ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 270
ಸಾರ
ವಿಭೀಷಣನಿಂದ ರಾಕ್ಷಸ ಪ್ರಹಸ್ತ ಮತ್ತು ಹನುಮಂತನಿಂದ ರಾಕ್ಷಸ ಧೂಮ್ರಾಕ್ಷನ ವಧೆ (1-14). ಕುಂಭಕರ್ಣನನ್ನು ಎಬ್ಬಿಸಿ ಯುದ್ಧಕ್ಕೆ ಕಳುಹಿಸಿದುದು (15-29).
03270001 ಮಾರ್ಕಂಡೇಯ ಉವಾಚ।
03270001a ತತಃ ಪ್ರಹಸ್ತಃ ಸಹಸಾ ಸಮಭ್ಯೇತ್ಯ ವಿಭೀಷಣಂ।
03270001c ಗದಯಾ ತಾಡಯಾಮಾಸ ವಿನದ್ಯ ರಣಕರ್ಕಶಃ।।
ಮಾರ್ಕಂಡೇಯನು ಹೇಳಿದನು: “ಆಗ ಪ್ರಹಸ್ತನು ಬೇಗನೆ ವಿಭೀಷಣನನ್ನು ಎದುರಿಸಿ ಕರ್ಕಶವಾದ ರಣನಾದವನ್ನು ಕೂಗಿ ಗದೆಯಿಂದ ಹೊಡೆದನು.
03270002a ಸ ತಯಾಭಿಹತೋ ಧೀಮಾನ್ಗದಯಾ ಭೀಮವೇಗಯಾ।
03270002c ನಾಕಂಪತ ಮಹಾಬಾಹುರ್ಹಿಮವಾನಿವ ಸುಸ್ಥಿರಃ।।
ಆದರೆ ಧೀಮಂತ ಮಹಾಬಾಹುವು ಭೀಮವೇಗದಿಂದ ಬಂದ ಗದೆಯ ಹೊಡೆತಕ್ಕೂ ಕಂಪಿಸದೇ ಹಿಮವತ್ಪರ್ವತದಂತೆ ಸ್ಥಿರವಾಗಿದ್ದನು.
03270003a ತತಃ ಪ್ರಗೃಹ್ಯ ವಿಪುಲಾಂ ಶತಘಂಟಾಂ ವಿಭೀಷಣಃ।
03270003c ಅಭಿಮಂತ್ರ್ಯ ಮಹಾಶಕ್ತಿಂ ಚಿಕ್ಷೇಪಾಸ್ಯ ಶಿರಃ ಪ್ರತಿ।।
ವಿಭೀಷಣನು ಶತಘಂಟಾ ಎಂಬ ವಿಪುಲ ಮಹಾಶಕ್ತಿಯನ್ನು ಹಿಡಿದು ಅಭಿಮಂತ್ರಿಸಿ ಅವನ ಶಿರದ ಕಡೆಗೆ ಎಸೆದನು.
03270004a ಪತಂತ್ಯಾ ಸ ತಯಾ ವೇಗಾದ್ರಾಕ್ಷಸೋಽಶನಿನಾದಯಾ।
03270004c ಹೃತೋತ್ತಮಾಂಗೋ ದದೃಶೇ ವಾತರುಗ್ಣ ಇವ ದ್ರುಮಃ।।
ಆ ವೇಗವಾಗಿ ಬರುತ್ತಿರುವ ಮಿಂಚಿನಂತಿರುವ ಆಯುಧವು ರಾಕ್ಷಸನ ಶಿರವನ್ನು ಕತ್ತರಿಸಲು, ಭಿರುಗಾಳಿಗೆ ಸಿಲುಕಿದ ಮರವು ಬೀಳುವಂತೆ ಕೆಳಗುರುಳಿದುದು ಕಂಡಿತು.
03270005a ತಂ ದೃಷ್ಟ್ವಾ ನಿಹತಂ ಸಂಖ್ಯೇ ಪ್ರಹಸ್ತಂ ಕ್ಷಣದಾಚರಂ।
03270005c ಅಭಿದುದ್ರಾವ ಧೂಮ್ರಾಕ್ಷೋ ವೇಗೇನ ಮಹತಾ ಕಪೀನ್।।
ಯುದ್ಧದಲ್ಲಿ ಪ್ರಹಸ್ತನು ಹತನಾದುದನ್ನು ನೋಡಿದ ಧೂಮ್ರಾಕ್ಷನು ಕಪಿಗಳನ್ನು ಮಹಾವೇಗದಿಂದ ಬಂದು ಆಕ್ರಮಣ ಮಾಡಿದನು.
03270006a ತಸ್ಯ ಮೇಘೋಪಮಂ ಸೈನ್ಯಮಾಪತದ್ಭೀಮದರ್ಶನಂ।
03270006c ದೃಷ್ಟ್ವೈವ ಸಹಸಾ ದೀರ್ಣಾ ರಣೇ ವಾನರಪುಂಗವಾಃ।।
ನೋಡಲು ಭಯಂಕರವಾಗಿದ್ದ ಅವನ ಸೇನೆಯು ಮೋಡಗಳಂತೆ ಸೇನೆಯ ಮೇಲೆ ಬೀಳಲು, ಅದನ್ನು ಕಂಡ ವಾನರಪುಂಗವರು ತಕ್ಷಣವೇ ಚದುರಿಹೋದರು.
03270007a ತತಸ್ತಾನ್ಸಹಸಾ ದೀರ್ಣಾನ್ದೃಷ್ಟ್ವಾ ವಾನರಪುಂಗವಾನ್।
03270007c ನಿರ್ಯಾಯ ಕಪಿಶಾರ್ದೂಲೋ ಹನೂಮಾನ್ಪರ್ಯವಸ್ಥಿತಃ।।
ಆ ವಾನರಪುಂಗವರು ಹಾಗೆ ಶೀಘ್ರವಾಗಿ ಚದುರಿಹೋದುದನ್ನು ನೋಡಿ ಕಪಿಶಾರ್ದೂಲ ಹನೂಮಂತನು ಸ್ಥಿರವಾಗಿ ನಿಂತು ಹೋರಾಡಿದನು.
03270008a ತಂ ದೃಷ್ಟ್ವಾವಸ್ಥಿತಂ ಸಂಖ್ಯೇ ಹರಯಃ ಪವನಾತ್ಮಜಂ।
03270008c ವೇಗೇನ ಮಹತಾ ರಾಜನ್ಸಂನ್ಯವರ್ತಂತ ಸರ್ವಶಃ।।
ರಾಜನ್! ರಣದಲ್ಲಿ ಸ್ಥಿತನಾಗಿದ್ದ ಪವನಾತ್ಮಜನನ್ನು ನೋಡಿ ಕಪಿಗಳು ಎಲ್ಲೆಡೆಯಿಂದ ಮಹಾವೇಗದಲ್ಲಿ ಬಂದು ಒಂದುಗೂಡಿದರು.
03270009a ತತಃ ಶಬ್ದೋ ಮಹಾನಾಸೀತ್ತುಮುಲೋ ಲೋಮಹರ್ಷಣಃ।
03270009c ರಾಮರಾವಣಸೈನ್ಯಾನಾಮನ್ಯೋನ್ಯಮಭಿಧಾವತಾಂ।।
ಆಗ ಅನ್ಯೋನ್ಯರೊಂದಿಗೆ ಹೋರಾಡುತ್ತಿರುವ ರಾಮ ಮತ್ತು ರಾವಣರ ಸೇನೆಗಳಲ್ಲಿ ಮೈ ನವಿರೇಳಿಸುವ ಮಹಾ ಶಬ್ಧದ ತುಮುಲವುಂಟಾಯಿತು.
03270010a ತಸ್ಮಿನ್ಪ್ರವೃತ್ತೇ ಸಂಗ್ರಾಮೇ ಘೋರೇ ರುಧಿರಕರ್ದಮೇ।
03270010c ಧೂಮ್ರಾಕ್ಷಃ ಕಪಿಸೈನ್ಯಂ ತದ್ದ್ರಾವಯಾಮಾಸ ಪತ್ರಿಭಿಃ।।
ರಕ್ತವನ್ನು ಸುರಿಸುವ ಆ ಘೋರ ಸಂಗ್ರಾಮವು ನಡೆಯುತ್ತಿರಲು, ಧೂಮ್ರಾಕ್ಷನು ಬಾಣಗಳಿಂದ ಕಪಿಸೇನೆಯನ್ನು ಪಲಾಯನವಾಗುವಂತೆ ಮಾಡಿದನು.
03270011a ತಂ ರಾಕ್ಷಸಮಹಾಮಾತ್ರಮಾಪತಂತಂ ಸಪತ್ನಜಿತ್।
03270011c ತರಸಾ ಪ್ರತಿಜಗ್ರಾಹ ಹನೂಮಾನ್ಪವನಾತ್ಮಜಃ।।
ಶತ್ರುಗಳನ್ನು ಜಯಿಸುವ, ಪವನಾತ್ಮಜ ಹನೂಮಂತನು ಮುಂದುವರೆಯುತ್ತಿದ್ದ ಮಹಾಮಾತ್ರ ರಾಕ್ಷಸನನ್ನು ಬೇಗನೇ ಎದುರಿಸಿ ತಡೆದನು.
03270012a ತಯೋರ್ಯುದ್ಧಮಭೂದ್ಘೋರಂ ಹರಿರಾಕ್ಷಸವೀರಯೋಃ।
03270012c ಜಿಗೀಷತೋರ್ಯುಧಾನ್ಯೋನ್ಯಮಿಂದ್ರಪ್ರಹ್ಲಾದಯೋರಿವ।।
ಆ ವಾನರ ರಾಕ್ಷಸರ ನಡುವೆ ಅನ್ಯೋನ್ಯರನ್ನು ಗೆಲ್ಲುವ ಇಂದ್ರ-ಪ್ರಹ್ಲಾದರ ನಡುವಿನಂತಿರುವ ಘೋರವಾದ ಯುದ್ಧವು ನಡೆಯಿತು.
03270013a ಗದಾಭಿಃ ಪರಿಘೈಶ್ಚೈವ ರಾಕ್ಷಸೋ ಜಘ್ನಿವಾನ್ಕಪಿಂ।
03270013c ಕಪಿಶ್ಚ ಜಘ್ನಿವಾನ್ರಕ್ಷಃ ಸಸ್ಕಂಧವಿಟಪೈರ್ದ್ರುಮೈಃ।।
ರಾಕ್ಷಸನು ಕಪಿಯನ್ನು ಗದೆ ಮತ್ತು ಪರಿಘಗಳಿಂದ ಹೊಡೆಯಲು ಕಪಿಯು ರಾಕ್ಷಸನನ್ನು ಮರಗಳು, ಕೊಂಬೆಗಳು ಮತ್ತು ಇತರ ಎಲ್ಲವುಗಳಿಂದ ಹೊಡೆದನು.
03270014a ತತಸ್ತಮತಿಕಾಯೇನ ಸಾಶ್ವಂ ಸರಥಸಾರಥಿಂ।
03270014c ಧೂಮ್ರಾಕ್ಷಮವಧೀದ್ಧೀಮಾನ್ ಹನೂಮಾನ್ಮಾರುತಾತ್ಮಜಃ।।
ಆಗ ಅತಿಕಾಯನಾದ ಮಾರುತಾತ್ಮಜ ಧೀಮಾನ್ ಹನೂಮಂತನು ಕುದುರೆಗಳು ಮತ್ತು ರಥಗಳ ಸಹಿತ ಧೂಮ್ರಾಕ್ಷನನ್ನು ವಧಿಸಿದನು.
03270015a ತತಸ್ತಂ ನಿಹತಂ ದೃಷ್ಟ್ವಾ ಧೂಮ್ರಾಕ್ಷಂ ರಾಕ್ಷಸೋತ್ತಮಂ।
03270015c ಹರಯೋ ಜಾತವಿಸ್ರಂಭಾ ಜಘ್ನುರಭ್ಯೇತ್ಯ ಸೈನಿಕಾನ್।।
ಆಗ ರಾಕ್ಷಸೋತ್ತಮ ಧೂಮ್ರಾಕ್ಷನು ಹತನಾದುದನ್ನು ನೋಡಿ ವಾನರರ ಉತ್ಸಾಹವು ಮರಳಿ ಅವರು ಸೈನಿಕರನ್ನು ಸಂಹರಿಸಿದರು.
03270016a ತೇ ವಧ್ಯಮಾನಾ ಬಲಿಭಿರ್ಹರಿಭಿರ್ಜಿತಕಾಶಿಭಿಃ।
03270016c ರಾಕ್ಷಸಾ ಭಗ್ನಸಂಕಲ್ಪಾ ಲಂಕಾಮಭ್ಯಪತನ್ಭಯಾತ್।।
ಜಯವನ್ನು ಪಡೆಯುತ್ತಿದ್ದ ಬಲಶಾಲಿ ಕಪಿಗಳಿಂದ ಹತರಾಗುತ್ತಿದ್ದ ಆ ರಾಕ್ಷಸರು ತಮ್ಮ ಸಂಕಲ್ಪಗಳನ್ನು ಕಡಿದುಕೊಂಡು ಭಯದಿಂದ ಲಂಕೆಗೆ ಮರಳಿದರು.
03270017a ತೇಽಭಿಪತ್ಯ ಪುರಂ ಭಗ್ನಾ ಹತಶೇಷಾ ನಿಶಾಚರಾಃ।
03270017c ಸರ್ವಂ ರಾಜ್ಞೇ ಯಥಾವೃತ್ತಂ ರಾವಣಾಯ ನ್ಯವೇದಯನ್।।
ಭಗ್ನರಾದ, ಸಾಯದೇ ಉಳಿದ ನಿಶಾಚರರು ಪುರವನ್ನು ಸೇರಿ ಎಲ್ಲವನ್ನೂ ನಡೆದಹಾಗೆ ರಾಜ ರಾವಣನಿಗೆ ನಿವೇದಿಸಿದರು.
03270018a ಶ್ರುತ್ವಾ ತು ರಾವಣಸ್ತೇಭ್ಯಃ ಪ್ರಹಸ್ತಂ ನಿಹತಂ ಯುಧಿ।
03270018c ಧೂಮ್ರಾಕ್ಷಂ ಚ ಮಹೇಷ್ವಾಸಂ ಸಸೈನ್ಯಂ ವಾನರರ್ಷಭೈಃ।।
03270019a ಸುದೀರ್ಘಮಿವ ನಿಃಶ್ವಸ್ಯ ಸಮುತ್ಪತ್ಯ ವರಾಸನಾತ್।
03270019c ಉವಾಚ ಕುಂಭಕರ್ಣಸ್ಯ ಕರ್ಮಕಾಲೋಽಯಮಾಗತಃ।।
ಯುದ್ಧದಲ್ಲಿ ಪ್ರಹಸ್ತ ಮತ್ತು ಮಹೇಷ್ವಾಸ ಧೂಮ್ರಾಕ್ಷರು ಸೇನೆಯೊಂದಿಗೆ ವಾನರರಿಂದ ಹತರಾಗಿದ್ದುದನ್ನು ಕೇಳಿ ರಾವಣನು ಸುದೀರ್ಘ ನಿಟ್ಟುಸಿರನ್ನು ಬಿಟ್ಟು ವರಾಸನದಿಂದ ಎದ್ದು ಹೇಳಿದನು: “ಕುಂಭಕರ್ಣನು ಕಾರ್ಯವೆಸಗುವ ಕಾಲವು ಬಂದಿದೆ.”
03270020a ಇತ್ಯೇವಮುಕ್ತ್ವಾ ವಿವಿಧೈರ್ವಾದಿತ್ರೈಃ ಸುಮಹಾಸ್ವನೈಃ।
03270020c ಶಯಾನಮತಿನಿದ್ರಾಲುಂ ಕುಂಭಕರ್ಣಮಬೋಧಯತ್।।
ಹೀಗೆ ಹೇಳಿ ಜೋರಾಗಿ ಶಬ್ಧಮಾಡುವ ವಿವಿಧ ಸಂಗೀತ ಸಲಕರಣೆಗಳಿಂದ ಮಲಗಿದ್ದ ನಿದ್ರಾಲು ಕುಂಭಕರ್ಣನನ್ನು ಎಬ್ಬಿಸಿದನು.
03270021a ಪ್ರಬೋಧ್ಯ ಮಹತಾ ಚೈನಂ ಯತ್ನೇನಾಗತಸಾಧ್ವಸಃ।
03270021c ಸ್ವಸ್ಥಮಾಸೀನಮವ್ಯಗ್ರಂ ವಿನಿದ್ರಂ ರಾಕ್ಷಸಾಧಿಪಃ।
03270021e ತತೋಽಬ್ರವೀದ್ದಶಗ್ರೀವಃ ಕುಂಭಕರ್ಣಂ ಮಹಾಬಲಂ।।
ಮಹಾಯತ್ನದಿಂದ ಅವನನ್ನು ಎಚ್ಚರಿಸಲು, ನಿದ್ರೆಯನ್ನು ಕಳೆದು ಆಯಾಸವನ್ನು ಕಳೆದುಕೊಂಡ ರಾಕ್ಷಸಾಧಿಪನು ಸುಖವಾಗಿ ಕುಳಿತುಕೊಳ್ಳಲು ದಶಗ್ರೀವನು ಮಹಾಬಲಿ ಕುಂಭಕರ್ಣನಿಗೆ ಹೇಳಿದನು:
03270022a ಧನ್ಯೋಽಸಿ ಯಸ್ಯ ತೇ ನಿದ್ರಾ ಕುಂಭಕರ್ಣೇಯಮೀದೃಶೀ।
03270022c ಯ ಇಮಂ ದಾರುಣಂ ಕಾಲಂ ನ ಜಾನೀಷೇ ಮಹಾಭಯಂ।।
“ಕುಂಭಕರ್ಣ! ಈ ರೀತಿ ನಿದ್ರೆಮಾಡಬಲ್ಲ ನೀನು ಧನ್ಯ! ಈ ದಾರುಣ ಕಾಲದ ಮಹಾಭಯವು ನಿನಗೆ ತಿಳಿದಿಲ್ಲ.
03270023a ಏಷ ತೀರ್ತ್ವಾರ್ಣವಂ ರಾಮಃ ಸೇತುನಾ ಹರಿಭಿಃ ಸಹ।
03270023c ಅವಮನ್ಯೇಹ ನಃ ಸರ್ವಾನ್ಕರೋತಿ ಕದನಂ ಮಹತ್।।
ಈ ರಾಮನು ಕಪಿಗಳೊಂದಿಗೆ ಸೇತುವೆಯ ಮೂಲಕ ಸಾಗರವನ್ನು ದಾಟಿ ಬಂದು ನಮ್ಮೆಲ್ಲರನ್ನೂ ಅವಹೇಳಿಸಿ ಮಹಾ ಕದನವನ್ನು ಮಾಡುತ್ತಿದ್ದಾನೆ.
03270024a ಮಯಾ ಹ್ಯಪಹೃತಾ ಭಾರ್ಯಾ ಸೀತಾ ನಾಮಾಸ್ಯ ಜಾನಕೀ।
03270024c ತಾಂ ಮೋಕ್ಷಯಿಷುರಾಯಾತೋ ಬದ್ಧ್ವಾ ಸೇತುಂ ಮಹಾರ್ಣವೇ।।
ನಾನು ಸೀತಾ ಎಂಬ ಹೆಸರಿನ ಅವನ ಭಾರ್ಯೆ ಮತ್ತು ಜನಕನ ಮಗಳನ್ನು ಅಪಹರಿಸಲು, ಅವಳನ್ನು ಬಿಡಿಸಲು ಅವನು ಸಾಗರಕ್ಕೆ ಸೇತುವೆಯನ್ನು ಕಟ್ಟಿದನು.
03270025a ತೇನ ಚೈವ ಪ್ರಹಸ್ತಾದಿರ್ಮಹಾನ್ನಃ ಸ್ವಜನೋ ಹತಃ।
03270025c ತಸ್ಯ ನಾನ್ಯೋ ನಿಹಂತಾಸ್ತಿ ತ್ವದೃತೇ ಶತ್ರುಕರ್ಶನ।।
ಅವನಿಂದ ಪಹಸ್ತನೇ ಮೊದಲಾದ ಮಹಾ ಸ್ವಜನರು ಹತರಾಗಿದ್ದಾರೆ. ಶತ್ರುಕರ್ಶನ! ನೀನಲ್ಲದೇ ಬೇರೆ ಯಾರೂ ಅವನನ್ನು ಕೊಲ್ಲಲಾರರು!
03270026a ಸ ದಂಶಿತೋಽಭಿನಿರ್ಯಾಯ ತ್ವಮದ್ಯ ಬಲಿನಾಂ ವರ।
03270026c ರಾಮಾದೀನ್ ಸಮರೇ ಸರ್ವಾಂ ಜಹಿ ಶತ್ರೂನರಿಂದಮ।।
ಅವನು ಕವಚವನು ಧರಿಸಿದ್ದಾನೆ. ಬಲಿಗಳಲ್ಲಿ ಶ್ರೇಷ್ಠನೇ! ಇಂದೇ ಹೊರಡು! ಅರಿಂದಮ! ರಾಮನೇ ಮೊದಲಾದ ಶತ್ರುಗಳೆಲ್ಲರನ್ನೂ ಸಮರದಲ್ಲಿ ಜಯಿಸು!
03270027a ದೂಷಣಾವರಜೌ ಚೈವ ವಜ್ರವೇಗಪ್ರಮಾಥಿನೌ।
03270027c ತೌ ತ್ವಾಂ ಬಲೇನ ಮಹತಾ ಸಹಿತಾವನುಯಾಸ್ಯತಃ।।
ದೂಷಣನ ಇಬ್ಬರು ತಮ್ಮಂದಿರು - ವಜ್ರವೇಗ ಮತ್ತು ಪ್ರಮಥಿ – ತಮ್ಮ ಮಹಾಸೇನೆಗಳೊಂದಿಗೆ ನಿನ್ನನ್ನು ಅನುಸರಿಸುತ್ತಾರೆ.”
03270028a ಇತ್ಯುಕ್ತ್ವಾ ರಾಕ್ಷಸಪತಿಃ ಕುಂಭಕರ್ಣಂ ತರಸ್ವಿನಂ।
03270028c ಸಂದಿದೇಶೇತಿಕರ್ತವ್ಯೇ ವಜ್ರವೇಗಪ್ರಮಾಥಿನೌ।।
ತರಸ್ವಿ ಕುಂಭಕರ್ಣನಿಗೆ ಹೀಗೆ ಹೇಳಿ ರಾಕ್ಷಸಪತಿಯು ವಜ್ರವೇಗ ಮತ್ತು ಪ್ರಮಥಿಗಳಿಗೆ ಮಾಡಬೇಕಾದುದರ ಕುರಿತು ಆಜ್ಞೆಯನ್ನಿತ್ತನು.
03270029a ತಥೇತ್ಯುಕ್ತ್ವಾ ತು ತೌ ವೀರೌ ರಾವಣಂ ದೂಷಣಾನುಜೌ।
03270029c ಕುಂಭಕರ್ಣಂ ಪುರಸ್ಕೃತ್ಯ ತೂರ್ಣಂ ನಿರ್ಯಯತುಃ ಪುರಾತ್।।
ಆ ವೀರ ದೂಷಣಾನುಜರಿಬ್ಬರೂ ಹಾಗೇ ಆಗಲೆಂದು ರಾವಣನಿಗೆ ಹೇಳಿ ಕುಂಭಕರ್ಣನನ್ನು ಮುಂದಿಟ್ಟು ಸೇನೆಯೊಂದಿಗೆ ಪುರದಿಂದ ಹೊರಟರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಕುಂಭಕರ್ಣನಿರ್ಗಮನೇ ಸಪ್ತತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಕುಂಭಕರ್ಣನಿರ್ಗಮನದಲ್ಲಿ ಇನ್ನೂರಾಎಪ್ಪತ್ತನೆಯ ಅಧ್ಯಾಯವು.