277 ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 277

ಸಾರ

“ಮಹಾಭಾಗೆ ಪತಿವ್ರತೆ ದ್ರೌಪದಿಯ ಹಾಗಿರುವ, ಇದಕ್ಕೂ ಮೊದಲು ನೀನು ನೋಡಿದ ಅಥವಾ ಕೇಳಿದ, ಸೀಮಂತಿನಿ ಯಾರಾದರೂ ಇದ್ದಾರೆಯೇ?” ಎಂದು ಯುಧಿಷ್ಠಿರನು ಕೇಳಲು ಮಾರ್ಕಂಡೇಯನು ಕುಲಸ್ತ್ರೀಯರ ಮಹಾಭಾಗ್ಯವೆಲ್ಲವನ್ನೂ ಹೊಂದಿದ್ದ ರಾಜಕನ್ಯೆ ಸಾವಿತ್ರಿಯ ಉಪಾಖ್ಯಾನವನ್ನು ಪ್ರಾರಂಭಿಸಿದ್ದುದು (1-4). ಮದ್ರದೇಶದ ರಾಜ ಅಶ್ವಪತಿಯು ಸಂತಾನಕ್ಕೆ ಸಾವಿತ್ರಿಯನ್ನು ಆರಾಧಿಸಿ ಪುತ್ರಿಯನ್ನು ಪಡೆದುದು; ಸಾವಿತ್ರಿಯೆಂದು ಕರೆದುದು (5-24). ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ ಸಾವಿತ್ರಿಗೆ ಹಿಂಜರಿದ ಯಾರೂ ಅವಳನ್ನು ವರಿಸದೇ ಇರಲು ಅಶ್ವಪತಿಯು ಮಗಳಿಗೆ ತಾನೇ ಪತಿಯನ್ನು ಹುಡುಕಿಕೊಂಡು ಬರಲು ಕಳುಹಿಸುವುದು (25-41).

03277001 ಯುಧಿಷ್ಠಿರ ಉವಾಚ।
03277001a ನಾತ್ಮಾನಮನುಶೋಚಾಮಿ ನೇಮಾನ್ಭ್ರಾತೄನ್ಮಹಾಮುನೇ।
03277001c ಹರಣಂ ಚಾಪಿ ರಾಜ್ಯಸ್ಯ ಯಥೇಮಾಂ ದ್ರುಪದಾತ್ಮಜಾಂ।।

ಯುಧಿಷ್ಠಿರನು ಹೇಳಿದನು: “ಮಹಾಮುನೇ! ನಾನು ದ್ರುಪದಾತ್ಮಜೆಯ ಕುರಿತು ಎಷ್ಟು ಶೋಕಿಸುತ್ತಿದ್ದೇನೋ ಅಷ್ಟು ನನ್ನ ಕುರಿತಾಗಲೀ ಅಥವಾ ನನ್ನ ಈ ಭ್ರಾತೃಗಳ ಕುರಿತಾಗಲೀ ಅಥವಾ ಕಳೆದು ಹೋದ ರಾಜ್ಯದ ಕುರಿತಾಗಲೀ ಶೋಕಿಸುತ್ತಿಲ್ಲ.

03277002a ದ್ಯೂತೇ ದುರಾತ್ಮಭಿಃ ಕ್ಲಿಷ್ಟಾಃ ಕೃಷ್ಣಯಾ ತಾರಿತಾ ವಯಂ।
03277002c ಜಯದ್ರಥೇನ ಚ ಪುನರ್ವನಾದಪಹೃತಾ ಬಲಾತ್।।

ದ್ಯೂತದಲ್ಲಿ ದುರಾತ್ಮರಿಂದ ಕಷ್ಟಕ್ಕೊಳಗಾದ ನಮ್ಮನ್ನು ಪಾರುಮಾಡಿದ ಕೃಷ್ಣೆಯನ್ನು ಪುನಃ ಜಯದ್ರಥನು ಬಲಾತ್ಕಾರವಾಗಿ ಅಪಹರಿಸಿದನು.

03277003a ಅಸ್ತಿ ಸೀಮಂತಿನೀ ಕಾ ಚಿದ್ದೃಷ್ಟಪೂರ್ವಾಥ ವಾ ಶ್ರುತಾ।
03277003c ಪತಿವ್ರತಾ ಮಹಾಭಾಗಾ ಯಥೇಯಂ ದ್ರುಪದಾತ್ಮಜಾ।।

ಮಹಾಭಾಗೆ ಪತಿವ್ರತೆ ದ್ರುಪದಾತ್ಮಜೆಯ ಹಾಗಿರುವ, ಇದಕ್ಕೂ ಮೊದಲು ನೀನು ನೋಡಿದ ಅಥವಾ ಕೇಳಿದ, ಸೀಮಂತಿನಿ ಯಾರಾದರೂ ಇದ್ದಾರೆಯೇ?”

03277004 ಮಾರ್ಕಂಡೇಯ ಉವಾಚ।
03277004a ಶೃಣು ರಾಜನ್ಕುಲಸ್ತ್ರೀಣಾಂ ಮಹಾಭಾಗ್ಯಂ ಯುಧಿಷ್ಠಿರ।
03277004c ಸರ್ವಮೇತದ್ಯಥಾ ಪ್ರಾಪ್ತಂ ಸಾವಿತ್ರ್ಯಾ ರಾಜಕನ್ಯಯಾ।।

ಮಾರ್ಕಂಡೇಯನು ಹೇಳಿದನು: “ರಾಜನ್! ಯುಧಿಷ್ಠಿರ! ಕುಲಸ್ತ್ರೀಯರ ಮಹಾಭಾಗ್ಯವೆಲ್ಲವನ್ನೂ ಹೊಂದಿದ್ದ ರಾಜಕನ್ಯೆ ಸಾವಿತ್ರಿಯ ಕುರಿತು ಕೇಳು.

03277005a ಆಸೀನ್ಮದ್ರೇಷು ಧರ್ಮಾತ್ಮಾ ರಾಜಾ ಪರಮಧಾರ್ಮಿಕಃ।
03277005c ಬ್ರಹ್ಮಣ್ಯಶ್ಚ ಶರಣ್ಯಶ್ಚ ಸತ್ಯಸಂಧೋ ಜಿತೇಂದ್ರಿಯಃ।।

ಮದ್ರದಲ್ಲಿ ಬ್ರಾಹ್ಮಣರ ಮತ್ತು ಶರಣರ ಸಾನ್ನಿಧ್ಯದಲ್ಲಿದ್ದ, ಧರ್ಮಾತ್ಮ, ಪರಮಧಾರ್ಮಿಕ, ಸತ್ಯಸಂಧ, ಜಿತೇಂದ್ರಿಯ ರಾಜನಿದ್ದನು.

03277006a ಯಜ್ವಾ ದಾನಪತಿರ್ದಕ್ಷಃ ಪೌರಜಾನಪದಪ್ರಿಯಃ।
03277006c ಪಾರ್ಥಿವೋಽಶ್ವಪತಿರ್ನಾಮ ಸರ್ವಭೂತಹಿತೇ ರತಃ।।

ಯಜ್ಞಗಳನ್ನು ಮಾಡುತ್ತಿದ್ದ, ಮುಂದೆನಿಂತು ದಾನಗಳನ್ನು ನೀಡುತ್ತಿದ್ದ, ಪೌರರ ಮತ್ತು ಜಾನಪದರ ಪ್ರಿಯನಾಗಿದ್ದ, ಸರ್ವಭೂತಗಳ ಹಿತದಲ್ಲಿ ನಿರತನಾಗಿದ್ದ ಆ ರಾಜನ ಹೆಸರು ಅಶ್ವಪತಿ.

03277007a ಕ್ಷಮಾವಾನನಪತ್ಯಶ್ಚ ಸತ್ಯವಾಗ್ವಿಜಿತೇಂದ್ರಿಯಃ।
03277007c ಅತಿಕ್ರಾಂತೇನ ವಯಸಾ ಸಂತಾಪಮುಪಜಗ್ಮಿವಾನ್।।

ಕ್ಷಮಾವಂತನೂ, ಸತ್ಯವನ್ನೇ ಮಾತನಾಡುವವನೂ, ಇಂದ್ರಿಯಗಳನ್ನು ಗೆದ್ದವನೂ ಆದ ಅವನಿಗೆ ಮಕ್ಕಳಿರಲಿಲ್ಲ. ವಯಸ್ಸನ್ನು ದಾಟಿದ್ದ ಅವನಿಗೆ ಇದು ಸಂತಾಪವನ್ನು ತಂದೊದಗಿಸಿತು.

03277008a ಅಪತ್ಯೋತ್ಪಾದನಾರ್ಥಂ ಸ ತೀವ್ರಂ ನಿಯಮಮಾಸ್ಥಿತಃ।
03277008c ಕಾಲೇ ಪರಿಮಿತಾಹಾರೋ ಬ್ರಹ್ಮಚಾರೀ ಜಿತೇಂದ್ರಿಯಃ।।

ಮಕ್ಕಳನ್ನು ಹುಟ್ಟಿಸುವ ಸಲುವಾಗಿ ಅವನು ನಿರ್ಧಿಷ್ಠ ವೇಳೆಗಳಲ್ಲಿ ಅಲ್ಪವೇ ಆಹಾರವನ್ನು ಸೇವಿಸುತ್ತಾ, ಬ್ರಹ್ಮಚಾರಿ ಮತ್ತು ಜಿತೇಂದ್ರಿಯನಾಗಿದ್ದು ತೀವ್ರ ನಿಯಮಗಳಲ್ಲಿ ತೊಡಗಿದನು.

03277009a ಹುತ್ವಾ ಶತಸಹಸ್ರಂ ಸ ಸಾವಿತ್ರ್ಯಾ ರಾಜಸತ್ತಮ।
03277009c ಷಷ್ಠೇ ಷಷ್ಠೇ ತದಾ ಕಾಲೇ ಬಭೂವ ಮಿತಭೋಜನಃ।।

ಆ ರಾಜಸತ್ತಮನು ಪ್ರತಿದಿನವೂ ಸಾವಿತ್ರಿಗೆ ನೂರುಸಾವಿರ ಆಹುತಿಗಳನ್ನು ನೀಡುತ್ತಿದ್ದನು ಮತ್ತು ದಿನದ ಆರನೆ ಒಂದು ಭಾಗದಲ್ಲಿ ಮಾತ್ರ ಅಲ್ಪ ಆಹಾರವನ್ನು ತೆಗೆದುಕೊಳ್ಳುತ್ತಿದ್ದನು.

03277010a ಏತೇನ ನಿಯಮೇನಾಸೀದ್ವರ್ಷಾಣ್ಯಷ್ಟಾದಶೈವ ತು।
03277010c ಪೂರ್ಣೇ ತ್ವಷ್ಟಾದಶೇ ವರ್ಷೇ ಸಾವಿತ್ರೀ ತುಷ್ಟಿಮಭ್ಯಗಾತ್।
03277010e ಸ್ವರೂಪಿಣೀ ತದಾ ರಾಜನ್ದರ್ಶಯಾಮಾಸ ತಂ ನೃಪಂ।।

ಈ ರೀತಿ ನಿಯಮದಲ್ಲಿದ್ದುಕೊಂಡು ಹದಿನೆಂಟು ವರ್ಷಗಳು ಕಳೆದವು. ಹದಿನೆಂಟನೆಯ ವರ್ಷವು ಸಂಪೂರ್ಣವಾಗಲು ಸಾವಿತ್ರಿಯು ಅವನ ಮೇಲೆ ಸಂತುಷ್ಟಳಾಗಿದಳು. ರಾಜನ್! ಆಗ ಸ್ವರೂಪಿಣಿಯು ಆ ನೃಪನಿಗೆ ಕಾಣಿಸಿಕೊಂಡಳು.

03277011a ಅಗ್ನಿಹೋತ್ರಾತ್ಸಮುತ್ಥಾಯ ಹರ್ಷೇಣ ಮಹತಾನ್ವಿತಾ।
03277011c ಉವಾಚ ಚೈನಂ ವರದಾ ವಚನಂ ಪಾರ್ಥಿವಂ ತದಾ।।

ಅಗ್ನಿಹೋತ್ರದಿಂದ ಎದ್ದುಬಂದು ಆ ಮಹತಾನ್ವಿತೆ ವರದೆಯು ಹರ್ಷದಿಂದ ರಾಜನಿಗೆ ಹೀಗೆ ಹೇಳಿದಳು:

03277012a ಬ್ರಹ್ಮಚರ್ಯೇಣ ಶುದ್ಧೇನ ದಮೇನ ನಿಯಮೇನ ಚ।
03277012c ಸರ್ವಾತ್ಮನಾ ಚ ಮದ್ಭಕ್ತ್ಯಾ ತುಷ್ಟಾಸ್ಮಿ ತವ ಪಾರ್ಥಿವ।।
03277013a ವರಂ ವೃಣೀಷ್ವಾಶ್ವಪತೇ ಮದ್ರರಾಜ ಯಥೇಪ್ಸಿತಂ।
03277013c ನ ಪ್ರಮಾದಶ್ಚ ಧರ್ಮೇಷು ಕರ್ತವ್ಯಸ್ತೇ ಕಥಂ ಚನ।।

“ರಾಜನ್! ನಿನ್ನ ಬ್ರಹ್ಮಚರ್ಯ, ಪರಿಶುದ್ಧತೆ, ದಮ, ನಿಯಮ ಮತ್ತು ಸರ್ವಾತ್ಮದಿಂದ ನನ್ನ ಮೇಲಿರಿಸುವ ಭಕ್ತಿಯಿಂದ ನಾನು ಸಂತುಷ್ಟಳಾಗಿದ್ದೇನೆ. ಮದ್ರರಾಜ ಅಶ್ವಪತೇ! ವರವನ್ನು ಕೇಳು. ಧರ್ಮ ಕರ್ತವ್ಯಗಳಲ್ಲಿ ಎಂದೂ ಪ್ರಮಾದಕ್ಕೊಳಗಾಗಬೇಡ.”

03277014 ಅಶ್ವಪತಿರುವಾಚ।
03277014a ಅಪತ್ಯಾರ್ಥಃ ಸಮಾರಂಭಃ ಕೃತೋ ಧರ್ಮೇಪ್ಸಯಾ ಮಯಾ।
03277014c ಪುತ್ರಾ ಮೇ ಬಹವೋ ದೇವಿ ಭವೇಯುಃ ಕುಲಭಾವನಾಃ।।

ಅಶ್ವಪತಿಯು ಹೇಳಿದನು: “ದೇವಿ! ಮಕ್ಕಳು ಬೇಕೆಂಬ ಆಸೆಯಿಂದ ನಾನು ಈ ಧರ್ಮ ಸಮಾರಂಭದಲ್ಲಿ ತೊಡಗಿದ್ದೇನೆ. ನನ್ನ ಕುಲವನ್ನು ವೃದ್ಧಿಸುವ ಹಲವು ಪುತ್ರರನ್ನು ನನಗೆ ನೀಡು.

03277015a ತುಷ್ಟಾಸಿ ಯದಿ ಮೇ ದೇವಿ ಕಾಮಮೇತಂ ವೃಣೋಮ್ಯಹಂ।
03277015c ಸಂತಾನಂ ಹಿ ಪರೋ ಧರ್ಮ ಇತ್ಯಾಹುರ್ಮಾಂ ದ್ವಿಜಾತಯಃ।।

ದೇವಿ! ನನ್ನಿಂದ ಸಂತೃಪ್ತಳಾಗಿದ್ದರೆ ನಾನು ಬಯಸಿದ ಈ ವರವನ್ನು ನೀಡು. ದ್ವಿಜರಿಗೆ ಸಂತಾನವೇ ಪರಮ ಧರ್ಮವೆಂದು ಹೇಳುತ್ತಾರೆ.”

03277016 ಸಾವಿತ್ರ್ಯುವಾಚ।
03277016a ಪೂರ್ವಮೇವ ಮಯಾ ರಾಜನ್ನಭಿಪ್ರಾಯಮಿಮಂ ತವ।
03277016c ಜ್ಞಾತ್ವಾ ಪುತ್ರಾರ್ಥಮುಕ್ತೋ ವೈ ತವ ಹೇತೋಃ ಪಿತಾಮಹಃ।।

ಸಾವಿತ್ರಿಯು ಹೇಳಿದಳು: “ರಾಜನ್! ನಿನ್ನ ಈ ಅಭಿಪ್ರಾಯವನ್ನು ತಿಳಿದು ಹಿಂದೆಯೇ ನಿನಗೆ ಪುತ್ರರನ್ನು ನೀಡುವುದರ ಕುರಿತು ಪಿತಾಮಹನಲ್ಲಿ ಕೇಳಿಕೊಂಡಿದ್ದೆ.

03277017a ಪ್ರಸಾದಾಚ್ಚೈವ ತಸ್ಮಾತ್ತೇ ಸ್ವಯಂಭುವಿಹಿತಾದ್ಭುವಿ।
03277017c ಕನ್ಯಾ ತೇಜಸ್ವಿನೀ ಸೌಮ್ಯ ಕ್ಷಿಪ್ರಮೇವ ಭವಿಷ್ಯತಿ।।

ಸ್ವಯಂಭುವು ವಿಹಿಸಿದಂತೆ ಅವನ ಪ್ರಸಾದದಿಂದ ನಿನಗೆ ಶೀಘ್ರದಲ್ಲಿಯೇ ಸೌಮ್ಯ ತೇಜಸ್ವಿನಿ ಕನ್ಯೆಯು ಜನಿಸುವಳು.

03277018a ಉತ್ತರಂ ಚ ನ ತೇ ಕಿಂ ಚಿದ್ವ್ಯಾಹರ್ತವ್ಯಂ ಕಥಂ ಚನ।
03277018c ಪಿತಾಮಹನಿಸರ್ಗೇಣ ತುಷ್ಟಾ ಹ್ಯೇತದ್ಬ್ರವೀಮಿ ತೇ।।

ಇದರ ಕುರಿತು ಮರುಪ್ರಶ್ನೆಯನ್ನು ಕೇಳಬೇಡ ಅಥವಾ ವಾದಿಸ ಬೇಡ. ನಿನ್ನ ಮೇಲೆ ಸಂತುಷ್ಟಳಾಗಿ, ಪಿತಾಮಹನು ವಿಧಿಸಿದ್ದುದನ್ನು, ನಿನಗೆ ಹೇಳುತ್ತಿದ್ದೇನೆ.””

03277019 ಮಾರ್ಕಂಡೇಯ ಉವಾಚ।
03277019a ಸ ತಥೇತಿ ಪ್ರತಿಜ್ಞಾಯ ಸಾವಿತ್ರ್ಯಾ ವಚನಂ ನೃಪಃ।
03277019c ಪ್ರಸಾದಯಾಮಾಸ ಪುನಃ ಕ್ಷಿಪ್ರಮೇವಂ ಭವೇದಿತಿ।।

ಮಾರ್ಕಂಡೇಯನು ಹೇಳಿದನು: “ಸಾವಿತ್ರಿಯ ವಚನಕ್ಕೆ ಹಾಗೆಯೇ ಆಗಲೆಂದು ಒಪ್ಪಿಕೊಂಡಾಗ, ಇದು ಶೀಘ್ರದಲ್ಲಿಯೇ ಆಗುತ್ತದೆಯೆಂದು ಅವಳು ಅನುಗ್ರಹಿಸಿದಳು.

03277020a ಅಂತರ್ಹಿತಾಯಾಂ ಸಾವಿತ್ರ್ಯಾಂ ಜಗಾಮ ಸ್ವಗೃಹಂ ನೃಪಃ।
03277020c ಸ್ವರಾಜ್ಯೇ ಚಾವಸತ್ಪ್ರೀತಃ ಪ್ರಜಾ ಧರ್ಮೇಣ ಪಾಲಯನ್।।

ಸಾವಿತ್ರಿಯು ಅಂತರ್ಧಾನಗೊಳ್ಳಲು ರಾಜನು ತನ್ನ ಅರಮನೆಗೆ ಹಿಂದಿರುಗಿದನು. ಸ್ವರಾಜ್ಯದಲ್ಲಿ ವಾಸಿಸಿ ಪ್ರಜೆಗಳನ್ನು ಪ್ರೀತಿ-ಧರ್ಮಗಳಿಂದ ಪಾಲಿಸಿದನು.

03277021a ಕಸ್ಮಿಂಶ್ಚಿತ್ತು ಗತೇ ಕಾಲೇ ಸ ರಾಜಾ ನಿಯತವ್ರತಃ।
03277021c ಜ್ಯೇಷ್ಠಾಯಾಂ ಧರ್ಮಚಾರಿಣ್ಯಾಂ ಮಹಿಷ್ಯಾಂ ಗರ್ಭಮಾದಧೇ।।

ಕೆಲವು ಸಮಯವು ಕಳೆಯಲು ನಿಯತವ್ರತ ರಾಜನು ಧರ್ಮಚಾರಿಣಿ ಹಿರಿಯ ರಾಣಿಗೆ ಗರ್ಭವನ್ನು ನೀಡಿದನು.

03277022a ರಾಜಪುತ್ರ್ಯಾಂ ತು ಗರ್ಭಃ ಸ ಮಾಲವ್ಯಾಂ ಭರತರ್ಷಭ।
03277022c ವ್ಯವರ್ಧತ ಯಥಾ ಶುಕ್ಲೇ ತಾರಾಪತಿರಿವಾಂಬರೇ।।

ಭರತರ್ಷಭ! ರಾಜಪುತ್ರಿ ಆ ಮಾಲವಿಯಲ್ಲಿ ಗರ್ಭವು ಅಂಬರದಲ್ಲಿ ಶುಕ್ಲಪಕ್ಷದಲ್ಲಿ ತಾರಾಪತಿ ಚಂದ್ರನಂತೆ ವರ್ಧಿಸಿತು.

03277023a ಪ್ರಾಪ್ತೇ ಕಾಲೇ ತು ಸುಷುವೇ ಕನ್ಯಾಂ ರಾಜೀವಲೋಚನಾಂ।
03277023c ಕ್ರಿಯಾಶ್ಚ ತಸ್ಯಾ ಮುದಿತಶ್ಚಕ್ರೇ ಸ ನೃಪತಿಸ್ತದಾ।।

ಕಾಲ ಪ್ರಾಪ್ತವಾಗಲು ಅವಳು ರಾಜೀವಲೋಚನೆ ಕನ್ಯೆಗೆ ಜನ್ಮವಿತ್ತಳು. ಆಗ ಆ ನೃಪತಿಯು ಸಂತೋಷದಿಂದ ಅವಳ ಎಲ್ಲ ಕ್ರಿಯೆಗಳನ್ನೂ ನೆರವೇರಿಸಿದನು.

03277024a ಸಾವಿತ್ರ್ಯಾ ಪ್ರೀತಯಾ ದತ್ತಾ ಸಾವಿತ್ರ್ಯಾ ಹುತಯಾ ಹ್ಯಪಿ।
03277024c ಸಾವಿತ್ರೀತ್ಯೇವ ನಾಮಾಸ್ಯಾಶ್ಚಕ್ರುರ್ವಿಪ್ರಾಸ್ತಥಾ ಪಿತಾ।।

ಸಾವಿತ್ರಿಯ ಆಹುತಿಗಳಿಂದ ತೃಪ್ತಳಾಗಿ ಸಾವಿತ್ರಿಯಿಂದ ಪಡೆದ ಅವಳಿಗೆ ತಂದೆ ಮತ್ತು ವಿಪ್ರರು ಸಾವಿತ್ರಿ ಎಂದೇ ನಾಮಕರಣ ಮಾಡಿದರು.

03277025a ಸಾ ವಿಗ್ರಹವತೀವ ಶ್ರೀರ್ವ್ಯವರ್ಧತ ನೃಪಾತ್ಮಜಾ।
03277025c ಕಾಲೇನ ಚಾಪಿ ಸಾ ಕನ್ಯಾ ಯೌವನಸ್ಥಾ ಬಭೂವ ಹ।।

ಆ ನೃಪಾತ್ಮಜೆಯು ಸಾಕ್ಷಾತ್ ಶ್ರೀಯೇ ಅವತರಿಸಿರುವಳೋ ಎನ್ನುವಂತೆ ಅತೀವ ಸುಂದರಿಯಾಗಿ ಬೆಳೆದಳು. ಸಮಯವು ಕಳೆದಂತೆ ಆ ಕನ್ಯೆಯು ಯೌವನಾವಸ್ಥೆಗೆ ಬಂದಳು.

03277026a ತಾಂ ಸುಮಧ್ಯಾಂ ಪೃಥುಶ್ರೋಣೀಂ ಪ್ರತಿಮಾಂ ಕಾಂಚನೀಮಿವ।
03277026c ಪ್ರಾಪ್ತೇಯಂ ದೇವಕನ್ಯೇತಿ ದೃಷ್ಟ್ವಾ ಸಮ್ಮೇನಿರೇ ಜನಾಃ।।

ಆ ಸುಮಧ್ಯಮೆ, ಪೃಥುಶ್ರೋಣಿ, ಬಂಗಾರದ ಪುತ್ಥಳಿಯಂತಿದ್ದ ಅವಳನ್ನು ನೋಡಿ ಜನರು ದೇವಕನ್ಯೆಯೇ ತಮ್ಮ ನಡುವೆ ಬಂದಿದ್ದಾಳೋ ಎಂದು ಅಚ್ಚರಿ ಪಡುತ್ತಿದ್ದರು.

03277027a ತಾಂ ತು ಪದ್ಮಪಲಾಶಾಕ್ಷೀಂ ಜ್ವಲಂತೀಮಿವ ತೇಜಸಾ।
03277027c ನ ಕಶ್ಚಿದ್ವರಯಾಮಾಸ ತೇಜಸಾ ಪ್ರತಿವಾರಿತಃ।।

ಆ ಪದ್ಮಪಲಾಶಾಕ್ಷಿಯಾದರೋ ತೇಜಸ್ಸಿನಿಂದ ಪ್ರಜ್ವಲಿಸುತ್ತಿರಲು ಅವಳ ತೇಜಸ್ಸಿಗೆ ಹಿಂಜರಿದ ಯಾರೂ ಅವಳನ್ನು ವರಿಸಲಿಲ್ಲ.

03277028a ಅಥೋಪೋಷ್ಯ ಶಿರಃಸ್ನಾತಾ ದೈವತಾನ್ಯಭಿಗಮ್ಯ ಸಾ।
03277028c ಹುತ್ವಾಗ್ನಿಂ ವಿಧಿವದ್ವಿಪ್ರಾನ್ವಾಚಯಾಮಾಸ ಪರ್ವಣಿ।।

ಒಮ್ಮೆ ಉತ್ತಮ ದಿನದಂದು ಉಪವಾಸದಿಂದಿದ್ದು, ತಲೆಗೆ ಸ್ನಾನಮಾಡಿ ದೇವತೆಗಳನ್ನು ಪೂಜಿಸಿ ಅವಳು ವಿಧಿವತ್ತಾಗಿ ಬ್ರಾಹ್ಮಣರು ವಾಚಿಸುತ್ತಿರಲು ಅಗ್ನಿಯಲ್ಲಿ ಆಹುತಿಗಳನ್ನಿತ್ತಳು.

03277029a ತತಃ ಸುಮನಸಃ ಶೇಷಾಃ ಪ್ರತಿಗೃಹ್ಯ ಮಹಾತ್ಮನಃ।
03277029c ಪಿತುಃ ಸಕಾಶಮಗಮದ್ದೇವೀ ಶ್ರೀರಿವ ರೂಪಿಣೀ।।

ಅನಂತರ ಸುಮನಸ್ಕಳಾಗಿ, ಉಳಿದ ಪ್ರಸಾದವನ್ನು ಹಿಡಿದು ಶ್ರೀಯಂತೆ ರೂಪವತಿಯಾದ ಆ ದೇವಿಯು ಮಹಾತ್ಮ ತಂದೆಯ ಬಳಿಗೆ ಹೋದಳು.

03277030a ಸಾಭಿವಾದ್ಯ ಪಿತುಃ ಪಾದೌ ಶೇಷಾಃ ಪೂರ್ವಂ ನಿವೇದ್ಯ ಚ।
03277030c ಕೃತಾಂಜಲಿರ್ವರಾರೋಹಾ ನೃಪತೇಃ ಪಾರ್ಶ್ವತಃ ಸ್ಥಿತಾ।।

ಮೊದಲು ಪ್ರಸಾದವನ್ನು ಅವನಿಗಿತ್ತು ತಂದೆಯ ಪಾದಗಳಿಗೆ ನಮಸ್ಕರಿಸಿ, ಅಂಜಲೀಬದ್ಧಳಾಗಿ ಆ ವರಾರೋಹೆಯು ನೃಪತಿಯ ಪಕ್ಕದಲ್ಲಿ ನಿಂತುಕೊಂಡಳು.

03277031a ಯೌವನಸ್ಥಾಂ ತು ತಾಂ ದೃಷ್ಟ್ವಾ ಸ್ವಾಂ ಸುತಾಂ ದೇವರೂಪಿಣೀಂ।
03277031c ಅಯಾಚ್ಯಮಾನಾಂ ಚ ವರೈರ್ನೃಪತಿರ್ದುಃಖಿತೋಽಭವತ್।।

ಯೌವನಾವಸ್ಥೆಯಲ್ಲಿರುವ ತನ್ನ ದೇವರೂಪಿಣಿ ಮಗಳನ್ನು ನೋಡಿ ನೃಪತಿಯು ಅವಳನ್ನು ಕೇಳಿಕೊಂಡು ಇದೂವರೆಗೆ ಯಾರೂ ವರರು ಬರಲಿಲ್ಲವಲ್ಲಾ ಎಂದು ದುಃಖಿಸಿದನು.

03277032 ರಾಜೋವಾಚ।
03277032a ಪುತ್ರಿ ಪ್ರದಾನಕಾಲಸ್ತೇ ನ ಚ ಕಶ್ಚಿದ್ವೃಣೋತಿ ಮಾಂ।
03277032c ಸ್ವಯಮನ್ವಿಚ್ಚ ಭರ್ತಾರಂ ಗುಣೈಃ ಸದೃಶಮಾತ್ಮನಃ।।

ರಾಜನು ಹೇಳಿದನು: “ಪುತ್ರಿ! ನಿನ್ನನ್ನು ಕೊಡುವ ಕಾಲವು ಬಂದಿದೆ. ಆದರೆ ಇದೂವರೆಗೆ ಯಾರೂ ನಿನ್ನನ್ನು ಕೇಳಿಕೊಂಡು ಬಂದಿಲ್ಲ. ಗುಣದಲ್ಲಿ ನಿನ್ನಂತೆಯೇ ಇರುವ ಪತಿಯನ್ನು ನೀನೇ ಇಷ್ಟಪಟ್ಟು ಆರಿಸಿಕೋ.

03277033a ಪ್ರಾರ್ಥಿತಃ ಪುರುಷೋ ಯಶ್ಚ ಸ ನಿವೇದ್ಯಸ್ತ್ವಯಾ ಮಮ।
03277033c ವಿಮೃಶ್ಯಾಹಂ ಪ್ರದಾಸ್ಯಾಮಿ ವರಯ ತ್ವಂ ಯಥೇಪ್ಸಿತಂ।।

ನೀನು ಬಯಸಿದ ಪುರುಷನ ಕುರಿತು ನನ್ನಲ್ಲಿ ಹೇಳು. ವಿಮರ್ಶಿಸಿ ನಾನು ನಿನಗಿಷ್ಟನಾದ ವರನಿಗೆ ನಿನ್ನನ್ನು ಕೊಡುತ್ತೇನೆ.

03277034a ಶ್ರುತಂ ಹಿ ಧರ್ಮಶಾಸ್ತ್ರೇ ಮೇ ಪಠ್ಯಮಾನಂ ದ್ವಿಜಾತಿಭಿಃ।
03277034c ತಥಾ ತ್ವಮಪಿ ಕಲ್ಯಾಣಿ ಗದತೋ ಮೇ ವಚಃ ಶೃಣು।।

ಕಲ್ಯಾಣೀ! ಧರ್ಮಶಾಸ್ತ್ರಗಳನ್ನು ಓದಿ ತಿಳಿದ ದ್ವಿಜರಿಂದ ಕೇಳಿದುದನ್ನು ನಾನು ನಿನಗೆ ಹೇಳುತ್ತಿದ್ದೇನೆ. ನೀನೂ ಕೂಡ ನಾನು ಹೇಳುತ್ತಿರುವ ಈ ಮಾತನ್ನು ಕೇಳು.

03277035a ಅಪ್ರದಾತಾ ಪಿತಾ ವಾಚ್ಯೋ ವಾಚ್ಯಶ್ಚಾನುಪಯನ್ಪತಿಃ।
03277035c ಮೃತೇ ಭರ್ತರಿ ಪುತ್ರಶ್ಚ ವಾಚ್ಯೋ ಮಾತುರಾರಕ್ಷತಾ।।

ವಯಸ್ಸಿಗೆ ಬಂದಿರುವ ಮಗಳನ್ನು ಕೊಡದೇ ಇರುವ ತಂದೆಯನ್ನು ನಿಂದಿಸಬೇಕು; ಮಕ್ಕಳನ್ನು ಪಡೆಯದ ಪತಿಯನ್ನು ನಿಂದಿಸಬೇಕು; ವಿಧವೆ ತಾಯಿಯನ್ನು ನೋಡಿಕೊಳ್ಳದ ಪುತ್ರನನ್ನು ನಿಂದಿಸಬೇಕು.

03277036a ಇದಂ ಮೇ ವಚನಂ ಶ್ರುತ್ವಾ ಭರ್ತುರಾನ್ವೇಷಣೇ ತ್ವರ।
03277036c ದೇವತಾನಾಂ ಯಥಾ ವಾಚ್ಯೋ ನ ಭವೇಯಂ ತಥಾ ಕುರು।।

ನನ್ನ ಈ ಮಾತನ್ನು ಕೇಳಿ ಬೇಗನೇ ಪತಿಯನ್ನು ಹುಡುಕು. ನಾನು ದೇವತೆಗಳ ನಿಂದನೆಗೊಳಗಾಗದಂತೆ ಮಾಡು.””

03277037 ಮಾರ್ಕಂಡೇಯ ಉವಾಚ।
03277037a ಏವಮುಕ್ತ್ವಾ ದುಹಿತರಂ ತಥಾ ವೃದ್ಧಾಂಶ್ಚ ಮಂತ್ರಿಣಃ।
03277037c ವ್ಯಾದಿದೇಶಾನುಯಾತ್ರಂ ಚ ಗಮ್ಯತಾಮಿತ್ಯಚೋದಯತ್।।

ಮಾರ್ಕಂಡೇಯನು ಹೇಳಿದನು: “ಮಗಳಿಗೆ ಈ ರೀತಿ ಹೇಳಿ ಅವನು ವೃದ್ಧ ಮಂತ್ರಿಗಳಿಗೆ ಪ್ರಯಾಣಕ್ಕೆ ಸಿದ್ಧತೆಯನ್ನು ಮಾಡಿಕೊಂಡು ಅವಳೊಂದಿಗೆ ಹೊರಡಲು ಆಜ್ಞಾಪಿಸಿದನು.

03277038a ಸಾಭಿವಾದ್ಯ ಪಿತುಃ ಪಾದೌ ವ್ರೀಡಿತೇವ ಮನಸ್ವಿನೀ।
03277038c ಪಿತುರ್ವಚನಮಾಜ್ಞಾಯ ನಿರ್ಜಗಾಮಾವಿಚಾರಿತಂ।।

ನಾಚಿಕೊಂಡು ಆ ಮನಸ್ವಿನಿಯು ತಂದೆಯ ಪಾದಗಳಿಗೆ ವಂದಿಸಿ ಪಿತೃವಚನವನ್ನು ಆಜ್ಞೆಯೆಂದು ಸ್ವೀಕರಿಸಿ ತಕ್ಷಣವೇ ಹೊರಟಳು.

03277039a ಸಾ ಹೈಮಂ ರಥಮಾಸ್ಥಾಯ ಸ್ಥವಿರೈಃ ಸಚಿವೈರ್ವೃತಾ।
03277039c ತಪೋವನಾನಿ ರಮ್ಯಾಣಿ ರಾಜರ್ಷೀಣಾಂ ಜಗಾಮಹ।।

ಬಂಗಾರದ ರಥದಲ್ಲಿ ಕುಳಿತು ಸಚಿವರಿಂದ ಸುತ್ತುವರೆದು ರಮ್ಯ ವನಗಳಲ್ಲಿ ರಾಜರ್ಷಿಗಳ ತಪೋವನಗಳಲ್ಲಿ ಸುತ್ತಿದಳು.

03277040a ಮಾನ್ಯಾನಾಂ ತತ್ರ ವೃದ್ಧಾನಾಂ ಕೃತ್ವಾ ಪಾದಾಭಿವಂದನಂ।
03277040c ವನಾನಿ ಕ್ರಮಶಸ್ತಾತ ಸರ್ವಾಣ್ಯೇವಾಭ್ಯಗಚ್ಚತ।।

ಅಲ್ಲಿ ವೃದ್ಧರನ್ನು ಗೌರವಿಸಿ ಅವರ ಪಾದಗಳಿಗೆ ವಂದಿಸಿ ಕ್ರಮವಾಗಿ ಎಲ್ಲ ವನಗಳಿಗೆ ಹೋದಳು.

03277041a ಏವಂ ಸರ್ವೇಷು ತೀರ್ಥೇಷು ಧನೋತ್ಸರ್ಗಂ ನೃಪಾತ್ಮಜಾ।
03277041c ಕುರ್ವತೀ ದ್ವಿಜಮುಖ್ಯಾನಾಂ ತಂ ತಂ ದೇಶಂ ಜಗಾಮ ಹ।।

ಹೀಗೆ ಸರ್ವ ತೀರ್ಥಗಳಲ್ಲಿ ಧನವನ್ನು ನೀಡುತ್ತಾ ಆ ನೃಪತಾತ್ಮಜೆಯು ದ್ವಿಜಮುಖ್ಯರಿರುವ ಬೇರೆ ಬೇರೆ ದೇಶಗಳಿಗೆ ಪ್ರಯಾಣ ಮಾಡಿದಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ಸಪ್ತಸಪ್ತತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಪ್ಪತ್ತೇಳನೆಯ ಅಧ್ಯಾಯವು.