285 ಸೂರ್ಯಕರ್ಣಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕುಂಡಲಾಹರಣ ಪರ್ವ

ಅಧ್ಯಾಯ 285

ಸಾರ

ಸೂರ್ಯನು ತಾನು ಅವನ ತಂದೆಯೆಂದು ಹೇಳಿಕೊಳ್ಳದೇ “ನಿನ್ನಲ್ಲಿ ಯಾವುದೋ ಒಂದು ದೇವನಿರ್ಮಿತ ವಿಶೇಷತೆಯಿದೆ. ಆದುದರಿಂದ ನಾನು ನಿನಗೆ ಹೇಳುವುದನ್ನು ಶಂಕಿಸದೇ ಅದನ್ನು ಮಾಡು” ಎಂದು ಕರ್ಣನ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸುವುದು (1-17).

03285001 ಸೂರ್ಯ ಉವಾಚ।
03285001a ಮಾಹಿತಂ ಕರ್ಣ ಕಾರ್ಷೀಸ್ತ್ವಮಾತ್ಮನಃ ಸುಹೃದಾಂ ತಥಾ।
03285001c ಪುತ್ರಾಣಾಮಥ ಭಾರ್ಯಾಣಾಮಥೋ ಮಾತುರಥೋ ಪಿತುಃ।।

ಸೂರ್ಯನು ಹೇಳಿದನು: “ಕರ್ಣ! ನಿನಗೆ, ನಿನ್ನ ಸುಹೃದಯರಿಗೆ, ಪುತ್ರರಿಗೆ, ಭಾರ್ಯೆಯರಿಗೆ, ಮತ್ತು ತಾಯಿ-ತಂದೆಯರಿಗೆ ಅಹಿತವಾದುದನ್ನು ಮಾಡಬೇಡ.

03285002a ಶರೀರಸ್ಯಾವಿರೋಧೇನ ಪ್ರಾಣಿನಾಂ ಪ್ರಾಣಭೃದ್ವರ।
03285002c ಇಷ್ಯತೇ ಯಶಸಃ ಪ್ರಾಪ್ತಿಃ ಕೀರ್ತಿಶ್ಚ ತ್ರಿದಿವೇ ಸ್ಥಿರಾ।।

ಪ್ರಾಣವಿದ್ದವರಲ್ಲಿ ಶ್ರೇಷ್ಠನೇ! ಪ್ರಾಣಿಗಳು ತಮ್ಮ ಶರೀರವನ್ನು ವಿರೋಧಿಸದೇ ಯಶಸ್ಸನ್ನು ಮತ್ತು ತ್ರಿದಿವದಲ್ಲಿ ಸ್ಥಿರವಾದ ಕೀರ್ತಿಯನ್ನು ಪಡೆಯಲು ಬಯಸುತ್ತವೆ.

03285003a ಯಸ್ತ್ವಂ ಪ್ರಾಣವಿರೋಧೇನ ಕೀರ್ತಿಮಿಚ್ಚಸಿ ಶಾಶ್ವತೀಂ।
03285003c ಸಾ ತೇ ಪ್ರಾಣಾನ್ಸಮಾದಾಯ ಗಮಿಷ್ಯತಿ ನ ಸಂಶಯಃ।।

ಆದರೆ ನೀನು ಪ್ರಾಣವನ್ನು ವಿರೋಧಿಸಿ ಶಾಶ್ವತಕೀರ್ತಿಯನ್ನು ಬಯಸುತ್ತೀಯೆ. ನೀನು ಪಡೆಯುವ ಅದು ಪ್ರಾಣದೊಂದಿಗೆ ಹೊರಟುಹೋಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

03285004a ಜೀವತಾಂ ಕುರುತೇ ಕಾರ್ಯಂ ಪಿತಾ ಮಾತಾ ಸುತಾಸ್ತಥಾ।
03285004c ಯೇ ಚಾನ್ಯೇ ಬಾಂಧವಾಃ ಕೇ ಚಿಲ್ಲೋಕೇಽಸ್ಮಿನ್ಪುರುಷರ್ಷಭ।
03285004e ರಾಜಾನಶ್ಚ ನರವ್ಯಾಘ್ರ ಪೌರುಷೇಣ ನಿಬೋಧ ತತ್।।

ಪುರುಷರ್ಷಭ! ನರವ್ಯಾಘ್ರ! ಈ ಲೋಕದಲ್ಲಿ ತಂದೆ, ತಾಯಿ, ಮಕ್ಕಳು ಮತ್ತು ಇತರ ಬಾಂಧವರೂ, ರಾಜರೂ ಕೂಡ ಪೌರುಷದಿಂದ ಜೀವಕ್ಕಾಗಿಯೇ ಮಾಡುತ್ತಾರೆ ಎಂದು ನನ್ನಿಂದ ತಿಳಿ.

03285005a ಕೀರ್ತಿಶ್ಚ ಜೀವತಃ ಸಾಧ್ವೀ ಪುರುಷಸ್ಯ ಮಹಾದ್ಯುತೇ।
03285005c ಮೃತಸ್ಯ ಕೀರ್ತ್ಯಾ ಕಿಂ ಕಾರ್ಯಂ ಭಸ್ಮೀಭೂತಸ್ಯ ದೇಹಿನಃ।

ಮಹಾದ್ಯುತೇ! ಜೀವಿತನಾಗಿರುವವನ ಕೀರ್ತಿಯು ಒಳ್ಳೆಯದು. ಭಸ್ಮೀಭೂತ ದೇಹಿ ಮೃತನ ಕೀರ್ತಿಯಿಂದ ಏನು ಪ್ರಯೋಜನ?

03285005e ಮೃತಃ ಕೀರ್ತಿಂ ನ ಜಾನಾತಿ ಜೀವನ್ಕೀರ್ತಿಂ ಸಮಶ್ನುತೇ।।
03285006a ಮೃತಸ್ಯ ಕೀರ್ತಿರ್ಮರ್ತ್ಯಸ್ಯ ಯಥಾ ಮಾಲಾ ಗತಾಯುಷಃ।

ಸತ್ತವನಿಗೆ ಕೀರ್ತಿಯು ತಿಳಿಯದು. ಜೀವಂತನಾಗಿರುವವನು ಕೀರ್ತಿಯನ್ನು ಅನುಭವಿಸುತ್ತಾನೆ. ಮೃತನ ಕೀರ್ತಿಯು ಹೆಣಕ್ಕೆ ಹಾಕಿದ ಮಾಲೆಯ ಹಾಗೆ.

03285006c ಅಹಂ ತು ತ್ವಾಂ ಬ್ರವೀಮ್ಯೇತದ್ಭಕ್ತೋಽಸೀತಿ ಹಿತೇಪ್ಸಯಾ।।
03285007a ಭಕ್ತಿಮಂತೋ ಹಿ ಮೇ ರಕ್ಷ್ಯಾ ಇತ್ಯೇತೇನಾಪಿ ಹೇತುನಾ।

ನಿನ್ನ ಹಿತಕ್ಕಾಗಿ ನಾನು ಇದನ್ನು ಹೇಳುತ್ತಿದ್ದೇನೆ. ನೀನು ನನ್ನ ಭಕ್ತ ಮತ್ತು ನಾನು ಭಕ್ತರನ್ನು ರಕ್ಷಿಸಬೇಕು.

03285007c ಭಕ್ತೋಽಯಂ ಪರಯಾ ಭಕ್ತ್ಯಾ ಮಾಮಿತ್ಯೇವ ಮಹಾಭುಜ।
03285007e ಮಮಾಪಿ ಭಕ್ತಿರುತ್ಪನ್ನಾ ಸ ತ್ವಂ ಕುರು ವಚೋ ಮಮ।।

ಮಹಾಭುಜ ಕರ್ಣ! ಈ ಭಕ್ತನು ನನ್ನ ಮೇಲೆ ಪರಮ ಭಕ್ತಿಯಿಟ್ಟಿದ್ದಾನೆಂದು ನನಗೆ ತಿಳಿದಿದೆ. ನನ್ನ ಮೇಲೆ ಭಕ್ತಿಯುತ್ಪನ್ನವಾಗಿದ್ದರೆ ನಾನು ಹೇಳಿದ ಹಾಗೆ ಮಾಡು.

03285008a ಅಸ್ತಿ ಚಾತ್ರ ಪರಂ ಕಿಂ ಚಿದಧ್ಯಾತ್ಮಂ ದೇವನಿರ್ಮಿತಂ।
03285008c ಅತಶ್ಚ ತ್ವಾಂ ಬ್ರವೀಮ್ಯೇತತ್ಕ್ರಿಯತಾಮವಿಶಂಕಯಾ।।

ನಿನ್ನಲ್ಲಿ ಯಾವುದೋ ಒಂದು ದೇವನಿರ್ಮಿತ ವಿಶೇಷತೆಯಿದೆ. ಆದುದರಿಂದ ನಾನು ನಿನಗೆ ಹೇಳುತ್ತಿದ್ದೇನೆ. ಶಂಕಿಸದೇ ಅದನ್ನು ಮಾಡು.

03285009a ದೇವಗುಹ್ಯಂ ತ್ವಯಾ ಜ್ಞಾತುಂ ನ ಶಕ್ಯಂ ಪುರುಷರ್ಷಭ।
03285009c ತಸ್ಮಾನ್ನಾಖ್ಯಾಮಿ ತೇ ಗುಹ್ಯಂ ಕಾಲೇ ವೇತ್ಸ್ಯತಿ ತದ್ಭವಾನ್।।

ಪುರುಷರ್ಷಭ! ದೇವತೆಗಳ ಗುಟ್ಟನ್ನು ತಿಳಿಯಲು ನಿನಗೆ ಸಾಧ್ಯವಿಲ್ಲ. ಆದುದರಿಂದ ನಾನು ಆ ಗುಟ್ಟನ್ನು ಹೇಳುವುದಿಲ್ಲ. ಸಮಯ ಬಂದಾಗ ನೀನು ಇದನ್ನು ತಿಳಿಯುತ್ತೀಯೆ.

03285010a ಪುನರುಕ್ತಂ ಚ ವಕ್ಷ್ಯಾಮಿ ತ್ವಂ ರಾಧೇಯ ನಿಬೋಧ ತತ್।
03285010c ಮಾಸ್ಮೈ ತೇ ಕುಂಡಲೇ ದದ್ಯಾ ಭಿಕ್ಷವೇ ವಜ್ರಪಾಣಯೇ।।

ರಾಧೇಯ! ಪುನಃ ಹೇಳುತ್ತಿದ್ದೇನೆ. ತಿಳಿದುಕೋ. ವಜ್ರಪಾಣಿಗೆ ನಿನ್ನ ಕುಂಡಲಗಳನ್ನು ಭಿಕ್ಷವಾಗಿ ಕೊಡಬೇಡ.

03285011a ಶೋಭಸೇ ಕುಂಡಲಾಭ್ಯಾಂ ಹಿ ರುಚಿರಾಭ್ಯಾಂ ಮಹಾದ್ಯುತೇ।
03285011c ವಿಶಾಖಯೋರ್ಮಧ್ಯಗತಃ ಶಶೀವ ವಿಮಲೋ ದಿವಿ।।

ಮಹಾದ್ಯುತೇ! ಈ ಸುಂದರ ಕುಂಡಲಗಳಿಂದಲೇ ನೀನು ವಿಮಲ ಆಕಾಶದಲ್ಲಿ ವಿಶಾಖಗಳ ಮಧ್ಯದಲ್ಲಿ ನಡೆಯುವ ಚಂದ್ರನಂತೆ ಶೋಭಿಸುತ್ತೀಯೆ.

03285012a ಕೀರ್ತಿಶ್ಚ ಜೀವತಃ ಸಾಧ್ವೀ ಪುರುಷಸ್ಯೇತಿ ವಿದ್ಧಿ ತತ್।
03285012c ಪ್ರತ್ಯಾಖ್ಯೇಯಸ್ತ್ವಯಾ ತಾತ ಕುಂಡಲಾರ್ಥೇ ಪುರಂದರಃ।।

ಮಗೂ! ಜೀವಂತನಾಗಿರುವ ಪುರುಷನಿಗೆ ಮಾತ್ರ ಕೀರ್ತಿಯು ಒಳ್ಳೆಯದು ಎಂದು ತಿಳಿದು ಪುರಂದರನಿಗೆ ಕುಂಡಲಗಳನ್ನು ನಿರಾಕರಿಸು.

03285013a ಶಕ್ಯಾ ಬಹುವಿಧೈರ್ವಾಕ್ಯೈಃ ಕುಂಡಲೇಪ್ಸಾ ತ್ವಯಾನಘ।
03285013c ವಿಹಂತುಂ ದೇವರಾಜಸ್ಯ ಹೇತುಯುಕ್ತೈಃ ಪುನಃ ಪುನಃ।।

ಅನಘ! ಕುಂಡಲಗಳನ್ನು ಬಯಸಿಬಂದ ದೇವರಾಜನನ್ನು ಬಹುವಿಧದ ಹೇತುಯುಕ್ತ ವಾಕ್ಯಗಳಿಂದ ಪುನಃ ಪುನಃ ತಡೆಯಲು ಪ್ರಯತ್ನಿಸು.

03285014a ಉಪಪತ್ತ್ಯುಪಪನ್ನಾರ್ಥೈರ್ಮಾಧುರ್ಯಕೃತಭೂಷಣೈಃ।
03285014c ಪುರಂದರಸ್ಯ ಕರ್ಣ ತ್ವಂ ಬುದ್ಧಿಮೇತಾಮಪಾನುದ।।

ಪುರಂದರನ ಈ ಯೋಜನೆಯನ್ನು ಬುದ್ಧಿಯುಕ್ತ ಮಧುರ ಸುಂದರ ಶಬ್ಧಗಳುಳ್ಳ ಮಾತುಗಳಿಂದ ತಡೆ.

03285015a ತ್ವ ಹಿ ನಿತ್ಯಂ ನರವ್ಯಾಘ್ರ ಸ್ಪರ್ಧಸೇ ಸವ್ಯಸಾಚಿನಾ।
03285015c ಸವ್ಯಸಾಚೀ ತ್ವಯಾ ಚೈವ ಯುಧಿ ಶೂರಃ ಸಮೇಷ್ಯತಿ।।

ನರವ್ಯಾಘ್ರ! ನಿತ್ಯವೂ ನೀನು ಸವ್ಯಸಾಚಿಯೊಡನೆ ಸ್ಪರ್ಧಿಸುತ್ತೀಯೆ. ಹಾಗೆಯೇ ಶೂರ ಸವ್ಯಸಾಚಿಯೂ ಕೂಡ ಯುದ್ಧದಲ್ಲಿ ನಿನ್ನ ಸರಿಸಾಟಿಯಾಗಿದ್ದಾನೆ.

03285016a ನ ತು ತ್ವಾಮರ್ಜುನಃ ಶಕ್ತಃ ಕುಂಡಲಾಭ್ಯಾಂ ಸಮನ್ವಿತಂ।
03285016c ವಿಜೇತುಂ ಯುಧಿ ಯದ್ಯಸ್ಯ ಸ್ವಯಮಿಂದ್ರಃ ಶರೋ ಭವೇತ್।।

ಆದರೆ ಇಂದ್ರನೇ ಶರವಾದರೂ ಕುಂಡಲಗಳಿಂದ ಕೂಡಿದ ನಿನ್ನನ್ನು ಅರ್ಜುನನು ಯುದ್ಧದಲ್ಲಿ ಜಯಿಸಲು ಶಕ್ತನಿಲ್ಲ.

03285017a ತಸ್ಮಾನ್ನ ದೇಯೇ ಶಕ್ರಾಯ ತ್ವಯೈತೇ ಕುಂಡಲೇ ಶುಭೇ।
03285017c ಸಂಗ್ರಾಮೇ ಯದಿ ನಿರ್ಜೇತುಂ ಕರ್ಣ ಕಾಮಯಸೇಽರ್ಜುನಂ।।

ಆದುದರಿಂದ ಸಂಗ್ರಾಮದಲ್ಲಿ ಅರ್ಜುನನನ್ನು ಜಯಿಸಲು ಇಚ್ಛಿಸಿದರೆ ನೀನು ಈ ಶುಭಕುಂಡಲಗಳನ್ನು ಶಕ್ರನಿಗೆ ಕೊಡಬಾರದು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಸೂರ್ಯಕರ್ಣಸಂವಾದೇ ಪಂಚಶೀತ್ಯಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಸೂರ್ಯಕರ್ಣಸಂವಾದದಲ್ಲಿ ಇನ್ನೂರಾಎಂಭತ್ತೈದನೆಯ ಅಧ್ಯಾಯವು.