289 ಪೃಥಾಯಾ ಮಂತ್ರಪ್ರಾಪ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕುಂಡಲಾಹರಣ ಪರ್ವ

ಅಧ್ಯಾಯ 289

ಸಾರ

ಮುನಿವರನು ಕುಂತಿಯ ಸೇವೆಗೆ ಮೆಚ್ಚಿ ಬೇಕಾದ ದೇವತೆಯನ್ನು ವಶಮಾಡಿಸಿಕೊಳ್ಳಬಹುದಾದ ಮಂತ್ರಗುಚ್ಛಗಳನ್ನು ಕೊಟ್ಟು ಹೋದುದು (1-23).

03289001 ವೈಶಂಪಾಯನ ಉವಾಚ।
03289001a ಸಾ ತು ಕನ್ಯಾ ಮಹಾರಾಜ ಬ್ರಾಹ್ಮಣಂ ಸಂಶಿತವ್ರತಂ।
03289001c ತೋಷಯಾಮಾಸ ಶುದ್ಧೇನ ಮನಸಾ ಸಂಶಿತವ್ರತಾ।।

ವೈಶಂಪಾಯನನು ಹೇಳಿದನು: “ಮಹಾರಾಜ! ಆ ಸಂಶಿತವ್ರತ ಕನ್ಯೆಯಾದರೋ ಸಂಶಿತವ್ರತ ಬ್ರಾಹ್ಮಣನನ್ನು ಶುದ್ಧ ಮನಸ್ಸಿನಿಂದ ತೃಪ್ತಿಗೊಳಿಸಿದಳು.

03289002a ಪ್ರಾತರಾಯಾಸ್ಯ ಇತ್ಯುಕ್ತ್ವಾ ಕದಾ ಚಿದ್ದ್ವಿಜಸತ್ತಮಃ।
03289002c ತತ ಆಯಾತಿ ರಾಜೇಂದ್ರ ಸಾಯೇ ರಾತ್ರಾವಥೋ ಪುನಃ।।

ರಾಜೇಂದ್ರ! ಕೆಲವೊಮ್ಮೆ ಆ ದ್ವಿಜಸತ್ತಮನು ಬೆಳಿಗ್ಗೆ ಬರುತ್ತೇನೆ ಎಂದು ಹೇಳಿ ಸಾಯಂಕಾಲ ಬರುತ್ತಿದ್ದನು. ಪುನಃ ಸಾಯಂಕಾಲ ಬರುತ್ತೇನೆಂದು ಹೇಳಿ ರಾತ್ರಿ ಬರುತ್ತಿದ್ದನು.

03289003a ತಂ ಚ ಸರ್ವಾಸು ವೇಲಾಸು ಭಕ್ಷ್ಯಭೋಜ್ಯಪ್ರತಿಶ್ರಯೈಃ।
03289003c ಪೂಜಯಾಮಾಸ ಸಾ ಕನ್ಯಾ ವರ್ಧಮಾನೈಸ್ತು ಸರ್ವದಾ।।

ಆ ಕನ್ಯೆಯು ಎಲ್ಲ ವೇಳೆಗಳಲ್ಲಿಯೂ ಅವನನ್ನು ಹೆಚ್ಚು ಹೆಚ್ಚು ಭಕ್ಷ್ಯ, ಭೋಜ್ಯ ಮತ್ತು ಆಶ್ರಯವನ್ನಿತ್ತು ಸರ್ವದಾ ಪೂಜಿಸುತ್ತಿದ್ದಳು.

03289004a ಅನ್ನಾದಿಸಮುದಾಚಾರಃ ಶಯ್ಯಾಸನಕೃತಸ್ತಥಾ।
03289004c ದಿವಸೇ ದಿವಸೇ ತಸ್ಯ ವರ್ಧತೇ ನ ತು ಹೀಯತೇ।।

ಅವನು ಕುಳಿತಿರುವಾಗ ಮತ್ತು ಮಲಗಿರುವಾಗ ಅವನಿಗೆ ನೀಡಿದ ಅನ್ನಾದಿ ಸಮುದಾಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದವೇ ಹೊರತು ಕೊರತೆ ಏನೂ ಆಗುತ್ತಿರಲಿಲ್ಲ.

03289005a ನಿರ್ಭರ್ತ್ಸನಾಪವಾದೈಶ್ಚ ತಥೈವಾಪ್ರಿಯಯಾ ಗಿರಾ।
03289005c ಬ್ರಾಹ್ಮಣಸ್ಯ ಪೃಥಾ ರಾಜನ್ನ ಚಕಾರಾಪ್ರಿಯಂ ತದಾ।।

ರಾಜನ್! ಅವನು ಬೈಯುತ್ತಿದ್ದರೂ, ತಪ್ಪುಗಳನ್ನು ಹುಡುಕಿ ಹೇಳುತ್ತಿದ್ದರೂ ಮತ್ತು ಅಪ್ರಿಯವಾಗಿ ಮಾತನ್ನಾಡುತ್ತಿದ್ದರೂ ಸಹ ಪೃಥೆಯು ಬ್ರಾಹ್ಮಣನಿಗೆ ಅಪ್ರಿಯವಾದುದನ್ನು ಮಾಡಲಿಲ್ಲ.

03289006a ವ್ಯಸ್ತೇ ಕಾಲೇ ಪುನಶ್ಚೈತಿ ನ ಚೈತಿ ಬಹುಶೋ ದ್ವಿಜಃ।
03289006c ದುರ್ಲಭ್ಯಮಪಿ ಚೈವಾನ್ನಂ ದೀಯತಾಮಿತಿ ಸೋಽಬ್ರವೀತ್।।

ಕೆಲವೊಮ್ಮೆ ಕಾಲವು ವ್ಯಸ್ತವಾದಾಗ ಬರುತ್ತಿದ್ದನು. ಬಹಳಷ್ಟು ಸಲ ಬರುತ್ತಲೇ ಇರಲಿಲ್ಲ. ಆಹಾರವು ದೊರೆಯುವುದು ಕಷ್ಟವಾಗಿದ್ದರೂ ಎಷ್ಟೋ ಸಲ ಊಟವನ್ನು ಕೊಡು ಎಂದು ಕೇಳುತ್ತಿದ್ದನು.

03289007a ಕೃತಮೇವ ಚ ತತ್ಸರ್ವಂ ಪೃಥಾ ತಸ್ಮೈ ನ್ಯವೇದಯತ್।
03289007c ಶಿಷ್ಯವತ್ಪುತ್ರವಚ್ಚೈವ ಸ್ವಸೃವಚ್ಚ ಸುಸಮ್ಯತಾ।।

ಎಲ್ಲವೂ ತಯಾರಿದೆ ಎಂದು ಪೃಥೆಯು ಅವನಿಗೆ ನಿವೇದಿಸುತ್ತಿದ್ದಳು. ಶಿಷ್ಯೆಯಂತೆ, ಮಗಳಂತೆ, ಮತ್ತು ತಂಗಿಯಂತೆ ನಡೆದುಕೊಳ್ಳುತ್ತಿದ್ದಳು.

03289008a ಯಥೋಪಜೋಷಂ ರಾಜೇಂದ್ರ ದ್ವಿಜಾತಿಪ್ರವರಸ್ಯ ಸಾ।
03289008c ಪ್ರೀತಿಮುತ್ಪಾದಯಾಮಾಸ ಕನ್ಯಾ ಯತ್ನೈರನಿಂದಿತಾ।।

ರಾಜೇಂದ್ರ! ಅವನಿಗಿಷ್ಟವಾದಂತೆ ಪ್ರಯತ್ನಿಸುತ್ತಿದ್ದ ಆ ಅನಿಂದಿತೆ ಕನ್ಯೆಯು ಆ ದ್ವಿಜಪ್ರವರನ ಪ್ರೀತಿಯನ್ನು ಗಳಿಸಿದಳು.

03289009a ತಸ್ಯಾಸ್ತು ತು ಶೀಲವೃತ್ತೇನ ತುತೋಷ ದ್ವಿಜಸತ್ತಮಃ।
03289009c ಅವಧಾನೇನ ಭೂಯೋಽಸ್ಯ ಪರಂ ಯತ್ನಮಥಾಕರೋತ್।।

ಬಹಳ ಪ್ರಯತ್ನಪಟ್ಟು ತನ್ನ ಸೇವೆ ಮಾಡುತ್ತಿರುವ ಅವಳ ಶೀಲ ನಡತೆಯಿಂದ ದ್ವಿಜಸತ್ತಮನು ತೃಪ್ತನಾದನು.

03289010a ತಾಂ ಪ್ರಭಾತೇ ಚ ಸಾಯೇ ಚ ಪಿತಾ ಪಪ್ರಚ್ಚ ಭಾರತ।
03289010c ಅಪಿ ತುಷ್ಯತಿ ತೇ ಪುತ್ರಿ ಬ್ರಾಹ್ಮಣಃ ಪರಿಚರ್ಯಯಾ।।

ಭಾರತ! ಬೆಳಿಗ್ಗೆ ಮತ್ತು ಸಾಯಂಕಾಲ ಅವಳ ತಂದೆಯು ಅವಳನ್ನು ಕೇಳುತ್ತಿದ್ದನು: “ಪುತ್ರಿ! ನಿನ್ನ ಪರಿಚರ್ಯೆಯಿಂದ ಬ್ರಾಹ್ಮಣನು ತೃಪ್ತನಾಗಿದ್ದಾನೆ ತಾನೇ?”

03289011a ತಂ ಸಾ ಪರಮಮಿತ್ಯೇವ ಪ್ರತ್ಯುವಾಚ ಯಶಸ್ವಿನೀ।
03289011c ತತಃ ಪ್ರೀತಿಮವಾಪಾಗ್ರ್ಯಾಂ ಕುಂತಿಭೋಜೋ ಮಹಾಮನಾಃ।।

ಆ ಯಶಸ್ವಿನಿಯು “ಸಂಪೂರ್ಣವಾಗಿ!” ಎಂದು ಉತ್ತರಿಸಲು ಮಹಾಮನಸ್ವಿ ಕುಂತಿಭೋಜನು ಅತ್ಯಂತ ಸಂತೋಷಪಡುತ್ತಿದ್ದನು.

03289012a ತತಃ ಸಂವತ್ಸರೇ ಪೂರ್ಣೇ ಯದಾಸೌ ಜಪತಾಂ ವರಃ।
03289012c ನಾಪಶ್ಯದ್ದುಷ್ಕೃತಂ ಕಿಂ ಚಿತ್ಪೃಥಾಯಾಃ ಸೌಹೃದೇ ರತಃ।
03289013a ತತಃ ಪ್ರೀತಮನಾ ಭೂತ್ವಾ ಸ ಏನಾಂ ಬ್ರಾಹ್ಮಣೋಽಬ್ರವೀತ್।
03289013c ಪ್ರೀತೋಽಸ್ಮಿ ಪರಮಂ ಭದ್ರೇ ಪರಿಚಾರೇಣ ತೇ ಶುಭೇ।।

ಆಗ ಒಂದು ವರ್ಷವು ಮುಗಿಯಲು, ಜಪಿಗಳಲ್ಲಿ ಶ್ರೇಷ್ಠನಾದವನು ಪೃಥೆಯಿಂದ ಯಾವ ದುಷ್ಕೃತವೂ ಆಗದೇ ಇದ್ದುದನ್ನು ನೋಡಿ ಅವಳೊಂದಿಗೆ ಸ್ನೇಹಭಾವವನ್ನು ಬೆಳೆಸಿಕೊಂಡನು. ಆಗ ಪ್ರೀತಿಮನಸ್ಕ ಬ್ರಾಹ್ಮಣನು ಹೇಳಿದನು: “ಭದ್ರೇ! ಶುಭೇ! ನಿನ್ನ ಪರಿಚಾರಿಕೆಯಿಂದ ಪರಮ ಪ್ರೀತನಾಗಿದ್ದೇನೆ.

03289014a ವರಾನ್ವೃಣೀಷ್ವ ಕಲ್ಯಾಣಿ ದುರಾಪಾನ್ಮಾನುಷೈರಿಹ।
03289014c ಯೈಸ್ತ್ವಂ ಸೀಮಂತಿನೀಃ ಸರ್ವಾ ಯಶಸಾಭಿಭವಿಷ್ಯಸಿ।।

ಕಲ್ಯಾಣೀ! ಮನುಷ್ಯರು ಪಡೆಯುವುದಕ್ಕೆ ಕಷ್ಟವೆನಿಸುವ ಮತ್ತು ಯಾವುದರಿಂದ ನೀನು ಸರ್ವ ಸೀಮಂತಿಯರಿಗಿಂತಲೂ ಯಶಸ್ವಿನಿಯಾಗುತ್ತೀಯೋ ಅಂಥಹ ವರವನ್ನು ಕೇಳಿಕೋ.”

03289015 ಕುಂತ್ಯುವಾಚ।
03289015a ಕೃತಾನಿ ಮಮ ಸರ್ವಾಣಿ ಯಸ್ಯಾ ಮೇ ವೇದವಿತ್ತಮ।
03289015c ತ್ವಂ ಪ್ರಸನ್ನಃ ಪಿತಾ ಚೈವ ಕೃತಂ ವಿಪ್ರ ವರೈರ್ಮಮ।।

ಕುಂತಿಯು ಹೇಳಿದಳು: “ವೇದವಿತ್ತಮ! ನೀನು ಮತ್ತು ನನ್ನ ತಂದೆಯು ಪ್ರಸನ್ನರಾಗಿದ್ದೀರಿ ಎಂದರೆ ನಾನು ಎಲ್ಲವನ್ನೂ ಸಾಧಿಸಿದಂತೆಯೇ. ವಿಪ್ರ! ವರವು ನನಗೆ ಇದಕ್ಕಿಂತಲೂ ಹೆಚ್ಚಿನ ಏನನ್ನು ಮಾಡೀತು?”

03289016 ಬ್ರಾಹ್ಮಣ ಉವಾಚ।
03289016a ಯದಿ ನೇಚ್ಚಸಿ ಭದ್ರೇ ತ್ವಂ ವರಂ ಮತ್ತಃ ಶುಚಿಸ್ಮಿತೇ।
03289016c ಇಮಂ ಮಂತ್ರಂ ಗೃಹಾಣ ತ್ವಮಾಹ್ವಾನಾಯ ದಿವೌಕಸಾಂ।।

ಬ್ರಾಹ್ಮಣನು ಹೇಳಿದನು: “ಭದ್ರೇ! ಶುಚಿಸ್ಮಿತೇ! ನನ್ನಿಂದ ನಿನಗೆ ವರವು ಇಷ್ಟವಿಲ್ಲದಿದ್ದರೆ ದಿವೌಕಸರನ್ನು ಆಹ್ವಾನಿಸಬಲ್ಲ ಈ ಮಂತ್ರಗಳನ್ನು ಸ್ವೀಕರಿಸು.

03289017a ಯಂ ಯಂ ದೇವಂ ತ್ವಮೇತೇನ ಮಂತ್ರೇಣಾವಾಹಯಿಷ್ಯಸಿ।
03289017c ತೇನ ತೇನ ವಶೇ ಭದ್ರೇ ಸ್ಥಾತವ್ಯಂ ತೇ ಭವಿಷ್ಯತಿ।।

ಭದ್ರೇ! ನೀನು ಈ ಮಂತ್ರಗಳಿಂದ ಯಾವ ಯಾವ ದೇವನನ್ನು ಆಹ್ವಾನಿಸುತ್ತೀಯೋ ಆ ಆ ದೇವತೆಗಳು ನಿನ್ನ ವಶದಲ್ಲಿ ಬಂದು ನಿಂತು ನಿನ್ನವರಾಗುತ್ತಾರೆ.

03289018a ಅಕಾಮೋ ವಾ ಸಕಾಮೋ ವಾ ನ ಸ ನೈಷ್ಯತಿ ತೇ ವಶಂ।
03289018c ವಿಬುಧೋ ಮಂತ್ರಸಂಶಾಂತೋ ವಾಕ್ಯೇ ಭೃತ್ಯ ಇವಾನತಃ।।

ಬಯಸಿಯೋ ಅಥವಾ ಬಯಸದೆಯೋ ಅವರು ನಿನ್ನ ವಶದಲ್ಲಿ ಬರುತ್ತಾರೆ ಮತ್ತು ನಿನ್ನ ಮಂತ್ರಕ್ಕೆ ಬದ್ಧರಾದ ಅವರು ನಿನ್ನ ಮಾತನ್ನು ಸೇವಕರಂತೆ ನೆರವೇರಿಸುತ್ತಾರೆ.””

03289019 ವೈಶಂಪಾಯನ ಉವಾಚ।
03289019a ನ ಶಶಾಕ ದ್ವಿತೀಯಂ ಸಾ ಪ್ರತ್ಯಾಖ್ಯಾತುಮನಿಂದಿತಾ।
03289019c ತಂ ವೈ ದ್ವಿಜಾತಿಪ್ರವರಂ ತದಾ ಶಾಪಭಯಾನ್ನೃಪ।।

ವೈಶಂಪಾಯನನು ಹೇಳಿದನು: “ನೃಪ! ಆ ದ್ವಿಜಪ್ರವರನ ಶಾಪಕ್ಕೆ ಹೆದರಿದ ಆ ಅನಿಂದಿತೆಯು ಅವನನ್ನು ಎರಡನೆಯ ಬಾರಿ ನಿರಾಕರಿಸಲು ಶಕ್ಯಳಾಗಲಿಲ್ಲ.

03289020a ತತಸ್ತಾಮನವದ್ಯಾಂಗೀಂ ಗ್ರಾಹಯಾಮಾಸ ವೈ ದ್ವಿಜಃ।
03289020c ಮಂತ್ರಗ್ರಾಮಂ ತದಾ ರಾಜನ್ನಥರ್ವಶಿರಸಿ ಶ್ರುತಂ।।

ರಾಜನ್! ಆಗ ಆ ದ್ವಿಜನು ಅನವದ್ಯಾಂಗಿಗೆ ಅಥರ್ವಶಿರದಲ್ಲಿ ಹೇಳಿದ ಮಂತ್ರಗುಚ್ಛಗಳನ್ನು ಕೊಟ್ಟನು.

03289021a ತಂ ಪ್ರದಾಯ ತು ರಾಜೇಂದ್ರ ಕುಂತಿಭೋಜಮುವಾಚ ಹ।
03289021c ಉಷಿತೋಽಸ್ಮಿ ಸುಖಂ ರಾಜನ್ಕನ್ಯಯಾ ಪರಿತೋಷಿತಃ।।
03289022a ತವ ಗೇಹೇ ಸುವಿಹಿತಃ ಸದಾ ಸುಪ್ರತಿಪೂಜಿತಃ।
03289022c ಸಾಧಯಿಷ್ಯಾಮಹೇ ತಾವದಿತ್ಯುಕ್ತ್ವಾಂತರಧೀಯತ।।

ರಾಜೇಂದ್ರ! ಅವುಗಳನ್ನಿತ್ತು ಕುಂತಿಭೋಜನಿಗೆ ಹೇಳಿದನು: “ರಾಜನ್! ಕನ್ಯೆಯಿಂದ ಪರಿತೋಷಿತನಾಗಿ ಸುಖವಾಗಿ ನಿನ್ನ ಗೃಹದಲ್ಲಿ ನೆಲೆಸಿದೆ. ನಿನ್ನ ಮಗಳು ನನ್ನೊಂದಿಗೆ ಸರಿಯಾಗಿ ನಡೆದುಕೊಂಡು ಸದಾ ಪೂಜಿಸುತ್ತಿದ್ದಳು. ಅವಳಿಂದ ನಾನು ಸಂತೊಷಗೊಂಡಿದ್ದೇನೆ!” ಎಂದು ಹೇಳಿ ಅಂತರ್ಧಾನನಾದನು.

03289023a ಸ ತು ರಾಜಾ ದ್ವಿಜಂ ದೃಷ್ಟ್ವಾ ತತ್ರೈವಾಂತರ್ಹಿತಂ ತದಾ।
03289023c ಬಭೂವ ವಿಸ್ಮಯಾವಿಷ್ಟಃ ಪೃಥಾಂ ಚ ಸಮಪೂಜಯತ್।।

ಆ ದ್ವಿಜನು ಅಲ್ಲಿಯೇ ಅಂತರ್ಧಾನನಾದುದನ್ನು ನೋಡಿ ರಾಜನು ವಿಸ್ಮಯನಾದನು ಮತ್ತು ಪೃಥೆಯನ್ನು ಗೌರವಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಪೃಥಾಯಾ ಮಂತ್ರಪ್ರಾಪ್ತೌ ಏಕೋನವತ್ಯಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಪೃಥೆಯಿಂದ ಮಂತ್ರಪ್ರಾಪ್ತಿಯಲ್ಲಿ ಇನ್ನೂರಾಎಂಭತ್ತೊಂಭತ್ತನೆಯ ಅಧ್ಯಾಯವು.