265 ರಾಮೋಪಾಖ್ಯಾನೇ ಸೀತಾರಾವಣಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 265

ಸಾರ

ರಾವಣನು ಅಶೋಕವನಕ್ಕೆ ಬಂದು ಸೀತೆಯ ಮನವೊಲಿಸಲು ಪ್ರಯತ್ನಿಸುವುದು (1-16). ಆಗ ಸೀತೆಯು ಒಂದು ಹುಲ್ಲುಕಡ್ಡಿಯನ್ನು ಮಧ್ಯಮಾಡಿಕೊಂಡು ಅವನನ್ನು ಹೀಯಾಳಿಸಿ ತಿರಸ್ಕರಿಸಲು (17-25) ರಾವಣನು ಎಚ್ಚರಿಸಿ ಹೊರಟು ಹೋದುದು (26-30).

03265001 ಮಾರ್ಕಂಡೇಯ ಉವಾಚ।
03265001a ತತಸ್ತಾಂ ಭರ್ತೃಶೋಕಾರ್ತಾಂ ದೀನಾಂ ಮಲಿನವಾಸಸಂ।
03265001c ಮಣಿಶೇಷಾಭ್ಯಲಂಕಾರಾಂ ರುದತೀಂ ಚ ಪತಿವ್ರತಾಂ।।
03265002a ರಾಕ್ಷಸೀಭಿರುಪಾಸ್ಯಂತೀಂ ಸಮಾಸೀನಾಂ ಶಿಲಾತಲೇ।
03265002c ರಾವಣಃ ಕಾಮಬಾಣಾರ್ತೋ ದದರ್ಶೋಪಸಸರ್ಪ ಚ।।

ಮಾರ್ಕಂಡೇಯನು ಹೇಳಿದನು: “ಆಗ ಪತಿಗಾಗಿ ಶೋಕಪರಳಾಗಿದ್ದ ದೀನಳಾಗಿದ್ದ, ಮಲಿನ ವಸ್ತ್ರ, ಮತ್ತು ಉಳಿದ ಮಣಿ ಅಲಂಕಾರಗಳನ್ನು ತೊಟ್ಟಿದ್ದ, ಅಳುತ್ತಿದ್ದ, ರಾಕ್ಷಸಿಯರಿಂದ ಉಪಾಸನೆಗೊಳ್ಳುತ್ತಿದ್ದ, ಕಲ್ಲುಬಂಡೆಯ ಮೇಲೆ ಕುಳಿತುಕೊಂಡಿದ್ದ ಪತಿವ್ರತೆಯನ್ನು ನೋಡಲು ಕಾಮಬಾಣಾರ್ತ ರಾವಣನು ಹೊರಟನು.

03265003a ದೇವದಾನವಗಂಧರ್ವಯಕ್ಷಕಿಂಪುರುಷೈರ್ಯುಧಿ।
03265003c ಅಜಿತೋಽಶೋಕವನಿಕಾಂ ಯಯೌ ಕಂದರ್ಪಮೋಹಿತಃ।।

ದೇವ, ದಾನವ, ಗಂಧರ್ವ, ಯಕ್ಷ, ಕಿಂಪುರುಷರಿಂದ ಯುದ್ಧದಲ್ಲಿ ಅಜೇಯನಾಗಿದ್ದ ಆ ಕಂದರ್ಪ ಮೋಹಿತನು ಅಶೋಕವನಕ್ಕೆ ಬಂದನು.

03265004a ದಿವ್ಯಾಂಬರಧರಃ ಶ್ರೀಮಾನ್ಸುಮೃಷ್ಟಮಣಿಕುಂಡಲಃ।
03265004c ವಿಚಿತ್ರಮಾಲ್ಯಮುಕುಟೋ ವಸಂತ ಇವ ಮೂರ್ತಿಮಾನ್।।

ದಿವ್ಯಾಂಬರಗಳನ್ನು ಧರಿಸಿ, ಹೊಳೆಯುತ್ತಿರುವ ಮಣಿಕುಂಡಲಗಳನ್ನು ಧರಿಸಿ, ಬಣ್ಣಬಣ್ಣದ ಮಾಲೆ-ಮುಕುಟಗಳನ್ನು ಧರಿಸಿದ್ದ ಆ ಶ್ರೀಮಾನನು ವಸಂತನೇ ಮೂರ್ತಿಮತ್ತಾಗಿ ಬಂದಂತೆ ತೋರುತ್ತಿದ್ದನು.

03265005a ಸ ಕಲ್ಪವೃಕ್ಷಸದೃಶೋ ಯತ್ನಾದಪಿ ವಿಭೂಷಿತಃ।
03265005c ಶ್ಮಶಾನಚೈತ್ಯದ್ರುಮವದ್ಭೂಷಿತೋಽಪಿ ಭಯಂಕರಃ।।

ಜಾಗ್ರತೆಯಿಂದ ಅಲಂಕರಿಸಿಕೊಂಡಿದ್ದ ಅವನು ಕಲ್ಪವೃಕ್ಷದಂತೆ ತೋರುತ್ತಿದ್ದನು. ಸುಂದರವಾಗಿ ಅಲಂಕರಿಸಿಕೊಂಡಿದ್ದರೂ ಅವನು ಶ್ಮಶಾನದಲ್ಲಿರುವ ಅಶ್ವತ್ಥವೃಕ್ಷದಂತೆ ಭಯಂಕರನಾಗಿ ತೋರುತ್ತಿದ್ದನು.

03265006a ಸ ತಸ್ಯಾಸ್ತನುಮಧ್ಯಾಯಾಃ ಸಮೀಪೇ ರಜನೀಚರಃ।
03265006c ದದೃಶೇ ರೋಹಿಣೀಮೇತ್ಯ ಶನೈಶ್ಚರ ಇವ ಗ್ರಹಃ।।

ಆ ತನುಮಧ್ಯಮೆಯ ಸಮೀಪದಲ್ಲಿ ಆ ರಜನೀಚರನು ರೋಹಿಣಿಯ ಸಮೇತನಾದ ಶನೈಶ್ಚರ ಗ್ರಹದಂತೆ ಕಂಡುಬಂದನು.

03265007a ಸ ತಾಮಾಮಂತ್ರ್ಯ ಸುಶ್ರೋಣೀಂ ಪುಷ್ಪಕೇತುಶರಾಹತಃ।
03265007c ಇದಮಿತ್ಯಬ್ರವೀದ್ಬಾಲಾಂ ತ್ರಸ್ತಾಂ ರೌಹೀಮಿವಾಬಲಾಂ।।

ಪುಷ್ಪಕೇತುವಿನ ಶರದಿಂದ ಹೊಡೆಯಲ್ಪಟ್ಟ ಅವನು ಆ ಹೆದರಿದ ಪಾರಿವಾಳದಂತೆ ನಡುಗುತ್ತಿರುವ ಬಾಲೆ ಸುಶ್ರೋಣಿಯನ್ನು ಕರೆದು ಹೀಗೆ ಹೇಳಿದನು:

03265008a ಸೀತೇ ಪರ್ಯಾಪ್ತಮೇತಾವತ್ಕೃತೋ ಭರ್ತುರನುಗ್ರಹಃ।
03265008c ಪ್ರಸಾದಂ ಕುರು ತನ್ವಂಗಿ ಕ್ರಿಯತಾಂ ಪರಿಕರ್ಮ ತೇ।।

“ಸೀತೇ! ನೀನು ನಿನ್ನ ಪತಿಯಮೇಲೆ ಸಾಕಷ್ಟು ಅನುಗ್ರಹವನ್ನು ಈಗಾಗಲೇ ಮಾಡಿದ್ದೀಯೆ. ಈಗ ನನ್ನ ಮೇಲೆ ಕರುಣೆತೋರು. ತನ್ವಂಗೀ! ನಿನ್ನನ್ನು ಸಿಂಗರಿಸಲಾಗುತ್ತದೆ.

03265009a ಭಜಸ್ವ ಮಾಂ ವರಾರೋಹೇ ಮಹಾರ್ಹಾಭರಣಾಂಬರಾ।
03265009c ಭವ ಮೇ ಸರ್ವನಾರೀಣಾಮುತ್ತಮಾ ವರವರ್ಣಿನಿ।।

ವರಾರೋಹೇ! ಮಹಾಬೆಲೆಯ ಆಭರಣ ವಸ್ತ್ರಗಳನ್ನು ಧರಿಸಿ ನನ್ನನ್ನು ಪ್ರೀತಿಸು. ವರವರ್ಣಿನೀ! ನನ್ನ ಎಲ್ಲ ನಾರಿಯರಲ್ಲಿ ಉತ್ತಮಳಾಗು.

03265010a ಸಂತಿ ಮೇ ದೇವಕನ್ಯಾಶ್ಚ ರಾಜರ್ಷೀಣಾಂ ತಥಾಂಗನಾಃ।
03265010c ಸಂತಿ ದಾನವಕನ್ಯಾಶ್ಚ ದೈತ್ಯಾನಾಂ ಚಾಪಿ ಯೋಷಿತಃ।।

ನನ್ನಲ್ಲಿ ದೇವಕನ್ಯೆಯರಿದ್ದಾರೆ ಮತ್ತು ರಾಜರ್ಷಿಗಳ ಅಂಗನೆಯರೂ ಇದ್ದಾರೆ. ದಾನವಕನ್ಯೆಯರೂ, ದೈತ್ಯರ ಮಕ್ಕಳೂ ಇದ್ದಾರೆ.

03265011a ಚತುರ್ದಶ ಪಿಶಾಚಾನಾಂ ಕೋಟ್ಯೋ ಮೇ ವಚನೇ ಸ್ಥಿತಾಃ।
03265011c ದ್ವಿಸ್ತಾವತ್ಪುರುಷಾದಾನಾಂ ರಕ್ಷಸಾಂ ಭೀಮಕರ್ಮಣಾಂ।।

ಹದಿನಾಲ್ಕು ಕೋಟಿ ಪಿಶಾಚಿಗಳು, ಮತ್ತು ಅದಕ್ಕೂ ಎರಡು ಪಟ್ಟು ಭೀಮಕರ್ಮಿ, ಮನುಷ್ಯರನ್ನು ತಿನ್ನುವ ರಾಕ್ಷಸರು ನನ್ನ ಮಾತಿಗೆ ನಿಂತಿದ್ದಾರೆ.

03265012a ತತೋ ಮೇ ತ್ರಿಗುಣಾ ಯಕ್ಷಾ ಯೇ ಮದ್ವಚನಕಾರಿಣಃ।
03265012c ಕೇ ಚಿದೇವ ಧನಾಧ್ಯಕ್ಷಂ ಭ್ರಾತರಂ ಮೇ ಸಮಾಶ್ರಿತಾಃ।।

ಅದಕ್ಕೂ ಮೂರುಪಟ್ಟು ಯಕ್ಷರು ನನ್ನ ಮಾತಿನಂತೆ ಮಾಡುವವರಿದ್ದಾರೆ. ಅವರಲ್ಲಿ ಕೆಲವರು ನನ್ನ ಅಣ್ಣ ಧನಾಧ್ಯಕ್ಷನ ಆಶ್ರಯದಲ್ಲಿದ್ದಾರೆ.

03265013a ಗಂಧರ್ವಾಪ್ಸರಸೋ ಭದ್ರೇ ಮಾಮಾಪಾನಗತಂ ಸದಾ।
03265013c ಉಪತಿಷ್ಠಂತಿ ವಾಮೋರು ಯಥೈವ ಭ್ರಾತರಂ ಮಮ।।

ಭದ್ರೇ! ವಾಮೋರು! ನಾನು ಪಾನೀಯಕ್ಕೆಂದು ಹೋದಾಗ ಗಂಧರ್ವರೂ ಅಪ್ಸರೆಯರೂ ಸದಾ ಅಣ್ಣನನ್ನು ಹೇಗೋ ಹಾಗೆ ನನ್ನನ್ನೂ ಕಾಯುತ್ತಿರುತ್ತಾರೆ.

03265014a ಪುತ್ರೋಽಹಮಪಿ ವಿಪ್ರರ್ಷೇಃ ಸಾಕ್ಷಾದ್ವಿಶ್ರವಸೋ ಮುನೇಃ।
03265014c ಪಂಚಮೋ ಲೋಕಪಾಲಾನಾಮಿತಿ ಮೇ ಪ್ರಥಿತಂ ಯಶಃ।।

ನಾನು ಮುನಿ ವಿಪ್ರರ್ಷಿ ಸಾಕ್ಷಾದ್ ವಿಶ್ರವಸುವಿನ ಮಗನೂ ಕೂಡ ಹೌದು. ನಾನು ಐದನೆಯ ಲೋಕಪಾಲನೆಂದೂ ಪ್ರತಿಥನಾಗಿ ಯಶಸ್ವಿಯಾಗಿದ್ದೇನೆ.

03265015a ದಿವ್ಯಾನಿ ಭಕ್ಷ್ಯಭೋಜ್ಯಾನಿ ಪಾನಾನಿ ವಿವಿಧಾನಿ ಚ।
03265015c ಯಥೈವ ತ್ರಿದಶೇಶಸ್ಯ ತಥೈವ ಮಮ ಭಾಮಿನಿ।।

ಭಾಮಿನಿ! ತ್ರಿದಶೇಶನ ಕಡೆ ಇದ್ದಂತೆ ನನ್ನಲ್ಲಿಯೂ ದಿವ್ಯ ಭಕ್ಷ-ಭೋಜ್ಯಗಳು ಮತ್ತು ವಿವಿಧ ಪಾನೀಯಗಳಿವೆ.

03265016a ಕ್ಷೀಯತಾಂ ದುಷ್ಕೃತಂ ಕರ್ಮ ವನವಾಸಕೃತಂ ತವ।
03265016c ಭಾರ್ಯಾ ಮೇ ಭವ ಸುಶ್ರೋಣಿ ಯಥಾ ಮಂಡೋದರೀ ತಥಾ।।

ವನವಾಸದಲ್ಲಿನ ನಿನ್ನ ದುಷ್ಕೃತ ಕರ್ಮಗಳು ಕ್ಷೀಣಿಸಲಿ. ಸುಶ್ರೋಣಿ! ಮಂಡೋದರಿಯಂತೆ ನನ್ನ ಭಾರ್ಯೆಯಾಗು.”

03265017a ಇತ್ಯುಕ್ತಾ ತೇನ ವೈದೇಹೀ ಪರಿವೃತ್ಯ ಶುಭಾನನಾ।
03265017c ತೃಣಮಂತರತಃ ಕೃತ್ವಾ ತಮುವಾಚ ನಿಶಾಚರಂ।।
03265018a ಅಶಿವೇನಾತಿವಾಮೋರೂರಜಸ್ರಂ ನೇತ್ರವಾರಿಣಾ।
03265018c ಸ್ತನಾವಪತಿತೌ ಬಾಲಾ ಸಹಿತಾವಭಿವರ್ಷತೀ।
03265018e ಉವಾಚ ವಾಕ್ಯಂ ತಂ ಕ್ಷುದ್ರಂ ವೈದೇಹೀ ಪತಿದೇವತಾ।।

ಅವನು ಈ ಮಾತುಗಳನ್ನಾಡಲು ಆ ಶುಭಾನನೆಯು ಒಂದು ಹುಲ್ಲುಕಡ್ಡಿಯನ್ನು ಮಧ್ಯಮಾಡಿಕೊಂಡು ಆ ನಿಶಾಚರನಿಗೆ ಹೇಳಿದಳು. ಪತಿಯನ್ನೇ ದೇವತೆಯೆಂದು ತಿಳಿದಿದ್ದ ವೈದೇಹಿಯು ತನ್ನ ಸುಂದರ ತೊಡೆಗಳನ್ನು ಸ್ತನಗಳ ಮೇಲಿಂದ ಬೀಳುತ್ತಿರುವ ಕಣ್ಣೀರಿನಿಂದ ತೋಯಿಸುತ್ತಾ ಆ ಕ್ಷುದ್ರನಿಗೆ ಈ ಮಾತುಗಳನ್ನಾಡಿದಳು.

03265019a ಅಸಕೃದ್ವದತೋ ವಾಕ್ಯಂ ಈದೃಶಂ ರಾಕ್ಷಸೇಶ್ವರ।
03265019c ವಿಷಾದಯುಕ್ತಮೇತತ್ತೇ ಮಯಾ ಶ್ರುತಮಭಾಗ್ಯಯಾ।।

“ರಾಕ್ಷಸೇಶ್ವರ! ಅಭಾಗ್ಯೆಯಾದ ನಾನು ಈ ತರಹದ ವಿಶಾದಯುಕ್ತ ನಿರಾಶೆಯ ಮಾತುಗಳನ್ನು ಕೇಳಿದ್ದೇನೆ.

03265020a ತದ್ಭದ್ರಸುಖ ಭದ್ರಂ ತೇ ಮಾನಸಂ ವಿನಿವರ್ತ್ಯತಾಂ।
03265020c ಪರದಾರಾಸ್ಮ್ಯಲಭ್ಯಾ ಚ ಸತತಂ ಚ ಪತಿವ್ರತಾ।।

ಇಷ್ಟೊಂದು ಸುಖಪಡುತ್ತಿರುವ ನಿನಗೆ ಮಂಗಳವಾಗಲಿ. ಈ ಆಸೆಯನ್ನು ನಿನ್ನ ಮನಸ್ಸಿನಿಂದ ತೆಗೆದುಹಾಕು. ಪತಿವ್ರತೆಯಾದ ನಾನು ಇನ್ನೊಬ್ಬನ ಪತ್ನಿ. ನಿನಗೆ ದೊರೆಯದವಳು.

03265021a ನ ಚೈವೋಪಯಿಕೀ ಭಾರ್ಯಾ ಮಾನುಷೀ ಕೃಪಣಾ ತವ।
03265021c ವಿವಶಾಂ ಧರ್ಷಯಿತ್ವಾ ಚ ಕಾಂ ತ್ವಂ ಪ್ರೀತಿಮವಾಪ್ಸ್ಯಸಿ।।

ಕೃಪಣ ಮಾನುಷಿಯಾದ ನಾನು ನಿನ್ನ ಪತ್ನಿಯಾಗಲು ತಕ್ಕವಳಲ್ಲ. ವಿವಶಳಾಗಿರುವವಳನ್ನು ಬಲಾತ್ಕರಿಸಿ ನೀನು ಯಾವ ಪ್ರೀತಿಯನ್ನು ಪಡೆಯುತ್ತೀಯೇ?

03265022a ಪ್ರಜಾಪತಿಸಮೋ ವಿಪ್ರೋ ಬ್ರಹ್ಮಯೋನಿಃ ಪಿತಾ ತವ।
03265022c ನ ಚ ಪಾಲಯಸೇ ಧರ್ಮಂ ಲೋಕಪಾಲಸಮಃ ಕಥಂ।।

ನಿನ್ನ ತಂದೆಯು ಬ್ರಹ್ಮಯೋನಿಯಲ್ಲಿ ಜನಿಸಿ ಪ್ರಜಾಪತಿಯ ಸಮನಾದ ವಿಪ್ರನು. ಲೋಕಪಾಲಕನ ಸಮನಾದ ನೀನೇ ಹೇಗೆ ಧರ್ಮವನ್ನು ಪಾಲಿಸುವುದಿಲ್ಲ?

03265023a ಭ್ರಾತರಂ ರಾಜರಾಜಾನಂ ಮಹೇಶ್ವರಸಖಂ ಪ್ರಭುಂ।
03265023c ಧನೇಶ್ವರಂ ವ್ಯಪದಿಶನ್ಕಥಂ ತ್ವಿಹ ನ ಲಜ್ಜಸೇ।।

ನಿನ್ನ ಅಣ್ಣ ರಾಜರಾಜ ಮಹೇಶ್ವರ ಸಖ ಪ್ರಭೂ ಧನೇಶ್ವರನ ಹೆಸರನ್ನು ತೆಗೆದುಕೊಳ್ಳಲು ನಿನಗೆ ನಾಚಿಕೆಯಾಗುವುದಿಲ್ಲವೇ?”

03265024a ಇತ್ಯುಕ್ತ್ವಾ ಪ್ರಾರುದತ್ಸೀತಾ ಕಂಪಯಂತೀ ಪಯೋಧರೌ।
03265024c ಶಿರೋಧರಾಂ ಚ ತನ್ವಂಗೀ ಮುಖಂ ಪ್ರಚ್ಚಾದ್ಯ ವಾಸಸಾ।।

ಹೀಗೆ ಹೇಳಿ ಮೊಲೆಗಳು ಕಂಪಿಸುತ್ತಿರಲು ಅವಳು ಅಳತೊಡಗಿದಳು ಮತ್ತು ಆ ತನ್ವಂಗಿಯು ತನ್ನ ತಲೆಯನ್ನು ತಗ್ಗಿಸಿ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡಳು.

03265025a ತಸ್ಯಾ ರುದತ್ಯಾ ಭಾಮಿನ್ಯಾ ದೀರ್ಘಾ ವೇಣೀ ಸುಸಮ್ಯತಾ।
03265025c ದದೃಶೇ ಸ್ವಸಿತಾ ಸ್ನಿಗ್ಧಾ ಕಾಲೀ ವ್ಯಾಲೀವ ಮೂರ್ಧನಿ।।

ಅಳುತ್ತಿರುವ ಆ ಭಾಮಿನಿಯ ತಲೆಯ ದೀರ್ಘವಾದ ಚೆನ್ನಾಗಿ ಹೆಣೆದ, ಉದ್ದವಾದ ಕಪ್ಪು ಜಡೆಯು ಹಾವಿನಂತೆ ತೋರಿತು.

03265026a ತಚ್ಚ್ರುತ್ವಾ ರಾವಣೋ ವಾಕ್ಯಂ ಸೀತಯೋಕ್ತಂ ಸುನಿಷ್ಠುರಂ।
03265026c ಪ್ರತ್ಯಾಖ್ಯಾತೋಽಪಿ ದುರ್ಮೇಧಾಃ ಪುನರೇವಾಬ್ರವೀದ್ವಚಃ।।

ಸೀತೆಯು ಹೇಳಿದ ತುಂಬಾ ನಿಷ್ಟುರವಾದ ಆ ಮಾತುಗಳನ್ನು ಕೇಳಿ ರಾವಣನು ತಿರಸ್ಕರಿಸಲ್ಪಟ್ಟರೂ ದುರ್ಬುದ್ಧಿಯಿಂದ ಪುನಃ ಹೀಗೆ ಹೇಳಿದನು:

03265027a ಕಾಮಮಂಗಾನಿ ಮೇ ಸೀತೇ ದುನೋತು ಮಕರಧ್ವಜಃ।
03265027c ನ ತ್ವಾಮಕಾಮಾಂ ಸುಶ್ರೋಣೀಂ ಸಮೇಷ್ಯೇ ಚಾರುಹಾಸಿನೀಂ।।

“ಸೀತೆ! ಸುಶ್ರೋಣೀ! ಚಾರುಹಾಸಿನೀ! ಮಕರಧ್ವಜನು ನನ್ನ ಕಾಮವನ್ನು ಅಂಗಗಳನ್ನು ಸುಟ್ಟರೂ ಬಯಸದಿರುವ ನಿನ್ನನ್ನು ಕೂಡುವುದಿಲ್ಲ.

03265028a ಕಿಂ ನು ಶಕ್ಯಂ ಮಯಾ ಕರ್ತುಂ ಯತ್ತ್ವಮದ್ಯಾಪಿ ಮಾನುಷಂ।
03265028c ಆಹಾರಭೂತಮಸ್ಮಾಕಂ ರಾಮಮೇವಾನುರುಧ್ಯಸೇ।।

ಇನ್ನೂ ನೀನು ನಮ್ಮ ಆಹಾರಭೂತನಾದ ಮಾನುಷ ರಾಮನನ್ನೇ ಬಯಸುತ್ತೀಯೆ ಎಂದರೆ ನಾನು ಏನು ಮಾಡಬಲ್ಲೆ?”

03265029a ಇತ್ಯುಕ್ತ್ವಾ ತಾಮನಿಂದ್ಯಾಂಗೀಂ ಸ ರಾಕ್ಷಸಗಣೇಶ್ವರಃ।
03265029c ತತ್ರೈವಾಂತರ್ಹಿತೋ ಭೂತ್ವಾ ಜಗಾಮಾಭಿಮತಾಂ ದಿಶಂ।।

ಅನವದ್ಯಾಂಗಿಗೆ ಹೀಗೆ ಹೇಳಿ ಆ ರಾಕ್ಷಸಗಣೇಶ್ವರನು ಅಲ್ಲಿಯೇ ಅಂತರ್ಧಾನನಾಗಿ ತನಗಿಷ್ಟವಾದ ದಿಕ್ಕಿನಲ್ಲಿ ಹೊರಟು ಹೋದನು.

03265030a ರಾಕ್ಷಸೀಭಿಃ ಪರಿವೃತಾ ವೈದೇಹೀ ಶೋಕಕರ್ಶಿತಾ।
03265030c ಸೇವ್ಯಮಾನಾ ತ್ರಿಜಟಯಾ ತತ್ರೈವ ನ್ಯವಸತ್ತದಾ।।

ಶೋಕಕರ್ಶಿತಳಾದ ರಾಕ್ಷಸಿಯರಿಂದ ಪರಿವೃತಳಾದ ವೈದೇಹಿಯು ತ್ರಿಜಟೆಯಿಂದ ಸೇವಿಸಲ್ಪಟ್ಟು ಅಲ್ಲಿಯೇ ಇದ್ದಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಸೀತಾರಾವಣಸಂವಾದೇ ಪಂಚಷಷ್ಟ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಸೀತಾರಾವಣಸಂವಾದದಲ್ಲಿ ಇನ್ನೂರಾಅರವತ್ತೈದನೆಯ ಅಧ್ಯಾಯವು.