282 ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 282

ಸಾರ

ಆಶ್ರಮದಲ್ಲಿದ್ದ ದ್ಯುಮತ್ಸೇನನು ಸಾವಿತ್ರಿಗೆ ಯಮನು ಕರುಣಿಸಿದ ವರ ಪ್ರಭಾವದಿಂದ ಕಣ್ಣುಗಳನ್ನು ಪಡೆದುದು; ಮಗನನ್ನು ಹುಡುಕಿ ಸೋತುದು; ಆಶ್ರಮವಾಸಿಗಳು ಸಂತೈಸಿದುದು (1-20). ಸಾವಿತ್ರಿ-ಸತ್ಯವಾನರ ಆಗಮನ, ನಡೆದ ವಿಷಯಗಳನ್ನು ಸಾವಿತ್ರಿಯು ತಿಳಿಸಿದುದು; ಅವಳ ಪ್ರಶಂಸೆ (21-44).

03282001 ಮಾರ್ಕಂಡೇಯ ಉವಾಚ।
03282001a ಏತಸ್ಮಿನ್ನೇವ ಕಾಲೇ ತು ದ್ಯುಮತ್ಸೇನೋ ಮಹಾವನೇ।
03282001c ಲಬ್ಧಚಕ್ಷುಃ ಪ್ರಸನ್ನಾತ್ಮಾ ದೃಷ್ಟ್ಯಾ ಸರ್ವಂ ದದರ್ಶ ಹ।।

ಮಾರ್ಕಂಡೇಯನು ಹೇಳಿದನು: “ಇದೇ ಸಮಯದಲ್ಲಿ ಮಹಾವನದಲ್ಲಿ ದ್ಯುಮತ್ಸೇನನು ತನ್ನ ಕಣ್ಣುಗಳನ್ನು ಪಡೆದು ಪ್ರಸನ್ನಾತ್ಮನಾದನು. ಕಣ್ಣುಗಳಿಂದ ಎಲ್ಲವನ್ನೂ ನೋಡಿದನು.

03282002a ಸ ಸರ್ವಾನಾಶ್ರಮಾಂಗತ್ವಾ ಶೈಬ್ಯಯಾ ಸಹ ಭಾರ್ಯಯಾ।
03282002c ಪುತ್ರಹೇತೋಃ ಪರಾಮಾರ್ತಿಂ ಜಗಾಮ ಮನುಜರ್ಷಭ।।

ಮಗನ ಕಾರಣದಿಂದ ಆ ಪರಮಾರ್ತಿ ಮನುಜರ್ಷಭನು ತನ್ನ ಪತ್ನಿ ಶೈಬ್ಯೆಯೊಡನೆ ಎಲ್ಲ ಆಶ್ರಮಗಳಿಗೂ ಹೋದನು.

03282003a ತಾವಾಶ್ರಮಾನ್ನದೀಶ್ಚೈವ ವನಾನಿ ಚ ಸರಾಂಸಿ ಚ।
03282003c ತಾಂಸ್ತಾನ್ದೇಶಾನ್ವಿಚಿನ್ವಂತೌ ದಂಪತೀ ಪರಿಜಗ್ಮತುಃ।।

ಆ ದಂಪತಿಗಳು ಆಶ್ರಮಗಳಲ್ಲಿ, ನದಿಗಳಲ್ಲಿ, ವನಗಳಲ್ಲಿ ಮತ್ತು ಸರೋವರಗಳಲ್ಲಿ ತಿರುಗಾಡಿ ಇವೆಲ್ಲ ಪ್ರದೇಶಗಳಲ್ಲಿಯೂ ಅವನನ್ನು ಹುಡುಕಿದರು.

03282004a ಶ್ರುತ್ವಾ ಶಬ್ದಂ ತು ಯತ್ಕಿಂ ಚಿದುನ್ಮುಖೌ ಸುತಶಮ್ಕಯಾ।
03282004c ಸಾವಿತ್ರೀಸಹಿತೋಽಭ್ಯೇತಿ ಸತ್ಯವಾನಿತ್ಯಧಾವತಾಂ।।

ಯಾವ ಶಬ್ಧವನ್ನು ಕೇಳಿದರೂ ಅವರು ಮೇಲೆ ನೋಡಿ ಮಗನನ್ನು ನೆನಪಿಸಿಕೊಂಡು ಸಾವಿತ್ರಿಯೊಂದಿಗೆ ಸತ್ಯವಾನನು ಬರುತ್ತಿದ್ದಾನೆ ಎಂದು ಅಲ್ಲಿಗೆ ಓಡುತ್ತಿದ್ದರು.

03282005a ಭಿನ್ನೈಶ್ಚ ಪರುಷೈಃ ಪಾದೈಃ ಸವ್ರಣೈಃ ಶೋಣಿತೋಕ್ಷಿತೈಃ।
03282005c ಕುಶಕಂಟಕವಿದ್ಧಾಂಗಾವುನ್ಮತ್ತಾವಿವ ಧಾವತಃ।।

ಹುಚ್ಚರಂತೆ ಅವರು ಸುತ್ತಾಡಿದರು; ದರ್ಬೆ ಹುಲ್ಲು ಮತ್ತು ಮುಳ್ಳುಗಳು ತಾಗಿ ಅವರ ದೇಹಗಳಲ್ಲಿ ಗೀರು ಬಿದ್ದಿದ್ದವು, ಅವರ ಕಾಲುಗಳು ಒಡೆದು, ಒರಟಾಗಿ, ಗಾಯಗೊಂಡು ರಕ್ತಸುರಿಸುತ್ತಿದ್ದವು.

03282006a ತತೋಽಭಿಸೃತ್ಯ ತೈರ್ವಿಪ್ರೈಃ ಸರ್ವೈರಾಶ್ರಮವಾಸಿಭಿಃ।
03282006c ಪರಿವಾರ್ಯ ಸಮಾಶ್ವಾಸ್ಯ ಸಮಾನೀತೌ ಸ್ವಮಾಶ್ರಮಂ।।

ಆಶ್ರಮದಲ್ಲಿ ವಾಸಿಸುತ್ತಿದ್ದ ಎಲ್ಲ ವಿಪ್ರರೂ ಅಲ್ಲಿಗೆ ಬಂದು ಅವರನ್ನು ಸುತ್ತುವರೆದು ಸಂತವಿಸಿ ತಮ್ಮ ತಮ್ಮ ಆಶ್ರಮಗಳಿಗೆ ತೆರಳಿದರು.

03282007a ತತ್ರ ಭಾರ್ಯಾಸಹಾಯಃ ಸ ವೃತೋ ವೃದ್ಧೈಸ್ತಪೋಧನೈಃ।
03282007c ಆಶ್ವಾಸಿತೋ ವಿಚಿತ್ರಾರ್ಥೈಃ ಪೂರ್ವರಾಜ್ಞಾಂ ಕಥಾಶ್ರಯೈಃ।।

ವೃದ್ಧ ತಪೋಧನರು ಪತ್ನಿಯ ಜೊತೆಯಿದ್ದ ಅವನ ಬಳಿ ಉಳಿದು ವಿಚಿತ್ರಾರ್ಥಗಳನ್ನು ಹೊಂದಿದ ಹಿಂದಿನ ರಾಜರುಗಳ ಕಥೆಗಳ ಮೂಲಕ ಸಮಾಧಾನಪಡಿಸಿದರು.

03282008a ತತಸ್ತೌ ಪುನರಾಶ್ವಸ್ತೌ ವೃದ್ಧೌ ಪುತ್ರದಿದೃಕ್ಷಯಾ।
03282008c ಬಾಲ್ಯೇ ವೃತ್ತಾನಿ ಪುತ್ರಸ್ಯ ಸ್ಮರಂತೌ ಭೃಶದುಃಖಿತೌ।।

ಆಗ ಸ್ವಲ್ಪ ಸಮಾಧಾನಗೊಂಡಿದ್ದ ಆ ವೃದ್ಧರೀರ್ವರು ಮಗನನ್ನು ನೋಡುವ ಆಸೆಯಿಂದ ಮಗನ ಬಾಲ್ಯದಲ್ಲಿ ನಡೆದುದನ್ನು ಸ್ಮರಿಸಿಕೊಂಡು ಬಹು ದುಃಖಿತರಾದರು.

03282009a ಪುನರುಕ್ತ್ವಾ ಚ ಕರುಣಾಂ ವಾಚಂ ತೌ ಶೋಕಕರ್ಶಿತೌ।
03282009c ಹಾ ಪುತ್ರ ಹಾ ಸಾಧ್ವಿ ವಧೂಃ ಕ್ವಾಸಿ ಕ್ವಾಸೀತ್ಯರೋದತಾಂ।।

ಶೋಕಕರ್ಶಿತರಾದ ಅವರು ಕರುಣಾಜನಕ ಮಾತುಗಳನ್ನೇ ಪುನಃ ಪುನಃ ಹೇಳುತ್ತಾ “ಹಾ ಮಗನೇ! ಹಾ ಸಾಧ್ವಿ ಸೊಸೆಯೇ! ಎಲ್ಲಿದ್ದೀರಿ? ಎಲ್ಲಿದ್ದೀರಿ?” ಎಂದು ರೋದಿಸಿದರು.

03282010 ಸುವರ್ಚಾ ಉವಾಚ।
03282010a ಯಥಾಸ್ಯ ಭಾರ್ಯಾ ಸಾವಿತ್ರೀ ತಪಸಾ ಚ ದಮೇನ ಚ।
03282010c ಆಚಾರೇಣ ಚ ಸಂಯುಕ್ತಾ ತಥಾ ಜೀವತಿ ಸತ್ಯವಾನ್।।

ಸುವರ್ಚನು ಹೇಳಿದನು: “ತಪಸ್ಸಿನಲ್ಲಿ, ದಮದಲ್ಲಿ, ಆಚಾರದಲ್ಲಿ ಸಮ್ಯುಕ್ತಳಾಗಿರುವ ಸಾವಿತ್ರಿಯು ಯಾರ ಪತ್ನಿಯೋ ಆ ಸತ್ಯವಾನನು ಜೀವಂತನಾಗಿದ್ದಾನೆ.”

03282011 ಗೌತಮ ಉವಾಚ।
03282011a ವೇದಾಃ ಸಾಂಗಾ ಮಯಾಧೀತಾಸ್ತಪೋ ಮೇ ಸಂಚಿತಂ ಮಹತ್।
03282011c ಕೌಮಾರಂ ಬ್ರಹ್ಮಚರ್ಯಂ ಮೇ ಗುರವೋಽಗ್ನಿಶ್ಚ ತೋಷಿತಾಃ।।

ಗೌತಮನು ಹೇಳಿದನು: “ನಾನು ವೇದಗಳನ್ನು ಸಾಂಗೋಪಾಂಗವಾಗಿ ತಿಳಿದಿದ್ದೇನೆ; ಬಹಳಷ್ಟು ತಪಸ್ಸನ್ನು ಸಂಗ್ರಹಿಸಿಕೊಂಡಿದ್ದೇನೆ, ಬಾಲಕನಾಗಿದ್ದಾಗ ಬ್ರಹ್ಮಚರ್ಯವನ್ನು ನಡೆಸಿದ್ದೆ ಹಾಗೂ ಗುರು ಮತ್ತು ಅಗ್ನಿಗಳನ್ನು ತೃಪ್ತಿಪಡಿಸಿದ್ದೇನೆ.

03282012a ಸಮಾಹಿತೇನ ಚೀರ್ಣಾನಿ ಸರ್ವಾಣ್ಯೇವ ವ್ರತಾನಿ ಮೇ।
03282012c ವಾಯುಭಕ್ಷೋಪವಾಸಶ್ಚ ಕುಶಲಾನಿ ಚ ಯಾನಿ ಮೇ।।
03282013a ಅನೇನ ತಪಸಾ ವೇದ್ಮಿ ಸರ್ವಂ ಪರಿಚಿಕೀರ್ಷಿತಂ।
03282013c ಸತ್ಯಮೇತನ್ನಿಬೋಧ ತ್ವಂ ಧ್ರಿಯತೇ ಸತ್ಯವಾನಿತಿ।।

ನಾನು ಏಕಾಗ್ರತೆಯಲ್ಲಿದ್ದುಕೊಂಡು ಎಲ್ಲ ವ್ರತಗಳನ್ನೂ ಮುಗಿಸಿದ್ದೇನೆ. ಗಾಳಿಯನ್ನು ಮಾತ್ರ ಸೇವಿಸಿ ಉಪವಾಸಮಾಡಿದ್ದೇನೆ ಮತ್ತು ಕುಶಲವನ್ನುಂಟುಮಾಡುವವುಗಳನ್ನು ಮಾಡಿದ್ದೇನೆ. ಈ ತಪಸ್ಸಿನಿಂದ ಏನು ಆಗಬೇಕೆಂದಿದೆಯೋ ಅವೆಲ್ಲವನ್ನು ತಿಳಿದಿದ್ದೇನೆ. ನನ್ನಿಂದ ಸತ್ಯವೇನೆಂದು ತಿಳಿ - ಸತ್ಯವಾನನು ಬದುಕಿದ್ದಾನೆ.”

03282014 ಶಿಷ್ಯ ಉವಾಚ।
03282014a ಉಪಾಧ್ಯಾಯಸ್ಯ ಮೇ ವಕ್ತ್ರಾದ್ಯಥಾ ವಾಕ್ಯಂ ವಿನಿಃಸೃತಂ।
03282014c ನೈತಜ್ಜಾತು ಭವೇನ್ಮಿಥ್ಯಾ ತಥಾ ಜೀವತಿ ಸತ್ಯವಾನ್।।

ಶಿಷ್ಯನು ಹೇಳಿದನು: “ನನ್ನ ಉಪಾಧ್ಯಾಯನ ಬಾಯಿಯಿಂದ ಹೊರಟ ವಾಕ್ಯವು ಎಂದೂ ಸುಳ್ಳಾಗಿಲ್ಲ. ಆದುದರಿಂದ ಸತ್ಯವಾನನು ಜೀವಿತನಾಗಿರಲೇ ಬೇಕು.”

03282015 ಋಷಯ ಊಚುಃ।
03282015a ಯಥಾಸ್ಯ ಭಾರ್ಯಾ ಸಾವಿತ್ರೀ ಸರ್ವೈರೇವ ಸುಲಕ್ಷಣೈಃ।
03282015c ಅವೈಧವ್ಯಕರೈರ್ಯುಕ್ತಾ ತಥಾ ಜೀವತಿ ಸತ್ಯವಾನ್।।

ಋಷಿಗಳು ಹೇಳಿದರು: “ಅವನ ಪತ್ನಿ ಸಾವಿತ್ರಿಯು ಅವೈಧವ್ಯವನ್ನು ಸೂಚಿಸುವ ಎಲ್ಲ ಸುಲಕ್ಷಣಗಳನ್ನೂ ಹೊಂದಿದ್ದಾಳೆ. ಆದುದರಿಂದ ಸತ್ಯವಾನನು ಬದುಕಿದ್ದಾನೆ.”

03282016 ಭಾರದ್ವಾಜ ಉವಾಚ।
03282016a ಯಥಾಸ್ಯ ಭಾರ್ಯಾ ಸಾವಿತ್ರೀ ತಪಸಾ ಚ ದಮೇನ ಚ।
03282016c ಆಚಾರೇಣ ಚ ಸಮ್ಯುಕ್ತಾ ತಥಾ ಜೀವತಿ ಸತ್ಯವಾನ್।।

ಭಾರದ್ವಾಜನು ಹೇಳಿದನು: “ತಪಸ್ಸಿನಲ್ಲಿ, ದಮದಲ್ಲಿ, ಆಚಾರದಲ್ಲಿ ಸಮ್ಯುಕ್ತಳಾಗಿರುವ ಸಾವಿತ್ರಿಯು ಯಾರ ಪತ್ನಿಯೋ ಆ ಸತ್ಯವಾನನು ಜೀವಂತನಾಗಿದ್ದಾನೆ.”

03282017 ದಾಲ್ಭ್ಯ ಉವಾಚ।
03282017a ಯಥಾ ದೃಷ್ಟಿಃ ಪ್ರವೃತ್ತಾ ತೇ ಸಾವಿತ್ರ್ಯಾಶ್ಚ ಯಥಾ ವ್ರತಂ।
03282017c ಗತಾಹಾರಮಕೃತ್ವಾ ಚ ತಥಾ ಜೀವತಿ ಸತ್ಯವಾನ್।।

ದಾಲ್ಭ್ಯನು ಹೇಳಿದನು: “ಹೇಗೆ ನಿನ್ನ ದೃಷ್ಟಿಯು ಹಿಂದಿರುಗಿತೋ, ಹೇಗೆ ಸಾವಿತ್ರಿಯು ಉಪವಾಸವಿದ್ದುಕೊಂಡು ವ್ರತವನ್ನು ಸಂಪೂರ್ಣಗೊಳಿಸಿದಳೋ ಹಾಗೆ ಸತ್ಯವಾನನೂ ಜೀವಿತನಾಗಿದ್ದಾನೆ.”

03282018 ಮಾಂಡವ್ಯ ಉವಾಚ।
03282018a ಯಥಾ ವದಂತಿ ಶಾಂತಾಯಾಂ ದಿಶಿ ವೈ ಮೃಗಪಕ್ಷಿಣಃ।
03282018c ಪಾರ್ಥಿವೀ ಚ ಪ್ರವೃತ್ತಿಸ್ತೇ ತಥಾ ಜೀವತಿ ಸತ್ಯವಾನ್।।

ಮಾಂಡವ್ಯನು ಹೇಳಿದನು: “ದಿಕ್ಕುಗಳಲ್ಲಿ ಮೃಗಪಕ್ಷಿಗಳು ಶಾಂತರಾಗಿ ಕೂಗುತ್ತಿರುವವು; ನೀನೂ ಕೂಡ ರಾಜನಂತೆ ನಡೆದುಕೊಳ್ಳುತ್ತಿರುವೆ; ಹಾಗೆಯೇ ಸತ್ಯವಾನನೂ ಜೀವಿತನಾಗಿದ್ದಾನೆ.”

03282019 ಧೌಮ್ಯ ಉವಾಚ।
03282019a ಸರ್ವೈರ್ಗುಣೈರುಪೇತಸ್ತೇ ಯಥಾ ಪುತ್ರೋ ಜನಪ್ರಿಯಃ।
03282019c ದೀರ್ಘಾಯುರ್ಲಕ್ಷಣೋಪೇತಸ್ತಥಾ ಜೀವತಿ ಸತ್ಯವಾನ್।।

ಧೌಮ್ಯನು ಹೇಳಿದನು: “ನಿನ್ನ ಪುತ್ರನು ಜನಪ್ರಿಯನೂ ಸರ್ವ ಗುಣೋಪೇತನೂ ದೀರ್ಘಾರ್ಯುಷ್ಯದ ಲಕ್ಷಣೋಪೇತನೂ ಆಗಿರುವುದರಿಂದ ಸತ್ಯವಾನನು ಜೀವಿತನಾಗಿದ್ದಾನೆ.””

03282020 ಮಾರ್ಕಂಡೇಯ ಉವಾಚ।
03282020a ಏವಮಾಶ್ವಾಸಿತಸ್ತೈಸ್ತು ಸತ್ಯವಾಗ್ಭಿಸ್ತಪಸ್ವಿಭಿಃ।
03282020c ತಾಂಸ್ತಾನ್ವಿಗಣಯನ್ನರ್ಥಾನವಸ್ಥಿತ ಇವಾಭವತ್।।

ಮಾರ್ಕಂಡೇಯನು ಹೇಳಿದನು: “ಈ ರೀತಿ ಸತ್ಯವಾದಿ ತಪಸ್ವಿಗಳು ಅವನಿಗೆ ಆಶ್ವಾಸನೆ ನೀಡುತ್ತಿರಲು ಅವರ ಹೇಳಿಕೆಗಳ ಅರ್ಥವನ್ನು ಗಣನೆಗೆ ತೆಗೆದುಕೊಂಡು ರಾಜನು ಸುಮ್ಮನಾದನು.

03282021a ತತೋ ಮುಹೂರ್ತಾತ್ಸಾವಿತ್ರೀ ಭರ್ತ್ರಾ ಸತ್ಯವತಾ ಸಹ।
03282021c ಆಜಗಾಮಾಶ್ರಮಂ ರಾತ್ರೌ ಪ್ರಹೃಷ್ಟಾ ಪ್ರವಿವೇಶ ಹ।।

ಆಗ ಸ್ವಲ್ಪ ಕ್ಷಣದಲ್ಲಿಯೇ ಸಾವಿತ್ರಿಯು ಪತಿ ಸತ್ಯವತನೊಂದಿಗೆ ಆಶ್ರಮಕ್ಕೆ ಬಂದು ಸಂತೋಷದಿಂದ ಪ್ರವೇಶಿಸಿದಳು.

03282022 ಬ್ರಾಹ್ಮಣಾ ಊಚುಃ।
03282022a ಪುತ್ರೇಣ ಸಂಗತಂ ತ್ವಾದ್ಯ ಚಕ್ಷುಷ್ಮಂತಂ ನಿರೀಕ್ಷ್ಯ ಚ।
03282022c ಸರ್ವೇ ವಯಂ ವೈ ಪೃಚ್ಚಾಮೋ ವೃದ್ಧಿಂ ತೇ ಪೃಥಿವೀಪತೇ।।

ಬ್ರಾಹ್ಮಣರು ಹೇಳಿದರು: “ಪೃಥಿವೀಪತೇ! ಇಂದು ಪುತ್ರನನ್ನು ಸೇರಿದುದನ್ನು ಕಣ್ಣುಗಳನ್ನು ಪಡೆದುದನ್ನು ನೋಡಿ ನಾವೆಲ್ಲರೂ ನಿನ್ನ ವೃದ್ಧಿಯ ಕುರಿತು ಕೇಳುತ್ತಿದ್ದೇವೆ.

03282023a ಸಮಾಗಮೇನ ಪುತ್ರಸ್ಯ ಸಾವಿತ್ರ್ಯಾ ದರ್ಶನೇನ ಚ।
03282023c ಚಕ್ಷುಷಶ್ಚಾತ್ಮನೋ ಲಾಭಾತ್ತ್ರಿಭಿರ್ದಿಷ್ಟ್ಯಾ ವಿವರ್ಧಸೇ।।

ಪುತ್ರನೊಂದಿಗೆ ಮಿಲನ, ಸಾವಿತ್ರಿಯ ದರ್ಶನ ಮತ್ತು ನಿನ್ನ ಕಣ್ಣುಗಳನ್ನು ಪಡೆದುದು ಈ ರೀತಿ ಮೂರು ವಿಧದ ಅದೃಷ್ಟವಂತನಾಗಿ ಲಾಭದಿಂದ ವರ್ಧಿಸುತ್ತಿದ್ದೀಯೆ.

03282024a ಸರ್ವೈರಸ್ಮಾಭಿರುಕ್ತಂ ಯತ್ತಥಾ ತನ್ನಾತ್ರ ಸಂಶಯಃ।
03282024c ಭೂಯೋ ಭೂಯಶ್ಚ ವೃದ್ಧಿಸ್ತೇ ಕ್ಷಿಪ್ರಮೇವ ಭವಿಷ್ಯತಿ।।

ನಾವೆಲ್ಲರೂ ಹೇಳಿದುದು ಹಾಗೆಯೇ ನಡೆಯಿತು ಎನ್ನುವುದರಲ್ಲಿ ಸಂಶಯವಿಲ್ಲ. ನಿನ್ನ ಬೆಳವಣಿಗೆಯಾಗಲಿ ಎಂದು ನಾವು ಪುನಃ ಪುನಃ ಹರಸುತ್ತೇವೆ.””

03282025 ಮಾರ್ಕಂಡೇಯ ಉವಾಚ।
03282025a ತತೋಽಗ್ನಿಂ ತತ್ರ ಸಂಜ್ವಾಲ್ಯ ದ್ವಿಜಾಸ್ತೇ ಸರ್ವ ಏವ ಹಿ।
03282025c ಉಪಾಸಾಂ ಚಕ್ರಿರೇ ಪಾರ್ಥ ದ್ಯುಮತ್ಸೇನಂ ಮಹೀಪತಿಂ।।

ಮಾರ್ಕಂಡೇಯನು ಹೇಳಿದನು: “ಪಾರ್ಥ! ಅನಂತರ ಅಲ್ಲಿ ಅಗ್ನಿಯನ್ನು ಉರಿಸಿ ಆ ಎಲ್ಲ ದ್ವಿಜರೂ ಮಹೀಪತಿ ದ್ಯುಮತ್ಸೇನನನ್ನು ಸುತ್ತುವರೆದು ಕುಳಿತುಕೊಂಡರು.

03282026a ಶೈಬ್ಯಾ ಚ ಸತ್ಯವಾಂಶ್ಚೈವ ಸಾವಿತ್ರೀ ಚೈಕತಃ ಸ್ಥಿತಾಃ।
03282026c ಸರ್ವೈಸ್ತೈರಭ್ಯನುಜ್ಞಾತಾ ವಿಶೋಕಾಃ ಸಮುಪಾವಿಶನ್।।

ಶೈಬ್ಯಾ, ಸತ್ಯವಾನ್ ಮತ್ತು ಸಾವಿತ್ರಿಯರು ಅಲ್ಲಿಯೇ ನಿಂತುಕೊಂಡಿದ್ದರು. ಆಗ ಅವರಿಗೆ ಎಲ್ಲರೂ ಕುಳಿತುಕೊಳ್ಳಲು ಅನುಮತಿ ನೀಡಲು ಸಂತೋಷದಿಂದ ಜೊತೆಯಲ್ಲಿ ಕುಳಿತುಕೊಂಡರು.

03282027a ತತೋ ರಾಜ್ಞಾ ಸಹಾಸೀನಾಃ ಸರ್ವೇ ತೇ ವನವಾಸಿನಃ।
03282027c ಜಾತಕೌತೂಹಲಾಃ ಪಾರ್ಥ ಪಪ್ರಚ್ಚುರ್ನೃಪತೇಃ ಸುತಂ।।

ಪಾರ್ಥ! ರಾಜನ ಜೊತೆಗೆ ಕುಳಿತಿದ್ದ ಆ ಎಲ್ಲ ವನವಾಸಿಗರೂ ಕುತೂಹಲರಾಗಿ ರಾಜಕುಮಾರನನ್ನು ಕೇಳಿದರು.

03282028a ಪ್ರಾಗೇವ ನಾಗತಂ ಕಸ್ಮಾತ್ಸಭಾರ್ಯೇಣ ತ್ವಯಾ ವಿಭೋ।
03282028c ವಿರಾತ್ರೇ ಚಾಗತಂ ಕಸ್ಮಾತ್ಕೋಽನುಬಂಧಶ್ಚ ತೇಽಭವತ್।।

“ವಿಭೋ! ಪತ್ನಿಯೊಂದಿಗೆ ನೀನು ಇದಕ್ಕೂ ಮೊದಲು ಏಕೆ ಬರಲಿಲ್ಲ? ಈ ವಿರಾತ್ರಿಯಲ್ಲಿ ಏಕೆ ಬಂದಿರಿ? ನಿಮ್ಮನ್ನು ಏನು ತಡೆಹಿಡಿಯಿತು?

03282029a ಸಂತಾಪಿತಃ ಪಿತಾ ಮಾತಾ ವಯಂ ಚೈವ ನೃಪಾತ್ಮಜ।
03282029c ನಾಕಸ್ಮಾದಿತಿ ಜಾನೀಮಸ್ತತ್ಸರ್ವಂ ವಕ್ತುಮರ್ಹಸಿ।।

ರಾಜಕುಮಾರ! ನಿನ್ನ ತಂದೆ-ತಾಯಂದಿರು ಹಾಗೆಯೇ ನಾವೂ ಚಿಂತಿತರಾಗಿದ್ದೆವು. ಇದು ಅಕಸ್ಮಾತ್ತಾಗಿ ಆಗಿರುವುದು ಎಂದು ನಾವೂ ಕೂಡ ತಿಳಿದಿದ್ದೇವೆ. ಎಲ್ಲವನ್ನೂ ಹೇಳಬೇಕು.”

03282030 ಸತ್ಯವಾನುವಾಚ।
03282030a ಪಿತ್ರಾಹಮಭ್ಯನುಜ್ಞಾತಃ ಸಾವಿತ್ರೀಸಹಿತೋ ಗತಃ।
03282030c ಅಥ ಮೇಽಭೂಚ್ಚಿರೋದುಃಖಂ ವನೇ ಕಾಷ್ಠಾನಿ ಭಿಂದತಃ।।

ಸತ್ಯವಾನನು ಹೇಳಿದನು: “ನಾನು ತಂದೆ-ತಾಯಿಯರ ಅನುಮತಿಯನ್ನು ಪಡೆದು ಸಾವಿತ್ರಿಯೊಡನೆ ಹೋಗಿದ್ದೆ. ಅಲ್ಲಿ ಕಟ್ಟಿಗೆಯನ್ನು ಕಡಿಯುತ್ತಿದ್ದಾಗ ತಲೆನೋವು ಉಂಟಾಯಿತು.

03282031a ಸುಪ್ತಶ್ಚಾಹಂ ವೇದನಯಾ ಚಿರಮಿತ್ಯುಪಲಕ್ಷಯೇ।
03282031c ತಾವತ್ಕಾಲಂ ಚ ನ ಮಯಾ ಸುಪ್ತಪೂರ್ವಂ ಕದಾ ಚನ।।

ವೇದನೆಯಿಂದ ತುಂಬಾ ಹೊತ್ತು ನಾನು ಮಲಗಿದ್ದೆ ಎಂದಿಷ್ಟೇ ನನಗೆ ತಿಳಿದಿದೆ. ಎಷ್ಟುಸಮಯದವರೆಗೆ ನಾನು ಮಲಗಿದ್ದೆನೋ ಅಷ್ಟು ಸಮಯ ನಾನು ಹಿಂದೆ ಎಂದೂ ಮಲಗಿರಲಿಲ್ಲ.

03282032a ಸರ್ವೇಷಾಮೇವ ಭವತಾಂ ಸಂತಾಪೋ ಮಾ ಭವೇದಿತಿ।
03282032c ಅತೋ ವಿರಾತ್ರಾಗಮನಂ ನಾನ್ಯದಸ್ತೀಹ ಕಾರಣಂ।।

ನೀವೆಲ್ಲರೂ ಇಲ್ಲಿ ಸಂತಾಪಪಡಬಾರದು ಎಂದು ವಿರಾತ್ರಿಯಾದರೂ ಬಂದಿದ್ದೇನೆ. ಬೇರೆ ಏನೂ ಇದಕ್ಕೆ ಕಾರಣವಿಲ್ಲ.”

03282033 ಗೌತಮ ಉವಾಚ।
03282033a ಅಕಸ್ಮಾಚ್ಚಕ್ಷುಷಃ ಪ್ರಾಪ್ತಿರ್ದ್ಯುಮತ್ಸೇನಸ್ಯ ತೇ ಪಿತುಃ।
03282033c ನಾಸ್ಯ ತ್ವಂ ಕಾರಣಂ ವೇತ್ಥ ಸಾವಿತ್ರೀ ವಕ್ತುಮರ್ಹತಿ।।

ಗೌತಮನು ಹೇಳಿದನು: “ನಿನ್ನ ಪಿತ ದ್ಯುಮತ್ಸೇನನ ಕಣ್ಣುಗಳು ಅಕಸ್ಮಾತ್ತಾಗಿ ಮರಳಿಬಂದವು. ಇದಕ್ಕೆ ಕಾರಣವು ನಿನಗೆ ತಿಳಿಯದಿದ್ದರೆ ಸಾವಿತ್ರಿಯು ಹೇಳಬೇಕು.

03282034a ಶ್ರೋತುಮಿಚ್ಚಾಮಿ ಸಾವಿತ್ರಿ ತ್ವಂ ಹಿ ವೇತ್ಥ ಪರಾವರಂ।
03282034c ತ್ವಾಂ ಹಿ ಜಾನಾಮಿ ಸಾವಿತ್ರಿ ಸಾವಿತ್ರೀಮಿವ ತೇಜಸಾ।।

ಸಾವಿತ್ರಿ! ಪರಾವರವನ್ನು ತಿಳಿದಿರುವ ನಿನ್ನನ್ನು ಕೇಳಲು ಬಯಸುತ್ತೇನೆ. ಸಾವಿತ್ರಿ! ನೀನು ಸಾವಿತ್ರಿಯ ತೇಜಸ್ಸಿನವಳು ಎಂದು ತಿಳಿದಿದ್ದೇನೆ.

03282035a ತ್ವಮತ್ರ ಹೇತುಂ ಜಾನೀಷೇ ತಸ್ಮಾತ್ಸತ್ಯಂ ನಿರುಚ್ಯತಾಂ।
03282035c ರಹಸ್ಯಂ ಯದಿ ತೇ ನಾಸ್ತಿ ಕಿಂ ಚಿದತ್ರ ವದಸ್ವ ನಃ।।

ಇವುಗಳ ಕಾರಣಗಳೆಲ್ಲವನ್ನೂ ನೀನು ತಿಳಿದಿರುವೆ. ಆದುದರಿಂದ ಸತ್ಯವು ಹೊರಬರಲಿ. ನಿನಗೆ ಇದರಲ್ಲಿ ರಹಸ್ಯವ್ಯಾವುದೂ ಇಲ್ಲದಿದ್ದರೆ ಹೇಳು.”

03282036 ಸಾವಿತ್ರ್ಯುವಾಚ।
03282036a ಏವಮೇತದ್ಯಥಾ ವೇತ್ಥ ಸಂಕಲ್ಪೋ ನಾನ್ಯಥಾ ಹಿ ವಃ।
03282036c ನ ಚ ಕಿಂ ಚಿದ್ರಹಸ್ಯಂ ಮೇ ಶ್ರೂಯತಾಂ ತಥ್ಯಮತ್ರ ಯತ್।।

ಸಾವಿತ್ರಿಯು ಹೇಳಿದಳು: “ನಡೆದಿರುವುದು ಎಲ್ಲವೂ ನಿಮಗೆ ತಿಳಿದೇ ಇದೆ. ಸಂಕಲ್ಪವು ಅನ್ಯಥಾ ಇಲ್ಲ. ಇದರಲ್ಲಿ ನನಗೆ ಏನೂ ರಹಸ್ಯವಿಲ್ಲ. ಸತ್ಯವನ್ನು ಕೇಳಿ.

03282037a ಮೃತ್ಯುರ್ಮೇ ಭರ್ತುರಾಖ್ಯಾತೋ ನಾರದೇನ ಮಹಾತ್ಮನಾ।
03282037c ಸ ಚಾದ್ಯ ದಿವಸಃ ಪ್ರಾಪ್ತಸ್ತತೋ ನೈನಂ ಜಹಾಮ್ಯಹಂ।।

ಮಹಾತ್ಮ ನಾರದನು ನನ್ನ ಪತಿಯ ಸಾವಿನ ಕುರಿತು ಹೇಳಿದ್ದನು. ಆದುದರಿಂದ ಇಂದಿನ ದಿವಸ ನಾನು ಅವನನ್ನು ಬಿಟ್ಟಿರಲಿಲ್ಲ.

03282038a ಸುಪ್ತಂ ಚೈನಂ ಯಮಃ ಸಾಕ್ಷಾದುಪಾಗಚ್ಚತ್ಸಕಿಂಕರಃ।
03282038c ಸ ಏನಮನಯದ್ಬದ್ಧ್ವಾ ದಿಶಂ ಪಿತೃನಿಷೇವಿತಾಂ।।

ಅವನು ಮಲಗಿದಾಗ ಸಾಕ್ಷಾತ್ ಯಮನೇ ಕಿಂಕರರೊಂದಿಗೆ ಅಲ್ಲಿಗೆ ಬಂದನು. ಅವನು ಇವನನ್ನು ಬಂಧಿಸಿ ಪಿತೃಗಳು ವಾಸಿಸುವ ದಿಕ್ಕಿಗೆ ಕರೆದೊಯ್ದನು.

03282039a ಅಸ್ತೌಷಂ ತಮಹಂ ದೇವಂ ಸತ್ಯೇನ ವಚಸಾ ವಿಭುಂ।
03282039c ಪಂಚ ವೈ ತೇನ ಮೇ ದತ್ತಾ ವರಾಃ ಶೃಣುತ ತಾನ್ಮಮ।।

ಆಗ ನಾನು ಆ ದೇವ ವಿಭುವಿಗೆ ಸತ್ಯ ವಚನಗಳಿಂದ ತೃಪ್ತಿಗೊಳಿಸಿದೆ ಮತ್ತು ಅವನು ನನಗೆ ಐದು ವರಗಳನ್ನು ಕೊಟ್ಟನು. ನನಗಿತ್ತ ಆ ವರಗಳನ್ನು ಕೇಳಿ.

03282040a ಚಕ್ಷುಷೀ ಚ ಸ್ವರಾಜ್ಯಂ ಚ ದ್ವೌ ವರೌ ಶ್ವಶುರಸ್ಯ ಮೇ।
03282040c ಲಬ್ಧಂ ಪಿತುಃ ಪುತ್ರಶತಂ ಪುತ್ರಾಣಾಮಾತ್ಮನಃ ಶತಂ।।

ಕಣ್ಣುಗಳು ಮತ್ತು ಸ್ವರಾಜ್ಯ – ಈ ಎರಡು ವರಗಳು ನನ್ನ ಮಾವನಿಗೆ. ನೂರು ಮಕ್ಕಳಾಗಬೇಕೆಂದು ನನ್ನ ತಂದೆಗೆ ಮತ್ತು ನೂರು ಮಕ್ಕಳು ನನಗೆ.

03282041a ಚತುರ್ವರ್ಷಶತಾಯುರ್ಮೇ ಭರ್ತಾ ಲಬ್ಧಶ್ಚ ಸತ್ಯವಾನ್।
03282041c ಭರ್ತುರ್ಹಿ ಜೀವಿತಾರ್ಥಂ ತು ಮಯಾ ಚೀರ್ಣಂ ಸ್ಥಿರಂ ವ್ರತಂ।।

ನನ್ನ ಪತಿ ಸತ್ಯವಾನನಿಗೆ ನಾನೂರು ವರ್ಷಗಳ ಆಯಸ್ಸೂ ದೊರೆಯಿತು. ಪತಿಯ ಜೀವಕ್ಕಾಗಿಯೇ ನಾನು ಆ ಚೀರ್ಣಸ್ಥಿರ ವ್ರತವನ್ನು ಕೈಗೊಂಡಿದ್ದೆನು.

03282042a ಏತತ್ಸತ್ಯಂ ಮಯಾಖ್ಯಾತಂ ಕಾರಣಂ ವಿಸ್ತರೇಣ ವಃ।
03282042c ಯಥಾ ವೃತ್ತಂ ಸುಖೋದರ್ಕಮಿದಂ ದುಃಖಂ ಮಹನ್ಮಮ।।

ಸತ್ಯವಾದ ಈ ಕಾರಣವನ್ನು ನಾನು ವಿಸ್ತಾರವಾಗಿ ಹೇಳಿದ್ದೇನೆ. ನಾನು ಅನುಭವಿಸುತ್ತಿದ್ದ ಈ ಮಹಾದುಃಖವು ಇಂದು ಸಂತೋಷವಾಗಿ ಪರಿಣಮಿಸಿತು.”

03282043 ಋಷಯ ಊಚುಃ।
03282043a ನಿಮಜ್ಜಮಾನಂ ವ್ಯಸನೈರಭಿದ್ರುತಂ। ಕುಲಂ ನರೇಂದ್ರಸ್ಯ ತಮೋಮಯೇ ಹ್ರದೇ।
03282043c ತ್ವಯಾ ಸುಶೀಲೇ ಧೃತಧರ್ಮಪುಣ್ಯಯಾ। ಸಮುದ್ಧೃತಂ ಸಾಧ್ವಿ ಪುನಃ ಕುಲೀನಯಾ।।

ಋಷಿಗಳು ಹೇಳಿದರು: “ಈ ನರೇಂದ್ರನ ಕುಲವು ವ್ಯಸನಗಳಿಂದ ಘಾತಿಗೊಂಡು ಹೆಚ್ಚು ಹೆಚ್ಚು ಕತ್ತಲಿನಲ್ಲಿ ಮುಳುಗಿಕೊಂಡಿತ್ತು. ಸುಶೀಲೆಯೂ, ಧರ್ಮಪುಣ್ಯಗಳಲ್ಲಿ ಧೃತಳಾಗಿರುವ, ಸಾಧ್ವಿ, ಮತ್ತು ಉತ್ತಮ ಕುಲದಲ್ಲಿ ಜನಿಸಿದ ನಿನ್ನಿಂದ ಅದು ಮೇಲಕ್ಕೆತ್ತಲ್ಪಟ್ಟಿತು.””

03282044 ಮಾರ್ಕಂಡೇಯ ಉವಾಚ।
03282044a ತಥಾ ಪ್ರಶಸ್ಯ ಹ್ಯಭಿಪೂಜ್ಯ ಚೈವ ತೇ। ವರಸ್ತ್ರಿಯಂ ತಾಮೃಷಯಃ ಸಮಾಗತಾಃ।
03282044c ನರೇಂದ್ರಮಾಮಂತ್ರ್ಯ ಸಪುತ್ರಮಂಜಸಾ। ಶಿವೇನ ಜಗ್ಮುರ್ಮುದಿತಾಃ ಸ್ವಮಾಲಯಂ।।

ಮಾರ್ಕಂಡೇಯನು ಹೇಳಿದನು: “ಈ ರೀತಿ ಆ ವರಸ್ತ್ರೀಯನ್ನು ಪ್ರಶಂಸಿಸಿ, ಗೌರವಿಸಿ ಅಲ್ಲಿ ಸೇರಿದ್ದ ಅ ಋಷಿಗಳು ನರೇಂದ್ರ ಮತ್ತು ಅವನ ಮಗನ ಅನುಮತಿಯನ್ನು ಪಡೆದು ತಮ್ಮ ತಮ್ಮ ಆಶ್ರಮಗಳಿಗೆ ಸಂತೋಷದಿಂದ ಹೊರಟು ಹೋದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ದ್ವೈಶೀತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಂಭತ್ತೆರಡನೆಯ ಅಧ್ಯಾಯವು.