ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 280
ಸಾರ
ನಾಲ್ಕನೆಯ ದಿನದಲ್ಲಿ ಸತ್ಯವಾನನು ಸಾಯುತ್ತಾನೆಂದು ಯೋಚಿಸಿದ ಸಾವಿತ್ರಿಯು ಹಗಲು ರಾತ್ರಿ ಒಂದೇ ಸ್ಥಳದಲ್ಲಿ ನಿಶ್ಚಲವಾಗಿ ನಿಲ್ಲುವ ಮೂರುರಾತ್ರಿಗಳ ವ್ರತವನ್ನು ಆಚರಿಸಿದುದು (1-9). ನಾಲ್ಕನೆಯ ದಿನ ಸತ್ಯವಾನನು ಹೆಗಲಮೇಲೆ ಕೊಡಲಿಯನ್ನು ಹಾಕಿಕೊಂಡು ಕಾಡಿಗೆ ಹೊರಡಲು ಸಾವಿತ್ರಿಯೂ ಅವನನ್ನು ಹಿಂಬಾಲಿಸಿ ನಡೆದುದು (10-33).
03280001 ಮಾರ್ಕಂಡೇಯ ಉವಾಚ।
03280001a ತತಃ ಕಾಲೇ ಬಹುತಿಥೇ ವ್ಯತಿಕ್ರಾಂತೇ ಕದಾ ಚನ।
03280001c ಪ್ರಾಪ್ತಃ ಸ ಕಾಲೋ ಮರ್ತವ್ಯಂ ಯತ್ರ ಸತ್ಯವತಾ ನೃಪ।।
ಮಾರ್ಕಂಡೇಯನು ಹೇಳಿದನು: “ನೃಪ! ಹಾಗೆಯೇ ಬಹುದಿನಗಳು ಕಳೆದಂತೆ ಸತ್ಯವಾನನು ಸಾಯುವ ಕಾಲವು ಪ್ರಾಪ್ತವಾಯಿತು.
03280002a ಗಣಯಂತ್ಯಾಶ್ಚ ಸಾವಿತ್ರ್ಯಾ ದಿವಸೇ ದಿವಸೇ ಗತೇ।
03280002c ತದ್ವಾಕ್ಯಂ ನಾರದೇನೋಕ್ತಂ ವರ್ತತೇ ಹೃದಿ ನಿತ್ಯಶಃ।।
ಸಾವಿತ್ರಿಯು ನಾರದನು ಹೇಳಿದ ಆ ವಾಕ್ಯವನ್ನು ನಿತ್ಯವೂ ಹೃದಯದಲ್ಲಿಟ್ಟುಕೊಂಡು ಕಳೆದುಹೋದ ದಿನ ದಿನವನ್ನೂ ಲೆಕ್ಕಮಾಡಿಕೊಂಡಿದ್ದಳು.
03280003a ಚತುರ್ಥೇಽಹನಿ ಮರ್ತವ್ಯಮಿತಿ ಸಂಚಿಂತ್ಯ ಭಾಮಿನೀ।
03280003c ವ್ರತಂ ತ್ರಿರಾತ್ರಮುದ್ದಿಶ್ಯ ದಿವಾರಾತ್ರಂ ಸ್ಥಿತಾಭವತ್।।
ನಾಲ್ಕನೆಯ ದಿನದಲ್ಲಿ ಸಾಯುತ್ತಾನೆಂದು ಯೋಚಿಸಿದ ಭಾಮಿನಿಯು ಮೂರುರಾತ್ರಿಗಳ ವ್ರತವನ್ನು ಆಚರಿಸಿ ಹಗಲು ರಾತ್ರಿ ಒಂದೇ ಸ್ಥಳದಲ್ಲಿ ನಿಶ್ಚಲವಾಗಿ ನಿಂತಳು.
03280004a ತಂ ಶ್ರುತ್ವಾ ನಿಯಮಂ ದುಃಖಂ ವಧ್ವಾ ದುಃಖಾನ್ವಿತೋ ನೃಪಃ।
03280004c ಉತ್ಥಾಯ ವಾಕ್ಯಂ ಸಾವಿತ್ರೀಮಬ್ರವೀತ್ಪರಿಸಾಂತ್ವಯನ್।।
ತನ್ನ ಸೊಸೆಯು ಈ ರೀತಿಯ ಕಠಿಣ ವ್ರತವನ್ನು ಕೈಗೊಂಡಿದ್ದಾಳೆಂದು ಕೇಳಿದ ನೃಪನು ದುಃಖಾನ್ವಿತನಾಗಿ ಮೇಲೆದ್ದು ಸಾವಿತ್ರಿಯನ್ನು ಪರಿಸಂತವಿಸುತ್ತಾ ಹೀಗೆಂದನು:
03280005a ಅತಿತೀವ್ರೋಽಯಮಾರಂಭಸ್ತ್ವಯಾರಬ್ಧೋ ನೃಪಾತ್ಮಜೇ।
03280005c ತಿಸೃಣಾಂ ವಸತೀನಾಂ ಹಿ ಸ್ಥಾನಂ ಪರಮದುಷ್ಕರಂ।।
“ರಾಜಕುಮಾರಿ! ನೀನು ಕೈಗೊಂಡಿರುವ ಈ ವ್ರತವು ಅತಿ ತೀವ್ರವೂ ಕಠಿಣವೂ ಆಗಿದ್ದುದು. ಈ ರೀತಿ ಒಂದೇ ಸ್ಥಾನದಲ್ಲಿ ನಿಂತುಕೊಂಡಿರುವುದು ಪರಮದುಷ್ಕರ.”
03280006 ಸಾವಿತ್ರ್ಯುವಾಚ।
03280006a ನ ಕಾರ್ಯಸ್ತಾತ ಸಂತಾಪಃ ಪಾರಯಿಷ್ಯಾಮ್ಯಹಂ ವ್ರತಂ।
03280006c ವ್ಯವಸಾಯಕೃತಂ ಹೀದಂ ವ್ಯವಸಾಯಶ್ಚ ಕಾರಣಂ।।
ಸಾವಿತ್ರಿಯು ಹೇಳಿದಳು: “ತಂದೇ! ಈ ಕಾರ್ಯದಿಂದಾಗಿ ಸಂತಾಪಹೊಂದದಿರಿ. ನಾನು ಈ ವ್ರತವನ್ನು ನೆರವೇರಿಸಬಲ್ಲೆ. ಗಟ್ಟಿಮನಸ್ಸೇ ಇದನ್ನು ಯಶಸ್ವಿಗೊಳಿಸಬಲ್ಲದು ಮತ್ತು ನಾನು ಆ ಗಟ್ಟಿಮನಸ್ಸಿನಿಂದಲೇ ಇದನ್ನು ಪ್ರಾರಂಭಿಸಿದ್ದೇನೆ.”
03280007 ದ್ಯುಮತ್ಸೇನ ಉವಾಚ।
03280007a ವ್ರತಂ ಭಿಂಧೀತಿ ವಕ್ತುಂ ತ್ವಾಂ ನಾಸ್ಮಿ ಶಕ್ತಃ ಕಥಂ ಚನ।
03280007c ಪಾರಯಸ್ವೇತಿ ವಚನಂ ಯುಕ್ತಮಸ್ಮದ್ವಿಧೋ ವದೇತ್।।
ದ್ಯುಮತ್ಸೇನನು ಹೇಳಿದನು: “ವ್ರತವನ್ನು ಮುರಿ ಎಂದು ನಾನು ನಿನಗೆ ಹೇಳುವುದು ಹೇಗೆ ತಾನೇ ಸರಿಯಾಗುತ್ತದೆ? ನೀನು ಇದನ್ನು ಪೂರೈಸಬಲ್ಲೆ ಎಂದು ಮಾತ್ರ ನನ್ನ ಪರಿಸ್ಥಿತಿಯಲ್ಲಿರುವವನು ಬಯಸಬಲ್ಲ.””
03280008 ಮಾರ್ಕಂಡೇಯ ಉವಾಚ।
03280008a ಏವಮುಕ್ತ್ವಾ ದ್ಯುಮತ್ಸೇನೋ ವಿರರಾಮ ಮಹಾಮನಾಃ।
03280008c ತಿಷ್ಠಂತೀ ಚಾಪಿ ಸಾವಿತ್ರೀ ಕಾಷ್ಠಭೂತೇವ ಲಕ್ಷ್ಯತೇ।।
ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿ ಮಹಾಮನಸ್ವಿ ದ್ಯುಮತ್ಸೇನನು ನಿವೃತ್ತನಾದನು. ನಿಂತಿದ್ದ ಸಾವಿತ್ರಿಯಾದರೋ ಮರದ ಕೋಲಿನಂತೆ ಕಾಣುತ್ತಿದ್ದಳು.
03280009a ಶ್ವೋಭೂತೇ ಭರ್ತೃಮರಣೇ ಸಾವಿತ್ರ್ಯಾ ಭರತರ್ಷಭ।
03280009c ದುಃಖಾನ್ವಿತಾಯಾಸ್ತಿಷ್ಠಂತ್ಯಾಃ ಸಾ ರಾತ್ರಿರ್ವ್ಯತ್ಯವರ್ತತ।।
ಭರತರ್ಷಭ! ನಾಳೆ ನನ್ನ ಗಂಡನು ಸಾಯುತ್ತಾನೆ ಎಂದು ದುಃಖಿಸುತ್ತಾ ಸಾವಿತ್ರಿಯು ರಾತ್ರಿಗಳು ಕಳೆದಂತೆ ಕೊನೆಯ ರಾತ್ರಿಯೂ ಮುಗಿಯುವವರೆಗೆ ನಿಂತುಕೊಂಡೇ ಇದ್ದಳು.
03280010a ಅದ್ಯ ತದ್ದಿವಸಂ ಚೇತಿ ಹುತ್ವಾ ದೀಪ್ತಂ ಹುತಾಶನಂ।
03280010c ಯುಗಮಾತ್ರೋದಿತೇ ಸೂರ್ಯೇ ಕೃತ್ವಾ ಪೌರ್ವಾಹ್ಣಿಕೀಃ ಕ್ರಿಯಾಃ।।
ಆ ದಿವಸವಾದ ಅಂದೂ ಸೂರ್ಯೋದಯದೊಂದಿಗೆ ಪೌರ್ವಾಣಿಕೀ ಕ್ರಿಯೆಗಳನ್ನು ಪೂರೈಸಿ ಅಗ್ನಿಯನ್ನು ಉರಿಸಿ ಆಹುತಿಗಳನ್ನಿತ್ತಳು.
03280011a ತತಃ ಸರ್ವಾನ್ದ್ವಿಜಾನ್ವೃದ್ಧಾಂ ಶ್ವಶ್ರೂಂ ಶ್ವಶುರಮೇವ ಚ।
03280011c ಅಭಿವಾದ್ಯಾನುಪೂರ್ವ್ಯೇಣ ಪ್ರಾಂಜಲಿರ್ನಿಯತಾ ಸ್ಥಿತಾ।।
ಅನಂತರ ಎಲ್ಲ ದ್ವಿಜರಿಗೂ, ವೃದ್ಧ ಅತ್ತೆ ಮಾವಂದಿರಿಗೂ ನಮಸ್ಕರಿಸಿ ಅಂಜಲೀಬದ್ಧಳಾಗಿ ಅವರ ಎದಿರು ನಿಯತಳಾಗಿ ನಿಂತುಕೊಂಡಳು.
03280012a ಅವೈಧವ್ಯಾಶಿಷಸ್ತೇ ತು ಸಾವಿತ್ರ್ಯರ್ಥಂ ಹಿತಾಃ ಶುಭಾಃ।
03280012c ಊಚುಸ್ತಪಸ್ವಿನಃ ಸರ್ವೇ ತಪೋವನನಿವಾಸಿನಃ।।
ಹಿತಳೂ ಶುಭೆಯೂ ಆಗಿದ್ದ ಆ ಸಾವಿತ್ರಿಗೆ ಎಲ್ಲ ತಪೋವನ ನಿವಾಸಿ ತಪಸ್ವಿಗಳು ಅವೈಧವ್ಯದ ಜೀವನವನ್ನು ಆಶೀರ್ವಾದವಾಗಿ ಹೇಳಿದರು.
03280013a ಏವಮಸ್ತ್ವಿತಿ ಸಾವಿತ್ರೀ ಧ್ಯಾನಯೋಗಪರಾಯಣಾ।
03280013c ಮನಸಾ ತಾ ಗಿರಃ ಸರ್ವಾಃ ಪ್ರತ್ಯಗೃಹ್ಣಾತ್ತಪಸ್ವಿನಾಂ।।
ಧ್ಯಾನಯೋಗಪರಾಯಣಳಾಗಿ ಸಾವಿತ್ರಿಯು ಹಾಗೆಯೇ ಅಗಲಿ ಎಂದು ಆ ತಪಸ್ವಿಗಳೆಲ್ಲರ ಮಾತುಗಳನ್ನೂ ಮನಸ್ಸಿನಲ್ಲಿಯೇ ಪುನರುಶ್ಚರಿಸಿದಳು.
03280014a ತಂ ಕಾಲಂ ಚ ಮುಹೂರ್ತಂ ಚ ಪ್ರತೀಕ್ಷಂತೀ ನೃಪಾತ್ಮಜಾ।
03280014c ಯಥೋಕ್ತಂ ನಾರದವಚಶ್ಚಿಂತಯಂತೀ ಸುದುಃಖಿತಾ।।
ಆ ನೃಪಾತ್ಮಜೆಯು ದುಃಖಿತಳಾಗಿ ನಾರದನ ವಚನಗಳ ಕುರಿತು ಚಿಂತಿಸುತ್ತಾ ಹೇಳಿದ್ದ ಆ ಕಾಲ ಮುಹೂರ್ತಗಳಿಗೆ ಕಾಯುತ್ತಿದ್ದಳು.
03280015a ತತಸ್ತು ಶ್ವಶ್ರೂಶ್ವಶುರಾವೂಚತುಸ್ತಾಂ ನೃಪಾತ್ಮಜಾಂ।
03280015c ಏಕಾಂತಸ್ಥಮಿದಂ ವಾಕ್ಯಂ ಪ್ರೀತ್ಯಾ ಭರತಸತ್ತಮ।।
ಭರತಸತ್ತಮ! ಅನಂತರ ಹೀಗೆ ಏಕಾಂತದಲ್ಲಿ ಕುಳಿತಿದ್ದ ನೃಪತಾತ್ಮಜೆಗೆ ಅತ್ತೆ ಮಾವಂದಿರು ಪ್ರೀತಿಯಿಂದ ಈ ಮಾತುಗಳನ್ನಾಡಿದರು.
03280016 ಶ್ವಶುರಾವೂಚತುಃ।
03280016a ವ್ರತೋ ಯಥೋಪದಿಷ್ಟೋಽಯಂ ಯಥಾವತ್ಪಾರಿತಸ್ತ್ವಯಾ।
03280016c ಆಹಾರಕಾಲಃ ಸಂಪ್ರಾಪ್ತಃ ಕ್ರಿಯತಾಂ ಯದನಂತರಂ।।
ಮಾವನು ಹೇಳಿದನು: “ವ್ರತದ ಕಠಿಣ ನಿಯಮಗಳನ್ನು ಯಥಾವತ್ತಾಗಿ ಪಾಲಿಸಿ ಅದನ್ನು ಸಮಾಪ್ತಿಗೊಳಿಸಿದ್ದೀಯೆ. ಈಗ ನೀನು ಆಹಾರವನ್ನು ಸೇವಿಸುವ ಕಾಲ ಬಂದಿದೆ. ನಂತರದ್ದನ್ನು ಮಾಡುವಂಥವಳಾಗು.”
03280017 ಸಾವಿತ್ರ್ಯುವಾಚ।
03280017a ಅಸ್ತಂ ಗತೇ ಮಯಾದಿತ್ಯೇ ಭೋಕ್ತವ್ಯಂ ಕೃತಕಾಮಯಾ।
03280017c ಏಷ ಮೇ ಹೃದಿ ಸಂಕಲ್ಪಃ ಸಮಯಶ್ಚ ಕೃತೋ ಮಯಾ।।
ಸಾವಿತ್ರಿಯು ಹೇಳಿದಳು: “ಸೂರ್ಯಾಸ್ತವಾದ ಮತ್ತು ನನ್ನ ಆಸೆಯು ಪೂರೈಸಿದ ನಂತರವೇ ನಾನು ಆಹಾರ ಸೇವಿಸುತ್ತೇನೆ ಎಂದು ಹೃದಯದಲ್ಲಿ ಸಂಕಲ್ಪಿಸಿಕೊಂಡಿದ್ದೇನೆ. ಅದರಂತೆಯೇ ನಡೆದುಕೊಳ್ಳುತ್ತೇನೆ.””
03280018 ಮಾರ್ಕಂಡೇಯ ಉವಾಚ।
03280018a ಏವಂ ಸಂಭಾಷಮಾಣಾಯಾಃ ಸಾವಿತ್ರ್ಯಾ ಭೋಜನಂ ಪ್ರತಿ।
03280018c ಸ್ಕಂಧೇ ಪರಶುಮಾದಾಯ ಸತ್ಯವಾನ್ಪ್ರಸ್ಥಿತೋ ವನಂ।।
ಮಾರ್ಕಂಡೇಯನು ಹೇಳಿದನು: “ಭೋಜನದ ಕುರಿತು ಸಾವಿತ್ರಿಯು ಹೀಗೆ ಹೇಳುತ್ತಿರಲು ಸತ್ಯವಾನನು ಹೆಗಲಮೇಲೆ ಕೊಡಲಿಯನ್ನು ಹಾಕಿಕೊಂಡು ಕಾಡಿಗೆ ಹೊರಟನು.
03280019a ಸಾವಿತ್ರೀ ತ್ವಾಹ ಭರ್ತಾರಂ ನೈಕಸ್ತ್ವಂ ಗಂತುಮರ್ಹಸಿ।
03280019c ಸಹ ತ್ವಯಾಗಮಿಷ್ಯಾಮಿ ನ ಹಿ ತ್ವಾಂ ಹಾತುಮುತ್ಸಹೇ।।
ಸಾವಿತ್ರಿಯು ಗಂಡನನ್ನು ತಡೆದು “ನೀನೊಬ್ಬನೇ ಹೋಗಬಾರದು. ನಾನೂ ಕೂಡ ನಿನ್ನೊಡನೆ ಬರುತ್ತೇನೆ. ನಿನ್ನನ್ನು ಒಬ್ಬನನ್ನೇ ಬಿಡಬಾರದು” ಎಂದಳು.
03280020 ಸತ್ಯವಾನುವಾಚ।
03280020a ವನಂ ನ ಗತಪೂರ್ವಂ ತೇ ದುಃಖಃ ಪಂಥಾಶ್ಚ ಭಾಮಿನಿ।
03280020c ವ್ರತೋಪವಾಸಕ್ಷಾಮಾ ಚ ಕಥಂ ಪದ್ಭ್ಯಾಂ ಗಮಿಷ್ಯಸಿ।।
ಸತ್ಯವಾನನು ಹೇಳಿದನು: “ಭಾಮಿನೀ! ಈ ಮೊದಲು ನೀನು ಕಾಡಿಗೆ ಹೋಗಿಲ್ಲ ಮತ್ತು ಅಲ್ಲಿಯ ದಾರಿಯು ದುಃಖತರವಾದುದು. ಮೇಲಾಗಿ ವ್ರತೋಪವಾಸಗಳಿಂದ ನೀನು ಬಳಲಿದ್ದೀಯೆ. ಹೇಗೆ ಕಾಲ್ನಡುಗೆಯಲ್ಲಿ ಹೋಗಬಲ್ಲೆ?”
03280021 ಸಾವಿತ್ರ್ಯುವಾಚ।
03280021a ಉಪವಾಸಾನ್ನ ಮೇ ಗ್ಲಾನಿರ್ನಾಸ್ತಿ ಚಾಪಿ ಪರಿಶ್ರಮಃ।
03280021c ಗಮನೇ ಚ ಕೃತೋತ್ಸಾಹಾಂ ಪ್ರತಿಷೇದ್ಧುಂ ನ ಮಾರ್ಹಸಿ।।
ಸಾವಿತ್ರಿಯು ಹೇಳಿದಳು: “ಈ ಉಪವಾಸದಿಂದ ನಾನು ಬಳಲಲಿಲ್ಲ ಮತ್ತು ಬಲಹೀನಳೂ ಆಗಿಲ್ಲ. ನಿನ್ನೊಡನೆ ಬರುತ್ತಿದ್ದೀನಲ್ಲ ಎಂಬ ಉತ್ಸಾಹವಿದೆ. ನನ್ನ ಈ ಬಯಕೆಯನ್ನು ನಿರಾಕರಿಸದಿರು.”
03280022 ಸತ್ಯವಾನುವಾಚ।
03280022a ಯದಿ ತೇ ಗಮನೋತ್ಸಾಹಃ ಕರಿಷ್ಯಾಮಿ ತವ ಪ್ರಿಯಂ।
03280022c ಮಮ ತ್ವಾಮಂತ್ರಯ ಗುರೂನ್ನ ಮಾಂ ದೋಷಃ ಸ್ಪೃಶೇದಯಂ।।
ಸತ್ಯವಾನನು ಹೇಳಿದನು: “ಬರಲು ನಿನಗೆ ಅಷ್ಟೊಂದು ಉತ್ಸಾಹವಿದೆಯೆಂದಾದರೆ ನಿನಗಿಷ್ಟವಾದಂತೆ ಮಾಡುತ್ತೇನೆ. ನಾನು ನಿನ್ನನ್ನು ಬರಲು ಹೇಳಿಲ್ಲ. ಹಿರಿಯರ ಅಪ್ಪಣೆಯನ್ನು ಪಡೆದು ಬಾ.””
03280023 ಮಾರ್ಕಂಡೇಯ ಉವಾಚ।
03280023a ಸಾಭಿಗಮ್ಯಾಬ್ರವೀಚ್ಚ್ವಶ್ರೂಂ ಶ್ವಶುರಂ ಚ ಮಹಾವ್ರತಾ।
03280023c ಅಯಂ ಗಚ್ಚತಿ ಮೇ ಭರ್ತಾ ಫಲಾಹಾರೋ ಮಹಾವನಂ।।
ಮಾರ್ಕಂಡೇಯನು ಹೇಳಿದನು: “ಆ ಮಹಾವ್ರತೆಯು ತನ್ನ ಅತ್ತೆ ಮಾವಂದಿರ ಬಳಿ ಹೋಗಿ “ನನ್ನ ಪತಿಯು ಹಣ್ಣುಗಳನ್ನು ತರಲು ಇದೋ ಮಹಾವನಕ್ಕೆ ಹೋಗುತ್ತಿದ್ದಾನೆ.
03280024a ಇಚ್ಚೇಯಮಭ್ಯನುಜ್ಞಾತುಮಾರ್ಯಯಾ ಶ್ವಶುರೇಣ ಚ।
03280024c ಅನೇನ ಸಹ ನಿರ್ಗಂತುಂ ನ ಹಿ ಮೇ ವಿರಹಃ ಕ್ಷಮಃ।।
ತಾಯಿ ಮತ್ತು ಮಾವನು ಅನುಜ್ಞೆಯನ್ನಿತ್ತರೆ ಅವನ ಸಹಿತ ಹೋಗಲು ಇಚ್ಛಿಸುತ್ತೇನೆ. ಅವನ ವಿರಹವನ್ನು ಒಂದು ಕ್ಷಣವೂ ಸಹಿಸಲಾರೆ.
03280025a ಗುರ್ವಗ್ನಿಹೋತ್ರಾರ್ಥಕೃತೇ ಪ್ರಸ್ಥಿತಶ್ಚ ಸುತಸ್ತವ।
03280025c ನ ನಿವಾರ್ಯೋ ನಿವಾರ್ಯಃ ಸ್ಯಾದನ್ಯಥಾ ಪ್ರಸ್ಥಿತೋ ವನಂ।।
ಗುರುಗಳ ಅಗ್ನಿಹೋತ್ರಕ್ಕಾಗಿ ಸಮಿತ್ತುಗಳನ್ನು ತರಲು ನಿಮ್ಮ ಮಗನು ಹೊರಟಿದ್ದಾನೆ. ಅವನು ಬೇರೆ ಯಾವುದೇ ಕಾರಣಕ್ಕಾಗಿ ಕಾಡಿಗೆ ಹೋಗುತ್ತಿದ್ದಾನೆಂದಾಗಿದ್ದರೆ ನಾನು ಅವನನ್ನು ತಡೆಯುತ್ತಿದ್ದೆ.
03280026a ಸಂವತ್ಸರಃ ಕಿಂ ಚಿದೂನೋ ನ ನಿಷ್ಕ್ರಾಂತಾಹಮಾಶ್ರಮಾತ್।
03280026c ವನಂ ಕುಸುಮಿತಂ ದ್ರಷ್ಟುಂ ಪರಂ ಕೌತೂಹಲಂ ಹಿ ಮೇ।।
ಅಲ್ಲದೇ ಸುಮಾರು ಒಂದು ವರ್ಷವಾಗಲಿಕ್ಕೆ ಬಂದಿದೆ ನಾನು ಈ ಆಶ್ರಮದ ಹೊರಗೇ ಹೋಗಲಿಲ್ಲ. ವನಗಳಲ್ಲಿನ ಹೂವುಗಳನ್ನು ನೋಡುವ ಪರಮ ಕುತೂಹಲವು ನನಗುಂಟಾಗಿದೆ.”
03280027 ದ್ಯುಮತ್ಸೇನ ಉವಾಚ।
03280027a ಯತಃ ಪ್ರಭೃತಿ ಸಾವಿತ್ರೀ ಪಿತ್ರಾ ದತ್ತಾ ಸ್ನುಷಾ ಮಮ।
03280027c ನಾನಯಾಭ್ಯರ್ಥನಾಯುಕ್ತಮುಕ್ತಪೂರ್ವಂ ಸ್ಮರಾಮ್ಯಹಂ।।
ದ್ಯುಮತ್ಸೇನನು ಹೇಳಿದನು: “ಸಾವಿತ್ರೀ! ನಿನ್ನ ತಂದೆಯು ನನಗೆ ಸೊಸೆಯಾಗಿ ಕೊಟ್ಟಾಗಿನಿಂದ ಇದೂವರೆಗೆ ನನ್ನಿಂದ ಏನನ್ನಾದರೂ ಕೇಳಿದ್ದುದು ಇಲ್ಲ. ನನಗೆ ನೆನಪಿದೆ.
03280028a ತದೇಷಾ ಲಭತಾಂ ಕಾಮಂ ಯಥಾಭಿಲಷಿತಂ ವಧೂಃ।
03280028c ಅಪ್ರಮಾದಶ್ಚ ಕರ್ತವ್ಯಃ ಪುತ್ರಿ ಸತ್ಯವತಃ ಪಥಿ।।
ಆದುದರಿಂದ ವಧೂ! ನೀನು ಬಯಸಿದುದನ್ನು ಪಡೆ. ಪುತ್ರಿ! ಸತ್ಯವಾನನೊಂದಿಗೆ ದಾರಿಯಲ್ಲಿ ಎಚ್ಚರಿಕೆಯಿಂದ ಹೋಗು.””
03280029 ಮಾರ್ಕಂಡೇಯ ಉವಾಚ।
03280029a ಉಭಾಭ್ಯಾಮಭ್ಯನುಜ್ಞಾತಾ ಸಾ ಜಗಾಮ ಯಶಸ್ವಿನೀ।
03280029c ಸಹ ಭರ್ತ್ರಾ ಹಸಂತೀವ ಹೃದಯೇನ ವಿದೂಯತಾ।।
ಮಾರ್ಕಂಡೇಯನು ಹೇಳಿದನು: “ಅವರಿಬ್ಬರಿಂದಲೂ ಅಪ್ಪಣೆಯನ್ನು ಪಡೆದು ಆ ಯಶಸ್ವಿನಿಯು ಗಂಡನೊಂದಿಗೆ ಹೊರಟಳು. ನೋಡಲು ಸಂತೋಷದಿಂದ ನಗುತ್ತಿರುವಂತೆ ಕಂಡುಬಂದರೂ ಅವಳು ಹೃದಯದಲ್ಲಿ ಬಹುದುಃಖಿತಳಾಗಿದ್ದಳು.
03280030a ಸಾ ವನಾನಿ ವಿಚಿತ್ರಾಣಿ ರಮಣೀಯಾನಿ ಸರ್ವಶಃ।
03280030c ಮಯೂರರವಘುಷ್ಟಾನಿ ದದರ್ಶ ವಿಪುಲೇಕ್ಷಣಾ।।
ಆ ವಿಪುಲೇಕ್ಷಣೆಯು ಸಂತೋಷದಿಂದ ನಲಿಯುತ್ತಿದ್ದ ನವಿಲುಗಳಿಂದ ತುಂಬಿದ ಆ ವಿಚಿತ್ರ ಮತ್ತು ರಮಣೀಯ ವನಗಳನ್ನೆಲ್ಲ ನೋಡಿದಳು.
03280031a ನದೀಃ ಪುಣ್ಯವಹಾಶ್ಚೈವ ಪುಷ್ಪಿತಾಂಶ್ಚ ನಗೋತ್ತಮಾನ್।
03280031c ಸತ್ಯವಾನಾಹ ಪಶ್ಯೇತಿ ಸಾವಿತ್ರೀಂ ಮಧುರಾಕ್ಷರಂ।।
ಹರಿಯುತ್ತಿದ್ದ ಪುಣ್ಯನದಿಗಳನ್ನು ಎತ್ತರ ಗಿರಿಗಳನ್ನೂ ಸತ್ಯವಾನನು ನೋಡು ನೋಡು ಎಂದು ಸಾವಿತ್ರಿಗೆ ಮಧುರಾಕ್ಷರಗಳಿಂದ ಹೇಳುತ್ತಿದ್ದನು.
03280032a ನಿರೀಕ್ಷಮಾಣಾ ಭರ್ತಾರಂ ಸರ್ವಾವಸ್ಥಮನಿಂದಿತಾ।
03280032c ಮೃತಮೇವ ಹಿ ತಂ ಮೇನೇ ಕಾಲೇ ಮುನಿವಚಃ ಸ್ಮರನ್।।
ಆ ಅನಿಂದಿತೆಯು ಮುನಿಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಮೃತ್ಯುವು ಬಂದಾಗ ತನಗೆ ತಿಳಿಯಬೇಕು ಎಂದು ಗಂಡನ ಸರ್ವಾವಸ್ಥೆಗಳನ್ನೂ ನಿರೀಕ್ಷಿಸುತ್ತಿದ್ದಳು.
03280033a ಅನುವರ್ತತೀ ತು ಭರ್ತಾರಂ ಜಗಾಮ ಮೃದುಗಾಮಿನೀ।
03280033c ದ್ವಿಧೇವ ಹೃದಯಂ ಕೃತ್ವಾ ತಂ ಚ ಕಾಲಮವೇಕ್ಷತೀ।।
ಹೃದಯವನ್ನು ಎರಡು ಮಾಡಿಕೊಂಡು - ಒಂದನ್ನು ಅವನ ಮೇಲಿರಿಸಿ ಇನ್ನೊಂದರಿಂದ ಕಾಲವನ್ನು ಕಾಯುತ್ತಾ - ಮೆಲ್ಲನೆ ಗಂಡನನ್ನು ಅನುಸರಿಸಿ ನಡೆದಳು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ಅಶೀತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಂಭತ್ತನೆಯ ಅಧ್ಯಾಯವು.