಿಗೆ ಸಿಲುಕಿಸಿಕೊಂಡು ಓಡಿಹೋಯಿತೆಂದೂ ಅದನ್ನು ಹಿಂದೆ ತನ್ನಿರೆಂದೂ ಪಾಂಡವರಿಗೆ ಹೇಳಿದುದು (1-10). ಜಿಂಕೆಯನ್ನು ಅರಸಿ ಹೋದ ಪಾಂಡವರೈವರೂ ಆಯಾಸಗೊಂಡು ದಟ್ಟ ಕಾನನದಲ್ಲಿ ಕುಳಿತಿರುವಾಗ ತಮ್ಮ ಕಷ್ಟಗಳ ಕುರಿತು ಚರ್ಚಿಸುವುದು (11-17).

03295001 ಜನಮೇಜಯ ಉವಾಚ।
03295001a ಏವಂ ಹೃತಾಯಾಂ ಕೃಷ್ಣಾಯಾಂ ಪ್ರಾಪ್ಯ ಕ್ಲೇಶಮನುತ್ತಮಂ।
03295001c ಪ್ರತಿಲಭ್ಯ ತತಃ ಕೃಷ್ಣಾಂ ಕಿಮಕುರ್ವತ ಪಾಂಡವಾಃ।।

ಜನಮೇಜಯನು ಹೇಳಿದನು: “ಈ ರೀತಿ ಕೃಷ್ಣೆಯನ್ನು ಕಳೆದುಕೊಂಡು ಅನುತ್ತಮ ಕ್ಲೇಶವನ್ನು ಅನುಭವಿಸಿ, ಕೃಷ್ಣೆಯನ್ನು ಹಿಂದಕ್ಕೆ ಪಡೆದು ಪಾಂಡವರು ಏನು ಮಾಡಿದರು?”

03295002 ವೈಶಂಪಾಯನ ಉವಾಚ।
03295002a ಏವಂ ಹೃತಾಯಾಂ ಕೃಷ್ಣಾಯಾಂ ಪ್ರಾಪ್ಯ ಕ್ಲೇಶಮನುತ್ತಮಂ।
03295002c ವಿಹಾಯ ಕಾಮ್ಯಕಂ ರಾಜಾ ಸಹ ಭ್ರಾತೃಭಿರಚ್ಯುತಃ।।

ವೈಶಂಪಾಯನನು ಹೇಳಿದನು: “ಈ ರೀತಿ ಕೃಷ್ಣೆಯನ್ನು ಕಳೆದುಕೊಂಡು ಅನುತ್ತಮ ಕ್ಲೇಷವನ್ನು ಹೊಂದಿ ರಾಜ ಅಚ್ಯುತನು ತಮ್ಮಂದಿರೊಡನೆ ಕಾಮ್ಯಕದಲ್ಲಿ ವಿಹರಿಸಿದನು.

03295003a ಪುನರ್ದ್ವೈತವನಂ ರಮ್ಯಮಾಜಗಾಮ ಯುಧಿಷ್ಠಿರಃ।
03295003c ಸ್ವಾದುಮೂಲಫಲಂ ರಮ್ಯಂ ಮಾರ್ಕಂಡೇಯಾಶ್ರಮಂ ಪ್ರತಿ।।

ಪುನಃ ಯುಧಿಷ್ಠಿರನು ದ್ವೈತವನಕ್ಕೆ, ಫಲಮೂಲಗಳು ಸ್ವಾದವಾಗಿದ್ದ ಮಾರ್ಕಂಡೇಯಾಶ್ರಮದ ಬಳಿ, ಬಂದನು.

03295004a ಅನುಗುಪ್ತಫಲಾಹಾರಾಃ ಸರ್ವ ಏವ ಮಿತಾಶನಾಃ।
03295004c ನ್ಯವಸನ್ಪಾಂಡವಾಸ್ತತ್ರ ಕೃಷ್ಣಯಾ ಸಹ ಭಾರತ।।

ಭಾರತ! ಕೃಷ್ಣೆಯೊಂದಿಗೆ ಪಾಂಡವರು ಎಲ್ಲರೂ ಕೇವಲ ಫಲಾಹಾರಿಗಳಾಗಿ ಕಡಿಮೆ ಆಹಾರವನ್ನು ಸೇವಿಸುತ್ತಾ ಅಲ್ಲಿ ನೆಲೆಸಿದರು.

03295005a ವಸನ್ದ್ವೈತವನೇ ರಾಜಾ ಕುಂತೀಪುತ್ರೋ ಯುಧಿಷ್ಠಿರಃ।
03295005c ಭೀಮಸೇನೋಽರ್ಜುನಶ್ಚೈವ ಮಾದ್ರೀಪುತ್ರೌ ಚ ಪಾಂಡವೌ।
03295006a ಬ್ರಾಹ್ಮಣಾರ್ಥೇ ಪರಾಕ್ರಾಂತಾ ಧರ್ಮಾತ್ಮಾನೋ ಯತವ್ರತಾಃ।
03295006c ಕ್ಲೇಶಮಾರ್ಚಂತ ವಿಪುಲಂ ಸುಖೋದರ್ಕಂ ಪರಂತಪಾಃ।।

ದ್ವೈತವನದಲ್ಲಿ ಧರ್ಮಾತ್ಮ ಯತವ್ರತ ಪರಂತಪ ರಾಜ ಕುಂತೀಪುತ್ರ ಯುಧಿಷ್ಠಿರ, ಭೀಮಸೇನ, ಅರ್ಜುನ, ಮತ್ತು ಮಾದ್ರೀಪುತ್ರ ಪಾಂಡವರು ಬ್ರಾಹ್ಮಣನೋರ್ವನಿಗೆ ಸಹಾಯಮಾಡಲು ಹೋಗಿ ವಿಪುಲ ಕ್ಲೇಶವನ್ನು ಪಡೆದು ಅಂತ್ಯದಲ್ಲಿ ಸುಖವನ್ನೇ ಹೊಂದಿದರು.

03295007a ಅಜಾತಶತ್ರುಮಾಸೀನಂ ಭ್ರಾತೃಭಿಃ ಸಹಿತಂ ವನೇ।
03295007c ಆಗಮ್ಯ ಬ್ರಾಹ್ಮಣಸ್ತೂರ್ಣಂ ಸಂತಪ್ತ ಇದಮಬ್ರವೀತ್।।

ಅಜಾತಶ್ರತ್ರುವು ತಮ್ಮಂದಿರೊಡನೆ ವನದಲ್ಲಿ ಕುಳಿತುಕೊಂಡಿರಲು ಬ್ರಾಹ್ಮಣನೋರ್ವನು ಓಡಿಬಂದು ಸಂತಪ್ತನಾಗಿ ಹೀಗೆ ಹೇಳಿದನು:

03295008a ಅರಣೀಸಹಿತಂ ಮಹ್ಯಂ ಸಮಾಸಕ್ತಂ ವನಸ್ಪತೌ।
03295008c ಮೃಗಸ್ಯ ಘರ್ಷಮಾಣಸ್ಯ ವಿಷಾಣೇ ಸಮಸಜ್ಜತ।।

“ಮರಕ್ಕೆ ನೇಲಿಸಿದ್ದ ನನ್ನ ಅರಣಿಗಳಿದ್ದ ಚೀಲವೊಂದು ಆ ಮರಕ್ಕೆ ಮೈತಿಕ್ಕುತ್ತಿದ್ದ ಜಿಂಕೆಯ ಕೋಡುಗಳಿಗೆ ಸಿಕ್ಕಿಕೊಂಡಿತು.

03295009a ತದಾದಾಯ ಗತೋ ರಾಜಂಸ್ತ್ವರಮಾಣೋ ಮಹಾಮೃಗಃ।
03295009c ಆಶ್ರಮಾತ್ತ್ವರಿತಃ ಶೀಘ್ರಂ ಪ್ಲವಮಾನೋ ಮಹಾಜವಃ।।

ರಾಜನ್! ಆ ಮಹಾಮೃಗವು ಅದನ್ನು ಎತ್ತಿಕೊಂಡು, ನನ್ನ ಆಶ್ರಮದ ಬಳಿಯಿಂದಲೇ ಕುಪ್ಪಳಿಸಿ ಹಾರುತ್ತಾ ಶೀಘ್ರವಾಗಿ ವೇಗದಿಂದ ಓಡಿಹೋಯಿತು.

03295010a ತಸ್ಯ ಗತ್ವಾ ಪದಂ ಶೀಘ್ರಮಾಸಾದ್ಯ ಚ ಮಹಾಮೃಗಂ।
03295010c ಅಗ್ನಿಹೋತ್ರಂ ನ ಲುಪ್ಯೇತ ತದಾನಯತ ಪಾಂಡವಾಃ।।

ಪಾಂಡವರೇ! ನನ್ನ ಅಗ್ನಿಹೋತ್ರವು ಲುಪ್ತವಾಗಬಾರದೆಂದು ಅದು ಹೋದದಾರಿಯಲ್ಲಿಯೇ ಶೀಘ್ರವಾಗಿ ಆ ಮಹಾಮೃಗವನ್ನು ಹಿಂಬಾಲಿಸಿ ಅದನ್ನು ಹಿಂದೆ ತನ್ನಿ.”

03295011a ಬ್ರಾಹ್ಮಣಸ್ಯ ವಚಃ ಶ್ರುತ್ವಾ ಸಂತಪ್ತೋಽಥ ಯುಧಿಷ್ಠಿರಃ।
03295011c ಧನುರಾದಾಯ ಕೌಂತೇಯಃ ಪ್ರಾದ್ರವದ್ಭ್ರಾತೃಭಿಃ ಸಹ।।

ಬ್ರಾಹ್ಮಣನ ಮಾತುಗಳನ್ನು ಕೇಳಿ ಯುಧಿಷ್ಠಿರನು ಸಂತಪ್ತನಾದನು. ಕೌಂತೇಯನು ಧನುಸ್ಸನ್ನು ಎತ್ತಿ ಹಿಡಿದು ತಮ್ಮಂದಿರೊಡನೆ ವೇಗದಿಂದ ಜಿಂಕೆಯನ್ನು ಹಿಂಬಾಲಿಸಿದನು.

03295012a ಸನ್ನದ್ಧಾ ಧನ್ವಿನಃ ಸರ್ವೇ ಪ್ರಾದ್ರವನ್ನರಪುಂಗವಾಃ।
03295012c ಬ್ರಾಹ್ಮಣಾರ್ಥೇ ಯತಂತಸ್ತೇ ಶೀಘ್ರಮನ್ವಗಮನ್ಮೃಗಂ।।

ಎಲ್ಲ ಧನ್ವಿ ನರಪುಂಗವರೂ ಸನ್ನದ್ಧರಾಗಿ ಬ್ರಾಹ್ಮಣನಿಗೋಸ್ಕರ ಶೀಘ್ರವಾಗಿ ಆ ಜಿಂಕೆಯ ಬೆನ್ನಟ್ಟಿ ಓಡಿದರು.

03295013a ಕರ್ಣಿನಾಲೀಕನಾರಾಚಾನುತ್ಸೃಜಂತೋ ಮಹಾರಥಾಃ।
03295013c ನಾವಿಧ್ಯನ್ಪಾಂಡವಾಸ್ತತ್ರ ಪಶ್ಯಂತೋ ಮೃಗಮಂತಿಕಾತ್।।

ಆ ಮಹಾರಥಿ ಪಾಂಡವರು ಕರ್ಣಿ, ಆಲೀಕ ಮತ್ತು ನಾರಾಚಗಳನ್ನು ಬಿಡುತ್ತಾ ಹತ್ತಿರದಲ್ಲಿ ಜಿಂಕೆಯನ್ನು ನೋಡಿದರೂ ಅದನ್ನು ಹೊಡೆಯಲಿಲ್ಲ.

03295014a ತೇಷಾಂ ಪ್ರಯತಮಾನಾನಾಂ ನಾದೃಶ್ಯತ ಮಹಾಮೃಗಃ।
03295014c ಅಪಶ್ಯಂತೋ ಮೃಗಂ ಶ್ರಾಂತಾ ದುಃಖಂ ಪ್ರಾಪ್ತಾ ಮನಸ್ವಿನಃ।

ಅವರು ಹೀಗೆ ಪ್ರಯತ್ನಿಸುತ್ತಿರುವಾಗ ಆ ಮಹಾಮೃಗವು ಮರೆಯಾಯಿತು. ಆ ಜಿಂಕೆಯನ್ನು ಕಾಣದೇ ಮನಸ್ವಿಗಳು ಆಯಾಸಹೊಂದಿ ದುಃಖಿತರಾದರು.

03295015a ಶೀತಲಚ್ಚಾಯಮಾಸಾದ್ಯ ನ್ಯಗ್ರೋಧಂ ಗಹನೇ ವನೇ।
03295015c ಕ್ಷುತ್ಪಿಪಾಸಾಪರೀತಾಂಗಾಃ ಪಾಂಡವಾಃ ಸಮುಪಾವಿಶನ್।।

ಆ ಗಹನ ವನದಲ್ಲಿ ಒಂದು ಆಲದಮರದ ನೆರಳನ್ನು ಸೇರಿ ಬಾಯಾರಿಕೆ ಮತ್ತು ಅಂಗಾಂಗಳ ನೋವಿನಿಂದ ಬಳಲಿದ ಪಾಂಡವರು ವಿಶ್ರಾಂತಿಪಡೆದರು.

03295016a ತೇಷಾಂ ಸಮುಪವಿಷ್ಟಾನಾಂ ನಕುಲೋ ದುಃಖಿತಸ್ತದಾ।
03295016c ಅಬ್ರವೀದ್ಭ್ರಾತರಂ ಜ್ಯೇಷ್ಠಮಮರ್ಷಾತ್ಕುರುಸತ್ತಮ।।

ಕುರುಸತ್ತಮ! ಅವರು ಹಾಗೆ ಅಲ್ಲಿ ಕುಳಿತಿರಲು ದುಃಖಿತನಾದ ನಕುಲನು ಹಿರಿಯ ಅಣ್ಣನಿಗೆ ನುಡಿದನು.

03295017a ನಾಸ್ಮಿನ್ಕುಲೇ ಜಾತು ಮಮಜ್ಜ ಧರ್ಮೋ। ನ ಚಾಲಸ್ಯಾದರ್ಥಲೋಪೋ ಬಭೂವ।
03295017c ಅನುತ್ತರಾಃ ಸರ್ವಭೂತೇಷು ಭೂಯಃ। ಸಂಪ್ರಾಪ್ತಾಃ ಸ್ಮಃ ಸಂಶಯಂ ಕೇನ ರಾಜನ್।।

“ರಾಜನ್! ನಮ್ಮ ಈ ಕುಲದಲ್ಲಿ ಧರ್ಮವು ಎಂದೂ ತಪ್ಪುವುದಿಲ್ಲ. ಆಲಸ್ಯದಿಂದ ಅರ್ಥಲೋಪವೂ ನಡೆಯುವುದಿಲ್ಲ. ಆದರೂ ಸರ್ವಭೂತಗಳಲ್ಲಿಯೂ ಅನುತ್ತರರಾಗಿದ್ದರೂ ನಾವು ಯಾವಕಾರಣಕ್ಕಾಗಿ ಪುನಃ ಕಷ್ಟವನ್ನು ಹೊಂದುತ್ತಿದ್ದೇವೆ?”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವಣಿ ಮೃಗಾನ್ವೇಷಣೇ ಪಂಚನವತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಆರಣೇಯಪರ್ವದಲ್ಲಿ ಮೃಗಾನ್ವೇಷಣದಲ್ಲಿ ಇನ್ನೂರಾತೊಂಭತ್ತೈದನೆಯ ಅಧ್ಯಾಯವು.