ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 271
ಸಾರ
ಲಕ್ಷ್ಮಣನು ಬ್ರಹ್ಮಾಸ್ತ್ರದಿಂದ ಕುಂಭಕರ್ಣನನ್ನು ವಧಿಸಿದುದು (1-18). ದೂಷಣನ ತಮ್ಮಂದಿರಾದ ವಜ್ರವೇಗ-ಪಮಥಿಯರನ್ನು ಹನುಮಂತ-ನಳರು ವಧಿಸಿದುದು (19-27).
03271001 ಮಾರ್ಕಂಡೇಯ ಉವಾಚ।
03271001a ತತೋ ವಿನಿರ್ಯಾಯ ಪುರಾತ್ಕುಂಭಕರ್ಣಃ ಸಹಾನುಗಃ।
03271001c ಅಪಶ್ಯತ್ಕಪಿಸೈನ್ಯಂ ತಜ್ಜಿತಕಾಶ್ಯಗ್ರತಃ ಸ್ಥಿತಂ।।
ಮಾರ್ಕಂಡೇಯನು ಹೇಳಿದನು: “ಆಗ ಅನುಯಾಯಿಗಳೊಂದಿಗೆ ಪುರದಿಂದ ಹೊರಟ ಕುಂಭಕರ್ಣನು ವಿಜಯದಿಂದ ಸೊಕ್ಕು ನಿಂತಿದ್ದ ಕಪಿಸೇನೆಯನ್ನು ಕಂಡನು.
03271002a ತಮಭ್ಯೇತ್ಯಾಶು ಹರಯಃ ಪರಿವಾರ್ಯ ಸಮಂತತಃ।
03271002c ಅಭ್ಯಘ್ನಂಶ್ಚ ಮಹಾಕಾಯೈರ್ಬಹುಭಿರ್ಜಗತೀರುಹೈಃ।।
03271002e ಕರಜೈರತುದಂಶ್ಚಾನ್ಯೇ ವಿಹಾಯ ಭಯಮುತ್ತಮಂ।।
ಕಪಿಗಳು ಅವನೆಡೆಗೆ ಓಡಿ ಬಂದು, ಎಲ್ಲಕಡೆಯಿಂದಲೂ ಸುತ್ತುವರೆದು, ಆ ಮಹಾಕಾಯನನ್ನು ಹಲವಾರು ದೊಡ್ಡ ಮರಗಳಿಂದ ಹೊಡೆದರು ಮತ್ತು ಉತ್ತಮ ಭಯವನ್ನು ತೊರೆದು ಕೈಬೆರಳಿನ ಉಗುರುಗಳಿಂದ ಕೆರೆದು ಗಾಯಗೊಳಿಸಿದರು.
03271003a ಬಹುಧಾ ಯುಧ್ಯಮಾನಾಸ್ತೇ ಯುದ್ಧಮಾರ್ಗೈಃ ಪ್ಲವಂಗಮಾಃ।
03271003c ನಾನಾಪ್ರಹರಣೈರ್ಭೀಮಂ ರಾಕ್ಷಸೇಂದ್ರಮತಾಡಯನ್।।
ಯುದ್ಧಮಾರ್ಗದಲ್ಲಿ ಬಹುರೀತಿಯಲ್ಲಿ ಯುದ್ಧಮಾಡುತ್ತಿದ್ದ ವಾನರರು ಆ ಭಯಂಕರ ರಾಕ್ಷಸನನ್ನು ನಾನಾ ಆಯುಧಗಳಿಂದ ಹೊಡೆದರು.
03271004a ಸ ತಾಡ್ಯಮಾನಃ ಪ್ರಹಸನ್ಭಕ್ಷಯಾಮಾಸ ವಾನರಾನ್।
03271004c ಪನಸಂ ಚ ಗವಾಕ್ಷಂ ಚ ವಜ್ರಬಾಹುಂ ಚ ವಾನರಂ।।
ಹೀಗೆ ಹೊಡೆಯುತ್ತಿರಲು ಅವನು ಜೋರಾಗಿ ನಗುತ್ತಾ ಪನಸ, ಗವಾಕ್ಷ, ವಜ್ರಬಾಹುವೇ ಮೊದಲಾದ ವಾನರರನ್ನು ಭಕ್ಷಿಸತೊಡಗಿದನು.
03271005a ತದ್ದೃಷ್ಟ್ವಾ ವ್ಯಥನಂ ಕರ್ಮ ಕುಂಭಕರ್ಣಸ್ಯ ರಕ್ಷಸಃ।
03271005c ಉದಕ್ರೋಶನ್ಪರಿತ್ರಸ್ತಾಸ್ತಾರಪ್ರಭೃತಯಸ್ತದಾ।।
ರಾಕ್ಷಸ ಕುಂಭಕರ್ಣನ ಆ ದುಃಖಕರ ಕೃತ್ಯವನ್ನು ನೋಡಿ ತಾರನೇ ಮೊದಲಾದವರು ಕಷ್ಟದಲ್ಲಿ ಕಿರುಚಿಕೊಂಡರು.
03271006a ತಂ ತಾರಮುಚ್ಚೈಃ ಕ್ರೋಶಂತಮನ್ಯಾಂಶ್ಚ ಹರಿಯೂಥಪಾನ್।
03271006c ಅಭಿದುದ್ರಾವ ಸುಗ್ರೀವಃ ಕುಂಭಕರ್ಣಮಪೇತಭೀಃ।।
ಜೋರಾಗಿ ಕಿರುಚಿಕೊಳ್ಳುತ್ತಿರುವ ತಾರ ಮತ್ತು ಇತರ ಕಪಿಗುಂಪುಗಳ ಬಳಿ ಕುಂಭಕರ್ಣನ ಎದುರಿಗೆ ಸುಗ್ರೀವನು ಭಯವಿಲ್ಲದೇ ಓಡಿ ಬಂದನು.
03271007a ತತೋಽಭಿಪತ್ಯ ವೇಗೇನ ಕುಂಭಕರ್ಣಂ ಮಹಾಮನಾಃ।
03271007c ಶಾಲೇನ ಜಘ್ನಿವಾನ್ಮೂರ್ಧ್ನಿ ಬಲೇನ ಕಪಿಕುಂಜರಃ।।
ಆ ಮಹಾಮನಸ್ವಿ ಕಪಿಕುಂಜರನು ವೇಗದಿಂದ ಶಾಲವೃಕ್ಷವನ್ನು ಕುಂಭಕರ್ಣನ ತಲೆಗೆ ಬಲವತ್ತಾಗಿ ಬಡಿದನು.
03271008a ಸ ಮಹಾತ್ಮಾ ಮಹಾವೇಗಃ ಕುಂಭಕರ್ಣಸ್ಯ ಮೂರ್ಧನಿ।
03271008c ಬಿಭೇದ ಶಾಲಂ ಸುಗ್ರೀವೋ ನ ಚೈವಾವ್ಯಥಯತ್ಕಪಿಃ।।
ಆ ಮಹಾತ್ಮ ಮಹಾವೇಗ ಸುಗ್ರೀವನು ಕುಂಭಕರ್ಣನ ನೆತ್ತಿಯಮೇಲೆ ಹೊಡೆದ ಶಾಲವೃಕ್ಷವು ಪುಡಿಪುಡಿಯಾಯಿತೇ ವಿನಃ ಅವನನ್ನು ಹಂದಾಡಿಸಲೂ ಆಗಲಿಲ್ಲ.
03271009a ತತೋ ವಿನದ್ಯ ಪ್ರಹಸಂ ಶಾಲಸ್ಪರ್ಶವಿಬೋಧಿತಃ।
03271009c ದೋರ್ಭ್ಯಾಮಾದಾಯ ಸುಗ್ರೀವಂ ಕುಂಭಕರ್ಣೋಽಹರದ್ಬಲಾತ್।।
ಶಾಲವು ತಾಗಿದುದರಿಂದ ಸಂಪೂರ್ಣವಾಗಿ ಎಚ್ಚೆತ್ತ ಕುಂಭಕರ್ಣನು ಸುಗ್ರೀವನ ತೋಳುಗಳನ್ನು ಬಿಡಿದು ಬಲವಾಗಿ ಎಳೆದನು.
03271010a ಹ್ರಿಯಮಾಣಂ ತು ಸುಗ್ರೀವಂ ಕುಂಭಕರ್ಣೇನ ರಕ್ಷಸಾ।
03271010c ಅವೇಕ್ಷ್ಯಾಭ್ಯದ್ರವದ್ವೀರಃ ಸೌಮಿತ್ರಿರ್ಮಿತ್ರನಂದನಃ।।
ರಾಕ್ಷಸ ಕುಂಭಕರ್ಣನಿಂದ ಎತ್ತಿಕೊಂಡು ಹೋಗಲ್ಪಟ್ಟ ಸುಗ್ರೀವನನ್ನು ನೋಡಿ ಮಿತ್ರನಂದನ, ವೀರ ಸೌಮಿತ್ರಿಯು ಅವನಲ್ಲಿಗೆ ಧಾವಿಸಿ ಬಂದನು.
03271011a ಸೋಽಭಿಪತ್ಯ ಮಹಾವೇಗಂ ರುಕ್ಮಪುಂಖಂ ಮಹಾಶರಂ।
03271011c ಪ್ರಾಹಿಣೋತ್ಕುಂಭಕರ್ಣಾಯ ಲಕ್ಷ್ಮಣಃ ಪರವೀರಹಾ।।
ಪರವೀರಹ ಲಕ್ಷ್ಮಣನು ಉದ್ದವಾದ ಮಹಾವೇಗದ ಬಂಗಾರದ ರೆಕ್ಕೆಗಳನ್ನುಳ್ಳ ಮಹಾಶರವನ್ನು ಕುಂಭಕರ್ಣನ ಮೇಲೆ ಪ್ರಯೋಗಿಸಿದನು.
03271012a ಸ ತಸ್ಯ ದೇಹಾವರಣಂ ಭಿತ್ತ್ವಾ ದೇಹಂ ಚ ಸಾಯಕಃ।
03271012c ಜಗಾಮ ದಾರಯನ್ಭೂಮಿಂ ರುಧಿರೇಣ ಸಮುಕ್ಷಿತಃ।।
ಅದು ಅವನ ದೇಹಾವರಣವನ್ನು ಬಿರಿದು, ದೇಹವನ್ನು ಹೊಕ್ಕು, ರಕ್ತದಿಂದ ತೋಯ್ದು ಹಿಂದಿನಿಂದ ಬಂದು ನೆಲವನ್ನು ಹೊಕ್ಕಿತು.
03271013a ತಥಾ ಸ ಭಿನ್ನಹೃದಯಃ ಸಮುತ್ಸೃಜ್ಯ ಕಪೀಶ್ವರಂ।
03271013c ಕುಂಭಕರ್ಣೋ ಮಹೇಷ್ವಾಸಃ ಪ್ರಗೃಹೀತಶಿಲಾಯುಧಃ।
03271013e ಅಭಿದುದ್ರಾವ ಸೌಮಿತ್ರಿಮುದ್ಯಮ್ಯ ಮಹತೀಂ ಶಿಲಾಂ।।
ಅವನ ಹೃದಯವು ಸೀಳಿಹೋಗಲು ಮಹೇಷ್ವಾಸ ಕುಂಭಕರ್ಣನು ಕಪೀಶ್ವರನನ್ನು ಬಿಸುಟು, ಶಿಲಾಯುಧವನ್ನು ಹಿಡಿದು ಆ ಮಹಾಶಿಲವನ್ನು ಎತ್ತಿ ಸೌಮಿತ್ರಿಯ ಮೇಲೆ ಎರಗಿದನು.
03271014a ತಸ್ಯಾಭಿದ್ರವತಸ್ತೂರ್ಣಂ ಕ್ಷುರಾಭ್ಯಾಮುಚ್ಚ್ರಿತೌ ಕರೌ।
03271014c ಚಿಚ್ಚೇದ ನಿಶಿತಾಗ್ರಾಭ್ಯಾಂ ಸ ಬಭೂವ ಚತುರ್ಭುಜಃ।।
ತನ್ನ ಕಡೆ ಧಾವಿಸಿ ಬರುತ್ತಿದ್ದ ಅವನ ಎತ್ತಿದ ತೋಳುಗಳನ್ನು ಎರಡು ಕೋಡುಗಳಿರುವ ಹರಿತ ಬಾಣಗಳಿಂದ ಕತ್ತರಿಸಿದನು. ಆಗ ಅವನು ಚತುರ್ಭುಜನಾದನು.
03271015a ತಾನಪ್ಯಸ್ಯ ಭುಜಾನ್ಸರ್ವಾನ್ಪ್ರಗೃಹೀತಶಿಲಾಯುಧಾನ್।
03271015c ಕ್ಷುರೈಶ್ಚಿಚ್ಚೇದ ಲಘ್ವಸ್ತ್ರಂ ಸೌಮಿತ್ರಿಃ ಪ್ರತಿದರ್ಶಯನ್।।
ಆಗ ಶಿಲಾಯುಧಗಳನ್ನು ಹಿಡಿದಿರುವ ಎಲ್ಲ ಭುಜಗಳನ್ನೂ ಹರಿತ ಬಾಣಗಳಿಂದ ಕತ್ತರಿಸಿ ಸೌಮಿತ್ರಿಯು ತನ್ನ ಅಸ್ತ್ರ ಲಘುತ್ವವನ್ನು ಪ್ರದರ್ಶಿಸಿದನು.
03271016a ಸ ಬಭೂವಾತಿಕಾಯಶ್ಚ ಬಹುಪಾದಶಿರೋಭುಜಃ।
03271016c ತಂ ಬ್ರಹ್ಮಾಸ್ತ್ರೇಣ ಸೌಮಿತ್ರಿರ್ದದಾಹಾದ್ರಿಚಯೋಪಮಂ।।
ಆಗ ಅವನು ಬಹುಪಾದಶಿರೋಭುಜಗಳ ಅತಿಕಾಯನಾಗಿ ಬೆಳೆಯಲು, ಪರ್ವತಗಳ ರಾಶಿಯಂತಿದ್ದ ಅವನನ್ನು ಸೌಮಿತ್ರಿಯು ಬ್ರಹ್ಮಾಸ್ತ್ರದಿಂದ ಸುಟ್ಟುಹಾಕಿದನು.
03271017a ಸ ಪಪಾತ ಮಹಾವೀರ್ಯೋ ದಿವ್ಯಾಸ್ತ್ರಾಭಿಹತೋ ರಣೇ।
03271017c ಮಹಾಶನಿವಿನಿರ್ದಗ್ಧಃ ಪಾದಪೋಽಂಕುರವಾನಿವ।।
ದಿವ್ಯಾಸ್ತ್ರದಿಂದ ಹೊಡೆಯಲ್ಪಟ್ಟ ಆ ಮಹಾವೀರನು ರಣದಲ್ಲಿ ಚಿಗುರಿದ ಮರವು ಮಹಾಮಿಂಚಿನ ಹೊಡೆತಕ್ಕೆ ಸಿಕ್ಕಿ ಸುಟ್ಟು ಬೀಳುವಂತೆ ಬಿದ್ದನು.
03271018a ತಂ ದೃಷ್ಟ್ವಾ ವೃತ್ರಸಂಕಾಶಂ ಕುಂಭಕರ್ಣಂ ತರಸ್ವಿನಂ।
03271018c ಗತಾಸುಂ ಪತಿತಂ ಭೂಮೌ ರಾಕ್ಷಸಾಃ ಪ್ರಾದ್ರವನ್ಭಯಾತ್।।
ಆ ವೃತ್ರಸಂಕಾಶ ತರಸ್ವಿ ಕುಂಭಕರ್ಣನು ನೆಲದ ಮೇಲೆ ಬಿದ್ದು ಅಸುನೀಗಿದುದನ್ನು ಕಂಡು ರಾಕ್ಷಸರು ಹೆದರಿ ಓಡಿ ಹೋದರು.
03271019a ತಥಾ ತಾನ್ದ್ರವತೋ ಯೋಧಾನ್ದೃಷ್ಟ್ವಾ ತೌ ದೂಷಣಾನುಜೌ।
03271019c ಅವಸ್ಥಾಪ್ಯಾಥ ಸೌಮಿತ್ರಿಂ ಸಂಕ್ರುದ್ಧಾವಭ್ಯಧಾವತಾಂ।।
ಹಾಗೆ ಓಡಿ ಹೋಗುತ್ತಿರುವ ಯೋಧರನ್ನು ನೋಡಿ ದೂಷಣನ ತಮ್ಮಂದಿರೀರ್ವರು ಸಂಕೃದ್ಧರಾಗಿ ಓಡಿಬಂದು ಸೌಮಿತ್ರಿಯನ್ನು ಎದುರಿಸಿದರು.
03271020a ತಾವಾದ್ರವಂತೌ ಸಂಕ್ರುದ್ಧೌ ವಜ್ರವೇಗಪ್ರಮಾಥಿನೌ।
03271020c ಪ್ರತಿಜಗ್ರಾಹ ಸೌಮಿತ್ರಿರ್ವಿನದ್ಯೋಭೌ ಪತತ್ರಿಭಿಃ।।
ಸೌಮಿತ್ರಿಯು ಸಂಕೃದ್ಧರಾಗಿದ್ದ ವಜ್ರವೇಗ ಮತ್ತು ಪ್ರಮಥಿಯರೀರ್ವರನ್ನೂ ರೆಕ್ಕೆಗಳುಳ್ಳ ಬಾಣಗಳಿಂದ ಬರಮಾಡಿಕೊಂಡನು.
03271021a ತತಃ ಸುತುಮುಲಂ ಯುದ್ಧಮಭವಲ್ಲೋಮಹರ್ಷಣಂ।
03271021c ದೂಷಣಾನುಜಯೋಃ ಪಾರ್ಥ ಲಕ್ಷ್ಮಣಸ್ಯ ಚ ಧೀಮತಃ।।
ಪಾರ್ಥ! ಆಗ ದೂಷಣನ ತಮ್ಮಂದಿರ ಮತ್ತು ದೀಮತ ಲಕ್ಷ್ಮಣನ ನಡುವೆ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.
03271022a ಮಹತಾ ಶರವರ್ಷೇಣ ರಾಕ್ಷಸೌ ಸೋಽಭ್ಯವರ್ಷತ।
03271022c ತೌ ಚಾಪಿ ವೀರೌ ಸಂಕ್ರುದ್ಧಾವುಭೌ ತೌ ಸಮವರ್ಷತಾಂ।।
ಅವನು ರಾಕ್ಷಸರ ಮೇಲೆ ಮಹಾಶರಗಳ ಮಳೆಯನ್ನು ಸುರಿಸಿದನು. ಸಂಕೃದ್ದರಾದ ಆ ವೀರರಿಬ್ಬರೂ ಕೂಡ ಅವನ ಮೇಲೆ ಶರಗಳ ಮಳೆಯನ್ನು ಸುರಿಸಿದರು.
03271023a ಮುಹೂರ್ತಮೇವಮಭವದ್ವಜ್ರವೇಗಪ್ರಮಾಥಿನೋಃ।
03271023c ಸೌಮಿತ್ರೇಶ್ಚ ಮಹಾಬಾಹೋಃ ಸಂಪ್ರಹಾರಃ ಸುದಾರುಣಃ।।
ವಜ್ರವೇಗ-ಪ್ರಮಥಿಯರ ಮತ್ತು ಸಂಪ್ರಹಾರ ಮಹಾಬಾಹು ಸೌಮಿತ್ರಿಯ ನಡುವಿನ ಈ ದಾರುಣ ಯುದ್ಧವು ಸ್ವಲ್ಪ ಕಾಲ ನಡೆಯಿತು.
03271024a ಅಥಾದ್ರಿಶೃಂಗಮಾದಾಯ ಹನೂಮಾನ್ಮಾರುತಾತ್ಮಜಃ।
03271024c ಅಭಿದ್ರುತ್ಯಾದದೇ ಪ್ರಾಣಾನ್ವಜ್ರವೇಗಸ್ಯ ರಕ್ಷಸಃ।।
ಆಗ ಮಾರುತಾತ್ಮಜ ಹನೂಮಂತನು ಗಿರಿಯ ಶಿಖರವನ್ನು ಹಿಡಿದು, ಅಕ್ರಮಣ ಮಾಡಿ ರಾಕ್ಷಸ ವಜ್ರವೇಗನ ಪ್ರಾಣವನ್ನು ತೆಗೆದುಕೊಂಡನು.
03271025a ನೀಲಶ್ಚ ಮಹತಾ ಗ್ರಾವ್ಣಾ ದೂಷಣಾವರಜಂ ಹರಿಃ।
03271025c ಪ್ರಮಾಥಿನಮಭಿದ್ರುತ್ಯ ಪ್ರಮಮಾಥ ಮಹಾಬಲಃ।।
ಮಹಾಬಲಿ ಕಪಿ ನೀಲನು ದೊಡ್ಡ ಬಂಡೆಯೊಂದಿಗೆ ದೂಷಣನ ತಮ್ಮ ಪ್ರಮಾಥಿಯನ್ನು ಆಕ್ರಮಣ ಮಾಡಿ ಜಜ್ಜಿದನು.
03271026a ತತಃ ಪ್ರಾವರ್ತತ ಪುನಃ ಸಂಗ್ರಾಮಃ ಕಟುಕೋದಯಃ।
03271026c ರಾಮರಾವಣಸೈನ್ಯಾನಾಮನ್ಯೋನ್ಯಮಭಿಧಾವತಾಂ।।
ಆಗ ರಾಮ-ರಾವಣರ ಸೇನೆಗಳ ನಡುವೆ ಅನ್ಯೋನ್ಯರನ್ನು ಕೊಲ್ಲುವ ಕಟುಕ ಸಂಗ್ರಾಮವು ಪುನಃ ಪ್ರಾರಂಭವಾಯಿತು.
03271027a ಶತಶೋ ನೈರೃತಾನ್ವನ್ಯಾ ಜಘ್ನುರ್ವನ್ಯಾಂಶ್ಚ ನೈರೃತಾಃ।
03271027c ನೈರೃತಾಸ್ತತ್ರ ವಧ್ಯಂತೇ ಪ್ರಾಯಶೋ ನ ತು ವಾನರಾಃ।।
ಆ ವನವಾಸಿಗಳು ನೂರಾರು ಸಂಖ್ಯೆಗಳಲ್ಲಿ ರಾಕ್ಷಸರನ್ನು ಕೊಂದರು, ರಾಕ್ಷಸರೂ ವನವಾಸಿಗಳನ್ನು ಕೊಂದರು. ಆದರೆ ಅಲ್ಲಿ ಸತ್ತ ರಾಕ್ಷಸರ ಸಂಖ್ಯೆ ವಾನರರಕ್ಕಿಂತಲೂ ಪ್ರಾಯಶಃ ಅಧಿಕವಾಗಿತ್ತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಕುಂಭಕರ್ಣಾದಿವಧೇ ಏಕಸಪ್ತತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಕುಂಭಕರ್ಣಾದಿವಧೆಯಲ್ಲಿ ಇನ್ನೂರಾಎಪ್ಪತ್ತೊಂದನೆಯ ಅಧ್ಯಾಯವು.