ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 272
ಸಾರ
ರಾವಣನ ಮಗ ಇಂದ್ರಜಿತುವಿನೊಡನೆ ಲಕ್ಷ್ಮಣ ಮತ್ತು ಅಂಗದರ ಯುದ್ಧ; ಇಂದ್ರಜಿತುವು ಅಂತರ್ಧಾನನಾದುದು (1-19). ರಾಮ- ಲಕ್ಷ್ಮಣರನ್ನು ಇಂದ್ರಜಿತುವು ಹೊಡೆದು ಕೆಳಗುರುಳಿಸಿದುದು (20-26).
03272001 ಮಾರ್ಕಂಡೇಯ ಉವಾಚ।
03272001a ತತಃ ಶ್ರುತ್ವಾ ಹತಂ ಸಂಖ್ಯೇ ಕುಂಭಕರ್ಣಂ ಸಹಾನುಗಂ।
03272001c ಪ್ರಹಸ್ತಂ ಚ ಮಹೇಷ್ವಾಸಂ ಧೂಮ್ರಾಕ್ಷಂ ಚಾತಿತೇಜಸಂ।।
03272002a ಪುತ್ರಮಿಂದ್ರಜಿತಂ ಶೂರಂ ರಾವಣಃ ಪ್ರತ್ಯಭಾಷತ।
03272002c ಜಹಿ ರಾಮಮಮಿತ್ರಘ್ನ ಸುಗ್ರೀವಂ ಚ ಸಲಕ್ಷ್ಮಣಂ।।
ಮಾರ್ಕಂಡೇಯನು ಹೇಳಿದನು: “ಆಗ ಅನುಯಾಯಿಗಳಾದ ಮಹೇಷ್ವಾಸ ಪ್ರಹಸ್ತ ಮತ್ತು ಅತಿತೇಜಸ ಧೂಮ್ರಾಕ್ಷರೊಂದಿಗೆ ಕುಂಭಕರ್ಣನು ರಣದಲ್ಲಿ ಹತನಾದುದನ್ನು ಕೇಳಿ ರಾವಣನು ಶೂರ, ಪುತ್ರ ಇಂದ್ರಜಿತುವಿಗೆ ಹೇಳಿದನು: “ಅಮಿತ್ರಘ್ನ! ಸುಗ್ರೀವ-ಸೌಮಿತ್ರಿಯರೊಂದಿಗೆ ರಾಮನನ್ನು ಕೊಲ್ಲು!
03272003a ತ್ವಯಾ ಹಿ ಮಮ ಸತ್ಪುತ್ರ ಯಶೋ ದೀಪ್ತಮುಪಾರ್ಜಿತಂ।
03272003c ಜಿತ್ವಾ ವಜ್ರಧರಂ ಸಂಖ್ಯೇ ಸಹಸ್ರಾಕ್ಷಂ ಶಚೀಪತಿಂ।।
ಶಚೀಪತಿ ಸಹಸ್ರಾಕ್ಷ ವಜ್ರಧರನನ್ನು ರಣದಲ್ಲಿ ಗೆದ್ದು ಬೆಳಗುವ ಯಶಸ್ಸನ್ನು ಗಳಿಸಿರುವ ನೀನೇ ನನ್ನ ಸತ್ಪುತ್ರ!
03272004a ಅಂತರ್ಹಿತಃ ಪ್ರಕಾಶೋ ವಾ ದಿವ್ಯೈರ್ದತ್ತವರೈಃ ಶರೈಃ।
03272004c ಜಹಿ ಶತ್ರೂನಮಿತ್ರಘ್ನ ಮಮ ಶಸ್ತ್ರಭೃತಾಂ ವರ।।
ಅಮಿತ್ರಘ್ನ! ಶಸ್ತ್ರಭೃತರಲ್ಲಿ ಶ್ರೇಷ್ಠ! ಅದೃಶ್ಯನಾಗಿ ಅಥವಾ ದೃಶ್ಯನಾಗಿ ಪಡೆದಿರುವ ದಿವ್ಯವಾದ ಶ್ರೇಷ್ಠ ಶರಗಳಿಂದ ನನ್ನ ಶತ್ರುಗಳನ್ನು ಕೊಲ್ಲು.
03272005a ರಾಮಲಕ್ಷ್ಮಣಸುಗ್ರೀವಾಃ ಶರಸ್ಪರ್ಶಂ ನ ತೇಽನಘ।
03272005c ಸಮರ್ಥಾಃ ಪ್ರತಿಸಂಸೋಢುಂ ಕುತಸ್ತದನುಯಾಯಿನಃ।।
ಅನಘ! ರಾಮ, ಲಕ್ಷ್ಮಣ, ಸುಗ್ರೀವರು ನಿನ್ನ ಬಾಣಗಳ ಸ್ಪರ್ಷವನ್ನು ಸಹಿಸಲು ಅಸಮರ್ಥರು. ಇನ್ನು ಅವರ ಅನುಯಾಯಿಗಳನ್ನು ಬಿಡು!
03272006a ಅಕೃತಾ ಯಾ ಪ್ರಹಸ್ತೇನ ಕುಂಭಕರ್ಣೇನ ಚಾನಘ।
03272006c ಖರಸ್ಯಾಪಚಿತಿಃ ಸಂಖ್ಯೇ ತಾಂ ಗಚ್ಚಸ್ವ ಮಹಾಭುಜ।।
ಅನಘ! ಮಹಾಭುಜ! ಪ್ರಹಸ್ತ-ಕುಂಭಕರ್ಣರು ಮಾಡಲಿಕ್ಕಾಗದೇ ಇದ್ದ ಖರನ ಪ್ರತೀಕಾರವನ್ನು ರಣದಲ್ಲಿ ನೀನೇ ಪೂರೈಸಬೇಕು. ಹೋಗು!
03272007a ತ್ವಮದ್ಯ ನಿಶಿತೈರ್ಬಾಣೈರ್ಹತ್ವಾ ಶತ್ರೂನ್ಸಸೈನಿಕಾನ್।
03272007c ಪ್ರತಿನಂದಯ ಮಾಂ ಪುತ್ರ ಪುರಾ ಬದ್ಧ್ವೇವ ವಾಸವಂ।।
ಹಿಂದೆ ವಾಸವನನ್ನು ಸೆರೆಹಿಡಿದಂತೆ ಇಂದು ನೀನು ಹರಿತ ಬಾಣಗಳಿಂದ ಸೈನಿಕರೊಂದಿಗೆ ಶತ್ರುಗಳನ್ನು ಕೊಂದು ನನ್ನನ್ನು ಸಂತೋಷಗೊಳಿಸು.”
03272008a ಇತ್ಯುಕ್ತಃ ಸ ತಥೇತ್ಯುಕ್ತ್ವಾ ರಥಮಾಸ್ಥಾಯ ದಂಶಿತಃ।
03272008c ಪ್ರಯಯಾವಿಂದ್ರಜಿದ್ರಾಜಂಸ್ತೂರ್ಣಮಾಯೋಧನಂ ಪ್ರತಿ।।
ರಾಜನ್! ಈ ಮಾತುಗಳಿಗೆ ಹಾಗೆಯೇ ಆಗಲೆಂದು ಹೇಳಿ ಇಂದ್ರಜಿತುವು ಸಂಪೂರ್ಣಕವಚಗಳನ್ನು ಧರಿಸಿ, ರಥವನ್ನೇರಿ, ರಣರಂಗದೆಡೆಗೆ ಹೊರಟನು.
03272009a ತತ್ರ ವಿಶ್ರಾವ್ಯ ವಿಸ್ಪಷ್ಟಂ ನಾಮ ರಾಕ್ಷಸಪುಂಗವಃ।
03272009c ಆಹ್ವಯಾಮಾಸ ಸಮರೇ ಲಕ್ಷ್ಮಣಂ ಶುಭಲಕ್ಷಣಂ।।
ಅಲ್ಲಿ ಆ ರಾಕ್ಷಸ ಪುಂಗವನು ತನ್ನ ಹೆಸರನ್ನು ಜೋರಾಗಿ ಗರ್ಜಿಸಿ ಸಮರದಲ್ಲಿ ಶುಭಲಕ್ಷಣ ಲಕ್ಷ್ಮಣನನ್ನು ಆಹ್ವಾನಿಸಿದನು.
03272010a ತಂ ಲಕ್ಷ್ಮಣೋಽಪ್ಯಭ್ಯಧಾವತ್ಪ್ರಗೃಹ್ಯ ಸಶರಂ ಧನುಃ।
03272010c ತ್ರಾಸಯಂಸ್ತಲಘೋಷೇಣ ಸಿಂಹಃ ಕ್ಷುದ್ರಮೃಗಂ ಯಥಾ।।
ಲಕ್ಷ್ಮಣನು ಶರದೊಂದಿಗೆ ಧನುವನ್ನು ಹಿಡಿದು ಚಪ್ಪಾಳೆಯ ಘೋಷದೊಂದಿಗೆ ಕ್ಷುದ್ರಮೃಗವನ್ನು ಸಿಂಹವು ಬೆದರಿಸುವಂತೆ ಓಡಿಬಂದನು.
03272011a ತಯೋಃ ಸಮಭವದ್ಯುದ್ಧಂ ಸುಮಹಜ್ಜಯಗೃದ್ಧಿನೋಃ।
03272011c ದಿವ್ಯಾಸ್ತ್ರವಿದುಷೋಸ್ತೀವ್ರಮನ್ಯೋನ್ಯಸ್ಪರ್ಧಿನೋಸ್ತದಾ।।
ವಿಜಯಾಕಾಂಕ್ಷಿಗಳಾಗಿದ್ದ, ದಿವ್ಯಾಸ್ತ್ರಕೋವಿದರಾಗಿದ್ದ, ಅನ್ಯೋನ್ಯರೊಂದಿಗೆ ಸ್ಪರ್ಧಿಸುತ್ತಿದ್ದ ಅವರಿಬ್ಬರ ನಡುವೆ ಮಹಾ ಯುದ್ಧವು ನಡೆಯಿತು.
03272012a ರಾವಣಿಸ್ತು ಯದಾ ನೈನಂ ವಿಶೇಷಯತಿ ಸಾಯಕೈಃ।
03272012c ತತೋ ಗುರುತರಂ ಯತ್ನಮಾತಿಷ್ಠದ್ಬಲಿನಾಂ ವರಃ।।
ತನ್ನ ಬಾಣಗಳ ಯುದ್ಧವು ಏನೂ ವಿಶೇಷವಾಗಿಲ್ಲವೆಂದಾಗ ಬಲಿಗಳಲ್ಲಿ ಶ್ರೇಷ್ಠ ರಾವಣಿಯು ಇನ್ನೂ ಗುರುತರ ಪ್ರಯತ್ನವನ್ನು ಮಾಡಿದನು.
03272013a ತತ ಏನಂ ಮಹಾವೇಗೈರರ್ದಯಾಮಾಸ ತೋಮರೈಃ।
03272013c ತಾನಾಗತಾನ್ಸ ಚಿಚ್ಚೇದ ಸೌಮಿತ್ರಿರ್ನಿಶಿತೈಃ ಶರೈಃ।
ಅವನು ಮಹಾವೇಗದ ತೋಮರಗಳಿಂದ ಅವನನ್ನು ಹೊಡೆದನು. ಆದರೆ ಸೌಮಿತ್ರಿಯು ಬರುತ್ತಿರುವವುಗಳನ್ನು ನಿಶಿತ ಶರಗಳಿಂದ ಕತ್ತರಿಸಿದನು.
03272013e ತೇ ನಿಕೃತ್ತಾಃ ಶರೈಸ್ತೀಕ್ಷ್ಣೈರ್ನ್ಯಪತನ್ವಸುಧಾತಲೇ।।
03272014a ತಮಂಗದೋ ವಾಲಿಸುತಃ ಶ್ರೀಮಾನುದ್ಯಮ್ಯ ಪಾದಪಂ।
03272014c ಅಭಿದ್ರುತ್ಯ ಮಹಾವೇಗಸ್ತಾಡಯಾಮಾಸ ಮೂರ್ಧನಿ।।
ಹರಿತ ಶರಗಳಿಂದ ತುಂಡರಿಸಲ್ಪಟ್ಟು ಅವು ಭೂಮಿಯ ಮೇಲೆ ಬಿದ್ದವು. ಆಗ ವಾಲಿಸುತ ಶ್ರೀಮಾನ್ ಅಂಗದನು ವೃಕ್ಷವನ್ನು ಕಿತ್ತು ಹಿಡಿದು ಓಡಿ ಬಂದು ಮಹಾವೇಗದಲ್ಲಿ ಅವನ ನೆತ್ತಿಯಮೇಲೆ ಹೊಡೆದನು.
03272015a ತಸ್ಯೇಂದ್ರಜಿದಸಂಭ್ರಾಂತಃ ಪ್ರಾಸೇನೋರಸಿ ವೀರ್ಯವಾನ್।
03272015c ಪ್ರಹರ್ತುಮೈಚ್ಚತ್ತಂ ಚಾಸ್ಯ ಪ್ರಾಸಂ ಚಿಚ್ಚೇದ ಲಕ್ಷ್ಮಣಃ।।
ಸಂಭ್ರಾಂತನಾಗದೇ ವೀರ್ಯವಂತ ಇಂದ್ರಜಿತುವು ಪ್ರಾಸವೊಂದನ್ನು ಅವನ ಎದೆಗೆ ಎಸೆಯಲು, ಲಕ್ಷ್ಮಣನು ಆ ಪ್ರಾಸವನ್ನೂ ಕೂಡ ತುಂಡರಿಸಿದನು.
03272016a ತಮಭ್ಯಾಶಗತಂ ವೀರಮಂಗದಂ ರಾವಣಾತ್ಮಜಃ।
03272016c ಗದಯಾತಾಡಯತ್ಸವ್ಯೇ ಪಾರ್ಶ್ವೇ ವಾನರಪುಂಗವಂ।।
ಸಮೀಪಕ್ಕೆ ಬಂದಿದ್ದ ವೀರ ವಾನರಪುಂಗವ ಅಂಗದನ ಎಡಕ್ಕೆ ರಾವಣಾತ್ಮಜನು ಗದೆಯಿಂದ ಹೊಡೆದನು.
03272017a ತಮಚಿಂತ್ಯ ಪ್ರಹಾರಂ ಸ ಬಲವಾನ್ವಾಲಿನಃ ಸುತಃ।
03272017c ಸಸರ್ಜೇಂದ್ರಜಿತಃ ಕ್ರೋಧಾಚ್ಚಾಲಸ್ಕಂಧಮಮಿತ್ರಜಿತ್।।
ಆದರೆ ಬಲವಾನ್ ವಾಲಿಸುತನು ಆ ಪ್ರಹಾರಕ್ಕೆ ಮನಗೊಡಲಿಲ್ಲ. ಆ ಅಮಿತ್ರಜಿತುವು ಕ್ರೋಧದಿಂದ ಶಾಲವೃಕ್ಷದ ಕಾಂಡವನ್ನು ಇಂದ್ರಜಿತುವಿನೆಡೆಗೆ ಎಸೆದನು.
03272018a ಸೋಽಂಗದೇನ ರುಷೋತ್ಸೃಷ್ಟೋ ವಧಾಯೇಂದ್ರಜಿತಸ್ತರುಃ।
03272018c ಜಘಾನೇಂದ್ರಜಿತಃ ಪಾರ್ಥ ರಥಂ ಸಾಶ್ವಂ ಸಸಾರಥಿಂ।।
ಪಾರ್ಥ! ಇಂದ್ರಜಿತುವನ್ನು ಕೊಲ್ಲಲು ಕ್ರೋಧದಿಂದ ಅಂಗದನು ಬಿಸುಟ ಆ ವೃಕ್ಷವು ಕುದುರೆಗಳು ಮತ್ತು ಸಾರಥಿಗಳೊಂದಿಗೆ ಇಂದ್ರಜಿತುವಿನ ರಥವನ್ನು ಧ್ವಂಸಮಾಡಿತು.
03272019a ತತೋ ಹತಾಶ್ವಾತ್ಪ್ರಸ್ಕಂದ್ಯ ರಥಾತ್ಸ ಹತಸಾರಥಿಃ।
03272019c ತತ್ರೈವಾಂತರ್ದಧೇ ರಾಜನ್ಮಾಯಯಾ ರಾವಣಾತ್ಮಜಃ।।
ರಾಜನ್! ಅಶ್ವ-ಸಾರಥಿಗಳು ಹತರಾಗಲು ರಾವಣಾತ್ಮಜನು ಮಾಯೆಯಿಂದ ಆ ರಥದಿಂದ ಅಲ್ಲಿಯೇ ಅಂತರ್ಧಾನನಾದನು.
03272020a ಅಂತರ್ಹಿತಂ ವಿದಿತ್ವಾ ತಂ ಬಹುಮಾಯಂ ಚ ರಾಕ್ಷಸಂ।
03272020c ರಾಮಸ್ತಂ ದೇಶಮಾಗಮ್ಯ ತತ್ಸೈನ್ಯಂ ಪರ್ಯರಕ್ಷತ।।
ಆ ಬಹುಮಾಯಿ ರಾಕ್ಷಸನು ಅಂತರ್ಧಾನನಾದುದನ್ನು ತಿಳಿದ ರಾಮನು ಅಲ್ಲಿಗೆ ಬಂದು ಆ ಸೇನೆಯನ್ನು ರಕ್ಷಿಸಿದನು.
03272021a ಸ ರಾಮಮುದ್ದಿಶ್ಯ ಶರೈಸ್ತತೋ ದತ್ತವರೈಸ್ತದಾ।
03272021c ವಿವ್ಯಾಧ ಸರ್ವಗಾತ್ರೇಷು ಲಕ್ಷ್ಮಣಂ ಚ ಮಹಾರಥಂ।।
ಆಗ ವರದಿಂದ ಪಡೆದ ಶರಗಳಿಂದ ಅವನು ರಾಮ ಮತ್ತು ಮಹಾರಥಿ ಲಕ್ಷ್ಮಣರ ಅಂಗಾಂಗಗಳಿಗೆ ಗುರಿಯಿಟ್ಟು ಹೊಡೆದನು.
03272022a ತಮದೃಶ್ಯಂ ಶರೈಃ ಶೂರೌ ಮಾಯಯಾಂತರ್ಹಿತಂ ತದಾ।
03272022c ಯೋಧಯಾಮಾಸತುರುಭೌ ರಾವಣಿಂ ರಾಮಲಕ್ಷ್ಮಣೌ।।
ಮಾಯೆಯಿಂದ ಅಂತರ್ಧಾನನಾಗಿ ಅದೃಶ್ಯನಾಗಿ ಹೋರಾಡುತ್ತಿರುವ ರಾವಣಿಯನ್ನು ಶೂರರಾದ ರಾಮ-ಲಕ್ಷ್ಮಣರು ಶರಗಳಿಂದ ಹೋರಾಡಿದರು.
03272023a ಸ ರುಷಾ ಸರ್ವಗಾತ್ರೇಷು ತಯೋಃ ಪುರುಷಸಿಂಹಯೋಃ।
03272023c ವ್ಯಸೃಜತ್ಸಾಯಕಾನ್ಭೂಯಃ ಶತಶೋಽಥ ಸಹಸ್ರಶಃ।।
ಅವನು ರೋಷದಿಂದ ಆ ಪುರುಷಸಿಂಹರ ಎಲ್ಲ ಅಂಗಾಂಗಗಳ ಮೇಲೂ ನೂರಾರು ಸಹಸ್ರಾರು ಬಾಣಗಳಿಂದ ಹೊಡೆದನು.
03272024a ತಮದೃಶ್ಯಂ ವಿಚಿನ್ವಂತಃ ಸೃಜಂತಮನಿಶಂ ಶರಾನ್।
03272024c ಹರಯೋ ವಿವಿಶುರ್ವ್ಯೋಮ ಪ್ರಗೃಹ್ಯ ಮಹತೀಃ ಶಿಲಾಃ।।
ಬಿಡುವಿಲ್ಲದೇ ಬಾಣಗಳನ್ನು ಬಿಡುತ್ತಿದ್ದ ಅದೃಶ್ಯನಾದ ಅವನನ್ನು ಹುಡುಕುತ್ತಾ ಕಪಿಗಳು ಮಹಾಶಿಲೆಗಳನ್ನು ಹಿಡಿದು ಆಕಾಶವನ್ನೇರಿದರು.
03272025a ತಾಂಶ್ಚ ತೌ ಚಾಪ್ಯದೃಶ್ಯಃ ಸ ಶರೈರ್ವಿವ್ಯಾಧ ರಾಕ್ಷಸಃ।
03272025c ಸ ಭೃಶಂ ತಾಡಯನ್ವೀರೋ ರಾವಣಿರ್ಮಾಯಯಾವೃತಃ।।
ಆದರೆ ಅದೃಶ್ಯನಾಗಿದ್ದ ಆ ವೀರ ರಾವಣಿ ರಾಕ್ಷಸನು ಮಾಯೆಯಿಂದ ಅವರನ್ನು ಆವರಿಸಿ ಬಾಣಗಳಿಂದ ಹೊಡೆದುರುಳಿಸಿದನು.
03272026a ತೌ ಶರೈರಾಚಿತೌ ವೀರೌ ಭ್ರಾತರೌ ರಾಮಲಕ್ಷ್ಮಣೌ।
03272026c ಪೇತತುರ್ಗಗನಾದ್ಭೂಮಿಂ ಸೂರ್ಯಾಚಂದ್ರಮಸಾವಿವ।।
ಆ ಶರಗಳಿಂದ ಮುಚ್ಚಲ್ಪಟ್ಟ ವೀರ ಸಹೋದರ ರಾಮಲಕ್ಷ್ಮಣರು ಸೂರ್ಯ ಚಂದ್ರರಂತೆ ಗಗನದಿಂದ ಭೂಮಿಯ ಮೇಲೆ ಬಿದ್ದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಇಂದ್ರಜಿದ್ಯುದ್ದೇ ದ್ವಿಸಪ್ತತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಇಂದ್ರಜಿತು ಯುದ್ಧದಲ್ಲಿ ಇನ್ನೂರಾಎಪ್ಪತ್ತೆರಡನೆಯ ಅಧ್ಯಾಯವು.