274 ರಾಮೋಪಾಖ್ಯಾನೇ ರಾವಣವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 274

ಸಾರ

ರಾಮ-ರಾವಣರ ಘೋರ ಯುದ್ಧವು ನಡೆಯುತ್ತಿರುವಾಗ ಇಂದ್ರನು ಕಳುಹಿಸಿದ ರಥವನ್ನು ರಾಮನು ಏರಿದುದು (1-17). ಬ್ರಹ್ಮಾಸ್ತ್ರವನ್ನುಪಯೋಗಿಸಿ ರಾಮನು ರಾವಣನನ್ನು ವಧಿಸಿದುದು (18-31).

03274001 ಮಾರ್ಕಂಡೇಯ ಉವಾಚ।
03274001a ತತಃ ಕ್ರುದ್ಧೋ ದಶಗ್ರೀವಃ ಪ್ರಿಯೇ ಪುತ್ರೇ ನಿಪಾತಿತೇ।
03274001c ನಿರ್ಯಯೌ ರಥಮಾಸ್ಥಾಯ ಹೇಮರತ್ನವಿಭೂಷಿತಂ।।

ಮಾರ್ಕಂಡೇಯನು ಹೇಳಿದನು: “ಪ್ರಿಯ ಪುತ್ರನು ಸಂಹರಿಸಲ್ಪಟ್ಟಾಗ ಕೃದ್ಧನಾದ ದಶಗ್ರೀವನು ಹೇಮರತ್ನ ವಿಭೂಷಿತ ರಥದಲ್ಲಿ ನಿಂತು ಹೊರಟನು.

03274002a ಸಂವೃತೋ ರಾಕ್ಷಸೈರ್ಘೋರೈರ್ವಿವಿಧಾಯುಧಪಾಣಿಭಿಃ।
03274002c ಅಭಿದುದ್ರಾವ ರಾಮಂ ಸ ಪೋಥಯನ್ ಹರಿಯೂಥಪಾನ್।।

ವಿವಿಧ ಆಯುಧಗಳನ್ನು ಹಿಡಿದ ಘೋರ ರಾಕ್ಷಸರಿಂದ ಸಂವೃತನಾಗಿ ಕಪಿಸೇನೆಯ ಮುಖಂಡರನ್ನು ಪುಡಿಮಾಡುತ್ತಾ ರಾಮನ ಮೇಲೆ ಎರಗಿದನು.

03274003a ತಮಾದ್ರವಂತಂ ಸಂಕ್ರುದ್ಧಂ ಮೈಂದನೀಲನಲಾಂಗದಾಃ।
03274003c ಹನೂಮಾಂ ಜಾಂಬವಾಂಶ್ಚೈವ ಸಸೈನ್ಯಾಃ ಪರ್ಯವಾರಯನ್।।

ಸಂಕೃದ್ಧನಾಗಿ ವೇಗವಾಗಿ ಮುಂದುವರೆಯುತ್ತಿದ್ದ ಅವನನ್ನು ಮೈಂದ, ನೀಲ, ಅಂಗದ, ಹನೂಮಾನ್, ಮತ್ತು ಜಾಂಬವನು ತಮ್ಮ ಸೇನೆಗಳೊಂದಿಗೆ ತಡೆದರು.

03274004a ತೇ ದಶಗ್ರೀವಸೈನ್ಯಂ ತದೃಕ್ಷವಾನರಯೂಥಪಾಃ।
03274004c ದ್ರುಮೈರ್ವಿಧ್ವಂಸಯಾಂ ಚಕ್ರುರ್ದಶಗ್ರೀವಸ್ಯ ಪಶ್ಯತಃ।।

ಕರಡಿ-ವಾನರರ ಸೇನೆಗಳ ಮುಖಂಡರು ಆ ದಶಗ್ರೀವನ ಸೈನ್ಯವನ್ನು ದಶಗ್ರೀವನು ನೋಡುತ್ತಿದ್ದಂತೆಯೇ ವೃಕ್ಷಗಳಿಂದ ಧ್ವಂಸಮಾಡಿದರು.

03274005a ತತಃ ಸ್ವಸೈನ್ಯಮಾಲೋಕ್ಯ ವಧ್ಯಮಾನಮರಾತಿಭಿಃ।
03274005c ಮಾಯಾವೀ ವ್ಯದಧಾನ್ಮಾಯಾಂ ರಾವಣೋ ರಾಕ್ಷಸೇಶ್ವರಃ।।

ಆಗ ತನ್ನ ಸೇನೆಯನ್ನು ಶತ್ರುಗಳು ವಧಿಸುತ್ತಿರುವುದನ್ನು ನೋಡಿ ಮಾಯಾವೀ ರಾಕ್ಷಸೇಶ್ವರ ರಾವಣನು ಮಾಯಾ ಯುದ್ಧವನ್ನು ಪ್ರದರ್ಶಿಸಿದನು.

03274006a ತಸ್ಯ ದೇಹಾದ್ವಿನಿಷ್ಕ್ರಾಂತಾಃ ಶತಶೋಽಥ ಸಹಸ್ರಶಃ।
03274006c ರಾಕ್ಷಸಾಃ ಪ್ರತ್ಯದೃಶ್ಯಂತ ಶರಶಕ್ತ್ಯೃಷ್ಟಿಪಾಣಯಃ।।

ಅವನ ದೇಹದಿಂದ ನೂರಾರು ಸಹಸ್ರಾರು ರಾಕ್ಷಸರು ಶರ, ಶಕ್ತಿ ಮತ್ತು ಈಟಿಗಳನ್ನು ಹಿಡಿದು ಹೊರಬರುವುದು ಕಂಡುಬಂದಿತು.

03274007a ತಾನ್ರಾಮೋ ಜಘ್ನಿವಾನ್ಸರ್ವಾನ್ದಿವ್ಯೇನಾಸ್ತ್ರೇಣ ರಾಕ್ಷಸಾನ್।
03274007c ಅಥ ಭೂಯೋಽಪಿ ಮಾಯಾಂ ಸ ವ್ಯದಧಾದ್ರಾಕ್ಷಸಾಧಿಪಃ।।

ಆ ರಾಕ್ಷಸರೆಲ್ಲರನ್ನೂ ರಾಮನು ದಿವ್ಯಾಸ್ತ್ರಗಳಿಂದ ಸಾಯಿಸಿದನು. ಆಗ ರಾಕ್ಷಸನು ಮತ್ತೊಮ್ಮೆ ಮಾಯಾಯುದ್ಧವನ್ನು ಮಾಡಿದನು.

03274008a ಕೃತ್ವಾ ರಾಮಸ್ಯ ರೂಪಾಣಿ ಲಕ್ಷ್ಮಣಸ್ಯ ಚ ಭಾರತ।
03274008c ಅಭಿದುದ್ರಾವ ರಾಮಂ ಚ ಲಕ್ಷ್ಮಣಂ ಚ ದಶಾನನಃ।।

ಭಾರತ! ರಾಮನ ಮತ್ತು ಲಕ್ಷ್ಮಣನ ರೂಪಗಳನ್ನು ರಚಿಸಿ ದಶಾನನನು ರಾಮ-ಲಕ್ಷ್ಮಣರ ಮೇಲೆ ಎರಗಿದನು.

03274009a ತತಸ್ತೇ ರಾಮಮರ್ಚಂತೋ ಲಕ್ಷ್ಮಣಂ ಚ ಕ್ಷಪಾಚರಾಃ।
03274009c ಅಭಿಪೇತುಸ್ತದಾ ರಾಜನ್ಪ್ರಗೃಹೀತೋಚ್ಚಕಾರ್ಮುಕಾಃ।।

ಆಗ ರಾಮ-ಲಕ್ಷ್ಮಣರ ಬಳಿಸಾರಿ ನಿಶಾಚರರು ಎತ್ತರವಾಗಿದ್ದ ಧನುಸ್ಸುಗಳನ್ನು ಹಿಡಿದು ಆಕ್ರಮಣ ಮಾಡಿದರು.

03274010a ತಾಂ ದೃಷ್ಟ್ವಾ ರಾಕ್ಷಸೇಂದ್ರಸ್ಯ ಮಾಯಾಮಿಕ್ಷ್ವಾಕುನಂದನಃ।
03274010c ಉವಾಚ ರಾಮಂ ಸೌಮಿತ್ರಿರಸಂಭ್ರಾಂತೋ ಬೃಹದ್ವಚಃ।।

ರಾಕ್ಷಸೇಂದ್ರನ ಆ ಮಾಯೆಯನ್ನು ನೋಡಿ ಇಕ್ಷ್ವಾಕುನಂದನ ಸೌಮಿತ್ರಿಯು ಸಂಭ್ರಾಂತನಾಗದೇ ರಾಮನಿಗೆ ಈ ಮಹಾ ಮಾತನ್ನಾಡಿದನು:

03274011a ಜಹೀಮಾನ್ರಾಕ್ಷಸಾನ್ಪಾಪಾನಾತ್ಮನಃ ಪ್ರತಿರೂಪಕಾನ್।
03274011c ಜಘಾನ ರಾಮಸ್ತಾಂಶ್ಚಾನ್ಯಾನಾತ್ಮನಃ ಪ್ರತಿರೂಪಕಾನ್।।

“ನಿನ್ನ ಪ್ರತಿರೂಪರಾದ ಪಾಪಿ ರಾಕ್ಷಸರನ್ನು ಕೊಲ್ಲು!” ಆಗ ರಾಮನು ತನ್ನ ಪ್ರತಿರೂಪರಾದ ರಾಕ್ಷಸರನ್ನು ಕೊಂದನು.

03274012a ತತೋ ಹರ್ಯಶ್ವಯುಕ್ತೇನ ರಥೇನಾದಿತ್ಯವರ್ಚಸಾ।
03274012c ಉಪತಸ್ಥೇ ರಣೇ ರಾಮಂ ಮಾತಲಿಃ ಶಕ್ರಸಾರಥಿಃ।।

ಆಗ ಹರ್ಯಶ್ವಗಳನ್ನು ಕಟ್ಟಿದ ಆದಿತ್ಯವರ್ಚಸ ರಥದೊಂದಿಗೆ ಶಕ್ರಸಾರಥಿ ಮಾತಲಿಯು ರಣದಲ್ಲಿರುವ ರಾಮನಲ್ಲಿಗೆ ಆಗಮಿಸಿದನು.

03274013 ಮಾತಲಿರುವಾಚ।
03274013a ಅಯಂ ಹರ್ಯಶ್ವಯುಗ್ಜೈತ್ರೋ ಮಘೋನಃ ಸ್ಯಂದನೋತ್ತಮಃ।
03274013c ಅನೇನ ಶಕ್ರಃ ಕಾಕುತ್ಸ್ಥ ಸಮರೇ ದೈತ್ಯದಾನವಾನ್।
03274013e ಶತಶಃ ಪುರುಷವ್ಯಾಘ್ರ ರಥೋದಾರೇಣ ಜಘ್ನಿವಾನ್।।

ಮಾತಲಿಯು ಹೇಳಿದನು: “ಕಾಕುತ್ಸ್ಥ! ಪುರುಷವ್ಯಾಘ್ರ! ಇದು ಹರ್ಯಶ್ವಗಳನ್ನು ಕಟ್ಟಿದ ಜೈತ್ರ ಎನ್ನುವ ಮಘೋನನ ಉತ್ತಮ ರಥ. ಈ ರಥದಲ್ಲಿ ಶಕ್ರನು ಸಮರದಲ್ಲಿ ನೂರಾರು ದೈತ್ಯ ದಾನವರನ್ನು ಸಂಹರಿಸಿದ್ದಾನೆ.

03274014a ತದನೇನ ನರವ್ಯಾಘ್ರ ಮಯಾ ಯತ್ತೇನ ಸಂಯುಗೇ।
03274014c ಸ್ಯಂದನೇನ ಜಹಿ ಕ್ಷಿಪ್ರಂ ರಾವಣಂ ಮಾ ಚಿರಂ ಕೃಥಾಃ।।

ನರವ್ಯಾಘ್ರ! ಕ್ಷಿಪ್ರವಾಗಿ ನಾನು ಸಹಾಯಕನಾಗಿರುವ ಈ ರಥವನ್ನೇರಿ ರಾವಣನನ್ನು ಕೊಲ್ಲು. ತಡಮಾಡಬೇಡ!”

03274015a ಇತ್ಯುಕ್ತೋ ರಾಘವಸ್ತಥ್ಯಂ ವಚೋಽಶಂಕತ ಮಾತಲೇಃ।
03274015c ಮಾಯೇಯಂ ರಾಕ್ಷಸಸ್ಯೇತಿ ತಮುವಾಚ ವಿಭೀಷಣಃ।।

ಇದನ್ನು ಕೇಳಿದ ರಾಘವನು ಮಾತಲಿಯ ಮiತುಗಳನ್ನು ಸುಳ್ಳೆಂದು ಇದು ರಾಕ್ಷಸನ ಮಾಯೆಯೆಂದು ತಿಳಿಯಲು ವಿಭೀಷಣನು ಅವನಿಗೆ ಹೇಳಿದನು:

03274016a ನೇಯಂ ಮಾಯಾ ನರವ್ಯಾಘ್ರ ರಾವಣಸ್ಯ ದುರಾತ್ಮನಃ।
03274016c ತದಾತಿಷ್ಠ ರಥಂ ಶೀಘ್ರಮಿಮಮೈಂದ್ರಂ ಮಹಾದ್ಯುತೇ।।

“ನರವ್ಯಾಘ್ರ! ಇದು ದುರಾತ್ಮ ರಾವಣನ ಮಾಯೆಯಲ್ಲ. ಮಹಾದ್ಯುತೇ! ಶೀಘ್ರವಾಗಿ ಇಂದ್ರನ ಈ ರಥವನ್ನು ಏರು.”

03274017a ತತಃ ಪ್ರಹೃಷ್ಟಃ ಕಾಕುತ್ಸ್ಥಸ್ತಥೇತ್ಯುಕ್ತ್ವಾ ವಿಭೀಷಣಂ।
03274017c ರಥೇನಾಭಿಪಪಾತಾಶು ದಶಗ್ರೀವಂ ರುಷಾನ್ವಿತಃ।।

ಆಗ ಕಾಕುತ್ಸ್ಥನು ಸಂತೋಷದಿಂದ ಹಾಗೆಯೇ ಮಾಡುತ್ತೇನೆ ಎಂದು ವಿಭೀಷಣನಿಗೆ ಹೇಳಿ ರೋಷದಿಂದ ರಥದಲ್ಲಿ ದಶಗ್ರೀವನ ಕಡೆ ಬೇಗನೇ ಮುಂದುವರೆದನು.

03274018a ಹಾಹಾಕೃತಾನಿ ಭೂತಾನಿ ರಾವಣೇ ಸಮಭಿದ್ರುತೇ।
03274018c ಸಿಂಹನಾದಾಃ ಸಪಟಹಾ ದಿವಿ ದಿವ್ಯಾಶ್ಚ ನಾನದನ್।।

ರಾವಣನಿಂದ ಸದೆಬಡಿಯಲ್ಪಟ್ಟ ಭೂತಗಳು ಹಾಹಾಕಾರ ಮಾಡುತ್ತಿರಲು ದಿವಿಯಲ್ಲಿ ನಗಾರಿಯ ಹೊಡೆತದೊಂದಿಗೆ ಸಿಂಹನಾದಗಳು ಕೇಳಿಬಂದವು.

03274019a ಸ ರಾಮಾಯ ಮಹಾಘೋರಂ ವಿಸಸರ್ಜ ನಿಶಾಚರಃ।
03274019c ಶೂಲಮಿಂದ್ರಾಶನಿಪ್ರಖ್ಯಂ ಬ್ರಹ್ಮದಂಡಮಿವೋದ್ಯತಂ।।

ಆ ನಿಶಾಚರನು ರಾಮನ ಮೇಲೆ ಮಹಾಘೋರವಾದ, ಮೇಲೆತ್ತಿ ಹಿಡಿದ ಬ್ರಹ್ಮದಂಡದಂತಿರುವ, ಮೊನೆಗಳುಳ್ಳ ಇಂದ್ರನ ವಜ್ರವನ್ನು ಬಿಟ್ಟನು.

03274020a ತಚ್ಚೂಲಮಂತರಾ ರಾಮಶ್ಚಿಚ್ಚೇದ ನಿಶಿತೈಃ ಶರೈಃ।
03274020c ತದ್ದೃಷ್ಟ್ವಾ ದುಷ್ಕರಂ ಕರ್ಮ ರಾವಣಂ ಭಯಮಾವಿಶತ್।।

ಆ ಶೂಲವನ್ನು ಮಧ್ಯದಲ್ಲಿಯೇ ರಾಮನು ಹರಿತ ಬಾಣಗಳಿಂದ ತುಂಡರಿಸಿದನು. ಆ ದುಷ್ಕರ ಕರ್ಮವನ್ನು ನೋಡಿದ ರಾವಣನಲ್ಲಿ ಭಯವು ಆವೇಶಗೊಂಡಿತು.

03274021a ತತಃ ಕ್ರುದ್ಧಃ ಸಸರ್ಜಾಶು ದಶಗ್ರೀವಃ ಶಿತಾಂ ಶರಾನ್।
03274021c ಸಹಸ್ರಾಯುತಶೋ ರಾಮೇ ಶಸ್ತ್ರಾಣಿ ವಿವಿಧಾನಿ ಚ।।
03274022a ತತೋ ಭುಶುಂಡೀಃ ಶೂಲಾಂಶ್ಚ ಮುಸಲಾನಿ ಪರಶ್ವಧಾನ್।
03274022c ಶಕ್ತೀಶ್ಚ ವಿವಿಧಾಕಾರಾಃ ಶತಘ್ನೀಶ್ಚ ಶಿತಕ್ಷುರಾಃ।।

ಆಗ ಕೃದ್ಧನಾದ ದಶಗ್ರೀವನು ರಾಮನ ಮೇಲೆ ಹರಿತ ಬಾಣಗಳನ್ನು ಸಹಸ್ರಾರು ಸಂಖ್ಯೆಗಳಲ್ಲಿ ಮತ್ತು ವಿವಿಧ ಶಸ್ತ್ರಗಳನ್ನು – ಭುಶುಂಡಿ, ಶೂಲ, ಮುಸಲ, ಪರಶು, ವಿವಿಧಾಕರದ ಶಕ್ತಿಗಳನ್ನು, ಮತ್ತು ನೂರಾರು ಹರಿತ ಖಡ್ಗಗಳನ್ನು - ಬಿಸುಟನು.

03274023a ತಾಂ ಮಾಯಾಂ ವಿಕೃತಾಂ ದೃಷ್ಟ್ವಾ ದಶಗ್ರೀವಸ್ಯ ರಕ್ಷಸಃ।
03274023c ಭಯಾತ್ಪ್ರದುದ್ರುವುಃ ಸರ್ವೇ ವಾನರಾಃ ಸರ್ವತೋದಿಶಂ।।

ರಾಕ್ಷಸ ದಶಗ್ರೀವನ ಆ ವಿಕೃತ ಮಾಯೆಯನ್ನು ನೋಡಿ ಭಯದಿಂದ ಸರ್ವ ವಾನರರೂ ಎಲ್ಲದಿಕ್ಕುಗಳಿಗೂ ಓಡಿಹೋದರು.

03274024a ತತಃ ಸುಪತ್ರಂ ಸುಮುಖಂ ಹೇಮಪುಂಖಂ ಶರೋತ್ತಮಂ।
03274024c ತೂಣಾದಾದಾಯ ಕಾಕುತ್ಸ್ಥೋ ಬ್ರಹ್ಮಾಸ್ತ್ರೇಣ ಯುಯೋಜ ಹ।।

ಆಗ ಕಾಕುತ್ಸ್ಥನು ಉತ್ತಮ ಪಂಖಗಳನ್ನುಳ್ಳ, ಉತ್ತಮ ಮುಖವುಳ್ಳ, ಬಂಗಾರದ ರೆಕ್ಕೆಗಳನ್ನುಳ್ಳ ಉತ್ತಮ ಶರವನ್ನು ಬತ್ತಳಿಕೆಯಿಂದ ತೆಗೆದು ಅದನ್ನು ಬ್ರಹ್ಮಾಸ್ತ್ರದಿಂದ ಮಂತ್ರಿಸಿದನು.

03274025a ತಂ ಬಾಣವರ್ಯಂ ರಾಮೇಣ ಬ್ರಹ್ಮಾಸ್ತ್ರೇಣಾಭಿಮಂತ್ರಿತಂ।
03274025c ಜಹೃಷುರ್ದೇವಗಂಧರ್ವಾ ದೃಷ್ಟ್ವಾ ಶಕ್ರಪುರೋಗಮಾಃ।।

ಆ ಶ್ರೇಷ್ಠ ಬಾಣವನ್ನು ರಾಮನು ಬ್ರಹ್ಮಾಸ್ತ್ರದಿಂದ ಅಭಿಮಂತ್ರಿಸಿದುದನ್ನು ನೋಡಿ, ಶಕ್ರನ ನೇತೃತ್ವದಲ್ಲಿ ದೇವ-ಗಂಧರ್ವರು ಹರ್ಷಿತರಾದರು.

03274026a ಅಲ್ಪಾವಶೇಷಮಾಯುಶ್ಚ ತತೋಽಮನ್ಯಂತ ರಕ್ಷಸಃ।
03274026c ಬ್ರಹ್ಮಾಸ್ತ್ರೋದೀರಣಾಚ್ಚತ್ರೋರ್ದೇವಗಂಧರ್ವಕಿನ್ನರಾಃ।।

ಬ್ರಹ್ಮಾಸ್ತ್ರವನ್ನು ಬಳಸಿದುದರಿಂದ ಆ ರಾಕ್ಷಸ ಶತ್ರುವಿನ ಆಯುಸ್ಸು ಸ್ವಲ್ಪಮಾತ್ರವೇ ಇದೆ ಎಂದು ದೇವ- ಗಂಧರ್ವ-ಕಿನ್ನರರು ಅಂದುಕೊಂಡರು.

03274027a ತತಃ ಸಸರ್ಜ ತಂ ರಾಮಃ ಶರಮಪ್ರತಿಮೌಜಸಂ।
03274027c ರಾವಣಾಂತಕರಂ ಘೋರಂ ಬ್ರಹ್ಮದಂಡಮಿವೋದ್ಯತಂ।।

ಎತ್ತಿಹಿಡಿದ ಬ್ರಹದಂಡದಂತಿರುವ ಆ ಅಪ್ರತಿಮ ಓಜಸ್ಸಿನ ಘೋರ ಶರವನ್ನು ರಾವಣನನ್ನು ಮುಗಿಸಲು ರಾಮನು ಬಿಟ್ಟನು.

03274028a ಸ ತೇನ ರಾಕ್ಷಸಶ್ರೇಷ್ಠಃ ಸರಥಃ ಸಾಶ್ವಸಾರಥಿಃ।
03274028c ಪ್ರಜಜ್ವಾಲ ಮಹಾಜ್ವಾಲೇನಾಗ್ನಿನಾಭಿಪರಿಷ್ಕೃತಃ।।

ಅಗ್ನಿಯ ಮಹಾಜ್ವಾಲೆಯಂತೆ ಉರಿಯುತ್ತಿದ್ದ ಅದು ರಾಕ್ಷಸಶ್ರೇಷ್ಠನನ್ನು, ರಥ ಮತ್ತು ಸಾರಥಿಗಳೊಂದಿಗೆ ಸುಟ್ಟುಹಾಕಿತು.

03274029a ತತಃ ಪ್ರಹೃಷ್ಟಾಸ್ತ್ರಿದಶಾಃ ಸಗಂಧರ್ವಾಃ ಸಚಾರಣಾಃ।
03274029c ನಿಹತಂ ರಾವಣಂ ದೃಷ್ಟ್ವಾ ರಾಮೇಣಾಕ್ಲಿಷ್ಟಕರ್ಮಣಾ।।

ಅಕ್ಲಿಷ್ಟಕರ್ಮಿ ರಾಮನಿಂದ ರಾವಣನು ಹತನಾದುದನ್ನು ನೋಡಿ ಗಂಧರ್ವ-ಚಾರಣರೊಂದಿಗೆ ತ್ರಿದಶರು ಹರ್ಷಿತರಾದರು.

03274030a ತತ್ಯಜುಸ್ತಂ ಮಹಾಭಾಗಂ ಪಂಚ ಭೂತಾನಿ ರಾವಣಂ।
03274030c ಭ್ರಂಶಿತಃ ಸರ್ವಲೋಕೇಷು ಸ ಹಿ ಬ್ರಹ್ಮಾಸ್ತ್ರತೇಜಸಾ।।

ಬ್ರಹ್ಮಾಸ್ತ್ರದ ತೇಜಸ್ಸಿನಿಂದ ಸರ್ವಲೋಕಗಳಿಂದಲೂ ಭ್ರಂಶಿತನಾದ ಆ ಮಹಾಭಾಗ ರಾವಣನಿಂದ ಪಂಚಭೂತಗಳು ಹೊರಬಿದ್ದವು.

03274031a ಶರೀರಧಾತವೋ ಹ್ಯಸ್ಯ ಮಾಂಸಂ ರುಧಿರಮೇವ ಚ।
03274031c ನೇಶುರ್ಬ್ರಹ್ಮಾಸ್ತ್ರನಿರ್ದಗ್ಧಾ ನ ಚ ಭಸ್ಮಾಪ್ಯದೃಶ್ಯತ।।

ಅವನ ಶರೀರದ ಧಾತುಗಳು, ಮಾಂಸ, ರುಧಿರಗಳು ಬ್ರಹ್ಮಾಸ್ತ್ರದಿಂದ ಸುಟ್ಟು, ಭಸ್ವವೂ ಉಳಿಯದಂತೆ ಮಾಯವಾದವು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ರಾವಣವಧೇ ಚತುಃಸಪ್ತತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ರಾವಣವಧೆಯಲ್ಲಿ ಇನ್ನೂರಾಎಪ್ಪತ್ನಾಲ್ಕನೆಯ ಅಧ್ಯಾಯವು.