ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 273
ಸಾರ
ಇಂದ್ರಜಿತುವಿನ ಶರಜಾಲದಲ್ಲಿ ಬದ್ಧರಾಗಿದ್ದ ರಾಮ ಲಕ್ಷ್ಮಣರನ್ನು ವಿಭೀಷಣನು ಪ್ರಜ್ಞಾಸ್ತ್ರವನ್ನು ಬಳಸಿ ಎಬ್ಬಿಸಿ, ಕುಬೇರನು ಕಳುಹಿಸಿದ ನೀರನ್ನು ಕಣ್ಣಿಗೆ ಹಚ್ಚಿಕೊಳ್ಳಲು ಕೊಟ್ಟು ವೀರರಿಗೆ ಅಂತರ್ಹಿತವಾದುದು ಕಾಣುವಂತೆ ಮಾಡಿದುದು (1-14). ಲಕ್ಷ್ಮಣನು ಮೂರು ಬಾಣಗಳಿಂದ ಇಂದ್ರಜಿತುವನ್ನು ಸಂಹರಿಸಿದ್ದುದು (15-24). ಪುತ್ರವಧೆಯಿಂದ ದುಃಖಿತನಾದ ರಾವಣನು ಕೋಪದಿಂದ ಸೀತೆಯನ್ನು ಕೊಲ್ಲಲು ಮುಂದಾದಾಗ ಅವಿಂಧ್ಯನು ಅವನನ್ನು ತಡೆದುದು (25-33).
03273001 ಮಾರ್ಕಂಡೇಯ ಉವಾಚ।
03273001a ತಾವುಭೌ ಪತಿತೌ ದೃಷ್ಟ್ವಾ ಭ್ರಾತರಾವಮಿತೌಜಸೌ।
03273001c ಬಬಂಧ ರಾವಣಿರ್ಭೂಯಃ ಶರೈದೋರ್ಗತ್ತವರೈಸ್ತದಾ।।
ಮಾರ್ಕಂಡೇಯನು ಹೇಳಿದನು: “ಆ ಅಮಿತತೇಜಸ್ವಿ ಸಹೋದರರಿಬ್ಬರೂ ಕೆಳಗೆ ಬಿದ್ದುದನ್ನು ನೋಡಿ ರಾವಣಿಯು ವರಗಳಿಂದ ಪಡೆದ ಶರಗಳಿಂದ ಅವರನ್ನು ಬಂಧಿಸಿದನು.
03273002a ತೌ ವೀರೌ ಶರಜಾಲೇನ ಬದ್ಧಾವಿಂದ್ರಜಿತಾ ರಣೇ।
03273002c ರೇಜತುಃ ಪುರುಷವ್ಯಾಘ್ರೌ ಶಕುಂತಾವಿವ ಪಂಜರೇ।।
ರಣದಲ್ಲಿ ಇಂದ್ರಜಿತುವಿನಿಂದ ಶರಜಾಲದಲ್ಲಿ ಬದ್ಧರಾಗಿದ್ದ ಆ ಪುರುಷವ್ಯಾಘ್ರರು ಪಂಜರದಲ್ಲಿದ್ದ ಎರಡು ಪಕ್ಷಿಗಳಂತೆ ಕಂಡುಬಂದರು.
03273003a ತೌ ದೃಷ್ಟ್ವಾ ಪತಿತೌ ಭೂಮೌ ಶತಶಃ ಸಾಯಕೈಶ್ಚಿತೌ।
03273003c ಸುಗ್ರೀವಃ ಕಪಿಭಿಃ ಸಾರ್ಧಂ ಪರಿವಾರ್ಯ ತತಃ ಸ್ಥಿತಃ।।
03273004a ಸುಷೇಣಮೈಂದದ್ವಿವಿದೈಃ ಕುಮುದೇನಾಂಗದೇನ ಚ।
03273004c ಹನೂಮನ್ನೀಲತಾರೈಶ್ಚ ನಲೇನ ಚ ಕಪೀಶ್ವರಃ।।
ಅವರಿಬ್ಬರೂ ನೂರಾರು ಬಾಣಗಳಿಂದ ಚುಚ್ಚಲ್ಪಟ್ಟು ನೆಲದ ಮೇಲೆ ಬಿದ್ದಿರುವುದನ್ನು ನೋಡಿ ಸುಗ್ರೀವನು ಸುಷೇಣ, ಮೈಂದ, ದ್ವಿವಿದ, ಕುಮುದ, ಅಂಗದ, ಹನೂಮಾನ್, ನೀಲ, ತಾರ ಮತ್ತು ಕಪೀಶ್ವರ ನಲ ಮೊದಲಾದ ಕಪಿಗಳೊಂದಿಗೆ ಅವರನ್ನು ಸುತ್ತುವರೆದು ನಿಂತುಕೊಂಡನು.
03273005a ತತಸ್ತಂ ದೇಶಮಾಗಮ್ಯ ಕೃತಕರ್ಮಾ ವಿಭೀಷಣಃ।
03273005c ಬೋಧಯಾಮಾಸ ತೌ ವೀರೌ ಪ್ರಜ್ಞಾಸ್ತ್ರೇಣ ಪ್ರಬೋಧಿತೌ।।
ಆಗ ಕೃತಕರ್ಮಿ ವಿಭೀಷಣನು ಆ ಪ್ರದೇಶಕ್ಕೆ ಬಂದನು ಮತ್ತು ಆ ವೀರರಿಬ್ಬರನ್ನೂ ಪ್ರಜ್ಞಾಸ್ತ್ರವನ್ನು ಪ್ರಯೋಗಿಸಿ ಎಬ್ಬಿಸಿದನು.
03273006a ವಿಶಲ್ಯೌ ಚಾಪಿ ಸುಗ್ರೀವಃ ಕ್ಷಣೇನೋಭೌ ಚಕಾರ ತೌ।
03273006c ವಿಶಲ್ಯಯಾ ಮಹೌಷಧ್ಯಾ ದಿವ್ಯಮಂತ್ರಪ್ರಯುಕ್ತಯಾ।।
ಸುಗ್ರೀವನು ಕ್ಷಣದಲ್ಲಿಯೇ ಅವರಿಂದ ಬಾಣಗಳನ್ನು ಕಿತ್ತೊಗೆದು ಮುಳ್ಳುಗಳಿಂದ ಮುಕ್ತಿನೀಡುವ ದಿವ್ಯಮಂತ್ರದ ಮಹಾ ಔಷಧಿಯನ್ನು ಲೇಪಿಸಿದನು.
03273007a ತೌ ಲಬ್ಧಸಂಜ್ಞೌ ನೃವರೌ ವಿಶಲ್ಯಾವುದತಿಷ್ಠತಾಂ।
03273007c ಗತತಂದ್ರೀಕ್ಲಮೌ ಚಾಸ್ತಾಂ ಕ್ಷಣೇನೋಭೌ ಮಹಾರಥೌ।।
ಎಚ್ಚೆತ್ತ ಆ ನರವರರು ಬಾಣಗಳ ರಹಿತರಾಗಿ ಮೇಲೆದ್ದರು. ಆ ಮಹಾರಥಿಗಳು ಕ್ಷಣದಲ್ಲಿಯೇ ಯುದ್ಧದ ಆಯಾಸವನ್ನು ಕಳೆದುಕೊಂಡರು.
03273008a ತತೋ ವಿಭೀಷಣಃ ಪಾರ್ಥ ರಾಮಮಿಕ್ಷ್ವಾಕುನಂದನಂ।
03273008c ಉವಾಚ ವಿಜ್ವರಂ ದೃಷ್ಟ್ವಾ ಕೃತಾಂಜಲಿರಿದಂ ವಚಃ।।
ಪಾರ್ಥ! ಆಗ ವಿಭೀಷಣನು ಇಕ್ಷ್ವಾಕುನಂದನ ರಾಮನು ವಿಜ್ವರನಾದುದನ್ನು ನೋಡಿ ಕೈಮುಗಿದು ಈ ಮಾತುಗಳನ್ನಾಡಿದನು:
03273009a ಅಯಮಂಭೋ ಗೃಹೀತ್ವಾ ತು ರಾಜರಾಜಸ್ಯ ಶಾಸನಾತ್।
03273009c ಗುಹ್ಯಕೋಽಭ್ಯಾಗತಃ ಶ್ವೇತಾತ್ತ್ವತ್ಸಕಾಶಮರಿಂದಮ।।
“ಅರಿಂದಮ! ಈ ಗುಹ್ಯಕನು ರಾಜರಾಜನ ಶಾಸನದಂತೆ ಶ್ವೇತಾದ್ರಿಯಿಂದ ಈ ನೀರನ್ನು ಹಿಡಿದು ಬಂದಿದ್ದಾನೆ.
03273010a ಇದಮಂಭಃ ಕುಬೇರಸ್ತೇ ಮಹಾರಾಜಃ ಪ್ರಯಚ್ಚತಿ।
03273010c ಅಂತರ್ಹಿತಾನಾಂ ಭೂತಾನಾಂ ದರ್ಶನಾರ್ಥಂ ಪರಂತಪ।।
ಪರಂತಪ! ಮಹಾರಾಜ ಕುಬೇರನು ಈ ನೀರನ್ನು ಅಂತರ್ಧಾನರಾದವರ ದರ್ಶನಕ್ಕಾಗಿ ಕಳುಹಿಸಿಕೊಟ್ಟಿದ್ದಾನೆ.
03273011a ಅನೇನ ಸ್ಪೃಷ್ಟನಯನೋ ಭೂತಾನ್ಯಂತರ್ಹಿತಾನ್ಯುತ।
03273011c ಭವಾನ್ದ್ರಕ್ಷ್ಯತಿ ಯಸ್ಮೈ ಚ ಭವಾನೇತತ್ಪ್ರದಾಸ್ಯತಿ।।
ಇದನ್ನು ಕಣ್ಣಿಗೆ ಮುಟ್ಟಿಸಿಕೊಂಡರೆ ಅಂತರ್ಹಿತಭೂತಗಳು ನಿನಗೆ ಮತ್ತು ಇದನ್ನು ನೀನು ಕೊಟ್ಟವರಿಗೆ ಕಾಣಿಸಿಕೊಳ್ಳುತ್ತವೆ.”
03273012a ತಥೇತಿ ರಾಮಸ್ತದ್ವಾರಿ ಪ್ರತಿಗೃಹ್ಯಾಯಾಥ ಸತ್ಕೃತಂ।
03273012c ಚಕಾರ ನೇತ್ರಯೋಃ ಶೌಚಂ ಲಕ್ಷ್ಮಣಶ್ಚ ಮಹಾಮನಾಃ।।
03273013a ಸುಗ್ರೀವಜಾಂಬವಂತೌ ಚ ಹನೂಮಾನಂಗದಸ್ತಥಾ।
03273013c ಮೈಂದದ್ವಿವಿದನೀಲಾಶ್ಚ ಪ್ರಾಯಃ ಪ್ಲವಗಸತ್ತಮಾಃ।।
ಹಾಗೆಯೇ ಆಗಲೆಂದು ರಾಮನು ಆ ಸತ್ಕೃತ ನೀರನ್ನು ಸ್ವೀಕರಿಸಿ ಕಣ್ಣುಗಳನ್ನು ತೊಳೆದುಕೊಳ್ಳಲು ಹಾಗೆಯೇ ಮಹಾಮನಸ್ವಿ ಲಕ್ಷ್ಮಣನೂ, ಸುಗ್ರೀವ-ಜಾಂಬವಂತರೂ, ಹನೂಮಂತ-ಅಂಗದರೂ, ಮೈಂದ, ದ್ವಿವಿದ, ನೀಲರೂ ಮತ್ತು ಹೆಚ್ಚಾಗಿ ಎಲ್ಲ ವಾನರಸತ್ತಮರೂ ಮಾಡಿದರು.
03273014a ತಥಾ ಸಮಭವಚ್ಚಾಪಿ ಯದುವಾಚ ವಿಭೀಷಣಃ।
03273014c ಕ್ಷಣೇನಾತೀಂದ್ರಿಯಾಣ್ಯೇಷಾಂ ಚಕ್ಷೂಂಷ್ಯಾಸನ್ಯುಧಿಷ್ಠಿರ।।
ಯುಧಿಷ್ಠಿರ! ಆಗ ವಿಭೀಷಣನು ಹೇಳಿದಂತೆಯೇ ನಡೆಯಿತು. ಕ್ಷಣದಲ್ಲಿಯೇ ಅವರ ಕಣ್ಣುಗಳು ಅತೀಂದ್ರಿಯಗಳಾದವು.
03273015a ಇಂದ್ರಜಿತ್ಕೃತಕರ್ಮಾ ತು ಪಿತ್ರೇ ಕರ್ಮ ತದಾತ್ಮನಃ।
03273015c ನಿವೇದ್ಯ ಪುನರಾಗಚ್ಚತ್ತ್ವರಯಾಜಿಶಿರಃ ಪ್ರತಿ।।
ಕೃತಕರ್ಮಿ ಇಂದ್ರಜಿತುವು ಮಾಡಿಮುಗಿಸಿದ ತನ್ನ ಕೆಲಸವನ್ನು ತಂದೆಗೆ ತಿಳಿಸಿ ತ್ವರೆಯಿಂದ ರಣರಂಗದ ಕಡೆ ಪುನಃ ಧಾವಿಸಿದನು.
03273016a ತಮಾಪತಂತಂ ಸಂಕ್ರುದ್ಧಂ ಪುನರೇವ ಯುಯುತ್ಸಯಾ।
03273016c ಅಭಿದುದ್ರಾವ ಸೌಮಿತ್ರಿರ್ವಿಭೀಷಣಮತೇ ಸ್ಥಿತಃ।।
ಯುದ್ಧಮಾಡಲು ಪುನಃ ಬಂದಿದ್ದ ಸಂಕೃದ್ಧನಾಗಿದ್ದ ಆ ಶತ್ರುವನ್ನು ವಿಭೀಷಣನ ಸಲಹೆಯಂತೆ ಸೌಮಿತ್ರಿಯು ಎದುರಿಸಿದನು.
03273017a ಅಕೃತಾಹ್ನಿಕಮೇವೈನಂ ಜಿಘಾಂಸುರ್ಜಿತಕಾಶಿನಂ।
03273017c ಶರೈರ್ಜಘಾನ ಸಂಕ್ರುದ್ಧಃ ಕೃತಸಂಜ್ಞೋಽಥ ಲಕ್ಷ್ಮಣಃ।।
ಈಗ ಎಚ್ಚರಗೊಂಡ ಲಕ್ಷ್ಮಣನು ಜಯದಿಂದ ಸೊಕ್ಕಿದ್ದ ಶತ್ರುವನ್ನು ಅವನು ಆಹ್ನೀಕವನ್ನು ಮಾಡುವುದರೊಳಗೇ ಕೊಲ್ಲಲು ಬಯಸಿ ಕುಪಿತನಾಗಿ ಶರಗಳಿಂದ ಹೊಡೆದನು.
03273018a ತಯೋಃ ಸಮಭವದ್ಯುದ್ಧಂ ತದಾನ್ಯೋನ್ಯಂ ಜಿಗೀಷತೋಃ।
03273018c ಅತೀವ ಚಿತ್ರಮಾಶ್ಚರ್ಯಂ ಶಕ್ರಪ್ರಹ್ಲಾದಯೋರಿವ।।
ಆಗ ಅನ್ಯೋನ್ಯರನ್ನು ಜಯಿಸಲು ಬಯಸಿದ ಅವರೀರ್ವರ ನಡುವೆ, ಶಕ್ರ-ಪ್ರಹ್ಲಾದರ ನಡುವೆ ನಡೆದಂತಹ ಅತೀವವಾದ, ವಿಚಿತ್ರವೂ ಆಶ್ಚರ್ಯವೂ ಆದ ಯುದ್ಧವು ನಡೆಯಿತು.
03273019a ಅವಿಧ್ಯದಿಂದ್ರಜಿತ್ತೀಕ್ಷ್ಣೈಃ ಸೌಮಿತ್ರಿಂ ಮರ್ಮಭೇದಿಭಿಃ।
03273019c ಸೌಮಿತ್ರಿಶ್ಚಾನಲಸ್ಪರ್ಶೈರವಿಧ್ಯದ್ರಾವಣಿಂ ಶರೈಃ।।
ಇಂದ್ರಜಿತುವು ಸೌಮಿತ್ರಿಯನ್ನು ತೀಕ್ಷ್ಣವಾದ ಮರ್ಮಭೇದಿ ಶರಗಳಿಂದ ಚುಚ್ಚಲು ಸೌಮಿತ್ರಿಯು ಮುಟ್ಟಲು ಬೆಂಕಿಯಂತಿರುವ ಶರಗಳಿಂದ ರಾವಣಿಯನ್ನು ಹೊಡೆದನು.
03273020a ಸೌಮಿತ್ರಿಶರಸಂಸ್ಪರ್ಶಾದ್ರಾವಣಿಃ ಕ್ರೋಧಮೂರ್ಚಿತಃ।
03273020c ಅಸೃಜಲ್ಲಕ್ಷ್ಮಣಾಯಾಷ್ಟೌ ಶರಾನಾಶೀವಿಷೋಪಮಾನ್।।
ಸೌಮಿತ್ರಿಯ ಬಾಣಗಳು ತಾಗಿ ಕ್ರೋಧಮೂರ್ಛಿತನಾದ ರಾವಣಿಯು ಲಕ್ಷ್ಮಣನ ಮೇಲೆ ವಿಷಪೂರಿತ ಸರ್ಪಗಳಂತಿರುವ ಬಾಣಗಳನ್ನು ಪ್ರಯೋಗಿಸಿದನು.
03273021a ತಸ್ಯಾಸೂನ್ಪಾವಕಸ್ಪರ್ಶೈಃ ಸೌಮಿತ್ರಿಃ ಪತ್ರಿಭಿಸ್ತ್ರಿಭಿಃ।
03273021c ಯಥಾ ನಿರಹರದ್ವೀರಸ್ತನ್ಮೇ ನಿಗದತಃ ಶೃಣು।।
ಸೌಮಿತ್ರಿಯು ಹೇಗೆ ಪುಕ್ಕಗಳಿರುವ, ಮುಟ್ಟಲು ಬೆಂಕಿಯಂತಿರುವ ಮೂರು ಬಾಣಗಳಿಂದ ಆ ವೀರನನ್ನು ಕೊಂದನೆಂದು ನಾನು ಹೇಳುವುದನ್ನು ಕೇಳು.
03273022a ಏಕೇನಾಸ್ಯ ಧನುಷ್ಮಂತಂ ಬಾಹುಂ ದೇಹಾದಪಾತಯತ್।
03273022c ದ್ವಿತೀಯೇನ ಸನಾರಾಚಂ ಭುಜಂ ಭೂಮೌ ನ್ಯಪಾತಯತ್।।
ಒಂದರಿಂದ ಧನುಸ್ಸನ್ನು ಹಿಡಿದಿದ್ದ ಬಾಹುವನ್ನು ದೇಹದಿಂದ ಬೀಳಿಸಿದನು. ಎರಡನೆಯದರಿಂದ ಉಕ್ಕಿನ ಬಾಣಗಳನ್ನು ಹಿಡಿದಿದ್ದ ಭುಜವನ್ನು ಧರೆಗೆ ಬೀಳಿಸಿದನು.
03273023a ತೃತೀಯೇನ ತು ಬಾಣೇನ ಪೃಥುಧಾರೇಣ ಭಾಸ್ವತಾ।
03273023c ಜಹಾರ ಸುನಸಂ ಚಾರು ಶಿರೋ ಭ್ರಾಜಿಷ್ಣುಕುಂಡಲಂ।।
ಹೊಳೆಯುತ್ತಿರುವ, ಅಗಲ ಮೊನೆಯಿರಿವ ಮೂರನೆಯ ಬಾಣದಿಂದ ಅವನ ಸುಂದರಮೂಗಿನ, ಸುಂದರವಾಗಿದ್ದ ಕುಂಡಲಗಳಿಂದ ಹೊಳೆಯುತ್ತಿದ್ದ ಶಿರವನ್ನು ಕತ್ತರಿಸಿದನು.
03273024a ವಿನಿಕೃತ್ತಭುಜಸ್ಕಂಧಂ ಕಬಂಧಂ ಭೀಮದರ್ಶನಂ।
03273024c ತಂ ಹತ್ವಾ ಸೂತಮಪ್ಯಸ್ತ್ರೈರ್ಜಘಾನ ಬಲಿನಾಂ ವರಃ।।
ಭುಜ ಮತ್ತು ತೋಳುಗಳನ್ನು ಕತ್ತರಿಸಲ್ಪಟ್ಟ ಅವನ ದೇಹವು ಭೀಕರವಾಗಿ ಕಂಡಿತು. ಅವನನ್ನು ಕೊಂದನಂತರ ಆ ಬಲಿಗಳಲ್ಲಿ ಶ್ರೇಷ್ಠನು ಅವನ ಸಾರಥಿಯನ್ನೂ ಕೊಂದನು.
03273025a ಲಂಕಾಂ ಪ್ರವೇಶಯಾಮಾಸುರ್ವಾಜಿನಸ್ತಂ ರಥಂ ತದಾ।
03273025c ದದರ್ಶ ರಾವಣಸ್ತಂ ಚ ರಥಂ ಪುತ್ರವಿನಾಕೃತಂ।।
ಕುದುರೆಗಳು ರಥವನ್ನು ಲಂಕೆಗೆ ಕೊಂಡೊಯ್ಯಲು ರಾವಣನು ಪುತ್ರನಿಂದ ಬರಿದಾಗಿದ್ದ ಆ ರಥವನ್ನು ನೋಡಿದನು.
03273026a ಸ ಪುತ್ರಂ ನಿಹತಂ ದೃಷ್ಟ್ವಾ ತ್ರಾಸಾತ್ಸಂಭ್ರಾಂತಲೋಚನಃ।
03273026c ರಾವಣಃ ಶೋಕಮೋಹಾರ್ತೋ ವೈದೇಹೀಂ ಹಂತುಮುದ್ಯತಃ।।
ಪುತ್ರನು ಹತನಾದುದನ್ನು ನೋಡಿದಾಗ ಅವನ ಕಣ್ಣುಗಳು ಭಯದಿಂದ ಓಲಾಡಿದವು. ಶೋಕಮೋಹಾರ್ತನಾದ ರಾವಣನು ವೈದೇಹಿಯನ್ನು ಕೊಲ್ಲಲು ಮುಂದುವರೆದನು.
03273027a ಅಶೋಕವನಿಕಾಸ್ಥಾಂ ತಾಂ ರಾಮದರ್ಶನಲಾಲಸಾಂ।
03273027c ಖಡ್ಗಮಾದಾಯ ದುಷ್ಟಾತ್ಮಾ ಜವೇನಾಭಿಪಪಾತ ಹ।।
ಅಶೋಕವನದಲ್ಲಿ ರಾಮನ ದರ್ಶನಕ್ಕಾಗಿ ಕಾತರಿಸಿ ನಿಂತಿದ್ದ ಅವಳ ಬಳಿಗೆ ದುಷ್ಟಾತ್ಮನು ಖಡ್ಗವನ್ನು ಹಿಡಿದು ಓಡಿಬಂದನು.
03273028a ತಂ ದೃಷ್ಟ್ವಾ ತಸ್ಯ ದುರ್ಬುದ್ಧೇರವಿಂಧ್ಯಃ ಪಾಪನಿಶ್ಚಯಂ।
03273028c ಶಮಯಾಮಾಸ ಸಂಕ್ರುದ್ಧಂ ಶ್ರೂಯತಾಂ ಯೇನ ಹೇತುನಾ।।
ಆ ದುರ್ಬುದ್ಧಿಯ ಪಾಪನಿಶ್ಚಯವನ್ನು ಕಂಡ ಅವಿಂಧ್ಯನು ಆ ಸಂಕೃದ್ಧನನ್ನು ಯಾವ ಕಾರಣವನ್ನು ಹೇಳಿ ತಣ್ಣಗಾಗಿಸಿದನು ಎನ್ನುವುದನ್ನು ಕೇಳಬೇಕು.
03273029a ಮಹಾರಾಜ್ಯೇ ಸ್ಥಿತೋ ದೀಪ್ತೇ ನ ಸ್ತ್ರಿಯಂ ಹಂತುಮರ್ಹಸಿ।
03273029c ಹತೈವೈಷಾ ಯದಾ ಸ್ತ್ರೀ ಚ ಬಂಧನಸ್ಥಾ ಚ ತೇ ಗೃಹೇ।।
03273030a ನ ಚೈಷಾ ದೇಹಭೇದೇನ ಹತಾ ಸ್ಯಾದಿತಿ ಮೇ ಮತಿಃ।
“ಮಹಾರಾಜನಾಗಿ ಬೆಳಗುವ ಸ್ಥಿತಿಯಲ್ಲಿರುವವನು ಸ್ತ್ರೀಯನ್ನು ಕೊಲ್ಲಬಾರದು. ನಿನ್ನ ಗೃಹದಲ್ಲಿ ಬಂಧಿಯಾಗಿರುವ ಸ್ತ್ರೀಯು ಹತಳಾದಂತೆ. ದೇಹದಿಂದ ಬೇರೆಯಾಗಿರದಿದ್ದರೂ ಹತಳಾದಂತೆ ಎಂದು ನನ್ನ ಮತ.
03273030c ಜಹಿ ಭರ್ತಾರಮೇವಾಸ್ಯಾ ಹತೇ ತಸ್ಮಿನ್ ಹತಾ ಭವೇತ್।।
03273031a ನ ಹಿ ತೇ ವಿಕ್ರಮೇ ತುಲ್ಯಃ ಸಾಕ್ಷಾದಪಿ ಶತಕ್ರತುಃ।
03273031c ಅಸಕೃದ್ಧಿ ತ್ವಯಾ ಸೇಂದ್ರಾಸ್ತ್ರಾಸಿತಾಸ್ತ್ರಿದಶಾ ಯುಧಿ।।
ಇವಳ ಗಂಡನನ್ನು ಕೊಲ್ಲು. ಅದರಿಂದ ಇವಳು ಹತಳಾಗುತ್ತಾಳೆ. ಸಾಕ್ಷಾತ್ ಶತಕ್ರತುವೂ ಕೂಡ ವಿಕ್ರಮದಲ್ಲಿ ನಿನ್ನ ಸಮನಲ್ಲ. ನೀನು ಯುದ್ಧದಲ್ಲಿ ಅನೇಕ ಬಾರಿ ಇಂದ್ರನನ್ನೂ ತ್ರಿದಶರನ್ನೂ ಭಯಪಡಿಸಿದ್ದೀಯೆ.”
03273032a ಏವಂ ಬಹುವಿಧೈರ್ವಾಕ್ಯೈರವಿಂಧ್ಯೋ ರಾವಣಂ ತದಾ।
03273032c ಕ್ರುದ್ಧಂ ಸಂಶಮಯಾಮಾಸ ಜಗೃಹೇ ಚ ಸ ತದ್ವಚಃ।।
ಈ ರೀತಿ ಬಹುವಿಧದ ವಾಕ್ಯಗಳಿಂದ ಅವಿಂಧ್ಯನು ಕೃದ್ಧನಾದ ರಾವಣನನ್ನು ಸಂತಯಿಸಲು ಅವನ ವಚನವನ್ನು ಸ್ವೀಕರಿಸಿದನು.
03273033a ನಿರ್ಯಾಣೇ ಸ ಮತಿಂ ಕೃತ್ವಾ ನಿಧಾಯಾಸಿಂ ಕ್ಷಪಾಚರಃ।
03273033c ಆಜ್ಞಾಪಯಾಮಾಸ ತದಾ ರಥೋ ಮೇ ಕಲ್ಪ್ಯತಾಮಿತಿ।।
ಆ ನಿಶಾಚರನು ತಾನೇ ಹೊರಡಲು ನಿಶ್ಚಯಿಸಿದನು. ಖಡ್ಗವನ್ನು ಹಿಡಿದು “ನನ್ನ ರಥವನ್ನು ಸಿದ್ಧಪಡಿಸಿ!” ಎಂದು ಅಜ್ಞಾಪಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಇಂದ್ರಜಿದ್ವಧೇ ತ್ರಿಸಪ್ತತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಇಂದ್ರಜಿತು ವಧೆಯಲ್ಲಿ ಇನ್ನೂರಾಎಪ್ಪತ್ಮೂರನೆಯ ಅಧ್ಯಾಯವು.