294 ಕವಚಕುಂಡಲದಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕುಂಡಲಾಹರಣ ಪರ್ವ

ಅಧ್ಯಾಯ 294

ಸಾರ

ಬ್ರಾಹ್ಮಣನು ಕರ್ಣನಲ್ಲಿ ಕವಚ-ಕುಂಡಲಗಳನ್ನು ಕೇಳುವುದು; ಬಹುವಿಧದಲ್ಲಿ ಕರ್ಣನು ಯಾಚಿಸಿದರೂ ಬ್ರಾಹ್ಮಣನು ತನ್ನ ಬೇಡಿಕೆಯನ್ನು ಬದಲಾಯಿಸದಿರುವುದು (1-12). ಒಬ್ಬನೇ ವೀರನನ್ನು ಕೊಲ್ಲಬಹುದಾದಂತಹ ಅಮೋಘಶಕ್ತಿಯನ್ನು ಇಂದ್ರನಿಂದ ಸ್ವೀಕರಿಸಿ ಕರ್ಣನು ತನ್ನ ಕವಚ-ಕುಂಡಲಗಳನ್ನು ಕೊಟ್ಟಿದುದು (13-39). ವಿಷಯವನ್ನು ತಿಳಿದ ಪಾಂಡವರು ಸಂತೋಷವನ್ನಾಚರಿಸಿದುದು (40-43).

03294001 ವೈಶಂಪಾಯನ ಉವಾಚ।
03294001a ದೇವರಾಜಮನುಪ್ರಾಪ್ತಂ ಬ್ರಾಹ್ಮಣಚ್ಚದ್ಮನಾ ವೃಷಃ।
03294001c ದೃಷ್ಟ್ವಾ ಸ್ವಾಗತಮಿತ್ಯಾಹ ನ ಬುಬೋಧಾಸ್ಯ ಮಾನಸಂ।।

ವೈಶಂಪಾಯನನು ಹೇಳಿದನು: “ಬ್ರಾಹ್ಮಣವೇಷದಲ್ಲಿ ಮುಚ್ಚಿಕೊಂಡು ಬಂದಿದ್ದ ದೇವರಾಜನನ್ನು ನೋಡಿದ ವೃಷನು ಅವನಿಗೆ “ಸ್ವಾಗತ!” ಎಂದು ಹೇಳಿದನು. ಅವನ ಮನಸ್ಸು ಅವನಿಗೆ ತಿಳಿದಿರಲಿಲ್ಲ.

03294002a ಹಿರಣ್ಯಕಂಠೀಃ ಪ್ರಮದಾ ಗ್ರಾಮಾನ್ವಾ ಬಹುಗೋಕುಲಾನ್।
03294002c ಕಿಂ ದದಾನೀತಿ ತಂ ವಿಪ್ರಮುವಾಚಾಧಿರಥಿಸ್ತತಃ।।

“ಬಂಗಾರದ ಕೊರಳಿನ ಸುಂದರಿಯರನ್ನು ಕೊಡಲೇ ಅಥವಾ ಬಹಳ ಗೋಕುಲಗಳನ್ನು ಹೊಂದಿದ ಗ್ರಾಮಗಳನ್ನು ಕೊಡಲೇ?” ಎಂದು ಆಧಿರಥಿಯು ವಿಪ್ರನಿಗೆ ಕೇಳಿದನು.

03294003 ಬ್ರಾಹ್ಮಣ ಉವಾಚ।
03294003a ಹಿರಣ್ಯಕಂಠ್ಯಃ ಪ್ರಮದಾ ಯಚ್ಚಾನ್ಯತ್ಪ್ರೀತಿವರ್ಧನಂ।
03294003c ನಾಹಂ ದತ್ತಮಿಹೇಚ್ಚಾಮಿ ತದರ್ಥಿಭ್ಯಃ ಪ್ರದೀಯತಾಂ।।

ಬ್ರಾಹ್ಮಣನು ಹೇಳಿದನು: “ಹಿರಣ್ಯಕಂಠದ ಸುಂದರಿಯರಾಗಲೀ ಅಥವಾ ಸುಖವನ್ನು ಹೆಚ್ಚಿಸುವ ಇತರ ವಸ್ತುಗಳಾಗಲೀ ನನಗೆ ದಾನವಾಗಿ ಬೇಡ. ಅವುಗಳ ಬೇಕೆನಿಸುವವರಿಗೆ ಅವುಗಳನ್ನು ನೀಡುವವನಾಗು.

03294004a ಯದೇತತ್ಸಹಜಂ ವರ್ಮ ಕುಂಡಲೇ ಚ ತವಾನಘ।
03294004c ಏತದುತ್ಕೃತ್ಯ ಮೇ ದೇಹಿ ಯದಿ ಸತ್ಯವ್ರತೋ ಭವಾನ್।।

ಅನಘ! ನಿನ್ನ ಈ ಸಹಜವಾಗಿರುವ ಕವಚ-ಕುಂಡಲಗಳು ನನಗೆ ಬೇಕು. ನೀನು ಸತ್ಯವ್ರತನಾಗಿರುವೆಯಾದರೆ ಅವುಗಳನ್ನು ಕತ್ತರಿಸಿ ನನಗೆ ಕೊಡು.

03294005a ಏತದಿಚ್ಚಾಮ್ಯಹಂ ಕ್ಷಿಪ್ರಂ ತ್ವಯಾ ದತ್ತಂ ಪರಂತಪ।
03294005c ಏಷ ಮೇ ಸರ್ವಲಾಭಾನಾಂ ಲಾಭಃ ಪರಮಕೋ ಮತಃ।।

ಪರಂತಪ! ಅವುಗಳನ್ನು ನನಗೆ ಬೇಗನೆ ಕೊಡಬೇಕೆಂದು ಬಯಸುತ್ತೇನೆ. ಅದನ್ನು ಎಲ್ಲ ದಾನಕ್ಕಿಂತಲೂ ಮಿಗಿಲಾದದ್ದು ಎಂದು ತಿಳಿಯುತ್ತೇನೆ.”

03294006 ಕರ್ಣ ಉವಾಚ।
03294006a ಅವನಿಂ ಪ್ರಮದಾ ಗಾಶ್ಚ ನಿರ್ವಾಪಂ ಬಹುವಾರ್ಷಿಕಂ।
03294006c ತತ್ತೇ ವಿಪ್ರ ಪ್ರದಾಸ್ಯಾಮಿ ನ ತು ವರ್ಮ ನ ಕುಂಡಲೇ।।

ಕರ್ಣನು ಹೇಳಿದನು: “ಬ್ರಾಹ್ಮಣ! ನಾನು ನಿನಗೆ ಭೂಮಿ, ಸುಂದರಿಯರು, ಗೋವುಗಳು ಮತ್ತು ಬಹಳ ವರ್ಷಕ್ಕೆ ಬೇಕಾಗುವಷ್ಟು ಅಕ್ಕಿಯನ್ನು ಕೊಡುತ್ತೇನೆ. ಆದರೆ ಈ ಕವಚ ಕುಂಡಲಗಳನ್ನಲ್ಲ.””

03294007 ವೈಶಂಪಾಯನ ಉವಾಚ।
03294007a ಏವಂ ಬಹುವಿಧೈರ್ವಾಕ್ಯೈರ್ಯಾಚ್ಯಮಾನಃ ಸ ತು ದ್ವಿಜಃ।
03294007c ಕರ್ಣೇನ ಭರತಶ್ರೇಷ್ಠ ನಾನ್ಯಂ ವರಮಯಾಚತ।।

ವೈಶಂಪಾಯನನು ಹೇಳಿದನು: “ಭರತಶ್ರೇಷ್ಠ! ಈ ರೀತಿ ಬಹುವಿಧದಲ್ಲಿ ಬಹುವಾಕ್ಯಗಳಲ್ಲಿ ಆ ದ್ವಿಜನನ್ನು ಯಾಚಿಸಿದರೂ ಅವನು ಕರ್ಣನಿಂದ ಬೇರೆ ವರವನ್ನು ಕೇಳಲಿಲ್ಲ.

03294008a ಸಾಂತ್ವಿತಶ್ಚ ಯಥಾಶಕ್ತಿ ಪೂಜಿತಶ್ಚ ಯಥಾವಿಧಿ।
03294008c ನೈವಾನ್ಯಂ ಸ ದ್ವಿಜಶ್ರೇಷ್ಠಃ ಕಾಮಯಾಮಾಸ ವೈ ವರಂ।।

ಯಥಾಶಕ್ತಿಯಾಗಿ ಸಂತವಿಸಲ್ಪಟ್ಟರೂ ಯಥಾವಿಧಿಯಾಗಿ ಪೂಜಿಸಲ್ಪಟ್ಟರೂ ಆ ದ್ವಿಜಶ್ರೇಷ್ಠನು ಬೇರೆ ಯಾವ ವರವನ್ನೂ ಬಯಸಲಿಲ್ಲ.

03294009a ಯದಾ ನಾನ್ಯಂ ಪ್ರವೃಣುತೇ ವರಂ ವೈ ದ್ವಿಜಸತ್ತಮಃ।
03294009c ತದೈನಮಬ್ರವೀದ್ಭೂಯೋ ರಾಧೇಯಃ ಪ್ರಹಸನ್ನಿವ।।

ಆ ದ್ವಿಜಸತ್ತಮನು ಬೇರೆ ಯಾವ ವರವನ್ನೂ ಕೇಳದಿದ್ದಾಗ ರಾಧೇಯನು ನಕ್ಕು ಪುನಃ ಈ ಮಾತುಗಳನ್ನಾಡಿದನು:

03294010a ಸಹಜಂ ವರ್ಮ ಮೇ ವಿಪ್ರ ಕುಂಡಲೇ ಚಾಮೃತೋದ್ಭವೇ।
03294010c ತೇನಾವಧ್ಯೋಽಸ್ಮಿ ಲೋಕೇಷು ತತೋ ನೈತದ್ದದಾಮ್ಯಹಂ।।

“ವಿಪ್ರ! ನಾನು ಲೋಕದಲ್ಲಿ ಅವಧ್ಯನಾಗಿರಲೆಂದು ಅಮೃತದಿಂದ ಉದ್ಭವಿಸಿದ ಈ ಕವಚ ಕುಂಡಲಗಳನ್ನು ಧರಿಸಿ ನಾನು ಹುಟ್ಟಿದ್ದೇನೆ. ಆದುದರಿಂದ ಇವುಗಳನ್ನು ನಾನು ಕೊಡುವುದಿಲ್ಲ.

03294011a ವಿಶಾಲಂ ಪೃಥಿವೀರಾಜ್ಯಂ ಕ್ಷೇಮಂ ನಿಹತಕಂಟಕಂ।
03294011c ಪ್ರತಿಗೃಹ್ಣೀಷ್ವ ಮತ್ತಸ್ತ್ವಂ ಸಾಧು ಬ್ರಾಹ್ಮಣಪುಂಗವ।।

ಬ್ರಾಹ್ಮಣಪುಂಗವ! ಕ್ಷೇಮದಿಂದಿರುವ, ಶತ್ರುಗಳನ್ನು ನಾಶಪಡಿಸಿರುವ, ನನ್ನ ಈ ವಿಶಾಲ ಪೃಥಿವೀ ರಾಜ್ಯವನ್ನು ವಿಶ್ವಾಸದಿಂದ ಸ್ವೀಕರಿಸು.

03294012a ಕುಂಡಲಾಭ್ಯಾಂ ವಿಮುಕ್ತೋಽಹಂ ವರ್ಮಣಾ ಸಹಜೇನ ಚ।
03294012c ಗಮನೀಯೋ ಭವಿಷ್ಯಾಮಿ ಶತ್ರೂಣಾಂ ದ್ವಿಜಸತ್ತಮ।।

ದ್ವಿಜಸತ್ತಮ! ಸಹಜವಾಗಿರುವ ಈ ಕುಂಡಲ ಮತ್ತು ಕವಚಗಳಿಂದ ವಿಮುಕ್ತನಾದ ನಾನು ಶತ್ರುಗಳಿಗೆ ಗಮನೀಯನಾಗುತ್ತೇನೆ.””

03294013a ಯದಾ ನಾನ್ಯಂ ವರಂ ವವ್ರೇ ಭಗವಾನ್ಪಾಕಶಾಸನಃ।
03294013c ತತಃ ಪ್ರಹಸ್ಯ ಕರ್ಣಸ್ತಂ ಪುನರಿತ್ಯಬ್ರವೀದ್ವಚಃ।।

ವೈಶಂಪಾಯನನು ಹೇಳಿದನು: “ಭಗವಾನ್ ಪಾಕಶಾಸನನು ಬೇರೆ ಯಾವ ವರವನ್ನೂ ಕೇಳದಿದ್ದಾಗ ನಗುತ್ತ ಕರ್ಣನು ಪುನಃ ಹೇಳಿದನು:

03294014a ವಿದಿತೋ ದೇವದೇವೇಶ ಪ್ರಾಗೇವಾಸಿ ಮಮ ಪ್ರಭೋ।
03294014c ನ ತು ನ್ಯಾಯ್ಯಂ ಮಯಾ ದಾತುಂ ತವ ಶಕ್ರ ವೃತ್ರಹಾ ವರಂ।

“ಪ್ರಭೋ! ದೇವದೇವೇಶ! ನೀನು ಯಾರೆಂದು ನನಗೆ ಮೊದಲೇ ಗೊತ್ತಿತ್ತು. ಶಕ್ರ! ನಿನ್ನಿಂದ ವರವನ್ನು ಪಡೆಯದೇ ನಾನು ನಿನಗೆ ಕೊಡುವುದು ನ್ಯಾಯವಲ್ಲ.

03294015a ತ್ವಂ ಹಿ ದೇವೇಶ್ವರಃ ಸಾಕ್ಷಾತ್ತ್ವಯಾ ದೇಯೋ ವರೋ ಮಮ।
03294015c ಅನ್ಯೇಷಾಂ ಚೈವ ಭೂತಾನಾಮೀಶ್ವರೋ ಹ್ಯಸಿ ಭೂತಕೃತ್।।

ಸಾಕ್ಷಾತ್ ದೇವೇಶ್ವರನಾದ ನೀನೇ ನನಗೆ ವರವನ್ನು ಕೊಡಬೇಕು. ಯಾಕೆಂದರೆ ನೀನು ಅನ್ಯ ಎಲ್ಲ ಭೂತಗಳ ಸೃಷ್ಟಿಕರ್ತ ಮತ್ತು ಭೂತಗಳ ಈಶ್ವರ!

03294016a ಯದಿ ದಾಸ್ಯಾಮಿ ತೇ ದೇವ ಕುಂಡಲೇ ಕವಚಂ ತಥಾ।
03294016c ವಧ್ಯತಾಮುಪಯಾಸ್ಯಾಮಿ ತ್ವಂ ಚ ಶಕ್ರಾವಹಾಸ್ಯತಾಂ।।

ದೇವ! ಒಂದುವೇಳೆ ನಾನು ನಿನಗೆ ಕುಂಡಲ ಕವಚಗಳನ್ನು ಕೊಟ್ಟರೆ ನಾನು ವಧ್ಯನಾಗುತ್ತೇನೆ ಮತ್ತು ಶಕ್ರ! ನೀನು ನಗೆಗೊಳಗಾಗುತ್ತೀಯೆ.

03294017a ತಸ್ಮಾದ್ವಿನಿಮಯಂ ಕೃತ್ವಾ ಕುಂಡಲೇ ವರ್ಮ ಚೋತ್ತಮಂ।
03294017c ಹರಸ್ವ ಶಕ್ರ ಕಾಮಂ ಮೇ ನ ದದ್ಯಾಮಹಮನ್ಯಥಾ।।

ಈ ಒಪ್ಪಂದವನ್ನು ಮಾಡಿಕೊಂಡು ನೀನು ನನ್ನ ಈ ಉತ್ತಮ ಕುಂಡಲ ಕವಚಗಳನ್ನು ತೆಗೆದುಕೋ. ಶಕ್ರ! ಅನ್ಯಥಾ ನಾನು ಇವುಗಳನ್ನು ಕೊಡಬಯಸುವುದಿಲ್ಲ.”

03294018 ಶಕ್ರ ಉವಾಚ।
03294018a ವಿದಿತೋಽಹಂ ರವೇಃ ಪೂರ್ವಮಾಯನ್ನೇವ ತವಾಂತಿಕಂ।
03294018c ತೇನ ತೇ ಸರ್ವಮಾಖ್ಯಾತಮೇವಮೇತನ್ನ ಸಂಶಯಃ।।

ಶಕ್ರನು ಹೇಳಿದನು: “ನಾನು ಬರುವವನಿದ್ದೇನೆಂದು ನಿನಗೆ ರವಿಯು ಹೇಳಿದ್ದನು. ಅವನು ನಿನಗೆ ಎಲ್ಲವನ್ನೂ ಹೇಳಿರಬಹುದು. ಅದರಲ್ಲಿ ಸಂಶಯವೇ ಇಲ್ಲ.

03294019a ಕಾಮಮಸ್ತು ತಥಾ ತಾತ ತವ ಕರ್ಣ ಯಥೇಚ್ಚಸಿ।
03294019c ವರ್ಜಯಿತ್ವಾ ತು ಮೇ ವಜ್ರಂ ಪ್ರವೃಣೀಷ್ವ ಯದಿಚ್ಚಸಿ।।

ಕರ್ಣ! ಮಗೂ! ನಿನಗೆ ಬೇಕಾದುದನ್ನು ಬಯಸು. ಈ ವಜ್ರವನ್ನು ಬಿಟ್ಟು ನನ್ನಿಂದ ಏನು ಬೇಕೋ ಅದನ್ನು ಕೇಳಿಕೋ.””

03294020 ವೈಶಂಪಾಯನ ಉವಾಚ।
03294020a ತತಃ ಕರ್ಣಃ ಪ್ರಹೃಷ್ಟಸ್ತು ಉಪಸಂಗಮ್ಯ ವಾಸವಂ।
03294020c ಅಮೋಘಾಂ ಶಕ್ತಿಮಭ್ಯೇತ್ಯ ವವ್ರೇ ಸಂಪೂರ್ಣಮಾನಸಃ।।

ವೈಶಂಪಾಯನನು ಹೇಳಿದನು: “ಆಗ ಕರ್ಣನು ಸಂತೋಷಗೊಂಡು ವಾಸವನ ಬಳಿಸಾರಿ ಸಂಪೂರ್ಣಮಾನಸನಾಗಿ ಅವನ ಅಮೋಘ ಶಕ್ತಿಯನ್ನು ವರಿಸಿದನು.

03294021 ಕರ್ಣ ಉವಾಚ।
03294021a ವರ್ಮಣಾ ಕುಂಡಲಾಭ್ಯಾಂ ಚ ಶಕ್ತಿಂ ಮೇ ದೇಹಿ ವಾಸವ।
03294021c ಅಮೋಘಾಂ ಶತ್ರುಸಂಘಾನಾಂ ಘಾತನೀಂ ಪೃತನಾಮುಖೇ।।

ಕರ್ಣನು ಹೇಳಿದನು: “ವಾಸವ! ಕವಚ ಕುಂಡಲಗಳಿಗೆ ಬದಲಾಗಿ ನನಗೆ ರಣರಂಗದಲ್ಲಿ ಶತ್ರುಸಂಘಗಳನ್ನು ಘಾತಿಸುವ ಈ ಅಮೋಘ ಶಕ್ತಿಯನ್ನು ಕೊಡು.””

03294022 ವೈಶಂಪಾಯನ ಉವಾಚ।
03294022a ತತಃ ಸಂಚಿಂತ್ಯ ಮನಸಾ ಮುಹೂರ್ತಮಿವ ವಾಸವಃ।
03294022c ಶಕ್ತ್ಯರ್ಥಂ ಪೃಥಿವೀಪಾಲ ಕರ್ಣಂ ವಾಕ್ಯಮಥಾಬ್ರವೀತ್।।

ವೈಶಂಪಾಯನನು ಹೇಳಿದನು: “ಪೃಥಿವೀಪಾಲ! ಆಗ ಒಂದು ಮುಹೂರ್ತ ಮನಸ್ಸಿನಲ್ಲಿಯೇ ಯೋಚಿಸಿ ವಾಸವನು ಶಕ್ತಿಯನ್ನು ಕೇಳಿದ ಕರ್ಣನಿಗೆ ಈ ಮಾತುಗಳನ್ನಾಡಿದನು:

03294023a ಕುಂಡಲೇ ಮೇ ಪ್ರಯಚ್ಚಸ್ವ ವರ್ಮ ಚೈವ ಶರೀರಜಂ।
03294023c ಗೃಹಾಣ ಕರ್ಣ ಶಕ್ತಿಂ ತ್ವಮನೇನ ಸಮಯೇನ ಮೇ।।

“ಕರ್ಣ! ನಿನ್ನ ಶರೀರದೊಂದಿಗೆ ಜನಿಸಿದ ಈ ಕುಂಡಲಗಳನ್ನು ಮತ್ತು ಕವಚವನ್ನು ಕೊಡು. ನಂತರ ಒಪ್ಪಂದದಂತೆ ನನ್ನ ಈ ಶಕ್ತಿಯನ್ನು ಪಡೆ.

03294024a ಅಮೋಘಾ ಹಂತಿ ಶತಶಃ ಶತ್ರೂನ್ಮಮ ಕರಚ್ಯುತಾ।
03294024c ಪುನಶ್ಚ ಪಾಣಿಮಭ್ಯೇತಿ ಮಮ ದೈತ್ಯಾನ್ವಿನಿಘ್ನತಃ।।

ನಾನು ದೈತ್ಯರೊಂದಿಗೆ ಹೋರಾಡುವಾಗ ಈ ಅಮೋಘ ಶಕ್ತಿಯು ನನ್ನ ಕೈಯಿಂದ ಬಿಟ್ಟಾಗ ನೂರಾರು ಶತ್ರುಗಳನ್ನು ಕೊಂದು ಪುನಃ ನನ್ನ ಕೈಗೆ ಬಂದು ಸೇರುತ್ತದೆ.

03294025a ಸೇಯಂ ತವ ಕರಂ ಪ್ರಾಪ್ಯ ಹತ್ವೈಕಂ ರಿಪುಮೂರ್ಜಿತಂ।
03294025c ಗರ್ಜಂತಂ ಪ್ರತಪಂತಂ ಚ ಮಾಮೇವೈಷ್ಯತಿ ಸೂತಜ।।

ಸೂತಜ! ನಿನ್ನ ಕೈಯಲ್ಲಿ ಈ ಶಕ್ತಿಯು ಒಬ್ಬನೇ ಶಕ್ತಿಶಾಲಿ ಗರ್ಜಿಸುವ ಮತ್ತು ಹೊಳೆಯುತ್ತಿರುವ ವೈರಿಯನ್ನು ಕೊಂದು ಮರಳಿ ನನ್ನ ಕೈಯನ್ನು ಸೇರುತ್ತದೆ.”

03294026 ಕರ್ಣ ಉವಾಚ।
03294026a ಏಕಮೇವಾಹಮಿಚ್ಚಾಮಿ ರಿಪುಂ ಹಂತುಂ ಮಹಾಹವೇ।
03294026c ಗರ್ಜಂತಂ ಪ್ರತಪಂತಂ ಚ ಯತೋ ಮಮ ಭಯಂ ಭವೇತ್।।

ಕರ್ಣನು ಹೇಳಿದನು: “ಮಹಾಯುದ್ಧದಲ್ಲಿ ಗರ್ಜಿಸುವ, ಸುಡುತ್ತಿರುವ ಮತ್ತು ನನಗೆ ಭಯವನ್ನು ಕೊಡುವ ಒಬ್ಬನೇ ರಿಪುವನ್ನು ಕೊಲ್ಲಲು ಬಯಸುತ್ತೇನೆ.”

03294027 ಇಂದ್ರ ಉವಾಚ।
03294027a ಏಕಂ ಹನಿಷ್ಯಸಿ ರಿಪುಂ ಗರ್ಜಂತಂ ಬಲಿನಂ ರಣೇ।
03294027c ತ್ವಂ ತು ಯಂ ಪ್ರಾರ್ಥಯಸ್ಯೇಕಂ ರಕ್ಷ್ಯತೇ ಸ ಮಹಾತ್ಮನಾ।।
03294028a ಯಮಾಹುರ್ವೇದವಿದ್ವಾಂಸೋ ವರಾಹಮಜಿತಂ ಹರಿಂ।
03294028c ನಾರಾಯಣಮಚಿಂತ್ಯಂ ಚ ತೇನ ಕೃಷ್ಣೇನ ರಕ್ಷ್ಯತೇ।।

ಇಂದ್ರನು ಹೇಳಿದನು: “ರಣದಲ್ಲಿ ಗರ್ಜಿಸುವ ಬಲಶಾಲಿ ರಿಪು ಓರ್ವನನ್ನೇ ನೀನು ಕೊಲ್ಲಬಲ್ಲೆ. ನೀನು ಬಯಸುವ ಓರ್ವ ಪಾರ್ಥನು ವರಾಹ, ಅಜಿತ, ಹರಿ, ನಾರಾಯಣ, ಅಚಿಂತ್ಯ ಎಂದು ವಿದ್ವಾಂಸರು ಯಾರನ್ನು ಕರೆಯುತ್ತಾರೋ ಆ ಮಹಾತ್ಮ ಕೃಷ್ಣನ ರಕ್ಷಣೆಯಲ್ಲಿದ್ದಾನೆ1.”

03294029 ಕರ್ಣ ಉವಾಚ।
03294029a ಏವಮಪ್ಯಸ್ತು ಭಗವನ್ನೇಕವೀರವಧೇ ಮಮ।
03294029c ಅಮೋಘಾ ಪ್ರವರಾ ಶಕ್ತಿರ್ಯೇನ ಹನ್ಯಾಂ ಪ್ರತಾಪಿನಂ।।

ಕರ್ಣನು ಹೇಳಿದನು: “ಭಗವನ್! ಯಾವುದರಿಂದ ಪ್ರತಾಪಿಯನ್ನು ನಾನು ಕೊಲ್ಲುವೆನೋ ಈ ಅಮೋಘ ಪ್ರವರ ಶಕ್ತಿಯು ಒಬ್ಬ ವೀರನನ್ನು ವಧಿಸುವವರೆಗೆ ನನ್ನ ಬಳಿಯಿರಲಿ.

03294030a ಉತ್ಕೃತ್ಯ ತು ಪ್ರದಾಸ್ಯಾಮಿ ಕುಂಡಲೇ ಕವಚಂ ಚ ತೇ।
03294030c ನಿಕೃತ್ತೇಷು ಚ ಗಾತ್ರೇಷು ನ ಮೇ ಬೀಭತ್ಸತಾ ಭವೇತ್।।

ನನ್ನ ಕುಂಡಲ ಕವಚಗಳನ್ನು ಕಿತ್ತು ನಿನಗೆ ಕೊಡುತ್ತೇನೆ. ಗಾಯಗೊಂಡ ನನ್ನ ದೇಹವು ಬೀಭತ್ಸವಾಗದಿರಲಿ.”

03294031 ಇಂದ್ರ ಉವಾಚ।
03294031a ನ ತೇ ಬೀಭತ್ಸತಾ ಕರ್ಣ ಭವಿಷ್ಯತಿ ಕಥಂ ಚನ।
03294031c ವ್ರಣಶ್ಚಾಪಿ ನ ಗಾತ್ರೇಷು ಯಸ್ತ್ವಂ ನಾನೃತಮಿಚ್ಚಸಿ।।

ಇಂದ್ರನು ಹೇಳಿದನು: “ಕರ್ಣ! ನೀನು ಎಂದೂ ವಿರೂಪನಾಗುವುದಿಲ್ಲ. ನೀನು ಬಯಸಿದಂತೆ ನಿನ್ನ ದೇಹದಮೇಲೆ ಗಾಯಗಳು ಕಾಣಿಸಿಕೊಳ್ಳುವುದಿಲ್ಲ.

03294032a ಯಾದೃಶಸ್ತೇ ಪಿತುರ್ವರ್ಣಸ್ತೇಜಶ್ಚ ವದತಾಂ ವರ।
03294032c ತಾದೃಶೇನೈವ ವರ್ಣೇನ ತ್ವಂ ಕರ್ಣ ಭವಿತಾ ಪುನಃ।।

ಮಾತುಗಾರರಲ್ಲಿ ಶ್ರೇಷ್ಠ ಕರ್ಣ! ನೀನು ಪುನಃ ಬಣ್ಣದಲ್ಲಿ ಮತ್ತು ತೇಜಸ್ಸಿನಲ್ಲಿ ನಿನ್ನ ತಂದೆಯಂತೆ ಆಗುತ್ತೀಯೆ.

03294033a ವಿದ್ಯಮಾನೇಷು ಶಸ್ತ್ರೇಷು ಯದ್ಯಮೋಘಾಮಸಂಶಯೇ।
03294033c ಪ್ರಮತ್ತೋ ಮೋಕ್ಷ್ಯಸೇ ಚಾಪಿ ತ್ವಯ್ಯೇವೈಷಾ ಪತಿಷ್ಯತಿ।।

ಆದರೆ ನಿನ್ನ ಬಳಿ ಇತರ ಆಯುಧಗಳಿದ್ದರೂ ಪ್ರಮತ್ತನಾಗಿ ಈ ಅಮೋಘ ಶಕ್ತಿಯನ್ನು ಪ್ರಯೋಗಿಸಿದರೆ, ಅದು ನಿನ್ನ ಮೇಲೆಯೇ ಬಂದು ಬೀಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”

03294034 ಕರ್ಣ ಉವಾಚ।
03294034a ಸಂಶಯಂ ಪರಮಂ ಪ್ರಾಪ್ಯ ವಿಮೋಕ್ಷ್ಯೇ ವಾಸವೀಮಿಮಾಂ।
03294034c ಯಥಾ ಮಾಮಾತ್ಥ ಶಕ್ರ ತ್ವಂ ಸತ್ಯಮೇತದ್ಬ್ರವೀಮಿ ತೇ।।

ಕರ್ಣನು ಹೇಳಿದನು: “ಶಕ್ರ! ನೀನು ಹೇಳಿದಂತೆ ವಾಸವನ ಈ ಶಕ್ತಿಯನ್ನು ನಾನು ಅತ್ಯಂತ ಅಪಾಯದಲ್ಲಿದ್ದಾಗ ಮಾತ್ರ ಬಳಸುತ್ತೇನೆ. ಈ ಸತ್ಯವನ್ನು ನಿನಗೆ ಹೇಳುತ್ತೇನೆ.””

03294035 ವೈಶಂಪಾಯನ ಉವಾಚ।
03294035a ತತಃ ಶಕ್ತಿಂ ಪ್ರಜ್ವಲಿತಾಂ ಪ್ರತಿಗೃಹ್ಯ ವಿಶಾಂ ಪತೇ।
03294035c ಶಸ್ತ್ರಂ ಗೃಹೀತ್ವಾ ನಿಶಿತಂ ಸರ್ವಗಾತ್ರಾಣ್ಯಕೃಂತತ।।

ವೈಶಂಪಾಯನನು ಹೇಳಿದನು: “ವಿಶಾಂಪತೇ! ಆಗ ಆ ಪ್ರಜ್ವಲಿಸುತ್ತಿರುವ ಶಕ್ತಿಯನ್ನು ಕರ್ಣನು ಸ್ವೀಕರಿಸಿದನು. ನಿಶಿತ ಖಡ್ಗವನ್ನು ಹಿಡಿದು ತನ್ನ ಸಂಪೂರ್ಣದೇಹದಮೇಲೆ ಗುರುತುಹಾಕಿದನು.

03294036a ತತೋ ದೇವಾ ಮಾನವಾ ದಾನವಾಶ್ಚ। ನಿಕೃಂತಂತಂ ಕರ್ಣಮಾತ್ಮಾನಮೇವಂ।
03294036c ದೃಷ್ಟ್ವಾ ಸರ್ವೇ ಸಿದ್ಧಸಂಘಾಶ್ಚ ನೇದುರ್। ನ ಹ್ಯಸ್ಯಾಸೀದ್ದುಃಖಜೋ ವೈ ವಿಕಾರಃ।।

ಆಗ ದೇವತೆಗಳು, ಮಾನವರು, ದೇವತೆಗಳು ಕರ್ಣನು ತನ್ನನ್ನು ತಾನೇ ಕತ್ತರಿಸಿಕೊಳ್ಳುತ್ತಿರುವದನ್ನು ನೋಡಿ ಸಿದ್ಧಸಂಘಗಳೆಲ್ಲವೂ ಉದ್ಗರಿಸಿದವು. ನೋವಿದ್ದರೂ ಅವನ ಒಂದು ಮಾಂಸಖಂಡವೂ ಕಂಪಿಸಲಿಲ್ಲ.

03294037a ತತೋ ದಿವ್ಯಾ ದುಂದುಭಯಃ ಪ್ರಣೇದುಃ। ಪಪಾತೋಚ್ಚೈಃ ಪುಷ್ಪವರ್ಷಂ ಚ ದಿವ್ಯಂ।
03294037c ದೃಷ್ಟ್ವಾ ಕರ್ಣಂ ಶಸ್ತ್ರಸಂಕೃತ್ತಗಾತ್ರಂ। ಮುಹುಶ್ಚಾಪಿ ಸ್ಮಯಮಾನಂ ನೃವೀರಂ।।

ಕರ್ಣನು ಖಡ್ಗದಿಂದ ತನ್ನ ದೇಹವನ್ನು ಕತ್ತರಿಸುವುದನ್ನು ಮತ್ತು ಮನುಷ್ಯರಲ್ಲಿ ವೀರನು ಮತ್ತೆ ಮತ್ತೆ ಮುಗುಳ್ನಗುತ್ತಿರುವುದನ್ನು ನೋಡಿ, ದಿವ್ಯ ದುಂದುಭಿಗಳು ಮೊಳಗಿದವು. ಮೇಲಿಂದ ದಿವ್ಯ ಪುಷ್ಪಗಳ ಮಳೆಯು ಬಿದ್ದಿತು.

03294038a ತತಶ್ಚಿತ್ತ್ವಾ ಕವಚಂ ದಿವ್ಯಮಂಗಾತ್। ತಥೈವಾರ್ದ್ರಂ ಪ್ರದದೌ ವಾಸವಾಯ।
03294038c ತಥೋತ್ಕೃತ್ಯ ಪ್ರದದೌ ಕುಂಡಲೇ ತೇ। ವೈಕರ್ತನಃ ಕರ್ಮಣಾ ತೇನ ಕರ್ಣಃ।।

ತನ್ನ ದೇಹದಿಂದ ಕವಚವನ್ನು ಕಿತ್ತು, ಒದ್ದೆಯಿರುವಾಗಲೇ ಅದನ್ನು ವಾಸವನಿಗೆ ಕೊಟ್ಟನು. ಕುಂಡಲಗಳನ್ನೂ ಕಿತ್ತು ಅವನಿಗೆ ಕೊಟ್ಟನು. ಈ ಕರ್ಮದಿಂದ ಕರ್ಣನು ವೈಕರ್ತನನೆನಿಸಿದನು.

03294039a ತತಃ ಶಕ್ರಃ ಪ್ರಹಸನ್ವಂಚಯಿತ್ವಾ। ಕರ್ಣಂ ಲೋಕೇ ಯಶಸಾ ಯೋಜಯಿತ್ವಾ।
03294039c ಕೃತಂ ಕಾರ್ಯಂ ಪಾಂಡವಾನಾಂ ಹಿ ಮೇನೇ। ತತಃ ಪಶ್ಚಾದ್ದಿವಮೇವೋತ್ಪಪಾತ।।

ಆಗ ಶಕ್ರನು ಕರ್ಣನನ್ನು ಲೋಕದಲ್ಲಿ ಯಶಸ್ವಿಯನ್ನಾಗಿ ಮಾಡಿದ ತನ್ನ ಮೋಸಕ್ಕೆ ನಕ್ಕನು. ಪಾಂಡವರ ಹಿತ ಕಾರ್ಯವನ್ನು ಮಾಡಿದೆನೆಂದು ತಿಳಿದು ಅವನು ದಿವಿಗೆ ಹಾರಿದನು.

03294040a ಶ್ರುತ್ವಾ ಕರ್ಣಂ ಮುಷಿತಂ ಧಾರ್ತರಾಷ್ಟ್ರಾ। ದೀನಾಃ ಸರ್ವೇ ಭಗ್ನದರ್ಪಾ ಇವಾಸನ್।
03294040c ತಾಂ ಚಾವಸ್ಥಾಂ ಗಮಿತಂ ಸೂತಪುತ್ರಂ। ಶ್ರುತ್ವಾ ಪಾರ್ಥಾ ಜಹೃಷುಃ ಕಾನನಸ್ಥಾಃ।।

ಕರ್ಣನು ಮೋಸಹೋದುದನ್ನು ಕೇಳಿ ಧಾರ್ತರಾಷ್ಟ್ರರೆಲ್ಲರೂ ದೀನರಾಗಿ ದರ್ಪಗಳು ಮುರಿದಂತೆ ಆದರು. ಸೂತಪುತ್ರನು ಯಾವ ಅವಸ್ಥೆಗೆ ಹೋದನೆಂದು ಕೇಳಿ ಕಾನನದಲ್ಲಿದ್ದ ಪಾಂಡವರು ಹರ್ಷವನ್ನಾಚರಿಸಿದರು.”

03294041 ಜನಮೇಜಯ ಉವಾಚ।
03294041a ಕ್ವಸ್ಥಾ ವೀರಾಃ ಪಾಂಡವಾಸ್ತೇ ತೇ ಬಭೂವುಃ। ಕುತಶ್ಚೈತಚ್ಚ್ರುತವಂತಃ ಪ್ರಿಯಂ ತೇ।
03294041c ಕಿಂ ವಾಕಾರ್ಷುರ್ದ್ವಾದಶೇಽಬ್ದೇ ವ್ಯತೀತೇ। ತನ್ಮೇ ಸರ್ವಂ ಭಗವಾನ್ವ್ಯಾಕರೋತು।।

ಜನಮೇಜಯನು ಹೇಳಿದನು: “ಆದರೆ ವೀರ ಪಾಂಡವರು ಆಗ ಎಲ್ಲಿದ್ದರು ಮತ್ತು ಅವರು ಈ ಸಂತೋಷದ ವೃತ್ತಾಂತವನ್ನು ಎಲ್ಲಿಂದ ಕೇಳಿದರು? ಹನ್ನೆರಡನೆಯ ವರ್ಷವು ಮುಗಿಯಲು ಅವರು ಏನು ಮಾಡಿದರು? ಭಗವನ್! ಅವೆಲ್ಲವನ್ನೂ ನನಗೆ ಹೇಳು.”

03294042 ವೈಶಂಪಾಯನ ಉವಾಚ।
03294042a ಲಬ್ಧ್ವಾ ಕೃಷ್ಣಾಂ ಸೈಂಧವಂ ದ್ರಾವಯಿತ್ವಾ। ವಿಪ್ರೈಃ ಸಾರ್ಧಂ ಕಾಮ್ಯಕಾದಾಶ್ರಮಾತ್ತೇ।
03294042c ಮಾರ್ಕಂಡೇಯಾಚ್ಚ್ರುತವಂತಃ ಪುರಾಣಂ। ದೇವರ್ಷೀಣಾಂ ಚರಿತಂ ವಿಸ್ತರೇಣ।।

ವೈಶಂಪಾಯನನು ಹೇಳಿದನು: “ಸೈಂಧವನನ್ನು ಓಡಿಸಿ ಕೃಷ್ಣೆಯನ್ನು ಪಡೆದು ವಿಪ್ರರೊಂದಿಗೆ ಕಾಮ್ಯಕ ಆಶ್ರಮದಲ್ಲಿ ಮಾರ್ಕಂಡೇಯನು ಹೇಳುತ್ತಿದ್ದ ಪುರಾಣ ದೇವರ್ಷಿಗಳ ಚರಿತ್ರೆಗಳನ್ನು ವಿಸ್ತಾರವಾಗಿ ಕೇಳುತ್ತಿದ್ದರು.

03294043a ಪ್ರತ್ಯಾಜಗ್ಮುಃ ಸರಥಾಃ ಸಾನುಯಾತ್ರಾಃ। ಸರ್ವೈಃ ಸಾರ್ಧಂ ಸೂದಪೌರೋಗವೈಶ್ಚ।
03294043c ತತಃ ಪುಣ್ಯಂ ದ್ವೈತವನಂ ನೃವೀರಾ। ನಿಸ್ತೀರ್ಯೋಗ್ರಂ ವನವಾಸಂ ಸಮಗ್ರಂ।।

ಅನಂತರ ಸಾರಥಿಗಳು ಮತ್ತು ಅನುಯಾಯಿಗಳೊಡನೆ, ಜೊತೆಗಿದ್ದ ಎಲ್ಲರೊಡನೆ, ಅಡುಗೆಯವರು ಮತ್ತು ಪೌರರೊಂದಿಗೆ ಪುಣ್ಯ ದ್ವೈತವನಕ್ಕೆ ಬಂದು ಅಲ್ಲಿ ಆ ಉಗ್ರ ವನವಾಸವನ್ನು ಪೂರೈಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಕವಚಕುಂಡಲದಾನೇ ಚತುರ್ನವತ್ಯಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಕವಚಕುಂಡಲದಾನದಲ್ಲಿ ಇನ್ನೂರಾತೊಂಭತ್ನಾಲ್ಕನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೪೩/೧೦೦, ಅಧ್ಯಾಯಗಳು-೫೯೧/೧೯೯೫, ಶ್ಲೋಕಗಳು-೧೯೭೦೩/೭೩೭೮೪


  1. ಮುಂದೆ ಮಹಾಭಾರತದ ಯುದ್ಧದ ಹದಿನಾಲ್ಕನೆಯ ರಾತ್ರಿ ಕರ್ಣನ ಈ ಶಕ್ತಿಯಿಂದ ಅರ್ಜುನನನ್ನು ರಕ್ಷಿಸುವ ಸಲುವಾಗಿ ಕೃಷ್ಣನು ಘಟೋತ್ಕಚನನ್ನು ಯುದ್ಧಕ್ಕೆ ಕಳುಹಿಸಿ ಕರ್ಣನ ಶಕ್ತಿಯಿಂದ ಘಟೋತ್ಕಚನನನ್ನು ಕೊಲ್ಲಿಸಿದ ಕಥೆಯು ದ್ರೋಣಪರ್ವದಲ್ಲಿ ಬರುತ್ತದೆ. ↩︎