ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕುಂಡಲಾಹರಣ ಪರ್ವ
ಅಧ್ಯಾಯ 293
ಸಾರ
ಅದೇ ಸಮಯದಲ್ಲಿ ಗಂಗಾ ತೀರಕ್ಕೆ ವಿಹಾರಕ್ಕೆಂದು ಬಂದಿದ್ದ, ಧೃತರಾಷ್ಟ್ರನ ಸಖ, ಸೂತ ಅಧಿರಥನು ಆ ಪೆಟ್ಟಿಗೆಯಲ್ಲಿದ್ದ ಮಗುವನ್ನು ಮಕ್ಕಳಿಲ್ಲದವರ ಪುತ್ರನಿವನು ಎಂದು ಪತ್ನಿ ರಾಧೆಗೆ ಕೊಟ್ಟಿದುದು (1-10). ಬೆಳೆದು ದೊಡ್ಡವನಾಗಿ ದ್ರೋಣನಿಂದ ಕಲಿತು ದುರ್ಯೋಧನನ ಸಖ್ಯದಲ್ಲಿ ಬಂದಿದ್ದ ಕರ್ಣನ ಅಭೇದ್ಯ ಕವಚ ಕುಂಡಲಗಳೇ ಯುಧಿಷ್ಠಿರನ ಚಿಂತೆಗೆ ಕಾರಣವಾದುದು (11-20). ಇಂದ್ರನು ಬ್ರಾಹ್ಮಣ ವೇಷದಲ್ಲಿ ಭಿಕ್ಷವನ್ನು ಕೇಳಿಕೊಂಡು ಕರ್ಣನಲ್ಲಿಗೆ ಬರುವುದು (21-23).
03293001 ವೈಶಂಪಾಯನ ಉವಾಚ।
03293001a ಏತಸ್ಮಿನ್ನೇವ ಕಾಲೇ ತು ಧೃತರಾಷ್ಟ್ರಸ್ಯ ವೈ ಸಖಾ।
03293001c ಸೂತೋಽಧಿರಥ ಇತ್ಯೇವ ಸದಾರೋ ಜಾಹ್ನವೀಂ ಯಯೌ।।
ವೈಶಂಪಾಯನನು ಹೇಳಿದನು: “ಇದೇ ಸಮಯದಲ್ಲಿ ಧೃತರಾಷ್ಟ್ರನ ಸಖ ಸೂತ ಅಧಿರಥನು ತನ್ನ ಪತ್ನಿಯೊಂದಿಗೆ ಅದೇ ಜಾಹ್ನವೀ ತೀರಕ್ಕೆ ಬಂದನು.
03293002a ತಸ್ಯ ಭಾರ್ಯಾಭವದ್ರಾಜನ್ರೂಪೇಣಾಸದೃಶೀ ಭುವಿ।
03293002c ರಾಧಾ ನಾಮ ಮಹಾಭಾಗಾ ನ ಸಾ ಪುತ್ರಮವಿಂದತ।
03293002e ಅಪತ್ಯಾರ್ಥೇ ಪರಂ ಯತ್ನಮಕರೋಚ್ಚ ವಿಶೇಷತಃ।।
ರಾಜನ್! ಅವನ ಭಾರ್ಯೆಯು ರೂಪದಲ್ಲಿ ಭುವಿಯಲ್ಲಿಯೇ ಅಸದೃಶಳಾಗಿದ್ದಳು. ರಾಧಾ ಎಂಬ ಹೆಸರಿನ ಆ ಮಹಾಭಾಗೆಯು ಮಕ್ಕಳಿಗಾಗಿ ವಿಶೇಷವಾಗಿ ಪರಮ ಪ್ರಯತ್ನಪಟ್ಟಿದ್ದರೂ ಮಕ್ಕಳನ್ನು ಪಡೆದಿರಲಿಲ್ಲ.
03293003a ಸಾ ದದರ್ಶಾಥ ಮಂಜೂಷಾಮುಹ್ಯಮಾನಾಂ ಯದೃಚ್ಚಯಾ।
03293003c ದತ್ತರಕ್ಷಾಪ್ರತಿಸರಾಮನ್ವಾಲಭನಶೋಭಿತಾಂ।
03293003e ಊರ್ಮೀತರಂಗೈರ್ಜಾಹ್ನವ್ಯಾಃ ಸಮಾನೀತಾಮುಪಹ್ವರಂ।।
ಅವಳು ನದಿಯಲ್ಲಿ ತೇಲಿಬರುತ್ತಿರುವ, ಬಣ್ಣದ ಬಟ್ಟೆಗಳಿಂದ ಕಟ್ಟಿದ್ದ, ಕೀಲದಿಂದ ಅಲಂಕೃತಗೊಂಡಿದ್ದ ಪೆಟ್ಟಿಗೆಯನ್ನು ನೋಡಿದಳು. ಜಾಹ್ನವಿಯ ಅಲೆಗಳು ಅದನ್ನು ಅವಳ ಕಡೆಗೇ ತಳ್ಳಿದವು.
03293004a ಸಾ ತಾಂ ಕೌತೂಹಲಾತ್ಪ್ರಾಪ್ತಾಂ ಗ್ರಾಹಯಾಮಾಸ ಭಾಮಿನೀ।
03293004c ತತೋ ನಿವೇದಯಾಮಾಸ ಸೂತಸ್ಯಾಧಿರಥಸ್ಯ ವೈ।।
ಆ ಭಾಮಿನಿಯು ಕುತೂಹಲದಿಂದ ಅದನ್ನು ಹಿಡಿದಳು ಮತ್ತು ಸೂತ ಅಧಿರಥನಿಗೆ ನಿವೇದಿಸಿದಳು.
03293005a ಸ ತಾಮುದ್ಧೃತ್ಯ ಮಂಜೂಷಾಮುತ್ಸಾರ್ಯ ಜಲಮಂತಿಕಾತ್।
03293005c ಯಂತ್ರೈರುದ್ಘಾಟಯಾಮಾಸ ಸೋಽಪಶ್ಯತ್ತತ್ರ ಬಾಲಕಂ।।
03293006a ತರುಣಾದಿತ್ಯಸಂಕಾಶಂ ಹೇಮವರ್ಮಧರಂ ತಥಾ।
03293006c ಮೃಷ್ಟಕುಂಡಲಯುಕ್ತೇನ ವದನೇನ ವಿರಾಜತಾ।।
ಅವನು ಆ ಪೆಟ್ಟಿಗೆಯನ್ನು ನೀರಿನಿಂದ ಮೇಲಕ್ಕೆ ಎತ್ತಿ ತರಿಸಿದನು. ಯಂತ್ರಗಳಿಂದ ಅದನ್ನು ಒಡೆದು ತೆರೆಯಲು ಅಲ್ಲಿ ತರುಣ ಆದಿತ್ಯನಂತಿರುವ, ಬಂಗಾರದ ಕವಚವನ್ನು ಧರಿಸಿದ್ದ, ಥಳಥಳಿಸುತ್ತಿದ್ದ ಕುಂಡಲಗಳಿಂದ ವಿರಾಜಿಸುತ್ತಿದ್ದ ಮುಖದ ಬಾಲಕನನ್ನು ನೋಡಿದನು.
03293007a ಸ ಸೂತೋ ಭಾರ್ಯಯಾ ಸಾರ್ಧಂ ವಿಸ್ಮಯೋತ್ಫುಲ್ಲಲೋಚನಃ।
03293007c ಅಂಕಮಾರೋಪ್ಯ ತಂ ಬಾಲಂ ಭಾರ್ಯಾಂ ವಚನಮಬ್ರವೀತ್।।
ಸೂತನ ಮತ್ತು ಅವನ ಪತ್ನಿಯ ಕಣ್ಣುಗಳು ಆಶ್ಚರ್ಯದಿಂದ ಅರಳಿದವು. ಅವನನ್ನು ತನ್ನ ತೊಡೆಯಮೇಲಿರಿಸಿಕೊಂಡು ಪತ್ನಿಗೆ ಈ ಮಾತುಗಳನ್ನಾಡಿದನು:
03293008a ಇದಮತ್ಯದ್ಭುತಂ ಭೀರು ಯತೋ ಜಾತೋಽಸ್ಮಿ ಭಾಮಿನಿ।
03293008c ದೃಷ್ಟವಾನ್ದೇವಗರ್ಭೋಽಯಂ ಮನ್ಯೇಽಸ್ಮಾನ್ಸಮುಪಾಗತಃ।।
“ಭೀರು! ಭಾಮಿನೀ! ಹುಟ್ಟಿದಾಗಿನಿಂದ ಈ ವರೆಗೆ ಇಂಥಹ ಅದ್ಭುತವನ್ನು ನೋಡಿರಲಿಲ್ಲ. ನಮಗಾಗಿಯೇ ಈ ದೇವಗರ್ಭವು ಬಂದಿದೆ ಎಂದು ನನಗನ್ನಿಸುತ್ತದೆ.
03293009a ಅನಪತ್ಯಸ್ಯ ಪುತ್ರೋಽಯಂ ದೇವೈರ್ದತ್ತೋ ಧ್ರುವಂ ಮಮ।
03293009c ಇತ್ಯುಕ್ತ್ವಾ ತಂ ದದೌ ಪುತ್ರಂ ರಾಧಾಯೈ ಸ ಮಹೀಪತೇ।।
ಮಕ್ಕಳಿಲ್ಲದವರ ಪುತ್ರನಿವನು. ದೇವತೆಗಳೇ ನನಗೆ ಕೊಟ್ಟಿದ್ದುದು ಎನ್ನುವುದು ನಿಶ್ಚಿತ.” ಮಹೀಪತೇ! ಹೀಗೆ ಹೇಳಿ ಆ ಮಗನನ್ನು ರಾಧೆಗೆ ಕೊಟ್ಟನು.
03293010a ಪ್ರತಿಜಗ್ರಾಹ ತಂ ರಾಧಾ ವಿಧಿವದ್ದಿವ್ಯರೂಪಿಣಂ।
03293010c ಪುತ್ರಂ ಕಮಲಗರ್ಭಾಭಂ ದೇವಗರ್ಭಂ ಶ್ರಿಯಾ ವೃತಂ।।
ರಾಧೆಯು ಆ ಕಮಲಗರ್ಭದಂತೆ ಬೆಳಗುತ್ತಿರುವ, ದೇವಗರ್ಭ, ಶ್ರೀಯಿಂದ ಆವೃತನಾಗಿದ್ದ ಆ ದಿವ್ಯರೂಪಿ ಪುತ್ರನನ್ನು ವಿಧಿವತ್ತಾಗಿ ಸ್ವೀಕರಿಸಿದಳು.
03293011a ಪುಪೋಷ ಚೈನಂ ವಿಧಿವದ್ವವೃಧೇ ಸ ಚ ವೀರ್ಯವಾನ್।
03293011c ತತಃ ಪ್ರಭೃತಿ ಚಾಪ್ಯನ್ಯೇ ಪ್ರಾಭವನ್ನೌರಸಾಃ ಸುತಾಃ।
ಅವಳು ಅವನನ್ನು ವಿಧಿವತ್ತಾಗಿ ಬೆಳಸಿದಳು. ಅವನೂ ವೀರ್ಯವಂತನಾಗಿ ಬೆಳೆದನು. ಅವನ ನಂತರ ಅವಳು ಇತರ ಪುತ್ರರನ್ನೂ ಪಡೆದಳು.
03293012a ವಸುವರ್ಮಧರಂ ದೃಷ್ಟ್ವಾ ತಂ ಬಾಲಂ ಹೇಮಕುಂಡಲಂ।
03293012c ನಾಮಾಸ್ಯ ವಸುಷೇಣೇತಿ ತತಶ್ಚಕ್ರುರ್ದ್ವಿಜಾತಯಃ।।
ಬಂಗಾರದ ಕವಚಗಳನ್ನು ಮತ್ತು ಹೇಮಕುಂಡಲಗಳನ್ನು ಧರಿಸಿದ್ದ ಆ ಬಾಲಕನನ್ನು ನೋಡಿ ದ್ವಿಜರು ಅವನ ಹೆಸರನ್ನು ವಸುಷೇಣ ಎಂದಿಟ್ಟರು.
03293013a ಏವಂ ಸ ಸೂತಪುತ್ರತ್ವಂ ಜಗಾಮಾಮಿತವಿಕ್ರಮಃ।
03293013c ವಸುಷೇಣ ಇತಿ ಖ್ಯಾತೋ ವೃಷ ಇತ್ಯೇವ ಚ ಪ್ರಭುಃ।।
ಈ ರೀತಿ ಅಮಿತವಿಕ್ರಮಿ ಪ್ರಭುವು ಸೂತಪುತ್ರತ್ವವನ್ನು ಪಡೆದು ವಸುಷೇಣ ಎಂದು, ವೃಷ ಎಂದೂ ಖ್ಯಾತನಾದನು.
03293014a ಸ ಜ್ಯೇಷ್ಠಪುತ್ರಃ ಸೂತಸ್ಯ ವವೃಧೇಽಂಗೇಷು ವೀರ್ಯವಾನ್।
03293014c ಚಾರೇಣ ವಿದಿತಶ್ಚಾಸೀತ್ಪೃಥಾಯಾ ದಿವ್ಯವರ್ಮಭೃತ್।।
ಸೂತನ ಆ ಜ್ಯೇಷ್ಠಪುತ್ರನು ಅಂಗಗಳಲ್ಲಿ ವೀರ್ಯವಂತನಾಗಿ ಬೆಳೆದನು. ಪೃಥೆಯು ಅವನ ದಿವ್ಯ ಕವಚದ ಕುರಿತು ಚಾರರಿಂದ ತಿಳಿದುಕೊಂಡಳು.
03293015a ಸೂತಸ್ತ್ವಧಿರಥಃ ಪುತ್ರಂ ವಿವೃದ್ಧಂ ಸಮಯೇ ತತಃ।
03293015c ದೃಷ್ಟ್ವಾ ಪ್ರಸ್ಥಾಪಯಾಮಾಸ ಪುರಂ ವಾರಣಸಾಹ್ವಯಂ।।
ಸೂತ ಅಧಿರಥನು ತನ್ನ ಮಗನು ಕಾಲಕ್ಕೆ ತಕ್ಕಂತೆ ಬೆಳೆದಿದ್ದುದನ್ನು ನೋಡಿ ವಾರಣಾವತ ಪುರಕ್ಕೆ ಕಳುಹಿಸಿದನು.
03293016a ತತ್ರೋಪಸದನಂ ಚಕ್ರೇ ದ್ರೋಣಸ್ಯೇಷ್ವಸ್ತ್ರಕರ್ಮಣಿ।
03293016c ಸಖ್ಯಂ ದುರ್ಯೋಧನೇನೈವಮಗಚ್ಚತ್ಸ ಚ ವೀರ್ಯವಾನ್।।
ಅಲ್ಲಿ ಅವನು ಅಸ್ತ್ರಗಳಿಗಾಗಿ ದ್ರೋಣನ ಬಳಿಹೋದನು. ಮತ್ತು ಆ ವೀರ್ಯವಂತನು ದುರ್ಯೋಧನನ ಸಖ್ಯದಲ್ಲಿ ಬಂದನು1.
03293017a ದ್ರೋಣಾತ್ಕೃಪಾಚ್ಚ ರಾಮಾಚ್ಚ ಸೋಽಸ್ತ್ರಗ್ರಾಮಂ ಚತುರ್ವಿಧಂ।
03293017c ಲಬ್ಧ್ವಾ ಲೋಕೇಽಭವತ್ಖ್ಯಾತಃ ಪರಮೇಷ್ವಾಸತಾಂ ಗತಃ।।
ಅವನು ಚತುರ್ವಿಧ ಸಂಗ್ರಾಮವನ್ನು ದ್ರೋಣನಿಂದ, ಕೃಪನಿಂದ ಮತ್ತು ರಾಮನಿಂದ ಪಡೆದು2 ಲೋಕದಲ್ಲಿ ಮಹಾ ಬಿಲ್ಲುಗಾರನೆಂದು ಖ್ಯಾತಿಗೆ ಬಂದನು.
03293018a ಸಂಧಾಯ ಧಾರ್ತರಾಷ್ಟ್ರೇಣ ಪಾರ್ಥಾನಾಂ ವಿಪ್ರಿಯೇ ಸ್ಥಿತಃ।
03293018c ಯೋದ್ಧುಮಾಶಂಸತೇ ನಿತ್ಯಂ ಫಲ್ಗುನೇನ ಮಹಾತ್ಮನಾ।।
ಧಾರ್ತರಾಷ್ಟ್ರರನ್ನು ಸೇರಿಕೊಂಡು ಪಾರ್ಥರ ವೈರಿಯಾಗಿ ನಿಂತನು. ಮಹಾತ್ಮ ಫಲ್ಗುನನೊಂದಿಗೆ ನಿತ್ಯವೂ ಯುದ್ಧಕ್ಕಾಗಿ ಕಾಯುತ್ತಿದ್ದನು.
03293019a ಸದಾ ಹಿ ತಸ್ಯ ಸ್ಪರ್ಧಾಸೀದರ್ಜುನೇನ ವಿಶಾಂ ಪತೇ।
03293019c ಅರ್ಜುನಸ್ಯ ಚ ಕರ್ಣೇನ ಯತೋ ದೃಷ್ಟೋ ಬಭೂವ ಸಃ।।
ವಿಶಾಂಪತೇ! ಅವನಿಗೆ ಯಾವಾಗಲೂ ಅರ್ಜುನನೊಂದಿಗೆ ಸ್ಪರ್ಧೆಯಿರುತ್ತಿತ್ತು. ಅರ್ಜುನನೂ ಕೂಡ ಕರ್ಣನನ್ನು ಹಾಗೆಯೇ ಕಾಣುತ್ತಿದ್ದನು.
03293020a ತಂ ತು ಕುಂಡಲಿನಂ ದೃಷ್ಟ್ವಾ ವರ್ಮಣಾ ಚ ಸಮನ್ವಿತಂ।
03293020c ಅವಧ್ಯಂ ಸಮರೇ ಮತ್ವಾ ಪರ್ಯತಪ್ಯದ್ಯುಧಿಷ್ಠಿರಃ।।
ಅವನು ಕುಂಡಲಗಳಿಂದ ಮತ್ತು ಕವಚದಿಂದ ಸಮನ್ವಿತನಾಗಿರುವುದನ್ನು ಕಂಡು ಮತ್ತು ಸಮರದಲ್ಲಿ ಅವಧ್ಯನೆಂದು ತಿಳಿದು ಯುಧಿಷ್ಠಿರನು ಪರಿತಪಿಸುತ್ತಿದ್ದನು.
03293021a ಯದಾ ತು ಕರ್ಣೋ ರಾಜೇಂದ್ರ ಭಾನುಮಂತಂ ದಿವಾಕರಂ।
03293021c ಸ್ತೌತಿ ಮಧ್ಯಂದಿನೇ ಪ್ರಾಪ್ತೇ ಪ್ರಾಂಜಲಿಃ ಸಲಿಲೇ ಸ್ಥಿತಃ।।
03293022a ತತ್ರೈನಮುಪತಿಷ್ಠಂತಿ ಬ್ರಾಹ್ಮಣಾ ಧನಹೇತವಃ।
03293022c ನಾದೇಯಂ ತಸ್ಯ ತತ್ಕಾಲೇ ಕಿಂ ಚಿದಸ್ತಿ ದ್ವಿಜಾತಿಷು।।
ರಾಜೇಂದ್ರ! ಮಧ್ಯಾಹ್ನವು ಪ್ರಾಪ್ತವಾಗಲು ಅವನು ಭಾನುಮಂತ ದಿವಾಕರನನ್ನು ಕೈಮುಗಿದು ನೀರಿನಲ್ಲಿ ನಿಂತು ಸ್ತುತಿಸಲು ಅಲ್ಲಿ ಬ್ರಾಹ್ಮಣರು ಧನಕ್ಕಾಗಿ ಕಾಯುತ್ತಾ ನಿಂತಿರುತ್ತಿದ್ದರು. ಆ ಸಮಯದಲ್ಲಿ ದ್ವಿಜರು ಏನನ್ನು ಕೇಳಿದರೂ ಅವನು ಕೊಡದೇ ಇರುತ್ತಿರಲಿಲ್ಲ.
03293023a ತಮಿಂದ್ರೋ ಬ್ರಾಹ್ಮಣೋ ಭೂತ್ವಾ ಭಿಕ್ಷಾಂ ದೇಹೀತ್ಯುಪಸ್ಥಿತಃ।
03293023c ಸ್ವಾಗತಂ ಚೇತಿ ರಾಧೇಯಸ್ತಮಥ ಪ್ರತ್ಯಭಾಷತ।।
ಆಗ ಇಂದ್ರನು ಬ್ರಾಹ್ಮಣನಾಗಿ “ಭಿಕ್ಷಾಂದೇಹಿ!” ಎಂದು ನಿಂತುಕೊಳ್ಳಲು ನಿನಗೆ ಸ್ವಾಗತ ಎಂದು ರಾಧೇಯನು ಅವನಿಗೆ ಉತ್ತರಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ರಾಧಾಕರ್ಣಪ್ರಾಪ್ತೌ ತ್ರಿನವತ್ಯಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ರಾಧಾಕರ್ಣಪ್ರಾಪ್ತಿಯಲ್ಲಿ ಇನ್ನೂರಾತೊಂಭತ್ಮೂರನೆಯ ಅಧ್ಯಾಯವು.