ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕುಂಡಲಾಹರಣ ಪರ್ವ
ಅಧ್ಯಾಯ 286
ಸಾರ
ಸೂರ್ಯನು ತನ್ನ ಆರಾದ್ಯ ದೇವನೆಂದೂ, ಈ ವಿಷಯದಲ್ಲಿ ತನ್ನನ್ನು ತಡೆಯಬಾರದೆಂದೂ ಕರ್ಣನು ಹೇಳಿಕೊಳ್ಳುವುದು (1-9). ಕುಂಡಲಗಳಿಗೆ ಬದಲಾಗಿ ಅಮೋಘ ಶಕ್ತಿಯನ್ನಾದರೂ ಇಂದ್ರನಿಂದ ಪಡೆ ಎಂದು ಸೂರ್ಯನು ಕರ್ಣನಿಗೆ ಸಲಹೆ ಮಾಡಿ ಅಂತರ್ಧಾನನಾದುದು; ಕರ್ಣನು ಇಂದ್ರನ ನಿರೀಕ್ಷೆಯಲ್ಲಿದ್ದುದು (10-20).
03286001 ಕರ್ಣ ಉವಾಚ।
03286001a ಭಗವಂತಮಹಂ ಭಕ್ತೋ ಯಥಾ ಮಾಂ ವೇತ್ಥ ಗೋಪತೇ।
03286001c ತಥಾ ಪರಮತಿಗ್ಮಾಂಶೋ ನಾನ್ಯಂ ದೇವಂ ಕಥಂ ಚನ।।
ಕರ್ಣನು ಹೇಳಿದನು: “ಭಗವಾನ್ ಗೋಪತೇ! ಪರಮತಿಗ್ಮಾಂಶೋ! ನಿನ್ನ ಮೇಲಿದ್ದಷ್ಟು ಭಕ್ತಿಯು ನನಗೆ ಬೇರೆ ಯಾವ ದೇವನ ಮೇಲೂ ಇಲ್ಲ ಎನ್ನುವುದು ನಿನಗೆ ಚೆನ್ನಾಗಿ ತಿಳಿದಿದೆ.
03286002a ನ ಮೇ ದಾರಾ ನ ಮೇ ಪುತ್ರಾ ನ ಚಾತ್ಮಾ ಸುಹೃದೋ ನ ಚ।
03286002c ತಥೇಷ್ಟಾ ವೈ ಸದಾ ಭಕ್ತ್ಯಾ ಯಥಾ ತ್ವಂ ಗೋಪತೇ ಮಮ।।
ಗೋಪತೇ! ಸದಾ ನಿನ್ನ ಮೇಲೆ ಇರುವಷ್ಟು ಭಕ್ತಿಯು ನನಗೆ ಬೇರೆ ಯಾರಲ್ಲಿಯೂ ಇಲ್ಲ – ನನ್ನ ಪತ್ನಿಯ ಮೇಲಿಲ್ಲ, ನನ್ನ ಪುತ್ರನ ಮೇಲಿಲ್ಲ, ನನ್ನ ಮೇಲೆಯೂ ಇಲ್ಲ ಮತ್ತು ಸುಹೃದಯರ ಮೇಲೂ ಇಲ್ಲ.
03286003a ಇಷ್ಟಾನಾಂ ಚ ಮಹಾತ್ಮಾನೋ ಭಕ್ತಾನಾಂ ಚ ನ ಸಂಶಯಃ।
03286003c ಕುರ್ವಂತಿ ಭಕ್ತಿಮಿಷ್ಟಾಂ ಚ ಜಾನೀಷೇ ತ್ವಂ ಚ ಭಾಸ್ಕರ।।
ಭಾಸ್ಕರ! ಮಹಾತ್ಮರು ತಮ್ಮ ಭಕ್ತರ ಇಷ್ಟಗಳನ್ನು ಪೂರೈಸುತ್ತಾರೆ ಮತ್ತು ಭಕ್ತಿಗೆ ಮೆಚ್ಚಿ ಮಾಡುತ್ತಾರೆ ಎಂದು ನಿನಗೆ ತಿಳಿದೇ ಇದೆ.
03286004a ಇಷ್ಟೋ ಭಕ್ತಶ್ಚ ಮೇ ಕರ್ಣೋ ನ ಚಾನ್ಯದ್ದೈವತಂ ದಿವಿ।
03286004c ಜಾನೀತ ಇತಿ ವೈ ಕೃತ್ವಾ ಭಗವಾನಾಹ ಮದ್ಧಿತಂ।।
ಭಗವನ್! ಕರ್ಣನು ದಿವಿಯಲ್ಲಿ ಬೇರೆ ಯಾವ ದೇವತೆಯದ್ದೂ ಅಲ್ಲದೇ ನನ್ನ ಇಷ್ಟಭಕ್ತ ಎಂತು ಅರಿತ ನೀನು ನನ್ನ ಹಿತದಲ್ಲಿಯೇ ಮಾತನಾಡಿದ್ದೀಯೆ.
03286005a ಭೂಯಶ್ಚ ಶಿರಸಾ ಯಾಚೇ ಪ್ರಸಾದ್ಯ ಚ ಪುನಃ ಪುನಃ।
03286005c ಇತಿ ಬ್ರವೀಮಿ ತಿಗ್ಮಾಂಶೋ ತ್ವಂ ತು ಮೇ ಕ್ಷಂತುಮರ್ಹಸಿ।।
ಮತ್ತೊಮ್ಮೆ ನಾನು ನಿನಗೆ ಶಿರಸಾವಹಿಸಿ ಪುನಃ ಪುನಃ ಕೇಳಿಕೊಳ್ಳುತ್ತೇನೆ - ನನ್ನ ಉತ್ತರವು ಒಂದೇ. ತಿಂಗ್ಮಾಂಶು! ನನ್ನನ್ನು ನೀನು ಕ್ಷಮಿಸಬೇಕು.
03286006a ಬಿಭೇಮಿ ನ ತಥಾ ಮೃತ್ಯೋರ್ಯಥಾ ಬಿಭ್ಯೇಽನೃತಾದಹಂ।
03286006c ವಿಶೇಷೇಣ ದ್ವಿಜಾತೀನಾಂ ಸರ್ವೇಷಾಂ ಸರ್ವದಾ ಸತಾಂ।
03286006e ಪ್ರದಾನೇ ಜೀವಿತಸ್ಯಾಪಿ ನ ಮೇಽತ್ರಾಸ್ತಿ ವಿಚಾರಣಾ।।
ನಾನು ಸುಳ್ಳಿಗೆ ಹೆದರುವಷ್ಟು ಮೃತ್ಯುವಿಗೆ ಹೆದರುವುದಿಲ್ಲ. ವಿಶೇಷವಾಗಿ ದ್ವಿಜರಿಗೆ, ಸರ್ವದಾ ಸತ್ಯವಂತರಿಗೆ ಎಲ್ಲವನ್ನೂ ಕೊಡಲು, ಜೀವವನ್ನೂ ಕೂಡ ಕೊಡಲು, ನಾನು ಸಿದ್ಧನಾಗಿದ್ದೇನೆ. ಅದರಲ್ಲಿ ವಿಚಾರಮಾಡುವುದೇನೂ ಇಲ್ಲ.
03286007a ಯಚ್ಚ ಮಾಮಾತ್ಥ ದೇವ ತ್ವಂ ಪಾಂಡವಂ ಫಲ್ಗುನಂ ಪ್ರತಿ।
03286007c ವ್ಯೇತು ಸಂತಾಪಜಂ ದುಃಖಂ ತವ ಭಾಸ್ಕರ ಮಾನಸಂ।
03286007e ಅರ್ಜುನಂ ಪ್ರತಿ ಮಾಂ ಚೈವ ವಿಜೇಷ್ಯಾಮಿ ರಣೇಽರ್ಜುನಂ।।
ದೇವ! ಭಾಸ್ಕರ! ಇನ್ನು ಪಾಂಡವ ಫಲ್ಗುನನ ಕುರಿತು ನೀನು ಹೇಳಿದ ವಿಷಯ - ಇದರ ಬಗ್ಗೆ ನೀನು ದುಃಖ ಸಂತಾಪವನ್ನು ಪಡೆಯುವುದು ಬೇಡ. ಅರ್ಜುನನನ್ನು ನಾನು ರಣದಲ್ಲಿ ಗೆಲ್ಲುತ್ತೇನೆ.
03286008a ತವಾಪಿ ವಿದಿತಂ ದೇವ ಮಮಾಪ್ಯಸ್ತ್ರಬಲಂ ಮಹತ್।
03286008c ಜಾಮದಗ್ನ್ಯಾದುಪಾತ್ತಂ ಯತ್ತಥಾ ದ್ರೋಣಾನ್ಮಹಾತ್ಮನಃ।।
ದೇವ! ನಾನು ಜಾಮದಗ್ನಿಯಿಂದ ಪಡೆದ ಮತ್ತು ಮಹಾತ್ಮ ದ್ರೋಣನಿಂದ ಪಡೆದ ಮಹಾ ಅಸ್ತ್ರಬಲವನ್ನು ಹೊಂದಿದ್ದೇನೆ.
03286009a ಇದಂ ತ್ವಮನುಜಾನೀಹಿ ಸುರಶ್ರೇಷ್ಠ ವ್ರತಂ ಮಮ।
03286009c ಭಿಕ್ಷತೇ ವಜ್ರಿಣೇ ದದ್ಯಾಮಪಿ ಜೀವಿತಮಾತ್ಮನಃ।।
ಸುರಶ್ರೇಷ್ಠ! ವಜ್ರಿಯು ನನ್ನ ಈ ಜೀವವನ್ನು ಬೇಡಿ ಬಂದರೂ ಅವನಿಗೆ ಕೊಡುತ್ತೇನೆ ಎನ್ನುವ ನನ್ನ ಈ ವ್ರತಕ್ಕೆ ಅನುಮತಿಯ್ನ ನೀಡು.”
03286010 ಸೂರ್ಯ ಉವಾಚ।
03286010a ಯದಿ ತಾತ ದದಾಸ್ಯೇತೇ ವಜ್ರಿಣೇ ಕುಂಡಲೇ ಶುಭೇ।
03286010c ತ್ವಮಪ್ಯೇನಮಥೋ ಬ್ರೂಯಾ ವಿಜಯಾರ್ಥಂ ಮಹಾಬಲ।।
ಸೂರ್ಯನು ಹೇಳಿದನು: “ಮಗೂ! ಮಹಾಬಲ! ಒಂದು ವೇಳೆ ವಜ್ರನಿಗೆ ಶುಭ ಕುಂಡಲಗಳನ್ನು ಕೊಡಲು ಬಯಸುವೆಯಾದರೆ ನೀನು ಅವನಿಂದ ವಿಜಯವನ್ನು ಕೇಳಿಕೋ.
03286011a ನಿಯಮೇನ ಪ್ರದದ್ಯಾಸ್ತ್ವಂ ಕುಂಡಲೇ ವೈ ಶತಕ್ರತೋಃ।
03286011c ಅವಧ್ಯೋ ಹ್ಯಸಿ ಭೂತಾನಾಂ ಕುಂಡಲಾಭ್ಯಾಂ ಸಮನ್ವಿತಃ।।
ಆ ಕುಂಡಲಗಳನ್ನು ನೀನು ಶತಕ್ರತುವಿಗೆ ವ್ರತದ ಕಾರಣದಿಂದ ನೀಡುತ್ತೀಯೆ. ಆದರೆ ಈ ಕುಂಡಲಗಳಿಂದ ಕೂಡಿದ್ದ ನೀನು ಭೂತಗಳಿಂದ ಅವಧ್ಯನಾಗಿದ್ದೀಯೆ.
03286012a ಅರ್ಜುನೇನ ವಿನಾಶಂ ಹಿ ತವ ದಾನವಸೂದನಃ।
03286012c ಪ್ರಾರ್ಥಯಾನೋ ರಣೇ ವತ್ಸ ಕುಂಡಲೇ ತೇ ಜಿಹೀರ್ಷತಿ।।
ವತ್ಸ! ಯುದ್ಧದಲ್ಲಿ ಅರ್ಜುನನಿಂದ ನಿನ್ನ ವಿನಾಶವನ್ನು ಬಯಸಿಯೇ ದಾನವಸೂದನನು ನಿನ್ನ ಕುಂಡಲಗಳನ್ನು ಅಪಹರಿಸಲು ಬಯಸುತ್ತಿದ್ದಾನೆ.
03286013a ಸ ತ್ವಮಪ್ಯೇನಮಾರಾಧ್ಯ ಸೂನೃತಾಭಿಃ ಪುನಃ ಪುನಃ।
03286013c ಅಭ್ಯರ್ಥಯೇಥಾ ದೇವೇಶಮಮೋಘಾರ್ಥಂ ಪುರಂದರಂ।।
ನೀನು ಆ ಪುರಂದರನನ್ನು ಪ್ರೀತಿಯ ಮಾತುಗಳಿಂದ ಆರಾಧಿಸಿ ಪುನಃ ಪುನಃ ಆ ಪುರಂದರ ದೇವೇಶ ಅಮೋಘಾರ್ತನಲ್ಲಿ ಕೇಳಿಕೊಳ್ಳಬೇಕು:
03286014a ಅಮೋಘಾಂ ದೇಹಿ ಮೇ ಶಕ್ತಿಮಮಿತ್ರವಿನಿಬರ್ಹಿಣೀಂ।
03286014c ದಾಸ್ಯಾಮಿ ತೇ ಸಹಸ್ರಾಕ್ಷ ಕುಂಡಲೇ ವರ್ಮ ಚೋತ್ತಮಂ।।
“ನನಗೆ ಅಮಿತ್ರರನ್ನು ನಾಶಪಡಿಸುವ ಅಮೋಘ ಶಕ್ತಿಯನ್ನು ಕೊಡು! ಆಗ ಸಹಸ್ರಾಕ್ಷ! ನಿನಗೆ ನನ್ನ ಉತ್ತಮ ಕುಂಡಲಗಳನ್ನೂ ಕವಚವನ್ನೂ ಕೊಡುತ್ತೇನೆ.”
03286015a ಇತ್ಯೇವಂ ನಿಯಮೇನ ತ್ವಂ ದದ್ಯಾಃ ಶಕ್ರಾಯ ಕುಂಡಲೇ।
03286015c ತಯಾ ತ್ವಂ ಕರ್ಣ ಸಂಗ್ರಾಮೇ ಹನಿಷ್ಯಸಿ ರಣೇ ರಿಪೂನ್।।
ಇದೇ ನಿಯಮದಂತೆ ನೀನು ಶಕ್ರನಿಗೆ ಕುಂಡಲಗಳನ್ನು ಕೊಡು. ಇದರಿಂದ ಕರ್ಣ! ನೀನು ರಣ ಸಂಗ್ರಾಮದಲ್ಲಿ ರಿಪುಗಳನ್ನು ಸಂಹರಿಸಬಲ್ಲೆ.
03286016a ನಾಹತ್ವಾ ಹಿ ಮಹಾಬಾಹೋ ಶತ್ರೂನೇತಿ ಕರಂ ಪುನಃ।
03286016c ಸಾ ಶಕ್ತಿರ್ದೇವರಾಜಸ್ಯ ಶತಶೋಽಥ ಸಹಸ್ರಶಃ।।
ಮಹಾಬಾಹೋ! ದೇವರಾಜನ ಶಕ್ತಿಯು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಶತ್ರುಗಳನ್ನು ಕೊಂದೇ ನಿನ್ನ ಕೈಸೇರುವುದು.””
03286017 ವೈಶಂಪಾಯನ ಉವಾಚ।
03286017a ಏವಮುಕ್ತ್ವಾ ಸಹಸ್ರಾಂಶುಃ ಸಹಸಾಂತರಧೀಯತ।
03286017c ತತಃ ಸೂರ್ಯಾಯ ಜಪ್ಯಾಂತೇ ಕರ್ಣಃ ಸ್ವಪ್ನಂ ನ್ಯವೇದಯತ್।।
ವೈಶಂಪಾಯನನು ಹೇಳಿದನು: “ಈ ರೀತಿ ಹೇಳಿದ ಸಹಸ್ರಾಂಶವು ತಕ್ಷಣವೇ ಅಂತರ್ಧಾನನಾದನು. ಅನಂತರ ಜಪದ ಅಂತ್ಯದಲ್ಲಿ ಕರ್ಣನು ಸೂರ್ಯನಿಗೆ ಸ್ವಪ್ನವನ್ನು ನಿವೇದಿಸಿದನು.
03286018a ಯಥಾದೃಷ್ಟಂ ಯಥಾತತ್ತ್ವಂ ಯಥೋಕ್ತಮುಭಯೋರ್ನಿಶಿ।
03286018c ತತ್ಸರ್ವಮಾನುಪೂರ್ವ್ಯೇಣ ಶಶಂಸಾಸ್ಮೈ ವೃಷಸ್ತದಾ।।
ರಾತ್ರಿಯಲ್ಲಿ ಕಂಡಂತೆ, ತಿಳಿದಂತೆ ಮತ್ತು ಹೇಳಿದಂತೆ ಎಲ್ಲವನ್ನೂ ಸಂಪೂರ್ಣವಾಗಿ ಅವನಿಗೆ ವೃಷಸೇನನು ಹೇಳಿದನು.
03286019a ತಚ್ಚ್ರುತ್ವಾ ಭಗವಾನ್ದೇವೋ ಭಾನುಃ ಸ್ವರ್ಭಾನುಸೂದನಃ।
03286019c ಉವಾಚ ತಂ ತಥೇತ್ಯೇವ ಕರ್ಣಂ ಸೂರ್ಯಃ ಸ್ಮಯನ್ನಿವ।।
ಅದನ್ನು ಕೇಳಿದ ಭಗವಾನ್ ದೇವ ಭಾನು ಸ್ವರ್ಭಾನುಸೂದನ ಸೂರ್ಯನು ನಗುತ್ತಾ “ಹಾಗೆಯೇ ಆಗಲಿ!” ಎಂದು ಕರ್ಣನಿಗೆ ಹೇಳಿದನು.
03286020a ತತಸ್ತತ್ತ್ವಮಿತಿ ಜ್ಞಾತ್ವಾ ರಾಧೇಯಃ ಪರವೀರಹಾ।
03286020c ಶಕ್ತಿಮೇವಾಭಿಕಾಂಕ್ಷನ್ವೈ ವಾಸವಂ ಪ್ರತ್ಯಪಾಲಯತ್।।
ಆಗ ಅದು ಹಾಗೆಯೇ ಆಗುತ್ತದೆಯೆಂದು ತಿಳಿದ ರಾಧೇಯ ಪರವೀರಹನು ಶಕ್ತಿಯನ್ನೇ ಬಯಸಿ ವಾಸವನ ಬರವನ್ನು ಕಾಯುತ್ತಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಸೂರ್ಯಕರ್ಣಸಂವಾದೇ ಷಡಶೀತ್ಯಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಸೂರ್ಯಕರ್ಣಸಂವಾದದಲ್ಲಿ ಇನ್ನೂರಾಎಂಭತ್ತಾರನೆಯ ಅಧ್ಯಾಯವು.