ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 260
ಸಾರ
ದೇವತೆಗಳು, ಸಿದ್ಧರು, ಮಹರ್ಷಿಗಳು ಬ್ರಹ್ಮನ ಶರಣು ಹೋಗಲು ವಿಷ್ಣುವು ಅವತರಿಸಿ ರಾವಣನನ್ನು ವಧಿಸುವ ಕಾರ್ಯವನ್ನು ಮಾಡುವನೆಂದೂ, ದೇವತೆಗಳೂ ಕೂಡ ಅವತರಿಸಿ ಅವನಿಗೆ ಸಹಾಯ ಮಾಡಬೇಕೆಂದು ಹೇಳುವುದು (1-7). ದೇವ-ಗಂಧರ್ವರ ಅಂಶಾವತರಣ (8-15).
03260001 ಮಾರ್ಕಂಡೇಯ ಉವಾಚ।
03260001a ತತೋ ಬ್ರಹ್ಮರ್ಷಯಃ ಸಿದ್ಧಾ ದೇವರಾಜರ್ಷಯಸ್ತಥಾ।
03260001c ಹವ್ಯವಾಹಂ ಪುರಸ್ಕೃತ್ಯ ಬ್ರಹ್ಮಾಣಂ ಶರಣಂ ಗತಾಃ।।
ಮಾರ್ಕಂಡೇಯನು ಹೇಳಿದನು: “ಆಗ ಬ್ರಹ್ಮರ್ಷಿಗಳು, ಸಿದ್ಧರು ಮತ್ತು ದೇವ ರಾಜರ್ಷಿಗಳು ಹವ್ಯವಾಹನನನ್ನು ಮುಂದಿಟ್ಟುಕೊಂಡು ಬ್ರಹ್ಮನ ಶರಣು ಹೋದರು.
03260002 ಅಗ್ನಿರುವಾಚ।
03260002a ಯಃ ಸ ವಿಶ್ರವಸಃ ಪುತ್ರೋ ದಶಗ್ರೀವೋ ಮಹಾಬಲಃ।
03260002c ಅವಧ್ಯೋ ವರದಾನೇನ ಕೃತೋ ಭಗವತಾ ಪುರಾ।।
ಅಗ್ನಿಯು ಹೇಳಿದನು: “ವಿಶ್ರವಸನ ಮಗ ಮಹಾಬಲಶಾಲೀ ದಶಗ್ರೀವನನ್ನು ನೀನು ಹಿಂದೆ ವರದಾನದಿಂದ ಅವಧ್ಯನನ್ನಾಗಿ ಮಾಡಿದ್ದೀಯೆ.
03260003a ಸ ಬಾಧತೇ ಪ್ರಜಾಃ ಸರ್ವಾ ವಿಪ್ರಕಾರೈರ್ಮಹಾಬಲಃ।
03260003c ತತೋ ನಸ್ತ್ರಾತು ಭಗವನ್ನಾನ್ಯಸ್ತ್ರಾತಾ ಹಿ ವಿದ್ಯತೇ।।
ಈಗ ಆ ಮಹಾಬಲನು ಸರ್ವ ಪ್ರಜೆಗಳನ್ನೂ ದ್ವೇಷಕಾರ್ಯಗಳಿಂದ ಬಾಧಿಸುತ್ತಿದ್ದಾನೆ. ಭಗವನ್! ಅವನಿಂದ ನಮ್ಮನ್ನು ರಕ್ಷಿಸು! ಬೇರೆ ಯಾವ ರಕ್ಷಕನನ್ನೂ ನಾವು ತಿಳಿಯೆವು!”
03260004 ಬ್ರಹ್ಮೋವಾಚ।
03260004a ನ ಸ ದೇವಾಸುರೈಃ ಶಕ್ಯೋ ಯುದ್ಧೇ ಜೇತುಂ ವಿಭಾವಸೋ।
03260004c ವಿಹಿತಂ ತತ್ರ ಯತ್ಕಾರ್ಯಮಭಿತಸ್ತಸ್ಯ ನಿಗ್ರಹೇ।।
ಬ್ರಹ್ಮನು ಹೇಳಿದನು: “ವಿಭಾವಸೋ! ಯುದ್ಧದಲ್ಲಿ ಅವನನ್ನು ಗೆಲ್ಲಲು ದೇವಾಸುರರಿಗೂ ಸಾಧ್ಯವಿಲ್ಲ. ಆದರೂ ಇವನ ನಿಗ್ರಹಕ್ಕೆಂದು ಕಾರ್ಯವು ವಿಹಿತವಾಗಿದೆ.
03260005a ತದರ್ಥಮವತೀರ್ಣೋಽಸೌ ಮನ್ನಿಯೋಗಾಚ್ಚತುರ್ಭುಜಃ।
03260005c ವಿಷ್ಣುಃ ಪ್ರಹರತಾಂ ಶ್ರೇಷ್ಠಃ ಸ ಕರ್ಮೈತತ್ಕರಿಷ್ಯತಿ।।
ಅದಕ್ಕಾಗಿಯೇ ನನ್ನ ನಿಯೋಗದಂತೆ ಅವತಾರವನ್ನು ತಳೆದಿರುವ ಪ್ರಹರಿಗಳಲ್ಲಿ ಶ್ರೇಷ್ಠ ಚತುರ್ಭುಜ ವಿಷ್ಣುವು ಇದೇ ಕಾರ್ಯವನ್ನು ಮಾಡುತ್ತಾನೆ.””
03260006 ಮಾರ್ಕಂಡೇಯ ಉವಾಚ।
03260006a ಪಿತಾಮಹಸ್ತತಸ್ತೇಷಾಂ ಸನ್ನಿಧೌ ವಾಕ್ಯಮಬ್ರವೀತ್।
03260006c ಸರ್ವೈರ್ದೇವಗಣೈಃ ಸಾರ್ಧಂ ಸಂಭವಧ್ವಂ ಮಹೀತಲೇ।।
ಮಾರ್ಕಂಡೇಯನು ಹೇಳಿದನು: “ಅವರ ಸನ್ನಿಧಿಯಲ್ಲಿ ಪಿತಾಮಹನು ಈ ವಾಕ್ಯವನ್ನು ಹೇಳಿದನು: “ಸರ್ವದೇವಗಣಗಳೊಂದಿಗೆ ಮಹೀತಲದಲ್ಲಿ ಅವತರಿಸಿ.
03260007a ವಿಷ್ಣೋಃ ಸಹಾಯಾನೃಕ್ಷೀಷು ವಾನರೀಷು ಚ ಸರ್ವಶಃ।
03260007c ಜನಯಧ್ವಂ ಸುತಾನ್ವೀರಾನ್ಕಾಮರೂಪಬಲಾನ್ವಿತಾನ್।।
ವಿಷ್ಣುವಿನ ಸಹಾಯಕ್ಕಾಗಿ ಕರಡಿಗಳಲ್ಲಿ ಮತ್ತು ವಾನರರಲ್ಲಿ ಎಲ್ಲರೂ ವೀರರೂ, ಕಾಮರೂಪಿಗಳೂ ಮತ್ತು ಬಲಾನ್ವಿತರೂ ಆದ ಮಕ್ಕಳನ್ನು ಹುಟ್ಟಿಸಿರಿ.”
03260008a ತತೋ ಭಾಗಾನುಭಾಗೇನ ದೇವಗಂಧರ್ವದಾನವಾಃ।
03260008c ಅವತರ್ತುಂ ಮಹೀಂ ಸರ್ವೇ ರಂಜಯಾಮಾಸುರಂಜಸಾ।।
ಆಗ ದೇವ, ಗಂಧರ್ವ, ದಾನವರು ಎಲ್ಲರೂ ಸಂತೋಷದಿಂದ ಭಾಗ ಭಾಗವಾಗಿ ಭೂಮಿಯಲ್ಲಿ ಅವತರಿಸಿದರು.
03260009a ತೇಷಾಂ ಸಮಕ್ಷಂ ಗಂಧರ್ವೀಂ ದುಂದುಭೀಂ ನಾಮ ನಾಮತಃ।
03260009c ಶಶಾಸ ವರದೋ ದೇವೋ ದೇವಕಾರ್ಯಾರ್ಥಸಿದ್ಧಯೇ।।
ಅವರ ಎದುರಿನಲ್ಲಿಯೇ ವರದ ದೇವನು ದೇವಕಾರ್ಯಸಿದ್ಧಿಗಾಗಿ ದುಂದುಭೀ ಎಂಬ ಹೆಸರಿನ ಗಂಧರ್ವಿಗೆ ಆದೇಶವನ್ನಿತ್ತನು.
03260010a ಪಿತಾಮಹವಚಃ ಶ್ರುತ್ವಾ ಗಂಧರ್ವೀ ದುಂದುಭೀ ತತಃ।
03260010c ಮಂಥರಾ ಮಾನುಷೇ ಲೋಕೇ ಕುಬ್ಜಾ ಸಮಭವತ್ತದಾ।।
ಪಿತಾಮಹನ ವಚನವನ್ನು ಕೇಳಿ ಗಂಧರ್ವಿ ದುಂದುಭಿಯು ಮನುಷ್ಯಲೋಕದಲ್ಲಿ ಮಂಥರಾ ಎಂಬ ಕುಬ್ಜೆಯಾಗಿ ಜನಿಸಿದಳು.
03260011a ಶಕ್ರಪ್ರಭೃತಯಶ್ಚೈವ ಸರ್ವೇ ತೇ ಸುರಸತ್ತಮಾಃ।
03260011c ವಾನರರ್ಕ್ಷವರಸ್ತ್ರೀಷು ಜನಯಾಮಾಸುರಾತ್ಮಜಾನ್।।
ಶಕ್ರನೇ ಮೊದಲಾದ ಎಲ್ಲ ಸುರಸತ್ತಮರೂ ವಾನರ ಮತ್ತು ಕರಡಿಗಳ ಶ್ರೇಷ್ಠ ಸ್ತ್ರೀಯರಲ್ಲಿ ತಮ್ಮಿಂದಲೇ ಮಕ್ಕಳನ್ನು ಹುಟ್ಟಿಸಿದರು.
03260011e ತೇಽನ್ವವರ್ತನ್ಪಿತೄನ್ಸರ್ವೇ ಯಶಸಾ ಚ ಬಲೇನ ಚ।।
03260012a ಭೇತ್ತಾರೋ ಗಿರಿಶೃಂಗಾಣಾಂ ಶಾಲತಾಲಶಿಲಾಯುಧಾಃ।
ಅವರೆಲ್ಲರೂ ಯಶಸ್ಸು ಮತ್ತು ಬಲದಲ್ಲಿ ತಮ್ಮ ತಂದೆಯರನ್ನು ಅನುಸರಿಸಿದರು ಮತ್ತು ಗಿರಿಶೃಂಗಗಳಲ್ಲಿ ಶಾಲ, ತಾಲ ಮತ್ತು ಶಿಲಾಯುಧಗಳನ್ನು ಹಿಡಿದು ವಾಸಿಸಿದರು.
03260012c ವಜ್ರಸಂಹನನಾಃ ಸರ್ವೇ ಸರ್ವೇ ಚೌಘಬಲಾಸ್ತಥಾ।।
03260013a ಕಾಮವೀರ್ಯಧರಾಶ್ಚೈವ ಸರ್ವೇ ಯುದ್ಧವಿಶಾರದಾಃ।
ವಜ್ರದಂತೆ ಕಠಿನರಾಗಿದ್ದ ಅವರೆಲ್ಲರೂ ಪ್ರವಾಹದಲ್ಲಿದ್ದ ನದಿಯಂತೆ ಬಲಶಾಲಿಗಳಾಗಿದ್ದರು, ಎಲ್ಲರೂ ಬಯಸಿದಷ್ಟು ವೀರ್ಯವಂತರಾಗಿದ್ದರು ಮತ್ತು ಎಲ್ಲರೂ ಯುದ್ಧ ವಿಶಾರದರಾಗಿದ್ದರು.
03260013c ನಾಗಾಯುತಸಮಪ್ರಾಣಾ ವಾಯುವೇಗಸಮಾ ಜವೇ।।
03260013e ಯತ್ರೇಚ್ಚಕನಿವಾಸಾಶ್ಚ ಕೇ ಚಿದತ್ರ ವನೌಕಸಃ।।
ಶಕ್ತಿಯಲ್ಲಿ ಆನೆಗಳ ಹಿಂಡಿಗೆ ಸಮನಾಗಿದ್ದರು ಮತ್ತು ವೇಗದಲ್ಲಿ ವಾಯುವೇಗಕ್ಕೆ ಸಮನಾಗಿದ್ದರು. ಕೆಲವರು ತಮಗೆ ಇಷ್ಟವಾದಲ್ಲಿ ವಾಸಿಸಿದರು ಮತ್ತೆ ಕೆಲವರು ವನಗಳಲ್ಲಿ ವಾಸಿಸಿದರು.
03260014a ಏವಂ ವಿಧಾಯ ತತ್ಸರ್ವಂ ಭಗವಾಽಲ್ಲೋಕಭಾವನಃ।
03260014c ಮಂಥರಾಂ ಬೋಧಯಾಮಾಸ ಯದ್ಯತ್ಕಾರ್ಯಂ ಯಥಾ ಯಥಾ।।
ಈ ರೀತಿ ಅವೆಲ್ಲವೂ ನಡೆಯುವಂತೆ ಮಾಡಿ ಭಗವಾನ್ ಲೋಕಭಾವನನು ಯಾವ ಯಾವ ಕಾರ್ಯವನ್ನು ಹೇಗೆ ಹೇಗೆ ಮಾಡಬೇಕೆಂದು ಮಂಥರೆಗೆ ಬೋಧಿಸಿದನು.
03260015a ಸಾ ತದ್ವಚನಮಾಜ್ಞಾಯ ತಥಾ ಚಕ್ರೇ ಮನೋಜವಾ।
03260015c ಇತಶ್ಚೇತಶ್ಚ ಗಚ್ಚಂತೀ ವೈರಸಂಧುಕ್ಷಣೇ ರತಾ।।
ಅವಳು ಆ ಮಾತನ್ನು ಅರ್ಥಮಾಡಿಕೊಂಡು ಮನೋವೇಗದಲ್ಲಿ ಇಲ್ಲಿಂದ ಅಲ್ಲಿಗೆ ಹೋಗಿ ಹಾಗೆಯೇ ವೈರತ್ವವನ್ನು ಹುಟ್ಟಿಸಲು ತೊಡಗಿದಳು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ವಾನರಾದ್ಯುತ್ಪತ್ತೌ ಷಷ್ಟ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ವಾನರಾದಿಗಳ ಉತ್ಪತ್ತಿಯಲ್ಲಿ ಇನ್ನೂರಾಅರವತ್ತನೆಯ ಅಧ್ಯಾಯವು.