ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 283
ಸಾರ
ಯಮನು ಸಾವಿತ್ರಿಗೆ ನೀಡಿದ ವರದಂತೆ ದ್ಯುಮತ್ಸೇನನು ರಾಜ್ಯವನ್ನು ಹಿಂದಿರುಗಿ ಪಡೆಯುವುದು (1-11). ಸಾವಿತ್ರ್ಯುಪಾಖ್ಯಾನವನ್ನು ಪೂರ್ಣಗೊಳಿಸಿ ಮಾರ್ಕಂಡೇಯನು ತೆರಳಿದುದು (12-16).
03283001 ಮಾರ್ಕಂಡೇಯ ಉವಾಚ।
03283001a ತಸ್ಯಾಂ ರಾತ್ರ್ಯಾಂ ವ್ಯತೀತಾಯಾಮುದಿತೇ ಸೂರ್ಯಮಂಡಲೇ।
03283001c ಕೃತಪೂರ್ವಾಹ್ಣಿಕಾಃ ಸರ್ವೇ ಸಮೇಯುಸ್ತೇ ತಪೋಧನಾಃ।।
ಮಾರ್ಕಂಡೇಯನು ಹೇಳಿದನು: “ಆ ರಾತ್ರಿಯು ಕಳೆದು ಸೂರ್ಯನು ಮಂಡಲದಲ್ಲಿ ಉದಯಿಸಲು ಎಲ್ಲ ತಪೋಧನರೂ ಪುರ್ವಾಹ್ನೀಕಗಳನ್ನು ಮಾಡಿ ಪುನಃ ಸೇರಿದರು.
03283002a ತದೇವ ಸರ್ವಂ ಸಾವಿತ್ರ್ಯಾ ಮಹಾಭಾಗ್ಯಂ ಮಹರ್ಷಯಃ।
03283002c ದ್ಯುಮತ್ಸೇನಾಯ ನಾತೃಪ್ಯನ್ಕಥಯಂತಃ ಪುನಃ ಪುನಃ।।
ಆ ಎಲ್ಲ ಮಹರ್ಷಿಗಳು ಸಾವಿತ್ರಿಯ ಮಹಾಭಾಗ್ಯದ ಕುರಿತು ದ್ಯುಮತ್ಸೇನನಿಗೆ ಪುನಃ ಪುನಃ ಹೇಳಿಯೂ ತೃಪ್ತರಾಗಲಿಲ್ಲ.
03283003a ತತಃ ಪ್ರಕೃತಯಃ ಸರ್ವಾಃ ಶಾಲ್ವೇಭ್ಯೋಽಭ್ಯಾಗತಾ ನೃಪ।
03283003c ಆಚಖ್ಯುರ್ನಿಹತಂ ಚೈವ ಸ್ವೇನಾಮಾತ್ಯೇನ ತಂ ನೃಪಂ।।
ಆಗ ಶಾಲ್ವದ ಪ್ರಜೆಗಳೆಲ್ಲರೂ ನೃಪನ ಬಳಿಬಂದು ಆ ರಾಜನು ತನ್ನ ಅಮಾತ್ಯನಿಂದಲೇ ಕೊಲ್ಲಲ್ಪಟ್ಟಿದ್ದಾನೆ ಎಂದು ಹೇಳಿದರು.
03283004a ತಂ ಮಂತ್ರಿಣಾ ಹತಂ ಶ್ರುತ್ವಾ ಸಸಹಾಯಂ ಸಬಾಂಧವಂ।
03283004c ನ್ಯವೇದಯನ್ಯಥಾತತ್ತ್ವಂ ವಿದ್ರುತಂ ಚ ದ್ವಿಷದ್ಬಲಂ।।
ಅದೇ ಮಂತ್ರಿಯಿಂದ ಅವನ ಸಹಾಯಕರೂ ಸಬಾಂಧವರೂ ಹತರಾದರು. ಹಾಗೆಯೇ ಅವನ ಸೇನೆಯೂ ಇದನ್ನು ತಿಳಿದು ಪಲಾಯನ ಮಾಡಿದೆಯೆಂದೂ ಹೇಳಿದರು.
03283005a ಐಕಮತ್ಯಂ ಚ ಸರ್ವಸ್ಯ ಜನಸ್ಯಾಥ ನೃಪಂ ಪ್ರತಿ।
03283005c ಸಚಕ್ಷುರ್ವಾಪ್ಯಚಕ್ಷುರ್ವಾ ಸ ನೋ ರಾಜಾ ಭವತ್ವಿತಿ।।
“ಜನರೆಲ್ಲರೂ ಒಂದೇ ಮತದಿಂದ ಹಿಂದಿನ ನೃಪನನ್ನು ಬಯಸಿದ್ದಾರೆ. ಕಣ್ಣಿರಲಿ ಅಥವಾ ಕುರುಡನಾಗಿರಲಿ, ಅವನೇ ನಮ್ಮ ರಾಜನಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
03283006a ಅನೇನ ನಿಶ್ಚಯೇನೇಹ ವಯಂ ಪ್ರಸ್ಥಾಪಿತಾ ನೃಪ।
03283006c ಪ್ರಾಪ್ತಾನೀಮಾನಿ ಯಾನಾನಿ ಚತುರಂಗಂ ಚ ತೇ ಬಲಂ।।
ರಾಜ! ಇದೇ ನಿಶ್ಚಯಮಾಡಿ ನಿನ್ನ ಚತುರಂಗ ಬಲವನ್ನು ರಥಗಳನ್ನು ತೆಗೆದುಕೊಡು ನಿನ್ನನ್ನು ಕರೆದೊಯ್ಯಲು ಇಲ್ಲಿಗೆ ಬಂದಿದ್ದೇವೆ.
03283007a ಪ್ರಯಾಹಿ ರಾಜನ್ಭದ್ರಂ ತೇ ಘುಷ್ಟಸ್ತೇ ನಗರೇ ಜಯಃ।
03283007c ಅಧ್ಯಾಸ್ಸ್ವ ಚಿರರಾತ್ರಾಯ ಪಿತೃಪೈತಾಮಹಂ ಪದಂ।।
ರಾಜನ್! ಹೊರಡುವವನಾಗು. ನಿನಗೆ ಮಂಗಳವಾಗಲಿ. ನಿನ್ನ ನಗರದಲ್ಲಿ ಜಯಘೋಷವಾಗುತ್ತಿದೆ. ಇಂದಿನಿಂದ ನೀನು ನಿನ್ನ ಪಿತೃಪಿತಾಮಹರ ಪದವನ್ನು ಚಿರವಾಗಿ ಆಳು.”
03283008a ಚಕ್ಷುಷ್ಮಂತಂ ಚ ತಂ ದೃಷ್ಟ್ವಾ ರಾಜಾನಂ ವಪುಷಾನ್ವಿತಂ।
03283008c ಮೂರ್ಧಭಿಃ ಪತಿತಾಃ ಸರ್ವೇ ವಿಸ್ಮಯೋತ್ಫುಲ್ಲಲೋಚನಾಃ।।
ಅವನಿಗೆ ದೃಷ್ಟಿ ಬಂದುದನ್ನು ಮತ್ತು ಆರೋಗ್ಯದಿಂದಿರುವುದನ್ನು ಕಂಡು ವಿಸ್ಮಿತರಾಗಿ ರಾಜನಿಗೆ ಎಲ್ಲರೂ ಬಿದ್ದು ನಮಸ್ಕರಿಸಿದರು.
03283009a ತತೋಽಭಿವಾದ್ಯ ತಾನ್ವೃದ್ಧಾನ್ದ್ವಿಜಾನಾಶ್ರಮವಾಸಿನಃ।
03283009c ತೈಶ್ಚಾಭಿಪೂಜಿತಃ ಸರ್ವೈಃ ಪ್ರಯಯೌ ನಗರಂ ಪ್ರತಿ।।
ಆಗ ರಾಜನು ವೃದ್ಧರನ್ನೂ ವನಾಶ್ರಮವಾಸಿ ದ್ವಿಜರನ್ನೂ ಅಭಿವಂದಿಸಿ ಅವರೆಲ್ಲರನ್ನೂ ಪೂಜಿಸಿ ತನ್ನ ನಗರದ ಕಡೆ ಹೊರಟನು.
03283010a ಶೈಬ್ಯಾ ಚ ಸಹ ಸಾವಿತ್ರ್ಯಾ ಸ್ವಾಸ್ತೀರ್ಣೇನ ಸುವರ್ಚಸಾ।
03283010c ನರಯುಕ್ತೇನ ಯಾನೇನ ಪ್ರಯಯೌ ಸೇನಯಾ ವೃತಾ।।
ಶೈಬ್ಯೆಯೂ ಕೂಡ ಸಾವಿತ್ರಿಯನ್ನೊಡಗೂಡಿ ಸುಂದರವಾಗಿ ಅಲಂಕೃತಗೊಂಡ, ಹಲವಾರು ಜನರು ಎತ್ತಿಕೊಂಡು ಹೋಗುತ್ತಿದ್ದ ಪಲ್ಲಕ್ಕಿಯಲ್ಲಿ ಕುಳಿತುಕೊಂಡು, ಸೇನೆಯಿಂದ ಸುತ್ತುವರೆದು, ಅಲ್ಲಿಂದ ಹೊರಟಳು.
03283011a ತತೋಽಭಿಷಿಷಿಚುಃ ಪ್ರೀತ್ಯಾ ದ್ಯುಮತ್ಸೇನಂ ಪುರೋಹಿತಾಃ।
03283011c ಪುತ್ರಂ ಚಾಸ್ಯ ಮಹಾತ್ಮಾನಂ ಯೌವರಾಜ್ಯೇಽಭ್ಯಷೇಚಯನ್।।
ಅಲ್ಲಿ ಸಂತೋಷದಿಂದ ಪುರೋಹಿತರು ದ್ಯುಮತ್ಸೇನನನ್ನು ಅಭಿಷೇಕಿಸಿದರು ಮತ್ತು ಅವನ ಪುತ್ರ ಮಹಾತ್ಮನನ್ನು ಯುವರಾಜನನ್ನಾಗಿ ಅಭಿಷೇಕಿಸಿದರು.
03283012a ತತಃ ಕಾಲೇನ ಮಹತಾ ಸಾವಿತ್ರ್ಯಾಃ ಕೀರ್ತಿವರ್ಧನಂ।
03283012c ತದ್ವೈ ಪುತ್ರಶತಂ ಜಜ್ಞೇ ಶೂರಾಣಾಮನಿವರ್ತಿನಾಂ।।
ಬಹಳ ಸಮಯದ ನಂತರ ಸಾವಿತ್ರಿಯು ಕೀರ್ತಿವರ್ಧಕರಾದ ರಣದಲ್ಲಿ ಹಿಂಜರಿಯದ ನೂರು ಶೂರ ಮಕ್ಕಳಿಗೆ ಜನ್ಮವಿತ್ತಳು.
03283013a ಭ್ರಾತೄಣಾಂ ಸೋದರಾಣಾಂ ಚ ತಥೈವಾಸ್ಯಾಭವಚ್ಚತಂ।
03283013c ಮದ್ರಾಧಿಪಸ್ಯಾಶ್ವಪತೇರ್ಮಾಲವ್ಯಾಂ ಸುಮಹಾಬಲಂ।।
ಹಾಗೆಯೇ ಮದ್ರಾಧಿಪ ಅಶ್ವಪತಿಯೂ ಕೂಡ ಮಾಲವಿಯಲ್ಲಿ ಅವಳಿಗೆ ತಕ್ಕುದಾದ ಸುಮಹಾಬಲ ಸೋದರ ಅಣ್ಣತಮ್ಮಂದಿರನ್ನು ಪಡೆದನು.
03283014a ಏವಮಾತ್ಮಾ ಪಿತಾ ಮಾತಾ ಶ್ವಶ್ರೂಃ ಶ್ವಶುರ ಏವ ಚ।
03283014c ಭರ್ತುಃ ಕುಲಂ ಚ ಸಾವಿತ್ರ್ಯಾ ಸರ್ವಂ ಕೃಚ್ಚ್ರಾತ್ಸಮುದ್ಧೃತಂ।।
ಹೀಗೆ ಸಾವಿತ್ರಿಯು ತನ್ನ ತಂದೆತಾಯಿಯರನ್ನೂ, ಅತ್ತೆಮಾವರನ್ನೂ, ಪತಿಯ ಕುಲವನ್ನೂ ಎಲ್ಲರನ್ನೂ ಕಷ್ಟಗಳಿಂದ ಉದ್ಧರಿಸಿದಳು.
03283015a ತಥೈವೈಷಾಪಿ ಕಲ್ಯಾಣೀ ದ್ರೌಪದೀ ಶೀಲಸಮ್ಮತಾ।
03283015c ತಾರಯಿಷ್ಯತಿ ವಃ ಸರ್ವಾನ್ಸಾವಿತ್ರೀವ ಕುಲಾಂಗನಾ।।
ಸಾವಿತ್ರಿಯಂತೆ ಕುಲಾಂಗನೆ ಕಲ್ಯಾಣಿ ಶೀಲಸಮ್ಮತಾ ದ್ರೌಪದಿಯೂ ಕೂಡ ನಿಮ್ಮೆಲ್ಲರನ್ನೂ ದಾಟಿಸುತ್ತಾಳೆ.””
03283016 ವೈಶಂಪಾಯನ ಉವಾಚ।
03283016a ಏವಂ ಸ ಪಾಂಡವಸ್ತೇನ ಅನುನೀತೋ ಮಹಾತ್ಮನಾ।
03283016c ವಿಶೋಕೋ ವಿಜ್ವರೋ ರಾಜನ್ಕಾಮ್ಯಕೇ ನ್ಯವಸತ್ತದಾ।।
ವೈಶಂಪಾಯನನು ಹೇಳಿದನು: “ರಾಜನ್! ಹೀಗೆ ಆ ಮಹಾತ್ಮನಿಂದ ಬೀಳ್ಕೊಂಡು ಪಾಂಡವರು ವಿಶೋಕರೂ ವಿಜ್ವರರೂ ಆಗಿ ಕಾಮ್ಯಕದಲ್ಲಿ ವಾಸಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ತ್ರ್ಯಶೀತ್ಯಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಂಭತ್ಮೂರನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-42/100, ಅಧ್ಯಾಯಗಳು-580/1995, ಶ್ಲೋಕಗಳು-19409/73784.