ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕುಂಡಲಾಹರಣ ಪರ್ವ
ಅಧ್ಯಾಯ 288
ಸಾರ
ಕುಂತಿಯು ಒಪ್ಪಿಕೊಳ್ಳಲು ರಾಜನು ಅವಳನ್ನು ಮುನಿಸೇವೆಗೆ ನಿಯೋಜಿಸಿದ್ದು (1-19).
03288001 ಕುಂತ್ಯುವಾಚ।
03288001a ಬ್ರಾಹ್ಮಣಂ ಯಂತ್ರಿತಾ ರಾಜನುಪಸ್ಥಾಸ್ಯಾಮಿ ಪೂಜಯಾ।
03288001c ಯಥಾಪ್ರತಿಜ್ಞಂ ರಾಜೇಂದ್ರ ನ ಚ ಮಿಥ್ಯಾ ಬ್ರವೀಮ್ಯಹಂ।।
ಕುಂತಿಯು ಹೇಳಿದಳು: “ರಾಜನ್! ರಾಜೇಂದ್ರ! ಪ್ರಯತ್ನಿಸಿ ಬ್ರಾಹ್ಮಣನನ್ನು ನಿನ್ನ ಪ್ರತಿಜ್ಞೆಯಂತೆ ಪೂಜಿಸಿ ಸೇವಿಸುತ್ತೇನೆ. ನಾನು ಸುಳ್ಳನ್ನಾಡುವುದಿಲ್ಲ.
03288002a ಏಷ ಚೈವ ಸ್ವಭಾವೋ ಮೇ ಪೂಜಯೇಯಂ ದ್ವಿಜಾನಿತಿ।
03288002c ತವ ಚೈವ ಪ್ರಿಯಂ ಕಾರ್ಯಂ ಶ್ರೇಯಶ್ಚೈತತ್ಪರಂ ಮಮ।।
ದ್ವಿಜರನ್ನು ಪೂಜಿಸುವುದೇ ನನ್ನ ಸ್ವಭಾವ. ನಿನಗೆ ಪ್ರಿಯವಾದುದನ್ನು ಮಾಡುವುದೂ ನನ್ನ ಪರಮ ಶ್ರೇಯಸ್ಸು.
03288003a ಯದ್ಯೇವೈಷ್ಯತಿ ಸಾಯಾಹ್ನೇ ಯದಿ ಪ್ರಾತರಥೋ ನಿಶಿ।
03288003c ಯದ್ಯರ್ಧರಾತ್ರೇ ಭಗವಾನ್ನ ಮೇ ಕೋಪಂ ಕರಿಷ್ಯತಿ।।
ಈ ಭಗವಾನನು ಸಾಯಂಕಾಲ ಅಥವಾ ಬೆಳಿಗ್ಗೆ ಅಥವಾ ರಾತ್ರಿ ಅಥವಾ ಮಧ್ಯರಾತ್ರಿಯಲ್ಲಿಯೇ ಬರಲಿ ಅವನು ನನ್ನ ಮೇಲೆ ಕುಪಿತನಾಗುವಂತೆ ಮಾಡುವುದಿಲ್ಲ.
03288004a ಲಾಭೋ ಮಮೈಷ ರಾಜೇಂದ್ರ ಯದ್ವೈ ಪೂಜಯತೀ ದ್ವಿಜಾನ್।
03288004c ಆದೇಶೇ ತವ ತಿಷ್ಠಂತೀ ಹಿತಂ ಕುರ್ಯಾಂ ನರೋತ್ತಮ।।
ರಾಜೇಂದ್ರ! ನಿನ್ನ ಆದೇಶದಂತೆ ದ್ವಿಜರನ್ನು ಪೂಜಿಸುವುದು ನನ್ನ ಲಾಭದಲ್ಲಿದೆ. ನರೋತ್ತಮ! ನಾನು ಹಿತವಾದುದನ್ನೇ ಮಾಡಲು ನಿಂತಿದ್ದೇನೆ.
03288005a ವಿಸ್ರಬ್ಧೋ ಭವ ರಾಜೇಂದ್ರ ನ ವ್ಯಲೀಕಂ ದ್ವಿಜೋತ್ತಮಃ।
03288005c ವಸನ್ಪ್ರಾಪ್ಸ್ಯತಿ ತೇ ಗೇಹೇ ಸತ್ಯಮೇತದ್ಬ್ರವೀಮಿ ತೇ।।
ರಾಜೇಂದ್ರ! ಚಿಂತೆಯಿಲ್ಲದವನಾಗಿರು. ನಿನ್ನ ಮನೆಯಲ್ಲಿ ವಾಸಿಸಿರುವಾಗ ಈ ದ್ವಿಜೋತ್ತಮನು ಎಂದೂ ಕಡೆಗಣಿಸಲ್ಪಡುವುದಿಲ್ಲ. ಸತ್ಯವನ್ನೇ ನಿನಗೆ ಹೇಳುತ್ತಿದ್ದೇನೆ.
03288006a ಯತ್ಪ್ರಿಯಂ ಚ ದ್ವಿಜಸ್ಯಾಸ್ಯ ಹಿತಂ ಚೈವ ತವಾನಘ।
03288006c ಯತಿಷ್ಯಾಮಿ ತಥಾ ರಾಜನ್ವ್ಯೇತು ತೇ ಮಾನಸೋ ಜ್ವರಃ।।
ಅನಘ! ದ್ವಿಜನಿಗೆ ಪ್ರಿಯವಾದುದನ್ನೂ ನಿನಗೆ ಹಿತವಾದುದನ್ನೂ ಮಾಡಲು ಪ್ರಯತ್ನಿಸುತ್ತೇನೆ. ರಾಜನ್! ನಿನ್ನ ಈ ಮಾನಸಿಕ ಜ್ವರವನ್ನು ತೊರೆ.
03288007a ಬ್ರಾಹ್ಮಣಾ ಹಿ ಮಹಾಭಾಗಾಃ ಪೂಜಿತಾಃ ಪೃಥಿವೀಪತೇ।
03288007c ತಾರಣಾಯ ಸಮರ್ಥಾಃ ಸ್ಯುರ್ವಿಪರೀತೇ ವಧಾಯ ಚ।।
ಪೃಥಿವೀಪತೇ! ಮಹಾಭಾಗ ಬ್ರಾಹ್ಮಣರು ಪೂಜಿತರಾದರೆ ದಾಟಿಸಲು ಮತ್ತು ವಿಪರೀತವಾದರೆ ವಧಿಸಲು ಸಮರ್ಥರು.
03288008a ಸಾಹಮೇತದ್ವಿಜಾನಂತೀ ತೋಷಯಿಷ್ಯೇ ದ್ವಿಜೋತ್ತಮಂ।
03288008c ನ ಮತ್ಕೃತೇ ವ್ಯಥಾಂ ರಾಜನ್ಪ್ರಾಪ್ಸ್ಯಸಿ ದ್ವಿಜಸತ್ತಮಾತ್।।
ಈ ವಿಷಯವನ್ನು ತಿಳಿದುಕೊಂಡೇ ನಾನು ದ್ವಿಜೋತ್ತಮನನ್ನು ತೃಪ್ತಿಗೊಳಿಸುತ್ತೇನೆ. ರಾಜನ್! ನನ್ನಿಂದಾಗಿ ಈ ದ್ವಿಜಸತ್ತಮನಿಂದ ನಿನಗೆ ವ್ಯಥೆಯನ್ನು ತರುವುದಿಲ್ಲ.
03288009a ಅಪರಾಧೇ ಹಿ ರಾಜೇಂದ್ರ ರಾಜ್ಞಾಮಶ್ರೇಯಸೇ ದ್ವಿಜಾಃ।
03288009c ಭವಂತಿ ಚ್ಯವನೋ ಯದ್ವತ್ಸುಕನ್ಯಾಯಾಃ ಕೃತೇ ಪುರಾ।।
ರಾಜೇಂದ್ರ! ಹಿಂದೆ ಸುಕನ್ಯೆಯಿಂದ ಚ್ಯವನನು1 ಹೇಗೋ ಹಾಗೆ ಅಪರಾಧದಿಂದ ದ್ವಿಜರು ರಾಜರಿಗೆ ಅಶ್ರೇಯಸ್ಸನ್ನು ತರುತ್ತಾರೆ.
03288010a ನಿಯಮೇನ ಪರೇಣಾಹಮುಪಸ್ಥಾಸ್ಯೇ ದ್ವಿಜೋತ್ತಮಂ।
03288010c ಯಥಾ ತ್ವಯಾ ನರೇಂದ್ರೇದಂ ಭಾಷಿತಂ ಬ್ರಾಹ್ಮಣಂ ಪ್ರತಿ।।
ನರೇಂದ್ರ! ನೀನು ಬ್ರಾಹ್ಮಣನಿಗೆ ಮಾತುಕೊಟ್ಟಂತೆ ನಾನು ಪರಮ ನಿಯಮದಿಂದ ಈ ದ್ವಿಜೋತ್ತಮನ ಸೇವೆಯನ್ನು ಮಾಡುತ್ತೇನೆ.”
03288011 ರಾಜೋವಾಚ।
03288011a ಏವಮೇತತ್ತ್ವಯಾ ಭದ್ರೇ ಕರ್ತವ್ಯಮವಿಶಂಕಯಾ।
03288011c ಮದ್ಧಿತಾರ್ಥಂ ಕುಲಾರ್ಥಂ ಚ ತಥಾತ್ಮಾರ್ಥಂ ಚ ನಂದಿನಿ।।
ರಾಜನು ಹೇಳಿದನು: “ಭದ್ರೇ! ನಂದಿನೀ! ಹೌದು. ನೀನು ಶಂಕೆಯಿಲ್ಲದೇ ನನಗಾಗಿ, ನನ್ನ ಕುಲಕ್ಕಾಗಿ ಮತ್ತು ನಿನಗಾಗಿಯೂ ಈ ಕರ್ತವ್ಯವನ್ನು ಮಾಡಬೇಕು.””
03288012 ವೈಶಂಪಾಯನ ಉವಾಚ।
03288012a ಏವಮುಕ್ತ್ವಾ ತು ತಾಂ ಕನ್ಯಾಂ ಕುಂತಿಭೋಜೋ ಮಹಾಯಶಾಃ।
03288012c ಪೃಥಾಂ ಪರಿದದೌ ತಸ್ಮೈ ದ್ವಿಜಾಯ ಸುತವತ್ಸಲಃ।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ, ಸುತವತ್ಸಲ ಮಹಾಯಶ ಕುಂತಿಭೋಜನು ತನ್ನ ಕನ್ಯೆ ಪೃಥೆಯನ್ನು ಆ ದ್ವಿಜನಿಗೆ ದಾಸಿಯಾಗಿ ಕೊಟ್ಟನು.
03288013a ಇಯಂ ಬ್ರಹ್ಮನ್ಮಮ ಸುತಾ ಬಾಲಾ ಸುಖವಿವರ್ಧಿತಾ।
03288013c ಅಪರಾಧ್ಯೇತ ಯತ್ಕಿಂ ಚಿನ್ನ ತತ್ಕಾರ್ಯಂ ಹೃದಿ ತ್ವಯಾ।।
“ಬ್ರಹ್ಮನ್! ಇವಳು ನನ್ನ ಮಗಳು ಬಾಲಕಿಯು ಸುಖದಿಂದ ಬೆಳೆಯುತ್ತಿದ್ದಾಳೆ. ಅವಳಿಂದ ಏನಾದರೂ ಅಪರಾಧವಾದರೆ ನಿನ್ನ ಹೃದಯಕ್ಕೆ ತೆಗೆದುಕೊಳ್ಳಬೇಡ.
03288014a ದ್ವಿಜಾತಯೋ ಮಹಾಭಾಗಾ ವೃದ್ಧಬಾಲತಪಸ್ವಿಷು।
03288014c ಭವಂತ್ಯಕ್ರೋಧನಾಃ ಪ್ರಾಯೋ ವಿರುದ್ಧೇಷ್ವಪಿ ನಿತ್ಯದಾ।।
ಮಹಾಭಾಗ ದ್ವಿಜರು ನಿತ್ಯವೂ ವೃದ್ಧ, ಬಾಲ ಮತ್ತು ತಪಸ್ವಿಗಳು ವಿರುದ್ಧವಾಗಿ ನಡೆದುಕೊಂಡರೂ ಅವರ ಮೇಲೆ ಕೋಪಗೊಳ್ಳುವುದಿಲ್ಲ.
03288015a ಸುಮಹತ್ಯಪರಾಧೇಽಪಿ ಕ್ಷಾಂತಿಃ ಕಾರ್ಯಾ ದ್ವಿಜಾತಿಭಿಃ।
03288015c ಯಥಾಶಕ್ತಿ ಯಥೋತ್ಸಾಹಂ ಪೂಜಾ ಗ್ರಾಹ್ಯಾ ದ್ವಿಜೋತ್ತಮ।।
ದ್ವಿಜೋತ್ತಮ! ಅಪರಾಧವು ಅತೀ ದೊಡ್ಡದಾದರೂ ದ್ವಿಜರು ಕ್ಷಮಿಸುತ್ತಾರೆ. ಯಥಾಶಕ್ತಿಯ ಈ ಪೂಜೆಯನ್ನು ಯಥೋತ್ಸಾಹದಿಂದ ಸ್ವೀಕರಿಸು.”
03288016a ತಥೇತಿ ಬ್ರಾಹ್ಮಣೇನೋಕ್ತೇ ಸ ರಾಜಾ ಪ್ರೀತಮಾನಸಃ।
03288016c ಹಂಸಚಂದ್ರಾಂಶುಸಂಕಾಶಂ ಗೃಹಮಸ್ಯ ನ್ಯವೇದಯತ್।।
“ಹಾಗೆಯೇ ಆಗಲಿ!” ಎಂದು ಅವನು ಹೇಳಲು ರಾಜನು ಪ್ರೀತನಾಗಿ ಹಂಸ ಮತ್ತು ಚಂದ್ರನ ಕಿರಣಗಳಿಗೆ ಸಮಾನ ಬಣ್ಣದ ಗೃಹವನ್ನು ನಿವೇದಿಸಿದನು.
03288017a ತತ್ರಾಗ್ನಿಶರಣೇ ಕೃಛ್ರಮಾಸನಂ ತಸ್ಯ ಭಾನುಮತ್।
03288017c ಆಹಾರಾದಿ ಚ ಸರ್ವಂ ತತ್ತಥೈವ ಪ್ರತ್ಯವೇದಯತ್।।
ಅಲ್ಲಿ ಅಗ್ನಿಯ ಪಕ್ಕದಲ್ಲಿ ಅವನಿಗೆ ಸುಂದರ ಪೀಠವನ್ನು ಒದಗಿಸಿದನು. ಅಹಾರಾದಿ ಸರ್ವವನ್ನೂ ಹಾಗೆಯೇ ಒದಗಿಸಿದನು.
03288018a ನಿಕ್ಷಿಪ್ಯ ರಾಜಪುತ್ರೀ ತು ತಂದ್ರೀಂ ಮಾನಂ ತಥೈವ ಚ।
03288018c ಆತಸ್ಥೇ ಪರಮಂ ಯತ್ನಂ ಬ್ರಾಹ್ಮಣಸ್ಯಾಭಿರಾಧನೇ।।
ರಾಜಪುತ್ರಿಯು ಆಲಸ್ಯ ಮತ್ತು ಜಂಬವನ್ನು ಬದಿಗಿಟ್ಟು ಬ್ರಾಹ್ಮಣನ ಆರಾಧನೆಯಲ್ಲಿ ಪರಮ ಪ್ರಯತ್ನದಿಂದ ತನ್ನನ್ನು ತೊಡಗಿಸಿಕೊಂಡಳು.
03288019a ತತ್ರ ಸಾ ಬ್ರಾಹ್ಮಣಂ ಗತ್ವಾ ಪೃಥಾ ಶೌಚಪರಾ ಸತೀ।
03288019c ವಿಧಿವತ್ಪರಿಚಾರಾರ್ಹಂ ದೇವವತ್ಪರ್ಯತೋಷಯತ್।।
ಅಲ್ಲಿ ಆ ಸತೀ ಪೃಥಾಳು ಶುಚಿಯಾಗಿದ್ದುಕೊಂಡು ವಿಧಿವತ್ತಾಗಿ ದೇವನನ್ನು ಸಂತೋಷಗೊಳಿಸುವಂತೆ ಅವನ ಪರಿಚಾರಿಕೆಯಾಗಿದ್ದಳು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಪೃಥಾದ್ವಿಜಪರಿಚರ್ಯಾಯಾಂ ಅಷ್ಟಶೀತ್ಯಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಪೃಥಾದ್ವಿಜಪರಿಚರ್ಯೆಯಲ್ಲಿ ಇನ್ನೂರಾಎಂಭತ್ತೆಂಟನೆಯ ಅಧ್ಯಾಯವು.
-
ಚ್ಯವನನ ವಿಷಯದಲ್ಲಿ ಸುಕನ್ಯೆಯು ಎಸಗಿದ ಅಪರಾಧದ ಕುರಿತು ಆರಣ್ಯಕ ಪರ್ವದ ಅಧ್ಯಾಯ 122ರಲ್ಲಿ ಬಂದಿದೆ. ↩︎