284 ಸೂರ್ಯಕರ್ಣಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕುಂಡಲಾಹರಣ ಪರ್ವ

ಅಧ್ಯಾಯ 284

ಸಾರ

ಕರ್ಣನ ಕುರಿತು ಯುಧಿಷ್ಠಿರನಿಗಿದ್ದ ಭಯವು ಯಾವುದೆಂದು ಜನಮೇಜಯನು ಕೇಳಲು ಶಕ್ರನು ಕರ್ಣನ ಕುಂಡಲಗಳನ್ನು ಅಪಹರಿಸಿದುದನ್ನು ವೈಶಂಪಾಯನನು ಹೇಳುವುದು (1-5). ಇಂದ್ರನ ಇಂಗಿತವನ್ನು ತಿಳಿದ ಸೂರ್ಯನು ಬ್ರಾಹ್ಮಣನ ರೂಪದಲ್ಲಿ ಮಗ ಕರ್ಣನ ಸ್ವಪ್ನದಲ್ಲಿ ಬಂದು ಬ್ರಾಹ್ಮಣ ರೂಪದಲ್ಲಿ ಇಂದ್ರನು ಕುಂಡಲಗಳನ್ನು ಕೇಳಿದರೆ ಕೊಡಬೇಡವೆನ್ನುವುದು (6-20). ಆದರೆ ತನಗೆ ಕೀರ್ತಿಯು ಮೇಲೆಂದು ಕರ್ಣನು ಉತ್ತರಿಸುವುದು (21-39).

03284001 ಜನಮೇಜಯ ಉವಾಚ।
03284001a ಯತ್ತತ್ತದಾ ಮಹಾಬ್ರಹ್ಮಽಲ್ಲೋಮಶೋ ವಾಕ್ಯಮಬ್ರವೀತ್।।
03284001c ಇಂದ್ರಸ್ಯ ವಚನಾದೇತ್ಯ ಪಾಂಡುಪುತ್ರಂ ಯುಧಿಷ್ಠಿರಂ।

ಜನಮೇಜಯನು ಹೇಳಿದನು: “ಮಹಾಬ್ರಹ್ಮನ್! ಇಂದ್ರನ ವಚನದಂತೆ ಪಾಂಡುಪುತ್ರ ಯುಧಿಷ್ಠಿರನ ಬಳಿ ಬಂದಾಗ ಲೋಮಶನು ಒಂದು ಮಾತನ್ನಾಡಿದ್ದನು.

03284002a ಯಚ್ಚಾಪಿ ತೇ ಭಯಂ ತೀವ್ರಂ ನ ಚ ಕೀರ್ತಯಸೇ ಕ್ವ ಚಿತ್।।
03284002c ತಚ್ಚಾಪ್ಯಪಹರಿಷ್ಯಾಮಿ ಸವ್ಯಸಾಚಾವಿಹಾಗತೇ।

“ಸವ್ಯಸಾಚಿಯು ಹಿಂದುರಿಗಿದ ನಂತರ ಯಾರಿಗೂ ಹೇಳದೇ ಇದ್ದ ನಿನ್ನ ತೀವ್ರ ಭಯವೊಂದನ್ನು ನಿವಾರಿಸುತ್ತೇನೆ!” ಎಂದು ಹೇಳಿದ್ದನು.

03284003a ಕಿಂ ನು ತದ್ವಿದುಷಾಂ ಶ್ರೇಷ್ಠ ಕರ್ಣಂ ಪ್ರತಿ ಮಹದ್ಭಯಂ।।
03284003c ಆಸೀನ್ನ ಚ ಸ ಧರ್ಮಾತ್ಮಾ ಕಥಯಾಮಾಸ ಕಸ್ಯ ಚಿತ್।

ವಿದುಷರಲ್ಲಿ ಶ್ರೇಷ್ಠ! ಕರ್ಣನ ಕುರಿತಾಗಿ ಆ ಧರ್ಮಾತ್ಮನಿಗಿದ್ದ ಮತ್ತು ಯಾರಿಗೂ ಹೇಳದೇ ಇದ್ದ ಆ ಮಹಾಭಯವು ಯಾವುದಾಗಿತ್ತು?”

03284004 ವೈಶಂಪಾಯನ ಉವಾಚ।
03284004a ಅಹಂ ತೇ ರಾಜಶಾರ್ದೂಲ ಕಥಯಾಮಿ ಕಥಾಮಿಮಾಂ।
03284004c ಪೃಚ್ಚತೇ ಭರತಶ್ರೇಷ್ಠ ಶುಶ್ರೂಷಸ್ವ ಗಿರಂ ಮಮ।।

ವೈಶಂಪಾಯನನು ಹೇಳಿದನು: “ರಾಜಶಾರ್ದೂಲ! ಕೇಳುತ್ತಿರುವ ನಿನಗೆ ಆ ಕಥೆಯನ್ನು ಹೇಳುತ್ತೇನೆ. ನನ್ನ ಮಾತುಗಳನ್ನು ಕೇಳುವಂಥವನಾಗು.

03284005a ದ್ವಾದಶೇ ಸಮತಿಕ್ರಾಂತೇ ವರ್ಷೇ ಪ್ರಾಪ್ತೇ ತ್ರಯೋದಶೇ।
03284005c ಪಾಂಡೂನಾಂ ಹಿತಕೃಚ್ಚಕ್ರಃ ಕರ್ಣಂ ಭಿಕ್ಷಿತುಮುದ್ಯತಃ।।

ಹನ್ನೆರಡನೆಯ ವರ್ಷವು ಮುಗಿದು ಹದಿಮೂರನೆಯದು ಕಾಲಿಡುತ್ತಿರುವಾಗ ಪಾಂಡವರಿಗೆ ಹಿತವನ್ನುಂಟುಮಾಡಲೋಸುಗ ಶಕ್ರನು ಕರ್ಣನಲ್ಲಿ ಭಿಕ್ಷೆಬೇಡಲು ಹೊರಟನು.

03284006a ಅಭಿಪ್ರಾಯಮಥೋ ಜ್ಞಾತ್ವಾ ಮಹೇಂದ್ರಸ್ಯ ವಿಭಾವಸುಃ।
03284006c ಕುಂಡಲಾರ್ಥೇ ಮಹಾರಾಜ ಸೂರ್ಯಃ ಕರ್ಣಮುಪಾಗಮತ್।।

ಮಹಾರಾಜ! ಕುಂಡಲಗಳ ಕುರಿತು ಮಹೇಂದ್ರನ ಅಭಿಪ್ರಾಯವನ್ನು ತಿಳಿದ ವಿಭಾವಸು ಸೂರ್ಯನು ಕರ್ಣನ ಬಳಿಬಂದನು.

03284007a ಮಹಾರ್ಹೇ ಶಯನೇ ವೀರಂ ಸ್ಪರ್ಧ್ಯಾಸ್ತರಣಸಂವೃತೇ।
03284007c ಶಯಾನಮಭಿವಿಶ್ವಸ್ತಂ ಬ್ರಹ್ಮಣ್ಯಂ ಸತ್ಯವಾದಿನಂ।।

ಬ್ರಹ್ಮಣ್ಯ, ಸತ್ಯವಾದಿ ವೀರನು ಬೆಲೆಬಾಳುವ, ಸ್ಪರ್ಧಿಸುವ ಮೇಲುಹಾಸಿಗೆಗಳನ್ನು ಹಾಸಿದ ಹಾಸಿಗೆಯ ಮೇಲೆ ವಿಶ್ವಾಸದಿಂದ ಮಲಗಿಕೊಂಡಿದ್ದನು.

03284008a ಸ್ವಪ್ನಾಂತೇ ನಿಶಿ ರಾಜೇಂದ್ರ ದರ್ಶಯಾಮಾಸ ರಶ್ಮಿವಾನ್।
03284008c ಕೃಪಯಾ ಪರಯಾವಿಷ್ಟಃ ಪುತ್ರಸ್ನೇಹಾಚ್ಚ ಭಾರತ।।

ರಾಜೇಂದ್ರ! ಭಾರತ! ರಾತ್ರಿಯಲ್ಲಿ ಸ್ವಪ್ನದ ಕೊನೆಯಲ್ಲಿ ರಶ್ಮಿವಂತನು ಪುತ್ರಸ್ನೇಹ ಮತ್ತು ಕೃಪೆಯಿಂದ ಮುಳುಗಿಹೋಗಿ ಅವನಿಗೆ ಕಾಣಿಸಿಕೊಂಡನು.

03284009a ಬ್ರಾಹ್ಮಣೋ ವೇದವಿದ್ಭೂತ್ವಾ ಸೂರ್ಯೋ ಯೋಗಾದ್ಧಿ ರೂಪವಾನ್।
03284009c ಹಿತಾರ್ಥಮಬ್ರವೀತ್ಕರ್ಣಂ ಸಾಂತ್ವಪೂರ್ವಮಿದಂ ವಚಃ।।

ಸೂರ್ಯನು ತನ್ನ ಯೋಗದಿಂದ ವೇದವಿದು ರೂಪವಂತ ಬ್ರಾಹ್ಮಣನಾಗಿ ಹಿತಾರ್ಥಕ್ಕಾಗಿ ಸಂತವಿಸುತ್ತಾ ಕರ್ಣನಿಗೆ ಹೇಳಿದನು:

03284010a ಕರ್ಣ ಮದ್ವಚನಂ ತಾತ ಶೃಣು ಸತ್ಯಭೃತಾಂ ವರ।
03284010c ಬ್ರುವತೋಽದ್ಯ ಮಹಾಬಾಹೋ ಸೌಹೃದಾತ್ಪರಮಂ ಹಿತಂ।।

“ಕರ್ಣ! ಸತ್ಯಭೃತರಲ್ಲಿ ಶ್ರೇಷ್ಠ! ಮಗೂ! ಮಹಾಬಾಹೋ! ಇಂದು ಸ್ನೇಹಭಾವದಿಂದ ನಾನು ಹೇಳುವ ಈ ಪರಮ ಹಿತದ ಮಾತನ್ನು ಕೇಳು!

03284011a ಉಪಾಯಾಸ್ಯತಿ ಶಕ್ರಸ್ತ್ವಾಂ ಪಾಂಡವಾನಾಂ ಹಿತೇಪ್ಸಯಾ।
03284011c ಬ್ರಾಹ್ಮಣಚ್ಚದ್ಮನಾ ಕರ್ಣ ಕುಂಡಲಾಪಜಿಹೀರ್ಷಯಾ।।

ಪಾಂಡವರ ಹಿತವನ್ನು ಬಯಸಿ ಶಕ್ರನು ಬ್ರಾಹ್ಮಣನ ವೇಷವನ್ನು ಧರಿಸಿ ಕುಂಡಲಗಳನ್ನು ಅಪಹರಿಸಲೋಸುಗ ನಿನ್ನ ಬಳಿ ಬರುತ್ತಾನೆ.

03284012a ವಿದಿತಂ ತೇನ ಶೀಲಂ ತೇ ಸರ್ವಸ್ಯ ಜಗತಸ್ತಥಾ।
03284012c ಯಥಾ ತ್ವಂ ಭಿಕ್ಷಿತಃ ಸದ್ಭಿರ್ದದಾಸ್ಯೇವ ನ ಯಾಚಸೇ।।

ಭಿಕ್ಷೆಯನ್ನು ಕೇಳಿ ಬಂದವನಿಗೆ ನೀನು ಎಲ್ಲವನ್ನೂ ದಾನಮಾಡುತ್ತೀಯೇ ಹೊರತು ನೀನೇ ಕೇಳುವುದಿಲ್ಲ ಎಂಬ ನಿನ್ನ ಈ ಶೀಲವು ಜಗತ್ತಿನಲ್ಲಿ ಎಲ್ಲರಿಗೂ ತಿಳಿದೇ ಇದೆ.

03284013a ತ್ವಂ ಹಿ ತಾತ ದದಾಸ್ಯೇವ ಬ್ರಾಹ್ಮಣೇಭ್ಯಃ ಪ್ರಯಾಚಿತಃ।
03284013c ವಿತ್ತಂ ಯಚ್ಚಾನ್ಯದಪ್ಯಾಹುರ್ನ ಪ್ರತ್ಯಾಖ್ಯಾಸಿ ಕರ್ಹಿ ಚಿತ್।।

ಮಗೂ! ಯಾಕೆಂದರೆ ಬ್ರಾಹ್ಮಣರು ಏನು ಕೇಳಿದರೂ ನೀನು ಕೊಡುತ್ತೀಯೆ. ನಿನ್ನಲ್ಲಿರುವ ಏನನ್ನೇ ಆದರೂ ಕೊಡುತ್ತೀಯೆ. ಇಲ್ಲವೆನ್ನುವುದಿಲ್ಲ.

03284014a ತಂ ತ್ವಾಮೇವಂವಿಧಂ ಜ್ಞಾತ್ವಾ ಸ್ವಯಂ ವೈ ಪಾಕಶಾಸನಃ।
03284014c ಆಗಂತಾ ಕುಂಡಲಾರ್ಥಾಯ ಕವಚಂ ಚೈವ ಭಿಕ್ಷಿತುಂ।।

ನಿನ್ನ ಈ ಕ್ರಮವನ್ನು ತಿಳಿದ ಪಾಕಶಾಸನನು ಸ್ವಯಂ ಇಲ್ಲಿಗೆ ಬಂದು ನಿನ್ನಿಂದ ಕುಂಡಲ ಮತ್ತು ಕವಚಗಳನ್ನು ಭಿಕ್ಷೆಯಾಗಿ ಕೇಳುತ್ತಾನೆ.

03284015a ತಸ್ಮೈ ಪ್ರಯಾಚಮಾನಾಯ ನ ದೇಯೇ ಕುಂಡಲೇ ತ್ವಯಾ।
03284015c ಅನುನೇಯಃ ಪರಂ ಶಕ್ತ್ಯಾ ಶ್ರೇಯ ಏತದ್ಧಿ ತೇ ಪರಂ।।

ಅವನು ಕೇಳುವಾಗ ನೀನು ಕುಂಡಲಗಳನ್ನು ಕೊಡಬಾರದು. ಪರಮ ಶಕ್ತಿಯನ್ನುಪಯೋಗಿಸಿ ಅವನನ್ನು ತೃಪ್ತಿಗೊಳಿಸು. ಇದರಲ್ಲಿಯೇ ನಿನ್ನ ಶ್ರೇಯಸ್ಸಿದೆ.

03284016a ಕುಂಡಲಾರ್ಥೇ ಬ್ರುವಂಸ್ತಾತ ಕಾರಣೈರ್ವಹುಭಿಸ್ತ್ವಯಾ।
03284016c ಅನ್ಯೈರ್ವಹುವಿಧೈರ್ವಿತ್ತೈಃ ಸ ನಿವಾರ್ಯಃ ಪುನಃ ಪುನಃ।।

ಮಗೂ! ಅವನು ಕುಂಡಲಗಳನ್ನು ಕೇಳಿದಾಗ ನೀನು ಬಹು ಕಾರಣಗಳಿಂದ - ಅನ್ಯ ಬಹುವಿಧದ ವಿತ್ತಗಳಿಂದ - ಪುನಃ ಪುನಃ ಅವನನ್ನು ತಡೆಯಬೇಕು.

03284017a ರತ್ನೈಃ ಸ್ತ್ರೀಭಿಸ್ತಥಾ ಭೋಗೈರ್ಧನೈರ್ವಹುವಿಧೈರಪಿ।
03284017c ನಿದರ್ಶನೈಶ್ಚ ಬಹುಭಿಃ ಕುಂಡಲೇಪ್ಸುಃ ಪುರಂದರಃ।।

ಕುಂಡಲಗಳನ್ನು ಬಯಸುವ ಪುರಂದರನನ್ನು ರತ್ನಗಳಿಂದ, ಸ್ತ್ರೀಯರಿಂದ ಮತ್ತು ಬಹುವಿಧದ ಧನ ಭೋಗಗಳಿಂದ ತೃಪ್ತಿಗೊಳಿಸು.

03284018a ಯದಿ ದಾಸ್ಯಸಿ ಕರ್ಣ ತ್ವಂ ಸಹಜೇ ಕುಂಡಲೇ ಶುಭೇ।
03284018c ಆಯುಷಃ ಪ್ರಕ್ಷಯಂ ಗತ್ವಾ ಮೃತ್ಯೋರ್ವಶಮುಪೇಷ್ಯಸಿ।।

ಕರ್ಣ! ಆ ಸಹಜ ಶುಭ ಕುಂಡಲಗಳನ್ನು ನೀನು ಕೊಟ್ಟರೆ ನಿನ್ನ ಆಯುಷ್ಯವನ್ನು ಕಳೆದುಕೊಂಡು ಮೃತ್ಯುವಿನ ವಶವನ್ನು ಹೊಗುತ್ತೀಯೆ.

03284019a ಕವಚೇನ ಚ ಸಂಯುಕ್ತಃ ಕುಂಡಲಾಭ್ಯಾಂ ಚ ಮಾನದ।
03284019c ಅವಧ್ಯಸ್ತ್ವಂ ರಣೇಽರೀಣಾಮಿತಿ ವಿದ್ಧಿ ವಚೋ ಮಮ।।

ಮಾನದ! ಕವಚ ಮತ್ತು ಕುಂಡಲಗಳಿಂದ ಸಂಯುಕ್ತನಾದ ನೀನು ರಣದಲ್ಲಿ ಅರಿಗಳಿಂದ ಅವಧ್ಯ ಎಂಬ ನನ್ನ ಈ ಮಾತನ್ನು ತಿಳಿದುಕೋ.

03284020a ಅಮೃತಾದುತ್ಥಿತಂ ಹ್ಯೇತದುಭಯಂ ರತ್ನಸಂಭವಂ।
03284020c ತಸ್ಮಾದ್ರಕ್ಷ್ಯಂ ತ್ವಯಾ ಕರ್ಣ ಜೀವಿತಂ ಚೇತ್ಪ್ರಿಯಂ ತವ।

ಯಾಕೆಂದರೆ ಇವೆರಡು ರತ್ನಗಳೂ ಅಮೃತದಿಂದ ಮೇಲೆದ್ದಿವೆ. ಆದುದರಿಂದ ಕರ್ಣ! ನಿನಗೆ ಜೀವಿಸುವುದು ಪ್ರಿಯವಾದರೆ ಇವನ್ನು ರಕ್ಷಿಸಿಕೊಳ್ಳಬೇಕು.”

03284021 ಕರ್ಣ ಉವಾಚ।
03284021a ಕೋ ಮಾಮೇವಂ ಭವಾನ್ಪ್ರಾಹ ದರ್ಶಯನ್ಸೌಹೃದಂ ಪರಂ।
03284021c ಕಾಮಯಾ ಭಗವನ್ಬ್ರೂಹಿ ಕೋ ಭವಾನ್ದ್ವಿಜವೇಷಧೃಕ್।।

ಕರ್ಣನು ಹೇಳಿದನು: “ನನ್ನ ಮೇಲಿನ ಪರಮ ಸೌಹಾರ್ದದಿಂದ ಕಾಣಿಸಿಕೊಂಡ ನೀನು ಯಾರೆಂದು ಹೇಳು. ಭಗವಾನ್! ಬ್ರಾಹ್ಮಣನ ವೇಷದಲ್ಲಿರುವ ನೀನು ಯಾರೆಂದು ಇಷ್ಟವಿದ್ದು ಹೇಳು.”

03284022 ಬ್ರಾಹ್ಮಣ ಉವಾಚ।
03284022a ಅಹಂ ತಾತ ಸಹಸ್ರಾಂಶುಃ ಸೌಹೃದಾತ್ತ್ವಾಂ ನಿದರ್ಶಯೇ।
03284022c ಕುರುಷ್ವೈತದ್ವಚೋ ಮೇ ತ್ವಮೇತಚ್ಚ್ರೇಯಃ ಪರಂ ಹಿ ತೇ।।

ಬ್ರಾಹ್ಮಣನು ಹೇಳಿದನು: “ಮಗೂ! ನಾನು ಸಹಸ್ರಾಂಶು. ನಿನ್ನ ಮೇಲಿನ ಸ್ನೇಹಭಾವದಿಂದ ನಿನಗೆ ನಿದರ್ಶಿಸುತ್ತೇನೆ. ನಾನು ಹೇಳಿದಂತೆ ಮಾಡು. ಅದರಲ್ಲಿಯೇ ನಿನ್ನ ಪರಮ ಶ್ರೇಯಸ್ಸಿದೆ.”

03284023 ಕರ್ಣ ಉವಾಚ।
03284023a ಶ್ರೇಯ ಏವ ಮಮಾತ್ಯಂತಂ ಯಸ್ಯ ಮೇ ಗೋಪತಿಃ ಪ್ರಭುಃ।
03284023c ಪ್ರವಕ್ತಾದ್ಯ ಹಿತಾನ್ವೇಷೀ ಶೃಣು ಚೇದಂ ವಚೋ ಮಮ।।

ಕರ್ಣನು ಹೇಳಿದನು: “ಪ್ರಭು ಗೋಪತಿಯು ಇಂದು ಹೇಳಿದುದು ನನಗೆ ಅತ್ಯಂತ ಹಿತಕರವಾದುದೇ ಸರಿ. ನನ್ನ ಈ ಮಾತುಗಳನ್ನು ಕೇಳು.

03284024a ಪ್ರಸಾದಯೇ ತ್ವಾಂ ವರದಂ ಪ್ರಣಯಾಚ್ಚ ಬ್ರವೀಮ್ಯಹಂ।
03284024c ನ ನಿವಾರ್ಯೋ ವ್ರತಾದಸ್ಮಾದಹಂ ಯದ್ಯಸ್ಮಿ ತೇ ಪ್ರಿಯಃ।।

ವರದ! ನಾನು ನಿನಗೆ ನಮಸ್ಕರಿಸಿ ಪ್ರೀತಿಯಿಂದ ಹೇಳುತ್ತಿದ್ದೇನೆ. ನನ್ನನ್ನು ನಿನ್ನ ಪ್ರಿಯನೆಂದು ತಿಳಿದಿದ್ದೀಯಾದರೆ ನನ್ನ ಈ ವ್ರತದಿಂದ ನನ್ನನ್ನು ತಪ್ಪಿಸಬೇಡ.

03284025a ವ್ರತಂ ವೈ ಮಮ ಲೋಕೋಽಯಂ ವೇತ್ತಿ ಕೃತ್ಸ್ನೋ ವಿಭಾವಸೋ।
03284025c ಯಥಾಹಂ ದ್ವಿಜಮುಖ್ಯೇಭ್ಯೋ ದದ್ಯಾಂ ಪ್ರಾಣಾನಪಿ ಧ್ರುವಂ।।

ವಿಭಾವಸೋ! ನನ್ನ ಈ ವ್ರತವನ್ನೇ ಇಡೀ ಲೋಕವು ತಿಳಿದಿದೆ. ನಾನು ದ್ವಿಜಮುಖ್ಯರಿಗೆ ಪ್ರಾಣವನ್ನೂ ಕೊಡುತ್ತೇನೆ ಎನ್ನುವುದು ಸಿದ್ಧ.

03284026a ಯದ್ಯಾಗಚ್ಚತಿ ಶಕ್ರೋ ಮಾಂ ಬ್ರಾಹ್ಮಣಚ್ಚದ್ಮನಾವೃತಃ।
03284026c ಹಿತಾರ್ಥಂ ಪಾಂಡುಪುತ್ರಾಣಾಂ ಖೇಚರೋತ್ತಮ ಭಿಕ್ಷಿತುಂ।।
03284027a ದಾಸ್ಯಾಮಿ ವಿಬುಧಶ್ರೇಷ್ಠ ಕುಂಡಲೇ ವರ್ಮ ಚೋತ್ತಮಂ।
03284027c ನ ಮೇ ಕೀರ್ತಿಃ ಪ್ರಣಶ್ಯೇತ ತ್ರಿಷು ಲೋಕೇಷು ವಿಶ್ರುತಾ।।

ಖೇಚರೋತ್ತಮ! ವಿಬುಧಶ್ರೇಷ್ಠ! ಬ್ರಾಹ್ಮಣನ ವೇಷವನ್ನು ತಳೆದು ಪಾಂಡುಪುತ್ರರ ಹಿತಾರ್ಥವಾಗಿ ಶಕ್ರನು ನನ್ನಲ್ಲಿಗೆ ಭಿಕ್ಷೆಬೇಡಿ ಬಂದರೆ ಮೂರುಲೋಕದಲ್ಲಿ ವಿಶ್ರುತವಾದ ನನ್ನ ಈ ಕೀರ್ತಿಯು ಕುಂದದಿರಲು ಅವನಿಗೆ ಉತ್ತಮ ಕವಚ-ಕುಂಡಲಗಳನ್ನು ಕೊಡುತ್ತೇನೆ.

03284028a ಮದ್ವಿಧಸ್ಯಾಯಶಸ್ಯಂ ಹಿ ನ ಯುಕ್ತಂ ಪ್ರಾಣರಕ್ಷಣಂ।
03284028c ಯುಕ್ತಂ ಹಿ ಯಶಸಾ ಯುಕ್ತಂ ಮರಣಂ ಲೋಕಸಮ್ಮತಂ।।

ನನ್ನಂಥವರಿಗೆ ಪ್ರಾಣವನ್ನು ರಕ್ಷಿಸಿಕೊಂಡು ಅಯಶಸ್ಸನ್ನು ತರುವುದು ಯುಕ್ತವಲ್ಲ. ಮರಣವಾದರೂ ಲೋಕಸಮ್ಮತ ಯಶಸ್ಸನ್ನು ನೀಡುವಂಥಹುದೇ ಯುಕ್ತವಾದುದು.

03284029a ಸೋಽಹಮಿಂದ್ರಾಯ ದಾಸ್ಯಾಮಿ ಕುಂಡಲೇ ಸಹ ವರ್ಮಣಾ।
03284029c ಯದಿ ಮಾಂ ಬಲವೃತ್ರಘ್ನೋ ಭಿಕ್ಷಾರ್ಥಮುಪಯಾಸ್ಯತಿ।।
03284030a ಹಿತಾರ್ಥಂ ಪಾಂಡುಪುತ್ರಾಣಾಂ ಕುಂಡಲೇ ಮೇ ಪ್ರಯಾಚಿತುಂ।
03284030c ತನ್ಮೇ ಕೀರ್ತಿಕರಂ ಲೋಕೇ ತಸ್ಯಾಕೀರ್ತಿಃರ್ವವಿಷ್ಯತಿ।।

ಆ ಇಂದ್ರನಿಗೆ ನನ್ನ ಕವಚದೊಂದಿಗೆ ಕುಂಡಲಗಳನ್ನು ಕೊಡುತ್ತೇನೆ. ಒಂದುವೇಳೆ ಬಲ-ವೃತ್ರಘ್ನನು ಪಾಂಡುಪುತ್ರರ ಹಿತಕ್ಕಾಗಿ ನನ್ನ ಕುಂಡಲಗಳನ್ನು ಭಿಕ್ಷೆಯಾಗಿ ಕೇಳಿಕೊಂಡು ಬಂದರೆ ಅದು ಲೋಕದಲ್ಲಿ ನನಗೆ ಕೀರ್ತಿಕರವಾಗಿ, ಅವನಿಗೆ ಅಕೀರ್ತಿಯನ್ನು ತರುತ್ತದೆ.

03284031a ವೃಣೋಮಿ ಕೀರ್ತಿಂ ಲೋಕೇ ಹಿ ಜೀವಿತೇನಾಪಿ ಭಾನುಮನ್।
03284031c ಕೀರ್ತಿಮಾನಶ್ನುತೇ ಸ್ವರ್ಗಂ ಹೀನಕೀರ್ತಿಸ್ತು ನಶ್ಯತಿ।।

ಭಾನುಮನ್! ಜೀವಕ್ಕಿಂತಲೂ ನಾನು ಲೋಕದಲ್ಲಿ ಕೀರ್ತಿಯನ್ನು ಆರಿಸುತ್ತೇನೆ. ಕೀರ್ತಿವಂತನು ಸ್ವರ್ಗವನ್ನು ಪಡೆಯುತ್ತಾನೆ. ಕೀರ್ತಿಯನ್ನು ಕಳೆದುಕೊಂಡವನು ನಶಿಸುತ್ತಾನೆ.

03284032a ಕೀರ್ತಿರ್ಹಿ ಪುರುಷಂ ಲೋಕೇ ಸಂಜೀವಯತಿ ಮಾತೃವತ್।
03284032c ಅಕೀರ್ತಿರ್ಜೀವಿತಂ ಹಂತಿ ಜೀವತೋಽಪಿ ಶರೀರಿಣಃ।।

ಯಾಕೆಂದರೆ ಲೋಕದಲ್ಲಿ ಕೀರ್ತಿಯೇ ತಾಯಿಯಂತೆ ಪುರುಷನನ್ನು ಹುಟ್ಟಿಸುತ್ತದೆ. ಅಕೀರ್ತಿಯು ಶರೀರದಲ್ಲಿ ಜೀವಂತನಾಗಿದ್ದರೂ ಅವನ ಜೀವನವನ್ನು ಕೊಲ್ಲುತ್ತದೆ.

03284033a ಅಯಂ ಪುರಾಣಃ ಶ್ಲೋಕೋ ಹಿ ಸ್ವಯಂ ಗೀತೋ ವಿಭಾವಸೋ।
03284033c ಧಾತ್ರಾ ಲೋಕೇಶ್ವರ ಯಥಾ ಕೀರ್ತಿರಾಯುರ್ನರಸ್ಯ ವೈ।।

ವಿಭಾವಸೋ! ಲೋಕೇಶ್ವರ! ಕೀರ್ತಿಯು ಹೇಗೆ ನರನ ಆಯುಸ್ಸು ಎನ್ನುವುದರ ಕುರಿತು ಹಿಂದೆ ಸ್ವಯಂ ಧಾತ್ರುವೇ ಈ ಶ್ಲೋಕವನ್ನು ಹಾಡಿದ್ದನು:

03284034a ಪುರುಷಸ್ಯ ಪರೇ ಲೋಕೇ ಕೀರ್ತಿರೇವ ಪರಾಯಣಂ।
03284034c ಇಹ ಲೋಕೇ ವಿಶುದ್ಧಾ ಚ ಕೀರ್ತಿರಾಯುರ್ವಿವರ್ಧನೀ।।

ಪರಲೋಕದಲ್ಲಿ ಕೀರ್ತಿಯೇ ಪುರುಷನ ಪರಾಯಣ. ವಿಶುದ್ಧ ಕೀರ್ತಿಯು ಈ ಲೋಕದಲ್ಲಿಯೂ ಅವನ ಆಯಸ್ಸನ್ನು ವರ್ಧಿಸುತ್ತದೆ.

03284035a ಸೋಽಹಂ ಶರೀರಜೇ ದತ್ತ್ವಾ ಕೀರ್ತಿಂ ಪ್ರಾಪ್ಸ್ಯಾಮಿ ಶಾಶ್ವತೀಂ।
03284035c ದತ್ತ್ವಾ ಚ ವಿಧಿವದ್ದಾನಂ ಬ್ರಾಹ್ಮಣೇಭ್ಯೋ ಯಥಾವಿಧಿ।।

ಆದುದರಿಂದ ಈ ಶರೀರದೊಂದಿಗೆ ಹುಟ್ಟಿದವುಗಳನ್ನು ಕೊಟ್ಟು, ಬ್ರಾಹ್ಮಣರಿಗೆ ಯಥಾವಿದಿಯಾಗಿ ವಿಧಿವತ್ತಾಗಿ ಕೊಟ್ಟು, ಶಾಶ್ವತ ಕೀರ್ತಿಯನ್ನು ಹೊಂದುತ್ತೇನೆ.

03284036a ಹುತ್ವಾ ಶರೀರಂ ಸಂಗ್ರಾಮೇ ಕೃತ್ವಾ ಕರ್ಮ ಸುದುಷ್ಕರಂ।
03284036c ವಿಜಿತ್ಯ ವಾ ಪರಾನಾಜೌ ಯಶಃ ಪ್ರಾಪ್ಸ್ಯಾಮಿ ಕೇವಲಂ।।

ಸಂಗ್ರಾಮದಲ್ಲಿ ತುಂಬಾ ದುಷ್ಕರ ಕರ್ಮಗಳನ್ನು ಮಾಡಿ ಶರೀರವನ್ನು ಆಹುತಿಯಾಗಿತ್ತು ಅಥವಾ ರಣದಲ್ಲಿ ಶತ್ರುಗಳನ್ನು ಜಯಿಸಿ ಕೇವಲ ಯಶಸ್ಸನ್ನು ಪಡೆಯುತ್ತೇನೆ.

03284037a ಭೀತಾನಾಮಭಯಂ ದತ್ತ್ವಾ ಸಂಗ್ರಾಮೇ ಜೀವಿತಾರ್ಥಿನಾಂ।
03284037c ವೃದ್ಧಾನ್ಬಾಲಾನ್ದ್ವಿಜಾತೀಂಶ್ಚ ಮೋಕ್ಷಯಿತ್ವಾ ಮಹಾಭಯಾತ್।
03284038a ಪ್ರಾಪ್ಸ್ಯಾಮಿ ಪರಮಂ ಲೋಕೇ ಯಶಃ ಸ್ವರ್ಭಾನುಸೂದನ।
03284038c ಜೀವಿತೇನಾಪಿ ಮೇ ರಕ್ಷ್ಯಾ ಕೀರ್ತಿಸ್ತದ್ವಿದ್ಧಿ ಮೇ ವ್ರತಮ್।।

ಭೀತರಾದವರಿಗೆ ಅಭಯವನ್ನಿತ್ತು, ಜೀವಿತಾರ್ಥಿಗಳಾದ ವೃದ್ಧರನ್ನೂ ಬಾಲಕರನ್ನೂ ದ್ವಿಜರನ್ನೂ ಮಹಾಭಯದಿಂದ ಬಿಡುಗಡೆಮಾಡಿ, ಪರಮ ಲೋಕ-ಯಶಸ್ಸುಗಳನ್ನು ಪಡೆಯುತ್ತೇನೆ. ಜೀವವನ್ನು ಕೊಟ್ಟಾದರೂ ನನ್ನ ಕೀರ್ತಿಯನ್ನು ರಕ್ಷಿಸಿಕೊಳ್ಳುವುದು ನನ್ನ ವ್ರತವೆಂದು ತಿಳಿ.

03284039a ಸೋಽಹಂ ದತ್ತ್ವಾ ಮಘವತೇ ಭಿಕ್ಷಾಮೇತಾಮನುತ್ತಮಾಂ।
03284039c ಬ್ರಾಹ್ಮಣಚ್ಚದ್ಮಿನೇ ದೇವ ಲೋಕೇ ಗಂತಾ ಪರಾಂ ಗತಿಂ।।

ದೇವ! ಆದುದರಿಂದ ಬ್ರಾಹ್ಮಣವೇಷದಲ್ಲಿ ಬಂದ ಮಘವತನಿಗೆ ಈ ಅನುತ್ತಮ ಭಿಕ್ಷೆಗಳನ್ನಿತ್ತು ಪರಮ ಲೋಕಗಳ ಮಾರ್ಗದಲ್ಲಿ ಹೋಗುತ್ತೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಸೂರ್ಯಕರ್ಣಸಂವಾದೇ ಚತುರಶೀತ್ಯಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಸೂರ್ಯಕರ್ಣಸಂವಾದದಲ್ಲಿ ಇನ್ನೂರಾಎಂಭತ್ನಾಲ್ಕನೆಯ ಅಧ್ಯಾಯವು.