266 ರಾಮೋಪಾಖ್ಯಾನೇ ಹನುಮಪ್ರತ್ಯಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 266

ಸಾರ

ಚಾತುರ್ಮಾಸವು ಮುಗಿದರೂ ಸುಗ್ರೀವನು ಸೀತೆಯನ್ನು ಹುಡುಕುವೆನೆಂಬ ತನ್ನ ಪ್ರತಿಜ್ಞೆಯಂತೆ ನಡೆದುಕೊಳ್ಳಲಿಲ್ಲವೆಂದು ಕೋಪಗೊಂಡ ರಾಮನು ಲಕ್ಷ್ಮಣನನ್ನು ಅವನಲ್ಲಿಗೆ ಕಳುಹಿಸಿದ್ದುದು (1-11). ಸೀತೆಯನ್ನು ಹುಡುಕಲು ಎಲ್ಲ ದಿಕ್ಕುಗಳಿಗೂ ವಾನರರನ್ನು ಕಳುಹಿಸಿಯಾಗಿದೆಯೆಂದು ಹೇಳಿದುದು; ದಕ್ಷಿಣದಿಕ್ಕಿಗೆ ಹೋದವರನ್ನು ಬಿಟ್ಟು ಬೇರೆ ಎಲ್ಲರೂ ಬಂದು ಸೀತೆಯು ಕಾಣದ ವರದಿ ನೀಡಿದುದು (12-24). ಸೀತೆಯನ್ನು ನೋಡಿದೆನೆಂದು ಹನುಮಂತನು ರಾಮನಿಗೆ ಹೇಳುವುದು (25-26). ಹನುಮಂತನು ತಾನು ಸೀತೆಯನ್ನು ಹೇಗೆ ಕಂಡನೆಂದು ಸಂಪೂರ್ಣವಾಗಿ ರಾಮನಿಗೆ ವರದಿ ಮಾಡಿದುದು; ರಾಮನು ಅವನನ್ನು ಸತ್ಕರಿಸಿದುದು (37-68).

03266001 ಮಾರ್ಕಂಡೇಯ ಉವಾಚ।
03266001a ರಾಘವಸ್ತು ಸಸೌಮಿತ್ರಿಃ ಸುಗ್ರೀವೇಣಾಭಿಪಾಲಿತಃ।
03266001c ವಸನ್ ಮಾಲ್ಯವತಃ ಪೃಷ್ಠೇ ದದರ್ಶ ವಿಮಲಂ ನಭಃ।।

ಮಾರ್ಕಂಡೇಯನು ಹೇಳಿದನು: “ಸುಗ್ರೀವನ ರಕ್ಷಣೆಯಲ್ಲಿ ಸೌಮಿತ್ರಿಯೊಡನೆ ಮಾಲ್ಯವತ ಶಿಖರದಲ್ಲಿ ಚಾತುರ್ಮಾಸಗಳನ್ನು ಕಳೆದ ರಾಘವನು ಮೋಡವಿಲ್ಲದ ಆಗಸವನ್ನು ನೋಡಿದನು.

03266002a ಸ ದೃಷ್ಟ್ವಾ ವಿಮಲೇ ವ್ಯೋಮ್ನಿ ನಿರ್ಮಲಂ ಶಶಲಕ್ಷಣಂ।
03266002c ಗ್ರಹನಕ್ಷತ್ರತಾರಾಭಿರನುಯಾತಮಮಿತ್ರಹಾ।।

ಆ ಅಮಿತ್ರಹನು ವಿಮಲ ವ್ಯೋಮಿಯಲ್ಲಿ ಗ್ರಹ, ನಕ್ಷತ್ರ ತಾರೆಗಳಿಂದ ಹಿಂಬಾಲಿಸಿಕೊಂಡು ಹೋಗುತ್ತಿದ್ದ ನಿರ್ಮಲ ಶಶಿಯನ್ನು ಕಂಡನು.

03266003a ಕುಮುದೋತ್ಪಲಪದ್ಮಾನಾಂ ಗಂಧಮಾದಾಯ ವಾಯುನಾ।
03266003c ಮಹೀಧರಸ್ಥಃ ಶೀತೇನ ಸಹಸಾ ಪ್ರತಿಬೋಧಿತಃ।।

ಗಾಳಿಯ ಹೊತ್ತು ತಂದ ಅರಳಿದ ಕುಮುದ ಮತ್ತು ಕವಲಗಳ ಸುವಾಸನೆಯನ್ನು ಮೂಸಿದನು ಮತ್ತು ಆ ಪರ್ವತಮೇಲಿದ್ದ ಅವನು ತಕ್ಷಣವೇ ಪ್ರಚೋದಿತನಾದನು.

03266004a ಪ್ರಭಾತೇ ಲಕ್ಷ್ಮಣಂ ವೀರಮಭ್ಯಭಾಷತ ದುರ್ಮನಾಃ।
03266004c ಸೀತಾಂ ಸಂಸ್ಮೃತ್ಯ ಧರ್ಮಾತ್ಮಾ ರುದ್ಧಾಂ ರಾಕ್ಷಸವೇಶ್ಮನಿ।।

ಬೆಳಿಗ್ಗೆ ಧರ್ಮಾತ್ಮನು ರಾಕ್ಷಸನ ಮನೆಯಲ್ಲಿ ಸೀತೆಯು ಬಂಧಿಯಾಗಿರುವುದನ್ನು ನೆನಪಿಸಿಕೊಂಡು ಮನಸ್ಸು ಕೆಟ್ಟುಹೋಗಿ ವೀರ ಲಕ್ಷ್ಮಣನಿಗೆ ಹೇಳಿದನು:

03266005a ಗಚ್ಚ ಲಕ್ಷ್ಮಣ ಜಾನೀಹಿ ಕಿಷ್ಕಿಂಧಾಯಾಂ ಕಪೀಶ್ವರಂ।
03266005c ಪ್ರಮತ್ತಂ ಗ್ರಾಮ್ಯಧರ್ಮೇಷು ಕೃತಘ್ನಂ ಸ್ವಾರ್ಥಪಂಡಿತಂ।।

“ಹೋಗು ಲಕ್ಷ್ಮಣ! ಕಿಷ್ಕಿಂಧೆಯಲ್ಲಿ ಗ್ರಾಮ್ಯಧರ್ಮದಲ್ಲಿ ಪ್ರಮತ್ತನಾಗಿರುವ, ಕೃತಘ್ನ, ಸ್ವಾರ್ಥದ ಕುರಿತೇ ಯೋಚಿಸುತ್ತಿರುವ ಕಪೀಶ್ವರನನ್ನು ತಿಳಿದುಬಾ!

03266006a ಯೋಽಸೌ ಕುಲಾಧಮೋ ಮೂಢೋ ಮಯಾ ರಾಜ್ಯೇಽಭಿಷೇಚಿತಃ।
03266006c ಸರ್ವವಾನರಗೋಪುಚ್ಚಾ ಯಮೃಕ್ಷಾಶ್ಚ ಭಜಂತಿ ವೈ।।
03266007a ಯದರ್ಥಂ ನಿಹತೋ ವಾಲೀ ಮಯಾ ರಘುಕುಲೋದ್ವಹ।
03266007c ತ್ವಯಾ ಸಹ ಮಹಾಬಾಹೋ ಕಿಷ್ಕಿಂಧೋಪವನೇ ತದಾ।।

ಯಾರನ್ನು ನಾನು ಸರ್ವವಾನರರ ಮತ್ತು ಕರಡಿಗಳ ರಾಜನನ್ನಾಗಿ ಅಭಿಷೇಕಿಸಿದೆನೋ ಮತ್ತು ರಘುಕುಲೋದ್ಧಹ! ಮಹಾಬಾಹೋ! ಯಾರಿಗೋಸ್ಕರ ನಾನು ಅಂದು ಕಿಷ್ಕಿಂಧೆಯ ಉಪವನದಲ್ಲಿ ನಿನ್ನ ಜೊತೆಗೂಡಿ ವಾಲಿಯನ್ನು ಸಂಹರಿಸಿದೆನೋ ಅವನು ಕುಲಾಧಮ ಮತ್ತು ಮೂಢ.

03266008a ಕೃತಘ್ನಂ ತಮಹಂ ಮನ್ಯೇ ವಾನರಾಪಸದಂ ಭುವಿ।
03266008c ಯೋ ಮಾಮೇವಂಗತೋ ಮೂಢೋ ನ ಜಾನೀತೇಽದ್ಯ ಲಕ್ಷ್ಮಣ।।

ಲಕ್ಷ್ಮಣ! ಆ ಕೃತಘ್ನನನ್ನು ನಾನು ಭುವಿಯಲ್ಲಿಯೇ ಅತೀ ಕೆಟ್ಟ ವಾನರನೆಂದು ತಿಳಿಯುತ್ತೇನೆ. ಯಾಕೆಂದರೆ ಆ ಮೂಢನು ನನ್ನ ಪರಿಸ್ಥಿತಿಯ ಕುರಿತು ಯೋಚಿಸುತ್ತಲೇ ಇಲ್ಲ.

03266009a ಅಸೌ ಮನ್ಯೇ ನ ಜಾನೀತೇ ಸಮಯಪ್ರತಿಪಾದನಂ।
03266009c ಕೃತೋಪಕಾರಂ ಮಾಂ ನೂನಮವಮನ್ಯಾಲ್ಪಯಾ ಧಿಯಾ।।

ಅವನಿಗೆ ಒಪ್ಪಂದವನ್ನು ಮನ್ನಿಸಿ ನಡೆದುಕೊಳ್ಳುವುದು ಗೊತ್ತಿಲ್ಲವೆಂದು ನನಗನ್ನಿಸುತ್ತದೆ. ಮತ್ತು ಅವನ ಅಲ್ಪ ಬುದ್ಧಿಯಲ್ಲಿ ಉಪಕಾರಮಾಡಿದ ನನ್ನನ್ನು ಕೀಳಾಗಿ ಪರಿಗಣಿಸುತ್ತಿದ್ದಾನೆ.

03266010a ಯದಿ ತಾವದನುದ್ಯುಕ್ತಃ ಶೇತೇ ಕಾಮಸುಖಾತ್ಮಕಃ।
03266010c ನೇತವ್ಯೋ ವಾಲಿಮಾರ್ಗೇಣ ಸರ್ವಭೂತಗತಿಂ ತ್ವಯಾ।।

ಅವನು ಅಲ್ಲಿ ಕಾಮಸುಖದಲ್ಲಿ ತನ್ನನ್ನು ತೊಡಗಿಸಿಕೊಂಡು ಸೋಮಾರಿಯಾಗಿ ಮಲಗಿದ್ದಾನಾದರೆ ಅವನನ್ನು ನೀನು ಎಲ್ಲರೂ ಹೋಗುವ ವಾಲಿಯ ಮಾರ್ಗಕ್ಕೆ ಅಟ್ಟಬೇಕು.

03266011a ಅಥಾಪಿ ಘಟತೇಽಸ್ಮಾಕಮರ್ಥೇ ವಾನರಪುಂಗವಃ।
03266011c ತಮಾದಾಯೈಹಿ ಕಾಕುತ್ಸ್ಥ ತ್ವರಾವಾನ್ಭವ ಮಾ ಚಿರಂ।।

ಕಾಕುತ್ಸ್ಥ! ಈಗಲಾದರೂ ಆ ವಾನರಪುಂಗವನು ನಮ್ಮ ಕಾರ್ಯದಲ್ಲಿ ನಿರತನಾಗಿದ್ದಾನಾದರೆ ಅವನನ್ನು ಇಲ್ಲಿಗೆ ಕರೆದು ತಾ. ತ್ವರೆಮಾಡು. ತಡಮಾಡಬೇಡ.”

03266012a ಇತ್ಯುಕ್ತೋ ಲಕ್ಷ್ಮಣೋ ಭ್ರಾತ್ರಾ ಗುರುವಾಕ್ಯಹಿತೇ ರತಃ।
03266012c ಪ್ರತಸ್ಥೇ ರುಚಿರಂ ಗೃಹ್ಯ ಸಮಾರ್ಗಣಗುಣಂ ಧನುಃ।
03266012e ಕಿಷ್ಕಿಂಧಾದ್ವಾರಮಾಸಾದ್ಯ ಪ್ರವಿವೇಶಾನಿವಾರಿತಃ।।

ಅಣ್ಣನು ಹೀಗೆ ಹೇಳಲು ಹಿರಿಯರ ವಾಕ್ಯಹಿತರತ ಲಕ್ಷ್ಮಣನು ಸುಂದರ ಗುಣಯುಕ್ತ ಮಾರ್ಗಣದಿಂದ ಕೂಡಿದ ಧನುಸ್ಸನ್ನು ಹಿಡಿದು ಕಿಷ್ಕಿಂಧೆಯ ದ್ವಾರವನ್ನು ತಲುಪಿ ಯಾರಿಂದಲೂ ತಡೆಯಲ್ಪಡದೇ ಪ್ರವೇಶಿಸಿದನು.

03266013a ಸಕ್ರೋಧ ಇತಿ ತಂ ಮತ್ವಾ ರಾಜಾ ಪ್ರತ್ಯುದ್ಯಯೌ ಹರಿಃ।
03266013c ತಂ ಸದಾರೋ ವಿನೀತಾತ್ಮಾ ಸುಗ್ರೀವಃ ಪ್ಲವಗಾಧಿಪಃ।
03266013e ಪೂಜಯಾ ಪ್ರತಿಜಗ್ರಾಹ ಪ್ರೀಯಮಾಣಸ್ತದರ್ಹಯಾ।।

ಅವನು ಕುಪಿತನಾಗಿದ್ದಾನೆ ಎಂದು ಪರಿಗಣಿಸಿದ ಕಪಿರಾಜನು ಅವನನ್ನು ಭೇಟಿಯಾಗಲು ಹೊರಬಂದನು. ಕಪಿಗಳ ರಾಜ ಸುಗ್ರೀವನು ತನ್ನ ಸತಿಯೊಡನೆ ವಿನೀತನಾಗಿ ಬಂದು ಪೂಜಿಸಿ ಪ್ರೀತಿಯಿಂದ ಅವನನ್ನು ಬರಮಾಡಿಕೊಂಡನು.

03266014a ತಮಬ್ರವೀದ್ರಾಮವಚಃ ಸೌಮಿತ್ರಿರಕುತೋಭಯಃ।
03266014c ಸ ತತ್ಸರ್ವಮಶೇಷೇಣ ಶ್ರುತ್ವಾ ಪ್ರಹ್ವಃ ಕೃತಾಂಜಲಿಃ।।

ಆಗ ಸೌಮಿತ್ರಿಯು ಸ್ವಲ್ಪವೂ ಭಯಪಡದೇ ಬಗ್ಗಿ, ಅಂಜಲೀ ಬದ್ಧನಾಗಿ ರಾಮನ ಮಾತುಗಳನ್ನು ಸಂಪೂರ್ಣವಾಗಿ ಅವನಿಗೆ ಹೇಳಿದನು.

03266015a ಸಭೃತ್ಯದಾರೋ ರಾಜೇಂದ್ರ ಸುಗ್ರೀವೋ ವಾನರಾಧಿಪಃ।
03266015c ಇದಮಾಹ ವಚಃ ಪ್ರೀತೋ ಲಕ್ಷ್ಮಣಂ ನರಕುಂಜರಂ।।

ರಾಜೇಂದ್ರ! ಸೇವಕರು ಮತ್ತು ಸತಿಯೊಡನೆ ವಾನರಾಧಿಪ ಸುಗ್ರೀವನು ನರಕುಂಜರ ಲಕ್ಷ್ಮಣನಿಗೆ ಪ್ರೀತಿಯ ಈ ಮಾತುಗಳನ್ನು ಹೇಳಿದನು.

03266016a ನಾಸ್ಮಿ ಲಕ್ಷ್ಮಣ ದುರ್ಮೇಧಾ ನ ಕೃತಘ್ನೋ ನ ನಿರ್ಘೃಣಃ।
03266016c ಶ್ರೂಯತಾಂ ಯಃ ಪ್ರಯತ್ನೋ ಮೇ ಸೀತಾಪರ್ಯೇಷಣೇ ಕೃತಃ।।

“ಲಕ್ಷ್ಮಣ! ನಾನು ಕೆಟ್ಟಬುದ್ದಿಯವನೂ ಅಲ್ಲ, ಕೃತಘ್ನನೂ ಅಲ್ಲ ಮತ್ತು ನಿಷ್ಕರುಣಿಯೂ ಅಲ್ಲ. ಸೀತೆಯನ್ನು ಹುಡುಕಲು ಏನೇನು ಪ್ರಯತ್ನಗಳನ್ನು ನಾನು ಮಾಡಿದ್ದೇನೆ ಎನ್ನುವುದನ್ನು ಕೇಳಬೇಕು.

03266017a ದಿಶಃ ಪ್ರಸ್ಥಾಪಿತಾಃ ಸರ್ವೇ ವಿನೀತಾ ಹರಯೋ ಮಯಾ।
03266017c ಸರ್ವೇಷಾಂ ಚ ಕೃತಃ ಕಾಲೋ ಮಾಸೇನಾಗಮನಂ ಪುನಃ।।

ಪರಿಣಿತ ಕಪಿಗಳನ್ನು ನಾನು ಎಲ್ಲ ದಿಕ್ಕುಗಳಲ್ಲಿಯೂ ಕಳುಹಿಸಿದ್ದೇನೆ. ಒಂದು ತಿಂಗಳೊಳಗೆ ನಿರ್ಧಿಷ್ಟ ದಿವಸದಂದು ಎಲ್ಲರೂ ಮರಳಿ ಬರುವವರಿದ್ದಾರೆ.

03266018a ಯೈರಿಯಂ ಸವನಾ ಸಾದ್ರಿಃ ಸಪುರಾ ಸಾಗರಾಂಬರಾ।
03266018c ವಿಚೇತವ್ಯಾ ಮಹೀ ವೀರ ಸಗ್ರಾಮನಗರಾಕರಾ।।

ಅವರೆಲ್ಲರೂ ಈ ಸಾಗರಾಂಬರೆ ಭೂಮಿಯನ್ನು, ಕಾಡುಗಳನ್ನು, ಪರ್ವತಗಳನ್ನು, ನಗರಗಳನ್ನು, ಗ್ರಾಮಗಳನ್ನು, ಪಟ್ಟಣಗಳನ್ನು ಮತ್ತು ಗಣಿಗಳನ್ನು ಸೇರಿ ಎಲ್ಲೆಡೆಯೂ ಹುಡುಕುತ್ತಾರೆ.

03266019a ಸ ಮಾಸಃ ಪಂಚರಾತ್ರೇಣ ಪೂರ್ಣೋ ಭವಿತುಮರ್ಹತಿ।
03266019c ತತಃ ಶ್ರೋಷ್ಯಸಿ ರಾಮೇಣ ಸಹಿತಃ ಸುಮಹತ್ಪ್ರಿಯಂ।।

ಇನ್ನು ಐದು ರಾತ್ರಿಗಳಲ್ಲಿ ತಿಂಗಳು ಪೂರ್ಣವಾಗುತ್ತದೆ. ಆಗ ರಾಮನೊಡನೆ ನಾನು ಮಾಡಿದ ಪ್ರಿಯ ಕಾರ್ಯದ ಕುರಿತು ಕೇಳುತ್ತೀಯೆ.”

03266020a ಇತ್ಯುಕ್ತೋ ಲಕ್ಷ್ಮಣಸ್ತೇನ ವಾನರೇಂದ್ರೇಣ ಧೀಮತಾ।
03266020c ತ್ಯಕ್ತ್ವಾ ರೋಷಮದೀನಾತ್ಮಾ ಸುಗ್ರೀವಂ ಪ್ರತ್ಯಪೂಜಯತ್।।

ಆ ಧೀಮಂತ ವಾನರೇಂದ್ರನು ಹೀಗೆ ಹೇಳಲು ಲಕ್ಷ್ಮಣನು ರೋಷವನ್ನು ಬಿಟ್ಟು ಸುಗ್ರೀವನನ್ನು ಪ್ರತಿಪೂಜಿಸಿದನು.

03266021a ಸ ರಾಮಂ ಸಹಸುಗ್ರೀವೋ ಮಾಲ್ಯವತ್ಪೃಷ್ಠಮಾಸ್ಥಿತಂ।
03266021c ಅಭಿಗಮ್ಯೋದಯಂ ತಸ್ಯ ಕಾರ್ಯಸ್ಯ ಪ್ರತ್ಯವೇದಯತ್।।

ಸುಗ್ರೀವನನ್ನು ಜೊತೆಯಲ್ಲಿ ಕರೆದುಕೊಂಡು ಮಾಲ್ಯಪರ್ವತದ ಮೇಲಿದ್ದ ರಾಮನಲ್ಲಿಗೆ ಹೋಗಿ ಅವನ ಕಾರ್ಯದ ಕುರಿತು ವರದಿಮಾಡಿದನು.

03266022a ಇತ್ಯೇವಂ ವಾನರೇಂದ್ರಾಸ್ತೇ ಸಮಾಜಗ್ಮುಃ ಸಹಸ್ರಶಃ।
03266022c ದಿಶಸ್ತಿಸ್ರೋ ವಿಚಿತ್ಯಾಥ ನ ತು ಯೇ ದಕ್ಷಿಣಾಂ ಗತಾಃ।।

ಮಾತುಕೊಟ್ಟಂತೆ ಮೂರು ದಿಕ್ಕುಗಳಿಂದ ಸಹಸ್ರಾರು ವಾನರೇಂದ್ರರು ಬಂದು ಸೇರಿದರು. ಆದರೆ ದಕ್ಷಿಣಕ್ಕೆ ಹೋದವರು ಬರಲಿಲ್ಲ.

03266023a ಆಚಖ್ಯುಸ್ತೇ ತು ರಾಮಾಯ ಮಹೀಂ ಸಾಗರಮೇಖಲಾಂ।
03266023c ವಿಚಿತಾಂ ನ ತು ವೈದೇಹ್ಯಾ ದರ್ಶನಂ ರಾವಣಸ್ಯ ವಾ।।

ಅವರು ರಾಮನಿಗೆ ಸಾಗರಮೇಖಲೆ ಮಹಿಯನ್ನು ಹುಡುಕಿದರೂ ವೈದೇಹಿಯ ಅಥವಾ ರಾವಣನ ದರ್ಶನವಾಗಲಿಲ್ಲವೆಂದು ಹೇಳಿದರು.

03266024a ಗತಾಸ್ತು ದಕ್ಷಿಣಾಮಾಶಾಂ ಯೇ ವೈ ವಾನರಪುಂಗವಾಃ।
03266024c ಆಶಾವಾಂಸ್ತೇಷು ಕಾಕುತ್ಸ್ಥಃ ಪ್ರಾಣಾನಾರ್ತೋಽಪ್ಯಧಾರಯತ್।।

ದಕ್ಷಿಣಕ್ಕೆ ಹೋಗಿದ್ದ ವಾನರಪುಂಗವರ ಮೇಲೆ ಆಸೆಯನ್ನಿಟ್ಟು ಕಾಕುತ್ಸ್ಥನು ತನ್ನ ಆರ್ತ ಪ್ರಾಣವನ್ನು ಸಹಿಸಿಕೊಂಡಿದ್ದನು.

03266025a ದ್ವಿಮಾಸೋಪರಮೇ ಕಾಲೇ ವ್ಯತೀತೇ ಪ್ಲವಗಾಸ್ತತಃ।
03266025c ಸುಗ್ರೀವಮಭಿಗಮ್ಯೇದಂ ತ್ವರಿತಾ ವಾಕ್ಯಮಬ್ರುವನ್।।

ಎರಡು ತಿಂಗಳುಗಳು ಕಳೆಯಲು ಕೆಲವು ಕಪಿಗಳು ತ್ವರೆಯಿಂದ ಸುಗ್ರೀವನ ಬಳಿಬಂದು ಈ ಮಾತುಗಳನ್ನಾಡಿದರು.

03266026a ರಕ್ಷಿತಂ ವಾಲಿನಾ ಯತ್ತತ್ಸ್ಫೀತಂ ಮಧುವನಂ ಮಹತ್।
03266026c ತ್ವಯಾ ಚ ಪ್ಲವಗಶ್ರೇಷ್ಠ ತದ್ಭುಂಕ್ತೇ ಪವನಾತ್ಮಜಃ।।
03266027a ವಾಲಿಪುತ್ರೋಽಮ್ಗದಶ್ಚೈವ ಯೇ ಚಾನ್ಯೇ ಪ್ಲವಗರ್ಷಭಾಃ।
03266027c ವಿಚೇತುಂ ದಕ್ಷಿಣಾಮಾಶಾಂ ರಾಜನ್ಪ್ರಸ್ಥಾಪಿತಾಸ್ತ್ವಯಾ।।

“ಕಪಿಶ್ರೇಷ್ಠ! ರಾಜನ್! ಯತ್ನಪಟ್ಟು ವಾಲಿ ಮತ್ತು ಈಗ ನೀನು ರಕ್ಷಿಸುತ್ತಿರುವ ಮಹಾ ಮಧುವನವನ್ನು ನಿನ್ನಿಂದ ದಕ್ಷಿಣ ದಿಕ್ಕಿಗೆ ಕಳುಹಿಸಲ್ಪಟ್ಟ ಪವನಾತ್ಮಜ, ವಾಲಿಪುತ್ರ ಅಂಗದ ಮತ್ತು ಇತರ ಕಪಿವೀರರು ಆನಂದಿಸುತ್ತಿದ್ದಾರೆ.”

03266028a ತೇಷಾಂ ತಂ ಪ್ರಣಯಂ ಶ್ರುತ್ವಾ ಮೇನೇ ಸ ಕೃತಕೃತ್ಯತಾಂ।
03266028c ಕೃತಾರ್ಥಾನಾಂ ಹಿ ಭೃತ್ಯಾನಾಮೇತದ್ಭವತಿ ಚೇಷ್ಟಿತಂ।।

ಅವರ ಈ ಆಟವನ್ನು ಕೇಳಿ ಅವರು ಯಶಸ್ವಿಗಳಾಗಿದ್ದಾರೆಂದು ಅವನು ತಿಳಿದನು. ಕೃತಾರ್ಥರಾದ ಸೇವಕರೇ ಈ ರೀತಿಯ ಚೇಷ್ಟೆಗಳನ್ನು ಮಾಡುತ್ತಾರೆ.

03266029a ಸ ತದ್ರಾಮಾಯ ಮೇಧಾವೀ ಶಶಂಸ ಪ್ಲವಗರ್ಷಭಃ।
03266029c ರಾಮಶ್ಚಾಪ್ಯನುಮಾನೇನ ಮೇನೇ ದೃಷ್ಟಾಂ ತು ಮೈಥಿಲೀಂ।।

ಆ ಮೇಧಾವೀ ಪ್ಲವಗರ್ಷಭನು ಅದನ್ನು ಹೇಳಲು ರಾಮನೂ ಕೂಡ ಅವರು ಮೈಥಿಲಿಯನ್ನು ಕಂಡಿದ್ದಾರೆ ಎಂದು ಅನುಮಾನಿಸಿದನು.

03266030a ಹನೂಮತ್ಪ್ರಮುಖಾಶ್ಚಾಪಿ ವಿಶ್ರಾಂತಾಸ್ತೇ ಪ್ಲವಂಗಮಾಃ।
03266030c ಅಭಿಜಗುರ್ಹರೀಂದ್ರಂ ತಂ ರಾಮಲಕ್ಷ್ಮಣಸನ್ನಿಧೌ।।
03266031a ಗತಿಂ ಚ ಮುಖವರ್ಣಂ ಚ ದೃಷ್ಟ್ವಾ ರಾಮೋ ಹನೂಮತಃ।
03266031c ಅಗಮತ್ಪ್ರತ್ಯಯಂ ಭೂಯೋ ದೃಷ್ಟಾ ಸೀತೇತಿ ಭಾರತ।।

ಹನೂಮಂತ ಮತ್ತು ಇತರ ಕಪಿಪ್ರಮುಖರು ವಿಶ್ರಾಂತಿಯನ್ನು ಪಡೆದು ರಾಮ-ಲಕ್ಷ್ಮಣರ ಸನ್ನಿಧಿಯಲ್ಲಿದ್ದ ಕಪೀಂದ್ರನ ಬಳಿ ಬಂದರು. ಭಾರತ! ಹನೂಮಂತನ ನಡಿಗೆ ಮತ್ತು ಮುಖವರ್ಣವನ್ನು ನೋಡಿ ರಾಮನು ಇವನು ಸೀತೆಯನ್ನು ನೋಡಿಯೇ ಬರುತ್ತಿದ್ದಾನೆ ಎಂದು ತಿಳಿದನು.

03266032a ಹನೂಮತ್ಪ್ರಮುಖಾಸ್ತೇ ತು ವಾನರಾಃ ಪೂರ್ಣಮಾನಸಾಃ।
03266032c ಪ್ರಣೇಮುರ್ವಿಧಿವದ್ರಾಮಂ ಸುಗ್ರೀವಂ ಲಕ್ಷ್ಮಣಂ ತಥಾ।।

ಹನೂಮಂತನ ನಾಯಕತ್ವದಲ್ಲಿ ಆ ವಾನರರು ಮನತುಂಬಿದವರಾಗಿ ರಾಮ, ಸುಗ್ರೀವ, ಮತ್ತು ಲಕ್ಷ್ಮಣರಿಗೆ ವಿಧಿವತ್ತಾಗಿ ನಮಸ್ಕರಿಸಿದರು.

03266033a ತಾನುವಾಚಾಗತಾನ್ರಾಮಃ ಪ್ರಗೃಹ್ಯ ಸಶರಂ ಧನುಃ।
03266033c ಅಪಿ ಮಾಂ ಜೀವಯಿಷ್ಯಧ್ವಮಪಿ ವಃ ಕೃತಕೃತ್ಯತಾ।।

ಶರಗಳೊಂದಿಗೆ ಧನುಸ್ಸನ್ನು ಎತ್ತಿಹಿಡಿದು ರಾಮನು ಹೊಸತಾಗಿ ಬಂದಿದ್ದ ಅವರಿಗೆ ಕೇಳಿದನು: “ನನ್ನ ಜೀವವನ್ನು ಮರಳಿ ತಂದಿದ್ದೀರಾ? ನೀವು ಕೃತಕೃತ್ಯರಾಗಿದ್ದೀರಾ?

03266034a ಅಪಿ ರಾಜ್ಯಮಯೋಧ್ಯಾಯಾಂ ಕಾರಯಿಷ್ಯಾಮ್ಯಹಂ ಪುನಃ।
03266034c ನಿಹತ್ಯ ಸಮರೇ ಶತ್ರೂನಾಹೃತ್ಯ ಜನಕಾತ್ಮಜಾಂ।।

ಈಗ ನಾನು ಸಮರದಲ್ಲಿ ಶತ್ರುಗಳನ್ನು ಸಂಹರಿಸಿ ಜನಕಾತ್ಮಜೆಯನ್ನು ಪುನಃ ಪಡೆದುಕೊಂಡು ಅಯೋಧ್ಯಾ ರಾಜ್ಯವನ್ನು ಆಳಬಲ್ಲೆನೇ?

03266035a ಅಮೋಕ್ಷಯಿತ್ವಾ ವೈದೇಹೀಮಹತ್ವಾ ಚ ರಿಪೂನ್ರಣೇ।
03266035c ಹೃತದಾರೋಽವಧೂತಶ್ಚ ನಾಹಂ ಜೀವಿತುಮುತ್ಸಹೇ।।

ರಣದಲ್ಲಿ ರಿಪುಗಳನ್ನು ಸಂಹರಿಸಿ ವೈದೇಹಿಯನ್ನು ಬಿಡಿಸಿಕೊಳ್ಳದೇ, ಪತ್ನಿಯನ್ನು ಕಳೆದುಕೊಂಡ ಮತ್ತು ಹೊರಗಟ್ಟಲ್ಪಟ್ಟ ನಾನು ಜೀವಿಸಲಾರೆ!”

03266036a ಇತ್ಯುಕ್ತವಚನಂ ರಾಮಂ ಪ್ರತ್ಯುವಾಚಾನಿಲಾತ್ಮಜಃ।
03266036c ಪ್ರಿಯಮಾಖ್ಯಾಮಿ ತೇ ರಾಮ ದೃಷ್ಟಾ ಸಾ ಜಾನಕೀ ಮಯಾ।।

ರಾಮನ ಈ ಮಾತುಗಳಿಗೆ ಉತ್ತರವಾಗಿ ಅನಿಲಾತ್ಮಜನು ಹೇಳಿದನು: “ರಾಮ! ನಿನಗೆ ಪ್ರಿಯವಾದುದನ್ನು ಹೇಳುತ್ತೇನೆ. ನಾನು ಜಾನಕಿಯನ್ನು ನೋಡಿದೆ!

03266037a ವಿಚಿತ್ಯ ದಕ್ಷಿಣಾಮಾಶಾಂ ಸಪರ್ವತವನಾಕರಾಂ।
03266037c ಶ್ರಾಂತಾಃ ಕಾಲೇ ವ್ಯತೀತೇ ಸ್ಮ ದೃಷ್ಟವಂತೋ ಮಹಾಗುಹಾಂ।।

ಪರ್ವತ, ಕಾನನ ಮತ್ತು ಗಣಿಗಳ ಸಹಿತ ದಕ್ಷಿಣದಲ್ಲೆಲ್ಲಾ ಹುಡುಕಾಡಿ ತುಂಬಾ ಆಯಾಸಗೊಂಡೆವು. ಹೀಗೆ ಸಮಯವು ಕಳೆಯಲು ಒಂದು ಮಹಾಗುಹೆಯನ್ನು ಕಂಡೆವು.

03266038a ಪ್ರವಿಶಾಮೋ ವಯಂ ತಾಂ ತು ಬಹುಯೋಜನಮಾಯತಾಂ।
03266038c ಅಂಧಕಾರಾಂ ಸುವಿಪಿನಾಂ ಗಹನಾಂ ಕೀಟಸೇವಿತಾಂ।।

ಬಹುಯೋಜನ ವಿಸ್ತೀರ್ಣವಾಗಿದ್ದ, ಕತ್ತಲೆಕವಿದಿದ್ದ, ದಟ್ಟವೂ ಗಹನವೂ, ಕೀಟಗಳಿಂದ ತುಂಬಿದ್ದ ಅದನ್ನು ನಾವು ಪ್ರವೇಶಿಸಿದೆವು.

03266039a ಗತ್ವಾ ಸುಮಹದಧ್ವಾನಮಾದಿತ್ಯಸ್ಯ ಪ್ರಭಾಂ ತತಃ।
03266039c ದೃಷ್ಟವಂತಃ ಸ್ಮ ತತ್ರೈವ ಭವನಂ ದಿವ್ಯಮಂತರಾ।।

ತುಂಬಾ ದೂರದವರೆಗೆ ಹೋದನಂತರ ಸೂರ್ಯನ ಕಿರಣಗಳನ್ನು ಮತ್ತು ಅಲ್ಲಿಯೇ ಹತ್ತಿರದಲ್ಲಿ ದಿವ್ಯ ಭವನವೊಂದನ್ನು ಕಂಡೆವು.

03266040a ಮಯಸ್ಯ ಕಿಲ ದೈತ್ಯಸ್ಯ ತದಾಸೀದ್ವೇಶ್ಮ ರಾಘವ।
03266040c ತತ್ರ ಪ್ರಭಾವತೀ ನಾಮ ತಪೋಽತಪ್ಯತ ತಾಪಸೀ।।

ರಾಘವ! ಅದು ದೈತ್ಯ ಮಯನ ಮನೆಯಾಗಿತ್ತು. ಅಲ್ಲಿ ಪ್ರಭಾವತೀ ಎಂಬ ಹೆಸರಿನ ತಾಪಸಿಯು ತಪಸ್ಸನ್ನು ತಪಿಸುತ್ತಿದ್ದಳು.

03266041a ತಯಾ ದತ್ತಾನಿ ಭೋಜ್ಯಾನಿ ಪಾನಾನಿ ವಿವಿಧಾನಿ ಚ।
03266041c ಭುಕ್ತ್ವಾ ಲಬ್ಧಬಲಾಃ ಸಂತಸ್ತಯೋಕ್ತೇನ ಪಥಾ ತತಃ।।
03266042a ನಿರ್ಯಾಯ ತಸ್ಮಾದುದ್ದೇಶಾತ್ಪಶ್ಯಾಮೋ ಲವಣಾಂಭಸಃ।
03266042c ಸಮೀಪೇ ಸಃಯಮಲಯೌ ದರ್ದುರಂ ಚ ಮಹಾಗಿರಿಂ।।

ಅವಳು ನೀಡಿದ ವಿವಿಧ ಭೋಜನ ಪಾನೀಯಗಳನ್ನು ಸೇವಿಸಿ, ಶಕ್ತಿಯನ್ನು ಪಡೆದುಕೊಂಡು, ಆ ಪ್ರದೇಶದಿಂದ ಅವಳು ಸೂಚಿಸಿದ ದಾರಿಯಲ್ಲಿಯೇ ಹೊರಟು ದುರ್ಧರವಾದ ಸಹ್ಯ ಮತ್ತು ಮಲಯ ಮಹಾಗಿರಿಗಳ ಸಮೀಪದಲ್ಲಿ ಲವಣಾಂಭಸವನ್ನು ಕಂಡೆವು.

03266043a ತತೋ ಮಲಯಮಾರುಹ್ಯ ಪಶ್ಯಂತೋ ವರುಣಾಲಯಂ।
03266043c ವಿಷಣ್ಣಾ ವ್ಯಥಿತಾಃ ಖಿನ್ನಾ ನಿರಾಶಾ ಜೀವಿತೇ ಭೃಶಂ।।
03266044a ಅನೇಕಶತವಿಸ್ತೀರ್ಣಂ ಯೋಜನಾನಾಂ ಮಹೋದಧಿಂ।
03266044c ತಿಮಿನಕ್ರಝಷಾವಾಸಂ ಚಿಂತಯಂತಃ ಸುದುಃಖಿತಾಃ।।

ಆಗ ಮಲಯವನ್ನು ಏರಿ, ವರುಣಾಲಯವನ್ನು ನೋಡುತ್ತಾ ವಿಷಣ್ಣರೂ ವ್ಯಥಿತರೂ, ಖಿನ್ನರೂ, ಮತ್ತು ಜೀವನದಲ್ಲಿ ತುಂಬಾ ನಿರಾಶೆಯುಳ್ಳವರೂ ಆದೆವು. ಅನೇಕ ಶತಯೋಜನ ವಿಸ್ತೀರ್ಣವಾಗಿದ್ದ, ತಿಮಿಂಗಿಲು, ಮೊಸಳೆ ಮತ್ತು ಮಹಾಮೀನುಗಳಿದ್ದ ಆ ಮಹಾಸಾಗರವನ್ನು ನೋಡಿ ಚಿಂತಿಸುತ್ತಾ ಬಹಳ ದುಃಖಿತರಾದೆವು.

03266045a ತತ್ರಾನಶನಸಂಕಲ್ಪಂ ಕೃತ್ವಾಸೀನಾ ವಯಂ ತದಾ।
03266045c ತತಃ ಕಥಾಂತೇ ಗೃಧ್ರಸ್ಯ ಜಟಾಯೋರಭವತ್ಕಥಾ।।

ಅಲ್ಲಿ ನಾವು ಮರಣಪರ್ಯಂತ ಉಪವಾಸವಾಗಿರಲು ಸಂಕಲ್ಪಿಸಿಕೊಂಡಿರಲು, ಹಾಗೆಯೇ ಮಾತನಾಡಿಕೊಂಡಿರುವಾಗ ಹದ್ದು ಜಟಾಯುವಿನ ವಿಷಯವು ಬಂದಿತು.

03266046a ತತಃ ಪರ್ವತಶೃಂಗಾಭಂ ಘೋರರೂಪಂ ಭಯಾವಹಂ।
03266046c ಪಕ್ಷಿಣಂ ದೃಷ್ಟವಂತಃ ಸ್ಮ ವೈನತೇಯಮಿವಾಪರಂ।।

ಆಗ ನಾವು ಪರ್ವತಶಿಖರದಷ್ಟು ದೊಡ್ಡದಾಗಿದ್ದ, ಘೋರರೂಪಿ, ಭಯವನ್ನುಂಟುಮಾಡುವ ಇನ್ನೊಬ್ಬ ವೈನತೇಯನೋ ಅಂತಿರುವ ಪಕ್ಷಿಯನ್ನು ಕಂಡೆವು.

03266047a ಸೋಽಸ್ಮಾನತರ್ಕಯದ್ಭೋಕ್ತುಮಥಾಭ್ಯೇತ್ಯ ವಚೋಽಬ್ರವೀತ್।
03266047c ಭೋಃ ಕ ಏಷ ಮಮ ಭ್ರಾತುರ್ಜಟಾಯೋಃ ಕುರುತೇ ಕಥಾಂ।।

ನಮ್ಮನ್ನು ಭಕ್ಷಿಸಲು ಯೋಚಿಸುತ್ತಿದ್ದ ಅವನು ಹತ್ತಿರ ಬಂದು ಹೇಳಿದನು: “ಭೋ! ನನ್ನ ಸಹೋದರ ಜಟಾಯುವಿನ ಕುರಿತು ಮಾತನಾಡುತ್ತಿರುವವರು ಯಾರು?

03266048a ಸಂಪಾತಿರ್ನಾಮ ತಸ್ಯಾಹಂ ಜ್ಯೇಷ್ಠೋ ಭ್ರಾತಾ ಖಗಾಧಿಪಃ।
03266048c ಅನ್ಯೋನ್ಯಸ್ಪರ್ಧಯಾರೂಢಾವಾವಾಮಾದಿತ್ಯಸಂಸದಂ।।

ಅವನ ಹಿರಿಯ ಅಣ್ಣ ಸಂಪಾತಿಯೆಂಬ ಹೆಸರಿನ ಖಗಾಧಿಪನು ನಾನು. ಅನ್ಯೋನ್ಯರೊಡನೆ ಸರ್ಧೆಯಲ್ಲಿ ನಾವು ಆದಿತ್ಯನ ಸಂಸತ್ತಿನ ವರೆಗೆ ಹಾರಿ ಹೋಗಿದ್ದೆವು.

03266049a ತತೋ ದಗ್ಧಾವಿಮೌ ಪಕ್ಷೌ ನ ದಗ್ಧೌ ತು ಜಟಾಯುಷಃ।
03266049c ತದಾ ಮೇ ಚಿರದೃಷ್ಟಃ ಸ ಭ್ರಾತಾ ಗೃಧ್ರಪತಿಃ ಪ್ರಿಯಃ।
03266049e ನಿರ್ದಗ್ಧಪಕ್ಷಃ ಪತಿತೋ ಹ್ಯಹಮಸ್ಮಿನ್ಮಹಾಗಿರೌ।।

ಆಗ ನನ್ನ ಈ ರೆಕ್ಕೆಗಳು ಸುಟ್ಟುಹೋಗಿದ್ದವು. ಆದರೆ ಜಟಾಯುವಿನವು ಸುಡಲಿಲ್ಲ. ಆಗ ಬಹಳ ಸಮಯದಿಂದ ನನಗೆ ಕಾಣದಿದ್ದ ನನ್ನ ಪ್ರಿಯ ತಮ್ಮನು ಹದ್ದುಗಳ ರಾಜನಾದನು. ರೆಕ್ಕೆಗಳು ಸುಟ್ಟುಹೋದ ನಾನು ಈ ಮಹಾಗಿರಿಯ ಮೇಲೆ ಬಿದ್ದೆ.”

03266050a ತಸ್ಯೈವಂ ವದತೋಽಸ್ಮಾಭಿರ್ಹತೋ ಭ್ರಾತಾ ನಿವೇದಿತಃ।
03266050c ವ್ಯಸನಂ ಭವತಶ್ಚೇದಂ ಸಂಕ್ಷೇಪಾದ್ವೈ ನಿವೇದಿತಂ।।

ಅವನು ಹೀಗೆ ಹೇಳಲು ನಾವು ಅವನ ತಮ್ಮನು ಹತನಾದುದನ್ನು ಹೇಳಿದೆವು. ನಿನ್ನ ವ್ಯಸನದ ಕುರಿತೂ ಸಂಕ್ಷೇಪವಾಗಿ ಅವನಿಗೆ ಹೇಳಿದೆವು.

03266051a ಸ ಸಂಪಾತಿಸ್ತದಾ ರಾಜಂ ಶ್ರುತ್ವಾ ಸುಮಹದಪ್ರಿಯಂ।
03266051c ವಿಷಣ್ಣಚೇತಾಃ ಪಪ್ರಚ್ಚ ಪುನರಸ್ಮಾನರಿಂದಮ।।

ಅರಿಂದಮ! ರಾಜನ್! ತುಂಬಾ ಅಪ್ರಿಯವಾದುದನ್ನು ಕೇಳಿ ಸಂಪಾತಿಯು ವಿಷಣ್ಣಚೇತಸನಾಗಿ ಪುನಃ ಕೇಳಿದನು:

03266052a ಕಃ ಸ ರಾಮಃ ಕಥಂ ಸೀತಾ ಜಟಾಯುಶ್ಚ ಕಥಂ ಹತಃ।
03266052c ಇಚ್ಚಾಮಿ ಸರ್ವಮೇವೈತಚ್ಚ್ರೋತುಂ ಪ್ಲವಗಸತ್ತಮಾಃ।।

“ಈ ರಾಮನಾರು? ಸೀತೆಯು ಹೇಗೆ ಅಪಹರಿಸಲ್ಪಟ್ಟಳು? ಜಟಾಯುವು ಹೇಗೆ ಹತನಾದನು? ಕಪಿಸತ್ತಮರೇ! ಇವೆಲ್ಲವನ್ನೂ ಕೇಳ ಬಯಸುತ್ತೇನೆ.”

03266053a ತಸ್ಯಾಹಂ ಸರ್ವಮೇವೈತಂ ಭವತೋ ವ್ಯಸನಾಗಮಂ।
03266053c ಪ್ರಾಯೋಪವೇಶನೇ ಚೈವ ಹೇತುಂ ವಿಸ್ತರತೋಽಬ್ರುವಂ।।

ಅವನಿಗೆ ನಾನು ನಿನಗೆ ಬಂದೊದಗಿದ ವ್ಯಸನಗಳೆಲ್ಲವನ್ನೂ, ಮತ್ತು ನಾವು ಪ್ರಾಯೋಪವೇಶ ಕೈಗೊಂಡಿರುವುದಕ್ಕೆ ಕಾರಣಗಳನ್ನು ವಿಸ್ತಾರವಾಗಿ ಹೇಳಿದೆನು.

03266054a ಸೋಽಸ್ಮಾನುತ್ಥಾಪಯಾಮಾಸ ವಾಕ್ಯೇನಾನೇನ ಪಕ್ಷಿರಾಟ್।
03266054c ರಾವಣೋ ವಿದಿತೋ ಮಹ್ಯಂ ಲಂಕಾ ಚಾಸ್ಯ ಮಹಾಪುರೀ।।

ಆಗ ಆ ಪಕ್ಷಿರಾಜನು ಈ ಮಾತುಗಳಿಂದ ನಾವು ಮೇಲಕ್ಕೇಳುವಂತೆ ಮಾಡಿದನು: “ನನಗೆ ರಾವಣ ಮತ್ತು ಅವನ ಮಹಾಪುರಿ ಲಂಕೆಯೂ ಗೊತ್ತು.

03266055a ದೃಷ್ಟಾ ಪಾರೇ ಸಮುದ್ರಸ್ಯ ತ್ರಿಕೂಟಗಿರಿಕಂದರೇ।
03266055c ಭವಿತ್ರೀ ತತ್ರ ವೈದೇಹೀ ನ ಮೇಽಸ್ತ್ಯತ್ರ ವಿಚಾರಣಾ।।

ಸಮುದ್ರದ ಆಚೆಯ ದಡದಲ್ಲಿ ತ್ರಿಕೂಟಗಿರಿಯ ಕಂದರದಲ್ಲಿ ನೋಡಿದ್ದೇನೆ. ಅಲ್ಲಿ ವೈದೇಹಿಯು ಇರುತ್ತಾಳೆ ಎನ್ನುವುದರಲ್ಲಿ ನನಗೆ ವಿಚಾರಮಾಡುವುದೇನೂ ಇಲ್ಲ.”

03266056a ಇತಿ ತಸ್ಯ ವಚಃ ಶ್ರುತ್ವಾ ವಯಮುತ್ಥಾಯ ಸತ್ವರಾಃ।
03266056c ಸಾಗರಪ್ಲವನೇ ಮಂತ್ರಂ ಮಂತ್ರಯಾಮಃ ಪರಂತಪ।।

ಪರಂತಪ! ಅವನ ಈ ಮಾತನ್ನು ಕೇಳಿ ನಾವು ಶೀಘ್ರವೇ ಮೇಲೆದ್ದು ಸಾಗರವನ್ನು ಹಾರುವುದರ ಉಪಾಯದ ಕುರಿತು ಮಂತ್ರಾಲೋಚಿಸಿದೆವು.

03266057a ನಾಧ್ಯವಸ್ಯದ್ಯದಾ ಕಶ್ಚಿತ್ಸಾಗರಸ್ಯ ವಿಲಂಘನೇ।
03266057c ತತಃ ಪಿತರಮಾವಿಶ್ಯ ಪುಪ್ಲುವೇಽಹಂ ಮಹಾರ್ಣವಂ।
03266057e ಶತಯೋಜನವಿಸ್ತೀರ್ಣಂ ನಿಹತ್ಯ ಜಲರಾಕ್ಷಸೀಂ।।

ಸಾಗರವನ್ನು ಲಂಘಿಸಲು ಯಾರೂ ಸಿದ್ಧರಾಗಲಿಲ್ಲ. ಆಗ ನಾನೇ ನನ್ನ ತಂದೆಯನ್ನು ಪ್ರವೇಶಿಸಿ, ಜಲರಾಕ್ಷಸಿಯನ್ನು ಸಂಹರಿಸಿ, ಶತಯೋಜನ ವಿಸ್ತೀರ್ಣದ ಆ ಮಹಾಸಾಗರವನ್ನು ಹಾರಿ ದಾಟಿದೆನು.

03266058a ತತ್ರ ಸೀತಾ ಮಯಾ ದೃಷ್ಟಾ ರಾವಣಾಂತಃಪುರೇ ಸತೀ।
03266058c ಉಪವಾಸತಪಃಶೀಲಾ ಭರ್ತೃದರ್ಶನಲಾಲಸಾ।
03266058e ಜಟಿಲಾ ಮಲದಿಗ್ಧಾಂಗೀ ಕೃಶಾ ದೀನಾ ತಪಸ್ವಿನೀ।।

ಅಲ್ಲಿ ರಾವಣನ ಅಂತಃಪುರದಲ್ಲಿ ಪತಿಯ ದರ್ಶನಕ್ಕೆ ಕಾತರಿಸಿದ್ದ, ಉಪವಾಸ ಮತ್ತು ತಪಸ್ಸುಗಳನ್ನು ಮಾಡುತ್ತಿದ್ದ, ಕೂದಲನ್ನು ಗಂಟು ಹಾಕಿ, ಕೃಶಳಾಗಿದ್ದ, ಮಲಿನಳಾಗಿದ್ದ, ದೀನಳಾಗಿದ್ದ, ತಪಸ್ವಿನೀ ಸತೀ ಸೀತೆಯನ್ನು ನಾನು ಕಂಡೆ.

03266059a ನಿಮಿತ್ತೈಸ್ತಾಮಹಂ ಸೀತಾಮುಪಲಭ್ಯ ಪೃಥಗ್ವಿಧೈಃ।
03266059c ಉಪಸೃತ್ಯಾಬ್ರುವಂ ಚಾರ್ಯಾಮಭಿಗಮ್ಯ ರಹೋಗತಾಂ।।

ಈ ಬೇರೆ ಬೇರೆ ಲಕ್ಷಣಗಳಿಂದ ಸೀತೆಯನ್ನು ಗುರುತಿಸಿದ ನಾನು, ಅವಳ ಬಳಿ ಗುಪ್ತವಾಗಿ ಹೋಗಿ ಈ ಮಾತುಗಳನ್ನಾಡಿದೆನು:

03266060a ಸೀತೇ ರಾಮಸ್ಯ ದೂತೋಽಹಂ ವಾನರೋ ಮಾರುತಾತ್ಮಜಃ।
03266060c ತ್ವದ್ದರ್ಶನಮಭಿಪ್ರೇಪ್ಸುರಿಹ ಪ್ರಾಪ್ತೋ ವಿಹಾಯಸಾ।।

“ಸೀತೇ! ರಾಮನ ದೂತನು ನಾನು. ಮಾರುತಾತ್ಮಜ ವಾನರ. ನಿನ್ನ ದರ್ಶನವನ್ನು ಬಯಸಿ ಆಕಾಶದಿಂದ ಹಾರಿ ಇಲ್ಲಿಗೆ ಬಂದಿದ್ದೇನೆ.

03266061a ರಾಜಪುತ್ರೌ ಕುಶಲಿನೌ ಭ್ರಾತರೌ ರಾಮಲಕ್ಷ್ಮಣೌ।
03266061c ಸರ್ವಶಾಖಾಮೃಗೇಂದ್ರೇಣ ಸುಗ್ರೀವೇಣಾಭಿಪಾಲಿತೌ।।

ಕಪಿಗಳ ರಾಜ ಸುಗ್ರೀವನಿಂದ ಪರಿಪಾಲಿತರಾಗಿ ಇಬ್ಬರು ರಾಜಪುತ್ರ ಸಹೋದರ ರಾಮ-ಲಕ್ಷ್ಮಣರು ಕುಶಲರಾಗಿದ್ದಾರೆ.

03266062a ಕುಶಲಂ ತ್ವಾಬ್ರವೀದ್ರಾಮಃ ಸೀತೇ ಸೌಮಿತ್ರಿಣಾ ಸಹ।
03266062c ಸಖಿಭಾವಾಚ್ಚ ಸುಗ್ರೀವಃ ಕುಶಲಂ ತ್ವಾನುಪೃಚ್ಚತಿ।।

ಸೀತೇ! ರಾಮ ಮತ್ತು ಜೊತೆಗೆ ಸೌಮಿತ್ರಿಯು ನಿನ್ನ ಕುಶಲದ ಕುರಿತು ಕೇಳಿದ್ದಾರೆ. ಸ್ನೇಹಭಾವದಿಂದ ಸುಗ್ರೀವನೂ ಕೂಡ ನಿನ್ನ ಕುಶಲವನ್ನು ಕೇಳಿದ್ದಾನೆ.

03266063a ಕ್ಷಿಪ್ರಮೇಷ್ಯತಿ ತೇ ಭರ್ತಾ ಸರ್ವಶಾಖಾಮೃಗೈಃ ಸಹ।
03266063c ಪ್ರತ್ಯಯಂ ಕುರು ಮೇ ದೇವಿ ವಾನರೋಽಸ್ಮಿ ನ ರಾಕ್ಷಸಃ।।

ಎಲ್ಲ ಕಪಿಗಳೊಂದಿಗೆ ನಿನ್ನ ಪತಿಯು ಶೀಘ್ರದಲ್ಲಿಯೇ ಬರುತ್ತಾನೆ. ದೇವಿ! ನನ್ನ ಮೇಲೆ ನಂಬಿಕೆಯನ್ನಿಡು. ನಾನು ವಾನರ. ರಾಕ್ಷಸನಲ್ಲ.”

03266064a ಮುಹೂರ್ತಮಿವ ಚ ಧ್ಯಾತ್ವಾ ಸೀತಾ ಮಾಂ ಪ್ರತ್ಯುವಾಚ ಹ।
03266064c ಅವೈಮಿ ತ್ವಾಂ ಹನೂಮಂತಮವಿಂಧ್ಯವಚನಾದಹಂ।।

ಮುಹೂರ್ತಕಾಲ ಯೋಚಿಸಿ ಸೀತೆಯು ನನಗೆ ಉತ್ತರಿಸಿದಳು: “ಅವಿಂಧ್ಯನ ವಚನದಿಂದ ನೀನು ಹನೂಮಂತನನ್ನು ನಾನು ತಿಳಿದಿದ್ದೇನೆ.

03266065a ಅವಿಂಧ್ಯೋ ಹಿ ಮಹಾಬಾಹೋ ರಾಕ್ಷಸೋ ವೃದ್ಧಸಮ್ಮತಃ।
03266065c ಕಥಿತಸ್ತೇನ ಸುಗ್ರೀವಸ್ತ್ವದ್ವಿಧೈಃ ಸಚಿವೈರ್ವೃತಃ।।

ಮಹಾಬಾಹು ವೃದ್ಧಸಮ್ಮತ ರಾಕ್ಷಸ ಅವಿಂಧ್ಯನೇ ಸುಗ್ರೀವನು ನಿನ್ನಂಥಹ ಸಚಿವರಿಂದ ಸುತ್ತುವರೆಯಲ್ಪಟ್ಟಿದ್ದಾನೆ ಎಂದು ಹೇಳಿದನು.

03266066a ಗಮ್ಯತಾಮಿತಿ ಚೋಕ್ತ್ವಾ ಮಾಂ ಸೀತಾ ಪ್ರಾದಾದಿಮಂ ಮಣಿಂ।
03266066c ಧಾರಿತಾ ಯೇನ ವೈದೇಹೀ ಕಾಲಮೇತಮನಿಂದಿತಾ।।

ಈಗ ಹೋಗು” ಎಂದು ಹೇಳಿ ಸೀತೆಯು ನನಗೆ ಈ ಮಣಿಯನ್ನು ಕೊಟ್ಟಳು. ಇದನ್ನು ಆ ಅನಿಂದಿತೆ ವೈದೇಹಿಯು ಇಲ್ಲಿಯವರೆಗೂ ಧರಿಸಿಕೊಂಡಿದ್ದಳು.

03266067a ಪ್ರತ್ಯಯಾರ್ಥಂ ಕಥಾಂ ಚೇಮಾಂ ಕಥಯಾಮಾಸ ಜಾನಕೀ।
03266067c ಕ್ಷಿಪ್ತಾಮಿಷೀಕಾಂ ಕಾಕಸ್ಯ ಚಿತ್ರಕೂಟೇ ಮಹಾಗಿರೌ।
03266067e ಭವತಾ ಪುರುಷವ್ಯಾಘ್ರ ಪ್ರತ್ಯಭಿಜ್ಞಾನಕಾರಣಾತ್।।

ಇವೆಲ್ಲವುಗಳನ್ನು ನೀನು ನಂಬಬೇಕೆಂದು ಜಾನಕಿಯು ಮಹಾಗಿರಿ ಚಿತ್ರಕೂಟದಲ್ಲಿ ಹುಲ್ಲನ್ನು ಕಾಗೆಯ ಮೇಲೆ ನೀನು ಪ್ರಯೋಗಿಸಿದುದರ ಕಥೆಯನ್ನು ಹೇಳಿದಳು. ಪುರುಷವ್ಯಾಘ್ರ! ಇದರಿಂದ ನೀನು ಗುರುತಿಸಬಹುದು.

03266068a ಶ್ರಾವಯಿತ್ವಾ ತದಾತ್ಮಾನಂ ತತೋ ದಗ್ಧ್ವಾ ಚ ತಾಂ ಪುರೀಂ। . 03266068c ಸಂಪ್ರಾಪ್ತ ಇತಿ ತಂ ರಾಮಃ ಪ್ರಿಯವಾದಿನಮರ್ಚಯತ್।।

ಅದನ್ನು ಕೇಳಿ, ನಂತರ ಆ ಪುರಿಯನ್ನು ಸುಟ್ಟು ಇಲ್ಲಿಗೆ ಬಂದೆ.” ಪ್ರಿಯವಾರ್ತೆಯನ್ನು ತಂದ ಅವನನ್ನು ರಾಮನು ಸತ್ಕರಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಹನುಮಪ್ರತ್ಯಾಗಮನೇ ಷಟ್‌ಷಷ್ಟ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಹನುಮಪ್ರತ್ಯಾಗಮನದಲ್ಲಿ ಇನ್ನೂರಾಅರವತ್ತಾರನೆಯ ಅಧ್ಯಾಯವು.