264 ರಾಮೋಪಾಖ್ಯಾನೇ ತ್ರಿಜಟಾಕೃತಸೀತಾಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 264

ಸಾರ

ಸುಗ್ರೀವನೊಡನೆ ರಾಮನು ಸಖ್ಯ ಮಾಡಿಕೊಂಡಿದುದು (1-11). ರಾಮನು ಮಾಡಿದ ಪ್ರತಿಜ್ಞೆಯಂತೆ ಸುಗ್ರೀವನ ಅಣ್ಣ ವಾಲಿಯನ್ನು ವಧಿಸಿ ಅವನಿಗೆ ಪತ್ನಿ ತಾರೆಯನ್ನು ದೊರಕಿಸಿದುದು (12-40). ರಾಕ್ಷಸಿಯರ ಕಾವಲಿನಲ್ಲಿ ಲಂಕೆಯ ಅಶೋಕವನದಲ್ಲಿರಿಸಲ್ಪಟ್ಟಿದ್ದ ಸೀತೆಯು ದುಃಖಿಸುವಾಗ ತ್ರಿಜಟೆಯು ರಾಕ್ಷಸ ಅವಿಂಧ್ಯನ ಸ್ವಪ್ನದ ಕುರಿತು ಹೇಳಿ ಭರವಸೆಯನ್ನು ನೀಡಿದುದು (41-73).

03264001 ಮಾರ್ಕಂಡೇಯ ಉವಾಚ।
03264001a ತತೋಽವಿದೂರೇ ನಲಿನೀಂ ಪ್ರಭೂತಕಮಲೋತ್ಪಲಾಂ।
03264001c ಸೀತಾಹರಣದುಃಖಾರ್ತಃ ಪಂಪಾಂ ರಾಮಃ ಸಮಾಸದತ್।।

ಮಾರ್ಕಂಡೇಯನು ಹೇಳಿದನು: “ಸೀತಾಹರಣದಿಂದ ದುಃಖಾರ್ತನಾದ ರಾಮನು ಹತ್ತಿರದಲ್ಲಿಯೇ ಇದ್ದ ರಾತ್ರಿ ಮತ್ತು ಪ್ರಭಾತಕಾಲಗಳಲ್ಲಿ ಅರಳುತ್ತಿದ್ದ ಕಮಲಗಳಿಂದ ಕೂಡಿದ ಪಂಪಾ ಸರೋವರವನ್ನು ಸೇರಿದನು.

03264002a ಮಾರುತೇನ ಸುಶೀತೇನ ಸುಖೇನಾಮೃತಗಂಧಿನಾ।
03264002c ಸೇವ್ಯಮಾನೋ ವನೇ ತಸ್ಮಿಂ ಜಗಾಮ ಮನಸಾ ಪ್ರಿಯಾಂ।।

ಮನಸ್ಸನ್ನು ತನ್ನ ಪ್ರಿಯೆಯ ಕಡೆ ಕೊಟ್ಟು, ಶೀತಲ ಮಾರುತವು ಅಮೃತದ ಪರಿಮಳವನ್ನು ಹೊತ್ತು ಸುಖವಾಗಿ ಬೀಸುತ್ತಿರುವ ಆ ವನಕ್ಕೆ ಹೋದನು.

03264003a ವಿಲಲಾಪ ಸ ರಾಜೇಂದ್ರಸ್ತತ್ರ ಕಾಂತಾಮನುಸ್ಮರನ್।
03264003c ಕಾಮಬಾಣಾಭಿಸಂತಪ್ತಃ ಸೌಮಿತ್ರಿಸ್ತಮಥಾಬ್ರವೀತ್।।

ಆ ರಾಜೇಂದ್ರನು ಅಲ್ಲಿ ಕಾಂತೆಯನ್ನು ನೆನಪಿಸಿಕೊಂಡು, ಕಾಮಬಾಣದಿಂದ ಸಂತಪ್ತನಾಗಿ ವಿಲಪಿಸಿದನು. ಆಗ ಸೌಮಿತ್ರಿಯು ಹೇಳಿದನು:

03264004a ನ ತ್ವಾಮೇವಂವಿಧೋ ಭಾವಃ ಸ್ಪ್ರಷ್ಟುಮರ್ಹತಿ ಮಾನದ।
03264004c ಆತ್ಮವಂತಮಿವ ವ್ಯಾಧಿಃ ಪುರುಷಂ ವೃದ್ಧಶೀಲಿನಂ।।

“ಮಾನದ! ಈ ವಿಧದ ಭಾವನೆಯು, ಆತ್ಮವಂತ ವೃದ್ಧಶೀಲ ಪುರುಷನನ್ನು ವ್ಯಾಧಿಯಂತೆ ನಿನ್ನನ್ನು ಮುಟ್ಟಬಾರದು.

03264005a ಪ್ರವೃತ್ತಿರುಪಲಬ್ಧಾ ತೇ ವೈದೇಃಯಾ ರಾವಣಸ್ಯ ಚ।
03264005c ತಾಂ ತ್ವಂ ಪುರುಷಕಾರೇಣ ಬುದ್ಧ್ಯಾ ಚೈವೋಪಪಾದಯ।।

ನಿನಗೆ ಈಗ ವೈದೇಹಿ ಮತ್ತು ರಾವಣರ ಕುರುಹು ದೊರಕಿದೆ. ಈಗ ನೀನು ನಿನ್ನ ಪುರುಷತ್ವದಿಂದ ಮತ್ತು ಬುದ್ಧಿಯಿಂದ ಅವಳನ್ನು ಮರಳಿ ಪಡೆದುಕೋ.

03264006a ಅಭಿಗಚ್ಚಾವ ಸುಗ್ರೀವಂ ಶೈಲಸ್ಥಂ ಹರಿಪುಂಗವಂ।
03264006c ಮಯಿ ಶಿಷ್ಯೇ ಚ ಭೃತ್ಯೇ ಚ ಸಹಾಯೇ ಚ ಸಮಾಶ್ವಸ।।

ಪರ್ವತದಲ್ಲಿ ನೆಲೆಸಿರುವ ಹರಿಪುಂಗವ ಸುಗ್ರೀವನಲ್ಲಿಗೆ ಹೋಗೋಣ. ನಾನು ನಿನ್ನ ಶಿಷ್ಯ, ಸೇವಕ ಮತ್ತು ಸಹಾಯಕನಾಗಿರುವವರೆಗೆ ಧೈರ್ಯದಿಂದಿರು.”

03264007a ಏವಂ ಬಹುವಿಧೈರ್ವಾಕ್ಯೈರ್ಲಕ್ಷ್ಮಣೇನ ಸ ರಾಘವಃ।
03264007c ಉಕ್ತಃ ಪ್ರಕೃತಿಮಾಪೇದೇ ಕಾರ್ಯೇ ಚಾನಂತರೋಽಭವತ್।।

ಲಕ್ಷ್ಮಣನ ಈ ಬಹುವಿಧದ ಮಾತುಗಳಿಂದ ರಾಘವನು ಸ್ವಭಾವವನ್ನು ಪಡೆದು ಮಾಡಬೇಕಾದ ಕಾರ್ಯದಲ್ಲಿ ಮನಸ್ಸನ್ನು ತೊಡಗಿಸಿಕೊಂಡನು.

03264008a ನಿಷೇವ್ಯ ವಾರಿ ಪಂಪಾಯಾಸ್ತರ್ಪಯಿತ್ವಾ ಪಿತೄನಪಿ।
03264008c ಪ್ರತಸ್ಥತುರುಭೌ ವೀರೌ ಭ್ರಾತರೌ ರಾಮಲಕ್ಷ್ಮಣೌ।।

ಪಂಪಾಸರೋವರದ ನೀರನ್ನು ಬಳಸಿ, ಪಿತೃಗಳಿಗೆ ತರ್ಪಣಗಳನ್ನಿತ್ತು ಆ ಇಬ್ಬರು ವೀರ ಸಹೋದರ ರಾಮ-ಲಕ್ಷ್ಮಣರು ಮುಂದುವರೆದರು.

03264009a ತಾವೃಶ್ಯಮೂಕಮಭ್ಯೇತ್ಯ ಬಹುಮೂಲಫಲಂ ಗಿರಿಂ।
03264009c ಗಿರ್ಯಗ್ರೇ ವಾನರಾನ್ಪಂಚ ವೀರೌ ದದೃಶತುಸ್ತದಾ।।

ಬಹಳ ಫಲಮೂಲಗಳನ್ನು ಹೊಂದಿದ್ದ ಋಶ್ಯಮೂಕ ಗಿರಿಯನ್ನು ಸೇರಿ ಆ ವೀರರಿಬ್ಬರೂ ಗಿರಿಯಾಗ್ರದಲ್ಲಿ ಐವರು ವಾನರರನ್ನು ಕಂಡರು.

03264010a ಸುಗ್ರೀವಃ ಪ್ರೇಷಯಾಮಾಸ ಸಚಿವಂ ವಾನರಂ ತಯೋಃ।
03264010c ಬುದ್ಧಿಮಂತಂ ಹನೂಮಂತಂ ಹಿಮವಂತಮಿವ ಸ್ಥಿತಂ।।

ಸುಗ್ರೀವನು ಅವರ ಬಳಿ ತನ್ನ ಸಚಿವ ಬುದ್ಧಿವಂತ, ಹಿಮವತ್ಪರ್ವತದಂದಿರುವ ಹನೂಮಂತನನ್ನು ಕಳುಹಿಸಿದನು.

03264011a ತೇನ ಸಂಭಾಷ್ಯ ಪೂರ್ವಂ ತೌ ಸುಗ್ರೀವಮಭಿಜಗ್ಮತುಃ।
03264011c ಸಖ್ಯಂ ವಾನರರಾಜೇನ ಚಕ್ರೇ ರಾಮಸ್ತತೋ ನೃಪ।।

ನೃಪ! ಮೊದಲು ಅವನೊಡನೆ ಸಂಭಾಷಿಸಿ, ಅವರಿಬ್ಬರೂ ಸುಗ್ರೀವನಲ್ಲಿಗೆ ಹೋದರು. ಆಗ ರಾಮನು ವಾನರರಾಜನೊಡನೆ ಸಖ್ಯವನ್ನು ಮಾಡಿಕೊಂಡನು.

03264012a ತದ್ವಾಸೋ ದರ್ಶಯಾಮಾಸುಸ್ತಸ್ಯ ಕಾರ್ಯೇ ನಿವೇದಿತೇ।
03264012c ವಾನರಾಣಾಂ ತು ಯತ್ಸೀತಾ ಹ್ರಿಯಮಾಣಾಭ್ಯವಾಸೃಜತ್।।

ಅವನ ಕಾರ್ಯವೇನೆಂದು ಹೇಳಿಕೊಳ್ಳಲು, ಅಪಹರಿಸಿಕೊಂಡು ಹೋಗುತ್ತಿರುವಾಗ ಸೀತೆಯು ವಾನರರ ಮಧ್ಯೆ ಬಿಸಾಡಿದ್ದ ವಸ್ತ್ರವನ್ನು ಅವನಿಗೆ ತೋರಿಸಿದರು.

03264013a ತತ್ಪ್ರತ್ಯಯಕರಂ ಲಬ್ಧ್ವಾ ಸುಗ್ರೀವಂ ಪ್ಲವಗಾಧಿಪಂ।
03264013c ಪೃಥಿವ್ಯಾಂ ವಾನರೈಶ್ವರ್ಯೇ ಸ್ವಯಂ ರಾಮೋಽಭ್ಯಷೇಚಯತ್।।

ವಾನರರಾಜ ಸುಗ್ರೀವನು ತನ್ನ ವಿಶ್ವಾಸಕ್ಕೆ ಅರ್ಹನಾದವನೆಂದು ತಿಳಿದು ಸ್ವಯಂ ರಾಮನು ಅವನನ್ನು ಪೃಥಿವಿಯ ವಾನರೇಶ್ವರನೆಂದು ಅಭಿಷೇಕಿಸಿದನು.

03264014a ಪ್ರತಿಜಜ್ಞೇ ಚ ಕಾಕುತ್ಸ್ಥಃ ಸಮರೇ ವಾಲಿನೋ ವಧಂ।
03264014c ಸುಗ್ರೀವಶ್ಚಾಪಿ ವೈದೇಃಯಾಃ ಪುನರಾನಯನಂ ನೃಪ।।

ನೃಪ! ಕಾಕುತ್ಸ್ಥನು ಸಮರದಲ್ಲಿ ವಾಲಿಯನ್ನು ವಧಿಸುವೆನೆಂದೂ, ಸುಗ್ರೀವನು ವೈದೇಹಿಯನ್ನು ಪುನಃ ತರುವೆನೆಂದೂ ಪ್ರತಿಜ್ಞೆಗಳನ್ನು ಮಾಡಿದರು.

03264015a ಇತ್ಯುಕ್ತ್ವಾ ಸಮಯಂ ಕೃತ್ವಾ ವಿಶ್ವಾಸ್ಯ ಚ ಪರಸ್ಪರಂ।
03264015c ಅಭ್ಯೇತ್ಯ ಸರ್ವೇ ಕಿಷ್ಕಿಂಧಾಂ ತಸ್ಥುರ್ಯುದ್ಧಾಭಿಕಾಂಕ್ಷಿಣಃ।।

ಹೀಗೆ ಹೇಳಿ ಪರಸ್ಪರ ವಿಶ್ವಾಸದಿಂದ ಒಪ್ಪಂದವನ್ನು ಮಾಡಿಕೊಂಡು ಅವರೆಲ್ಲರೂ ಯುದ್ಧಾಕಾಂಕ್ಷಿಗಳಾಗಿ ಕಿಷ್ಕಿಂಧೆಗೆ ಬಂದರು.

03264016a ಸುಗ್ರೀವಃ ಪ್ರಾಪ್ಯ ಕಿಷ್ಕಿಂಧಾಂ ನನಾದೌಘನಿಭಸ್ವನಃ।
03264016c ನಾಸ್ಯ ತನ್ಮಮೃಷೇ ವಾಲೀ ತಂ ತಾರಾ ಪ್ರತ್ಯಷೇಧಯತ್।।

ಕಿಷ್ಕಿಂಧೆಯನ್ನು ತಲುಪಿ ಸುಗ್ರೀವನು ಪ್ರಣಯದಂತೆ ಕೂಗಿಕರೆಯಲು, ವಾಲಿಗೆ ಅದನ್ನು ಸಹಿಸಲಾಗಲಿಲ್ಲ. ತಾರೆಯು ಅವನನ್ನು ತಡೆದಳು.

03264017a ಯಥಾ ನದತಿ ಸುಗ್ರೀವೋ ಬಲವಾನೇಷ ವಾನರಃ।
03264017c ಮನ್ಯೇ ಚಾಶ್ರಯವಾನ್ಪ್ರಾಪ್ತೋ ನ ತ್ವಂ ನಿರ್ಗಂತುಮರ್ಹಸಿ।।

“ಬಲವಾನ್ ವಾನರ ಸುಗ್ರೀವನು ಕೂಗುವ ರೀತಿಯನ್ನು ನೋಡಿದರೆ ಅವನಿಗೆ ಆಶ್ರಯವನ್ನೀಡುವವನು ದೊರಕಿದ್ದಾನೆ ಎಂದೆನ್ನಿಸುತ್ತದೆ. ನೀನು ಹೊರಹೋಗಬಾರದು.”

03264018a ಹೇಮಮಾಲೀ ತತೋ ವಾಲೀ ತಾರಾಂ ತಾರಾಧಿಪಾನನಾಂ।
03264018c ಪ್ರೋವಾಚ ವಚನಂ ವಾಗ್ಮೀ ತಾಂ ವಾನರಪತಿಃ ಪತಿಃ।।

ಆಗ ಹೇಮಮಾಲಿ ವಾಗ್ಮೀ ವಾನರಪತಿ ಪತಿ ವಾಲಿಯು ತಾರಾಧಿಪನ ಮೊಗದ ತಾರೆಗೆ ಈ ಮಾತನ್ನಾಡಿದನು:

03264019a ಸರ್ವಭೂತರುತಜ್ಞಾ ತ್ವಂ ಪಶ್ಯ ಬುದ್ಧ್ಯಾ ಸಮನ್ವಿತಾ।
03264019c ಕೇನಾಪಾಶ್ರಯವಾನ್ಪ್ರಾಪ್ತೋ ಮಮೈಷ ಭ್ರಾತೃಗಂಧಿಕಃ।।

“ಎಲ್ಲ ಭೂತಗಳ ಕೂಗುಗಳೂ ನಿನಗೆ ತಿಳಿದಿದೆ. ನೀನು ಬುದ್ಧಿಯಲ್ಲಿ ನೋಡುವ ಶಕ್ತಿಯನ್ನೂ ಹೊಂದಿದ್ದೀಯೆ. ನನ್ನ ಈ ಸುಳ್ಳು ತಮ್ಮನು ಯಾರ ಆಶ್ರಯವನ್ನು ಪಡೆದಿದ್ದಾನೆ ಹೇಳು.”

03264020a ಚಿಂತಯಿತ್ವಾ ಮುಹೂರ್ತಂ ತು ತಾರಾ ತಾರಾಧಿಪಪ್ರಭಾ।
03264020c ಪತಿಮಿತ್ಯಬ್ರವೀತ್ಪ್ರಾಜ್ಞಾ ಶೃಣು ಸರ್ವಂ ಕಪೀಶ್ವರ।।

ಸ್ವಲ್ಪಹೊತ್ತು ಅಲೋಚಿಸಿ ತಾರಾಧಿಪನ ಪ್ರಭೆಯ, ಪ್ರಾಜ್ಞೆ ತಾರೆಯು ಪತಿಗೆ ಉತ್ತರಿಸಿದಳು: “ಕಪೀಶ್ವರ! ಎಲ್ಲವನ್ನೂ ಕೇಳು.

03264021a ಹೃತದಾರೋ ಮಹಾಸತ್ತ್ವೋ ರಾಮೋ ದಶರಥಾತ್ಮಜಃ।
03264021c ತುಲ್ಯಾರಿಮಿತ್ರತಾಂ ಪ್ರಾಪ್ತಃ ಸುಗ್ರೀವೇಣ ಧನುರ್ಧರಃ।।

ಪತ್ನಿಯನ್ನು ಕಳೆದುಕೊಂಡ ಮಹಾಸತ್ವಯುತ ಧನುರ್ಧಾರಿ ರಾಮ ಧಶರಥಾತ್ಮಜನು ಇಬ್ಬರೂ ಒಂದೇ ವೈರಿಗಳನ್ನಿಟ್ಟುಕೊಂಡು ಸುಗ್ರೀವನನ್ನು ಸೇರಿದ್ದಾನೆ.

03264022a ಭ್ರಾತಾ ಚಾಸ್ಯ ಮಹಾಬಾಹುಃ ಸೌಮಿತ್ರಿರಪರಾಜಿತಃ।
03264022c ಲಕ್ಷ್ಮಣೋ ನಾಮ ಮೇಧಾವೀ ಸ್ಥಿತಃ ಕಾರ್ಯಾರ್ಥಸಿದ್ಧಯೇ।।

ಅವನ ತಮ್ಮ ಮಹಾಬಾಹು, ಸೌಮಿತ್ರಿ, ಅಪರಾಜಿತ, ಲಕ್ಷ್ಮಣ ಎಂಬ ಹೆಸರಿನ ಮೇಧಾವಿಯೂ ಕಾರ್ಯಾರ್ಥಸಿದ್ಧಿಗಾಗಿ ನಿಂತಿದ್ದಾನೆ.

03264023a ಮೈಂದಶ್ಚ ದ್ವಿವಿದಶ್ಚೈವ ಹನೂಮಾಂಶ್ಚಾನಿಲಾತ್ಮಜಃ।
03264023c ಜಾಂಬವಾನೃಕ್ಷರಾಜಶ್ಚ ಸುಗ್ರೀವಸಚಿವಾಃ ಸ್ಥಿತಾಃ।।

ಮೈಂದ, ದ್ವಿವಿದ, ಅನಿಲಾತ್ಮಜ ಹನೂಮಂತ, ಮತ್ತು ಕರಡಿಗಳ ರಾಜ ಜಾಂಬವಾನನು ಸುಗ್ರೀವನ ಸಚಿವರಾಗಿ ನಿಂತಿದ್ದಾರೆ.

03264024a ಸರ್ವ ಏತೇ ಮಹಾತ್ಮಾನೋ ಬುದ್ಧಿಮಂತೋ ಮಹಾಬಲಾಃ।
03264024c ಅಲಂ ತವ ವಿನಾಶಾಯ ರಾಮವೀರ್ಯವ್ಯಪಾಶ್ರಯಾತ್।।

ಈ ಎಲ್ಲ ಮಹಾತ್ಮರೂ, ಬುದ್ಧಿವಂತರೂ, ಮಹಾಬಲರೂ ನಿನ್ನ ವಿನಾಶಕ್ಕಾಗಿಯೇ ರಾಮನ ವೀರ್ಯವನ್ನು ಆಶ್ರಯಿಸಿದ್ದಾರೆ.”

03264025a ತಸ್ಯಾಸ್ತದಾಕ್ಷಿಪ್ಯ ವಚೋ ಹಿತಮುಕ್ತಂ ಕಪೀಶ್ವರಃ।
03264025c ಪರ್ಯಶಂಕತ ತಾಮೀರ್ಷುಃ ಸುಗ್ರೀವಗತಮಾನಸಾಂ।।

ಅವನ ಹಿತಕ್ಕಾಗಿಯೇ ಹೇಳಿದ ಅವಳ ಮಾತುಗಳನ್ನು, ಅವಳು ಗುಟ್ಟಾಗಿ ಸುಗ್ರೀವನನ್ನು ಪ್ರೀತಿಸುತ್ತಿದ್ದಾಳೆಂದು ಅಸೂಯೆಪಟ್ಟು, ಕಡೆಗಣಿಸಿದನು.

03264026a ತಾರಾಂ ಪರುಷಮುಕ್ತ್ವಾ ಸ ನಿರ್ಜಗಾಮ ಗುಹಾಮುಖಾತ್।
03264026c ಸ್ಥಿತಂ ಮಾಲ್ಯವತೋಽಭ್ಯಾಶೇ ಸುಗ್ರೀವಂ ಸೋಽಭ್ಯಭಾಷತ।।

ತಾರೆಗೆ ಖಾರವಾಗಿ ಮಾತನಾಡಿ ಅವನು ಗುಹೆಯ ಹೊರಗೆ ಬಂದು ಮಾಲ್ಯವತದ ಬಳಿ ನಿಂತಿದ್ದ ಸುಗ್ರೀವನಿಗೆ ಹೇಳಿದನು:

03264027a ಅಸಕೃತ್ತ್ವಂ ಮಯಾ ಮೂಢ ನಿರ್ಜಿತೋ ಜೀವಿತಪ್ರಿಯಃ।
03264027c ಮುಕ್ತೋ ಜ್ಞಾತಿರಿತಿ ಜ್ಞಾತ್ವಾ ಕಾ ತ್ವರಾ ಮರಣೇ ಪುನಃ।।

“ಮೂಢ! ನನಗೆ ಜೀವದಷ್ಟೇ ಪ್ರಿಯನಾದ ನಿನ್ನನ್ನು ಬಹಳಷ್ಟು ಬಾರಿ ಸೋಲಿಸಿದ್ದೇನೆ. ಅಣ್ಣನು ಬಿಡುಗಡೆ ಮಾಡುತ್ತಾನೆಂದು ತಿಳಿದು ಪುನಃ ಮರಣದ ದಾರಿಗೆ ಏಕೆ ತ್ವರೆಮಾಡುತ್ತಿರುವೆ?”

03264028a ಇತ್ಯುಕ್ತಃ ಪ್ರಾಹ ಸುಗ್ರೀವೋ ಭ್ರಾತರಂ ಹೇತುಮದ್ವಚಃ।
03264028c ಪ್ರಾಪ್ತಕಾಲಮಮಿತ್ರಘ್ನೋ ರಾಮಂ ಸಂಬೋಧಯನ್ನಿವ।।

ಇದನ್ನು ಕೇಳಿದ ಅಮಿತ್ರಘ್ನ ಸುಗ್ರೀವನು, ಕಾಲವು ಪ್ರಾಪ್ತವಾಗಿದೆಯೆಂದು ರಾಮನಿಗೆ ಸೂಚಿಸುತ್ತಿರುವಂತೆ, ಅಣ್ಣನಿಗೆ ಬುದ್ಧಿಮಾತನ್ನು ಹೇಳಿದನು.

03264029a ಹೃತದಾರಸ್ಯ ಮೇ ರಾಜನ್ ಹೃತರಾಜ್ಯಸ್ಯ ಚ ತ್ವಯಾ।
03264029c ಕಿಂ ನು ಜೀವಿತಸಾಮರ್ಥ್ಯಮಿತಿ ವಿದ್ಧಿ ಸಮಾಗತಂ।।

“ರಾಜನ್! ನನ್ನ ಪತ್ನಿಯನ್ನು ಕಳೆದುಕೊಂಡು, ನಿನ್ನಿಂದ ರಾಜ್ಯವನ್ನೂ ಕಳೆದುಕೊಡು ಇನ್ನು ಜೀವಿತದ ಸಾಮರ್ಥ್ಯವೇನು ಎಂದು ತಿಳಿದು ಬಂದಿದ್ದೇನೆ.”

03264030a ಏವಮುಕ್ತ್ವಾ ಬಹುವಿಧಂ ತತಸ್ತೌ ಸಮ್ನಿಪೇತತುಃ।
03264030c ಸಮರೇ ವಾಲಿಸುಗ್ರೀವೌ ಶಾಲತಾಲಶಿಲಾಯುಧೌ।।

ಈ ರೀತಿ ಬಹುವಿಧದಲ್ಲಿ ಅವರಿಬ್ಬರೂ ಮಾತನಾಡಿ ಸಮರದಲ್ಲಿ ವಾಲಿ-ಸುಗ್ರೀವರು ಶಾಲವೃಕ್ಷ, ತಾಳೆಯ ಮರ ಮತ್ತು ಕಲ್ಲುಗಳನ್ನೇ ಆಯುಧಗಳನ್ನಾಗಿಸಿ ಹೊಡೆದಾಡಿದರು.

03264031a ಉಭೌ ಜಘ್ನತುರನ್ಯೋನ್ಯಮುಭೌ ಭೂಮೌ ನಿಪೇತತುಃ।
03264031c ಉಭೌ ವವಲ್ಗತುಶ್ಚಿತ್ರಂ ಮುಷ್ಟಿಭಿಶ್ಚ ನಿಜಘ್ನತುಃ।।

ಇಬ್ಬರೂ ಅನ್ಯೋನ್ಯರನ್ನು ಗಾಯಗೊಳಿಸಿದರು, ಇಬ್ಬರೂ ಭೂಮಿಯ ಮೇಲೆ ಬಿದ್ದರು, ಇಬ್ಬರೂ ವಿಚಿತ್ರವಾಗಿ ಹಾರಿದರು, ಮತ್ತು ಮುಷ್ಟಿಗಳಿಂದ ಹೊಡೆದಾಡಿದರು.

03264032a ಉಭೌ ರುಧಿರಸಂಸಿಕ್ತೌ ನಖದಂತಪರಿಕ್ಷತೌ।
03264032c ಶುಶುಭಾತೇ ತದಾ ವೀರೌ ಪುಷ್ಪಿತಾವಿವ ಕಿಂಶುಕೌ।।

ಇಬ್ಬರೂ ಉಗುರು ಮತ್ತು ಹಲ್ಲುಗಳಿಂದ ಗಾಯಗೊಂಡು ರಕ್ತದಲ್ಲಿ ತೋಯ್ದು ಆ ವೀರರಿಬ್ಬರೂ ಹೂವಿಟ್ಟ ಕುಂಶುಕ ವೃಕ್ಷಗಳಂತೆ ಶೋಭಿಸುತ್ತಿದ್ದರು.

03264033a ನ ವಿಶೇಷಸ್ತಯೋರ್ಯುದ್ಧೇ ತದಾ ಕಶ್ಚನ ದೃಶ್ಯತೇ।
03264033c ಸುಗ್ರೀವಸ್ಯ ತದಾ ಮಾಲಾಂ ಹನೂಮಾನ್ಕಂಠ ಆಸಜತ್।।

ಯುದ್ಧದಲ್ಲಿ ಅವರಿಬ್ಬರಲ್ಲಿ ಯಾರೂ ವಿಶೇಷವಾಗಿ ಕಂಡುಬರಲಿಲ್ಲ. ಆಗ ಹನುಮಂತನು ಸುಗ್ರೀವನ ಕಂಠಕ್ಕೆ ಮಾಲೆಯನ್ನು ಹಾಕಿದನು.

03264034a ಸ ಮಾಲಯಾ ತದಾ ವೀರಃ ಶುಶುಭೇ ಕಂಠಸಕ್ತಯಾ।
03264034c ಶ್ರೀಮಾನಿವ ಮಹಾಶೈಲೋ ಮಲಯೋ ಮೇಘಮಾಲಯಾ।।

ಆಗ ಆ ಮಾಲೆಯಿಂದ ವೀರನು ಮೇಘವು ಮುಚ್ಚಿರುವ ಮಹಾಶೈಲ ಶ್ರೀಮಾನ್ ಮಲಯದಂತೆ ಶೋಭಿಸಿದನು.

03264035a ಕೃತಚಿಹ್ನಂ ತು ಸುಗ್ರೀವಂ ರಾಮೋ ದೃಷ್ಟ್ವಾ ಮಹಾಧನುಃ।
03264035c ವಿಚಕರ್ಷ ಧನುಃಶ್ರೇಷ್ಠಂ ವಾಲಿಮುದ್ದಿಶ್ಯ ಲಕ್ಷ್ಯವತ್।।

ಸುಗ್ರೀವನು ಸೂಚನೆಯನ್ನು ನೀಡಿದ್ದುದನ್ನು ನೋಡಿ ರಾಮನು ಮಹಾಧನುಸ್ಸನ್ನು ಎಳೆದು ವಾಲಿಗೆ ಗುರಿಯಿಟ್ಟನು.

03264036a ವಿಸ್ಫಾರಸ್ತಸ್ಯ ಧನುಷೋ ಯಂತ್ರಸ್ಯೇವ ತದಾ ಬಭೌ।
03264036c ವಿತತ್ರಾಸ ತದಾ ವಾಲೀ ಶರೇಣಾಭಿಹತೋ ಹೃದಿ।।

ಆ ಧನುಸ್ಸಿನ ಶಬ್ಧವು ಯಂತ್ರದಿಂದ ಹೊರಟಿತೋ ಎನ್ನುವಂತೆ ಕೇಳಿಬಂದಿತು. ಹೃದಯಕ್ಕೆ ಬಾಣವು ಹೊಡೆಯಲು ವಾಲಿಯು ಕೆಳಗುರುಳಿದನು.

03264037a ಸ ಭಿನ್ನಮರ್ಮಾಭಿಹತೋ ವಕ್ತ್ರಾಚ್ಚೋಣಿತಮುದ್ವಮನ್।
03264037c ದದರ್ಶಾವಸ್ಥಿತಂ ರಾಮಮಾರಾತ್ಸೌಮಿತ್ರಿಣಾ ಸಹ।।

ಮರ್ಮಸ್ಥಾನಕ್ಕೆ ಪೆಟ್ಟಾಗಿ ತುಂಡಾಗಲು ಬಾಯಿಯಿಂದ ರಕ್ತವನ್ನು ಕಾರುತ್ತಾ ಅವನು ರಾಮನೂ ಮತ್ತು ಜೊತೆಯಲ್ಲಿ ಸೌಮಿತ್ರಿಯೂ ನಿಂತಿರುವುದನ್ನು ನೋಡಿದನು.

03264038a ಗರ್ಹಯಿತ್ವಾ ಸ ಕಾಕುತ್ಸ್ಥಂ ಪಪಾತ ಭುವಿ ಮೂರ್ಚಿತಃ।
03264038c ತಾರಾ ದದರ್ಶ ತಂ ಭೂಮೌ ತಾರಾಪತಿಮಿವ ಚ್ಯುತಂ।।

ಕಾಕುತ್ಸ್ಥನನ್ನು ಬೈಯುತ್ತಾ ಅವನು ಮೂರ್ಛಿತನಾಗಿ ಭೂಮಿಯ ಮೇಲೆ ಬಿದ್ದನು. ತಾರೆಗೆ ಅವನು ಕೆಳಗೆ ಬಿದ್ದ ತಾರಾಪತಿಯಂತೆ ಕಂಡನು.

03264039a ಹತೇ ವಾಲಿನಿ ಸುಗ್ರೀವಃ ಕಿಷ್ಕಿಂಧಾಂ ಪ್ರತ್ಯಪದ್ಯತ।
03264039c ತಾಂ ಚ ತಾರಾಪತಿಮುಖೀಂ ತಾರಾಂ ನಿಪತಿತೇಶ್ವರಾಂ।।

ವಾಲಿಯು ಹತನಾಗಲು ಸುಗ್ರೀವನು ಕಿಷ್ಕಿಂಧೆಯನ್ನು, ಮತ್ತು ಯಾರ ಒಡೆಯನು ಬಿದ್ದಿದ್ದನೋ ಆ ತಾರಾಪತಿಮುಖಿ ತಾರೆಯನ್ನು ಮರಳಿ ಪಡೆದನು.

03264040a ರಾಮಸ್ತು ಚತುರೋ ಮಾಸಾನ್ಪೃಷ್ಠೇ ಮಾಲ್ಯವತಃ ಶುಭೇ।
03264040c ನಿವಾಸಮಕರೋದ್ಧೀಮಾನ್ಸುಗ್ರೀವೇಣಾಭ್ಯುಪಸ್ಥಿತಃ।।

ಧೀಮಂತ ರಾಮನಾದರೋ ಚಾತುರ್ಮಾಸವನ್ನು ಶುಭ ಮಾಲ್ಯವತದ ಹಿಂದೆ ಸುಗ್ರೀವನ ಸೇವೆಯಲ್ಲಿ ವಾಸಿಸಿದನು.

03264041a ರಾವಣೋಽಪಿ ಪುರೀಂ ಗತ್ವಾ ಲಂಕಾಂ ಕಾಮಬಲಾತ್ಕೃತಃ।
03264041c ಸೀತಾಂ ನಿವೇಶಯಾಮಾಸ ಭವನೇ ನಂದನೋಪಮೇ।
03264041e ಅಶೋಕವನಿಕಾಭ್ಯಾಶೇ ತಾಪಸಾಶ್ರಮಸನ್ನಿಭೇ।।

ರಾವಣನು ಕಾಮಬಲದಿಂದ ಎಳೆಯಲ್ಪಟ್ಟು ಲಂಕಾಪುರಿಗೆ ಹೋಗಿ ಸೀತೆಯನ್ನು ನಂದನ ಮತ್ತು ತಾಪಸರ ಆಶ್ರಮದಂತಿದ್ದ ಅಶೋಕವನದ ಹತ್ತಿರದ ಭವನದಲ್ಲಿ ಇರಿಸಿದನು.

03264042a ಭರ್ತೃಸ್ಮರಣತನ್ವಂಗೀ ತಾಪಸೀವೇಷಧಾರಿಣೀ।
03264042c ಉಪವಾಸತಪಃಶೀಲಾ ತತ್ರ ಸಾ ಪೃಥುಲೇಕ್ಷಣಾ।
03264042e ಉವಾಸ ದುಃಖವಸತೀಃ ಫಲಮೂಲಕೃತಾಶನಾ।।

ಪತಿಯ ಕುರಿತು ಚಿಂತಿಸುತ್ತಾ ದೇಹದಲ್ಲಿ ಸೊರಗಿದ, ತಾಪಸಿಯ ವೇಷಧರಿಸಿದ ಆ ಅಗಲ ಕಣ್ಣಿನವಳು ಉಪವಾಸ ಮತ್ತು ತಪಸ್ಸಿನಲ್ಲಿ ತನ್ನನ್ನು ತೊಡಗಿಸಿಕೊಂಡಳು. ಫಲಮೂಲಗಳನ್ನು ತಿನ್ನುತ್ತಾ ಅವಳು ದುಃಖದಲ್ಲಿ ರಾತ್ರಿಗಳನ್ನು ಕಳೆದಳು.

03264043a ದಿದೇಶ ರಾಕ್ಷಸೀಸ್ತತ್ರ ರಕ್ಷಣೇ ರಾಕ್ಷಸಾಧಿಪಃ।
03264043c ಪ್ರಾಸಾಸಿಶೂಲಪರಶುಮುದ್ಗರಾಲಾತಧಾರಿಣೀಃ।।
03264044a ದ್ವ್ಯಕ್ಷೀಂ ತ್ರ್ಯಕ್ಷೀಂ ಲಲಾಟಾಕ್ಷೀಂ ದೀರ್ಘಜಿಹ್ವಾಮಜಿಹ್ವಿಕಾಂ।
03264044c ತ್ರಿಸ್ತನೀಮೇಕಪಾದಾಂ ಚ ತ್ರಿಜಟಾಮೇಕಲೋಚನಾಂ।।

ರಾಕ್ಷಸಾಧಿಪನು ಅಲ್ಲಿ ಅವಳ ಕಾವಲಿಗೆ ಪ್ರಾಸ, ಖಡ್ಗ, ಶೂಲ, ಪರಶು, ಮುದ್ವರ, ಮತ್ತು ದೀವಟಿಗೆಗಳನ್ನು ಹಿಡಿದಿರುವ, ಎರಡು ಕಣ್ಣಿನ, ಮೂರುಕಣ್ಣಿನ, ಹಣೆಯಲ್ಲಿ ಕಣ್ಣನ್ನುಳ್ಳ, ಉದ್ದ ನಾಲಗೆಯ, ನಾಲಗೆಯೇ ಇಲ್ಲದಿರುವ, ಮೂರು ಮೊಲೆಗಳ, ಒಂದೇ ಕಾಲಿನ, ಮೂರು ಜಟೆಯ ಮತ್ತು ಒಂದೇ ಕಣ್ಣುಳ್ಳ ರಾಕ್ಷಸಿಯರನ್ನು ಇರಿಸಿದನು.

03264045a ಏತಾಶ್ಚಾನ್ಯಾಶ್ಚ ದೀಪ್ತಾಕ್ಷ್ಯಃ ಕರಭೋತ್ಕಟಮೂರ್ಧಜಾಃ।
03264045c ಪರಿವಾರ್ಯಾಸತೇ ಸೀತಾಂ ದಿವಾರಾತ್ರಮತಂದ್ರಿತಾಃ।।

ಇವರು ಮತ್ತು ಇತರ ಉರಿಯುತ್ತಿರುವ ಕಣ್ಣುಳ್ಳ ಮತ್ತು ಆನೆಯ ಕೂದಲಿನಂತೆ ಹೊಳೆಯುತ್ತಿರುವ ರಾಕ್ಷಸಿಯರು ಹಗಲು ರಾತ್ರಿಯೂ ಸೀತೆಯನ್ನು ಸುತ್ತುವರೆದು ಎಡೆಬಿಡದೆ ಅವಳನ್ನು ಕಾಡುತ್ತಿದ್ದರು.

03264046a ತಾಸ್ತು ತಾಮಾಯತಾಪಾಂಗೀಂ ಪಿಶಾಚ್ಯೋ ದಾರುಣಸ್ವನಾಃ।
03264046c ತರ್ಜಯಂತಿ ಸದಾ ರೌದ್ರಾಃ ಪರುಷವ್ಯಂಜನಾಕ್ಷರಾಃ।।
03264047a ಖಾದಾಮ ಪಾಟಯಾಮೈನಾಂ ತಿಲಶಃ ಪ್ರವಿಭಜ್ಯ ತಾಂ।
03264047c ಯೇಯಂ ಭರ್ತಾರಮಸ್ಮಾಕಮವಮನ್ಯೇಹ ಜೀವತಿ।।

ಅವರಲ್ಲಿ ದಾರುಣಸ್ವರದ ಪಿಶಾಚಿಗಳು ಆ ಆಯತಾಪಾಂಗಿಯನ್ನು ರೌದ್ರ ಮತ್ತು ಕಠೋರ ವ್ಯಂಜನಾಕ್ಷರಗಳಿಂದ “ನಮ್ಮ ಒಡೆಯನನ್ನು ಅಪಮಾನಿಸಿ ಜೀವಿಸುತ್ತಿರುವ ಇವಳನ್ನು ತಿನ್ನೋಣ! ಇವಳನ್ನು ಕತ್ತರಿಸಿ ಎಳ್ಳಿನ ಹಾಗೆ ಸಣ್ಣಸಣ್ಣದಾಗಿ ತುಂಡುಮಾಡೋಣ!” ಎಂದು ಹೆದರಿಸುತ್ತಿದ್ದರು.

03264048a ಇತ್ಯೇವಂ ಪರಿಭರ್ತ್ಸಂತೀಸ್ತ್ರಾಸ್ಯಮಾನಾ ಪುನಃ ಪುನಃ।
03264048c ಭರ್ತೃಶೋಕಸಮಾವಿಷ್ಟಾ ನಿಃಶ್ವಸ್ಯೇದಮುವಾಚ ತಾಃ।।

ಈ ರೀತಿ ಅವಳನ್ನು ಅವರು ಪುನಃ ಪುನಃ ಬೆದರಿಸಿ ಕಾಡುತ್ತಿರಲು, ಪತಿಯ ಶೋಕದಿಂದ ಸಮಾವಿಷ್ಟಳಾದ ಅವಳು ಹೆದರಿ ಅವರಿಗೆ ಹೇಳಿದಳು:

03264049a ಆರ್ಯಾಃ ಖಾದತ ಮಾಂ ಶೀಘ್ರಂ ನ ಮೇ ಲೋಭೋಽಸ್ತಿ ಜೀವಿತೇ।
03264049c ವಿನಾ ತಂ ಪುಂಡರೀಕಾಕ್ಷಂ ನೀಲಕುಂಚಿತಮೂರ್ಧಜಂ।।

“ಆರ್ಯರೇ! ಬಹುಬೇಗ ನನ್ನನ್ನು ತಿನ್ನಿರಿ! ಆ ಪುಂಡರೀಕಾಕ್ಷ, ಕಪ್ಪು ಗುಂಗುರು ಕೂದಲಿನವನ ವಿನಾ ನನಗೆ ಜೀವದ ಮೇಲೆ ಆಸೆಯಿಲ್ಲ.

03264050a ಅಪ್ಯೇವಾಹಂ ನಿರಾಹಾರಾ ಜೀವಿತಪ್ರಿಯವರ್ಜಿತಾ।
03264050c ಶೋಷಯಿಷ್ಯಾಮಿ ಗಾತ್ರಾಣಿ ವ್ಯಾಲೀ ತಾಲಗತಾ ಯಥಾ।।

ಪ್ರಿಯನ ವರ್ಜಿತಳಾದ ನಾನು ನೀರು ಅಹಾರಗಳನ್ನು ತೊರೆದು ತಾಳೆಯ ಮರದ ಮೇಲಿರುವ ಹಾವಿನಂತೆ ನನ್ನ ದೇಹವನ್ನು ಶೋಷಿಸುತ್ತೇನೆ.

03264051a ನ ತ್ವನ್ಯಮಭಿಗಚ್ಚೇಯಂ ಪುಮಾಂಸಂ ರಾಘವಾದೃತೇ।
03264051c ಇತಿ ಜಾನೀತ ಸತ್ಯಂ ಮೇ ಕ್ರಿಯತಾಂ ಯದನಂತರಂ।।

ಆದರೆ ನಾನು ರಾಘವನನ್ನು ಹೊರತು ಬೇರೆ ಯಾವ ಪುರುಷನನ್ನೂ ಬಳಿಸಾರುವುದಿಲ್ಲ. ಇದು ಸತ್ಯವೆಂದು ತಿಳಿಯಿರಿ. ಇದರ ನಂತರದ್ದು ಏನನ್ನಾದರೂ ಮಾಡಿರಿ.”

03264052a ತಸ್ಯಾಸ್ತದ್ವಚನಂ ಶ್ರುತ್ವಾ ರಾಕ್ಷಸ್ಯಸ್ತಾಃ ಖರಸ್ವನಾಃ।
03264052c ಆಖ್ಯಾತುಂ ರಾಕ್ಷಸೇಂದ್ರಾಯ ಜಗ್ಮುಸ್ತತ್ಸರ್ವಮಾದಿತಃ।।

ಅವಳ ಈ ಮಾತನ್ನು ಕೇಳಿ ಆ ಖರಸ್ವನ ರಾಕ್ಷಸಿಯರು ರಾಕ್ಷಸೇಂದ್ರನಲ್ಲಿಗೆ ಹೋಗಿ ಮೊದಲಿನಿಂದ ನಡೆದುದೆಲ್ಲವನ್ನೂ ವರದಿಮಾಡಿದರು.

03264053a ಗತಾಸು ತಾಸು ಸರ್ವಾಸು ತ್ರಿಜಟಾ ನಾಮ ರಾಕ್ಷಸೀ।
03264053c ಸಾಂತ್ವಯಾಮಾಸ ವೈದೇಹೀಂ ಧರ್ಮಜ್ಞಾ ಪ್ರಿಯವಾದಿನೀ।।

ಅವರೆಲ್ಲರೂ ಹೊರಟು ಹೋದ ನಂತರ ಧರ್ಮಜ್ಞಳು, ಪ್ರಿಯವಾದಿನಿಯೂ ಆದ ತ್ರಿಜಟಾ ಎಂಬ ಹೆಸರಿನ ರಾಕ್ಷಸಿಯು ವೈದೇಹಿಯನ್ನು ಸಂತವಿಸಿದಳು.

img_1.png

03264054a ಸೀತೇ ವಕ್ಷ್ಯಾಮಿ ತೇ ಕಿಂ ಚಿದ್ವಿಶ್ವಾಸಂ ಕುರು ಮೇ ಸಖಿ।
03264054c ಭಯಂ ತೇ ವ್ಯೇತು ವಾಮೋರು ಶೃಣು ಚೇದಂ ವಚೋ ಮಮ।।

“ಸೀತೆ! ಸಖಿ! ನಿನಗೆ ಏನೋ ಸ್ವಲ್ಪ ಹೇಳುತ್ತೇನೆ. ನನ್ನಮೇಲೆ ವಿಶ್ವಾಸವನ್ನಿಡು. ವಾಮೋರು! ನಿನ್ನ ಭಯವು ನಾಶವಾಗಲಿ. ನನ್ನ ಈ ಮಾತುಗಳನ್ನು ಕೇಳು.

03264055a ಅವಿಂಧ್ಯೋ ನಾಮ ಮೇಧಾವೀ ವೃದ್ಧೋ ರಾಕ್ಷಸಪುಂಗವಃ।
03264055c ಸ ರಾಮಸ್ಯ ಹಿತಾನ್ವೇಷೀ ತ್ವದರ್ಥೇ ಹಿ ಸ ಮಾವದತ್।।

ಅವಿಂಧ್ಯ ಎಂಬ ಹೆಸರಿನ ಮೇಧಾವೀ ವೃದ್ಧ ರಾಕ್ಷಸಪುಂಗವನು ರಾಮನ ಹಿತಾನ್ವೇಷಿಯಾಗಿದ್ದು ನಿನ್ನ ಸಲುವಾಗಿ ನನ್ನಲ್ಲಿ ಈ ಮಾತುಗಳನ್ನು ಹೇಳಿದ್ದಾನೆ.

03264056a ಸೀತಾ ಮದ್ವಚನಾದ್ವಾಚ್ಯಾ ಸಮಾಶ್ವಾಸ್ಯ ಪ್ರಸಾದ್ಯ ಚ।
03264056c ಭರ್ತಾ ತೇ ಕುಶಲೀ ರಾಮೋ ಲಕ್ಷ್ಮಣಾನುಗತೋ ಬಲೀ।।

“ಸೀತೆಗೆ ಅವಳನ್ನು ಸಮಾಧಾನ ಪಡಿಸಿ ವಿಶ್ವಾಸಮೂಡಿಸಿದ ನಂತರ ನನ್ನ ಈ ಮಾತುಗಳನ್ನು ಹೇಳು. ನಿನ್ನ ಪತಿ ರಾಮ ಮತ್ತು ಅವನ ತಮ್ಮ ಬಲಶಾಲಿ ಲಕ್ಷ್ಮಣರು ಕುಶಲರಾಗಿದ್ದಾರೆ.

03264057a ಸಖ್ಯಂ ವಾನರರಾಜೇನ ಶಕ್ರಪ್ರತಿಮತೇಜಸಾ।
03264057c ಕೃತವಾನ್ರಾಘವಃ ಶ್ರೀಮಾಂಸ್ತ್ವದರ್ಥೇ ಚ ಸಮುದ್ಯತಃ।।

ನಿನ್ನ ಸಲುವಾಗಿ ಶ್ರೀಮಾನ್ ರಾಘವನು ತೇಜಸ್ಸಿನಲ್ಲಿ ಶಕ್ರನಿಗೆ ಸಮಾನನಾದ ವಾನರರಾಜನೊಂದಿಗೆ ಸಖ್ಯವನ್ನು ಮಾಡಿಕೊಂಡು ಸಿದ್ಧನಾಗಿದ್ದಾನೆ.

03264058a ಮಾ ಚ ತೇಽಸ್ತು ಭಯಂ ಭೀರು ರಾವಣಾಲ್ಲೋಕಗರ್ಹಿತಾತ್।
03264058c ನಲಕೂಬರಶಾಪೇನ ರಕ್ಷಿತಾ ಹ್ಯಸ್ಯನಿಂದಿತೇ।।

ಭೀರು! ಅನಿಂದಿತೇ! ಲೋಕಗಳೇ ಹಳಿಯುತ್ತಿರುವ ರಾವಣನ ಮೇಲೆ ನಿನಗೆ ಭಯವಿಲ್ಲದಿರಲಿ. ನಲಕೂಬರನ ಶಾಪದಿಂದ ನೀನು ರಕ್ಷಿತೆಯಾಗಿದ್ದೀಯೆ.

03264059a ಶಪ್ತೋ ಹ್ಯೇಷ ಪುರಾ ಪಾಪೋ ವಧೂಂ ರಂಭಾಂ ಪರಾಮೃಶನ್।
03264059c ನ ಶಕ್ತೋ ವಿವಶಾಂ ನಾರೀಮುಪೈತುಮಜಿತೇಂದ್ರಿಯಃ।।

ಆ ಪಾಪಿಯು ಹಿಂದೆ ರಂಭೆಯನ್ನು ತನ್ನ ಪತ್ನಿಯನ್ನಾಗಿ ಪಡೆಯಲು ಪ್ರಯತ್ನಿಸಿದುದಕ್ಕೆ ವಿವಶಳಾದ ನಾರಿಯನ್ನು ಹೊಂದಲು ಅವನು ಅಶಕ್ತನಾಗುತ್ತಾನೆಂದು ಶಾಪಕ್ಕೊಳಗಾಗಿದ್ದನು.

03264060a ಕ್ಷಿಪ್ರಮೇಷ್ಯತಿ ತೇ ಭರ್ತಾ ಸುಗ್ರೀವೇಣಾಭಿರಕ್ಷಿತಃ।
03264060c ಸೌಮಿತ್ರಿಸಹಿತೋ ಧೀಮಾಂಸ್ತ್ವಾಂ ಚೇತೋ ಮೋಕ್ಷಯಿಷ್ಯತಿ।।

ಸುಗ್ರೀವನಿಂದ ರಕ್ಷಿತನಾಗಿ ನಿನ್ನ ಪತಿಯು ಸೌಮಿತ್ರಿಯ ಸಹಿತ ಕ್ಷಿಪ್ರವಾಗಿ ಬರುತ್ತಾನೆ ಮತ್ತು ಆ ಧೀಮಂತನು ನಿನ್ನನ್ನು ಇಲ್ಲಿಂದ ಬಿಡುಗಡೆಮಾಡುತ್ತಾನೆ.

03264061a ಸ್ವಪ್ನಾ ಹಿ ಸುಮಹಾಘೋರಾ ದೃಷ್ಟಾ ಮೇಽನಿಷ್ಟದರ್ಶನಾಃ।
03264061c ವಿನಾಶಾಯಾಸ್ಯ ದುರ್ಬುದ್ಧೇಃ ಪೌಲಸ್ತ್ಯಕುಲಘಾತಿನಃ।।

ಅನಿಷ್ಟವನ್ನು ಮತ್ತು ಪೌಲಸ್ತ್ಯಕುಲ ಘಾತಿ, ದುರ್ಬುದ್ಧಿಯ ವಿನಾಶವನ್ನೂ ತೋರುವ ಮಹಾಘೋರ ಸ್ವಪ್ನವನ್ನೂ ಕೂಡ ನಾನು ಕಂಡೆನು.

03264062a ದಾರುಣೋ ಹ್ಯೇಷ ದುಷ್ಟಾತ್ಮಾ ಕ್ಷುದ್ರಕರ್ಮಾ ನಿಶಾಚರಃ।
03264062c ಸ್ವಭಾವಾಚ್ಚೀಲದೋಷೇಣ ಸರ್ವೇಷಾಂ ಭಯವರ್ಧನಃ।।

ದಾರುಣನಾಗಿರುವ ಆ ದುಷ್ಟಾತ್ಮ ನಿಶಾಚರನು ಅವನಿಗೆ ಸ್ವಾಭಾವಿಕವಾಗಿರುವ ಶೀಲದೋಷದಿಂದ ಎಲ್ಲರ ಭಯವನ್ನು ಹೆಚ್ಚಿಸುತ್ತಾನೆ.

03264063a ಸ್ಪರ್ಧತೇ ಸರ್ವದೇವೈರ್ಯಃ ಕಾಲೋಪಹತಚೇತನಃ।
03264063c ಮಯಾ ವಿನಾಶಲಿಂಗಾನಿ ಸ್ವಪ್ನೇ ದೃಷ್ಟಾನಿ ತಸ್ಯ ವೈ।।

ಸರ್ವದೇವತೆಗಳೊಂದಿಗೆ ಸ್ಪರ್ಧಿಸುವ ಆ ಕಾಲೋಪಹತಚೇತನನ ವಿನಾಶದ ಸೂಚನೆಗಳನ್ನು ನಾನು ಸ್ವಪ್ನದಲ್ಲಿ ಕಂಡೆ.

03264064a ತೈಲಾಭಿಷಿಕ್ತೋ ವಿಕಚೋ ಮಜ್ಜನ್ಪಂಕೇ ದಶಾನನಃ।
03264064c ಅಸಕೃತ್ಖರಯುಕ್ತೇ ತು ರಥೇ ನೃತ್ಯನ್ನಿವ ಸ್ಥಿತಃ।।

ದಶಾನನನು ತೈಲದಲ್ಲಿ ಸ್ನಾನಮಾಡಿ ಹೊಳೆಯುತ್ತಾ ಕೆಸರಿಸಿನಲ್ಲಿ ಮುಳುಗುತ್ತಿದ್ದನು ಮತ್ತು ಕತ್ತೆಗಳಿಂದ ಎಳೆಯಲ್ಪಟ್ಟ ರಥದ ಮೇಲೆ ನಿಂತು ಕುಣಿಯುತ್ತಿದ್ದನು.

03264065a ಕುಂಭಕರ್ಣಾದಯಶ್ಚೇಮೇ ನಗ್ನಾಃ ಪತಿತಮೂರ್ಧಜಾಃ।
03264065c ಕೃಷ್ಯಂತೇ ದಕ್ಷಿಣಾಮಾಶಾಂ ರಕ್ತಮಾಲ್ಯಾನುಲೇಪನಾಃ।।

ಕುಂಭಕರ್ಣ ಮತ್ತು ಇತರರು ನಗ್ನರಾಗಿ, ತಲೆಕೂದಲನ್ನು ಕೆರಳಿಸಿಕೊಂಡು, ಕೆಂಪು ಬಣ್ಣವನ್ನು ಬಳಿದುಕೊಂಡು ಕೆಂಪು ಮಾಲೆಯನ್ನು ಧರಿಸಿ ದಕ್ಷಿಣದ ಕಡೆ ಎಳೆದೊಯ್ಯಲ್ಪಡುತ್ತಿದ್ದರು.

03264066a ಶ್ವೇತಾತಪತ್ರಃ ಸೋಷ್ಣೀಷಃ ಶುಕ್ಲಮಾಲ್ಯವಿಭೂಷಣಃ।
03264066c ಶ್ವೇತಪರ್ವತಮಾರೂಢ ಏಕ ಏವ ವಿಭೀಷಣಃ।।

ಉಳಿದ ವಿಭೀಷಣನೊಬ್ಬನೇ ಬಿಳಿಗೊಡೆಯನ್ನು ಹಿಡಿದು ಬಿಳಿಯ ಮಾಲೆ ಮತ್ತು ವಸ್ತ್ರಗಳನ್ನು ಧರಿಸಿ ಶ್ವೇತಪರ್ವತವನ್ನೇರಿದನು.

03264067a ಸಚಿವಾಶ್ಚಾಸ್ಯ ಚತ್ವಾರಃ ಶುಕ್ಲಮಾಲ್ಯಾನುಲೇಪನಾಃ।
03264067c ಶ್ವೇತಪರ್ವತಮಾರೂಢಾ ಮೋಕ್ಷ್ಯಂತೇಽಸ್ಮಾನ್ಮಹಾಭಯಾತ್।।

ಅವನ ನಾಲ್ವರು ಸಚಿವರು ಬಿಳಿಯ ಮಾಲೆ ಅನುಲೇಪನಗಳನ್ನು ಧರಿಸಿ ಶ್ವೇತಪರ್ವತವನ್ನು ಏರಿ ನಮ್ಮನ್ನು ಮಹಾಭಯದಿಂದ ಬಿಡುಗಡೆಮಾಡಿದರು.

03264068a ರಾಮಸ್ಯಾಸ್ತ್ರೇಣ ಪೃಥಿವೀ ಪರಿಕ್ಷಿಪ್ತಾ ಸಸಾಗರಾ।
03264068c ಯಶಸಾ ಪೃಥಿವೀಂ ಕೃತ್ಸ್ನಾಂ ಪೂರಯಿಷ್ಯತಿ ತೇ ಪತಿಃ।।

ನಿನ್ನ ಪತಿ ರಾಮನು ಸಾಗರದಿಂದ ಸುತ್ತುವರೆಯಲ್ಪಟ್ಟಿರುವ ಈ ಪೃಥ್ವಿಯನ್ನು ಅಸ್ತ್ರಗಳಿಂದ ಮುಚ್ಚಿ ಇಡೀ ಪೃಥ್ವಿಯನ್ನು ಯಶಸ್ಸಿನಿಂದ ತುಂಬಿಸುತ್ತಾನೆ.

03264069a ಅಸ್ಥಿಸಂಚಯಮಾರೂಢೋ ಭುಂಜಾನೋ ಮಧುಪಾಯಸಂ।
03264069c ಲಕ್ಷ್ಮಣಶ್ಚ ಮಯಾ ದೃಷ್ಟೋ ನಿರೀಕ್ಷನ್ಸರ್ವತೋದಿಶಃ।।

ಲಕ್ಷ್ಮಣನಾದರೋ ಎಲುಬುಗಳ ರಾಶಿಯ ಮೇಲೇರಿ ಮಧುಪಾಯಸವನ್ನು ತಿನ್ನುತ್ತಾ ಎಲ್ಲ ಕಡೆ ನಿರೀಕ್ಷಿಸುತ್ತಿರುವುದನ್ನು ಕಂಡೆ.

03264070a ರುದತೀ ರುಧಿರಾರ್ದ್ರಾಂಗೀ ವ್ಯಾಘ್ರೇಣ ಪರಿರಕ್ಷಿತಾ।
03264070c ಅಸಕೃತ್ತ್ವಂ ಮಯಾ ದೃಷ್ಟಾ ಗಚ್ಚಂತೀ ದಿಶಮುತ್ತರಾಂ।।

ಅಳುತ್ತಾ, ರಕ್ತದಿಂದ ತೋಯ್ದು, ಹುಲಿಯಿಂದ ಪರಿರಕ್ಷಿತಳಾಗಿ ಉತ್ತರ ದಿಕ್ಕಿನಲ್ಲಿ ನೀನು ಹೋಗುತ್ತಿರುವುದನ್ನೂ ಕಂಡೆ.

03264071a ಹರ್ಷಮೇಷ್ಯಸಿ ವೈದೇಹಿ ಕ್ಷಿಪ್ರಂ ಭರ್ತೃಸಮನ್ವಿತಾ।
03264071c ರಾಘವೇಣ ಸಹ ಭ್ರಾತ್ರಾ ಸೀತೇ ತ್ವಮಚಿರಾದಿವ।।

ವೈದೇಹಿ! ಪತಿಯನ್ನು ಸೇರಿ ಶೀಘ್ರದಲ್ಲಿಯೇ ಹರ್ಷವನ್ನು ಪಡೆಯುತ್ತೀಯೆ. ಸೀತೇ! ಸ್ವಲ್ಪವೇ ಸಮಯದಲ್ಲಿ ನೀನು ರಾಘವ ಮತ್ತು ಜೊತೆಗೆ ಅವನ ತಮ್ಮನನ್ನು ಸೇರುವೆ.””

03264072a ಇತಿ ಸಾ ಮೃಗಶಾವಾಕ್ಷೀ ತಚ್ಚ್ರುತ್ವಾ ತ್ರಿಜಟಾವಚಃ।
03264072c ಬಭೂವಾಶಾವತೀ ಬಾಲಾ ಪುನರ್ಭರ್ತೃಸಮಾಗಮೇ।।

ಈ ರೀತಿ ತ್ರಿಜಟೆಯ ಮಾತುಗಳನ್ನು ಕೇಳಿ ಜಿಂಕೆಯ ಕಣ್ಣುಗಳುಳ್ಳ ಆ ಬಾಲೆಯು ಪತಿಯ ಪುನರ್ಮಿಲನದ ಕುರಿತಾದ ಆಸೆಯನ್ನು ಪುನಃ ಪಡೆದಳು.

03264073a ಯಾವದಭ್ಯಾಗತಾ ರೌದ್ರಾಃ ಪಿಶಾಚ್ಯಸ್ತಾಃ ಸುದಾರುಣಾಃ।
03264073c ದದೃಶುಸ್ತಾಂ ತ್ರಿಜಟಯಾ ಸಹಾಸೀನಾಂ ಯಥಾ ಪುರಾ।।

ಆ ರೌದ್ರ, ಸುದಾರುಣ ಪಿಶಾಚಿಗಳು ಅಲ್ಲಿಗೆ ಹಿಂದಿರುಗಿದಾಗ ಅವರು ಹಿಂದಿನಂತೆಯೇ ತ್ರಿಜಟೆಯ ಜೊತೆ ಕುಳಿತಿದ್ದ ಅವಳನ್ನು ಕಂಡರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ತ್ರಿಜಟಾಕೃತಸೀತಾಸಂವಾದೇ ಚತುಃಷಷ್ಟ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ತ್ರಿಜಟಾಕೃತಸೀತಾಸಂವಾದದಲ್ಲಿ ಇನ್ನೂರಾಅರವತ್ನಾಲ್ಕನೆಯ ಅಧ್ಯಾಯವು.