279 ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 279

ಸಾರ

ರಾಜ್ಯವನ್ನು ಕಳೆದುಕೊಂಡು ಕುರುಡನಾಗಿ ವನದಲ್ಲಿ ವಾಸಿಸುತ್ತಿದ್ದ ರಾಜ ದ್ಯುಮತ್ಸೇನನ ಮಗ ಸತ್ಯವಾನನಿಗೆ ಅಶ್ವಪತಿಯು ಮಗಳನ್ನು ಕೊಟ್ಟು ವಿವಾಹ ನೆರವೇರಿಸಿದುದು (1-16). ಅತ್ತೆ-ಮಾವ ಮತ್ತು ಸತ್ಯವಾನ ಸೇವೆ ಮಾಡುತ್ತಾ, ಯಾವಾಗಲೂ ನಾರದನು ಹೇಳಿದ ಮಾತುಗಳ ಕುರಿತು ಚಿಂತಿಸುತ್ತಾ ಸಾವಿತ್ರಿಯು ಅರಣ್ಯದಲ್ಲಿ ವಾಸಿಸಿದುದು (17-23).

03279001 ಮಾರ್ಕಂಡೇಯ ಉವಾಚ।
03279001a ಅಥ ಕನ್ಯಾಪ್ರದಾನೇ ಸ ತಮೇವಾರ್ಥಂ ವಿಚಿಂತಯನ್।
03279001c ಸಮಾನಿನ್ಯೇ ಚ ತತ್ಸರ್ವಂ ಭಾಂಡಂ ವೈವಾಹಿಕಂ ನೃಪಃ।।

ಮಾರ್ಕಂಡೇಯನು ಹೇಳಿದನು: “ಅನಂತರ ಕನ್ಯಾದಾನದ ಕುರಿತು ಯೋಚಿಸಿ ಆ ವಿವಾಹಕ್ಕೆ ಬೇಕಾಗುವ ಎಲ್ಲ ಸಲಕರಣೆಗಳನ್ನೂ ಒಟ್ಟುಗೂಡಿಸಿದನು.

03279002a ತತೋ ವೃದ್ಧಾನ್ದ್ವಿಜಾನ್ಸರ್ವಾನೃತ್ವಿಜಃ ಸಪುರೋಹಿತಾನ್।
03279002c ಸಮಾಹೂಯ ತಿಥೌ ಪುಣ್ಯೇ ಪ್ರಯಯೌ ಸಹ ಕನ್ಯಯಾ।।

ಅನಂತರ ವೃದ್ಧರನ್ನೂ, ದ್ವಿಜರನ್ನೂ, ಪುರೋಹಿತರೊಂದಿಗೆ ಸರ್ವ ಋತ್ವಿಜರನ್ನೂ ಕರೆಯಿಸಿ ಕನ್ಯೆಯೊಡಗೂಡಿ ಪುಣ್ಯ ತಿಥಿಯಲ್ಲಿ ಹೊರಟನು.

03279003a ಮೇಧ್ಯಾರಣ್ಯಂ ಸ ಗತ್ವಾ ಚ ದ್ಯುಮತ್ಸೇನಾಶ್ರಮಂ ನೃಪಃ।
03279003c ಪದ್ಭ್ಯಾಮೇವ ದ್ವಿಜೈಃ ಸಾರ್ಧಂ ರಾಜರ್ಷಿಂ ತಮುಪಾಗಮತ್।।

ದಟ್ಟ ಅರಣ್ಯಕ್ಕೆ ಹೋಗಿ ನೃಪನು ಕಾಲ್ನಡಿಗೆಯಲ್ಲಿಯೇ ದ್ವಿಜರೊಡಗೂಡಿ ರಾಜರ್ಷಿ ದ್ಯುಮತ್ಸೇನನ ಆಶ್ರಮಕ್ಕೆ ಬಂದನು.

03279004a ತತ್ರಾಪಶ್ಯನ್ಮಹಾಭಾಗಂ ಶಾಲವೃಕ್ಷಮುಪಾಶ್ರಿತಂ।
03279004c ಕೌಶ್ಯಾಂ ಬೃಸ್ಯಾಂ ಸಮಾಸೀನಂ ಚಕ್ಷುರ್ಹೀನಂ ನೃಪಂ ತದಾ।।

ಅಲ್ಲಿ ಶಾಲವೃಕ್ಷದಡಿಯಲ್ಲಿ ಕುಶದ ಚಾಪೆಯಮೇಲೆ ಕುಳಿತಿದ್ದ ಕುರುಡ ಮಹಾಭಾಗ ನೃಪನನ್ನು ನೋಡಿದನು.

03279005a ಸ ರಾಜಾ ತಸ್ಯ ರಾಜರ್ಷೇಃ ಕೃತ್ವಾ ಪೂಜಾಂ ಯಥಾರ್ಹತಃ।
03279005c ವಾಚಾ ಸುನಿಯತೋ ಭೂತ್ವಾ ಚಕಾರಾತ್ಮನಿವೇದನಂ।।

ರಾಜನು ಆ ರಾಜರ್ಷಿಗೆ ಯಥಾರ್ಹವಾಗಿ ಪೂಜಿಸಿ ಸುನಿಯತ ಮಾತುಗಳಿಂದ ತನ್ನ ಪರಿಚಯವನ್ನು ಹೇಳಿಕೊಂಡನು.

03279006a ತಸ್ಯಾರ್ಘ್ಯಮಾಸನಂ ಚೈವ ಗಾಂ ಚಾವೇದ್ಯ ಸ ಧರ್ಮವಿತ್।
03279006c ಕಿಮಾಗಮನಮಿತ್ಯೇವಂ ರಾಜಾ ರಾಜಾನಮಬ್ರವೀತ್।।

ಅವನು ರಾಜನಿಗೆ ಅರ್ಘ್ಯ, ಆಸನ ಮತ್ತು ಗೋವುಗಳನ್ನು ಧರ್ಮದಂತೆ ನೀಡಿ ಬಂದಿರುವ ಕಾರಣದ ಕುರಿತು ಕೇಳಿದನು.

03279007a ತಸ್ಯ ಸರ್ವಮಭಿಪ್ರಾಯಮಿತಿಕರ್ತವ್ಯತಾಂ ಚ ತಾಂ।
03279007c ಸತ್ಯವಂತಂ ಸಮುದ್ದಿಶ್ಯ ಸರ್ವಮೇವ ನ್ಯವೇದಯತ್।।

ತನ್ನ ಮತ್ತು ಎಲ್ಲರ ಅಭಿಪ್ರಾಯವನ್ನೂ, ಯಾವ ಕಾರ್ಯಕ್ಕಾಗಿ ಬಂದಿದ್ದೇನೆನ್ನುವುದನ್ನೂ, ಸತ್ಯವಾನನ ಕುರಿತು ಎಲ್ಲವನ್ನೂ ಅವನಿಗೆ ನಿವೇದಿಸಿದನು.

03279008 ಅಶ್ವಪತಿರುವಾಚ।
03279008a ಸಾವಿತ್ರೀ ನಾಮ ರಾಜರ್ಷೇ ಕನ್ಯೇಯಂ ಮಮ ಶೋಭನಾ।
03279008c ತಾಂ ಸ್ವಧರ್ಮೇಣ ಧರ್ಮಜ್ಞ ಸ್ನುಷಾರ್ಥೇ ತ್ವಂ ಗೃಹಾಣ ಮೇ।।

ಅಶ್ವಪತಿಯು ಹೇಳಿದನು: “ರಾಜರ್ಷೇ! ಸಾವಿತ್ರಿ ಎಂಬ ಹೆಸರಿನ ನನ್ನ ಕನ್ಯೆ ಶೋಭನೆಯನ್ನು ಧರ್ಮಜ್ಞನಾದ ನೀನು ಸ್ವಧರ್ಮದಂತೆ ಸೊಸೆಯನ್ನಾಗಿ ಸ್ವೀಕರಿಸಬೇಕು.”

03279009 ದ್ಯುಮತ್ಸೇನ ಉವಾಚ।
03279009a ಚ್ಯುತಾಃ ಸ್ಮ ರಾಜ್ಯಾದ್ವನವಾಸಮಾಶ್ರಿತಾಶ್। ಚರಾಮ ಧರ್ಮಂ ನಿಯತಾಸ್ತಪಸ್ವಿನಃ।
03279009c ಕಥಂ ತ್ವನರ್ಹಾ ವನವಾಸಮಾಶ್ರಮೇ। ಸಹಿಷ್ಯತೇ ಕ್ಲೇಶಮಿಮಂ ಸುತಾ ತವ।।

ದ್ಯುಮತ್ಸೇನನು ಹೇಳಿದನು: “ರಾಜ್ಯವನ್ನು ಕಳೆದುಕೊಂಡು ನಾವು ವನವಾಸದಲ್ಲಿದ್ದೇವೆ. ಧರ್ಮದಲ್ಲಿದ್ದುಕೊಂಡು ತಪಸ್ವಿಗಳಂತೆ ಇದ್ದೇವೆ. ನಿನ್ನ ಮಗಳಾದರೂ ಹೇಗೆ ತಾನೇ ಈ ವನವಾಸ ಮತ್ತು ಆಶ್ರಮದ ಕಷ್ಟಗಳನ್ನು ಸಹಿಸಿಕೊಂಡಾಳು ಮತ್ತು ಅರ್ಹಳಾಗಿದ್ದಾಳೆ?”

03279010 ಅಶ್ವಪತಿರುವಾಚ।
03279010a ಸುಖಂ ಚ ದುಃಖಂ ಚ ಭವಾಭವಾತ್ಮಕಂ। ಯದಾ ವಿಜಾನಾತಿ ಸುತಾಹಮೇವ ಚ।
03279010c ನ ಮದ್ವಿಧೇ ಯುಜ್ಯತಿ ವಾಕ್ಯಂ ಈದೃಶಂ। ವಿನಿಶ್ಚಯೇನಾಭಿಗತೋಽಸ್ಮಿ ತೇ ನೃಪ।।

ಅಶ್ವಪತಿಯು ಹೇಳಿದನು: “ಸುಖ ಮತ್ತು ದುಃಖಗಳು ಬರುತ್ತವೆ ಮತ್ತು ಹೋಗುತ್ತವೆ. ಇವೆರಡನ್ನೂ ನಾನೂ ಮತ್ತು ನನ್ನ ಮಗಳೂ ತಿಳಿದಿದ್ದೇವೆ. ಆದುದರಿಂದ ಅಂಥಹ ಮಾತುಗಳನ್ನು ನನ್ನಂಥವನಲ್ಲಿ ಹೇಳಬೇಡ. ನೃಪ! ಎಲ್ಲವನ್ನೂ ತಿಳಿದು ನಿಶ್ಚಯಿಸಿಯೇ ನಾವು ಇಲ್ಲಿಗೆ ಬಂದಿದ್ದೇವೆ.

03279011a ಆಶಾಂ ನಾರ್ಹಸಿ ಮೇ ಹಂತುಂ ಸೌಹೃದಾದ್ಪ್ರಣಯೇನ ಚ।
03279011c ಅಭಿತಶ್ಚಾಗತಂ ಪ್ರೇಮ್ಣಾ ಪ್ರತ್ಯಾಖ್ಯಾತುಂ ನ ಮಾರ್ಹಸಿ।।

ಸೌಹಾರ್ದತೆಯಿಂದ ಮತ್ತು ಗೆಳೆತನದಿಂದ ಇದರ ಕುರಿತು ಆಸೆಯನ್ನಿಟ್ಟುಕೊಂಡು ಕೇಳುತ್ತಿದ್ದೇನೆ. ನನ್ನನ್ನು ನಿರಾಶೆಗೊಳಿಸದಿರು. ಪ್ರೇಮದಿಂದ ನಿನ್ನ ಬಳಿ ಬಂದಿರುವ ನಮ್ಮನ್ನು ಹಿಂದೆ ಕಳುಹಿಸದಿರು.

03279012a ಅನುರೂಪೋ ಹಿ ಸಂಯೋಗೇ ತ್ವಂ ಮಮಾಹಂ ತವಾಪಿ ಚ।
03279012c ಸ್ನುಷಾಂ ಪ್ರತೀಚ್ಚ ಮೇ ಕನ್ಯಾಂ ಭಾರ್ಯಾಂ ಸತ್ಯವತಃ ಸುತಾಂ।।

ಎಲ್ಲ ವಿಷಯಗಳಲ್ಲಿಯೂ ನೀನು ನನ್ನ ಹಾಗಿದ್ದೀಯೆ ಮತ್ತು ನಾನು ನಿನ್ನ ಹಾಗೆ ಇದ್ದೇನೆ. ಆದುದರಿಂದ ನನ್ನ ಮಗಳನ್ನು ನಿನ್ನ ಸೊಸೆಯಾಗಿ ಮತ್ತು ಸತ್ಯವಾನನಿಗೆ ಭಾರ್ಯೆಯಾಗಿ ಸ್ವೀಕರಿಸು.”

03279013 ದ್ಯುಮತ್ಸೇನ ಉವಾಚ।
03279013a ಪೂರ್ವಮೇವಾಭಿಲಷಿತಃ ಸಂಬಂಧೋ ಮೇ ತ್ವಯಾ ಸಹ।
03279013c ಭ್ರಷ್ಟರಾಜ್ಯಸ್ತ್ವಹಮಿತಿ ತತ ಏತದ್ವಿಚಾರಿತಂ।।

ದ್ಯುಮತ್ಸೇನನು ಹೇಳಿದನು: “ಹಿಂದೆಯೇ ನಾನು ನಿನ್ನೊಂದಿಗೆ ಸಂಬಂಧವನ್ನು ಮಾಡಿಕೊಳ್ಳಲು ಬಯಸಿದ್ದೆ. ರಾಜ್ಯವನ್ನು ಕಳೆದನಂತರ ಅದರ ಕುರಿತ ಭರವಸೆಯನ್ನೇ ಕಳೆದುಕೊಂಡಿದ್ದೆ.

03279014a ಅಭಿಪ್ರಾಯಸ್ತ್ವಯಂ ಯೋ ಮೇ ಪೂರ್ವಮೇವಾಭಿಕಾಂಕ್ಷಿತಃ।
03279014c ಸ ನಿರ್ವರ್ತತು ಮೇಽದ್ಯೈವ ಕಾಂಕ್ಷಿತೋ ಹ್ಯಸಿ ಮೇಽತಿಥಿಃ।।

ನನ್ನ ಆ ಹಳೆಯ ಬಯಕೆಯು ನಿನ್ನ ಅಭಿಪ್ರಾಯದ ಹಾಗೆ ಪೂರೈಸಿದೆಯೆಂದರೆ ಅದನ್ನು ನಾನು ತಡೆಹಿಡಿಯುವುದಿಲ್ಲ. ನಿನಗೆ ಆದರದ ಸ್ವಾಗತ ಮತ್ತು ನನ್ನ ಗೌರವಾನ್ವಿತ ಅತಿಥಿಯಾಗಿರು.””

03279015 ಮಾರ್ಕಂಡೇಯ ಉವಾಚ।
03279015a ತತಃ ಸರ್ವಾನ್ಸಮಾನೀಯ ದ್ವಿಜಾನಾಶ್ರಮವಾಸಿನಃ।
03279015c ಯಥಾವಿಧಿ ಸಮುದ್ವಾಹಂ ಕಾರಯಾಮಾಸತುರ್ನೃಪೌ।।

ಮಾರ್ಕಂಡೇಯನು ಹೇಳಿದನು: “ಅನಂತರ ಆಶ್ರಮವಾಸಿ ಎಲ್ಲ ದ್ವಿಜರನ್ನೂ ಕರೆತರಿಸಿ ಯಥಾವಿಧಿಯಾಗಿ ಆ ನೃಪರೀರ್ವರು ವಿವಾಹಕಾರ್ಯವನ್ನು ನೆರವೇರಿಸಿದರು.

03279016a ದತ್ತ್ವಾ ತ್ವಶ್ವಪತಿಃ ಕನ್ಯಾಂ ಯಥಾರ್ಹಂ ಚ ಪರಿಚ್ಚದಂ।
03279016c ಯಯೌ ಸ್ವಮೇವ ಭವನಂ ಯುಕ್ತಃ ಪರಮಯಾ ಮುದಾ।।

ಅಶ್ವಪತಿಯು ಯಥಾರ್ಹ ಉಡುಗೊರೆಗಳೊಂದಿಗೆ ಕನ್ಯೆಯನ್ನು ಕೊಟ್ಟು ಪರಮ ಸಂತೋಷಗೊಂಡು ತನ್ನ ಅರಮನೆಗೆ ತೆರಳಿದನು.

03279017a ಸತ್ಯವಾನಪಿ ಭಾರ್ಯಾಂ ತಾಂ ಲಬ್ಧ್ವಾ ಸರ್ವಗುಣಾನ್ವಿತಾಂ।
03279017c ಮುಮುದೇ ಸಾ ಚ ತಂ ಲಬ್ಧ್ವಾ ಭರ್ತಾರಂ ಮನಸೇಪ್ಸಿತಂ।।

ಸತ್ಯವಾನನಾದರೋ ಸರ್ವಗುಣಾನ್ವಿತೆ ಪತ್ನಿಯನ್ನು ಪಡೆದು ಸಂತೋಷಪಟ್ಟನು ಮತ್ತು ಅವಳೂ ಕೂಡ ತನಗಿಷ್ಟನಾದ ಪತಿಯನ್ನು ಪಡೆದು ಸಂತೋಷಗೊಂಡಳು.

03279018a ಗತೇ ಪಿತರಿ ಸರ್ವಾಣಿ ಸಂನ್ಯಸ್ಯಾಭರಣಾನಿ ಸಾ।
03279018c ಜಗೃಹೇ ವಲ್ಕಲಾನ್ಯೇವ ವಸ್ತ್ರಂ ಕಾಷಾಯಮೇವ ಚ।।

ತಂದೆಯು ಹೊರಟು ಹೋದ ನಂತರ ಅವಳು ಎಲ್ಲ ಆಭರಣಗಳನ್ನೂ ಎತ್ತಿಟ್ಟು, ವಲ್ಕಲ ಮತ್ತು ಕಾಷಾಯ ವಸ್ತ್ರಗಳನ್ನು ಧರಿಸಿದಳು.

03279019a ಪರಿಚಾರೈರ್ಗುಣೈಶ್ಚೈವ ಪ್ರಶ್ರಯೇಣ ದಮೇನ ಚ।
03279019c ಸರ್ವಕಾಮಕ್ರಿಯಾಭಿಶ್ಚ ಸರ್ವೇಷಾಂ ತುಷ್ಟಿಮಾವಹತ್।।

ಸದ್ಗುಣಗಳಿಂದ, ಪರಿಶ್ರಮದಿಂದ ಮತ್ತು ತಾಳ್ಮೆಯಿಂದ ಎಲ್ಲರ ಇಷ್ಟಗಳನ್ನು ನೆರವೇರಿಸುತ್ತ ಸರ್ವರನ್ನೂ ಸಂತೃಪ್ತಗೊಳಿಸುತ್ತಿದ್ದಳು.

03279020a ಶ್ವಶ್ರೂಂ ಶರೀರಸತ್ಕಾರೈಃ ಸರ್ವೈರಾಚ್ಚಾದನಾದಿಭಿಃ।
03279020c ಶ್ವಶುರಂ ದೇವಕಾರ್ಯೈಶ್ಚ ವಾಚಃ ಸಂಯಮನೇನ ಚ।।

ಅತ್ತೆಯ ದೇಹಸತ್ಕಾರಗಳನ್ನು ಮಾಡಿದಳು ಮತ್ತು ಎಲ್ಲರ ಬಟ್ಟೆಗಳನ್ನು ನೋಡಿಕೊಳ್ಳುತ್ತಿದ್ದಳು; ಮಾವನ ದೇವಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದಳು ಮತ್ತು ಸಂಯಮದಿಂದ ಮಾತನಾಡಿಕೊಂಡು ಇದ್ದಳು.

03279021a ತಥೈವ ಪ್ರಿಯವಾದೇನ ನೈಪುಣೇನ ಶಮೇನ ಚ।
03279021c ರಹಶ್ಚೈವೋಪಚಾರೇಣ ಭರ್ತಾರಂ ಪರ್ಯತೋಷಯತ್।।

ಪ್ರೀತಿಯುಕ್ತ ಮಾತುಗಳಿಂದ, ನೈಪುಣ್ಯತೆಯಿಂದ, ಶಮದಿಂದ, ಮತ್ತು ಏಕಾಂತದ ಉಪಚಾರಗಳಿಂದ ಪತಿಯನ್ನು ಸಂತೋಷಪಡಿಸಿದಳು.

03279022a ಏವಂ ತತ್ರಾಶ್ರಮೇ ತೇಷಾಂ ತದಾ ನಿವಸತಾಂ ಸತಾಂ।
03279022c ಕಾಲಸ್ತಪಸ್ಯತಾಂ ಕಶ್ಚಿದತಿಚಕ್ರಾಮ ಭಾರತ।।

ಭಾರತ! ಹೀಗೆ ಆ ಆಶ್ರಮದಲ್ಲಿ ಅವಳು ಸತ್ಯ ಮತ್ತು ತಪಸ್ಸಿನೊಡನೆ ವಾಸಿಸಿದಳು. ಹೀಗೆಯೇ ಬಹಳ ಸಮಯವು ಕಳೆದುಹೋಯಿತು.

03279023a ಸಾವಿತ್ರ್ಯಾಸ್ತು ಶಯಾನಾಯಾಸ್ತಿಷ್ಠಂತ್ಯಾಶ್ಚ ದಿವಾನಿಶಂ।
03279023c ನಾರದೇನ ಯದುಕ್ತಂ ತದ್ವಾಕ್ಯಂ ಮನಸಿ ವರ್ತತೇ।।

ಸಾವಿತ್ರಿಯಾದರೋ ಮಲಗಿರುವಾಗ ಮತ್ತು ಎದ್ದಿರುವಾಗ, ಹಗಲು ಮತ್ತು ರಾತ್ರಿ ಪ್ರತಿಕ್ಷಣದಲ್ಲಿಯೂ ನಾರದನು ಹೇಳಿದ ಮಾತನ್ನು ಮನಸ್ಸಿನಲ್ಲಿಯೇ ಚಿಂತಿಸುತ್ತಿದ್ದಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ಏಕೋನಶೀತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಪ್ಪತ್ತೊಂಭತ್ತನೆಯ ಅಧ್ಯಾಯವು.