287 ಪೃಥೋಪದೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕುಂಡಲಾಹರಣ ಪರ್ವ

ಅಧ್ಯಾಯ 287

ಸಾರ

ಸೂರ್ಯನು ಕರ್ಣನಿಗೆ ಹೇಳದೇ ಇದ್ದ ಗುಟ್ಟು ಯಾವುದು ಎಂದು ಕೇಳಲು ವೈಶಂಪಾಯನನು ಪುನಃ ಕರ್ಣನ ಜನನದ ಕುರಿತು ಹೇಳಿದುದು (1-3). ಕುಂತೀಭೋಜನಲ್ಲಿಗೆ ಓರ್ವ ಋಷಿಯು ಬಂದುದು (4-8); ತನ್ನ ಸಾಕುಮಗಳು ಕುಂತಿಗೆ ಅವನ ಸೇವೆಯನ್ನು ಮಾಡಬೇಕೆಂದು ಕೇಳಿಕೊಂಡುದು (9-29).

03287001 ಜನಮೇಜಯ ಉವಾಚ।
03287001a ಕಿಂ ತದ್ಗುಹ್ಯಂ ನ ಚಾಖ್ಯಾತಂ ಕರ್ಣಾಯೇಹೋಷ್ಣರಶ್ಮಿನಾ।
03287001c ಕೀದೃಶೇ ಕುಂಡಲೇ ತೇ ಚ ಕವಚಂ ಚೈವ ಕೀದೃಶಂ।।

ಜನಮೇಜಯನು ಹೇಳಿದನು: “ಆ ಉಷ್ಣರಶ್ಮಿಯು ಕರ್ಣನಿಗೆ ಹೇಳದೇ ಇದ್ದ ಗುಟ್ಟು ಯಾವುದಾಗಿತ್ತು? ಅವನ ಕುಂಡಲಗಳು ಹೇಗಿದ್ದವು? ಮತ್ತು ಕವಚವು ಹೇಗಿತ್ತು?

03287002a ಕುತಶ್ಚ ಕವಚಂ ತಸ್ಯ ಕುಂಡಲೇ ಚೈವ ಸತ್ತಮ।
03287002c ಏತದಿಚ್ಚಾಮ್ಯಹಂ ಶ್ರೋತುಂ ತನ್ಮೇ ಬ್ರೂಹಿ ತಪೋಧನ।।

ಸತ್ತಮ! ಅವನಿಗೆ ಎಲ್ಲಿಂದ ಕುಂಡಲ-ಕವಚಗಳು ಬಂದವು? ತಪೋಧನ! ಇದನ್ನು ಕೇಳಲು ಬಯಸುತ್ತೇನೆ. ನನಗೆ ಹೇಳು.”

03287003 ವೈಶಂಪಾಯನ ಉವಾಚ।
03287003a ಅಯಂ ರಾಜನ್ಬ್ರವೀಮ್ಯೇತದ್ಯತ್ತದ್ಗುಹ್ಯಂ ವಿಭಾವಸೋಃ।
03287003c ಯಾದೃಶೇ ಕುಂಡಲೇ ಚೈವ ಕವಚಂ ಚೈವ ಯಾದೃಶಂ।।

ವೈಶಂಪಾಯನನು ಹೇಳಿದನು: “ರಾಜನ್! ವಿಭಾವಸುವಿನ ಗುಟ್ಟನ್ನು ಮತ್ತು ಕವಚ-ಕುಂಡಲಗಳು ಹೇಗಿದ್ದವು ಎನ್ನುವುದನ್ನು ನಾನು ನಿನಗೆ ಹೇಳುತ್ತೇನೆ.

03287004a ಕುಂತಿಭೋಜಂ ಪುರಾ ರಾಜನ್ಬ್ರಾಹ್ಮಣಃ ಸಮುಪಸ್ಥಿತಃ।
03287004c ತಿಗ್ಮತೇಜಾ ಮಹಾಪ್ರಾಂಶುಃ ಶ್ಮಶ್ರುದಂಡಜಟಾಧರಃ।।
03287005a ದರ್ಶನೀಯೋಽನವದ್ಯಾಂಗಸ್ತೇಜಸಾ ಪ್ರಜ್ವಲನ್ನಿವ।
03287005c ಮಧುಪಿಂಗೋ ಮಧುರವಾಕ್ತಪಃಸ್ವಾಧ್ಯಾಯಭೂಷಣಃ।।

ರಾಜನ್! ಹಿಂದೆ ಕುಂತೀಭೋಜನಲ್ಲಿಗೆ ಓರ್ವ ತಿಗ್ಮತೇಜಸ್ವಿ, ಮಹಾಪ್ರಾಂಶು, ಗಡ್ಡ, ದಂಡ ಮತ್ತು ಜಟೆಗಳನ್ನು ಧರಿಸಿದ, ಸುಂದರ. ಅನವದ್ಯಾಂಗ, ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವಂತಿರುವ, ಜೇನಿನ ಬಣ್ಣದ ಮೈಯ, ಮಧುರವಾಗ್ಮಿ, ತಪಸ್ವಿ, ಅಧ್ಯಾಯಭೂಷಣ ಬ್ರಾಹ್ಮಣನು1 ಬಂದನು.

03287006a ಸ ರಾಜಾನಂ ಕುಂತಿಭೋಜಮಬ್ರವೀತ್ಸುಮಹಾತಪಾಃ।
03287006c ಭಿಕ್ಷಾಮಿಚ್ಚಾಮ್ಯಹಂ ಭೋಕ್ತುಂ ತವ ಗೇಹೇ ವಿಮತ್ಸರ।।

ಆ ತಪಸ್ವಿಯು ರಾಜ ಕುಂತೀಭೋಜನಿಗೆ ಹೇಳಿದನು: “ನಿನ್ನ ಮನೆಯಲ್ಲಿ ಭಿಕ್ಷೆಯನ್ನು ಉಣ್ಣಲು ಬಯಸಿದ್ದೇನೆ. ಮತ್ಸರಿಸಬೇಡ.

03287007a ನ ಮೇ ವ್ಯಲೀಕಂ ಕರ್ತವ್ಯಂ ತ್ವಯಾ ವಾ ತವ ಚಾನುಗೈಃ।
03287007c ಏವಂ ವತ್ಸ್ಯಾಮಿ ತೇ ಗೇಹೇ ಯದಿ ತೇ ರೋಚತೇಽನಘ।।

ನೀನಾಗಲೀ ನಿನ್ನ ಅನುಗರಾಗಲೀ ನನ್ನೊಡನೆ ಸುಳ್ಳಾಗಿ ನಡೆದುಕೊಳ್ಳಬಾರದು. ಅನಘ! ಈ ರೀತಿಯಲ್ಲಿ ನಾನು ನಿನ್ನ ಮನೆಯಲ್ಲಿ ನಿನಗಿಷ್ಟವಾದರೆ ಇರುತ್ತೇನೆ.

03287008a ಯಥಾಕಾಮಂ ಚ ಗಚ್ಚೇಯಮಾಗಚ್ಚೇಯಂ ತಥೈವ ಚ।
03287008c ಶಯ್ಯಾಸನೇ ಚ ಮೇ ರಾಜನ್ನಾಪರಾಧ್ಯೇತ ಕಶ್ಚನ।।

ನನಗಿಷ್ಟವಾದ ಹಾಗೆ ಹೋಗುತ್ತೇನೆ ಮತ್ತು ಬರುತ್ತೇನೆ. ರಾಜನ್! ಶಯ್ಯೆಯಲ್ಲಾಗಲೀ ಆಸನದಲ್ಲಾಗಲೀ ಯಾವುದೇ ರೀತಿಯ ಅಪರಾಧವೂ ಆಗಕೂಡದು.”

03287009a ತಮಬ್ರವೀತ್ಕುಂತಿಭೋಜಃ ಪ್ರೀತಿಯುಕ್ತಮಿದಂ ವಚಃ।
03287009c ಏವಮಸ್ತು ಪರಂ ಚೇತಿ ಪುನಶ್ಚೈನಮಥಾಬ್ರವೀತ್।।

ಕುಂತೀಭೋಜನು ಅವನಿಗೆ ಪ್ರೀತಿಯುಕ್ತವಾದ ಮಾತುಗಳಿಂದ “ಹಾಗೆಯೇ ಆಗಲಿ!” ಎಂದು ಪುನಃ ಹೇಳಿದನು:

03287010a ಮಮ ಕನ್ಯಾ ಮಹಾಬ್ರಹ್ಮನ್ಪೃಥಾ ನಾಮ ಯಶಸ್ವಿನೀ।
03287010c ಶೀಲವೃತ್ತಾನ್ವಿತಾ ಸಾಧ್ವೀ ನಿಯತಾ ನ ಚ ಮಾನಿನೀ।।

“ಮಹಾಬ್ರಹ್ಮನ್! ನನ್ನ ಕನ್ಯೆ ಪೃಥಾ ಎಂಬ ಹೆಸರಿನವಳು ಯಶಸ್ವಿನಿಯೂ, ಶೀಲವೃತ್ತಾನ್ವಿತಳೂ ಸಾಧ್ವಿಯೂ, ನಿಯತಳೂ, ಮಾನಿನಿಯೂ ಆಗಿದ್ದಾಳೆ.

03287011a ಉಪಸ್ಥಾಸ್ಯತಿ ಸಾ ತ್ವಾಂ ವೈ ಪೂಜಯಾನವಮನ್ಯ ಚ।
03287011c ತಸ್ಯಾಶ್ಚ ಶೀಲವೃತ್ತೇನ ತುಷ್ಟಿಂ ಸಮುಪಯಾಸ್ಯಸಿ।।

ಅವಳು ನಿನ್ನ ಬಳಿಯಿದ್ದು ಕಡೆಗಣಿಸದೇ ಪೂಜಿಸುತ್ತಾಳೆ. ಅವಳ ಶೀಲ ನಡತೆಗಳಿಂದ ನೀನು ತೃಪ್ತಿಯನ್ನು ಪಡೆಯುತ್ತೀಯೆ.”

03287012a ಏವಮುಕ್ತ್ವಾ ತು ತಂ ವಿಪ್ರಮಭಿಪೂಜ್ಯ ಯಥಾವಿಧಿ।
03287012c ಉವಾಚ ಕನ್ಯಾಮಭ್ಯೇತ್ಯ ಪೃಥಾಂ ಪೃಥುಲಲೋಚನಾಂ।।

ಹೀಗೆ ಹೇಳಿ ಆ ವಿಪ್ರನನ್ನು ಯಥಾವಿಧಿಯಾಗಿ ಪೂಜಿಸಿ ಪೃಥುಲಲೋಚನೆ ಕನ್ಯೆ ಪೃಥೆಯನ್ನು ಕರೆಯಿಸಿ ಹೇಳಿದನು:

03287013a ಅಯಂ ವತ್ಸೇ ಮಹಾಭಾಗೋ ಬ್ರಾಹ್ಮಣೋ ವಸ್ತುಮಿಚ್ಚತಿ।
03287013c ಮಮ ಗೇಹೇ ಮಯಾ ಚಾಸ್ಯ ತಥೇತ್ಯೇವಂ ಪ್ರತಿಶ್ರುತಂ।।
03287014a ತ್ವಯಿ ವತ್ಸೇ ಪರಾಶ್ವಸ್ಯ ಬ್ರಾಹ್ಮಣಸ್ಯಾಭಿರಾಧನಂ।
03287014c ತನ್ಮೇ ವಾಕ್ಯಂ ನ ಮಿಥ್ಯಾ ತ್ವಂ ಕರ್ತುಮರ್ಹಸಿ ಕರ್ಹಿ ಚಿತ್।।

“ವತ್ಸೇ! ಮಹಾಭಾಗೇ! ಈ ಬ್ರಾಹ್ಮಣನು ನನ್ನ ಮನೆಯಲ್ಲಿ ವಾಸಿಸಬಯಸುತ್ತಾನೆ ಮತ್ತು ನಾನು ನಿನಗೆ ಬ್ರಾಹ್ಮಣನನ್ನು ಆರಾಧಿಸುವುದು ಚೆನ್ನಾಗಿ ತಿಳಿದಿದೆ ಎಂದು ಹಾಗೆಯೇ ಆಗಲೆಂದು ಭರವಸೆಯನ್ನಿತ್ತಿದ್ದೇನೆ. ವತ್ಸೇ! ನನ್ನ ಈ ಮಾತನ್ನು ನೀನು ಎಂದೂ ಸುಳ್ಳಾಗಿಸಬಾರದು.

03287015a ಅಯಂ ತಪಸ್ವೀ ಭಗವಾನ್ಸ್ವಾಧ್ಯಾಯನಿಯತೋ ದ್ವಿಜಃ।
03287015c ಯದ್ಯದ್ಬ್ರೂಯಾನ್ಮಹಾತೇಜಾಸ್ತತ್ತದ್ದೇಯಮಮತ್ಸರಾತ್।।

ಈ ಭಗವಾನ್ ತಪಸ್ವಿ ದ್ವಿಜನು ಸ್ವಾಧ್ಯಾಯಿಯೂ ನಿಯತನೂ ಆಗಿರುವನು. ಈ ಮಹಾತೇಜಸ್ವಿಯು ಏನೆಲ್ಲ ಕೇಳುತ್ತಾನೋ ಅದನ್ನು ಮಾತ್ಸರ್ಯವಿಲ್ಲದೇ ಕೊಡಬೇಕು.

03287016a ಬ್ರಾಹ್ಮಣಾ ಹಿ ಪರಂ ತೇಜೋ ಬ್ರಾಹ್ಮಣಾ ಹಿ ಪರಂ ತಪಃ।
03287016c ಬ್ರಾಹ್ಮಣಾನಾಂ ನಮಸ್ಕಾರೈಃ ಸೂರ್ಯೋ ದಿವಿ ವಿರಾಜತೇ।।

ಬ್ರಾಹ್ಮಣರೇ ಪರಮ ತೇಜಸ್ವಿಗಳು ಮತ್ತು ಬ್ರಾಹ್ಮಣರೇ ಪರಮ ತಪಸ್ವಿಗಳು. ಬ್ರಾಹ್ಮಣರ ನಮಸ್ಕಾರಗಳಿಂದಲೇ ಸೂರ್ಯನು ಆಕಾಶದಲ್ಲಿ ವಿರಾಜಿಸುತ್ತಾನೆ.

03287017a ಅಮಾನಯನ್ ಹಿ ಮಾನಾರ್ಹಾನ್ವಾತಾಪಿಶ್ಚ ಮಹಾಸುರಃ।
03287017c ನಿಹತೋ ಬ್ರಹ್ಮದಂಡೇನ ತಾಲಜಂಘಸ್ತಥೈವ ಚ।।

ಈ ಮಾನಾರ್ಹರನ್ನು ಮನ್ನಿಸದೇ ಮಹಾಸುರ ವಾತಾಪಿ2ಯೂ ತಾಲಜಂಘನೂ ಬ್ರಹ್ಮದಂಡದಿಂದ ಹತರಾದರು.

03287018a ಸೋಽಯಂ ವತ್ಸೇ ಮಹಾಭಾರ ಆಹಿತಸ್ತ್ವಯಿ ಸಾಂಪ್ರತಂ।
03287018c ತ್ವಂ ಸದಾ ನಿಯತಾ ಕುರ್ಯಾ ಬ್ರಾಹ್ಮಣಸ್ಯಾಭಿರಾಧನಂ।।

ವತ್ಸೇ! ಈ ಮಹಾಭಾರವು ನಿನ್ನ ಮೇಲಿದೆ. ನೀನು ಸದಾ ನಿಯತಳಾಗಿ ಈ ಬ್ರಾಹ್ಮಣನನ್ನು ಆರಾಧಿಸುವ ಕಾರ್ಯವನ್ನು ಮಾಡಬೇಕು.

03287019a ಜಾನಾಮಿ ಪ್ರಣಿಧಾನಂ ತೇ ಬಾಲ್ಯಾತ್ಪ್ರಭೃತಿ ನಂದಿನಿ।
03287019c ಬ್ರಾಹ್ಮಣೇಷ್ವಿಹ ಸರ್ವೇಷು ಗುರುಬಂಧುಷು ಚೈವ ಹ।।
03287020a ತಥಾ ಪ್ರೇಷ್ಯೇಷು ಸರ್ವೇಷು ಮಿತ್ರಸಂಬಂಧಿಮಾತೃಷು।
03287020c ಮಯಿ ಚೈವ ಯಥಾವತ್ತ್ವಂ ಸರ್ವಮಾದೃತ್ಯ ವರ್ತಸೇ।।

ನಂದಿನೀ! ಬಾಲ್ಯದಿಂದ ನೀನು ಎಲ್ಲ ಪ್ರಾಣಿಗಳ, ಬ್ರಾಹ್ಮಣರ, ಮತ್ತು ಗುರುಬಂಧುಗಳ, ಹಾಗೆಯೇ ಸೇವಕರ, ಸರ್ವ ಮಿತ್ರಸಂಬಂಧಿಗಳಲ್ಲಿ, ತಾಯಂದಿರಲ್ಲಿ ಮತ್ತು ನನ್ನಲ್ಲಿ ಹೇಗೆ ಎಲ್ಲರನ್ನೂ ಆದರಿಸಿ ನಡೆದುಕೊಳ್ಳುತ್ತಿದ್ದೀಯೆ ಎಂದು ನನಗೆ ತಿಳಿದಿದೆ.

03287021a ನ ಹ್ಯತುಷ್ಟೋ ಜನೋಽಸ್ತೀಹ ಪುರೇ ಚಾಂತಃಪುರೇ ಚ ತೇ।
03287021c ಸಮ್ಯಗ್ವೃತ್ತ್ಯಾನವದ್ಯಾಂಗಿ ತವ ಭೃತ್ಯಜನೇಷ್ವಪಿ।।

ಈ ಪುರದಲ್ಲಿ ಮತ್ತು ಅಂತಃಪುರದಲ್ಲಿ ನಿನ್ನಿಂದ ಸಂತುಷ್ಟರಾಗದೇ ಇರುವ ಯಾರೂ ಇಲ್ಲ. ಅನವದ್ಯಾಂಗೀ! ನೀನು ನಿನ್ನ ಸೇವಕ ಜನರಲ್ಲಿಯೂ ಕೂಡ ಚೆನ್ನಾಗಿ ವರ್ತಿಸುತ್ತಿದ್ದೀಯೆ.

03287022a ಸಂದೇಷ್ಟವ್ಯಾಂ ತು ಮನ್ಯೇ ತ್ವಾಂ ದ್ವಿಜಾತಿಂ ಕೋಪನಂ ಪ್ರತಿ।
03287022c ಪೃಥೇ ಬಾಲೇತಿ ಕೃತ್ವಾ ವೈ ಸುತಾ ಚಾಸಿ ಮಮೇತಿ ಚ।।

ಆದುದರಿಂದ ಈ ಕುಪಿತ ದ್ವಿಜನನ್ನು ನಿನ್ನ ಕಾಳಜಿಯಲ್ಲಿ ಇಡಬೇಕೆಂದು ನನಗನ್ನಿಸುತ್ತದೆ. ಪೃಥಾ! ಬಾಲಕಿಯಾಗಿದ್ದಾಗಲೇ ನಿನ್ನನ್ನು ನನ್ನ ಮಗಳನ್ನಾಗಿ ಮಾಡಿಕೊಂಡಿದ್ದೆ.

03287023a ವೃಷ್ಣೀನಾಂ ತ್ವಂ ಕುಲೇ ಜಾತಾ ಶೂರಸ್ಯ ದಯಿತಾ ಸುತಾ।
03287023c ದತ್ತಾ ಪ್ರೀತಿಮತಾ ಮಹ್ಯಂ ಪಿತ್ರಾ ಬಾಲಾ ಪುರಾ ಸ್ವಯಂ।।

ನೀನು ವೃಷ್ಣಿಗಳ ಕುಲದಲ್ಲಿ ಶೂರನ ಪ್ರೀತಿಯ ಮಗಳಾಗಿ ಜನಿಸಿದ್ದೆ. ಹಿಂದೆ ನಿನ್ನ ತಂದೆಯು ನಿನ್ನನ್ನು ನನಗೆ ಪ್ರೀತಿಯಿಂದ ಮಗಳಾಗಿ ಕೊಟ್ಟಿದ್ದನು.

03287024a ವಸುದೇವಸ್ಯ ಭಗಿನೀ ಸುತಾನಾಂ ಪ್ರವರಾ ಮಮ।
03287024c ಅಗ್ರ್ಯಮಗ್ರೇ ಪ್ರತಿಜ್ಞಾಯ ತೇನಾಸಿ ದುಹಿತಾ ಮಮ।।

ವಸುದೇವನ ತಂಗಿಯಾದ ನೀನು ನನ್ನ ಮಕ್ಕಳಲ್ಲಿ ಹಿರಿಯವಳು. ಈಗ ನೀನು ನನ್ನ ಮಗಳು. ಏಕೆಂದರೆ ಅವನು ತನ್ನ ಹಿರಿಯ ಮಗಳನ್ನು ನನಗೆ ಕೊಡುತ್ತೇನೆಂದು ಪ್ರತಿಜ್ಞೆಮಾಡಿದ್ದನು.

03287025a ತಾದೃಶೇ ಹಿ ಕುಲೇ ಜಾತಾ ಕುಲೇ ಚೈವ ವಿವರ್ಧಿತಾ।
03287025c ಸುಖಾತ್ಸುಖಮನುಪ್ರಾಪ್ತಾ ಹ್ರದಾದ್ಧ್ರದಮಿವಾಗತಾ।।

ಅಂಥಹ ಕುಲದಲ್ಲಿ ಹುಟ್ಟಿದ ನೀನು ಸುಖದಿಂದ ಸುಖವನ್ನು ಹೊಂದುತ್ತಾ ಒಂದು ಸರೋವರದಿಂದ ಮತ್ತೊಂದು ಸರೋವರಕ್ಕೆ ಹೋದ ಕಮಲದಂತೆ ಬೆಳೆಯುತ್ತಿದ್ದೀಯೆ.

03287026a ದೌಷ್ಕುಲೇಯಾ ವಿಶೇಷೇಣ ಕಥಂ ಚಿತ್ಪ್ರಗ್ರಹಂ ಗತಾಃ।
03287026c ಬಾಲಭಾವಾದ್ವಿಕುರ್ವಂತಿ ಪ್ರಾಯಶಃ ಪ್ರಮದಾಃ ಶುಭೇ।।

ಶುಭೇ! ಕೆಟ್ಟ ಕುಲದಲ್ಲಿ ಹುಟ್ಟಿದವರು ಬಾಲ್ಯದಲ್ಲಿ ವಿಶೇಷವಾಗಿ ನಿಯಂತ್ರಣದಲ್ಲಿದ್ದರೂ ಬೆಳೆಯುತ್ತಿದ್ದಂತೆ ಹೇಗೋ ಕೆಟ್ಟುಹೋಗುತ್ತಾರೆ.

03287027a ಪೃಥೇ ರಾಜಕುಲೇ ಜನ್ಮ ರೂಪಂ ಚಾದ್ಭುತದರ್ಶನಂ।
03287027c ತೇನ ತೇನಾಸಿ ಸಂಪನ್ನಾ ಸಮುಪೇತಾ ಚ ಭಾಮಿನೀ।।

ಪೃಥಾ! ಭಾಮಿನೀ! ಆದರೆ ರಾಜಕುಲದಲ್ಲಿ ಜನ್ಮ ಮತ್ತು ನೋಡಲು ಅದ್ಭುತ ರೂಪವು ಇವೆರಡೂ ನಿನ್ನದೇ ಆಗಿದ್ದು ಇವುಗಳಿಂದ ಸಂಪನ್ನಳಾಗಿದ್ದೀಯೆ.

03287028a ಸಾ ತ್ವಂ ದರ್ಪಂ ಪರಿತ್ಯಜ್ಯ ದಂಭಂ ಮಾನಂ ಚ ಭಾಮಿನಿ।
03287028c ಆರಾಧ್ಯ ವರದಂ ವಿಪ್ರಂ ಶ್ರೇಯಸಾ ಯೋಕ್ಷ್ಯಸೇ ಪೃಥೇ।।

ಪೃಥಾ! ಭಾಮಿನೀ! ಆದುದರಿಂದ ನೀನು ದರ್ಪ, ದಂಭ ಮತ್ತು ಮಾನವನ್ನು ಪರಿತ್ಯಜಿಸಿ ಈ ವರದ ವಿಪ್ರನನ್ನು ಆರಾಧಿಸು. ಶ್ರೇಯಸ್ಸನ್ನು ಹೊಂದುತ್ತೀಯೆ.

03287029a ಏವಂ ಪ್ರಾಪ್ಸ್ಯಸಿ ಕಲ್ಯಾಣಿ ಕಲ್ಯಾಣಮನಘೇ ಧ್ರುವಂ।
03287029c ಕೋಪಿತೇ ತು ದ್ವಿಜಶ್ರೇಷ್ಠೇ ಕೃತ್ಸ್ನಂ ದಹ್ಯೇತ ಮೇ ಕುಲಂ।।

ಕಲ್ಯಾಣೀ! ಅನಘೇ! ಈ ರೀತಿ ನೀನು ಕಲ್ಯಾಣವನ್ನು ಪಡೆಯುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಮಗಳೇ! ನೀನು ಈ ದ್ವಿಜಶ್ರೇಷ್ಠನನ್ನು ಕುಪಿತನನ್ನಾಗಿ ಮಾಡಿದರೆ ನನ್ನ ಕುಲವನ್ನು ಸುಟ್ಟುಹಾಕುತ್ತೀಯೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಪೃಥೋಪದೇಶೇ ಸಪ್ತಶೀತ್ಯಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯ ಕಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಪೃಥೋಪದೇಶದಲ್ಲಿ ಇನ್ನೂರಾಎಂಭತ್ತೇಳನೆಯ ಅಧ್ಯಾಯವು.


  1. ಈ ಬ್ರಾಹ್ಮಣನು ದುರ್ವಾಸನೆಂದು ಆದಿ ಪರ್ವದ ಅಧ್ಯಾಯ 104ರಲ್ಲಿದೆ. ↩︎

  2. ವಾತಾಪಿಯು ಅಗಸ್ತ್ಯನಿಂದ ಹತನಾದ ಕಥೆಯು ಆರಣ್ಯಕ ಪರ್ವದ ಅಧ್ಯಾಯ 97ರಲ್ಲಿ ಬಂದಿದೆ. ↩︎