290 ಸೂರ್ಯಾಹ್ವಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕುಂಡಲಾಹರಣ ಪರ್ವ

ಅಧ್ಯಾಯ 290

ಸಾರ

ಮಂತ್ರಗಳಲ್ಲಿ ಕುತೂಹಲವುಂಟಾಗಲು ಕನ್ಯೆ ಕುಂತಿಯು ಸೂರ್ಯನನ್ನು ಕರೆಯಲು ಅವನ ಆಗಮನ (1-9). ಅವನನ್ನು ನೋಡಿ ಕುಂತಿಯು ಹೆದರಿ ಹೋಗೆಂದು ಹೇಳಲು ಸೂರ್ಯನು ಕವಚ-ಕುಂಡಲಗಳನ್ನು ಧರಿಸಿದ ವೀರ್ಯವಂತ ಪುತ್ರನನ್ನು ನನ್ನಿಂದ ಪಡೆಯಬೇಕೆಂಬ ನಿನ್ನ ಇಚ್ಛೆಯನ್ನು ಪೂರೈಸದೇ ನಾನು ಹೋಗಲಾರೆ ಎನ್ನುವುದು; ಅವಳಲ್ಲಿ ಶಾಪದ ಭಯವನ್ನು ಹುಟ್ಟಿಸುವುದು (10-26).

03290001 ವೈಶಂಪಾಯನ ಉವಾಚ।
03290001a ಗತೇ ತಸ್ಮಿನ್ದ್ವಿಜಶ್ರೇಷ್ಠೇ ಕಸ್ಮಿಂಶ್ಚಿತ್ಕಾಲಪರ್ಯಯೇ।
03290001c ಚಿಂತಯಾಮಾಸ ಸಾ ಕನ್ಯಾ ಮಂತ್ರಗ್ರಾಮಬಲಾಬಲಂ।।

ವೈಶಂಪಾಯನನು ಹೇಳಿದನು: “ಆ ದ್ವಿಜಶ್ರೇಷ್ಠನು ಹೊರಟುಹೋಗಿ ಕೆಲವು ಸಮಯವು ಕಳೆಯಿತು. ಆ ಕನ್ಯೆಯು ಮಂತ್ರಗುಚ್ಛಗಳ ಬಲಾಬಲದ ಕುರಿತು ಚಿಂತಿಸತೊಡಗಿದಳು.

03290002a ಅಯಂ ವೈ ಕೀದೃಶಸ್ತೇನ ಮಮ ದತ್ತೋ ಮಹಾತ್ಮನಾ।
03290002c ಮಂತ್ರಗ್ರಾಮೋ ಬಲಂ ತಸ್ಯ ಜ್ಞಾಸ್ಯೇ ನಾತಿಚಿರಾದಿವ।।

“ಆ ಮಹಾತ್ಮನು ನನಗೆ ಕೊಟ್ಟಿರುವ ಈ ಮಂತ್ರಗ್ರಾಮಗಳು ಹೇಗಿವೆ? ಅತಿಬೇಗನೇ ನಾನು ಅದರ ಬಲವೇನೆಂದು ತಿಳಿಯುತ್ತೇನೆ.”

03290003a ಏವಂ ಸಂಚಿಂತಯಂತೀ ಸಾ ದದರ್ಶರ್ತುಂ ಯದೃಚ್ಚಯಾ।
03290003c ವ್ರೀಡಿತಾ ಸಾಭವದ್ಬಾಲಾ ಕನ್ಯಾಭಾವೇ ರಜಸ್ವಲಾ।।

ಹೀಗೆ ಯೋಚಿಸುತ್ತಿರಲು ಆ ಬಾಲಕಿಯು ತಾನು ರಜಸ್ವಲೆಯಾದುದನ್ನು ಕಂಡಳು ಮತ್ತು ಕನ್ಯಾಭಾವದಿಂದ ನಾಚಿಕೊಂಡಳು.

03290004a ಅಥೋದ್ಯಂತಂ ಸಹಸ್ರಾಂಶುಂ ಪೃಥಾ ದೀಪ್ತಂ ದದರ್ಶ ಹ।
03290004c ನ ತತರ್ಪ ಚ ರೂಪೇಣ ಭಾನೋಃ ಸಂಧ್ಯಾಗತಸ್ಯ ಸಾ।।

ಆಗ ಉದಯಿಸಿ ಬೆಳಗುತ್ತಿದ್ದ ಸಹಸ್ರಾಂಶುವನ್ನು ಪೃಥೆಯು ನೋಡಿದಳು. ಆ ಸಂಧ್ಯೆಯಲ್ಲಿ ಆಗಮಿಸುತ್ತಿದ್ದ ಆ ಭಾನುವಿನ ರೂಪವನ್ನು ನೋಡಿ ತೃಪ್ತಳಾಗಲಿಲ್ಲ.

03290005a ತಸ್ಯಾ ದೃಷ್ಟಿರಭೂದ್ದಿವ್ಯಾ ಸಾಪಶ್ಯದ್ದಿವ್ಯದರ್ಶನಂ।
03290005c ಆಮುಕ್ತಕವಚಂ ದೇವಂ ಕುಂಡಲಾಭ್ಯಾಂ ವಿಭೂಷಿತಂ।।

ಅವಳ ದೃಷ್ಠಿಯು ದಿವ್ಯವಾಯಿತು ಮತ್ತು ಅವಳು ಕವಚಗಳಿಂದ ಮುಚ್ಚಿದ, ಕುಂಡಲಗಳಿಂದ ವಿಭೂಷಿತವಾದ ಆ ದೇವನ ದಿವ್ಯದರ್ಶನವನ್ನು ಕಂಡಳು.

03290006a ತಸ್ಯಾಃ ಕೌತೂಹಲಂ ತ್ವಾಸೀನ್ಮಂತ್ರಂ ಪ್ರತಿ ನರಾಧಿಪ।
03290006c ಆಹ್ವಾನಮಕರೋತ್ಸಾಥ ತಸ್ಯ ದೇವಸ್ಯ ಭಾಮಿನೀ।।

ನರಾಧಿಪ! ಮಂತ್ರಗಳ ಕುರಿತು ಅವಳಲ್ಲಿ ಕುತೂಹಲವುಂಟಾಯಿತು. ಆಗ ಭಾಮಿನಿಯು ಅದರಿಂದ ಆ ದೇವನನ್ನು ಆಹ್ವಾನಿಸಿದಳು.

03290007a ಪ್ರಾಣಾನುಪಸ್ಪೃಶ್ಯ ತದಾ ಆಜುಹಾವ ದಿವಾಕರಂ।
03290007c ಆಜಗಾಮ ತತೋ ರಾಜನ್ಸ್ತ್ವರಮಾಣೋ ದಿವಾಕರಃ।।

ರಾಜನ್! ಅವಳು ಆಗ ಉಸಿರನ್ನು ಉಪಸ್ಪರಿಸಿ ದಿವಾಕರನನ್ನು ಕರೆದಳು. ಆಗ ಅವಸರದಿಂದ ದಿವಾಕರನು ಬಂದನು.

03290008a ಮಧುಪಿಂಗೋ ಮಹಾಬಾಹುಃ ಕಂಬುಗ್ರೀವೋ ಹಸನ್ನಿವ।
03290008c ಅಂಗದೀ ಬದ್ಧಮುಕುಟೋ ದಿಶಃ ಪ್ರಜ್ವಾಲಯನ್ನಿವ।।
03290009a ಯೋಗಾತ್ಕೃತ್ವಾ ದ್ವಿಧಾತ್ಮಾನಮಾಜಗಾಮ ತತಾಪ ಚ।

ಮಧುವಿನ ಬಣ್ಣದ, ಮಹಾಬಾಹು, ಕಂಬುಗ್ರೀವ, ನಸುನಗುತ್ತಿರುವ, ಅಂಗದೀ, ಬದ್ಧಮುಕುಟ, ದಿಶಗಳನ್ನು ಪ್ರಜ್ವಲಿಸುತ್ತಿರುವಂತೆ ಯೋಗದಿಂದ ತನ್ನನ್ನು ಎರಡನ್ನಾಗಿ ಮಾಡಿಕೊಂಡು ಇಲ್ಲಿಗೂ ಬಂದನು ಮತ್ತು ಅಲ್ಲಿಯೂ ಸುಡುತ್ತಿದ್ದನು.

03290009c ಆಬಭಾಷೇ ತತಃ ಕುಂತೀಂ ಸಾಮ್ನಾ ಪರಮವಲ್ಗುನಾ।।
03290010a ಆಗತೋಽಸ್ಮಿ ವಶಂ ಭದ್ರೇ ತವ ಮಂತ್ರಬಲಾತ್ಕೃತಃ।
03290010c ಕಿಂ ಕರೋಮ್ಯವಶೋ ರಾಜ್ಞಿ ಬ್ರೂಹಿ ಕರ್ತಾ ತದಸ್ಮಿ ತೇ।।

ಆಗ ಅವನು ಕುಂತಿಗೆ ಈ ಪ್ರೀತಿಯುಕ್ತ ಪರಮ ಸ್ವಾದು ಮಾತುಗಳಿಂದ ಹೇಳಿದನು: “ಭದ್ರೇ! ಮಂತ್ರದ ಬಲವು ಮಾಡಿದಂತೆ ನಿನ್ನ ವಶದಲ್ಲಿ ಬಂದುಬಿಟ್ಟಿದ್ದೇನೆ. ರಾಣಿ! ಏನು ಮಾಡಲಿ ಹೇಳು. ಅವಶನಾಗಿ ನೀನು ಹೇಳಿದುದನ್ನು ಮಾಡುತ್ತೇನೆ.”

03290011 ಕುಂತ್ಯುವಾಚ।
03290011a ಗಮ್ಯತಾಂ ಭಗವನ್ಸ್ತತ್ರ ಯತೋಽಸಿ ಸಮುಪಾಗತಃ।
03290011c ಕೌತೂಹಲಾತ್ಸಮಾಹೂತಃ ಪ್ರಸೀದ ಭಗವನ್ನಿತಿ।।

ಕುಂತಿಯು ಹೇಳಿದಳು: “ಭಗವನ್! ನೀನು ಎಲ್ಲಿಂದ ಬಂದಿದ್ದೀಯೋ ಅಲ್ಲಿಗೆ ಹೊರಟುಹೋಗು! ಪ್ರಸೀದನಾಗು ಭಗವನ್! ಕೇವಲ ಕುತೂಹಲದಿಂದ ನಿನ್ನನ್ನು ಕರೆಯಿಸಿದೆ.”

03290012 ಸೂರ್ಯ ಉವಾಚ।
03290012a ಗಮಿಷ್ಯೇಽಹಂ ಯಥಾ ಮಾಂ ತ್ವಂ ಬ್ರವೀಷಿ ತನುಮಧ್ಯಮೇ।
03290012c ನ ತು ದೇವಂ ಸಮಾಹೂಯ ನ್ಯಾಯ್ಯಂ ಪ್ರೇಷಯಿತುಂ ವೃಥಾ।।

ಸೂರ್ಯನು ಹೇಳಿದನು: “ತನುಮಧ್ಯಮೇ! ನೀನು ಹೇಳಿದಂತೆ ನಾನು ಹೋಗುತ್ತೇನೆ. ಆದರೆ ದೇವನನ್ನು ಕರೆದು ವೃಥಾ ಹಿಂದೆ ಕಳುಹಿಸುವುದು ನ್ಯಾಯವಲ್ಲ.

03290013a ತವಾಭಿಸಂಧಿಃ ಸುಭಗೇ ಸೂರ್ಯಾತ್ಪುತ್ರೋ ಭವೇದಿತಿ।
03290013c ವೀರ್ಯೇಣಾಪ್ರತಿಮೋ ಲೋಕೇ ಕವಚೀ ಕುಂಡಲೀತಿ ಚ।।

ಸುಭಗೇ! ವೀರ್ಯದಲ್ಲಿ ಲೋಕದಲ್ಲೇ ಅಪ್ರತಿಮನಾದ, ಕವಚ-ಕುಂಡಲಗಳನ್ನು ಧರಿಸಿದ ಮಗನು ಸೂರ್ಯನಿಂದ ಪಡೆಯಬೇಕೆಂಬುದು ನಿನ್ನ ಇಚ್ಛೆಯಾಗಿತ್ತು.

03290014a ಸಾ ತ್ವಮಾತ್ಮಪ್ರದಾನಂ ವೈ ಕುರುಷ್ವ ಗಜಗಾಮಿನಿ।
03290014c ಉತ್ಪತ್ಸ್ಯತಿ ಹಿ ಪುತ್ರಸ್ತೇ ಯಥಾಸಂಕಲ್ಪಮಂಗನೇ।।

ಆದುದರಿಂದ ಗಜಗಾಮಿನೀ! ನಿನ್ನನ್ನು ನನಗೆ ಕೊಡು. ಅಂಗನೇ! ನೀನು ಸಂಕಲ್ಪಿಸಿದ್ದಂತಹ ಮಗನನ್ನು ನಿನಗೆ ಕೊಡುತ್ತೇನೆ.

03290015a ಅಥ ಗಚ್ಚಾಮ್ಯಹಂ ಭದ್ರೇ ತ್ವಯಾಸಂಗಮ್ಯ ಸುಸ್ಮಿತೇ।
03290015c ಶಪ್ಸ್ಯಾಮಿ ತ್ವಾಮಹಂ ಕ್ರುದ್ಧೋ ಬ್ರಾಹ್ಮಣಂ ಪಿತರಂ ಚ ತೇ।।

ಭದ್ರೇ! ಸುಸ್ಮಿತೇ! ಅಥವಾ ನಾನು ನಿನ್ನನ್ನು ಕೂಡದೇ ಹೋಗುತ್ತೇನೆ. ಮತ್ತು ನಾನು ಕೃದ್ಧನಾಗಿ ನಿನ್ನನ್ನೂ, ಆ ಬ್ರಾಹ್ಮಣನನ್ನೂ, ನಿನ್ನ ತಂದೆಯನ್ನೂ ಶಪಿಸುತ್ತೇನೆ.

03290016a ತ್ವತ್ಕೃತೇ ತಾನ್ಪ್ರಧಕ್ಷ್ಯಾಮಿ ಸರ್ವಾನಪಿ ನ ಸಂಶಯಃ।
03290016c ಪಿತರಂ ಚೈವ ತೇ ಮೂಢಂ ಯೋ ನ ವೇತ್ತಿ ತವಾನಯಂ।।
03290017a ತಸ್ಯ ಚ ಬ್ರಾಹ್ಮಣಸ್ಯಾದ್ಯ ಯೋಽಸೌ ಮಂತ್ರಮದಾತ್ತವ।
03290017c ಶೀಲವೃತ್ತಮವಿಜ್ಞಾಯ ಧಾಸ್ಯಾಮಿ ವಿನಯಂ ಪರಂ।।

ನಿನ್ನ ಕಾರಣದಿಂದಾಗಿ ಅವರೆಲ್ಲರನ್ನೂ ಸುಟ್ಟುಬಿಡುತ್ತೇನೆ. ಇದರಲ್ಲಿ ಸಂಶಯವಿಲ್ಲ. ನಿನ್ನ ತಪ್ಪನ್ನು ತಿಳಿಯದ ಆ ಮೂಢ ನಿನ್ನ ತಂದೆಯನ್ನೂ, ನಿನ್ನ ಶೀಲ-ನಡತೆಗಳನ್ನು ತಿಳಿಯದೇ ನಿನಗೆ ಮಂತ್ರಗಳನ್ನಿತ್ತ ಆ ಪರಮ ವಿನಯ ಬ್ರಾಹ್ಮಣನನ್ನು ಕೂಡ ಸುಡುತ್ತೇನೆ.

03290018a ಏತೇ ಹಿ ವಿಬುಧಾಃ ಸರ್ವೇ ಪುರಂದರಮುಖಾ ದಿವಿ।
03290018c ತ್ವಯಾ ಪ್ರಲಬ್ಧಂ ಪಶ್ಯಂತಿ ಸ್ಮಯಂತ ಇವ ಭಾಮಿನಿ।।
03290019a ಪಶ್ಯ ಚೈನಾನ್ಸುರಗಣಾನ್ದಿವ್ಯಂ ಚಕ್ಷುರಿದಂ ಹಿ ತೇ।
03290019c ಪೂರ್ವಮೇವ ಮಯಾ ದತ್ತಂ ದೃಷ್ಟವತ್ಯಸಿ ಯೇನ ಮಾಂ।।

ಭಾಮಿನೀ! ದಿವಿಯಲ್ಲಿ ಪುರಂದರನೇ ಮೊದಲಾದ ದೇವತೆಗಳು ನೀನು ನನಗೆ ಮೋಸಮಾಡಿದುದನ್ನು ಕಂಡು ನಗುತ್ತಿದ್ದಾರೆ. ನೀನು ನನ್ನನ್ನು ನೋಡಬಹುದೆಂದು ನಾನು ನಿನಗೆ ಮೊದಲು ಕೊಟ್ಟಿದ್ದ ದಿವ್ಯದೃಷ್ಠಿಯಿಂದ ಆ ಸುರಗಣಗಳನ್ನು ನೋಡು.””

03290020 ವೈಶಂಪಾಯನ ಉವಾಚ।
03290020a ತತೋಽಪಶ್ಯತ್ತ್ರಿದಶಾನ್ರಾಜಪುತ್ರೀ। ಸರ್ವಾನೇವ ಸ್ವೇಷು ಧಿಷ್ಣ್ಯೇಷು ಖಸ್ಥಾನ್।
03290020c ಪ್ರಭಾಸಂತಂ ಭಾನುಮಂತಂ ಮಹಾಂತಂ। ಯಥಾದಿತ್ಯಂ ರೋಚಮಾನಂ ತಥೈವ।।

ವೈಶಂಪಾಯನನು ಹೇಳಿದನು: “ಆಗ ರಾಜಪುತ್ರಿಯು ಪ್ರಭಾಸಿಸುತ್ತಿರುವ ಭಾನುಮಂತ ಮಹಾಂತ ಸುಂದರ ಆದಿತ್ಯನನ್ನು ಹೇಗೋ ಹಾಗೆ ಅವರವರ ದಿಕ್ಕುಗಳಲ್ಲಿ ನಿಂತಿರುವ ಆ ಎಲ್ಲ ತ್ರಿದಶರನ್ನು ನೋಡಿದಳು.

03290021a ಸಾ ತಾನ್ದೃಷ್ಟ್ವಾ ವ್ರೀಡಮಾನೇವ ಬಾಲಾ। ಸೂರ್ಯಂ ದೇವೀ ವಚನಂ ಪ್ರಾಹ ಭೀತಾ।
03290021c ಗಚ್ಚ ತ್ವಂ ವೈ ಗೋಪತೇ ಸ್ವಂ ವಿಮಾನಂ। ಕನ್ಯಾಭಾವಾದ್ದುಃಖ ಏಷೋಪಚಾರಃ।।

ಅವರೆಲ್ಲರನ್ನೂ ನೋಡಿ ನಾಚಿದ ಆ ದೇವಿ ಬಾಲಕಿಯು ಭೀತಳಾಗಿ ಸೂರ್ಯನಿಗೆ ಹೇಳಿದಳು: “ಗೋಪತೇ! ನಿನ್ನ ವಿಮಾನದಲ್ಲಿ ನೀನು ಹೊರಟುಹೋಗು. ನಿನ್ನ ಈ ಉಪಚಾರವು ಕನ್ಯಾಭಾವಕ್ಕೆ ದುಃಖವನ್ನು ತರುತ್ತಿದೆ.

03290022a ಪಿತಾ ಮಾತಾ ಗುರವಶ್ಚೈವ ಯೇಽನ್ಯೇ। ದೇಹಸ್ಯಾಸ್ಯ ಪ್ರಭವಂತಿ ಪ್ರದಾನೇ।
03290022c ನಾಹಂ ಧರ್ಮಂ ಲೋಪಯಿಷ್ಯಾಮಿ ಲೋಕೇ। ಸ್ತ್ರೀಣಾಂ ವೃತ್ತಂ ಪೂಜ್ಯತೇ ದೇಹರಕ್ಷಾ।।

ತಂದೆ, ತಾಯಿ, ಮತ್ತು ಅನ್ಯ ಹಿರಿಯರು ಈ ದೇಹವನ್ನು ಕೊಡಲು ಶಕ್ತರಾಗಿದ್ದಾರೆ. ನಾನು ಲೋಕದಲ್ಲಿ ಧರ್ಮಲೋಪವನ್ನು ಮಾಡುವುದಿಲ್ಲ. ದೇಹವನ್ನು ರಕ್ಷಿಸಿಕೊಳ್ಳುವುದು ಸ್ತ್ರೀಯರ ಪೂಜನೀಯ ನಡತೆ.

03290023a ಮಯಾ ಮಂತ್ರಬಲಂ ಜ್ಞಾತುಮಾಹೂತಸ್ತ್ವಂ ವಿಭಾವಸೋ।
03290023c ಬಾಲ್ಯಾದ್ಬಾಲೇತಿ ಕೃತ್ವಾ ತತ್ ಕ್ಷಂತುಮರ್ಹಸಿ ಮೇ ವಿಭೋ।।

ವಿಭಾವಸೋ! ಮಂತ್ರಬಲವನ್ನು ತಿಳಿಯಲು ಬಾಲತ್ವದಿಂದ ನಿನ್ನನ್ನು ಕರೆದೆ. ಬಾಲಕಿಯು ಮಾಡಿದುದೆಂದು ವಿಭೋ! ನನ್ನನ್ನು ಕ್ಷಮಿಸಬೇಕು.”

03290024 ಸೂರ್ಯ ಉವಾಚ।
03290024a ಬಾಲೇತಿ ಕೃತ್ವಾನುನಯಂ ತವಾಹಂ। ದದಾನಿ ನಾನ್ಯಾನುನಯಂ ಲಭೇತ।
03290024c ಆತ್ಮಪ್ರದಾನಂ ಕುರು ಕುಂತಿಕನ್ಯೇ। ಶಾಂತಿಸ್ತವೈವಂ ಹಿ ಭವೇಚ್ಚ ಭೀರು।।

ಸೂರ್ಯನು ಹೇಳಿದನು: “ಬಾಲಕಿಯೆಂದೇ ನಾನು ನಿನ್ನನ್ನು ಅನುನಯದಿಂದ ಕಾಣುತ್ತಿದ್ದೇನೆ. ಹಾಗಿಲ್ಲದಿದ್ದರೆ ನಾನು ಅನುನಯದಿಂದ ಇರಲು ಸಾಧ್ಯವೇ ಇರಲಿಲ್ಲ. ಕುಂತೀ! ಕನ್ಯೇ! ಆತ್ಮಪ್ರದಾನವನ್ನು ಮಾಡು. ಭೀರು! ಇದರಿಂದ ನಿನಗೂ ಶಾಂತಿಯೊದಗುತ್ತದೆ.

03290025a ನ ಚಾಪಿ ಯುಕ್ತಂ ಗಂತುಂ ಹಿ ಮಯಾ ಮಿಥ್ಯಾಕೃತೇನ ವೈ।
03290025c ಗಮಿಷ್ಯಾಮ್ಯನವದ್ಯಾಂಗಿ ಲೋಕೇ ಸಮವಹಾಸ್ಯತಾಂ।
03290025e ಸರ್ವೇಷಾಂ ವಿಬುಧಾನಾಂ ಚ ವಕ್ತವ್ಯಃ ಸ್ಯಾಮಹಂ ಶುಭೇ।।

ನನ್ನನ್ನು ಸುಳ್ಳುಮಾಡಿಸಿಕೊಂಡು ಹೋಗುವುದು ಯುಕ್ತವಲ್ಲ. ಅನವದ್ಯಾಂಗೀ! ಹಾಗೆ ಹೋದರೆ ಲೋಕವು ನನ್ನನ್ನು ಅಪಹಾಸ್ಯಮಾಡುವುದಿಲ್ಲವೇ? ಶುಭೇ! ಎಲ್ಲ ದೇವತೆಗಳೂ ನನ್ನ ಕುರಿತು ಮಾತನಾಡಿಕೊಳ್ಳುತ್ತಾರೆ.

03290026a ಸಾ ತ್ವಂ ಮಯಾ ಸಮಾಗಚ್ಚ ಪುತ್ರಂ ಲಪ್ಸ್ಯಸಿ ಮಾದೃಶಂ।
03290026c ವಿಶಿಷ್ಟಾ ಸರ್ವಲೋಕೇಷು ಭವಿಷ್ಯಸಿ ಚ ಭಾಮಿನಿ।।

ಭಾಮಿನೀ! ಆದುದರಿಂದ ನೀನು ನನ್ನೊಂದಿಗೆ ಸೇರಿ, ಸರ್ವಲೋಕದಲ್ಲಿಯೂ ವಿಶಿಷ್ಠನೆನಿಸಿಕೊಳ್ಳುವ ನನ್ನಂತಹ ಪುತ್ರನನ್ನು ಪಡೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಸೂರ್ಯಾಹ್ವಾನೇ ನವತ್ಯಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಸೂರ್ಯಾಹ್ವಾನದಲ್ಲಿ ಇನ್ನೂರಾತೊಂಭತ್ತನೆಯ ಅಧ್ಯಾಯವು.