281 ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 281

ಸಾರ

ಕಟ್ಟಿಗೆ ಕಡಿಯುತ್ತಿರುವಾಗ ಆಯಾಸಗೊಂಡ ಸತ್ಯವಾನನು ತನ್ನ ತಲೆಯನ್ನು ಸಾವಿತ್ರಿಯ ತೊಡೆಯಮೇಲಿರಿಸಿ ಮಲಗಿಕೊಳ್ಳಲು ಅಲ್ಲಿಗೆ ಆಗಮಿಸಿದ ಅಮಾನುಷ ಪುರುಷನೋರ್ವನನ್ನು ಕಂಡ ಸಾವಿತ್ರಿಯು ಅವನು ಯಮನಿರಬಹುದೆಂದು ತಿಳಿದು ಮಾತನಾಡಿಸಿದುದು (1-11). ಸಾವಿತ್ರಿಯು ಪತಿವ್ರತೆ ಮತ್ತು ತಪೋನ್ವಿತೆಯಾಗಿರುವುದರಿಂದ ತಾನು ಅವಳೊಡನೆ ಮಾತನಾಡಬಲ್ಲೆನೆಂದು ಹೇಳಿ ಯಮನು ತನ್ನ ಪರಿಚಯ ಮಾಡಿಕೊಂಡು, ಕ್ಷೀಣಾಯು ಸತ್ಯವಾನನನ್ನು ಬಂಧಿಸಿ ತೆಗೆದುಕೊಂಡು ಹೋಗಲು ಬಂದಿದ್ದೇನೆಂದು ಹೇಳಿದುದು; ಸತ್ಯವತನ ದೇಹದಿಂದ ಅಂಗುಷ್ಠದ ಗಾತ್ರದಲ್ಲಿದ್ದ ಪುರುಷನನ್ನು ಪಾಶಕ್ಕೆ ಕಟ್ಟಿ ಎಳೆದು ಹೊರತೆಗೆದು ಕೊಂಡೊಯ್ದುದು; ಸಾವಿತ್ರಿಯು ಅವನನ್ನು ಹಿಂಬಾಲಿಸಿದುದು (12-16). ಯಮನು ಹಿಂದಿರುಗಿ ಹೋಗೆಂದು ಹೇಳಿದರೂ ಸಾವಿತ್ರಿಯು ಅವನನ್ನು ಹಿಂಬಾಲಿಸಿ, ಮಾರ್ಗದಲ್ಲಿ ಅವನೊಂದಿಗೆ ಮಾತನಾಡುತ್ತಾ ನಾಲ್ಕು ವರಗಳನ್ನು ಪಡೆದುದು (17-45). ಐದನೆಯ ವರವಾಗಿ ಸತ್ಯವಾನನ ಜೀವವನ್ನು ಕೇಳಲು ಯಮನು ಕರುಣಿಸಿದ್ದು (46-59). ಎಚ್ಚೆತ್ತ ಸತ್ಯವಾನನೊಂದಿಗೆ ರಾತ್ರಿಯೇ ಆಶ್ರಮಕ್ಕೆ ಹಿಂದಿರುಗಿ ಬರುವುದು (60-108).

03281001 ಮಾರ್ಕಂಡೇಯ ಉವಾಚ।
03281001a ಅಥ ಭಾರ್ಯಾಸಹಾಯಃ ಸ ಫಲಾನ್ಯಾದಾಯ ವೀರ್ಯವಾನ್।
03281001c ಕಠಿನಂ ಪೂರಯಾಮಾಸ ತತಃ ಕಾಷ್ಠಾನ್ಯಪಾಟಯತ್।।

ಮಾರ್ಕಂಡೇಯನು ಹೇಳಿದನು: “ಅನಂತರ ಆ ವೀರ್ಯವಂತನು ಪತ್ನಿಯ ಸಹಾಯದಿಂದ ಹಣ್ಣುಗಳನ್ನು ಕಿತ್ತು ಬುಟ್ಟಿಯಲ್ಲಿ ತುಂಬಿಸಿ ಕಟ್ಟಿಗೆಯನ್ನು ಕಡಿಯಲು ಪ್ರಾರಂಭಿಸಿದನು.

03281002a ತಸ್ಯ ಪಾಟಯತಃ ಕಾಷ್ಠಂ ಸ್ವೇದೋ ವೈ ಸಮಜಾಯತ।
03281002c ವ್ಯಾಯಾಮೇನ ಚ ತೇನಾಸ್ಯ ಜಜ್ಞೇ ಶಿರಸಿ ವೇದನಾ।।

ಅವನು ಕಟ್ಟಿಗೆಯನ್ನು ಕಡಿಯುತ್ತಿರಲು ಚೆನ್ನಾಗಿ ಬೆವರಿಳಿಯಿತು ಮತ್ತು ಆ ಶ್ರಮದಿಂದ ತಲೆ ನೋವು ಬಂದಿತು.

03281003a ಸೋಽಭಿಗಮ್ಯ ಪ್ರಿಯಾಂ ಭಾರ್ಯಾಮುವಾಚ ಶ್ರಮಪೀಡಿತಃ।
03281003c ವ್ಯಾಯಾಮೇನ ಮಮಾನೇನ ಜಾತಾ ಶಿರಸಿ ವೇದನಾ।।

ಆಯಾಸಗೊಂಡ ಅವನು ಪ್ರಿಯ ಭಾರ್ಯೆಯ ಬಳಿಬಂದು ಹೇಳಿದನು: “ನನ್ನ ಈ ಶ್ರಮದಿಂದ ತಲೆ ನೋಯುತ್ತಿದೆ.

03281004a ಅಂಗಾನಿ ಚೈವ ಸಾವಿತ್ರಿ ಹೃದಯಂ ದೂಯತೀವ ಚ।
03281004c ಅಸ್ವಸ್ಥಮಿವ ಚಾತ್ಮಾನಂ ಲಕ್ಷಯೇ ಮಿತಭಾಷಿಣಿ।।

ಸಾವಿತ್ರಿ! ಅಂಗಗಳೂ ಹೃದಯವೂ ನೋಯುತ್ತಿವೆ. ಮಿತಭಾಷಿಣಿ! ನಾನು ಅಸ್ವಸ್ಥನಾಗಿದ್ದೇನೆಂದು ತೋರುತ್ತಿದೆ.

03281005a ಶೂಲೈರಿವ ಶಿರೋ ವಿದ್ಧಮಿದಂ ಸಂಲಕ್ಷಯಾಮ್ಯಹಂ।
03281005c ತತ್ ಸ್ವಪ್ತುಮಿಚ್ಚೇ ಕಲ್ಯಾಣಿ ನ ಸ್ಥಾತುಂ ಶಕ್ತಿರಸ್ತಿ ಮೇ।।

ಶೂಲಗಳಿಂದ ತಲೆಯು ತಿವಿಯಲ್ಪಡುತ್ತಿವೆಯೋ ಎಂದು ಅನಿಸುತ್ತಿದೆ. ಕಲ್ಯಾಣಿ! ಮಲಗಲು ಬಯಸುತ್ತೇನೆ. ನಿಂತುಕೊಂಡಿರಲು ನನ್ನಲ್ಲಿ ಶಕ್ತಿಯಿಲ್ಲ.”

03281006a ಸಮಾಸಾದ್ಯಾಥ ಸಾವಿತ್ರೀ ಭರ್ತಾರಮುಪಗೂಃಯ ಚ।
03281006c ಉತ್ಸಂಗೇಽಸ್ಯ ಶಿರಃ ಕೃತ್ವಾ ನಿಷಸಾದ ಮಹೀತಲೇ।।

ತಕ್ಷಣವೇ ಸಾವಿತ್ರಿಯು ಪತಿಯ ಬಳಿಬಂದು ನೆಲದ ಮೇಲೆ ಕುಳಿತುಕೊಂಡು ಅವನ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡಳು.

03281007a ತತಃ ಸಾ ನಾರದವಚೋ ವಿಮೃಶಂತೀ ತಪಸ್ವಿನೀ।
03281007c ತಂ ಮುಹೂರ್ತಂ ಕ್ಷಣಂ ವೇಲಾಂ ದಿವಸಂ ಚ ಯುಯೋಜ ಹ।।

ಆಗ ಆ ತಪಸ್ವಿನಿಯು ನಾರದನ ಮಾತುಗಳನ್ನು ನೆನಪಿಸಿಕೊಂಡು ಆ ಮುಹೂರ್ತ, ಕ್ಷಣ, ವೇಳೆ. ದಿವಸವು ಕೂಡಿಬಂದಿದೆಯೆಂದು ಅರ್ಥಮಾಡಿಕೊಂಡಳು.

03281008a ಮುಹೂರ್ತಾದಿವ ಚಾಪಶ್ಯತ್ಪುರುಷಂ ಪೀತವಾಸಸಂ।
03281008c ಬದ್ಧಮೌಲಿಂ ವಪುಷ್ಮಂತಮಾದಿತ್ಯಸಮತೇಜಸಂ।।

ಮುಹೂರ್ತದಲ್ಲಿಯೇ ಅವಳು ಹಳದಿಬಣ್ಣದ ವಸ್ತ್ರಗಳನ್ನುಟ್ಟಿದ್ದ, ಕಿರೀಟವನ್ನು ಕಟ್ಟಿದ್ದ, ತೇಜಸ್ಸಿನಲ್ಲಿ ಆದಿತ್ಯನಂತಿದ್ದ ಹೊಳೆಯುತ್ತಿದ್ದ ಪುರುಷನೋರ್ವನನ್ನು ಕಂಡಳು.

03281009a ಶ್ಯಾಮಾವದಾತಂ ರಕ್ತಾಕ್ಷಂ ಪಾಶಹಸ್ತಂ ಭಯಾವಹಂ।
03281009c ಸ್ಥಿತಂ ಸತ್ಯವತಃ ಪಾರ್ಶ್ವೇ ನಿರೀಕ್ಷಂತಂ ತಮೇವ ಚ।।

ಅವನ ದೇಹವು ಕಪ್ಪಾಗಿ ಹೊಳೆಯುತ್ತಿತ್ತು, ಕಣ್ಣುಗಳು ರಕ್ತದಂತೆ ಕೆಂಪಾಗಿದ್ದವು. ಕೈಯಲ್ಲಿ ಪಾಶವನ್ನು ಹಿಡಿದಿದ್ದನು ಮತ್ತು ಅವನ ಮುಖವು ಭಯವನ್ನುಂಟುಮಾಡುತ್ತಿತ್ತು. ಅವನು ಸತ್ಯವಾನನ ಪಕ್ಕದಲ್ಲಿ ಅವನನ್ನೇ ನೋಡುತ್ತಾ ನಿಂತುಕೊಂಡನು.

03281010a ತಂ ದೃಷ್ಟ್ವಾ ಸಹಸೋತ್ಥಾಯ ಭರ್ತುರ್ನ್ಯ್ಯಸ್ಯ ಶನೈಃ ಶಿರಃ।
03281010c ಕೃತಾಂಜಲಿರುವಾಚಾರ್ತಾ ಹೃದಯೇನ ಪ್ರವೇಪತಾ।।

ಅವನನ್ನು ನೋಡಿದ ತಕ್ಷಣವೇ ಪತಿಯ ತಲೆಯನ್ನು ನಿಧಾನವಾಗಿ ನೆಲದ ಮೇಲಿರಿಸಿ ಎದ್ದು ಅಂಜಲೀಬದ್ಧಳಾಗಿ ಹೃದಯದಲ್ಲಿ ಕಂಪಿಸುತ್ತಾ ಆರ್ತಳಾಗಿ ಹೇಳಿದಳು.

03281011a ದೈವತಂ ತ್ವಾಭಿಜಾನಾಮಿ ವಪುರೇತದ್ಧ್ಯಮಾನುಷಂ।
03281011c ಕಾಮಯಾ ಬ್ರೂಹಿ ಮೇ ದೇವ ಕಸ್ತ್ವಂ ಕಿಂ ಚ ಚಿಕೀರ್ಷಸಿ।।

“ಅಮಾನುಷ ದೇಹವನ್ನು ಧರಿಸಿದ ನೀನು ದೇವತೆಯೆಂದು ತಿಳಿಯುತ್ತೇನೆ. ದೇವ! ನಿನಗೆ ಇಷ್ಟವಾದರೆ ಹೇಳು. ನೀನು ಯಾರು? ಮತ್ತು ಏನು ಮಾಡಬಯಸುತ್ತಿರುವೆ?”

03281012 ಯಮ ಉವಾಚ।
03281012a ಪತಿವ್ರತಾಸಿ ಸಾವಿತ್ರಿ ತಥೈವ ಚ ತಪೋನ್ವಿತಾ।
03281012c ಅತಸ್ತ್ವಾಮಭಿಭಾಷಾಮಿ ವಿದ್ಧಿ ಮಾಂ ತ್ವಂ ಶುಭೇ ಯಮಂ।।

ಯಮನು ಹೇಳಿದನು: “ಸಾವಿತ್ರಿ! ಪತಿವ್ರತೆ ಮತ್ತು ತಪೋನ್ವಿತೆಯಾಗಿರುವೆ. ಆದುದರಿಂದಲೆ ನಾನು ನಿನ್ನೊಡನೆ ಮಾತನಾಡಬಲ್ಲೆ. ಶುಭೇ! ನನ್ನನ್ನು ಯಮನೆಂದು ತಿಳಿ.

03281013a ಅಯಂ ತೇ ಸತ್ಯವಾನ್ಭರ್ತಾ ಕ್ಷೀಣಾಯುಃ ಪಾರ್ಥಿವಾತ್ಮಜಃ।
03281013c ನೇಷ್ಯಾಮ್ಯೇನಮಹಂ ಬದ್ಧ್ವಾ ವಿದ್ಧ್ಯೇತನ್ಮೇ ಚಿಕೀರ್ಷಿತಂ।।

ಈ ನಿನ್ನ ಪತಿ, ರಾಜಕುಮಾರ ಸತ್ಯವಾನನು ಕ್ಷೀಣಾಯುವು. ಇವನನ್ನು ಬಂಧಿಸಿ ನನ್ನೊಡನೆ ಕರೆದುಕೊಂಡು ಹೋಗಲು ಬಯಸಿ ಬಂದಿದ್ದೇನೆ.””

03281014 ಮಾರ್ಕಂಡೇಯ ಉವಾಚ।
03281014a ಇತ್ಯುಕ್ತ್ವಾ ಪಿತೃರಾಜಸ್ತಾಂ ಭಗವಾನ್ಸ್ವಂ ಚಿಕೀರ್ಷಿತಂ।
03281014c ಯಥಾವತ್ಸರ್ವಮಾಖ್ಯಾತುಂ ತತ್ಪ್ರಿಯಾರ್ಥಂ ಪ್ರಚಕ್ರಮೇ।।

ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿ ಭಗವಾನ್ ಪಿತೃರಾಜನು ಅವಳಿಗೆ ಸಂತೋಷಗೊಳಿಸಲು ಯಥಾವತ್ತಾಗಿ ಎಲ್ಲವನ್ನೂ ಹೇಳಲು ಪ್ರಾರಂಭಿಸಿದನು.

03281015a ಅಯಂ ಹಿ ಧರ್ಮಸಮ್ಯುಕ್ತೋ ರೂಪವಾನ್ಗುಣಸಾಗರಃ।
03281015c ನಾರ್ಹೋ ಮತ್ಪುರುಷೈರ್ನೇತುಮತೋಽಸ್ಮಿ ಸ್ವಯಮಾಗತಃ।।

“ಇವನಾದರೋ ಧರ್ಮಸಂಯುಕ್ತನೂ, ರೂಪವಂತನೂ, ಗುಣಸಾಗರನೂ ಆಗಿದ್ದಾನೆ. ನನ್ನ ಪುರುಷರಿಂದ ಎಳೆದುಕೊಂಡು ಹೋಗಲ್ಪಡಲು ಇವನು ಅರ್ಹನಲ್ಲವಾದುದರಿಂದ ನಾನೇ ಇಲ್ಲಿಗೆ ಬಂದಿದ್ದೇನೆ.”

03281016a ತತಃ ಸತ್ಯವತಃ ಕಾಯಾತ್ಪಾಶಬದ್ಧಂ ವಶಂ ಗತಂ।
03281016c ಅಂಗುಷ್ಠಮಾತ್ರಂ ಪುರುಷಂ ನಿಶ್ಚಕರ್ಷ ಯಮೋ ಬಲಾತ್।।

ಆಗ ಯಮನು ಬಲವನ್ನುಪಯೋಗಿಸಿ ಸತ್ಯವತನ ದೇಹದಿಂದ ಅಂಗುಷ್ಠದ ಗಾತ್ರದಲ್ಲಿದ್ದ ಪುರುಷನನ್ನು ಪಾಶಕ್ಕೆ ಕಟ್ಟಿ ಎಳೆದು ಹೊರತೆಗೆದನು.

03281017a ತತಃ ಸಮುದ್ಧೃತಪ್ರಾಣಂ ಗತಶ್ವಾಸಂ ಹತಪ್ರಭಂ।
03281017c ನಿರ್ವಿಚೇಷ್ಟಂ ಶರೀರಂ ತದ್ಬಭೂವಾಪ್ರಿಯದರ್ಶನಂ।।

ಪ್ರಾಣವು ಹೊರಟುಹೋಗಲು ಶ್ವಾಸವು ನಿಂತಿತು, ಕಳೆಯು ಕುಂದಿತು ಮತ್ತು ನಿರ್ವಿಚೇಷ್ಟವಾದ ಆ ಶರೀರವು ನೋಡಲು ಅಪ್ರಿಯವಾಗಿ ಕಂಡಿತು.

03281018a ಯಮಸ್ತು ತಂ ತಥಾ ಬದ್ಧ್ವಾ ಪ್ರಯಾತೋ ದಕ್ಷಿಣಾಮುಖಃ।
03281018c ಸಾವಿತ್ರೀ ಚಾಪಿ ದುಃಖಾರ್ತಾ ಯಮಮೇವಾನ್ವಗಚ್ಚತ।
03281018E ನಿಯಮವ್ರತಸಂಸಿದ್ಧಾ ಮಹಾಭಾಗಾ ಪತಿವ್ರತಾ।।

ಯಮನು ಅವನನ್ನು ಬಂಧಿಸಿ ದಕ್ಷಿಣಾಭಿಮುಖವಾಗಿ ಹೊರಟನು. ನಿಯಮ ವ್ರತಗಳಿಂದ ಸಂಸಿದ್ಧಳಾಗಿದ್ದ ಆ ಮಹಾಭಾಗೆ ಪ್ರತಿವ್ರತೆ ಸಾವಿತ್ರಿಯೂ ಕೂಡ ದುಃಖಾರ್ತಳಾಗಿ ಯಮನನ್ನು ಹಿಂಬಾಲಿಸಿದಳು.

03281019 ಯಮ ಉವಾಚ।
03281019a ನಿವರ್ತ ಗಚ್ಚ ಸಾವಿತ್ರಿ ಕುರುಷ್ವಾಸ್ಯೌರ್ಧ್ವದೇಹಿಕಂ।
03281019c ಕೃತಂ ಭರ್ತುಸ್ತ್ವಯಾನೃಣ್ಯಂ ಯಾವದ್ಗಮ್ಯಂ ಗತಂ ತ್ವಯಾ।।

ಯಮನು ಹೇಳಿದನು: “ಸಾವಿತ್ರಿ! ಹಿಂದಿರುಗಿ ಹೋಗು ಮತ್ತು ಅವನ ಔರ್ಧ್ವದೇಹಿಕ ಕ್ರಿಯೆಗಳನ್ನು ಮಾಡು. ನೀನು ನಿನ್ನ ಗಂಡನ ಋಣವನ್ನು ತೀರಿಸಿದ್ದೀಯೆ. ಎಲ್ಲಿಯವರೆಗೆ ಅವನೊಂದಿಗೆ ಹೋಗಬಹುದಾಗಿತ್ತೋ ಅಲ್ಲಿಯವರೆಗೆ ನೀನು ಬಂದಿದ್ದೀಯೆ.”

03281020 ಸಾವಿತ್ರ್ಯುವಾಚ।
03281020a ಯತ್ರ ಮೇ ನೀಯತೇ ಭರ್ತಾ ಸ್ವಯಂ ವಾ ಯತ್ರ ಗಚ್ಚತಿ।
03281020c ಮಯಾಪಿ ತತ್ರ ಗಂತವ್ಯಮೇಷ ಧರ್ಮಃ ಸನಾತನಃ।।

ಸಾವಿತ್ರಿಯು ಹೇಳಿದಳು: “ನನ್ನ ಪತಿಯನ್ನು ಎಲ್ಲಿಗೆ ಕರೆದೊಯ್ಯಲಾಗುತ್ತದೆಯೋ ಅಥವಾ ಸ್ವಯಂ ಅವನೇ ಎಲ್ಲಿಗೆ ಹೋಗುತ್ತಾನೋ ಅಲ್ಲಿಗೆ ನಾನೂ ಹೋಗುಬೇಕೆನ್ನುವುದು ಸನಾತನ ಧರ್ಮ.

03281021a ತಪಸಾ ಗುರುವೃತ್ತ್ಯಾ ಚ ಭರ್ತುಃ ಸ್ನೇಹಾದ್ವ್ರತೇನ ಚ।
03281021c ತವ ಚೈವ ಪ್ರಸಾದೇನ ನ ಮೇ ಪ್ರತಿಹತಾ ಗತಿಃ।।

ತಪಸ್ಸು, ಗುರುಭಕ್ತಿ, ಪತಿಯ ಮೇಲಿರುವ ಪ್ರೀತಿ, ಮತ್ತು ನಿನ್ನ ಪ್ರಸಾದದಿಂದ ನನ್ನ ಈ ನಡುಗೆಯನ್ನು ಯಾವುದೂ ತಡೆಯಲಾರದು.

03281022a ಪ್ರಾಹುಃ ಸಪ್ತಪದಂ ಮಿತ್ರಂ ಬುಧಾಸ್ತತ್ತ್ವಾರ್ಥದರ್ಶಿನಃ।
03281022c ಮಿತ್ರತಾಂ ಚ ಪುರಸ್ಕೃತ್ಯ ಕಿಂ ಚಿದ್ವಕ್ಷ್ಯಾಮಿ ತಚ್ಚೃಣು।।

ಒಟ್ಟಿಗೇ ಏಳು ಹೆಜ್ಜೆ ನಡೆದರೆ ಮಿತ್ರರಾಗುತ್ತಾರೆ ಎಂದು ತಿಳಿದ ತತ್ವದರ್ಶಿಗಳು ಹೇಳುತ್ತಾರೆ. ಆ ಮಿತ್ರತ್ವವನ್ನು ಗೌರವಿಸಿ ನಿನ್ನಲ್ಲಿ ಏನೋ ಒಂದನ್ನು ಹೇಳಲು ಬಯಸುತ್ತೇನೆ. ಅದನ್ನು ಕೇಳು.

03281023a ನಾನಾತ್ಮವಂತಸ್ತು ವನೇ ಚರಂತಿ। ಧರ್ಮಂ ಚ ವಾಸಂ ಚ ಪರಿಶ್ರಮಂ ಚ।।
03281023c ವಿಜ್ಞಾನತೋ ಧರ್ಮಮುದಾಹರಂತಿ। ತಸ್ಮಾತ್ಸಂತೋ ಧರ್ಮಮಾಹುಃ ಪ್ರಧಾನಂ।।

ಆತ್ಮವಂತನಲ್ಲದವನು ವನದಲ್ಲಿ ಧರ್ಮದಂತೆ ನಡೆದುಕೊಳ್ಳಲು, ವಾಸಿಸಲು ಮತ್ತು ಪರಿಶ್ರಮಪಡಲು ಸಾಧ್ಯವಿಲ್ಲ. ವಿಜ್ಞಾನಿಗಳು ಧರ್ಮದಲ್ಲಿಯೇ ಸುಖವಿದೆಯೆಂದು ಹೇಳುತ್ತಾರೆ. ಆದುದರಿಂದಲೇ ಸಂತರು ಧರ್ಮವೇ ಪ್ರಧಾನವೆಂದು ಹೇಳುತ್ತಾರೆ.

03281024a ಏಕಸ್ಯ ಧರ್ಮೇಣ ಸತಾಂ ಮತೇನ। ಸರ್ವೇ ಸ್ಮ ತಂ ಮಾರ್ಗಮನುಪ್ರಪನ್ನಾಃ।।
03281024c ಮಾ ವೈ ದ್ವಿತೀಯಂ ಮಾ ತೃತೀಯಂ ಚ ವಾಂಚೇ। ತಸ್ಮಾತ್ಸಂತೋ ಧರ್ಮಮಾಹುಃ ಪ್ರಧಾನಂ।।

ಸಾತ್ವಿಕರ ಮತದಂತೆ ಎಲ್ಲಕ್ಕಿಂತಲೂ ಹೆಚ್ಚಾಗಿ ಓರ್ವನ ಧರ್ಮವೇ ಅವನನ್ನು ಸರಿಯಾದ ಮಾರ್ಗದಲ್ಲಿ ಇರಿಸುತ್ತದೆ. ಎರಡನೆಯದನ್ನು ಅಥವಾ ಮೂರನೆಯದನ್ನು ಇಚ್ಛಿಸಬಾರದು. ಆದುದರಿಂದಲೇ ಸಂತರು ಧರ್ಮವೇ ಪ್ರಧಾನವೆಂದು ಹೇಳುತ್ತಾರೆ.”

03281025 ಯಮ ಉವಾಚ।
03281025a ನಿವರ್ತ ತುಷ್ಟೋಽಸ್ಮಿ ತವಾನಯಾ ಗಿರಾ। ಸ್ವರಾಕ್ಷರವ್ಯಂಜನಹೇತುಯುಕ್ತಯಾ।
03281025c ವರಂ ವೃಣೀಷ್ವೇಹ ವಿನಾಸ್ಯ ಜೀವಿತಂ। ದದಾನಿ ತೇ ಸರ್ವಮನಿಂದಿತೇ ವರಂ।।

ಯಮನು ಹೇಳಿದನು: “ಅನಿಂದಿತೇ! ಹಿಂದಿರುಗು! ಸ್ವರಾಕ್ಷರ ವ್ಯಂಜನಗಳನ್ನು ಸರಿಯಾಗಿ ಜೋಡಿಸಲ್ಪಟ್ಟ ನಿನ್ನ ಈ ಮಾತಿನಿಂದ ತೃಪ್ತನಾಗಿದ್ದೇನೆ. ಇವನ ಜೀವವನ್ನು ಬಿಟ್ಟು ವರವನ್ನು ಕೇಳು. ನಿನ್ನ ಎಲ್ಲ ವರವನ್ನೂ ಕೊಡುತ್ತೇನೆ.”

03281026 ಸಾವಿತ್ರ್ಯುವಾಚ।
03281026a ಚ್ಯುತಃ ಸ್ವರಾಜ್ಯಾದ್ವನವಾಸಮಾಶ್ರಿತೋ। ವಿನಷ್ಟಚಕ್ಷುಃ ಶ್ವಶುರೋ ಮಮಾಶ್ರಮೇ।
03281026c ಸ ಲಬ್ಧಚಕ್ಷುರ್ಬಲವಾನ್ಭವೇನ್ನೃಪಸ್। ತವ ಪ್ರಸಾದಾಜ್ಜ್ವಲನಾರ್ಕಸಂನಿಭಃ।।

ಸಾವಿತ್ರಿಯು ಹೇಳಿದಳು: “ನನ್ನ ಮಾವನು ಕಣ್ಣುಗಳನ್ನು ಮತ್ತು ಸ್ವರಾಜ್ಯವನ್ನು ಕಳೆದುಕೊಂಡು ಆಶ್ರಮದಲ್ಲಿ ವನವಾಸದಲ್ಲಿದ್ದಾನೆ. ನಿನ್ನ ಪ್ರಸಾದದಿಂದ ಆ ನೃಪತಿಯು ಕಣ್ಣುಗಳನ್ನು ಪಡೆದು ಅಗ್ನಿ ಮತ್ತು ಸೂರ್ಯಸನ್ನಿಭನಾಗಿ ಬಲವಂತನಾಗಲಿ.”

03281027 ಯಮ ಉವಾಚ।
03281027a ದದಾನಿ ತೇ ಸರ್ವಮನಿಂದಿತೇ ವರಂ। ಯಥಾ ತ್ವಯೋಕ್ತಂ ಭವಿತಾ ಚ ತತ್ತಥಾ।
03281027c ತವಾಧ್ವನಾ ಗ್ಲಾನಿಮಿವೋಪಲಕ್ಷಯೇ। ನಿವರ್ತ ಗಚ್ಚಸ್ವ ನ ತೇ ಶ್ರಮೋ ಭವೇತ್।।

ಯಮನು ಹೇಳಿದನು: “ಅನಿಂದಿತೇ! ನಿನಗೆ ಎಲ್ಲ ವರವನ್ನು ಕೊಟ್ಟಿದ್ದೇನೆ. ನೀನು ಹೇಳಿದಂತೆಯೇ ಆಗುತ್ತದೆ. ಬಹುದೂರ ನಡೆದುಬಂದುದರಿಂದ ಬಳಲಿದ್ದೀಯೆಂದು ತೋರುತ್ತಿದೆ. ಹಿಂದಿರುಗಿ ಹೋಗು. ನೀನು ಇನ್ನೂ ಆಯಾಸಗೊಳ್ಳಬೇಡ.”

03281028 ಸಾವಿತ್ರ್ಯುವಾಚ।
03281028a ಕುತಃ ಶ್ರಮೋ ಭರ್ತೃಸಮೀಪತೋ ಹಿ ಮೇ। ಯತೋ ಹಿ ಭರ್ತಾ ಮಮ ಸಾ ಗತಿರ್ಧ್ರುವಾ।
03281028c ಯತಃ ಪತಿಂ ನೇಷ್ಯಸಿ ತತ್ರ ಮೇ ಗತಿಃ। ಸುರೇಶ ಭೂಯಶ್ಚ ವಚೋ ನಿಬೋಧ ಮೇ।।

ಸಾವಿತ್ರಿಯು ಹೇಳಿದಳು: “ಪತಿಯು ಸಮೀಪದಲ್ಲಿರುವಾಗ ನನಗೆ ಎಲ್ಲಿಯ ಆಯಾಸ? ನನ್ನ ಪತಿಯಲ್ಲಿದ್ದಾನೋ ಅದೇ ನನ್ನ ಗತಿ. ಎಲ್ಲಿಗೆ ನನ್ನ ಪತಿಯನ್ನು ಕರೆದುಕೊಂಡು ಹೋಗುತ್ತಿದ್ದೀಯೋ ಅಲ್ಲಿಗೆ ನಾನೂ ಕೂಡ ಹೋಗಬೇಕು. ಸುರೇಶ! ಇನ್ನೊಮ್ಮೆ ನನ್ನ ಈ ಮಾತುಗಳನ್ನು ಕೇಳು.

03281029a ಸತಾಂ ಸಕೃತ್ಸಂಗತಮೀಪ್ಸಿತಂ ಪರಂ। ತತಃ ಪರಂ ಮಿತ್ರಮಿತಿ ಪ್ರಚಕ್ಷತೇ।
03281029c ನ ಚಾಫಲಂ ಸತ್ಪುರುಷೇಣ ಸಂಗತಂ। ತತಃ ಸತಾಂ ಸಂನಿವಸೇತ್ಸಮಾಗಮೇ।।

ಸತ್ಯವಂತರ ಸಂಗವು ಸ್ವಲ್ಪವೇ ಸಮಯದ್ದಾದರೂ ಪರಮ ಪ್ರಿಯಕರವಾದುದು. ಅದಕ್ಕಿಂತಲೂ ಶ್ರೇಷ್ಠವಾದುದು ಅವರನ್ನು ಮಿತ್ರರನ್ನಾಗಿರಿಸಿಕೊಳ್ಳುವುದು ಎಂದು ಹೇಳುತ್ತಾರೆ. ಸತ್ಪುರುಷರ ಸಂಗವು ಎಂದೂ ಫಲವನ್ನು ನೀಡದೇ ಇರುವುದಿಲ್ಲ. ಆದುದರಿಂದ ಸತ್ಯವಂತರ ಸಮಾಗಮದಲ್ಲಿ, ಅವರ ಹತ್ತಿರದಲ್ಲಿ ಇರಬೇಕು.”

03281030 ಯಮ ಉವಾಚ।
03281030a ಮನೋನುಕೂಲಂ ಬುಧಬುದ್ಧಿವರ್ಧನಂ। ತ್ವಯಾಹಮುಕ್ತೋ ವಚನಂ ಹಿತಾಶ್ರಯಂ।
03281030c ವಿನಾ ಪುನಃ ಸತ್ಯವತೋಽಸ್ಯ ಜೀವಿತಂ। ವರಂ ದ್ವಿತೀಯಂ ವರಯಸ್ವ ಭಾಮಿನಿ।।

ಯಮನು ಹೇಳಿದನು: “ಭಾಮಿನೀ! ಮನಸ್ಸಿಗೆ ಅನುಕೂಲವಾದಂಥಹ, ಬುದ್ಧಿವಂತರ ಬುದ್ಧಿಯನ್ನು ಹೆಚ್ಚಿಸುವ, ಹಿತಾಶ್ರಯವಾದ ಮಾತನ್ನು ಆಡಿದ್ದೀಯೆ. ಪುನಃ ಈ ಸತ್ಯವತನ ಜೀವದ ಹೊರತು ಎರಡನೆಯ ವರವನ್ನು ಕೇಳಿಕೋ.”

03281031 ಸಾವಿತ್ರ್ಯುವಾಚ।
03281031a ಹೃತಂ ಪುರಾ ಮೇ ಶ್ವಶುರಸ್ಯ ಧೀಮತಃ। ಸ್ವಮೇವ ರಾಜ್ಯಂ ಸ ಲಭೇತ ಪಾರ್ಥಿವಃ।
03281031c ಜಹ್ಯಾತ್ಸ್ವಧರ್ಮಂ ನ ಚ ಮೇ ಗುರುರ್ಯಥಾ। ದ್ವಿತೀಯಮೇತಂ ವರಯಾಮಿ ತೇ ವರಂ।।

ಸಾವಿತ್ರಿಯು ಹೇಳಿದಳು: “ನನ್ನ ಧೀಮಂತ ಮಾವ ಪಾರ್ಥಿವನು ಹಿಂದೆ ಕಳೆದುಕೊಂಡಿದ್ದ ತನ್ನ ರಾಜ್ಯವನ್ನು ಪಡೆಯಲಿ. ನನ್ನ ಗುರುವಿನಂತಿರುವ ಅವನು ಸ್ವಧರ್ಮವನ್ನು ಎಂದೂ ತ್ಯಜಿಸದಿರಲಿ. ಇದನ್ನೇ ನಿನ್ನಿಂದ ಎರಡನೆಯ ವರವಾಗಿ ಕೇಳುತ್ತೇನೆ.”

03281032 ಯಮ ಉವಾಚ।
03281032a ಸ್ವಮೇವ ರಾಜ್ಯಂ ಪ್ರತಿಪತ್ಸ್ಯತೇಽಚಿರಾನ್। ನ ಚ ಸ್ವಧರ್ಮಾತ್ಪರಿಹಾಸ್ಯತೇ ನೃಪಃ।
03281032c ಕೃತೇನ ಕಾಮೇನ ಮಯಾ ನೃಪಾತ್ಮಜೇ। ನಿವರ್ತ ಗಚ್ಚಸ್ವ ನ ತೇ ಶ್ರಮೋ ಭವೇತ್।।

ಯಮನು ಹೇಳಿದನು: “ಬೇಗನೇ ಸುಲಭವಾಗಿ ನೃಪನು ತನ್ನ ರಾಜ್ಯವನ್ನು ಪಡೆಯುತ್ತಾನೆ ಮತ್ತು ಸ್ವಧರ್ಮದಿಂದ ಚ್ಯುತನಾಗುವುದಿಲ್ಲ. ನೃಪಾತ್ಮಜೇ! ನೀನು ಬಯಸಿದುದನ್ನು ನಾನು ಮಾಡಿದ್ದೇನೆ. ಹಿಂದಿರುಗಿ ಹೋಗು! ನಿನಗೆ ಶ್ರಮವಾಗದಿರಲಿ.”

03281033 ಸಾವಿತ್ರ್ಯುವಾಚ।
03281033a ಪ್ರಜಾಸ್ತ್ವಯೇಮಾ ನಿಯಮೇನ ಸಂಯತಾ। ನಿಯಂಯ ಚೈತಾ ನಯಸೇ ನ ಕಾಮಯಾ।
03281033c ಅತೋ ಯಮತ್ವಂ ತವ ದೇವ ವಿಶ್ರುತಂ। ನಿಬೋಧ ಚೇಮಾಂ ಗಿರಮೀರಿತಾಂ ಮಯಾ।।

ಸಾವಿತ್ರಿಯು ಹೇಳಿದಳು: “ನೀನು ಈ ಪ್ರಜೆಗಳನ್ನು ನಿಯಮದಿಂದ ಮಾತ್ರ ನಿಯಂತ್ರಿಸುತ್ತೀಯೆ. ನಿಯಮದಿಂದಲೇ ಅವರನ್ನು ನೀನು ಕೊಂಡೊಯ್ಯುತ್ತೀಯೆ. ನಿನಗೆ ಬೇಕೆಂದಲ್ಲ. ಆದುದರಿಂದಲೇ ದೇವ! ನೀನು ಯಮನೆಂದು ವಿಶ್ರುತನಾಗಿದ್ದೀಯೆ. ನಾನು ಹೇಳುವ ಈ ಮಾತುಗಳನ್ನು ಕೇಳು.

03281034a ಅದ್ರೋಹಃ ಸರ್ವಭೂತೇಷು ಕರ್ಮಣಾ ಮನಸಾ ಗಿರಾ।
03281034c ಅನುಗ್ರಹಶ್ಚ ದಾನಂ ಚ ಸತಾಂ ಧರ್ಮಃ ಸನಾತನಃ।।

ಸರ್ವಭೂತಗಳಿಗೂ, ಕರ್ಮ, ಮನಸ್ಸು ಮತ್ತು ಮಾತುಗಳಿಂದ ದ್ರೋಹವನ್ನು ಬಯಸದೇ ಇರುವುದು, ಅನುಗ್ರಹ ಮತ್ತು ದಾನಗಳು ಸಾತ್ವಿಕರ ಸನಾತನ ದರ್ಮ.

03281035a ಏವಂಪ್ರಾಯಶ್ಚ ಲೋಕೋಽಯಂ ಮನುಷ್ಯಾಃ ಶಕ್ತಿಪೇಶಲಾಃ।
03281035c ಸಂತಸ್ತ್ವೇವಾಪ್ಯಮಿತ್ರೇಷು ದಯಾಂ ಪ್ರಾಪ್ತೇಷು ಕುರ್ವತೇ।।

ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟುಮಾತ್ರ ಕರುಣೆತೋರುವುದು ಮನುಷ್ಯ ಲೋಕದಲ್ಲಿ ಸಾಧಾರಣವಾಗಿ ನಡೆಯುತ್ತದೆ. ಆದರೆ ಸಾತ್ವಿಕರು ಅವರ ಶತ್ರುಗಳು ಬಂದರೂ ಅವರಿಗೆ ದಯೆಯನ್ನು ತೋರುತ್ತಾರೆ.”

03281036 ಯಮ ಉವಾಚ।
03281036a ಪಿಪಾಸಿತಸ್ಯೇವ ಯಥಾ ಭವೇತ್ಪಯಸ್। ತಥಾ ತ್ವಯಾ ವಾಕ್ಯಮಿದಂ ಸಮೀರಿತಂ।
03281036c ವಿನಾ ಪುನಃ ಸತ್ಯವತೋಽಸ್ಯ ಜೀವಿತಂ। ವರಂ ವೃಣೀಷ್ವೇಹ ಶುಭೇ ಯದಿಚ್ಚಸಿ।।

ಯಮನು ಹೇಳಿದನು: “ಬಾಯಾರಿಕೆಯಿಂದ ಬಳಲಿದವನಿಗೆ ನೀರು ಹೇಗೋ ಹಾಗೆ ನಿನ್ನ ಈ ಮಾತುಗಳು ತೃಪ್ತಿಕರವಾಗಿವೆ. ಈ ಸತ್ಯವತನ ಜೀವವನ್ನು ಬಿಟ್ಟು ಪುನಃ ನಿನಗಿಷ್ಟವಾದ ವರವನ್ನು ಕೇಳು ಶುಭೇ!”

03281037 ಸಾವಿತ್ರ್ಯುವಾಚ।
03281037a ಮಮಾನಪತ್ಯಃ ಪೃಥಿವೀಪತಿಃ ಪಿತಾ। ಭವೇತ್ಪಿತುಃ ಪುತ್ರಶತಂ ಮಮೌರಸಂ।
03281037c ಕುಲಸ್ಯ ಸಂತಾನಕರಂ ಚ ಯದ್ಭವೇತ್। ತೃತೀಯಮೇತಂ ವರಯಾಮಿ ತೇ ವರಂ।।

ಸಾವಿತ್ರಿಯು ಹೇಳಿದಳು: “ನನ್ನ ತಂದೆ ಪೃಥಿವೀಪತಿಗೆ ಮಕ್ಕಳಿಲ್ಲ. ನನ್ನ ತಂದೆಗೆ, ಕುಲವನ್ನು ಮುಂದುವರಿಸಿಕೊಂಡು ಹೋಗುವ ನೂರು ಔರಸಪುತ್ರರಾಗಲಿ. ನಿನ್ನಿಂದ ಈ ಮೂರನೆಯ ವರವನ್ನು ಕೇಳುತ್ತೇನೆ.”

03281038 ಯಮ ಉವಾಚ।
03281038a ಕುಲಸ್ಯ ಸಂತಾನಕರಂ ಸುವರ್ಚಸಂ। ಶತಂ ಸುತಾನಾಂ ಪಿತುರಸ್ತು ತೇ ಶುಭೇ।
03281038c ಕೃತೇನ ಕಾಮೇನ ನರಾಧಿಪಾತ್ಮಜೇ। ನಿವರ್ತ ದೂರಂ ಹಿ ಪಥಸ್ತ್ವಮಾಗತಾ।।

ಯಮನು ಹೇಳಿದನು: “ಶುಭೇ! ಕುಲವನ್ನು ಮುಂದುವರಿಸಿಕೊಂಡು ಹೋಗುವ ಸುವರ್ಚಸರಾದ ನೂರು ಮಕ್ಕಳು ನಿನ್ನ ತಂದೆಗಾಗುವರು. ನರಾಧಿಪಾತ್ಮಜೇ! ನಿನ್ನ ಬಯಕೆಯು ನೆರವೇರಿತು. ಹಿಂದಿರುಗು. ಬಹಳ ದೂರ ಬಂದುಬಿಟ್ಟಿದ್ದೀಯೆ.”

03281039 ಸಾವಿತ್ರ್ಯುವಾಚ।
03281039a ನ ದೂರಮೇತನ್ಮಮ ಭರ್ತೃಸಂನಿಧೌ। ಮನೋ ಹಿ ಮೇ ದೂರತರಂ ಪ್ರಧಾವತಿ।
03281039c ತಥಾ ವ್ರಜನ್ನೇವ ಗಿರಂ ಸಮುದ್ಯತಾಂ। ಮಯೋಚ್ಯಮಾನಾಂ ಶೃಣು ಭೂಯ ಏವ ಚ।।

ಸಾವಿತ್ರಿಯು ಹೇಳಿದಳು: “ನನ್ನ ಪತಿಯ ಸನ್ನಿಧಿಯಲ್ಲಿರುವಾಗ ಇದೇನೂ ದೂರವಲ್ಲ. ಇದಕ್ಕಿಂತಲೂ ದೂರ ನನ್ನ ಮನಸ್ಸು ಓಡುತ್ತಿದೆ. ನಿನ್ನ ಜೊತೆಯಲ್ಲಿಯೇ ಹೊಗುತ್ತಿರುವಾಗ ನಾನು ನಿನಗೆ ಹೇಳುವ ಇನ್ನೊಂದು ಮಾತನ್ನು ಕೇಳು.

03281040a ವಿವಸ್ವತಸ್ತ್ವಂ ತನಯಃ ಪ್ರತಾಪವಾಂಸ್। ತತೋ ಹಿ ವೈವಸ್ವತ ಉಚ್ಯಸೇ ಬುಧೈಃ।
03281040c ಶಮೇನ ಧರ್ಮೇಣ ಚ ರಂಜಿತಾಃ ಪ್ರಜಾಸ್। ತತಸ್ತವೇಹೇಶ್ವರ ಧರ್ಮರಾಜತಾ।।

ನೀನು ವಿವಸ್ವತನ ಪ್ರತಾಪವಂತ ಮಗ. ಆದುದರಿಂದಲೇ ತಿಳಿದವರು ನಿನ್ನನ್ನು ವೈವಸ್ವತನೆಂದು ಕರೆಯುತ್ತಾರೆ. ಪ್ರಜೆಗಳು ನಿನ್ನನ್ನು ಶಮ ಮತ್ತು ಧರ್ಮಗಳಿಂದ ರಂಜಿಸುತ್ತಾರೆ. ಆದುದರಿಂದಲೇ ಈಶ್ವರ! ನೀನು ಧರ್ಮರಾಜನೆಂದು ಕರೆಯಲ್ಪಡುವೆ.

03281041a ಆತ್ಮನ್ಯಪಿ ನ ವಿಶ್ವಾಸಸ್ತಾವಾನ್ಭವತಿ ಸತ್ಸು ಯಃ।
03281041c ತಸ್ಮಾತ್ಸತ್ಸು ವಿಶೇಷೇಣ ಸರ್ವಃ ಪ್ರಣಯಮಿಚ್ಚತಿ।।

ಸಾತ್ವಿಕರ ಮೇಲಿದ್ದಷ್ಟು ವಿಶ್ವಾಸವು ಅತ್ಮನ ಮೇಲೂ ಇರುವುದಿಲ್ಲ. ಆದುದರಿಂದ ಎಲ್ಲರೂ ವಿಶೇಷವಾಗಿ ಸಾತ್ವಿಕರನ್ನು ಪ್ರೀತಿಸಲು ಬಯಸುತ್ತಾರೆ.

03281042a ಸೌಹೃದಾತ್ಸರ್ವಭೂತಾನಾಂ ವಿಶ್ವಾಸೋ ನಾಮ ಜಾಯತೇ।
03281042c ತಸ್ಮಾತ್ಸತ್ಸು ವಿಶೇಷೇಣ ವಿಶ್ವಾಸಂ ಕುರುತೇ ಜನಃ।।

ಸರ್ವಭೂತಗಳ ಮೇಲಿರುವ ಸೌಹಾರ್ದತೆಯಿಂದ ವಿಶ್ವಾಸ ಎನ್ನುವುದು ಹುಟ್ಟುತ್ತದೆ. ಆದುದರಿಂದ ಜನರು ವಿಶೇಷವಾಗಿ ಸಾತ್ವಿಕರನ್ನು ಪ್ರೀತಿಸುತ್ತಾರೆ.”

03281043 ಯಮ ಉವಾಚ।
03281043a ಉದಾಹೃತಂ ತೇ ವಚನಂ ಯದಂಗನೇ। ಶುಭೇ ನ ತಾದೃಕ್ತ್ವದೃತೇ ಮಯಾ ಶ್ರುತಂ।
03281043c ಅನೇನ ತುಷ್ಟೋಽಸ್ಮಿ ವಿನಾಸ್ಯ ಜೀವಿತಂ। ವರಂ ಚತುರ್ಥಂ ವರಯಸ್ವ ಗಚ್ಚ ಚ।।

ಯಮನು ಹೇಳಿದನು: “ಸುಂದರಿ! ನೀನು ಇಲ್ಲಿ ಮಾತನಾಡಿದ ಶಬ್ಧಗಳಷ್ಟು ಶುಭವಾದುದನ್ನು ನಿನ್ನನ್ನು ಬಿಟ್ಟು ಬೇರೆ ಯಾರಿಂದಲೂ ನಾನು ಕೇಳಲಿಲ್ಲ. ಇದರಿಂದ ನಾನು ತುಷ್ಟನಾಗಿದ್ದೇನೆ. ಇವನ ಜೀವನವನ್ನು ಬಿಟ್ಟು ನಾಲ್ಕನೆಯ ವರವನ್ನು ಕೇಳು ಮತ್ತು ಹೊರಟು ಹೋಗು.”

03281044 ಸಾವಿತ್ರ್ಯುವಾಚ।
03281044a ಮಮಾತ್ಮಜಂ ಸತ್ಯವತಸ್ತಥೌರಸಂ। ಭವೇದುಭಾಭ್ಯಾಮಿಹ ಯತ್ಕುಲೋದ್ವಹಂ।
03281044c ಶತಂ ಸುತಾನಾಂ ಬಲವೀರ್ಯಶಾಲಿನಾಂ। ಇದಂ ಚತುರ್ಥಂ ವರಯಾಮಿ ತೇ ವರಂ।।

ಸಾವಿತ್ರಿಯು ಹೇಳಿದಳು: “ಸತ್ಯವತ ಮತ್ತು ನನ್ನಲ್ಲಿ ನಮ್ಮಿಬ್ಬರ ಕುಲವನ್ನು ಮುಂದುವರಿಸಿಕೊಂಡು ಹೋಗುವ, ನೂರು ಬಲಶಾಲಿ ಮತ್ತು ವೀರ್ಯಶಾಲಿ ಔರಸ ಮಕ್ಕಳಾಗಲಿ. ಇದು ನಾನು ನಿನ್ನಲ್ಲಿ ಕೇಳುವ ನಾಲ್ಕನೆಯ ವರ.”

03281045 ಯಮ ಉವಾಚ।
03281045a ಶತಂ ಸುತಾನಾಂ ಬಲವೀರ್ಯಶಾಲಿನಾಂ। ಭವಿಷ್ಯತಿ ಪ್ರೀತಿಕರಂ ತವಾಬಲೇ।
03281045c ಪರಿಶ್ರಮಸ್ತೇ ನ ಭವೇನ್ನೃಪಾತ್ಮಜೇ। ನಿವರ್ತ ದೂರಂ ಹಿ ಪಥಸ್ತ್ವಮಾಗತಾ।।

ಯಮನು ಹೇಳಿದನು: “ಅಬಲೇ! ಬಲವೀರ್ಯಶಾಲಿಗಳಾದ ಪ್ರೀತಿಕರ ನೂರು ಪುತ್ರರು ನಿನಗೆ ಆಗುತ್ತಾರೆ. ನೃಪಾತ್ಮಜೇ! ಪರಿಶ್ರಮಪಡಬೇಡ. ಹಿಂದಿರುಗು. ಬಹಳಷ್ಟು ದೂರ ಈ ಮಾರ್ಗದಲ್ಲಿ ಬಂದಿದ್ದೀಯೆ.”

03281046 ಸಾವಿತ್ರ್ಯುವಾಚ।
03281046a ಸತಾಂ ಸದಾ ಶಾಶ್ವತೀ ಧರ್ಮವೃತ್ತಿಃ। ಸಂತೋ ನ ಸೀದಂತಿ ನ ಚ ವ್ಯಥಂತಿ।
03281046c ಸತಾಂ ಸದ್ಭಿರ್ನಾಫಲಃ ಸಂಗಮೋಽಸ್ತಿ। ಸದ್ಭ್ಯೋ ಭಯಂ ನಾನುವರ್ತಂತಿ ಸಂತಃ।।

ಸಾವಿತ್ರಿಯು ಹೇಳಿದಳು: “ಸಾತ್ವಿಕರು ಸದಾ ಶಾಶ್ವತೀ ಧರ್ಮದಲ್ಲಿ ನಡೆದುಕೊಳ್ಳುತ್ತಾರೆ. ಸಾತ್ವಿಕರು ಭಯದಿಂದ ನಡುಗುವುದಿಲ್ಲ ಮತ್ತು ವ್ಯಥಿಸುವುದಿಲ್ಲ. ಸಾತ್ವಿಕರೊಂದಿಗೆ ಸಾತ್ವಿಕರ ಸಂಗವು ಫಲವಿಲ್ಲದೆ ಇರುವುದಿಲ್ಲ. ಸಾತ್ವಿಕರಿಂದ ಸಾತ್ವಿಕರಿಗೆ ಯಾವುದೇ ತರಹದ ಭಯವಿರುವುದಿಲ್ಲ.

03281047a ಸಂತೋ ಹಿ ಸತ್ಯೇನ ನಯಂತಿ ಸೂರ್ಯಂ। ಸಂತೋ ಭೂಮಿಂ ತಪಸಾ ಧಾರಯಂತಿ।
03281047c ಸಂತೋ ಗತಿರ್ಭೂತಭವ್ಯಸ್ಯ ರಾಜನ್। ಸತಾಂ ಮಧ್ಯೇ ನಾವಸೀದಂತಿ ಸಂತಃ।।

ರಾಜನ್! ಸಂತರು ಸತ್ಯದಿಂದಲೇ ಸೂರ್ಯನನ್ನು ನಡೆಸುತ್ತಾರೆ, ಸಂತರು ತಪಸ್ಸಿನಿಂದ ಭೂಮಿಯನ್ನು ಎತ್ತಿಹಿಡಿಯುತ್ತಾರೆ, ಸಂತರು ಭೂತ ಮತ್ತು ಭವಿಷ್ಯಗಳ ಗತಿ. ಸಂತರು ಸಂತರ ಮಧ್ಯೆ ಅಳಿಸಿಹೋಗುವುದಿಲ್ಲ.

03281048a ಆರ್ಯಜುಷ್ಟಮಿದಂ ವೃತ್ತಮಿತಿ ವಿಜ್ಞಾಯ ಶಾಶ್ವತಂ।
03281048c ಸಂತಃ ಪರಾರ್ಥಂ ಕುರ್ವಾಣಾ ನಾವೇಕ್ಷಂತೇ ಪ್ರತಿಕ್ರಿಯಾಂ।।

ಇದು ಆರ್ಯರು ತಮ್ಮದಾಗಿಸಿಕೊಂಡ ಶಾಶ್ವತ ನಡತೆ ಎಂದು ತಿಳಿದು ಸಂತರು ಪರರಿಗಾಗಿ ಪ್ರತಿಕ್ರಿಯೆಗಳನ್ನೇನನ್ನೂ ಬಯಸದೆ ಮಾಡುತ್ತಾರೆ.

03281049a ನ ಚ ಪ್ರಸಾದಃ ಸತ್ಪುರುಷೇಷು ಮೋಘೋ। ನ ಚಾಪ್ಯರ್ಥೋ ನಶ್ಯತಿ ನಾಪಿ ಮಾನಃ।
03281049c ಯಸ್ಮಾದೇತನ್ನಿಯತಂ ಸತ್ಸು ನಿತ್ಯಂ। ತಸ್ಮಾತ್ಸಂತೋ ರಕ್ಷಿತಾರೋ ಭವಂತಿ।।

ಸತ್ಪುರುಷರ ಯಾವ ಪ್ರಸಾದವೂ ಬಂಜಾಗುವುದಿಲ್ಲ. ಲಾಭವಾಗಲೀ ಮಾನವಾಗಲೀ ಯಾವುದೂ ನಶಿಸಿಹೋಗುವುದಿಲ್ಲ. ಇದು ಸಾತ್ವಿಕರು ನಿತ್ಯವೂ ಅಳವಡಿಸಿಕೊಂಡ ನಿಯಮವಾಗಿರುವುದರಿಂದ ಸಂತರೇ ಇದರ ರಕ್ಷಿತರೂ ಆಗುತ್ತಾರೆ.”

03281050 ಯಮ ಉವಾಚ।
03281050a ಯಥಾ ಯಥಾ ಭಾಷಸಿ ಧರ್ಮಸಂಹಿತಂ। ಮನೋನುಕೂಲಂ ಸುಪದಂ ಮಹಾರ್ಥವತ್।
03281050c ತಥಾ ತಥಾ ಮೇ ತ್ವಯಿ ಭಕ್ತಿರುತ್ತಮಾ। ವರಂ ವೃಣೀಷ್ವಾಪ್ರತಿಮಂ ಯತವ್ರತೇ।।

ಯಮನು ಹೇಳಿದನು: “ನೀನು ಮಾತನಾಡಿದಾಗಲೆಲ್ಲ ಮನಸ್ಸಿಗೆ ಅನುಕೂಲವಾಗುತ್ತಿದೆ. ಮಹಾ ಅರ್ಥವುಳ್ಳ ಒಳ್ಳೆಯ ಪದಗಳನ್ನು ಬಳಸಿದ ದರ್ಮಸಂಹಿತವಾದುದನ್ನೇ ಮಾತನ್ನಾಡುತ್ತಿದ್ದೀಯೆ. ಯತವ್ರತೇ! ಅಪ್ರತಿಮ ವರವನ್ನು ಕೇಳು.”

03281051 ಸಾವಿತ್ರ್ಯುವಾಚ।
03281051a ನ ತೇಽಪವರ್ಗಃ ಸುಕೃತಾದ್ವಿನಾಕೃತಸ್। ತಥಾ ಯಥಾನ್ಯೇಷು ವರೇಷು ಮಾನದ।
03281051c ವರಂ ವೃಣೇ ಜೀವತು ಸತ್ಯವಾನಯಂ। ಯಥಾ ಮೃತಾ ಹ್ಯೇವಮಹಂ ವಿನಾ ಪತಿಂ।।

ಸಾವಿತ್ರಿಯು ಹೇಳಿದಳು: “ಮಾನದ! ಇತರ ವರಗಳಂತೆ ಈ ವರವು ಕೂಡ ಫಲವನ್ನೀಡಬೇಕು. ಸತ್ಯವಾನನ ಜೀವವನ್ನು ವರವಾಗಿ ಕೇಳುತ್ತೇನೆ. ಪತಿಯಿಲ್ಲದೇ ನಾನು ಮೃತಳಾದ ಹಾಗೆಯೇ.

03281052a ನ ಕಾಮಯೇ ಭರ್ತೃವಿನಾಕೃತಾ ಸುಖಂ। ನ ಕಾಮಯೇ ಭರ್ತೃವಿನಾಕೃತಾ ದಿವಂ।
03281052c ನ ಕಾಮಯೇ ಭರ್ತೃವಿನಾಕೃತಾ ಶ್ರಿಯಂ। ನ ಭರ್ತೃಹೀನಾ ವ್ಯವಸಾಮಿ ಜೀವಿತುಂ।।

ಪತಿಯಿಲ್ಲದೇ ನಾನು ಸುಖವನ್ನು ಬಯಸುವುದಿಲ್ಲ; ಪತಿಯಿಲ್ಲದೇ ನಾನು ಸ್ವರ್ಗವನ್ನು ಬಯಸುವುದಿಲ್ಲ; ಪತಿಯಿಲ್ಲದೇ ನಾನು ಸಂಪತ್ತನ್ನು ಬಯಸುವುದಿಲ್ಲ ಮತ್ತು ಪತಿಯಿಲ್ಲದೇ ಜೀವಂತವಾಗಿರುವುದನ್ನೂ ಬಯಸುವುದಿಲ್ಲ.

03281053a ವರಾತಿಸರ್ಗಃ ಶತಪುತ್ರತಾ ಮಮ। ತ್ವಯೈವ ದತ್ತೋ ಹ್ರಿಯತೇ ಚ ಮೇ ಪತಿಃ।
03281053c ವರಂ ವೃಣೇ ಜೀವತು ಸತ್ಯವಾನಯಂ। ತವೈವ ಸತ್ಯಂ ವಚನಂ ಭವಿಷ್ಯತಿ।।

ನನಗೆ ನೂರು ಪುತ್ರರಾಗುತ್ತಾರೆಂದು ನೀನೇ ವರವನ್ನು ಕೊಟ್ಟಿದ್ದೀಯೆ. ಆದರೂ ನನ್ನ ಪತಿಯನ್ನು ಕೊಂಡೊಯ್ಯುತ್ತಿದ್ದೀಯೆ. ಸತ್ಯವಾನನು ಬದುಕಲಿ ಎಂದು ವರವನ್ನು ಕೇಳುತ್ತೇನೆ. ನಿನ್ನ ಮಾತು ಮಾತ್ರ ಸತ್ಯವಾಗುತ್ತದೆ.””

03281054 ಮಾರ್ಕಂಡೇಯ ಉವಾಚ।
03281054a ತಥೇತ್ಯುಕ್ತ್ವಾ ತು ತಾನ್ಪಾಶಾನ್ಮುಕ್ತ್ವಾ ವೈವಸ್ವತೋ ಯಮಃ।
03281054c ಧರ್ಮರಾಜಃ ಪ್ರಹೃಷ್ಟಾತ್ಮಾ ಸಾವಿತ್ರೀಮಿದಮಬ್ರವೀತ್।।

ಮಾರ್ಕಂಡೇಯನು ಹೇಳಿದನು: “”ಹಾಗೆಯೇ ಆಗಲಿ!” ಎಂದು ಹೇಳಿ ವೈವಸ್ವತ ಯಮನು ಆ ಪಾಶಗಳನ್ನು ಬಿಡಿಸಿದನು. ಸಂತೋಷಗೊಂಡ ಧರ್ಮರಾಜನು ಸಾವಿತ್ರಿಗೆ ಹೇಳಿದನು:

03281055a ಏಷ ಭದ್ರೇ ಮಯಾ ಮುಕ್ತೋ ಭರ್ತಾ ತೇ ಕುಲನಂದಿನಿ।
03281055c ಅರೋಗಸ್ತವ ನೇಯಶ್ಚ ಸಿದ್ಧಾರ್ಥಶ್ಚ ಭವಿಷ್ಯತಿ।।

“ಭದ್ರೇ! ಕುಲನಂದಿನಿ! ಇಗೋ ನಿನ್ನ ಪತಿಯನ್ನು ನಾನು ಬಿಟ್ಟಿದ್ದೇನೆ. ನಿನ್ನೊಂದಿಗೆ ಕರೆದುಕೊಂಡು ಹೋಗು. ಅವನು ಆರೋಗಿಯೂ, ಬಯಸಿದುದನ್ನು ಸಾಧಿಸುವವನೂ ಆಗಿದ್ದಾನೆ.

03281056a ಚತುರ್ವರ್ಷಶತಂ ಚಾಯುಸ್ತ್ವಯಾ ಸಾರ್ಧಮವಾಪ್ಸ್ಯತಿ।
03281056c ಇಷ್ಟ್ವಾ ಯಜ್ಞೈಶ್ಚ ಧರ್ಮೇಣ ಖ್ಯಾತಿಂ ಲೋಕೇ ಗಮಿಷ್ಯತಿ।।

ಇವನು ನಾಲ್ನೂರು ವರ್ಷಗಳ ಪರ್ಯಂತ ನಿನ್ನ ಜೊತೆಗಿರುತ್ತಾನೆ. ಧರ್ಮದಿಂದ ಇಷ್ಟಿ-ಯಜ್ಞಗಳನ್ನು ಮಾಡಿ ಲೋಕದಲ್ಲಿ ಖ್ಯಾತಿಯನ್ನು ಪಡೆಯುತ್ತಾನೆ.

03281057a ತ್ವಯಿ ಪುತ್ರಶತಂ ಚೈವ ಸತ್ಯವಾಂ ಜನಯಿಷ್ಯತಿ।
03281057c ತೇ ಚಾಪಿ ಸರ್ವೇ ರಾಜಾನಃ ಕ್ಷತ್ರಿಯಾಃ ಪುತ್ರಪೌತ್ರಿಣಃ।
03281057e ಖ್ಯಾತಾಸ್ತ್ವನ್ನಾಮಧೇಯಾಶ್ಚ ಭವಿಷ್ಯಂತೀಹ ಶಾಶ್ವತಾಃ।।

ಸತ್ಯವಾನನು ನಿನ್ನಲ್ಲಿ ನೂರು ಪುತ್ರರನ್ನು ಪಡೆಯುತ್ತಾನೆ ಮತ್ತು ಅವರೆಲ್ಲರೂ ಕೂಡ ರಾಜರಾಗಿ ಕ್ಷತ್ರಿಯ ಮಕ್ಕಳು ಮೊಮ್ಮಕ್ಕಳನ್ನು ಪಡೆಯುತ್ತಾರೆ. ನಿಮ್ಮ ಹೆಸರುಗಳು ಕೂಡ ಖ್ಯಾತವಾಗಿ ಇಲ್ಲಿ ಶಾಶ್ವತವಾಗಿರುತ್ತವೆ.

03281058a ಪಿತುಶ್ಚ ತೇ ಪುತ್ರಶತಂ ಭವಿತಾ ತವ ಮಾತರಿ।
03281058c ಮಾಲವ್ಯಾಂ ಮಾಲವಾ ನಾಮ ಶಾಶ್ವತಾಃ ಪುತ್ರಪೌತ್ರಿಣಃ।
03281058e ಭ್ರಾತರಸ್ತೇ ಭವಿಷ್ಯಂತಿ ಕ್ಷತ್ರಿಯಾಸ್ತ್ರಿದಶೋಪಮಾಃ।।

ನಿನ್ನ ತಂದೆಯೂ ಕೂಡ ನಿನ್ನ ತಾಯಿ ಮಾಲವಿಯಲ್ಲಿ ನೂರು ಪುತ್ರರನ್ನು ಪಡೆಯುತ್ತಾನೆ ಮತ್ತು ಮಾಲವದ ಹೆಸರನ್ನು ಮಕ್ಕಳು ಮೊಮ್ಮಕ್ಕಳು ಶಾಶ್ವತವಾಗಿರಿಸುತ್ತಾರೆ. ಕ್ಷತ್ರಿಯ ನಿನ್ನ ಸಹೋದರರು ದೇವತೆಗಳಂತಿರುತ್ತಾರೆ.”

03281059a ಏವಂ ತಸ್ಯೈ ವರಂ ದತ್ತ್ವಾ ಧರ್ಮರಾಜಃ ಪ್ರತಾಪವಾನ್।
03281059c ನಿವರ್ತಯಿತ್ವಾ ಸಾವಿತ್ರೀಂ ಸ್ವಮೇವ ಭವನಂ ಯಯೌ।।

ಈ ರೀತಿ ಅವಳಿಗೆ ವರವನ್ನಿತ್ತು ಪ್ರತಾಪಿ ಧರ್ಮರಾಜನು ಸಾವಿತ್ರಿಯನ್ನು ಹಿಂದಿರುಗಿಸಿ ತನ್ನ ಭವನಕ್ಕೆ ತೆರಳಿದನು.

03281060a ಸಾವಿತ್ರ್ಯಪಿ ಯಮೇ ಯಾತೇ ಭರ್ತಾರಂ ಪ್ರತಿಲಭ್ಯ ಚ।
03281060c ಜಗಾಮ ತತ್ರ ಯತ್ರಾಸ್ಯಾ ಭರ್ತುಃ ಶಾವಂ ಕಲೇವರಂ।।

ಯಮನು ಹೋದ ನಂತರ ಸಾವಿತ್ರಿಯು ಪತಿಯನ್ನು ಹಿಂದೆ ಪಡೆದು ಪತಿಯ ಶವವು ಮಲಗಿದ್ದಲ್ಲಿಗೆ ಬಂದಳು.

03281061a ಸಾ ಭೂಮೌ ಪ್ರೇಕ್ಷ್ಯ ಭರ್ತಾರಮುಪಸೃತ್ಯೋಪಗೂಃಯ ಚ।
03281061c ಉತ್ಸಂಗೇ ಶಿರ ಆರೋಪ್ಯ ಭೂಮಾವುಪವಿವೇಶ ಹ।।

ಅಲ್ಲಿ ನೆಲದ ಮೇಲೆ ಮಲಗಿದ್ದ ಪತಿಯನ್ನು ನೋಡಿ ಅವನ ಬಳಿ ಹೋಗಿ ಅವನನ್ನು ಆಲಂಗಿಸಿ ಅವನ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡು ಕುಳಿತುಕೊಂಡಳು.

03281062a ಸಂಜ್ಞಾಂ ಚ ಸತ್ಯವಾಽಲ್ಲಬ್ಧ್ವಾ ಸಾವಿತ್ರೀಮಭ್ಯಭಾಷತ।
03281062c ಪ್ರೋಷ್ಯಾಗತ ಇವ ಪ್ರೇಮ್ಣಾ ಪುನಃ ಪುನರುದೀಕ್ಷ್ಯ ವೈ।।

ಸತ್ಯವಾನನು ಎಚ್ಚೆತ್ತು, ಪ್ರಯಾಣದಿಂದ ಹಿಂದಿರುಗಿದವನಂತೆ ಪುನಃ ಪುನಃ ಅವಳನ್ನು ಪ್ರೀತಿಯಿಂದ ನೋಡುತ್ತಾ ಸಾವಿತ್ರಿಗೆ ಹೇಳಿದನು.

03281063 ಸತ್ಯವಾನುವಾಚ।
03281063a ಸುಚಿರಂ ಬತ ಸುಪ್ತೋಽಸ್ಮಿ ಕಿಮರ್ಥಂ ನಾವಬೋಧಿತಃ।
03281063c ಕ್ವ ಚಾಸೌ ಪುರುಷಃ ಶ್ಯಾಮೋ ಯೋಽಸೌ ಮಾಂ ಸಂಚಕರ್ಷ ಹ।।

ಸತ್ಯವಾನನು ಹೇಳಿದನು: “ನಾನು ಬಹಳ ಸಮಯ ಮಲಗಿಬಿಟ್ಟಿದ್ದೆ! ಏಕೆ ನನ್ನನ್ನು ಎಬ್ಬಿಸಲಿಲ್ಲ? ಇಲ್ಲಿಂದ ನನ್ನನ್ನು ಎಳೆದುಕೊಂಡು ಹೋಗುತ್ತಿದ್ದ ಆ ಕಪ್ಪು ಮನುಷ್ಯನು ಎಲ್ಲಿದ್ದಾನೆ?”

03281064 ಸಾವಿತ್ರ್ಯುವಾಚ।
03281064a ಸುಚಿರಂ ಬತ ಸುಪ್ತೋಽಸಿ ಮಮಾಂಕೇ ಪುರುಷರ್ಷಭ।
03281064c ಗತಃ ಸ ಭಗವಾನ್ದೇವಃ ಪ್ರಜಾಸಮ್ಯಮನೋ ಯಮಃ।।

ಸಾವಿತ್ರಿಯು ಹೇಳಿದಳು: “ಪುರುಷರ್ಷಭ! ನನ್ನ ತೊಡೆಯ ಮೇಲೆ ನೀನು ಬಹಳ ಹೊತ್ತು ಮಲಗಿಕೊಂಡಿದ್ದೆ. ಪ್ರಜೆಗಳನ್ನು ಸಂಯಮದಲ್ಲಿರಿಸುವ ಆ ಭಗವಾನ್ ದೇವ ಯಮನು ಹೊರಟು ಹೋದ!

03281065a ವಿಶ್ರಾಂತೋಽಸಿ ಮಹಾಭಾಗ ವಿನಿದ್ರಶ್ಚ ನೃಪಾತ್ಮಜ।
03281065c ಯದಿ ಶಕ್ಯಂ ಸಮುತ್ತಿಷ್ಠ ವಿಗಾಢಾಂ ಪಶ್ಯ ಶರ್ವರೀಂ।।

ಮಹಾಭಾಗ! ರಾಜಕುಮಾರ! ನೀನು ವಿಶ್ರಾಂತಿಯನ್ನು ಪಡೆದಾಯಿತು, ನಿದ್ದೆಯೂ ಮುಗಿಯಿತು. ಸಾಧ್ಯವಾದರೆ ಎದ್ದೇಳು. ನೋಡು. ರಾತ್ರಿಯಾಗಿದೆ.””

03281066 ಮಾರ್ಕಂಡೇಯ ಉವಾಚ।
03281066a ಉಪಲಭ್ಯ ತತಃ ಸಂಜ್ಞಾಂ ಸುಖಸುಪ್ತ ಇವೋತ್ಥಿತಃ।
03281066c ದಿಶಃ ಸರ್ವಾ ವನಾಂತಾಂಶ್ಚ ನಿರೀಕ್ಷ್ಯೋವಾಚ ಸತ್ಯವಾನ್

ಮಾರ್ಕಂಡೇಯನು ಹೇಳಿದನು: “ಸಂಜ್ಞೆಯನ್ನು ಮರಳಿ ಪಡೆದ ಸತ್ಯವಾನನು ಸುಖವಾದ ನಿದ್ದೆಯಿಂದಲೋ ಎಂಬಂತೆ ಮೇಲೆದ್ದು ವನದ ಕೊನೆಯವರೆಗೂ ಎಲ್ಲ ದಿಕ್ಕುಗಳಿಗೂ ತಿರುಗಿ ನೋಡಿ ಹೇಳಿದನು:

03281067a ಫಲಾಹಾರೋಽಸ್ಮಿ ನಿಷ್ಕ್ರಾಂತಸ್ತ್ವಯಾ ಸಹ ಸುಮಧ್ಯಮೇ।
03281067c ತತಃ ಪಾಟಯತಃ ಕಾಷ್ಠಂ ಶಿರಸೋ ಮೇ ರುಜಾಭವತ್।।

“ಸುಮಧ್ಯಮೇ! ಫಲಗಳನ್ನು ತರಲೆಂದು ನಿನ್ನೊಡನೆ ಹೊರಟಿದ್ದೆ. ಆಗ ಕಟ್ಟಿಗೆಯನ್ನು ಕಡಿಯುತ್ತಿದ್ದಾಗ ನನ್ನ ತಲೆಯಲ್ಲಿ ನೋವುಂಟಾಯಿತು.

03281068a ಶಿರೋಭಿತಾಪಸಂತಪ್ತಃ ಸ್ಥಾತುಂ ಚಿರಮಶಕ್ನುವನ್।
03281068c ತವೋತ್ಸಂಗೇ ಪ್ರಸುಪ್ತೋಽಹಮಿತಿ ಸರ್ವಂ ಸ್ಮರೇ ಶುಭೇ।।

ತಲೆನೋವಿನಿಂದ ಬಳಲುತ್ತಿದ್ದ ನಾನು ನಿಲ್ಲಲು ಅಶಕ್ತನಾಗಿ ನಿನ್ನ ತೊಡೆಯಮೇಲೆ ಮಲಗಿದ್ದೆ. ಶುಭೇ! ಇವೆಲ್ಲವೂ ನನಗೆ ನೆನಪಿದೆ.

03281069a ತ್ವಯೋಪಗೂಢಸ್ಯ ಚ ಮೇ ನಿದ್ರಯಾಪಹೃತಂ ಮನಃ।
03281069c ತತೋಽಪಶ್ಯಂ ತಮೋ ಘೋರಂ ಪುರುಷಂ ಚ ಮಹೌಜಸಂ।।

ನಿನ್ನ ಆಲಿಂಗನದಲ್ಲಿ ಮಲಗಿದ್ದ ನನ್ನನ್ನು ಗಾಢ ನಿದ್ರೆಯು ಆವರಿಸಿತು. ಆಗ ಘೋರ ಕತ್ತಲೆಯಲ್ಲಿ ಆ ಮಹೌಜಸ ಪುರುಷನನ್ನು ನೋಡಿದೆ.

03281070a ತದ್ಯದಿ ತ್ವಂ ವಿಜಾನಾಸಿ ಕಿಂ ತದ್ಬ್ರೂಹಿ ಸುಮಧ್ಯಮೇ।
03281070c ಸ್ವಪ್ನೋ ಮೇ ಯದಿ ವಾ ದೃಷ್ಟೋ ಯದಿ ವಾ ಸತ್ಯಮೇವ ತತ್।।

ಸುಮಧ್ಯಮೇ! ಅವನು ಯಾರೆಂದು ನಿನಗೆ ತಿಳಿದಿದ್ದರೆ ಹೇಳು. ನಾನು ನೋಡಿದ್ದುದು ಬರಿಯ ಸ್ವಪ್ನವೋ ಅಥವಾ ಸತ್ಯವಾದುದೋ ಹೇಳು.”

03281071a ತಮುವಾಚಾಥ ಸಾವಿತ್ರೀ ರಜನೀ ವ್ಯವಗಾಹತೇ।
03281071c ಶ್ವಸ್ತೇ ಸರ್ವಂ ಯಥಾವೃತ್ತಮಾಖ್ಯಾಸ್ಯಾಮಿ ನೃಪಾತ್ಮಜ।।

ಸಾವಿತ್ರಿಯು ಅವನಿಗೆ ಹೇಳಿದಳು: “ರಾತ್ರಿಯು ಪಸರಿಸುತ್ತಿದೆ. ರಾಜಕುಮಾರ! ನಿನಗೆ ಎಲ್ಲವನ್ನೂ ನಡೆದ ಹಾಗೆ ನಾಳೆ ಹೇಳುತ್ತೇನೆ.

03281072a ಉತ್ತಿಷ್ಠೋತ್ತಿಷ್ಠ ಭದ್ರಂ ತೇ ಪಿತರೌ ಪಶ್ಯ ಸುವ್ರತ।
03281072c ವಿಗಾಢಾ ರಜನೀ ಚೇಯಂ ನಿವೃತ್ತಶ್ಚ ದಿವಾಕರಃ।।

ಸುವ್ರತ! ಎದ್ದೇಳು! ನಿನಗೆ ಮಂಗಳವಾಗಲಿ! ನಿನ್ನ ತಂದೆ-ತಾಯಿಯರನ್ನು ನೋಡು. ಸೂರ್ಯನು ಮುಳುಗಿದ್ದಾನೆ ಮತ್ತು ಕತ್ತಲೆಯು ಹರಡುತ್ತಿದೆ.

03281073a ನಕ್ತಂಚರಾಶ್ಚರಂತ್ಯೇತೇ ಹೃಷ್ಟಾಃ ಕ್ರೂರಾಭಿಭಾಷಿಣಃ।
03281073c ಶ್ರೂಯಂತೇ ಪರ್ಣಶಬ್ದಾಶ್ಚ ಮೃಗಾಣಾಂ ಚರತಾಂ ವನೇ।।

ರಾತ್ರಿಯಲ್ಲಿ ತಿರುಗಾಡುವ ಪ್ರಾಣಿಗಳು ಕ್ರೂರವಾಗಿ ಕೂಗುತ್ತಾ ಇಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿವೆ ಮತ್ತು ವನದಲ್ಲಿ ತಿರುಗಾಡುತ್ತಿರುವ ಮೃಗಗಳಿಂದ ಅಲ್ಲಾಡುವ ಎಲೆಗಳ ಶಬ್ಧವು ಕೇಳಿಬರುತ್ತಿದೆ.

03281074a ಏತಾಃ ಶಿವಾ ಘೋರನಾದಾ ದಿಶಂ ದಕ್ಷಿಣಪಶ್ಚಿಮಾಂ।
03281074c ಆಸ್ಥಾಯ ವಿರುವಂತ್ಯುಗ್ರಾಃ ಕಂಪಯಂತ್ಯೋ ಮನೋ ಮಮ।।

ನರಿಗಳ ಘೋರನಾದವು ದಕ್ಷಿಣಪಶ್ಚಿಮ ದಿಕ್ಕಿನಿಂದ ಕೇಳಿ ಬರುತ್ತಿದೆ. ಅವುಗಳ ಉಗ್ರಕೂಗನ್ನು ಕೇಳಿ ನನ್ನ ಮನವು ನಡುಗುತ್ತಿದೆ.”

03281075 ಸತ್ಯವಾನುವಾಚ 03281075a ವನಂ ಪ್ರತಿಭಯಾಕಾರಂ ಘನೇನ ತಮಸಾ ವೃತಂ।
03281075c ನ ವಿಜ್ಞಾಸ್ಯಸಿ ಪಂಥಾನಂ ಗಂತುಂ ಚೈವ ನ ಶಕ್ಷ್ಯಸಿ।।

ಸತ್ಯವಾನನು ಹೇಳಿದನು: “ದಟ್ಟ ಕತ್ತಲೆಯಿಂದ ಆವೃತವಾದ ಈ ವನವು ಭಯವನ್ನುಂಟುಮಾಡುತ್ತಿದೆ. ನಿನಗೆ ದಾರಿಯು ಗೊತ್ತಾಗುವುದಿಲ್ಲ ಮತ್ತು ನಿನಗೆ ನಡೆಯಲು ಸಾಧ್ಯವಾಗುವುದಿಲ್ಲ.”

03281076 ಸಾವಿತ್ರ್ಯುವಾಚ।
03281076a ಅಸ್ಮಿನ್ನದ್ಯ ವನೇ ದಗ್ಧೇ ಶುಷ್ಕವೃಕ್ಷಃ ಸ್ಥಿತೋ ಜ್ವಲನ್।
03281076c ವಾಯುನಾ ಧಮ್ಯಮಾನೋಽಗ್ನಿರ್ದೃಶ್ಯತೇಽತ್ರ ಕ್ವ ಚಿತ್ಕ್ವ ಚಿತ್।।

ಸಾವಿತ್ರಿಯು ಹೇಳಿದಳು: “ಈ ವನದಲ್ಲಿ ಸುಟ್ಟ ಒಣ ಮರದಲ್ಲಿ ಉರಿಯುತ್ತಿರುವ ಬೆಂಕಿಯು ಇನ್ನೂ ಇದೆ. ಗಾಳಿಯಿಂದ ಉರಿಯುತ್ತಿರುವ ಈ ಬೆಂಕಿಯ ಜ್ವಾಲೆಯು ಅತ್ತಿತ್ತ ಓಲಾಡುತ್ತಿದೆ.

03281077a ತತೋಽಗ್ನಿಮಾನಯಿತ್ವೇಹ ಜ್ವಾಲಯಿಷ್ಯಾಮಿ ಸರ್ವತಃ।
03281077c ಕಾಷ್ಠಾನೀಮಾನಿ ಸಂತೀಹ ಜಹಿ ಸಂತಾಪಮಾತ್ಮನಃ।।

ಇಲ್ಲಿರುವ ಕಟ್ಟಿಗೆಗಳಿಂದ ಆ ಅಗ್ನಿಯನ್ನು ಬೆಳಗಿಸುತ್ತೇನೆ. ಸಂತಾಪಪಡಬೇಡ.

03281078a ಯದಿ ನೋತ್ಸಹಸೇ ಗಂತುಂ ಸರುಜಂ ತ್ವಾಭಿಲಕ್ಷಯೇ।
03281078c ನ ಚ ಜ್ಞಾಸ್ಯಸಿ ಪಂಥಾನಂ ತಮಸಾ ಸಂವೃತೇ ವನೇ।।
03281079a ಶ್ವಃ ಪ್ರಭಾತೇ ವನೇ ದೃಶ್ಯೇ ಯಾಸ್ಯಾವೋಽನುಮತೇ ತವ।
03281079c ವಸಾವೇಹ ಕ್ಷಪಾಮೇತಾಂ ರುಚಿತಂ ಯದಿ ತೇಽನಘ।।

ಒಂದುವೇಳೆ ನಿನಗೆ ನಡೆಯಲು ಸಾಧ್ಯವಾಗದಿದ್ದರೆ, ತಲೆನೋವು ಇನ್ನೂ ಇದ್ದರೆ, ಕತ್ತಲೆ ತುಂಬಿದ ಈ ವನದಲ್ಲಿ ದಾರಿಯು ತಿಳಿಯದೇ ಇದ್ದರೆ, ನಿನಗೆ ಅನುಮತಿಯಿದ್ದರೆ ನಾಳೆ ಬೆಳಿಗ್ಗೆ ವನವು ಸರಿಯಾಗಿ ಕಾಣುವಾಗ ಹೋಗೋಣ. ಅನಘ! ನಿನಗೆ ಇಷ್ಟವಾದರೆ ಈ ರಾತ್ರಿಯನ್ನು ವನದಲ್ಲಿಯೇ ಕಳೆಯೋಣ.”

03281080 ಸತ್ಯವಾನುವಾಚ।
03281080a ಶಿರೋರುಜಾ ನಿವೃತ್ತಾ ಮೇ ಸ್ವಸ್ಥಾನ್ಯಂಗಾನಿ ಲಕ್ಷಯೇ।
03281080c ಮಾತಾಪಿತೃಭ್ಯಾಮಿಚ್ಚಾಮಿ ಸಂಗಮಂ ತ್ವತ್ಪ್ರಸಾದಜಂ।।

ಸತ್ಯವಾನನು ಹೇಳಿದನು: “ನನ್ನ ತಲೆನೋವು ನಿಂತಿದೆ ಮತ್ತು ನನ್ನ ಅಂಗಾಂಗಗಳು ಸ್ವಸ್ಥವಾಗಿವೆ. ನಿನಗೆ ಸರಿಯೆನಿಸಿದರೆ ನನ್ನ ತಂದೆ-ತಾಯಿಯರನ್ನು ಭೇಟಿಯಾಗ ಬಯಸುತ್ತೇನೆ.

03281081a ನ ಕದಾ ಚಿದ್ವಿಕಾಲೇ ಹಿ ಗತಪೂರ್ವೋ ಮಯಾಶ್ರಮಃ।
03281081c ಅನಾಗತಾಯಾಂ ಸಂಧ್ಯಾಯಾಂ ಮಾತಾ ಮೇ ಪ್ರರುಣದ್ಧಿ ಮಾಂ।।

ಈ ಮೊದಲು ಎಂದೂ ನಾನು ನನ್ನ ಆಶ್ರಮಕ್ಕೆ ತಡವಾಗಿ ಹೋಗಿಲ್ಲ. ನನ್ನ ತಾಯಿಯು ಸಂಜೆಯ ನಂತರ ಬರುವುದನ್ನು ಒಪ್ಪಿಕೊಳ್ಳುವುದಿಲ್ಲ.

03281082a ದಿವಾಪಿ ಮಯಿ ನಿಷ್ಕ್ರಾಂತೇ ಸಂತಪ್ಯೇತೇ ಗುರೂ ಮಮ।
03281082c ವಿಚಿನೋತಿ ಚ ಮಾಂ ತಾತಃ ಸಹೈವಾಶ್ರಮವಾಸಿಭಿಃ।।

ಬೆಳಕಿನಲ್ಲಿ ನಾನು ಹೊರಗೆ ಹೋದರೂ ನನ್ನ ಹಿರಿಯರು ಸಂತಪಿಸುತ್ತಾರೆ ಮತ್ತು ನನ್ನ ತಂದೆಯು ಆಶ್ರಮವಾಸಿಗಳೊಂದಿಗೆ ನನ್ನನ್ನು ಹುಡುಕುತ್ತಾನೆ.

03281083a ಮಾತ್ರಾ ಪಿತ್ರಾ ಚ ಸುಭೃಶಂ ದುಃಖಿತಾಭ್ಯಾಮಹಂ ಪುರಾ।
03281083c ಉಪಾಲಬ್ಧಃ ಸುಬಹುಶಶ್ಚಿರೇಣಾಗಚ್ಚಸೀತಿ ಹ।।

ಹಿಂದೆಯೂ ಕೂಡ ನನ್ನ ತಂದೆ-ತಾಯಿಯರು ಬಹಳಸಾರಿ ನಾನು ತಡವಾಗಿ ಬರುತ್ತೇನೆಂದು ದುಃಖಿತರಾಗಿ ಹೇಳಿದ್ದರು.

03281084a ಕಾ ತ್ವವಸ್ಥಾ ತಯೋರದ್ಯ ಮದರ್ಥಮಿತಿ ಚಿಂತಯೇ।
03281084c ತಯೋರದೃಶ್ಯೇ ಮಯಿ ಚ ಮಹದ್ದುಃಖಂ ಭವಿಷ್ಯತಿ।।

ನನಗಾಗಿ ಕಾಯುತ್ತಿರುವ ಅವರು ಇಂದು ಯಾವ ಅವಸ್ಥೆಯಲ್ಲಿರಬಹುದು? ನನ್ನನ್ನು ಕಾಣದೇ ಅವರಿಗೆ ಮಹಾ ದುಃಖವುಂಟಾಗಿರಬಹುದು.

03281085a ಪುರಾ ಮಾಂ ಊಚತುಶ್ಚೈವ ರಾತ್ರಾವಸ್ರಾಯಮಾಣಕೌ।
03281085c ಭೃಶಂ ಸುದುಃಖಿತೌ ವೃದ್ಧೌ ಬಹುಶಃ ಪ್ರೀತಿಸಂಯುತೌ।।
03281086a ತ್ವಯಾ ಹೀನೌ ನ ಜೀವಾವ ಮುಹೂರ್ತಮಪಿ ಪುತ್ರಕ।
03281086c ಯಾವದ್ಧರಿಷ್ಯಸೇ ಪುತ್ರ ತಾವನ್ನೌ ಜೀವಿತಂ ಧ್ರುವಂ।।

ಈ ವೃದ್ಧರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಒಮ್ಮೆ ರಾತ್ರಿ ನನ್ನ ಬಗ್ಗೆ ತುಂಬಾ ಚಿಂತೆಗೊಳಗಾದ ಅವರು ಕಣ್ಣೀರಿಡುತ್ತಾ ಹೇಳಿದರು: “ಪುತ್ರಕ! ನೀನಿಲ್ಲದೆ ಒಂದು ಮುಹೂರ್ತವೂ ನಾವು ಜೀವಿತರಾಗಿರುವುದಿಲ್ಲ. ಪುತ್ರ! ನೀನು ಇರುವವರೆಗೆ ನಾವು ಜೀವಿತವಾಗಿರುವೆವು.

03281087a ವೃದ್ಧಯೋರಂಧಯೋರ್ಯಷ್ಟಿಸ್ತ್ವಯಿ ವಂಶಃ ಪ್ರತಿಷ್ಠಿತಃ।
03281087c ತ್ವಯಿ ಪಿಂಡಶ್ಚ ಕೀರ್ತಿಶ್ಚ ಸಂತಾನಂ ಚಾವಯೋರಿತಿ।।

ಈ ಕುರುಡು ಮುದುಕರ ಕೋಲು ನೀನು. ನಮ್ಮ ವಂಶವು ನಿನ್ನ ಮೇಲೆ ನಿಂತಿದೆ. ನಮ್ಮ ಪಿಂಡ, ಕೀರ್ತಿ ಮತ್ತು ಸಂತಾನಗಳು ನಿನ್ನ ಮೇಲೆಯೇ ನಿಂತಿವೆ.”

03281088a ಮಾತಾ ವೃದ್ಧಾ ಪಿತಾ ವೃದ್ಧಸ್ತಯೋರ್ಯಷ್ಟಿರಹಂ ಕಿಲ।
03281088c ತೌ ರಾತ್ರೌ ಮಾಮಪಶ್ಯಂತೌ ಕಾಮವಸ್ಥಾಂ ಗಮಿಷ್ಯತಃ।।

ಇಂದು ರಾತ್ರಿ ನನ್ನನ್ನು ನೋಡದೇ ಇದ್ದರೆ ನಾನೇ ಅವರ ಕೋಲು ಎಂದು ಹೇಳುವ ಆ ನನ್ನ ವೃದ್ಧ ಮಾತಾಪಿತರು ಯಾವ ಅವಸ್ಥೆಯಲ್ಲಿರಬಹುದು?

03281089a ನಿದ್ರಾಯಾಶ್ಚಾಭ್ಯಸೂಯಾಮಿ ಯಸ್ಯಾ ಹೇತೋಃ ಪಿತಾ ಮಮ।
03281089c ಮಾತಾ ಚ ಸಂಶಯಂ ಪ್ರಾಪ್ತಾ ಮತ್ಕೃತೇಽನಪಕಾರಿ। ಣೀ।

ನನ್ನ ತಂದೆ ಮತ್ತು ತಾಯಿಯರಲ್ಲಿ ನನ್ನ ಕುರಿತು ಸಂಶಯವನ್ನುಂಟುಮಾಡಿದುದಕ್ಕೆ ಈ ನಿದ್ರೆಯನ್ನು ನಾನು ನಿಂದಿಸುತ್ತೇನೆ. ನಾನೇ ನನ್ನನ್ನು ಈ ಆಪತ್ತಿನಲ್ಲಿ ತಂದಿದ್ದೇನೆ.

03281090a ಅಹಂ ಚ ಸಂಶಯಂ ಪ್ರಾಪ್ತಃ ಕೃಚ್ಚ್ರಾಮಾಪದಮಾಸ್ಥಿತಃ।
03281090c ಮಾತಾಪಿತೃಭ್ಯಾಂ ಹಿ ವಿನಾ ನಾಹಂ ಜೀವಿತುಮುತ್ಸಹೇ।।

ನಾನೂ ಕೂಡ ಅಪಾಯದಲ್ಲಿದ್ದೇನೆ. ನಾನು ಹಾಳಾಗಿಹೋದೆ! ನಾನೂ ಕೂಡ ನನ್ನ ತಂದೆ-ತಾಯಿಯರಿಲ್ಲದೇ ಬದುಕಿರಲಾರೆ.

03281091a ವ್ಯಕ್ತಮಾಕುಲಯಾ ಬುದ್ಧ್ಯಾ ಪ್ರಜ್ಞಾಚಕ್ಷುಃ ಪಿತಾ ಮಮ।
03281091c ಏಕೈಕಮಸ್ಯಾಂ ವೇಲಾಯಾಂ ಪೃಚ್ಚತ್ಯಾಶ್ರಮವಾಸಿನಂ।।

ಪ್ರಜ್ಞೆಯೇ ಕಣ್ಣುಗಳಾಗಿರುವ ನನ್ನ ತಂದೆಯು ಈ ಹೊತ್ತಿನಲ್ಲಿ ಅಶ್ರಮದಲ್ಲಿರುವ ಪ್ರತಿಯೊಬ್ಬನಲ್ಲಿಯೂ ವ್ಯಾಕುಲನಾಗಿ ನನ್ನ ಕುರಿತು ಕೇಳುತ್ತಿದ್ದಾನೆ ಎಂದು ನನಗೆ ತಿಳಿದಿದೆ.

03281092a ನಾತ್ಮಾನಮನುಶೋಚಾಮಿ ಯಥಾಹಂ ಪಿತರಂ ಶುಭೇ।
03281092c ಭರ್ತಾರಂ ಚಾಪ್ಯನುಗತಾಂ ಮಾತರಂ ಪರಿದುರ್ಬಲಾಂ।।

ಶುಭೇ! ನನ್ನ ತಂದೆ ಮತ್ತು ಪತಿಯನ್ನು ಅನುಸರಿಸಿ ಹೋಗುವ ತುಂಬಾ ದುರ್ಬಲಳಾದ ನನ್ನ ತಾಯಿಯ ಕುರಿತು ಶೋಕಿಸುವಷ್ಟು ನಾನು ನನ್ನ ಕುರಿತು ಶೋಕಿಸುವುದಿಲ್ಲ.

03281093a ಮತ್ಕೃತೇನ ಹಿ ತಾವದ್ಯ ಸಂತಾಪಂ ಪರಮೇಷ್ಯತಃ।
03281093c ಜೀವಂತಾವನುಜೀವಾಮಿ ಭರ್ತವ್ಯೌ ತೌ ಮಯೇತಿ ಹ।
03281093e ತಯೋಃ ಪ್ರಿಯಂ ಮೇ ಕರ್ತವ್ಯಮಿತಿ ಜೀವಾಮಿ ಚಾಪ್ಯಹಂ।।

ಇಂದು ನನ್ನ ಕಾರಣದಿಂದ ಅವರು ಪರಮ ಸಂತಾಪವನ್ನು ಹೊಂದಿರುತ್ತಾರೆ. ಅವರು ಬದುಕಿದ್ದರೆ ನಾನೂ ಬದುಕಿರುತ್ತೇನೆ. ನಾನು ಅವರನ್ನು ಪೊರೆಯಬೇಕು. ಅವರಿಗೆ ಪ್ರಿಯವಾದುದನ್ನು ಮಾಡಬೇಕು, ಅದಕ್ಕಾಗಿಯೇ ನಾನು ಜೀವಿಸಿದ್ದೇನೆ.””

03281094 ಮಾರ್ಕಂಡೇಯ ಉವಾಚ।
03281094a ಏವಮುಕ್ತ್ವಾ ಸ ಧರ್ಮಾತ್ಮಾ ಗುರುವರ್ತೀ ಗುರುಪ್ರಿಯಃ।
03281094c ಉಚ್ಚ್ರಿತ್ಯ ಬಾಹೂ ದುಃಖಾರ್ತಃ ಸಸ್ವರಂ ಪ್ರರುರೋದ ಹ।।

ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿ ಆ ಧರ್ಮಾತ್ಮ, ಹಿರಿಯರನ್ನು ಅನುಸರಿಸುವ ಮತ್ತು ಹಿರಿಯರನ್ನು ಪ್ರೀತಿಸುವ ಸತ್ಯವಾನನು ದುಃಖಾರ್ತನಾಗಿ ಬಾಹುಗಳನ್ನು ಮೇಲೆತ್ತಿ ಜೋರಾಗಿ ಅಳತೊಡಗಿದನು.

03281095a ತತೋಽಬ್ರವೀತ್ತಥಾ ದೃಷ್ಟ್ವಾ ಭರ್ತಾರಂ ಶೋಕಕರ್ಶಿತಂ।
03281095c ಪ್ರಮೃಜ್ಯಾಶ್ರೂಣಿ ನೇತ್ರಾಭ್ಯಾಂ ಸಾವಿತ್ರೀ ಧರ್ಮಚಾರಿಣೀ।।

ಶೋಕಕರ್ಷಿತ ಪತಿಯನ್ನು ಕಂಡು ಧರ್ಮಚಾರಿಣೀ ಸಾವಿತ್ರಿಯು ಅವನ ಎರಡೂ ಕಣ್ಣುಗಳಿಂದ ಕಣ್ಣೀರನ್ನು ಒರೆಸಿ ಹೇಳಿದಳು.

03281096a ಯದಿ ಮೇಽಸ್ತಿ ತಪಸ್ತಪ್ತಂ ಯದಿ ದತ್ತಂ ಹುತಂ ಯದಿ।
03281096c ಶ್ವಶ್ರೂಶ್ವಶುರಭರ್ತೄಣಾಂ ಮಮ ಪುಣ್ಯಾಸ್ತು ಶರ್ವರೀ।।

“ನಾನು ತಪಸ್ಸನ್ನು ತಪಿಸಿದ್ದರೆ, ದಾನವನ್ನಿತ್ತರೆ, ಆಹುತಿಯನ್ನಿತ್ತಿದ್ದರೆ ನನ್ನ ಅತ್ತೆ-ಮಾವಂದಿರಿಗೆ ಮತ್ತು ಪತಿಗೆ ಈ ರಾತ್ರಿಯು ಪುಣ್ಯವಾಗಿರುತ್ತದೆ.

03281097a ನ ಸ್ಮರಾಮ್ಯುಕ್ತಪೂರ್ವಾಂ ವೈ ಸ್ವೈರೇಷ್ವಪ್ಯನೃತಾಂ ಗಿರಂ।
03281097c ತೇನ ಸತ್ಯೇನ ತಾವದ್ಯ ಧ್ರಿಯೇತಾಂ ಶ್ವಶುರೌ ಮಮ।।

ಈ ಹಿಂದೆ ನಾನು ಸುಳ್ಳನ್ನು ಮಾತನಾಡಿದ್ದುದು ನನಗೆ ನೆನಪಿಲ್ಲ. ಇದು ಸತ್ಯವೇ ಆಗಿದ್ದರೆ ನನ್ನ ಅತ್ತೆ-ಮಾವಂದಿರು ಇಂದು ಬದುಕುಳಿಯುತ್ತಾರೆ.”

03281098 ಸತ್ಯವಾನುವಾಚ।
03281098a ಕಾಮಯೇ ದರ್ಶನಂ ಪಿತ್ರೋರ್ಯಾಹಿ ಸಾವಿತ್ರಿ ಮಾಚಿರಂ।
03281098c ಪುರಾ ಮಾತುಃ ಪಿತುರ್ವಾಪಿ ಯದಿ ಪಶ್ಯಾಮಿ ವಿಪ್ರಿಯಂ।
03281098e ನ ಜೀವಿಷ್ಯೇ ವರಾರೋಹೇ ಸತ್ಯೇನಾತ್ಮಾನಮಾಲಭೇ।।

ಸತ್ಯವಾನನು ಹೇಳಿದನು: “ತಂದೆಯನ್ನು ನೋಡಲು ಬಯಸುತ್ತೇನೆ. ಬಾ ಸಾವಿತ್ರಿ. ತಡಮಾಡಬೇಡ. ವರಾರೋಹೇ! ನನ್ನ ತಂದೆ-ತಾಯಿಯರಿಗೆ ಏನಾದರೂ ಅಪ್ರಿಯವು ಆದುದನ್ನು ನೋಡುವುದದರೊಳಗೆ ನಾನು ಬದುಕಿರುವುದಿಲ್ಲ. ನನ್ನ ಮೇಲೆ ಆಣೆಯಿಟ್ಟು ಹೇಳುತ್ತೇನೆ.

03281099a ಯದಿ ಧರ್ಮೇ ಚ ತೇ ಬುದ್ಧಿರ್ಮಾಂ ಚೇಜ್ಜೀವಂತಮಿಚ್ಚಸಿ।
03281099c ಮಮ ಪ್ರಿಯಂ ವಾ ಕರ್ತವ್ಯಂ ಗಚ್ಚಸ್ವಾಶ್ರಮಮಂತಿಕಾತ್।।

ನಿನ್ನ ಬುದ್ಧಿಯು ಧರ್ಮದಲ್ಲಿದ್ದರೆ, ಮತ್ತು ನನ್ನನ್ನು ಜೀವಂತವಾಗಿರಲು ಇಚ್ಛಿಸುವೆಯಾದರೆ ಮತ್ತು ನನಗೆ ಪ್ರಿಯವಾದುದನ್ನು ಮಾಡಬೇಕಾದರೆ ತಕ್ಷಣವೇ ಆಶ್ರಮಕ್ಕೆ ಹೋಗೋಣ.””

03281100 ಮಾರ್ಕಂಡೇಯ ಉವಾಚ।
03281100a ಸಾವಿತ್ರೀ ತತ ಉತ್ಥಾಯ ಕೇಶಾನ್ಸಂಯಮ್ಯ ಭಾಮಿನೀ।
03281100c ಪತಿಮುತ್ಥಾಪಯಾಮಾಸ ಬಾಹುಭ್ಯಾಂ ಪರಿಗೃಹ್ಯ ವೈ।।

ಮಾರ್ಕಂಡೇಯನು ಹೇಳಿದನು: “ಆಗ ಭಾಮಿನೀ ಸಾವಿತ್ರಿಯು ಮೇಲೆದ್ದು ಕೂದಲನ್ನು ಕಟ್ಟಿ ಅವನ ಬಾಹುಗಳನ್ನು ಹಿಡಿದು ಪತಿಯನ್ನು ಮೇಲಕ್ಕೆತ್ತಿದಳು.

03281101a ಉತ್ಥಾಯ ಸತ್ಯವಾಂಶ್ಚಾಪಿ ಪ್ರಮೃಜ್ಯಾಂಗಾನಿ ಪಾಣಿನಾ।
03281101c ದಿಶಃ ಸರ್ವಾಃ ಸಮಾಲೋಕ್ಯ ಕಠಿನೇ ದೃಷ್ಟಿಮಾದಧೇ।।

ಸತ್ಯವಾನನೂ ಕೂಡ ಮೇಲೆದ್ದು ತನ್ನ ಕೈಗಳಿಂದ ದೇಹವನ್ನು ಉಜ್ಜಿಕೊಂಡನು. ಸುತ್ತಲೂ ಕಣ್ಣು ಹಾಯಿಸಿ, ಬುಟ್ಟಿಯನ್ನು ನೋಡಿದನು.

03281102a ತಮುವಾಚಾಥ ಸಾವಿತ್ರೀ ಶ್ವಃ ಫಲಾನೀಹ ನೇಷ್ಯಸಿ।
03281102c ಯೋಗಕ್ಷೇಮಾರ್ಥಮೇತತ್ತೇ ನೇಷ್ಯಾಮಿ ಪರಶುಂ ತ್ವಹಂ।।

ಆಗ ಸಾವಿತ್ರಿಯು ಅವನಿಗೆ ಹೇಳಿದಳು: “ನಾಳೆ ಬಂದು ಫಲವನ್ನು ಒಯ್ಯಿ. ಆದರೆ ಯೋಗಕ್ಷೇಮಕ್ಕಾಗಿ ನಿನ್ನ ಈ ಕೊಡಲಿಯನ್ನು ತೆಗೆದುಕೊಳ್ಳುತ್ತೇನೆ.”

03281103a ಕೃತ್ವಾ ಕಠಿನಭಾರಂ ಸಾ ವೃಕ್ಷಶಾಖಾವಲಂಬಿನಂ।
03281103c ಗೃಹೀತ್ವಾ ಪರಶುಂ ಭರ್ತುಃ ಸಕಾಶಂ ಪುನರಾಗಮತ್।।

ಅವಳು ತುಂಬಿದ್ದ ಬುಟ್ಟಿಯನ್ನು ಮರದ ರೆಂಬೆಗೆ ಕಟ್ಟಿ ಕೊಡಲಿಯನ್ನು ಹಿಡಿದು ಪತಿಯ ಬಳಿ ಮರಳಿ ಬಂದಳು.

03281104a ವಾಮೇ ಸ್ಕಂಧೇ ತು ವಾಮೋರೂರ್ಭರ್ತುರ್ಬಾಹುಂ ನಿವೇಶ್ಯ ಸಾ।
03281104c ದಕ್ಷಿಣೇನ ಪರಿಷ್ವಜ್ಯ ಜಗಾಮ ಮೃದುಗಾಮಿನೀ।।

ಆ ವಾಮೋರುವು ತನ್ನ ಪತಿಯ ತೋಳನ್ನು ತನ್ನ ಎಡ ಭುಜದ ಮೇಲಿರಿಸಿ, ತನ್ನ ಬಲಗೈಯಿಂದ ಅವನ ಸೊಂಟವನ್ನು ಬಳಸಿ, ಮೆಲ್ಲನೆ ನಡೆದಳು.

03281105 ಸತ್ಯವಾನುವಾಚ।
03281105a ಅಭ್ಯಾಸಗಮನಾದ್ಭೀರು ಪಂಥಾನೋ ವಿದಿತಾ ಮಮ।
03281105c ವೃಕ್ಷಾಂತರಾಲೋಕಿತಯಾ ಜ್ಯೋತ್ಸ್ನಯಾ ಚಾಪಿ ಲಕ್ಷಯೇ।।

ಸತ್ಯವಾನನು ಹೇಳಿದನು: “ಸುಂದರಿ! ನನಗೆ ಇಲ್ಲಿ ಬರುವ ಅಭ್ಯಾಸವಿದೆ. ಆದುದರಿಂದ ನನಗೆ ದಾರಿಯು ಗೊತ್ತು. ಮರಗಳ ಮಧ್ಯದಿಂದ ಬರುವ ಬೆಳದಿಂಗಳ ಬೆಳಕಿನಲ್ಲಿ ನನಗೆ ಕಾಣುತ್ತಿದೆ.

03281106a ಆಗತೌ ಸ್ವಃ ಪಥಾ ಯೇನ ಫಲಾನ್ಯವಚಿತಾನಿ ಚ।
03281106c ಯಥಾಗತಂ ಶುಭೇ ಗಚ್ಚ ಪಂಥಾನಂ ಮಾ ವಿಚಾರಯ।।

ಶುಭೇ! ಏನೂ ವಿಚಾರಮಾಡದೇ ಫಲವನ್ನು ತರಲು ಯಾವ ದಾರಿಯಿಂದ ಬಂದಿದ್ದೆವೋ ಅದೇ ದಾರಿಯನ್ನು ಹಿಡಿದು ಹೋಗು.

03281107a ಪಲಾಶಷಂಡೇ ಚೈತಸ್ಮಿನ್ಪಂಥಾ ವ್ಯಾವರ್ತತೇ ದ್ವಿಧಾ।
03281107c ತಸ್ಯೋತ್ತರೇಣ ಯಃ ಪನ್ಥಾಸ್ತೇನ ಗಚ್ಚ ತ್ವರಸ್ವ ಚ।।
03281107E ಸ್ವಸ್ಥೋಽಸ್ಮಿ ಬಲವಾನಸ್ಮಿ ದಿದೃಕ್ಷುಃ ಪಿತರಾವುಭೌ।।

ಈ ಪಲಾಶವೃಕ್ಷದ ಬಳಿ ದಾರಿಯು ಕವಲೊಡೆಯುತ್ತದೆ. ಅದರ ಉತ್ತರ ದಿಕ್ಕಿನ ದಾರಿಯಲ್ಲಿ ಬೇಗನೆ ಹೋಗು. ನಾನು ಈಗ ಸರಿಯಾಗಿದ್ದೇನೆ. ಶಕ್ತಿಯು ಬಂದಿದೆ. ತಂದೆ-ತಾಯಂದಿರನ್ನು ನೋಡ ಬಯಸುತ್ತೇನೆ.””

03281108 ಮಾರ್ಕಂಡೇಯ ಉವಾಚ।
03281108a ಬ್ರುವನ್ನೇವಂ ತ್ವರಾಯುಕ್ತಃ ಸ ಪ್ರಾಯಾದಾಶ್ರಮಂ ಪ್ರತಿ।

ಮಾರ್ಕಂಡೇಯನು ಹೇಳಿದನು: “ಹೀಗೆ ಮಾತನಾಡುತ್ತಾ ಅವನು ಆಶ್ರಮದ ಕಡೆ ತ್ವರೆಮಾಡಿ ನಡೆದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ಏಕಾಶೀತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಂಭತ್ತೊಂದನೆಯ ಅಧ್ಯಾಯವು.