276 ರಾಮೋಪಾಖ್ಯಾನೇ ಯುಧಿಷ್ಠಿರಾಶ್ವಾಸನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 276

ಸಾರ

ಯುಧಿಷ್ಠಿರನಲ್ಲಿ ಸ್ವಲ್ಪವೂ ದೋಷವಿಲ್ಲವೆಂದು ವೀರ ಸಹೋದರರ ಸಹಾಯವಿರುವಾಗ ಚಿಂತಿಸಬೇಕಾಗೆಲ್ಲವೆಂದು ಮಾರ್ಕಂಡೇಯನು ಹೇಳಿದುದು (1-13).

03276001 ಮಾರ್ಕಂಡೇಯ ಉವಾಚ।
03276001a ಏವಮೇತನ್ಮಹಾಬಾಹೋ ರಾಮೇಣಾಮಿತತೇಜಸಾ।
03276001c ಪ್ರಾಪ್ತಂ ವ್ಯಸನಮತ್ಯುಗ್ರಂ ವನವಾಸಕೃತಂ ಪುರಾ।।

ಮಾರ್ಕಂಡೇಯನು ಹೇಳಿದನು: “ಮಹಾಬಾಹೋ! ಹೀಗೆ ಹಿಂದೆ ಅಮಿತತೇಜಸ ರಾಮನು ಅತ್ಯುಗ್ರ ವ್ಯಸನವನ್ನು ಹೊಂದಿ ವನವಾಸವನ್ನು ಮಾಡಿದನು.

03276002a ಮಾ ಶುಚಃ ಪುರುಷವ್ಯಾಘ್ರ ಕ್ಷತ್ರಿಯೋಽಸಿ ಪರಂತಪ।
03276002c ಬಾಹುವೀರ್ಯಾಶ್ರಯೇ ಮಾರ್ಗೇ ವರ್ತಸೇ ದೀಪ್ತನಿರ್ಣಯೇ।।

ಪುರುಷವ್ಯಾಘ್ರ! ಪರಂತಪ! ಶೋಕಿಸಬೇಡ! ಕ್ಷತ್ರಿಯನಾಗಿದ್ದೀಯೆ! ಬಾಹುವೀರ್ಯವನ್ನು ಆಶ್ರಯಿಸಿ ಉರಿಯುತ್ತಿರುವ ನಿರ್ಣಾಯಕ ಮಾರ್ಗದಲ್ಲಿ ನಡೆಯುತ್ತಿರುವೆ.

03276003a ನ ಹಿ ತೇ ವೃಜಿನಂ ಕಿಂ ಚಿದ್ದೃಶ್ಯತೇ ಪರಮಣ್ವಪಿ।
03276003c ಅಸ್ಮಿನ್ಮಾರ್ಗೇ ವಿಷೀದೇಯುಃ ಸೇಂದ್ರಾ ಅಪಿ ಸುರಾಸುರಾಃ।।

ನಿನ್ನಲ್ಲಿ ಏನೂ, ಪರಮಾಣುವಿನ ಮಾತ್ರದಷ್ಟೂ, ದೋಷವಿಲ್ಲ. ಸುರಾಸುರರೊಂದಿಗೆ ಇಂದ್ರನೂ ಕೂಡ ಈ ಮಾರ್ಗದಲ್ಲಿ ಹಿಂಜರಿಯುತ್ತಾನೆ.

03276004a ಸಂಹತ್ಯ ನಿಹತೋ ವೃತ್ರೋ ಮರುದ್ಭಿರ್ವಜ್ರಪಾಣಿನಾ।
03276004c ನಮುಚಿಶ್ಚೈವ ದುರ್ಧರ್ಷೋ ದೀರ್ಘಜಿಹ್ವಾ ಚ ರಾಕ್ಷಸೀ।।

ವಜ್ರಪಾಣಿಯು ಮರುತ್ತರೊಂದೊಡಗೂಡಿ ವೃತ್ರನನ್ನು, ದುರ್ಧರ್ಷ ನಮುಚಿಯನ್ನೂ, ರಾಕ್ಷಸಿ ದೀರ್ಘಜಿಹ್ವೆಯನ್ನೂ ಸಂಹರಿಸಿದನು.

03276005a ಸಹಾಯವತಿ ಸರ್ವಾರ್ಥಾಃ ಸಂತಿಷ್ಠಂತೀಹ ಸರ್ವಶಃ।
03276005c ಕಿಂ ನು ತಸ್ಯಾಜಿತಂ ಸಂಖ್ಯೇ ಭ್ರಾತಾ ಯಸ್ಯ ಧನಂಜಯಃ।।

ಸಹಾಯವಿದ್ದವನಿಗೆ ಒಳ್ಳೆಯದೆಲ್ಲವೂ ಆಗುತ್ತದೆ. ಧನಂಜಯನನ್ನು ಸಹೋದರನನ್ನಾಗಿ ಪಡೆದಿರುವವನಿಗೆ ಯುದ್ಧದಲ್ಲಿ ಜಯಿಸದೇ ಇರುವುದಾದರೂ ಏನಿದೆ?

03276006a ಅಯಂ ಚ ಬಲಿನಾಂ ಶ್ರೇಷ್ಠೋ ಭೀಮೋ ಭೀಮಪರಾಕ್ರಮಃ।
03276006c ಯುವಾನೌ ಚ ಮಹೇಷ್ವಾಸೌ ಯಮೌ ಮಾದ್ರವತೀಸುತೌ।
03276006e ಏಭಿಃ ಸಹಾಯೈಃ ಕಸ್ಮಾತ್ತ್ವಂ ವಿಷೀದಸಿ ಪರಂತಪ।।

ಪರಂತಪ! ಈ ಭೀಮಪರಾಕ್ರಮಿ ಭೀಮನು ಬಲಿಗಳಲ್ಲಿಯೇ ಶ್ರೇಷ್ಠನು. ಮಾದ್ರವತೀ ಸುತರೀರ್ವರು ಯಮಳರು ಯುವಕರು ಮತ್ತು ಮಹೇಷ್ವಾಸರು. ಇವರ ಸಹಾಯವಿರುವಾಗ ನೀನು ಏಕೆ ವಿಷಾದಿಸತ್ತಿರುವೆ?

03276007a ಯ ಇಮೇ ವಜ್ರಿಣಃ ಸೇನಾಂ ಜಯೇಯುಃ ಸಮರುದ್ಗಣಾಂ।
03276007c ತ್ವಮಪ್ಯೇಭಿರ್ಮಹೇಷ್ವಾಸೈಃ ಸಹಾಯೈರ್ದೇವರೂಪಿಭಿಃ।
03276007e ವಿಜೇಷ್ಯಸಿ ರಣೇ ಸರ್ವಾನಮಿತ್ರಾನ್ಭರತರ್ಷಭ।।

ಭರತರ್ಷಭ! ಮರುದ್ಗಣಗಳೊಂದಿಗೆ ಇಂದ್ರನ ಸೇನೆಯನ್ನೂ ಜಯಿಸಬಲ್ಲ ಈ ಮಹೇಷ್ವಾಸ ದೇವರೂಪಿಗಳನ್ನು ಸಹಾಯಕರನ್ನಾಗಿ ಪಡೆದ ನೀನು ರಣದಲ್ಲಿ ಅಮಿತ್ರರೆಲ್ಲರನ್ನೂ ಜಯಿಸುತ್ತೀಯೆ.

03276008a ಇತಶ್ಚ ತ್ವಮಿಮಾಂ ಪಶ್ಯ ಸೈಂಧವೇನ ದುರಾತ್ಮನಾ।
03276008c ಬಲಿನಾ ವೀರ್ಯಮತ್ತೇನ ಹೃತಾಮೇಭಿರ್ಮಹಾತ್ಮಭಿಃ।।
03276009a ಆನೀತಾಂ ದ್ರೌಪದೀಂ ಕೃಷ್ಣಾಂ ಕೃತ್ವಾ ಕರ್ಮ ಸುದುಷ್ಕರಂ।
03276009c ಜಯದ್ರಥಂ ಚ ರಾಜಾನಂ ವಿಜಿತಂ ವಶಮಾಗತಂ।।

ಬಲಶಾಲಿಯಾದ, ವೀರ್ಯದಿಂದ ಮತ್ತನಾಗಿದ್ದ ದುರಾತ್ಮ ಸೈಂಧವನಿಂದ ಅಪಹೃತಳಾಗಿದ್ದ ಈ ದ್ರೌಪದಿ ಕೃಷ್ಣೆಯನ್ನಾದರೂ ನೀನು ನೋಡು. ಆದರೆ ಮಹಾತ್ಮರು ಸುದುಷ್ಕರ ಕಾರ್ಯವನ್ನೆಸಗಿ ರಾಜ ಜಯದ್ರಥನನ್ನು ಸೋಲಿಸಿ ವಶಪಡಿಸಿಕೊಂಡರು.

03276010a ಅಸಹಾಯೇನ ರಾಮೇಣ ವೈದೇಹೀ ಪುನರಾಹೃತಾ।
03276010c ಹತ್ವಾ ಸಂಖ್ಯೇ ದಶಗ್ರೀವಂ ರಾಕ್ಷಸಂ ಭೀಮವಿಕ್ರಮಂ।।

ಅಸಹಾಯಕನಾದ ರಾಮನು ಭೀಮವಿಕ್ರಮಿ ರಾಕ್ಷಸ ದಶಗ್ರೀವನನ್ನು ಯುದ್ಧದಲ್ಲಿ ಕೊಂದೇ ವೈದೇಹಿಯನ್ನು ಪುನಃ ಪಡೆದನು.

03276011a ಯಸ್ಯ ಶಾಖಾಮೃಗಾ ಮಿತ್ರಾ ಋಕ್ಷಾಃ ಕಾಲಮುಖಾಸ್ತಥಾ।
03276011c ಜಾತ್ಯಂತರಗತಾ ರಾಜನ್ನೇತದ್ಬುದ್ಧ್ಯಾನುಚಿಂತಯ।।

ಅವನಿಗೆ ಬೇರೆಯೇ ಜಾತಿಯ ಕಪಿಗಳು, ಕಪ್ಪು ಮುಖದ ಕರಡಿಗಳು ಮಿತ್ರರಾಗಿದ್ದರು. ರಾಜನ್! ಇದರ ಕುರಿತಾದರೂ ಬುದ್ಧಿಯಿಂದ ಚಿಂತಿಸು.

03276012a ತಸ್ಮಾತ್ತ್ವಂ ಕುರುಶಾರ್ದೂಲ ಮಾ ಶುಚೋ ಭರತರ್ಷಭ।
03276012c ತ್ವದ್ವಿಧಾ ಹಿ ಮಹಾತ್ಮಾನೋ ನ ಶೋಚಂತಿ ಪರಂತಪ।।

ಕುರುಶಾರ್ದೂಲ! ಭರತರ್ಷಭ! ಆದುದರಿಂದ ನೀನು ಶೋಕಿಸಬಾರದು. ಪರಂತಪ! ನಿನ್ನಂಥಹ ಮಹಾತ್ಮರು ಶೋಕಿಸುವುದಿಲ್ಲ.””

03276013 ವೈಶಂಪಾಯನ ಉವಾಚ।
03276013a ಏವಮಾಶ್ವಾಸಿತೋ ರಾಜಾ ಮಾರ್ಕಂಡೇಯೇನ ಧೀಮತಾ।
03276013c ತ್ಯಕ್ತ್ವಾ ದುಃಖಮದೀನಾತ್ಮಾ ಪುನರೇವೇದಮಬ್ರವೀತ್।।

ವೈಶಂಪಾಯನನು ಹೇಳಿದನು: “ಧೀಮತ ಮಾರ್ಕಂಡೇಯನಿಂದ ಹೀಗೆ ಆಶ್ವಾಸನೆಯನ್ನು ಪಡೆದ ರಾಜನು ದುಃಖವನ್ನು ತೊರೆದು ಪುನಃ ಈ ಮಾತುಗಳನ್ನಾಡಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಯುಧಿಷ್ಠಿರಾಶ್ವಾಸನೇ ಷಟ್‌ಸಪ್ತತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಯುಧಿಷ್ಠಿರಾಶ್ವಾಸನದಲ್ಲಿ ಇನ್ನೂರಾಎಪ್ಪತ್ತಾರನೆಯ ಅಧ್ಯಾಯವು.