262 ರಾಮೋಪಾಖ್ಯಾನೇ ಮಾರೀಚವಧೇ ಸೀತಾಪಹರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 262

ಸಾರ

ವಿಷಯವನ್ನು ತಿಳಿದ ಮಾರೀಚನು “ರಾಮನನ್ನು ಕಾಡುವುದನ್ನು ಬಿಟ್ಟು ಬಿಡು” ಎಂದು ರಾವಣನಿಗೆ ಹೇಳಿದುದು (1-7). ರಾವಣನು ಕುಪಿತನಾಗಿ ಕೊಲ್ಲುತ್ತೇನೆಂದು ಗದರಿಸಲು ಮಾರೀಚನು “ಮರಣವು ಅವಶ್ಯವಾಗಿರುವಾಗ ಶ್ರೇಷ್ಠನಾದವನಿಂದ ಮರಣಹೊಂದುವುದೇ ಲೇಸು” ಎಂದು ಅವನ ಉಪಾಯಕ್ಕೆ ಒಪ್ಪಿಕೊಳ್ಳುವುದು (8-14). ಮಾರೀಚನು ಜಿಂಕೆಯ ರೂಪವನ್ನು ಧರಿಸಿ ವೈದೇಹಿಗೆ ಕಾಣಿಸಿಕೊಂಡಾಗ ವಿಧಿಯಿಂದ ಪ್ರಚೋದಿತಳಾದ ಅವಳು ರಾಮನನ್ನು ಅದರ ಹಿಂದೆ ಕಳುಹಿಸುವುದು; ರಾಮನು ಅವನು ನಿಶಾಚರನೆಂದು ತಿಳಿದು ಮಾರೀಚನನ್ನು ಕೊಂದುದು; ಸಾಯುವಾಗ ಮಾರೀಚನು ರಾಮನ ಸ್ವರವನ್ನು ಮಾಡಿಕೊಂಡು “ಹಾ ಸೀತೇ! ಲಕ್ಷ್ಮಣಾ!” ಎಂದು ಆರ್ತಸ್ವರದಲ್ಲಿ ಕೂಗಿದುದು; ಸೀತೆಯು ತನ್ನ ಕಾವಲಿನಲ್ಲಿದ್ದ ಲಕ್ಷ್ಮಣನನ್ನು ಶಂಕಿಸಿ ಕಠೋರವಾಗಿ ಮಾತನಾಡಿ ರಾಮನ ಸಹಾಯಕ್ಕೆಂದು ಒತ್ತಾಯಿಸಿ ಕಳುಹಿಸಿದುದು (15-29). ಅದೇ ಸಮಯದಲ್ಲಿ ರಾವಣನು ಯತಿವೇಷದಲ್ಲಿ ಸೀತೆಗೆ ಕಾಣಿಸಿಕೊಂಡು, ಪ್ರತಿಭಟಿಸುತ್ತಿದ್ದರೂ ಅವಳ ಕೇಶವನ್ನು ಹಿಡಿದೆಳೆದು ಆಕಾಶಕ್ಕೆ ಹಾರಿದುದು (30-41).

03262001 ಮಾರ್ಕಂಡೇಯ ಉವಾಚ।
03262001a ಮಾರೀಚಸ್ತ್ವಥ ಸಂಭ್ರಾಂತೋ ದೃಷ್ಟ್ವಾ ರಾವಣಮಾಗತಂ।
03262001c ಪೂಜಯಾಮಾಸ ಸತ್ಕಾರೈಃ ಫಲಮೂಲಾದಿಭಿಸ್ತಥಾ।।

ಮಾರ್ಕಂಡೇಯನು ಹೇಳಿದನು: “ರಾವಣನು ಬಂದಿದುದನ್ನು ನೋಡಿ ಸಂಭ್ರಾಂತನಾದ ಮಾರೀಚನು ಅವನನ್ನು ಫಲ ಮೂಲಗಳಿಂದ ಸತ್ಕರಿಸಿ ಪೂಜಿಸಿದನು.

03262002a ವಿಶ್ರಾಂತಂ ಚೈನಮಾಸೀನಮನ್ವಾಸೀನಃ ಸ ರಾಕ್ಷಸಃ।
03262002c ಉವಾಚ ಪ್ರಶ್ರಿತಂ ವಾಕ್ಯಂ ವಾಕ್ಯಜ್ಞೋ ವಾಕ್ಯಕೋವಿದಂ।।

ಕುಳಿತು ವಿಶ್ರಾಂತಿ ಪಡೆದ ಅತಿಥಿಯ ಬಳಿಯೇ ಕುಳಿತಿದ್ದ ಆ ರಾಕ್ಷಸನು ಒಬ್ಬ ಮಾತುಗಳನ್ನರಿತವನು ಇನ್ನೊಬ್ಬ ವಾಕ್ಯಕೋವಿದನಿಗೆ ಹೇಗೋ ಹಾಗೆ ಈ ಸಂಸ್ಕಾರಯುಕ್ತ ಮಾತುಗಳನ್ನಾಡಿದನು:

03262003a ನ ತೇ ಪ್ರಕೃತಿಮಾನ್ವರ್ಣಃ ಕಚ್ಚಿತ್ ಕ್ಷೇಮಂ ಪುರೇ ತವ।
03262003c ಕಚ್ಚಿತ್ಪ್ರಕೃತಯಃ ಸರ್ವಾ ಭಜಂತೇ ತ್ವಾಂ ಯಥಾ ಪುರಾ।।

“ನಿನ್ನಲ್ಲಿ ಸ್ವಾಭಾವಿಕವಾದ ಬಣ್ಣವಿಲ್ಲ! ನಿನ್ನ ಪುರದಲ್ಲಿ ಕ್ಷೇಮ ತಾನೆ? ನಿನ್ನ ಪ್ರಜೆಗಳೆಲ್ಲರೂ ಮೊದಲಿನಂತೆಯೇ ನಿನ್ನನ್ನು ಪ್ರೀತಿಸುತ್ತಿದ್ದಾರೆಯೇ?

03262004a ಕಿಮಿಹಾಗಮನೇ ಚಾಪಿ ಕಾರ್ಯಂ ತೇ ರಾಕ್ಷಸೇಶ್ವರ।
03262004c ಕೃತಮಿತ್ಯೇವ ತದ್ವಿದ್ಧಿ ಯದ್ಯಪಿ ಸ್ಯಾತ್ಸುದುಷ್ಕರಂ।।

ರಾಕ್ಷಸೇಶ್ವರ! ಯಾವ ಕೆಲಸವು ನಿನ್ನನ್ನು ಇಲ್ಲಿಗೆ ಕರೆತಂದಿದೆ? ಎಷ್ಟೇ ದುಷ್ಕರವಾಗಿದ್ದರೂ ಆ ಕಾರ್ಯವಾಯಿತೆಂದು ತಿಳಿ.”

03262005a ಶಶಂಸ ರಾವಣಸ್ತಸ್ಮೈ ತತ್ಸರ್ವಂ ರಾಮಚೇಷ್ಟಿತಂ।
03262005c ಮಾರೀಚಸ್ತ್ವಬ್ರವೀಚ್ಚ್ರುತ್ವಾ ಸಮಾಸೇನೈವ ರಾವಣಂ।।

ರಾವಣನು ಅವನಿಗೆ ರಾಮನು ಮಾಡಿದ ಎಲ್ಲವನ್ನೂ ವಿವರಿಸಿದನು. ಅದನ್ನು ಕೇಳಿ ಮಾರೀಚನು ಸಂಕ್ಷಿಪ್ತವಾಗಿ ರಾವಣನಿಗೆ ಹೇಳಿದನು:

03262006a ಅಲಂ ತೇ ರಾಮಮಾಸಾದ್ಯ ವೀರ್ಯಜ್ಞೋ ಹ್ಯಸ್ಮಿ ತಸ್ಯ ವೈ।
03262006c ಬಾಣವೇಗಂ ಹಿ ಕಸ್ತಸ್ಯ ಶಕ್ತಃ ಸೋಢುಂ ಮಹಾತ್ಮನಃ।।

“ರಾಮನನ್ನು ಕಾಡುವುದನ್ನು ಬಿಟ್ಟುಬಿಡು. ಯಾಕೆಂದರೆ ಅವನ ವೀರ್ಯವನ್ನು ನಾನು ತಿಳಿದಿದ್ದೇನೆ. ಆ ಮಹಾತ್ಮನ ಬಾಣಗಳ ವೇಗವನ್ನು ಯಾರುತಾನೇ ಸಹಿಸಲು ಸಾಧ್ಯ?

03262007a ಪ್ರವ್ರಜ್ಯಾಯಾಂ ಹಿ ಮೇ ಹೇತುಃ ಸ ಏವ ಪುರುಷರ್ಷಭಃ।
03262007c ವಿನಾಶಮುಖಮೇತತ್ತೇ ಕೇನಾಖ್ಯಾತಂ ದುರಾತ್ಮನಾ।।

ಆ ಪುರುಷರ್ಷಭನೇ ನಾನು ಈ ರೀತಿ ತಾಪಸಿಯಾಗಲು ಕಾರಣ. ಯಾವ ದುರಾತ್ಮನು ತಾನೇ ನಿನಗೆ ವಿನಾಶದ ದಾರಿಯನ್ನು ಹೇಳಿಕೊಟ್ಟರು?”

03262008a ತಮುವಾಚಾಥ ಸಕ್ರೋಧೋ ರಾವಣಃ ಪರಿಭರ್ತ್ಸಯನ್।
03262008c ಅಕುರ್ವತೋಽಸ್ಮದ್ವಚನಂ ಸ್ಯಾನ್ಮೃತ್ಯುರಪಿ ತೇ ಧ್ರುವಂ।।

ಅವನನ್ನು ಕೇಳಿದ ರಾವಣನು ಸಂಕೃದ್ಧನಾಗಿ ಕೂಗಿದನು: “ನನ್ನ ಮಾತುಗಳನ್ನು ನಡೆಸಿಕೊಡದಿದ್ದರೆ ನೀನು ಸಾಯುವುದು ಖಂಡಿತ!”

03262009a ಮಾರೀಚಶ್ಚಿಂತಯಾಮಾಸ ವಿಶಿಷ್ಟಾನ್ಮರಣಂ ವರಂ।
03262009c ಅವಶ್ಯಂ ಮರಣೇ ಪ್ರಾಪ್ತೇ ಕರಿಷ್ಯಾಮ್ಯಸ್ಯ ಯನ್ಮತಂ।।

ಮಾರೀಚನು ಯೋಚಿಸಿದನು: “ಮರಣವು ಅವಶ್ಯವಾಗಿರುವಾಗ ಶ್ರೇಷ್ಠನಾದವನಿಂದ ಮರಣಹೊಂದುವುದೇ ಲೇಸು. ಇವನು ಹೇಳಿದಂತೆ ಮಾಡುತ್ತೇನೆ.”

03262010a ತತಸ್ತಂ ಪ್ರತ್ಯುವಾಚಾಥ ಮಾರೀಚೋ ರಾಕ್ಷಸೇಶ್ವರಂ।
03262010c ಕಿಂ ತೇ ಸಾಹ್ಯಂ ಮಯಾ ಕಾರ್ಯಂ ಕರಿಷ್ಯಾಮ್ಯವಶೋಽಪಿ ತತ್।।

ಆಗ ಮಾರೀಚನು ರಾಕ್ಷಸೇಶ್ವರನಿಗೆ ಉತ್ತರಿಸಿದನು: “ನಾನು ನಿನಗೆ ಯಾವ ರೀತಿಯ ಸಹಾಯವನ್ನು ಮಾಡಲಿ? ನಾನು ಅವಶ್ಯವಾಗಿ ಮಾಡುತ್ತೇನೆ.”

03262011a ತಮಬ್ರವೀದ್ದಶಗ್ರೀವೋ ಗಚ್ಚ ಸೀತಾಂ ಪ್ರಲೋಭಯ।
03262011c ರತ್ನಶೃಂಗೋ ಮೃಗೋ ಭೂತ್ವಾ ರತ್ನಚಿತ್ರತನೂರುಹಃ।।

ದಶಗ್ರೀವನು ಅವನಿಗೆ ಹೇಳಿದನು: “ಹೋಗು! ರತ್ನಚಿತ್ರಗಳ ದೇಹದ ರತ್ನದ ಕೋಡಿನ ಜಿಂಕೆಯಾಗಿ ಸೀತೆಯನ್ನು ಪ್ರಲೋಭಿಸು.

03262012a ಧ್ರುವಂ ಸೀತಾ ಸಮಾಲಕ್ಷ್ಯ ತ್ವಾಂ ರಾಮಂ ಚೋದಯಿಷ್ಯತಿ।
03262012c ಅಪಕ್ರಾಂತೇ ಚ ಕಾಕುತ್ಸ್ಥೇ ಸೀತಾ ವಶ್ಯಾ ಭವಿಷ್ಯತಿ।।

ನಿನ್ನನ್ನು ನೋಡಿದ ಸೀತೆಯು ಖಂಡಿತವಾಗಿಯೂ ರಾಮನನ್ನು ಕಳುಹಿಸುತ್ತಾಳೆ. ಕಾಕುತ್ಸ್ಥನು ಹೋದನಂತರ ಸೀತೆಯು ನನ್ನ ವಶಳಾಗುತ್ತಾಳೆ.

03262013a ತಾಮಾದಾಯಾಪನೇಷ್ಯಾಮಿ ತತಃ ಸ ನ ಭವಿಷ್ಯತಿ।
03262013c ಭಾರ್ಯಾವಿಯೋಗಾದ್ದುರ್ಬುದ್ಧಿರೇತತ್ಸಾಹ್ಯಂ ಕುರುಷ್ವ ಮೇ।।

ಅವಳನ್ನು ಎತ್ತಿಕೊಂಡು ಹೋಗುತ್ತೇನೆ. ಆಗ ಆ ದುರ್ಬುದ್ಧಿಯು ಭಾರ್ಯಾವಿಯೋಗದಿಂದ ಇಲ್ಲವಾಗುತ್ತಾನೆ. ಈ ಸಹಾಯವನ್ನು ನನಗೆ ಮಾಡಿಕೊಡು.”

03262014a ಇತ್ಯೇವಮುಕ್ತೋ ಮಾರೀಚಃ ಕೃತ್ವೋದಕಮಥಾತ್ಮನಃ।
03262014c ರಾವಣಂ ಪುರತೋ ಯಾಂತಮನ್ವಗಚ್ಚತ್ಸುದುಃಖಿತಃ।।

ಇದನ್ನು ಕೇಳಿದ ಮಾರೀಚನು ತನ್ನ ಉದಕ ಕ್ರಿಯೆಗಳನ್ನು ಮಾಡಿಕೊಂಡು ಸುದುಃಖಿತನಾಗಿ ಮುಂದೆ ಸಾಗುತ್ತಿದ್ದ ರಾವಣನನ್ನು ಅನುಸರಿಸಿದನು.

03262015a ತತಸ್ತಸ್ಯಾಶ್ರಮಂ ಗತ್ವಾ ರಾಮಸ್ಯಾಕ್ಲಿಷ್ಟಕರ್ಮಣಃ।
03262015c ಚಕ್ರತುಸ್ತತ್ತಥಾ ಸರ್ವಮುಭೌ ಯತ್ಪೂರ್ವಮಂತ್ರಿತಂ।।

ಅನಂತರ ಅವರೀರ್ವರೂ ಅಕ್ಷಿಷ್ಟಕರ್ಮಿ ರಾಮನ ಆಶ್ರಮಕ್ಕೆ ಹೋಗಿ ಮೊದಲೇ ಉಪಾಯಮಾಡಿಕೊಂಡಂತೆ ಎಲ್ಲವನ್ನು ನಡೆಸಿದರು.

03262016a ರಾವಣಸ್ತು ಯತಿರ್ಭೂತ್ವಾ ಮುಂಡಃ ಕುಂಡೀ ತ್ರಿದಂಡಧೃಕ್।
03262016c ಮೃಗಶ್ಚ ಭೂತ್ವಾ ಮಾರೀಚಸ್ತಂ ದೇಶಮುಪಜಗ್ಮತುಃ।।

ರಾವಣನು ತಲೆಬೋಳಿಸಿಕೊಂಡ ಭಿಕ್ಷಾಪಾತ್ರೆ ಮತ್ತು ತ್ರಿಶೂಲಗಳನ್ನು ಹಿಡಿದ ಯತಿಯಾದನು ಮತ್ತು ಮಾರೀಚನು ಜಿಂಕೆಯಾಗಿ ಆ ಪ್ರದೇಶಕ್ಕೆ ಬಂದನು.

03262017a ದರ್ಶಯಾಮಾಸ ವೈದೇಹೀಂ ಮಾರೀಚೋ ಮೃಗರೂಪಧೃಕ್।
03262017c ಚೋದಯಾಮಾಸ ತಸ್ಯಾರ್ಥೇ ಸಾ ರಾಮಂ ವಿಧಿಚೋದಿತಾ।।

ಮಾರೀಚನು ಜಿಂಕೆಯ ರೂಪವನ್ನು ಧರಿಸಿ ವೈದೇಹಿಗೆ ಕಾಣಿಸಿಕೊಂಡನು ಮತ್ತು ವಿಧಿಯಿಂದ ಪ್ರಚೋದಿತಳಾದ ಅವಳು ರಾಮನನ್ನು ಅದರ ಹಿಂದೆ ಕಳುಹಿಸಿದಳು.

03262018a ರಾಮಸ್ತಸ್ಯಾಃ ಪ್ರಿಯಂ ಕುರ್ವನ್ಧನುರಾದಾಯ ಸತ್ವರಃ।
03262018c ರಕ್ಷಾರ್ಥೇ ಲಕ್ಷ್ಮಣಂ ನ್ಯಸ್ಯ ಪ್ರಯಯೌ ಮೃಗಲಿಪ್ಸಯಾ।।

ಅವಳಿಗೆ ಪ್ರಿಯವನ್ನುಂಟುಮಾಡಲು ರಾಮನು ತಕ್ಷಣವೇ ಧನುಸ್ಸನ್ನು ಹಿಡಿದು, ರಕ್ಷಣೆಗೆ ಲಕ್ಷ್ಮಣನನ್ನಿರಿಸಿ ಆ ಜಿಂಕೆಯನ್ನು ಹಿಡಿದು ತರಲು ಹೊರಟನು.

03262019a ಸ ಧನ್ವೀ ಬದ್ಧತೂಣೀರಃ ಖಡ್ಗಗೋಧಾಂಗುಲಿತ್ರವಾನ್।
03262019c ಅನ್ವಧಾವನ್ಮೃಗಂ ರಾಮೋ ರುದ್ರಸ್ತಾರಾಮೃಗಂ ಯಥಾ।।

ಆ ಧನ್ವಿ ರಾಮನು ತೂಣೀರವನ್ನು ಕಟ್ಟಿ, ಖಡ್ಗ ಗೋಧಾಂಗುಲಿಗಳನ್ನು ಕಟ್ಟಿಕೊಂಡು ರುದ್ರನು ತಾರಾಮೃಗವನ್ನು ಅರಸಿದಂತೆ ಮೃಗವನ್ನು ಅಟ್ಟಿಕೊಂಡು ಹೋದನು.

03262020a ಸೋಽಂತರ್ಹಿತಃ ಪುನಸ್ತಸ್ಯ ದರ್ಶನಂ ರಾಕ್ಷಸೋ ವ್ರಜನ್।
03262020c ಚಕರ್ಷ ಮಹದಧ್ವಾನಂ ರಾಮಸ್ತಂ ಬುಬುಧೇ ತತಃ।।

ಆ ರಾಕ್ಷಸನು ಒಮ್ಮೆ ಕಾಣಿಸಿಕೊಳ್ಳುತ್ತಿದ್ದನು. ಪುನಃ ಅದೃಶ್ಯನಾಗುತ್ತಿದ್ದನು. ಹೀಗೆ ಅವನು ರಾಮನನ್ನು ಬಹಳ ದೂರದವರೆಗೆ ಕೊಂಡೊಯ್ದನು.

03262021a ನಿಶಾಚರಂ ವಿದಿತ್ವಾ ತಂ ರಾಘವಃ ಪ್ರತಿಭಾನವಾನ್।
03262021c ಅಮೋಘಂ ಶರಮಾದಾಯ ಜಘಾನ ಮೃಗರೂಪಿಣಂ।।

ಪ್ರತಿಭಾನ್ವಿತ ರಾಮನು ಅವನು ನಿಶಾಚರನೆಂದು ತಿಳಿದು ಅಮೋಘ ಶರವನ್ನು ತೆಗೆದು ಆ ಮೃಗರೂಪಿಯನ್ನು ಕೊಂದನು.

03262022a ಸ ರಾಮಬಾಣಾಭಿಹತಃ ಕೃತ್ವಾ ರಾಮಸ್ವರಂ ತದಾ।
03262022c ಹಾ ಸೀತೇ ಲಕ್ಷ್ಮಣೇತ್ಯೇವಂ ಚುಕ್ರೋಶಾರ್ತಸ್ವರೇಣ ಹ।।

ರಾಮನ ಬಾಣದ ಹೊಡೆತವನ್ನು ತಿಂದ ಅವನು ರಾಮನ ಸ್ವರವನ್ನು ಮಾಡಿಕೊಂಡು “ಹಾ ಸೀತೇ! ಲಕ್ಷ್ಮಣಾ!” ಎಂದು ಆರ್ತಸ್ವರದಲ್ಲಿ ಕೂಗಿದನು.

03262023a ಶುಶ್ರಾವ ತಸ್ಯ ವೈದೇಹೀ ತತಸ್ತಾಂ ಕರುಣಾಂ ಗಿರಂ।
03262023c ಸಾ ಪ್ರಾದ್ರವದ್ಯತಃ ಶಬ್ದಸ್ತಾಮುವಾಚಾಥ ಲಕ್ಷ್ಮಣಃ।।

ಅವನ ಆ ಕರುಣಾಜನಕ ಸ್ವರವನ್ನು ಕೇಳಿದ ವೈದೇಹಿಯು ಶಬ್ಧವು ಬರುತ್ತಿರುವಲ್ಲಿಗೆ ಓಡಲು ಪ್ರಯತ್ನಿಸಿದಳು. ಆಗ ಲಕ್ಷ್ಮಣನು ಅವಳನ್ನು ತಡೆದನು:

03262024a ಅಲಂ ತೇ ಶಂಕಯಾ ಭೀರು ಕೋ ರಾಮಂ ವಿಷಹಿಷ್ಯತಿ।
03262024c ಮುಹೂರ್ತಾದ್ದ್ರಕ್ಷ್ಯಸೇ ರಾಮಮಾಗತಂ ತಂ ಶುಚಿಸ್ಮಿತೇ।।

“ಭೀರು! ಈ ಭಯವನ್ನು ತೊರೆ! ಯಾರು ತಾನೇ ರಾಮನನ್ನು ಎದುರಿಸಿಯಾರು? ಶುಚಿಸ್ಮಿತೇ! ಸ್ವಲ್ಪ ಕಾಲ ಸೈರಿಸಿಕೋ! ರಾಮನು ಹಿಂದಿರುಗುವುದನ್ನು ಈಗಲೇ ನೋಡುತ್ತೀಯೆ!”

03262025a ಇತ್ಯುಕ್ತ್ವಾ ಸಾ ಪ್ರರುದತೀ ಪರ್ಯಶಂಕತ ದೇವರಂ।
03262025c ಹತಾ ವೈ ಸ್ತ್ರೀಸ್ವಭಾವೇನ ಶುದ್ಧಚಾರಿತ್ರಭೂಷಣಂ।।

ಅವನ ಈ ಮಾತುಗಳಿಗೆ ಅವಳು ಸ್ತ್ರೀಸ್ವಭಾವದಿಂದ ಹತಳಾಗಿ, ಶುದ್ಧ ಚಾರಿತ್ರಭೂಷಣನಾಗಿದ್ದ ತನ್ನ ಬಾವನನ್ನು ಶಂಕಿಸಿದಳು.

03262026a ಸಾ ತಂ ಪರುಷಮಾರಬ್ಧಾ ವಕ್ತುಂ ಸಾಧ್ವೀ ಪತಿವ್ರತಾ।
03262026c ನೈಷ ಕಾಲೋ ಭವೇನ್ಮೂಢ ಯಂ ತ್ವಂ ಪ್ರಾರ್ಥಯಸೇ ಹೃದಾ।।

ಆ ಸಾಧ್ವೀ ಪತಿವ್ರತೆಯು ಕ್ರೂರವಾದ ಈ ಮಾತುಗಳನ್ನಾಡಲು ಪ್ರಾರಂಭಿಸಿದಳು: “ಮೂಢ! ನಿನ್ನ ಹೃದಯದಲ್ಲಿ ಯಾವಾಗಲೂ ಇದ್ದುದನ್ನು ಬಯಸುವ ಕಾಲವು ಇದಲ್ಲ!

03262027a ಅಪ್ಯಹಂ ಶಸ್ತ್ರಮಾದಾಯ ಹನ್ಯಾಮಾತ್ಮಾನಮಾತ್ಮನಾ।
03262027c ಪತೇಯಂ ಗಿರಿಶೃಂಗಾದ್ವಾ ವಿಶೇಯಂ ವಾ ಹುತಾಶನಂ।।
03262028a ರಾಮಂ ಭರ್ತಾರಮುತ್ಸೃಜ್ಯ ನ ತ್ವಹಂ ತ್ವಾಂ ಕಥಂ ಚನ।
03262028c ನಿಹೀನಮುಪತಿಷ್ಠೇಯಂ ಶಾರ್ದೂಲೀ ಕ್ರೋಷ್ಟುಕಂ ಯಥಾ।।

ಇಂದು ನಾನು ಶಸ್ತ್ರವನ್ನು ತೆಗೆದುಕೊಂಡು ನನ್ನನ್ನು ನಾನೇ ಸಾಯಿಸಿಕೊಂಡೇನು ಅಥವಾ ಈ ಗಿರಿಶೃಂಗದ ಕೆಳಗಿ ಧುಮುಕಿಯೇನು ಅಥವಾ ಬೆಂಕಿಯನ್ನು ಪ್ರವೇಶಿಸಿಯೇನು. ಆದರೆ ಪತಿ ರಾಮನನ್ನು ಬಿಟ್ಟು ಶಾರ್ದೂಲಿಯು ನರಿಯನ್ನು ಹೇಗೋ ಹಾಗೆ ನಿನ್ನನ್ನು ಸೇರುವುದಿಲ್ಲ!”

03262029a ಏತಾದೃಶಂ ವಚಃ ಶ್ರುತ್ವಾ ಲಕ್ಷ್ಮಣಃ ಪ್ರಿಯರಾಘವಃ।
03262029c ಪಿಧಾಯ ಕರ್ಣೌ ಸದ್ವೃತ್ತಃ ಪ್ರಸ್ಥಿತೋ ಯೇನ ರಾಘವಃ।
03262029e ಸ ರಾಮಸ್ಯ ಪದಂ ಗೃಹ್ಯ ಪ್ರಸಸಾರ ಧನುರ್ಧರಃ।।

ಈ ಘೋರ ಮಾತುಗಳನ್ನು ಕೇಳಿ, ರಾಘವನನ್ನು ಪ್ರೀತಿಸುತ್ತಿದ್ದ ಸತ್ಯವ್ರತ ಲಕ್ಷ್ಮಣನು ಕಿವಿಗಳನ್ನು ಮುಚ್ಚಿಕೊಂಡು ರಾಘವನಿದ್ದಲ್ಲಿಗೆ ಧನುಸ್ಸನ್ನು ಹಿಡಿದು ರಾಮನ ಮಾರ್ಗವನ್ನೇ ಹಿಡಿದು ಹೊರಟನು.

03262030a ಏತಸ್ಮಿನ್ನಂತರೇ ರಕ್ಷೋ ರಾವಣಃ ಪ್ರತ್ಯದೃಶ್ಯತ।
03262030c ಅಭವ್ಯೋ ಭವ್ಯರೂಪೇಣ ಭಸ್ಮಚ್ಚನ್ನ ಇವಾನಲಃ।
03262030e ಯತಿವೇಷಪ್ರತಿಚ್ಚನ್ನೋ ಜಿಹೀರ್ಷುಸ್ತಾಮನಿಂದಿತಾಂ।।

ಇದರ ಅನಂತರ ರಾಕ್ಷಸ ರಾವಣನು ಭಸ್ಮದಿಂದ ಮುಚ್ಚಲ್ಪಟ್ಟ ಬೆಂಕಿಯಂತೆ ಸೌಮ್ಯರೂಪದಲ್ಲಿದ್ದರೂ ಸೌಮ್ಯನಾಗಿಲ್ಲದೇ, ಯತಿವೇಷದಲ್ಲಿ ಮರೆಮಾಡಿಕೊಂಡು ಆ ಅನಿಂದಿತೆಯನ್ನು ಅಪಹರಿಸುವ ಇಚ್ಛೆಯಿಂದ ಕಾಣಿಸಿಕೊಂಡನು.

03262031a ಸಾ ತಮಾಲಕ್ಷ್ಯ ಸಂಪ್ರಾಪ್ತಂ ಧರ್ಮಜ್ಞಾ ಜನಕಾತ್ಮಜಾ।
03262031c ನಿಮಂತ್ರಯಾಮಾಸ ತದಾ ಫಲಮೂಲಾಶನಾದಿಭಿಃ।।

ಅವನು ಬಂದಿದುದನ್ನು ಕಂಡ ಆ ಧರ್ಮಜ್ಞೆ ಜನಕಾತ್ಮಜೆಯು ಫಲಮೂಲ ಆಹಾರಗಳಿಂದ ಅವನನ್ನು ಸ್ವಾಗತಿಸಿದಳು.

03262032a ಅವಮನ್ಯ ಸ ತತ್ಸರ್ವಂ ಸ್ವರೂಪಂ ಪ್ರತಿಪದ್ಯ ಚ।
03262032c ಸಾಂತ್ವಯಾಮಾಸ ವೈದೇಹೀಮಿತಿ ರಾಕ್ಷಸಪುಂಗವಃ।।

ಅವೆಲ್ಲವನ್ನೂ ಕಡೆಗಾಣಿಸಿ ತನ್ನ ಸ್ವರೂಪವನ್ನು ತಳೆದು ಆ ರಾಕ್ಷಸಪುಂಗವನು ವೈದೇಹಿಯನ್ನು ಈ ರೀತಿ ಮರುಳುಗೊಳಿಸಲು ಪ್ರಾರಂಭಿಸಿದನು:

03262033a ಸೀತೇ ರಾಕ್ಷಸರಾಜೋಽಹಂ ರಾವಣೋ ನಾಮ ವಿಶ್ರುತಃ।
03262033c ಮಮ ಲಂಕಾ ಪುರೀ ನಾಮ್ನಾ ರಮ್ಯಾ ಪಾರೇ ಮಹೋದಧೇಃ।।

“ಸೀತೆ! ನಾನು ರಾವಣನೆಂದು ವಿಶ್ರುತನಾದ ರಾಕ್ಷಸರಾಜ! ಸಾಗರದ ಆ ಕಡೆಯಲ್ಲಿ ಲಂಕಾ ಎಂಬ ಹೆಸರಿನ ನನ್ನ ರಮ್ಯ ನಗರವಿದೆ.

03262034a ತತ್ರ ತ್ವಂ ವರನಾರೀಷು ಶೋಭಿಷ್ಯಸಿ ಮಯಾ ಸಹ।
03262034c ಭಾರ್ಯಾ ಮೇ ಭವ ಸುಶ್ರೋಣಿ ತಾಪಸಂ ತ್ಯಜ ರಾಘವಂ।।

ಅಲ್ಲಿ ನನ್ನ ವರನಾರಿಯರೊಂದಿಗೆ ನೀನು ನನ್ನೊಡನೆ ಶೋಭಿಸುತ್ತೀಯೆ. ಸುಶ್ರೋಣಿ! ನನ್ನ ಭಾರ್ಯೆಯಾಗು. ತಾಪಸ ರಾಘವನನ್ನು ತೊರೆ.”

03262035a ಏವಮಾದೀನಿ ವಾಕ್ಯಾನಿ ಶ್ರುತ್ವಾ ಸೀತಾಥ ಜಾನಕೀ।
03262035c ಪಿಧಾಯ ಕರ್ಣೌ ಸುಶ್ರೋಣೀ ಮೈವಮಿತ್ಯಬ್ರವೀದ್ವಚಃ।।

ಈ ಮೊದಲಾದ ಮಾತುಗಳನ್ನು ಕೇಳಿ ಸುಶ್ರೋಣಿ ಜಾನಕೀ ಸೀತೆಯು ಕಿವಿಗಳನ್ನು ಮುಚ್ಚಿಕೊಂಡು ಈ ಮಾತುಗಳನ್ನಾಡಿದಳು:

03262036a ಪ್ರಪತೇದ್ದ್ಯೌಃ ಸನಕ್ಷತ್ರಾ ಪೃಥಿವೀ ಶಕಲೀಭವೇತ್।
03262036c ಶೈತ್ಯಮಗ್ನಿರಿಯಾನ್ನಾಹಂ ತ್ಯಜೇಯಂ ರಘುನಂದನಂ।।

“ಸುಮ್ಮನಾಗು! ನಾನು ರಾಘವನನ್ನು ತೊರೆಯುವುದರೊಳಗೆ ನಕ್ಷತ್ರಗಳೊಂದಿಗೆ ಆಕಾಶವೇ ಕಳಚಿ ಬಿದ್ದೀತು! ಭೂಮಿಯು ಚೂರಾದೀತು! ಅಗ್ನಿಯು ತಣ್ಣಗಾದೀತು!

03262037a ಕಥಂ ಹಿ ಭಿನ್ನಕರಟಂ ಪದ್ಮಿನಂ ವನಗೋಚರಂ।
03262037c ಉಪಸ್ಥಾಯ ಮಹಾನಾಗಂ ಕರೇಣುಃ ಸೂಕರಂ ಸ್ಪೃಶೇತ್।।

ಹೇಗೆ ತಾನೇ ಹೆಣ್ಣಾನೆಯೊಂದು ಕರಟವು ಒಡೆದು ಮದ ಸುರಿದು ವನದಲ್ಲಿ ಸಂಚರಿಸುತ್ತಿರುವ ಪದ್ಮಿ ಮಹಾ ಆನೆಯನ್ನು ಬಿಟ್ಟು ಹಂದಿಯನ್ನು ಮುಟ್ಟಿಯಾಳು?

03262038a ಕಥಂ ಹಿ ಪೀತ್ವಾ ಮಾಧ್ವೀಕಂ ಪೀತ್ವಾ ಚ ಮಧುಮಾಧವೀಂ।
03262038c ಲೋಭಂ ಸೌವೀರಕೇ ಕುರ್ಯಾನ್ನಾರೀ ಕಾ ಚಿದಿತಿ ಸ್ಮರೇ।।

ಮಧುಮಾಧವೀ ಮದ್ಯವನ್ನು ಕುಡಿದ ನಾರಿಯು ಹೇಗೆತಾನೇ ಸೌಮೀರಕ್ಕೆ ಆಸೆಪಟ್ಟಾಳು?”

03262039a ಇತಿ ಸಾ ತಂ ಸಮಾಭಾಷ್ಯ ಪ್ರವಿವೇಶಾಶ್ರಮಂ ಪುನಃ।
03262039c ತಾಮನುದ್ರುತ್ಯ ಸುಶ್ರೋಣೀಂ ರಾವಣಃ ಪ್ರತ್ಯಷೇಧಯತ್।।

ಹೀಗೆ ಹೇಳಿ ಅವಳು ಆಶ್ರಮವನ್ನು ಪುನಃ ಪ್ರವೇಶಿಸಿದಳು. ಆ ಸುಶ್ರೋಣಿಯನ್ನು ರಾವಣನು ಹಿಂಬಾಲಿಸಿ ತಡೆದನು.

03262040a ಭರ್ತ್ಸಯಿತ್ವಾ ತು ರೂಕ್ಷೇಣ ಸ್ವರೇಣ ಗತಚೇತನಾಂ।
03262040c ಮೂರ್ಧಜೇಷು ನಿಜಗ್ರಾಹ ಖಮುಪಾಚಕ್ರಮೇ ತತಃ।।

ಕಠಿನ ಸ್ವರದಲ್ಲಿ ಅವಳನ್ನು ಬೈಯುತ್ತಾ, ಚೇತನವನ್ನೇ ಕಳೆದುಕೊಂಡ ಅವಳ ಕೂದಲನ್ನು ಹಿಡಿದು ಎಳೆದು ಆಕಾಶವನ್ನೇರಿದನು.

03262041a ತಾಂ ದದರ್ಶ ತದಾ ಗೃಧ್ರೋ ಜಟಾಯುರ್ಗಿರಿಗೋಚರಃ।
03262041c ರುದತೀಂ ರಾಮ ರಾಮೇತಿ ಹ್ರಿಯಮಾಣಾಂ ತಪಸ್ವಿನೀಂ।।

ಆಗ ಗಿರಿಗೋಚರದಲ್ಲಿದ್ದ ಹದ್ದು ಜಟಾಯುವು “ರಾಮ! ರಾಮ!” ಎಂದು ಕೂಗುತ್ತಾ ರೋದಿಸುತ್ತಿರುವ ಆ ತಪಸ್ವಿನಿಯನ್ನು ನೋಡಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಮಾರೀಚವಧೇ ಸೀತಾಪಹರಣೇ ದ್ವಿಷಷ್ಟ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಮಾರೀಚವಧೆ ಸೀತಾಪಹರಣದಲ್ಲಿ ಇನ್ನೂರಾಅರವತ್ತೆರಡನೆಯ ಅಧ್ಯಾಯವು.