267 ರಾಮೋಪಾಖ್ಯಾನೇ ಸೇತುಬಂಧನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 267

ಸಾರ

ರಾಮನು ಸುಗ್ರೀವ ಮತ್ತು ಇತರ ಕಪೀಂದ್ರರ ಸೇನೆಗಳೊಡನೆ ಸಮುದ್ರ ತೀರಕ್ಕೆ ಬಂದುದು (1-22). ಸಮುದ್ರ ರಾಜನ ಸಲಹೆಯಂತೆ ದೇವಶಿಲ್ಪಿ ವಿಶ್ವಕರ್ಮನ ಮಗ ವಾನರ ನಲನಿಂದ ಸಾಗರಕ್ಕೆ ಸೇತುವೆಯು ನಿರ್ಮಾಣವಾದುದು (23-45). ಅಲ್ಲಿಯೇ ವಿಭೀಷಣನೊಂದಿಗೆ ರಾಮನು ಸಖ್ಯವನ್ನು ಬೆಳೆಸಿದುದು (46-54).

03267001 ಮಾರ್ಕಂಡೇಯ ಉವಾಚ।
03267001a ತತಸ್ತತ್ರೈವ ರಾಮಸ್ಯ ಸಮಾಸೀನಸ್ಯ ತೈಃ ಸಹ।
03267001c ಸಮಾಜಗ್ಮುಃ ಕಪಿಶ್ರೇಷ್ಠಾಃ ಸುಗ್ರೀವವಚನಾತ್ತದಾ।।

ಮಾರ್ಕಂಡೇಯನು ಹೇಳಿದನು: “ಆಗ ಅಲ್ಲಿ ರಾಮನು ಅವರೊಂದಿಗೆ ಕುಳಿತುಕೊಂಡಿರಲು, ಸುಗ್ರೀವನ ವಚನದಂತೆ ಕಪಿಶ್ರೇಷ್ಠರು ಬಂದು ಸೇರಿದರು.

03267002a ವೃತಃ ಕೋಟಿಸಹಸ್ರೇಣ ವಾನರಾಣಾಂ ತರಸ್ವಿನಾಂ।
03267002c ಶ್ವಶುರೋ ವಾಲಿನಃ ಶ್ರೀಮಾನ್ಸುಷೇಣೋ ರಾಮಮಭ್ಯಯಾತ್।।

ವಾಲಿಯ ಮಾವ ಶ್ರೀಮಾನ್ ಸುಷೇಣನು ಕೋಟಿಸಹಸ್ರ ತರಸ್ವಿ ವಾನರರನ್ನೊಡಗೂಡಿ ರಾಮನಲ್ಲಿಗೆ ಬಂದನು.

03267003a ಕೋಟೀಶತವೃತೌ ಚಾಪಿ ಗಜೋ ಗವಯ ಏವ ಚ।
03267003c ವಾನರೇಂದ್ರೌ ಮಹಾವೀರ್ಯೌ ಪೃಥಕ್ಪೃಥಗದೃಶ್ಯತಾಂ।।

ಮಹಾವೀರರಾದ ವಾನರೇಂದ್ರರಿಬ್ಬರು ಗಜ ಮತ್ತು ಗವಯ ಪ್ರತಿಯೊಬ್ಬರೂ ನೂರು ಕೋಟಿ ಕಪಿಗಳೊಂದಿಗೆ ಬಂದರು.

03267004a ಷಷ್ಟಿಕೋಟಿಸಹಸ್ರಾಣಿ ಪ್ರಕರ್ಷನ್ಪ್ರತ್ಯದೃಶ್ಯತ।
03267004c ಗೋಲಾಂಗೂಲೋ ಮಹಾರಾಜ ಗವಾಕ್ಷೋ ಭೀಮದರ್ಶನಃ।।

ಮಹಾರಾಜ! ಭೀಮದರ್ಶನ ಗೋಲಾಂಗುಲ ಗವಾಕ್ಷನು ಆರು ಕೋಟಿ ಸಾವಿರ ಕಪಿಗಳನ್ನು ಕರೆದುಕೊಂಡು ಕಾಣಿಸಿಕೊಂಡನು.

03267005a ಗಂಧಮಾದನವಾಸೀ ತು ಪ್ರಥಿತೋ ಗಂಧಮಾದನಃ।
03267005c ಕೋಟೀಸಹಸ್ರಮುಗ್ರಾಣಾಂ ಹರೀಣಾಂ ಸಮಕರ್ಷತ।।

ಗಂಧಮಾದನದಲ್ಲಿ ವಾಸಿಸುವ ಪ್ರಸಿದ್ಧ ಗಂಧಮಾದನನು ಕೋಟಿಸಹಸ್ರ ಉಗ್ರ ಕಪಿಗಳನ್ನು ಕರೆತಂದನು.

03267006a ಪನಸೋ ನಾಮ ಮೇಧಾವೀ ವಾನರಃ ಸುಮಹಾಬಲಃ।
03267006c ಕೋಟೀರ್ದಶ ದ್ವಾದಶ ಚ ತ್ರಿಂಶತ್ಪಂಚ ಪ್ರಕರ್ಷತಿ।।

ಪನಸ ಎಂಬ ಹೆಸರಿನ ಮೇಧಾವೀ ಸುಮಹಾಬಲ ವಾನರನು ಹತ್ತು, ಹನ್ನೆರಡು ಮತ್ತು ಮೂವತ್ತೈದು ಕೋಟಿ ವಾನರರನ್ನು ಕರೆತಂದನು.

03267007a ಶ್ರೀಮಾನ್ದಧಿಮುಖೋ ನಾಮ ಹರಿವೃದ್ಧೋಽಪಿ ವೀರ್ಯವಾನ್।
03267007c ಪ್ರಚಕರ್ಷ ಮಹತ್ಸೈನ್ಯಂ ಹರೀಣಾಂ ಭೀಮತೇಜಸಾಂ।।

ದಧಿಮುಖ ಎಂಬ ಹೆಸರಿನ ಶ್ರೀಮಾನ್, ವೀರ್ಯವಾನ್ ಕಪಿವೃದ್ಧನೂ ಕೂಡ ಭೀಮ ತೇಜಸ್ಸಿನ ಕಪಿಗಳ ಮಹಾಸೇನೆಯನ್ನು ತಂದನು.

03267008a ಕೃಷ್ಣಾನಾಂ ಮುಖಪುಂಡ್ರಾಣಾಮೃಕ್ಷಾಣಾಂ ಭೀಮಕರ್ಮಣಾಂ।
03267008c ಕೋಟೀಶತಸಹಸ್ರೇಣ ಜಾಂಬವಾನ್ಪ್ರತ್ಯದೃಶ್ಯತ।।

ಜಾಂಬವಂತನು ನೂರುಕೋಟಿಸಾವಿರ ಭೀಮಕರ್ಮಿಗಳಾದ ಕಪ್ಪು ಮತ್ತು ಬಿಳೀ ಮುಖಗಳ ಕರಡಿಗಳೊಂದಿಗೆ ಕಾಣಿಸಿಕೊಂಡನು.

03267009a ಏತೇ ಚಾನ್ಯೇ ಚ ಬಹವೋ ಹರಿಯೂಥಪಯೂಥಪಾಃ।
03267009c ಅಸಂಖ್ಯೇಯಾ ಮಹಾರಾಜ ಸಮೀಯೂ ರಾಮಕಾರಣಾತ್।।

ಮಹಾರಾಜ! ಇವು ಮತ್ತು ಇನ್ನೂ ಇತರ ಬಹಳ ಕಪಿನಾಯಕರು ಅಸಂಖ್ಯ ಸೇನೆಗಳೊಂದಿಗೆ ರಾಮನ ಕಾರಣಕ್ಕೆ ಸೇರಿದರು.

03267010a ಶಿರೀಷಕುಸುಮಾಭಾನಾಂ ಸಿಂಹಾನಾಮಿವ ನರ್ದತಾಂ।
03267010c ಶ್ರೂಯತೇ ತುಮುಲಃ ಶಬ್ದಸ್ತತ್ರ ತತ್ರ ಪ್ರಧಾವತಾಂ।।

ಶಿರೀಷಕುಸುಮದಂತಿದ್ದ ಅವರು ಸಿಂಹನಾದ ಮಾಡುತ್ತಾ ಅಲ್ಲಿಂದಲ್ಲಿಗೆ ಓಡುತ್ತಿದ್ದಾಗ ತುಮುಲ ಶಬ್ಧವು ಕೇಳಿಬಂದಿತು.

03267011a ಗಿರಿಕೂಟನಿಭಾಃ ಕೇ ಚಿತ್ಕೇ ಚಿನ್ಮಹಿಷಸನ್ನಿಭಾಃ।
03267011c ಶರದಭ್ರಪ್ರತೀಕಾಶಾಃ ಪಿಷ್ಟಹಿಂಗುಲಕಾನನಾಃ।।

ಕೆಲವರು ಗಿರಿಶಿಖರಗಳಂತಿದ್ದರೆ ಕೆಲವರು ಗಾತ್ರದಲ್ಲಿ ಎಮ್ಮೆಗಳಂತಿದ್ದರು, ಮಳೆಗಾಲದ ಮೋಡಗಳಿಂತಿದ್ದರು, ಮತ್ತು ತೇಯ್ದ ಕುಂಕುಮದ ಬಣ್ಣದ ಮುಖವುಳ್ಳವರಾಗಿದ್ದರು.

03267012a ಉತ್ಪತಂತಃ ಪತಂತಶ್ಚ ಪ್ಲವಮಾನಾಶ್ಚ ವಾನರಾಃ।
03267012c ಉದ್ಧುನ್ವಂತೋಽಪರೇ ರೇಣೂನ್ಸಮಾಜಗ್ಮುಃ ಸಮಂತತಃ।।

ಕುಪ್ಪಳಿಸುತ್ತಿದ್ದ, ಕೆಳಗೆ ಬೀಳುತ್ತಿದ್ದ, ಹಾರುತ್ತಿದ್ದ ವಾನರರು ಧೂಳೆಬ್ಬಿಸಿ ಎಲ್ಲ ಕಡೆಗಳಿಂದಲೂ ಬಂದು ಸೇರಿದರು.

03267013a ಸ ವಾನರಮಹಾಲೋಕಃ ಪೂರ್ಣಸಾಗರಸಮ್ನಿಭಃ।
03267013c ನಿವೇಶಮಕರೋತ್ತತ್ರ ಸುಗ್ರೀವಾನುಮತೇ ತದಾ।।

ನೆರೆಬಂದ ಸಾಗರದಂತಿದ್ದ ಆ ವಾನರ ಮಹಾಲೋಕವು ಸುಗ್ರೀವನ ಅನುಮತಿಯಂತೆ ಅಲ್ಲಿಯೇ ಬೀಡುಬಿಟ್ಟಿತು.

03267014a ತತಸ್ತೇಷು ಹರೀಂದ್ರೇಷು ಸಮಾವೃತ್ತೇಷು ಸರ್ವಶಃ।
03267014c ತಿಥೌ ಪ್ರಶಸ್ತೇ ನಕ್ಷತ್ರೇ ಮುಹೂರ್ತೇ ಚಾಭಿಪೂಜಿತೇ।।
03267015a ತೇನ ವ್ಯೂಢೇನ ಸೈನ್ಯೇನ ಲೋಕಾನುದ್ವರ್ತಯನ್ನಿವ।
03267015c ಪ್ರಯಯೌ ರಾಘವಃ ಶ್ರೀಮಾನ್ಸುಗ್ರೀವಸಹಿತಸ್ತದಾ।।

ಆಗ ಪ್ರಶಸ್ತ ದಿನ ನಕ್ಷತ್ರದ ಮಂಗಳ ಮುಹೂರ್ತದಲ್ಲಿ ಶ್ರೀಮಾನ್ ರಾಘವನು ಸುಗ್ರೀವನೊಂದಿಗೆ, ಲೋಕಗಳನ್ನೇ ಚಿಂದಿಮಾಡುವಂತೆ ವ್ಯೂಹಗಳಲ್ಲಿ ರಚಿತಗೊಂಡಿರುವ ಅಲ್ಲಿ ಸೇರಿರುವ ಎಲ್ಲ ಕಪೀಂದ್ರರ ಸೇನೆಗಳೊಂದಿಗೆ ಹೊರಟನು.

03267016a ಮುಖಮಾಸೀತ್ತು ಸೈನ್ಯಸ್ಯ ಹನೂಮಾನ್ಮಾರುತಾತ್ಮಜಃ।
03267016c ಜಘನಂ ಪಾಲಯಾಮಾಸ ಸೌಮಿತ್ರಿರಕುತೋಭಯಃ।।

ಆ ಸೇನೆಯ ಮುಂದೆ ಮಾರುತಾತ್ಮಜ ಹನೂಮಂತನಿದ್ದನು; ಸ್ವಲ್ಪವೂ ಭಯವಿಲ್ಲದ ಸೌಮಿತ್ರಿಯು ಅದರ ಹಿಂಬಾಗವನ್ನು ರಕ್ಷಿಸುತ್ತಿದ್ದನು.

03267017a ಬದ್ಧಗೋಧಾಂಗುಲಿತ್ರಾಣೌ ರಾಘವೌ ತತ್ರ ರೇಜತುಃ।
03267017c ವೃತೌ ಹರಿಮಹಾಮಾತ್ರೈಶ್ಚಂದ್ರಸೂರ್ಯೌ ಗ್ರಹೈರಿವ।।

ಗೋಧಾಂಗುಲಿಗಳನ್ನು ಕಟ್ಟಿದ ಆ ರಾಘವರಿಬ್ಬರೂ ಮಹಾಮಾತ್ರರಾದ ಕಪಿಗಳ ಮಧ್ಯದಲ್ಲಿ ಗ್ರಹಗಳ ಮಧ್ಯೆ ಚಂದ್ರ-ಸೂರ್ಯರಂತೆ ಶೋಭಿಸಿದರು.

03267018a ಪ್ರಬಭೌ ಹರಿಸೈನ್ಯಂ ತಚ್ಚಾಲತಾಲಶಿಲಾಯುಧಂ।
03267018c ಸುಮಹಚ್ಚಾಲಿಭವನಂ ಯಥಾ ಸೂರ್ಯೋದಯಂ ಪ್ರತಿ।।

ಶಾಲ, ತಾಲ, ಶಿಲಾಯುಧಗಳನ್ನು ಹಿಡಿದು ಹೋಗುತ್ತಿರುವ ಆ ಕಪಿಸೇನೆಯು ಸೂರ್ಯೋದಯದಲ್ಲಿ ವಿಸ್ತಾರವಾದ ಭತ್ತದ ಗದ್ದೆಯಂತೆ ತೋರುತ್ತಿತ್ತು.

03267019a ನಲನೀಲಾಂಗದಕ್ರಾಥಮೈಂದದ್ವಿವಿದಪಾಲಿತಾ।
03267019c ಯಯೌ ಸುಮಹತೀ ಸೇನಾ ರಾಘವಸ್ಯಾರ್ಥಸಿದ್ಧಯೇ।।

ಅನಲ, ನೀಲ, ಅಂಗದ, ಕ್ರಾಥ, ಮೈಂದ, ದ್ವಿವಿದರಿಂದ ಪಾಲಿತ ಆ ಅತಿದೊಡ್ಡ ಸೇನೆಯು ರಾಘವನ ಕಾರ್ಯಸಿದ್ಧಿಗಾಗಿ ಹೊರಟಿತು.

03267020a ವಿಧಿವತ್ಸುಪ್ರಶಸ್ತೇಷು ಬಹುಮೂಲಫಲೇಷು ಚ।
03267020c ಪ್ರಭೂತಮಧುಮಾಂಸೇಷು ವಾರಿಮತ್ಸು ಶಿವೇಷು ಚ।।
03267021a ನಿವಸಂತೀ ನಿರಾಬಾಧಾ ತಥೈವ ಗಿರಿಸಾನುಷು।
03267021c ಉಪಾಯಾದ್ಧರಿಸೇನಾ ಸಾ ಕ್ಷಾರೋದಮಥ ಸಾಗರಂ।।

ಬಹುಮೂಲಫಲಗಳನ್ನುಳ್ಳ, ಮಧುಮಾಂಸಗಳು ಹೇರಳವಾಗಿದ್ದ, ಶುದ್ಧ ನೀರಿದ್ದ ಸುಂದರ ಪ್ರದೇಶಗಳನ್ನು ದಾಟಿ, ಅಲ್ಲಲ್ಲಿ ಗಿರಿಕಂದರಗಳಲ್ಲಿ ನಿರಾಬಾಧರಾಗಿ ಬೀಡುಬಿಡುತ್ತಾ, ಆ ಕಪಿಸೇನೆಯು ಉಪಾಯದಂತೆ ಉಪ್ಪಿನನೀರಿನ ಸಾಗರದಂಚಿಗೆ ಬಂದಿತು.

03267022a ದ್ವಿತೀಯಸಾಗರನಿಭಂ ತದ್ಬಲಂ ಬಹುಲಧ್ವಜಂ।
03267022c ವೇಲಾವನಂ ಸಮಾಸಾದ್ಯ ನಿವಾಸಮಕರೋತ್ತದಾ।।

ಎರಡನೆಯ ಸಾಗರವೋ ಎಂಬಂತಿದ್ದ ಆ ಬಹುಧ್ವಜಗಳ ಬಲವು ತೀರದಲ್ಲಿದ್ದ ವನದಲ್ಲಿ ಬೀಡುಬಿಟ್ಟಿತು.

03267023a ತತೋ ದಾಶರಥಿಃ ಶ್ರೀಮಾನ್ಸುಗ್ರೀವಂ ಪ್ರತ್ಯಭಾಷತ।
03267023c ಮಧ್ಯೇ ವಾನರಮುಖ್ಯಾನಾಂ ಪ್ರಾಪ್ತಕಾಲಮಿದಂ ವಚಃ।।

ಅನಂತರ ಶ್ರೀಮಾನ್ ದಾಶರಥಿಯು ಮಾನರಮುಖ್ಯರ ಮಧ್ಯದಲ್ಲಿ ಸುಗ್ರೀವನಿಗೆ ಕಾಲಕ್ಕೆ ತಕ್ಕಂತಹ ಈ ಮಾತುಗಳನ್ನಾಡಿದನು.

03267024a ಉಪಾಯಃ ಕೋ ನು ಭವತಾಂ ಮತಃ ಸಾಗರಲಂಘನೇ।
03267024c ಇಯಂ ಚ ಮಹತೀ ಸೇನಾ ಸಾಗರಶ್ಚಾಪಿ ದುಸ್ತರಃ।।

“ಈ ಸಾಗರವನ್ನು ಲಂಘಿಸುವ ಏನಾದರೂ ಉಪಾಯವು ನಿಮ್ಮಲ್ಲಿ ಇದೆಯೇ? ಈ ಸೇನೆಯಾದರೋ ಅತೀ ದೊಡ್ಡದು. ಸಾಗರವೂ ಕೂಡ ದುಸ್ತರವಾಗಿದೆ.”

03267025a ತತ್ರಾನ್ಯೇ ವ್ಯಾಹರಂತಿ ಸ್ಮ ವಾನರಾಃ ಪಟುಮಾನಿನಃ।
03267025c ಸಮರ್ಥಾ ಲಂಘನೇ ಸಿಂಧೋರ್ನ ತು ಕೃತ್ಸ್ನಸ್ಯ ವಾನರಾಃ।।

ಅಲ್ಲಿ ತೀವ್ರಬುದ್ಧಿಯ ಕೆಲವು ವಾನರರು ಹೇಳಿದರು: “ವಾನರರು ಈ ಸಾಗರದ ವಿಸ್ತಿರ್ಣವನ್ನು ಲಂಘಿಸಲು ಅಸಮರ್ಥರು.”

03267026a ಕೇ ಚಿನ್ನೌಭಿರ್ವ್ಯವಸ್ಯಂತಿ ಕೇಚೀಚ್ಚ ವಿವಿಧೈಃ ಪ್ಲವೈಃ।
03267026c ನೇತಿ ರಾಮಶ್ಚ ತಾನ್ಸರ್ವಾನ್ಸಾಂತ್ವಯನ್ಪ್ರತ್ಯಭಾಷತ।।

ಕೆಲವರು ದೋಣಿಗಳ ಕುರಿತು ಯೋಚಿಸಿದರೆ ಕೆಲವರು ವಿವಿಧ ರೀತಿಯ ಹಾರುವಿಕೆಯು ಬಗ್ಗೆ ಸೂಚಿಸಿದರು. ರಾಮನು ಆ ಎಲ್ಲರನ್ನೂ ಸಂತವಿಸಿ “ಅಲ್ಲ” ಎಂದು ಉತ್ತರಿಸಿದನು.

03267027a ಶತಯೋಜನವಿಸ್ತಾರಂ ನ ಶಕ್ತಾಃ ಸರ್ವವಾನರಾಃ।
03267027c ಕ್ರಾಂತುಂ ತೋಯನಿಧಿಂ ವೀರಾ ನೈಷಾ ವೋ ನೈಷ್ಠಿಕೀ ಮತಿಃ।।

“ವೀರರೇ! ಎಲ್ಲ ವಾನರರೂ ನೂರುಯೋಜನ ವಿಸ್ತೀರ್ಣವನ್ನು ದಾಟಲು ಶಕ್ತರಿಲ್ಲ. ಇದು ನಿಮ್ಮ ಅಂತಿಮ ನಿರ್ಧಾರವಲ್ಲ.

03267028a ನಾವೋ ನ ಸಂತಿ ಸೇನಾಯಾ ಬಹ್ವ್ಯಸ್ತಾರಯಿತುಂ ತಥಾ।
03267028c ವಣಿಜಾಮುಪಘಾತಂ ಚ ಕಥಮಸ್ಮದ್ವಿಧಶ್ಚರೇತ್।।

ಈ ಮಹಾಸೇನೆಯನ್ನು ದಾಟಿಸಲು ಬೇಕಾಗುವಷ್ಟು ದೋಣಿಗಳಿಲ್ಲ. ಅಲ್ಲದೇ ನಮ್ಮಂಥವರು ಏಕೆ ವಣಿಜರಿಗೆ ಉಪಘಾತವೆಸಗಬೇಕು?

03267029a ವಿಸ್ತೀರ್ಣಂ ಚೈವ ನಃ ಸೈನ್ಯಂ ಹನ್ಯಾಚ್ಚಿದ್ರೇಷು ವೈ ಪರಃ।
03267029c ಪ್ಲವೋಡುಪಪ್ರತಾರಶ್ಚ ನೈವಾತ್ರ ಮಮ ರೋಚತೇ।।

ವಿಸ್ತೀರ್ಣವಾದ ಈ ಸೇನೆಯು ಭಾಗವಾದರೆ ಶತ್ರುವು ಆಕ್ರಮಣ ಮಾಡಬಲ್ಲನು. ಹಾರಿಹೋಗುವುದರಿಂದಾಗಲೀ ಅಥವಾ ತೆಪ್ಪಗಳ ಮೇಲೆ ಹೋಗಿ ಇದನ್ನು ದಾಟಲಾರೆವು ಎಂದು ನನಗನ್ನಿಸುತ್ತದೆ.

03267030a ಅಹಂ ತ್ವಿಮಂ ಜಲನಿಧಿಂ ಸಮಾರಪ್ಸ್ಯಾಮ್ಯುಪಾಯತಃ।
03267030c ಪ್ರತಿಶೇಷ್ಯಾಮ್ಯುಪವಸನ್ದರ್ಶಯಿಷ್ಯತಿ ಮಾಂ ತತಃ।।

ನಾನು ಈ ಜಲನಿಧಿಯನ್ನು ಬಾಣಗಳಿಂದ ಹೊಡೆದು ನೀರನ್ನು ಹಿಂದೆಸರಿಸುತ್ತೇನೆ. ಆಗ ಕೆಳಗೆ ವಾಸಿಸುವವನು ನನಗೆ ಕಾಣಿಸಿಕೊಳ್ಳುತ್ತಾನೆ.

03267031a ನ ಚೇದ್ದರ್ಶಯಿತಾ ಮಾರ್ಗಂ ಧಕ್ಷ್ಯಾಮ್ಯೇನಮಹಂ ತತಃ।
03267031c ಮಹಾಸ್ತ್ರೈರಪ್ರತಿಹತೈರತ್ಯಗ್ನಿಪವನೋಜ್ಜ್ವಲೈಃ।।

ಒಂದುವೇಳೆ ಅವನು ನನಗೆ ಮಾರ್ಗವನ್ನು ತೋರಿಸದೇ ಇದ್ದರೆ, ಅಗ್ನಿ-ವಾಯುಗಳನ್ನು ಕಾರುವ ಮಹಾಸ್ತ್ರಗಳಿಂದ ಇದನ್ನು ಸುಡುತ್ತೇನೆ.”

03267032a ಇತ್ಯುಕ್ತ್ವಾ ಸಹಸೌಮಿತ್ರಿರುಪಸ್ಪೃಶ್ಯಾಥ ರಾಘವಃ।
03267032c ಪ್ರತಿಶಿಶ್ಯೇ ಜಲನಿಧಿಂ ವಿಧಿವತ್ಕುಶಸಂಸ್ತರೇ।।

ಹೀಗೆ ಹೇಳಿ ರಾಘವನು ಸೌಮಿತ್ರಿಯೊಡನೆ ವಿಧಿವತ್ತಾಗಿ ನೀರನ್ನು ಮುಟ್ಟಿ, ಕುಶವನ್ನು ಹರಡಿ, ಜಲನಿಧಿಯನ್ನು ಹಿಂದೆ ಸರಿಸಿದನು.

03267033a ಸಾಗರಸ್ತು ತತಃ ಸ್ವಪ್ನೇ ದರ್ಶಯಾಮಾಸ ರಾಘವಂ।
03267033c ದೇವೋ ನದನದೀಭರ್ತಾ ಶ್ರೀಮಾನ್ಯಾದೋಗಣೈರ್ವೃತಃ।।

ಆಗ ನದನದಿಗಳ ಪತಿ, ದೇವ, ಶ್ರೀಮಾನ್ ಸಗರನಾದರೋ ನೀರಿನ ಗಣಗಳಿಂದ ಆವೃತನಾಗಿ ರಾಘವನ ಸ್ವಪ್ನದಲ್ಲಿ ಕಾಣಿಸಿಕೊಂಡನು.

03267034a ಕೌಸಲ್ಯಾಮಾತರಿತ್ಯೇವಮಾಭಾಷ್ಯ ಮಧುರಂ ವಚಃ।
03267034c ಇದಮಿತ್ಯಾಹ ರತ್ನಾನಾಮಾಕರೈಃ ಶತಶೋ ವೃತಃ।।

“ಕೌಸಲ್ಯೆಯ ಮಗನೇ” ಎಂದು ಕರೆದು ಮಧುರ ಮಾತಿನಲ್ಲಿ ನೂರಾರು ರತ್ನಾಕರರೊಂದಿಗೆ ಆವೃತನಾದ ಅವನು ಹೀಗೆ ಹೇಳಿದನು:

03267035a ಬ್ರೂಹಿ ಕಿಂ ತೇ ಕರೋಮ್ಯತ್ರ ಸಾಹಾಯ್ಯಂ ಪುರುಷರ್ಷಭ।
03267035c ಇಕ್ಷ್ವಾಕುರಸ್ಮಿ ತೇ ಜ್ಞಾತಿರಿತಿ ರಾಮಸ್ತಮಬ್ರವೀತ್।।

“ಪುರುಷರ್ಷಭ! ನಿನಗೆ ನಾನು ಹೇಗೆ ಸಹಾಯ ಮಾಡಲಿ ಹೇಳು.” ರಾಮನು ಉತ್ತರಿಸಿದನು: “ನಾನು ಇಕ್ಷ್ವಾಕು, ನಿನ್ನ ಕುಲದವನು.

03267036a ಮಾರ್ಗಮಿಚ್ಚಾಮಿ ಸೈನ್ಯಸ್ಯ ದತ್ತಂ ನದನದೀಪತೇ।
03267036c ಯೇನ ಗತ್ವಾ ದಶಗ್ರೀವಂ ಹನ್ಯಾಂ ಪೌಲಸ್ತ್ಯಪಾಂಸನಂ।।

ನದನದೀಪತೇ! ನನ್ನ ಸೈನ್ಯಕ್ಕೆ ಮಾರ್ಗವನ್ನು ಮಾಡಿಕೊಡಬೇಕೆಂದು ಬಯಸುತ್ತೇನೆ. ಹೀಗೆ ಹೋಗಿ ನಾನು ಪೌಲಸ್ತ್ಯರ ಪಾಪಿ ದಶಗ್ರೀವನನ್ನು ಸಂಹರಿಸಬಲ್ಲೆ.

03267037a ಯದ್ಯೇವಂ ಯಾಚತೋ ಮಾರ್ಗಂ ನ ಪ್ರದಾಸ್ಯತಿ ಮೇ ಭವಾನ್।
03267037c ಶರೈಸ್ತ್ವಾಂ ಶೋಷಯಿಷ್ಯಾಮಿ ದಿವ್ಯಾಸ್ತ್ರಪ್ರತಿಮಂತ್ರಿತೈಃ।।

ಒಂದುವೇಳೆ ಯಾಚಿಸಿದ ಮಾರ್ಗವನ್ನು ನೀನು ನನಗೆ ನೀಡದಿದ್ದರೆ, ಪ್ರತಿಮಂತ್ರಿಸಿದ ದ್ವಿವ್ಯಾಸ್ತ್ರ ಬಾಣಗಳಿಂದ ನಿನ್ನನ್ನು ಒಣಗಿಸುತ್ತೇನೆ.”

03267038a ಇತ್ಯೇವಂ ಬ್ರುವತಃ ಶ್ರುತ್ವಾ ರಾಮಸ್ಯ ವರುಣಾಲಯಃ।
03267038c ಉವಾಚ ವ್ಯಥಿತೋ ವಾಕ್ಯಮಿತಿ ಬದ್ಧಾಂಜಲಿಃ ಸ್ಥಿತಃ।।

ಹೀಗೆ ಹೇಳುತ್ತಿರುವ ರಾಮನನ್ನು ಕೇಳಿದ ವರುಣಾಲಯನು ವ್ಯಥಿತನಾಗಿ, ಕೈಮುಗಿದು ನಿಂತು ಈ ಮಾತುಗಳನ್ನಾಡಿದನು:

03267039a ನೇಚ್ಚಾಮಿ ಪ್ರತಿಘಾತಂ ತೇ ನಾಸ್ಮಿ ವಿಘ್ನಕರಸ್ತವ।
03267039c ಶೃಣು ಚೇದಂ ವಚೋ ರಾಮ ಶ್ರುತ್ವಾ ಕರ್ತವ್ಯಮಾಚರ।।

“ನಾನು ನಿನ್ನನ್ನು ತಡೆಯಲು ಬಯಸುವುದಿಲ್ಲ. ನಿನಗೆ ವಿಘ್ನವನ್ನುಂಟುಮಾಡುವುದಿಲ್ಲ. ರಾಮ! ನಾನು ಹೇಳುವ ಈ ಮಾತುಗಳನ್ನು ಕೇಳಿ ಮಾಡಬೇಕಾದುದನ್ನು ಮಾಡು.

03267040a ಯದಿ ದಾಸ್ಯಾಮಿ ತೇ ಮಾರ್ಗಂ ಸೈನ್ಯಸ್ಯ ವ್ರಜತೋಽಜ್ಞಯಾ।
03267040c ಅನ್ಯೇಽಪ್ಯಾಜ್ಞಾಪಯಿಷ್ಯಂತಿ ಮಾಮೇವಂ ಧನುಷೋ ಬಲಾತ್।।

ಒಂದುವೇಳೆ ಮುಂದೆ ಸಾಗಲು ಕಾದಿರುವ ನಿನ್ನ ಸೇನೆಗೆ ನಿನ್ನ ಆಜ್ಞೆಯಂತೆ ದಾರಿಯನ್ನು ಕೊಟ್ಟರೆ ಅನ್ಯರೂ ಕೂಡ ಧನುಸ್ಸಿನ ಬಲದಿಂದ ನನಗೆ ಆಜ್ಞಾಪಿಸುತ್ತಾರೆ.

03267041a ಅಸ್ತಿ ತ್ವತ್ರ ನಲೋ ನಾಮ ವಾನರಃ ಶಿಲ್ಪಿಸಮ್ಮತಃ।
03267041c ತ್ವಷ್ಟುರ್ದೇವಸ್ಯ ತನಯೋ ಬಲವಾನ್ವಿಶ್ವಕರ್ಮಣಃ।।

ನಿನ್ನಲ್ಲಿ ಶಿಲ್ಪಿಗಳಿಂದ ಗೌರವಿಸಲ್ಪಟ್ಟ, ದೇವಶಿಲ್ಪಿ ಬಲವಾನ್ ವಿಶ್ವಕರ್ಮನ ಮಗ ನಲ ಎಂಬ ಹೆಸರಿನ ವಾನರನಿದ್ದಾನೆ.

03267042a ಸ ಯತ್ಕಾಷ್ಠಂ ತೃಣಂ ವಾಪಿ ಶಿಲಾಂ ವಾ ಕ್ಷೇಪ್ಸ್ಯತೇ ಮಯಿ।
03267042c ಸರ್ವಂ ತದ್ಧಾರಯಿಷ್ಯಾಮಿ ಸ ತೇ ಸೇತುರ್ಭವಿಷ್ಯತಿ।।

ಅವನು ಕಡ್ಡಿಯನ್ನಾಗಲೀ, ಹುಲ್ಲನ್ನಾಗಲೀ ಅಥವಾ ಕಲ್ಲನ್ನಾಗಲೀ ನನ್ನಲ್ಲಿ ಎಸೆದರೆ ಅವೆಲ್ಲವನ್ನೂ ನಾನು ತೇಲಿಸುತ್ತೇನೆ. ಅದು ನಿನಗೆ ಸೇತುವೆಯಾಗುತ್ತದೆ.”

03267043a ಇತ್ಯುಕ್ತ್ವಾಂತರ್ಹಿತೇ ತಸ್ಮಿನ್ರಾಮೋ ನಲಮುವಾಚ ಹ।
03267043c ಕುರು ಸೇತುಂ ಸಮುದ್ರೇ ತ್ವಂ ಶಕ್ತೋ ಹ್ಯಸಿ ಮತೋ ಮಮ।।

ಹೀಗೆ ಹೇಳಿ ಅವನು ಅಂತರ್ಧಾನನಾಗಲು ರಾಮನು ನಲನಿಗೆ ಹೇಳಿದನು: “ಸಮುದ್ರದಲ್ಲಿ ಸೇತುವೆಯನ್ನು ಕಟ್ಟು. ನೀನು ಇದರಲ್ಲಿ ಶಕ್ತ ಎಂದು ನನ್ನ ಮತ.”

03267044a ತೇನೋಪಾಯೇನ ಕಾಕುತ್ಸ್ಥಃ ಸೇತುಬಂಧಮಕಾರಯತ್।
03267044c ದಶಯೋಜನವಿಸ್ತಾರಮಾಯತಂ ಶತಯೋಜನಂ।।

ಈ ಉಪಾಯದಿಂದ ಕಾಕುತ್ಸ್ಥನು ಹತ್ತು ಯೋಜನೆ ಅಗಲದ ನೂರು ಯೋಜನೆ ಉದ್ದದ ಸೇತುವೆಯನ್ನು ಕಟ್ಟಿಸಿದನು.

03267045a ನಲಸೇತುರಿತಿ ಖ್ಯಾತೋ ಯೋಽದ್ಯಾಪಿ ಪ್ರಥಿತೋ ಭುವಿ।
03267045c ರಾಮಸ್ಯಾಜ್ಞಾಂ ಪುರಸ್ಕೃತ್ಯ ಧಾರ್ಯತೇ ಗಿರಿಸನ್ನಿಭಃ।।

ನಲಸೇತುವೆಂದು ಕರೆಯಲ್ಪಡುವ ಅದು ರಾಮನ ಆಜ್ಞೆಯಂತೆ ಗಿರಿಯಂತೆ ಈಗಲೂ ನಿಂತಿದ್ದು, ಭುವಿಯಲ್ಲಿ ಪ್ರಸಿದ್ಧವಾಗಿದೆ.

03267046a ತತ್ರಸ್ಥಂ ಸ ತು ಧರ್ಮಾತ್ಮಾ ಸಮಾಗಚ್ಚದ್ವಿಭೀಷಣಃ।
03267046c ಭ್ರಾತಾ ವೈ ರಾಕ್ಷಸೇಂದ್ರಸ್ಯ ಚತುರ್ಭಿಃ ಸಚಿವೈಃ ಸಹ।।

ಅಲ್ಲಿಯೇ ರಾಕ್ಷಸೇಂದ್ರನ ತಮ್ಮ ಧರ್ಮಾತ್ಮ ವಿಭೀಷಣನು ತನ್ನ ನಾಲ್ವರು ಸಚಿವರೊಂದಿಗೆ ಬಂದು ಸೇರಿದನು.

03267047a ಪ್ರತಿಜಗ್ರಾಹ ರಾಮಸ್ತಂ ಸ್ವಾಗತೇನ ಮಹಾಮನಾಃ।
03267047c ಸುಗ್ರೀವಸ್ಯ ತು ಶಮ್ಕಾಭೂತ್ಪ್ರಣಿಧಿಃ ಸ್ಯಾದಿತಿ ಸ್ಮ ಹ।।

ಮಹಾಮನಸ್ವಿ ರಾಮನು ಅವನನ್ನು ಸ್ವಾಗತಿಸಿ ಸ್ವೀಕರಿಸಿದನು. ಅವನು ಗೂಢಚರನಿರಬಹುದೆಂದು ಸುಗ್ರೀವನು ಶಂಕಿಸಿದನು.

03267048a ರಾಘವಸ್ತಸ್ಯ ಚೇಷ್ಟಾಭಿಃ ಸಮ್ಯಕ್ಚ ಚರಿತೇಂಗಿತೈಃ।
03267048c ಯದಾ ತತ್ತ್ವೇನ ತುಷ್ಟೋಽಭೂತ್ತತ ಏನಮಪೂಜಯತ್।।

ರಾಘವನಾದರೋ ಅವನ ಚೇಷ್ಟೆ, ಚರಿತ ಮತ್ತು ಇಂಗಿತಗಳನ್ನು ಚೆನ್ನಾಗಿ ಪರೀಕ್ಷಿಸಿ ತೃಪ್ತನಾಗಿ ಅವನನ್ನು ಸತ್ಕರಿಸಿದನು.

03267049a ಸರ್ವರಾಕ್ಷಸರಾಜ್ಯೇ ಚಾಪ್ಯಭ್ಯಷಿಂಚದ್ವಿಭೀಷಣಂ।
03267049c ಚಕ್ರೇ ಚ ಮಂತ್ರಾನುಚರಂ ಸುಹೃದಂ ಲಕ್ಷ್ಮಣಸ್ಯ ಚ।।

ವಿಭೀಷಣನನ್ನು ಸರ್ವ ರಾಕ್ಷಸರ ರಾಜನನ್ನಾಗಿ ಅಭಿಷೇಕಿಸಿ ಅವನನ್ನು ಲಕ್ಷ್ಮಣನ ಮಂತ್ರಿ, ಅನುಚರ ಮತ್ತು ಸ್ನೇಹಿತನನ್ನಾಗಿ ಮಾಡಿದನು.

03267050a ವಿಭೀಷಣಮತೇ ಚೈವ ಸೋಽತ್ಯಕ್ರಾಮನ್ಮಹಾರ್ಣವಂ।
03267050c ಸಸೈನ್ಯಃ ಸೇತುನಾ ತೇನ ಮಾಸೇನೈವ ನರಾಧಿಪ।।

ನರಾಧಿಪ! ವಿಭೀಷಣನ ಸಲಹೆಯಂತಲೂ ಅವನು ಸೇತುವೆಯ ಮೂಲಕ ಒಂದು ತಿಂಗಳ ಅವಧಿಯಲ್ಲಿ ಸೈನ್ಯದೊಂದಿಗೆ ಆ ಮಹಾರ್ಣವವನ್ನು ದಾಟಿದನು.

03267051a ತತೋ ಗತ್ವಾ ಸಮಾಸಾದ್ಯ ಲಂಕೋದ್ಯಾನಾನ್ಯನೇಕಶಃ।
03267051c ಭೇದಯಾಮಾಸ ಕಪಿಭಿರ್ಮಹಾಂತಿ ಚ ಬಹೂನಿ ಚ।।

ಅಲ್ಲಿ ಹೋಗಿ ಒಂದಾಗಿ ಬಹುಸಂಖ್ಯೆಗಳಲ್ಲಿದ್ದ ಕಪಿಗಳ ಮೂಲಕ ವಿಸ್ತಾರವಾಗಿದ್ದ ಲಂಕೆಯ ಅನೇಕ ಉದ್ಯಾನಗಳನ್ನು ಧ್ವಂಸಮಾಡಿಸಿದನು.

03267052a ತತ್ರಾಸ್ತಾಂ ರಾವಣಾಮಾತ್ಯೌ ರಾಕ್ಷಸೌ ಶುಕಸಾರಣೌ।
03267052c ಚಾರೌ ವಾನರರೂಪೇಣ ತೌ ಜಗ್ರಾಹ ವಿಭೀಷಣಃ।।

ಅಲ್ಲಿ ವಾನರರೂಪದಲ್ಲಿದ್ದ ರಾವಣನ ಇಬ್ಬರು ಚಾರ ರಾಕ್ಷಸ ಶುಕ ಮತ್ತು ಸಾರಣರನ್ನು ವಿಭೀಷಣನು ಹಿಡಿದನು.

03267053a ಪ್ರತಿಪನ್ನೌ ಯದಾ ರೂಪಂ ರಾಕ್ಷಸಂ ತೌ ನಿಶಾಚರೌ।
03267053c ದರ್ಶಯಿತ್ವಾ ತತಃ ಸೈನ್ಯಂ ರಾಮಃ ಪಶ್ಚಾದವಾಸೃಜತ್।।

ಆ ನಿಶಾಚರರು ತಮ್ಮ ರಾಕ್ಷಸರೂಪವನ್ನು ತಳೆದಾಗ ರಾಮನು ಅವರನ್ನು ತನ್ನ ಸೇನೆಗೆ ತೋರಿಸಿ, ನಂತರ ಬಿಡುಗಡೆಮಾಡಿದನು.

03267054a ನಿವೇಶ್ಯೋಪವನೇ ಸೈನ್ಯಂ ತಚ್ಚೂರಃ ಪ್ರಾಜ್ಞವಾನರಂ।
03267054c ಪ್ರೇಷಯಾಮಾಸ ದೌತ್ಯೇನ ರಾವಣಸ್ಯ ತತೋಽಂಗದಂ।।

ಉಪವನದಲ್ಲಿ ಸೇನೆಯನ್ನು ಬೀಡುಬಿಟ್ಟು ಆ ಶೂರನು ಪ್ರಾಜ್ಞ ವಾನರ ಅಂಗದನನ್ನು ತನ್ನ ದೂತನಾಗಿ ರಾವಣನಲ್ಲಿಗೆ ಕಳುಹಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಸೇತುಬಂಧನೇ ಸಪ್ತಷಷ್ಟ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಸೇತುಬಂಧನದಲ್ಲಿ ಇನ್ನೂರಾಅರವತ್ತೇಳನೆಯ ಅಧ್ಯಾಯವು.