ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 259
ಸಾರ
ಕುಬೇರನು ತನ್ನ ತಂದೆ ಪುಲಸ್ತ್ಯನಿಗೆ ನೀಡಿದ ಮೂವರು ರಾಕ್ಷಸ ದಾಸಿಯರಲ್ಲಿ ಐವರು ಮಕ್ಕಳು - ಪುಷ್ಪೋತ್ಕಟೆಯಲ್ಲಿ ರಾವಣ-ಕುಂಭಕರ್ಣರು, ಮಾಲಿನಿಯಲ್ಲಿ ವಿಭೀಷಣ, ಮತ್ತು ರಾಕಾಳಲ್ಲಿ ಖರ-ಶೂರ್ಪಣಕಿಯರು ಹುಟ್ಟಿದುದು (1-8). ಕುಬೇರನ ವೈಭವನ್ನು ನೋಡಿ ಸ್ಪರ್ಧಾಭಾವನೆಯಿಂದ ಇವರೈವರು ಬ್ರಹ್ಮನನ್ನು ಮೆಚ್ಚಿಸಲು ಘೋರ ತಪವನ್ನಾಚರಿಸುವುದು (9-20). ಬ್ರಹ್ಮನು ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ವರವನ್ನಿತ್ತು ಅವರ ತಪಸ್ಸನ್ನು ತಡೆದುದು (21-31). ವರಮದದಿಂದ ರಾವಣನು ಕುಬೇರನನ್ನು ಲಂಕೆಯಿಂದ ಓಡಿಸಿ ಪುಷ್ಪಕ ವಿಮಾನವನ್ನು ಕಸಿದುಕೊಂಡು ಅವನಿಂದ ಶಾಪವನ್ನು ಪಡೆದುದು; ದೇವತೆಗಳಿಗೆ ಭಯವನ್ನುಂಟುಮಾಡಿದುದು (32-40).
03259001 ಮಾರ್ಕಂಡೇಯ ಉವಾಚ।
03259001a ಪುಲಸ್ತ್ಯಸ್ಯ ತು ಯಃ ಕ್ರೋಧಾದರ್ಧದೇಹೋಽಭವನ್ಮುನಿಃ।
03259001c ವಿಶ್ರವಾ ನಾಮ ಸಕ್ರೋಧಃ ಸ ವೈಶ್ರವಣಮೈಕ್ಷತ।।
ಮಾರ್ಕಂಡೇಯನು ಹೇಳಿದನು: “ಪುಲಸ್ತ್ಯನ ಕ್ರೋಧದಿಂದ ಅವನ ಅರ್ಧದೇಹದಿಂದ ಜನಿಸಿದ ವಿಶ್ರವಾ ಎಂಬ ಹೆಸರಿನ ಮುನಿಯು ವೈಶ್ರವಣನ ಮೇಲೆ ಕ್ರೋಧಿತನಾದನು.
03259002a ಬುಬುಧೇ ತಂ ತು ಸಕ್ರೋಧಂ ಪಿತರಂ ರಾಕ್ಷಸೇಶ್ವರಃ।
03259002c ಕುಬೇರಸ್ತತ್ಪ್ರಸಾದಾರ್ಥಂ ಯತತೇ ಸ್ಮ ಸದಾ ನೃಪ।।
ನೃಪ! ರಾಕ್ಷಸೇಶ್ವರ ಕುಬೇರನಾದರೋ ತನ್ನ ತಂದೆಯು ಕುಪಿತನಾಗಿದ್ದಾನೆಂದು ತಿಳಿದಿದ್ದನು ಮತ್ತು ಅವನನ್ನು ಪ್ರಸೀದಗೊಳಿಸಲು ಸದಾ ಪ್ರಯತ್ನಿಸುತ್ತಿದ್ದನು.
03259003a ಸ ರಾಜರಾಜೋ ಲಂಕಾಯಾಂ ನಿವಸನ್ನರವಾಹನಃ।
03259003c ರಾಕ್ಷಸೀಃ ಪ್ರದದೌ ತಿಸ್ರಃ ಪಿತುರ್ವೈ ಪರಿಚಾರಿಕಾಃ।।
ಆ ರಾಜರಾಜ ನರವಾಹನನು ಲಂಕೆಯಲ್ಲಿ ವಾಸಿಸುವಾಗ ತನ್ನ ತಂದೆಗೆ ಮೂರು ರಾಕ್ಷಸಿಯರನ್ನು ದಾಸಿಯರನ್ನಾಗಿ ಕೊಟ್ಟನು.
03259004a ತಾಸ್ತದಾ ತಂ ಮಹಾತ್ಮಾನಂ ಸಂತೋಷಯಿತುಮುದ್ಯತಾಃ।
03259004c ಋಷಿಂ ಭರತಶಾರ್ದೂಲ ನೃತ್ತಗೀತವಿಶಾರದಾಃ।।
ಭರತಶಾರ್ದೂಲ! ಆ ನೃತ್ಯಗೀತವಿಶಾರದರು ಮಹಾತ್ಮ ಋಷಿಯನ್ನು ಸಂತೋಷಪಡಿಸಲು ಉತ್ಸುಕರಾಗಿದ್ದರು.
03259005a ಪುಷ್ಪೋತ್ಕಟಾ ಚ ರಾಕಾ ಚ ಮಾಲಿನೀ ಚ ವಿಶಾಂ ಪತೇ।
03259005c ಅನ್ಯೋನ್ಯಸ್ಪರ್ಧಯಾ ರಾಜನ್ ಶ್ರೇಯಸ್ಕಾಮಾಃ ಸುಮಧ್ಯಮಾಃ।।
ವಿಶಾಂಪತೇ! ಪುಷ್ಪೋತ್ಕಟಾ, ರಾಕಾ ಮತ್ತು ಮಾಲಿನೀ ಎಂಬ ಆ ಮೂವರು ಸುಮಧ್ಯಮೆಯರು ಶ್ರೇಯಸ್ಸನ್ನು ಬಯಸಿ ಅನ್ಯೋನ್ಯರೊಡನೆ ಸ್ಪರ್ಧಿಸುತ್ತಿದ್ದರು.
03259006a ತಾಸಾಂ ಸ ಭಗವಾನ್ತುಷ್ಟೋ ಮಹಾತ್ಮಾ ಪ್ರದದೌ ವರಾನ್।
03259006c ಲೋಕಪಾಲೋಪಮಾನ್ಪುತ್ರಾನೇಕೈಕಸ್ಯಾ ಯಥೇಪ್ಸಿತಾನ್।।
ಸಂತುಷ್ಟನಾದ ಆ ಮಹಾತ್ಮ ಭಗವಾನನು ಅವರಲ್ಲಿ ಪ್ರತಿಯೊಬ್ಬರಿಗೂ ಅವರು ಬಯಸಿದ ಲೋಕಪಾಲಸಮ ಪುತ್ರರನ್ನು ವರವಾಗಿ ನೀಡಿದನು.
03259007a ಪುಷ್ಪೋತ್ಕಟಾಯಾಂ ಜಜ್ಞಾತೇ ದ್ವೌ ಪುತ್ರೌ ರಾಕ್ಷಸೇಶ್ವರೌ।
03259007c ಕುಂಭಕರ್ಣದಶಗ್ರೀವೌ ಬಲೇನಾಪ್ರತಿಮೌ ಭುವಿ।।
ಪುಷ್ಪೋತ್ಕಟೆಯಲ್ಲಿ ಭೂಮಿಯಲ್ಲೀ ಬಲದಲ್ಲಿ ಅಪ್ರತಿಮರಾದ ಕುಂಭಕರ್ಣ-ದಶಗ್ರೀವರೆಂಬ ಇಬ್ಬರು ರಾಕ್ಷಸೇಶ್ವರರು ಹುಟ್ಟಿದರು.
03259008a ಮಾಲಿನೀ ಜನಯಾಮಾಸ ಪುತ್ರಮೇಕಂ ವಿಭೀಷಣಂ।
03259008c ರಾಕಾಯಾಂ ಮಿಥುನಂ ಜಜ್ಞೇ ಖರಃ ಶೂರ್ಪಣಖಾ ತಥಾ।।
ಮಾಲಿನಿಯಲ್ಲಿ ವಿಭೀಷಣನೆಂಬ ಓರ್ವ ಪುತ್ರನು ಜನಿಸಿದನು. ರಾಕಾಳಲ್ಲಿ ಇಬ್ಬರು ಅವಳಿಗಳು - ಖರ ಮತ್ತು ಶೂರ್ಪಣಖಿ – ಹುಟ್ಟಿದರು.
03259009a ವಿಭೀಷಣಸ್ತು ರೂಪೇಣ ಸರ್ವೇಭ್ಯೋಽಭ್ಯಧಿಕೋಽಭವತ್।
03259009c ಸ ಬಭೂವ ಮಹಾಭಾಗೋ ಧರ್ಮಗೋಪ್ತಾ ಕ್ರಿಯಾರತಿಃ।।
ವಿಭೀಷಣನಾದರೋ ರೂಪದಲ್ಲಿ ಇವರೆಲ್ಲರ ಅಧಿಕನಾಗಿದ್ದನು ಮತ್ತು ಆ ಮಹಾಭಾಗನು ಧರ್ಮಗೋಪ್ತನೂ ಕ್ರಿಯಾರತಿಯೂ ಆಗಿದ್ದನು.
03259010a ದಶಗ್ರೀವಸ್ತು ಸರ್ವೇಷಾಂ ಜ್ಯೇಷ್ಠೋ ರಾಕ್ಷಸಪುಂಗವಃ।
03259010c ಮಹೋತ್ಸಾಹೋ ಮಹಾವೀರ್ಯೋ ಮಹಾಸತ್ತ್ವಪರಾಕ್ರಮಃ।।
ಅವರೆಲ್ಲರ ಜ್ಯೇಷ್ಠ ರಾಕ್ಷಸಪುಂಗವ ದಶಗ್ರೀವನಾದರೋ ಮಹೋತ್ಸಾಹನೂ, ಮಹಾವೀರ್ಯವಂತನೂ ಮತ್ತು ಮಹಾ ಸತ್ತ್ವಪರಾಕ್ರಮಿಯೂ ಆಗಿದ್ದನು.
03259011a ಕುಂಭಕರ್ಣೋ ಬಲೇನಾಸೀತ್ಸರ್ವೇಭ್ಯೋಽಭ್ಯಧಿಕಸ್ತದಾ।
03259011c ಮಾಯಾವೀ ರಣಶೌಂಡಶ್ಚ ರೌದ್ರಶ್ಚ ರಜನೀಚರಃ।।
ಕುಂಭಕರ್ಣನು ಬಲದಲ್ಲಿ ಎಲ್ಲರಿಗಿಂತಲೂ ಅಧಿಕನಾಗಿದ್ದನು. ಆ ರಜನೀಚರನು ಮಾಯಾವಿಯೂ, ರಣಶೌಂಡನೂ ಮತ್ತು ರೌದ್ರನೂ ಆಗಿದ್ದನು.
03259012a ಖರೋ ಧನುಷಿ ವಿಕ್ರಾಂತೋ ಬ್ರಹ್ಮದ್ವಿತ್ಪಿಶಿತಾಶನಃ।
03259012c ಸಿದ್ಧವಿಘ್ನಕರೀ ಚಾಪಿ ರೌದ್ರಾ ಶೂರ್ಪಣಖಾ ತಥಾ।।
ಖರನು ಧನುಸ್ಸಿನಲ್ಲಿ ವಿಕ್ರಾಂತನಾಗಿದ್ದನು ಮತ್ತು ಬ್ರಾಹ್ಮಣರ ಮಾಂಸವನ್ನು ಭಕ್ಷಿಸುತ್ತಿದ್ದನು. ಶೂರ್ಪಣಖಿಯು ರೌದ್ರಳಾಗಿದ್ದು ಸಿದ್ಧರಿಗೆ ವಿಘ್ನಗಳನ್ನುಂಟುಮಾಡುತ್ತಿದ್ದಳು.
03259013a ಸರ್ವೇ ವೇದವಿದಃ ಶೂರಾಃ ಸರ್ವೇ ಸುಚರಿತವ್ರತಾಃ।
03259013c ಊಷುಃ ಪಿತ್ರಾ ಸಹ ರತಾ ಗಂಧಮಾದನಪರ್ವತೇ।।
ಅವರೆಲ್ಲರೂ ವೀದವಿದರೂ, ಶೂರರೂ ಆಗಿದ್ದು ಎಲ್ಲ ಸುಚರಿತವ್ರತರೂ ಆಗಿ ತಂದೆಯೊಂದಿಗೆ ಗಂಧಮಾದನ ಪರ್ವತದಲ್ಲಿ ಸಂತೋಷದಿಂದಿದ್ದರು.
03259014a ತತೋ ವೈಶ್ರವಣಂ ತತ್ರ ದದೃಶುರ್ನರವಾಹನಂ।
03259014c ಪಿತ್ರಾ ಸಾರ್ಧಂ ಸಮಾಸೀನಮೃದ್ಧ್ಯಾ ಪರಮಯಾ ಯುತಂ।।
ಆಗ ಅಲ್ಲಿ ತಂದೆಯ ಬಳಿ ನರವಾಹನ ವೈಶ್ರವಣನು ಪರಮ ವೈಭವದೊಂದಿಗೆ ಕುಳಿತುದದನ್ನು ಅವರು ನೋಡಿದರು.
03259015a ಜಾತಸ್ಪರ್ಧಾಸ್ತತಸ್ತೇ ತು ತಪಸೇ ಧೃತನಿಶ್ಚಯಾಃ।
03259015c ಬ್ರಹ್ಮಾಣಂ ತೋಷಯಾಮಾಸುರ್ಘೋರೇಣ ತಪಸಾ ತದಾ।।
ಆಗ ಅವರಲ್ಲಿ ಸ್ಪರ್ಧಾಭಾವನೆಯು ಹುಟ್ಟಲು ಆ ಧೃತನಿಶ್ಚಯಿಗಳು ಘೋರ ತಪಸ್ಸಿನಿಂದ ಬ್ರಹ್ಮನನ್ನು ತೃಪ್ತಿಪಡಿಸಿದರು.
03259016a ಅತಿಷ್ಠದೇಕಪಾದೇನ ಸಹಸ್ರಂ ಪರಿವತ್ಸರಾನ್।
03259016c ವಾಯುಭಕ್ಷೋ ದಶಗ್ರೀವಃ ಪಂಚಾಗ್ನಿಃ ಸುಸಮಾಹಿತಃ।।
ದಶಗ್ರೀವನು ಸುಸಮಾಹಿತನಾಗಿ ಪಂಚಾಗ್ನಿಗಳ ಮಧ್ಯೆ ಒಂದೇ ಕಾಲಿನ ಮೇಲೆ ನಿಂತು ಸಹಸ್ರ ವರ್ಷಗಳ ಪರ್ಯಂತ ವಾಯುಭಕ್ಷನಾಗಿ ತಪಿಸಿದನು.
03259017a ಅಧಃಶಾಯೀ ಕುಂಭಕರ್ಣೋ ಯತಾಹಾರೋ ಯತವ್ರತಃ।
03259017c ವಿಭೀಷಣಃ ಶೀರ್ಣಪರ್ಣಮೇಕಮಭ್ಯವಹಾರಯತ್।।
03259018a ಉಪವಾಸರತಿರ್ಧೀಮಾನ್ಸದಾ ಜಪ್ಯಪರಾಯಣಃ।
03259018c ತಮೇವ ಕಾಲಮಾತಿಷ್ಠತ್ತೀವ್ರಂ ತಪ ಉದಾರಧೀಃ।।
ಕುಂಭಕರ್ಣನು ಯತಾಹಾರನೂ ಯತವ್ರತನೂ ಆಗಿ ನೆಲದ ಮೇಲೆ ಮಲಗಿಕೊಂಡನು ಮತ್ತು ಧೀಮಾನ್ ವಿಭೀಷಣನು ಒಂದೇ ಒಂದು ಒಣಗಿದ ಎಲೆಯನ್ನು ಆಹಾರವನ್ನಾಗಿಸಿಕೊಂಡು ಉಪವಾಸದಲ್ಲಿ ಮತ್ತು ಸದಾ ಜಪ-ಪಾರಾಯಣದಲ್ಲಿ ತೊಡಗಿಸಿಕೊಂಡನು. ಆ ಉದಾರ ಮನಸ್ವಿಯು ಬಹುಕಾಲದವರೆಗೆ ಅತೀವ ತೀವ್ರ ತಪಸ್ಸನ್ನಾಚರಿಸಿದನು.
03259019a ಖರಃ ಶೂರ್ಪಣಖಾ ಚೈವ ತೇಷಾಂ ವೈ ತಪ್ಯತಾಂ ತಪಃ।
03259019c ಪರಿಚರ್ಯಾಂ ಚ ರಕ್ಷಾಂ ಚ ಚಕ್ರತುರ್ಹೃಷ್ಟಮಾನಸೌ।।
ಖರ ಮತ್ತು ಶೂರ್ಪಣಖಿಯರು ಸಂತೋಷದಿಂದ ತಪಸ್ಸನ್ನು ತಪಿಸುತ್ತಿರುವವರ ಪರಿಚಾರಕರಾಗಿ ಅವರನ್ನು ರಕ್ಷಣೆಮಾಡುತ್ತಿದ್ದರು.
03259020a ಪೂರ್ಣೇ ವರ್ಷಸಹಸ್ರೇ ತು ಶಿರಶ್ಚಿತ್ತ್ವಾ ದಶಾನನಃ।
03259020c ಜುಹೋತ್ಯಗ್ನೌ ದುರಾಧರ್ಷಸ್ತೇನಾತುಷ್ಯಜ್ಜಗತ್ಪ್ರಭುಃ।।
ಸಹಸ್ರವರ್ಷಗಳು ಸಂಪೂರ್ಣವಾದ ನಂತರ ದಶಾನನನು ಶಿರವನ್ನು ಕತ್ತರಿಸಿ ಅಗ್ನಿಯಲ್ಲಿ ಆಹುತಿಯನ್ನಾಗಿತ್ತನು. ಅವನ ಈ ದುರಾಧರ್ಷಕೃತ್ಯದಿಂದ ಜಗತ್ಪ್ರಭುವು ಸಂತುಷ್ಟನಾದನು.
03259021a ತತೋ ಬ್ರಹ್ಮಾ ಸ್ವಯಂ ಗತ್ವಾ ತಪಸಸ್ತಾನ್ನ್ಯವಾರಯತ್।
03259021c ಪ್ರಲೋಭ್ಯ ವರದಾನೇನ ಸರ್ವಾನೇವ ಪೃಥಕ್ ಪೃಥಕ್।।
ಆಗ ಸ್ವಯಂ ಬ್ರಹ್ಮನು ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ವರದಾನದ ಲೋಭವನ್ನಿತ್ತು ಅವರ ತಪಸ್ಸನ್ನು ತಡೆದನು.
03259022 ಬ್ರಹ್ಮೋವಾಚ।
03259022a ಪ್ರೀತೋಽಸ್ಮಿ ವೋ ನಿವರ್ತಧ್ವಂ ವರಾನ್ವೃಣುತ ಪುತ್ರಕಾಃ।
03259022c ಯದ್ಯದಿಷ್ಟಮೃತೇ ತ್ವೇಕಮಮರತ್ವಂ ತಥಾಸ್ತು ತತ್।।
ಬ್ರಹ್ಮನು ಹೇಳಿದನು: “ಮಕ್ಕಳೇ! ಪ್ರೀತನಾಗಿದ್ದೇನೆ. ಈಗ ನಿಲ್ಲಿಸಿ ವರವನ್ನು ಕೇಳಿ. ಅಮರತ್ವವನ್ನು ಬಿಟ್ಟು ಬಯಸಿದುದು ಬೇರೆ ಏನೇ ಇರಲಿ, ಹಾಗೆಯೇ ಆಗುತ್ತದೆ.
03259023a ಯದ್ಯದಗ್ನೌ ಹುತಂ ಸರ್ವಂ ಶಿರಸ್ತೇ ಮಹದೀಪ್ಸಯಾ।
03259023c ತಥೈವ ತಾನಿ ತೇ ದೇಹೇ ಭವಿಷ್ಯಂತಿ ಯಥೇಪ್ಸಿತಂ।।
ಮಹಾ ಆಸೆಗಳನ್ನಿತ್ತು ಅಗ್ನಿಯಲ್ಲಿ ಆಹುತಿಯನ್ನಾಗಿತ್ತ ನಿನ್ನ ಶಿರಗಳೆಲ್ಲವೂ ಮೊದಲಿನ ಹಾಗೆಯೇ ನಿನ್ನ ದೇಹವನ್ನು ಸೇರುತ್ತವೆ.
03259024a ವೈರೂಪ್ಯಂ ಚ ನ ತೇ ದೇಹೇ ಕಾಮರೂಪಧರಸ್ತಥಾ।
03259024c ಭವಿಷ್ಯಸಿ ರಣೇಽರೀಣಾಂ ವಿಜೇತಾಸಿ ನ ಸಂಶಯಃ।।
ನಿನ್ನ ದೇಹಕ್ಕೆ ವೈರೂಪವೆನ್ನುವುದೇ ಇಲ್ಲದಿರಲಿ ಮತ್ತು ನೀನು ಬೇಕಾದ ರೂಪವನ್ನು ಧರಿಸಬಲ್ಲವನಾಗುವೆ. ರಣದಲ್ಲಿ ಅರಿಗಳಿಂದ ವಿಜಯಿಯಾಗುವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.”
03259025 ರಾವಣ ಉವಾಚ।
03259025a ಗಂಧರ್ವದೇವಾಸುರತೋ ಯಕ್ಷರಾಕ್ಷಸತಸ್ತಥಾ।
03259025c ಸರ್ಪಕಿನ್ನ್ನರಭೂತೇಭ್ಯೋ ನ ಮೇ ಭೂಯಾತ್ಪರಾಭವಃ।।
ರಾವಣನು ಹೇಳಿದನು: “ಗಂಧರ್ವ, ದೇವತೆ, ಅಸುರ, ಯಕ್ಷ, ರಾಕ್ಷಸ, ಸರ್ಪ, ಕಿನ್ನರ ಭೂತಗಳಿಂದ ನನಗೆ ಪರಾಭವವಾಗದಿರಲಿ.”
03259026 ಬ್ರಹ್ಮೋವಾಚ।
03259026a ಯ ಏತೇ ಕೀರ್ತಿತಾಃ ಸರ್ವೇ ನ ತೇಭ್ಯೋಽಸ್ತಿ ಭಯಂ ತವ।
03259026c ಋತೇ ಮನುಷ್ಯಾದ್ಭದ್ರಂ ತೇ ತಥಾ ತದ್ವಿಹಿತಂ ಮಯಾ।।
ಬ್ರಹ್ಮನು ಹೇಳಿದನು: “ಮನುಷ್ಯನನ್ನು ಬಿಟ್ಟು ನೀನು ಕೇಳಿಕೊಂಡ ಈ ಎಲ್ಲರಿಂದ ನಿನಗೆ ಭಯವಿರುವುದಿಲ್ಲ. ಇದು ನನ್ನ ಆದೇಶ. ನಿನಗೆ ಮಂಗಳವಾಗಲಿ.””
03259027 ಮಾರ್ಕಂಡೇಯ ಉವಾಚ।
03259027a ಏವಮುಕ್ತೋ ದಶಗ್ರೀವಸ್ತುಷ್ಟಃ ಸಮಭವತ್ತದಾ।
03259027c ಅವಮೇನೇ ಹಿ ದುರ್ಬುದ್ಧಿರ್ಮನುಷ್ಯಾನ್ಪುರುಷಾದಕಃ।।
ಮಾರ್ಕಂಡೇಯನು ಹೇಳಿದನು: “ಈ ಮಾತುಗಳಿಂದ ದಶಗ್ರೀವನು ಸಂತುಷ್ಟನಾದನು. ಏಕೆಂದರೆ ಅ ಪುರುಷಾದಕ ದುರ್ಬುದ್ಧಿಯು ಮನುಷ್ಯರನ್ನು ಕೀಳುಭಾವನೆಯಿಂದ ನೋಡುತ್ತಿದ್ದನು.
03259028a ಕುಂಭಕರ್ಣಮಥೋವಾಚ ತಥೈವ ಪ್ರಪಿತಾಮಹಃ।
03259028c ಸ ವವ್ರೇ ಮಹತೀಂ ನಿದ್ರಾಂ ತಮಸಾ ಗ್ರಸ್ತಚೇತನಃ।।
ಹಾಗೆಯೇ ಪಿತಾಮಹನು ಕುಂಭಕರ್ಣನನ್ನು ಕೇಳಲು ಅವನ ಚೇತನವು ತಾಮಸದ ಹಿಡಿತದಲ್ಲಿರಲು ಅವನು ಮಹತ್ತರ ನಿದ್ದೆಯನ್ನು ವರವನ್ನಾಗಿ ಕೇಳಿದನು.
03259029a ತಥಾ ಭವಿಷ್ಯತೀತ್ಯುಕ್ತ್ವಾ ವಿಭೀಷಣಮುವಾಚ ಹ।
03259029c ವರಂ ವೃಣೀಷ್ವ ಪುತ್ರ ತ್ವಂ ಪ್ರೀತೋಽಸ್ಮೀತಿ ಪುನಃ ಪುನಃ।।
ಹಾಗೆಯೇ ಆಗುತ್ತದೆಯೆಂದು ಹೇಳಿ ಅವನು ವಿಭೀಷಣನಿಗೆ “ಪುತ್ರ! ಪ್ರೀತನಾಗಿದ್ದೇನೆ. ವರವನ್ನು ಕೇಳಿಕೋ!” ಎಂದು ಪುನಃ ಪುನಃ ಹೇಳಿದನು.
03259030 ವಿಭೀಷಣ ಉವಾಚ।
03259030a ಪರಮಾಪದ್ಗತಸ್ಯಾಪಿ ನಾಧರ್ಮೇ ಮೇ ಮತಿರ್ಭವೇತ್।
03259030c ಅಶಿಕ್ಷಿತಂ ಚ ಭಗವನ್ಬ್ರಹ್ಮಾಸ್ತ್ರಂ ಪ್ರತಿಭಾತು ಮೇ।।
ವಿಭೀಷಣನು ಹೇಳಿದನು: “ಪರಮ ಆಪತ್ತನ್ನು ಪಡೆದರೂ ನನ್ನ ಬುದ್ಧಿಯು ಅಧರ್ಮದಲ್ಲಿ ನಿಲ್ಲದಿರಲಿ. ಕಲಿಯದೇ ಇದ್ದರೂ ನನಗೆ ಭಗವನ್! ಬ್ರಹ್ಮಾಸ್ತ್ರವು ಹೊಳೆಯಲಿ.”
03259031 ಬ್ರಹ್ಮೋವಾಚ।
03259031a ಯಸ್ಮಾದ್ರಾಕ್ಷಸಯೋನೌ ತೇ ಜಾತಸ್ಯಾಮಿತ್ರಕರ್ಶನ।
03259031c ನಾಧರ್ಮೇ ರಮತೇ ಬುದ್ಧಿರಮರತ್ವಂ ದದಾಮಿ ತೇ।।
ಬ್ರಹ್ಮನು ಹೇಳಿದನು: “ಅಮಿತ್ರಕರ್ಶನ! ರಾಕ್ಷಸಯೋನಿಯಲ್ಲಿ ಜನಿಸಿದ್ದರೂ ಕೂಡ ಎಲ್ಲಿಯವರೆಗೆ ನಿನ್ನ ಬುದ್ಧಿಯು ಅಧರ್ಮದಲ್ಲಿ ಆನಂದಿಸುವುದಿಲ್ಲವೋ ಅಲ್ಲಿಯವರೆಗೆ ನಿನಗೆ ಅಮರತ್ವವನ್ನು ನೀಡುತ್ತೇನೆ.””
03259032 ಮಾರ್ಕಂಡೇಯ ಉವಾಚ।
03259032a ರಾಕ್ಷಸಸ್ತು ವರಂ ಲಬ್ಧ್ವಾ ದಶಗ್ರೀವೋ ವಿಶಾಂ ಪತೇ।
03259032c ಲಂಕಾಯಾಶ್ಚ್ಯಾವಯಾಮಾಸ ಯುಧಿ ಜಿತ್ವಾ ಧನೇಶ್ವರಂ।।
ಮಾರ್ಕಂಡೇಯನು ಹೇಳಿದನು: “ವಿಶಾಂಪತೇ! ವರವನ್ನು ಪಡೆದು ರಾಕ್ಷಸ ದಶಗ್ರೀವನಾದರೋ ಯುದ್ಧದಲ್ಲಿ ಧನೇಶ್ವರನನ್ನು ಜಯಿಸಿ ಅವನನ್ನು ಲಂಕೆಯಿಂದ ಹೊರಗೋಡಿಸಿದನು.
03259033a ಹಿತ್ವಾ ಸ ಭಗವಾಽಲ್ಲಂಕ್ಯಾಮಾವಿಶದ್ಗಂಧಮಾದನಂ।
03259033c ಗಂಧರ್ವಯಕ್ಷಾನುಗತೋ ರಕ್ಷಃಕಿಂಪುರುಷೈಃ ಸಹ।।
ಆ ಭಗವಾನನು ಲಂಕೆಯನ್ನು ತೊರೆದು ಹಿಂಬಾಲಿಸಿದ ಗಂಧರ್ವ, ಯಕ್ಷ, ರಾಕ್ಷಸ ಕಿಂಪುರುಷರೊಂದಿಗೆ ಗಂಧಮಾದನವನ್ನು ಪ್ರವೇಶಿಸಿದನು.
03259034a ವಿಮಾನಂ ಪುಷ್ಪಕಂ ತಸ್ಯ ಜಹಾರಾಕ್ರಮ್ಯ ರಾವಣಃ।
03259034c ಶಶಾಪ ತಂ ವೈಶ್ರವಣೋ ನ ತ್ವಾಮೇತದ್ವಹಿಷ್ಯತಿ।।
ಅಕ್ರಮವಾಗಿ ರಾವಣನು ಅವನ ಪುಷ್ಪಕ ವಿಮಾನವನ್ನು ಅಪಹರಿಸಿದನು ಮತ್ತು ಅದಕ್ಕೆ ವೈಶ್ರವಣನು ಅವನಿಗೆ ಶಪಿಸಿದನು: “ಇದನ್ನು ನೀನು ಏರಲಾರೆ!
03259035a ಯಸ್ತು ತ್ವಾಂ ಸಮರೇ ಹಂತಾ ತಮೇವೈತದ್ವಹಿಷ್ಯತಿ।
03259035c ಅವಮನ್ಯ ಗುರುಂ ಮಾಂ ಚ ಕ್ಷಿಪ್ರಂ ತ್ವಂ ನ ಭವಿಷ್ಯಸಿ।।
ಸಮರದಲ್ಲಿ ಯಾರು ನಿನ್ನನ್ನು ಕೊಲ್ಲುತ್ತಾನೋ ಅವನು ಮಾತ್ರ ಇದನ್ನು ಏರಬಲ್ಲನು. ಹಿರಿಯವನಾಗಿದ್ದ ನನ್ನನ್ನು ಅಪಮಾನಿಸಿದಂತೆ ಕ್ಷಿಪ್ರವಾಗಿ ನಿನಗೂ ಹಾಗೆಯೇ ಆಗುತ್ತದೆ.”
03259036a ವಿಭೀಷಣಸ್ತು ಧರ್ಮಾತ್ಮಾ ಸತಾಂ ಧರ್ಮಮನುಸ್ಮರನ್।
03259036c ಅನ್ವಗಚ್ಚನ್ಮಹಾರಾಜ ಶ್ರಿಯಾ ಪರಮಯಾ ಯುತಃ।।
ಮಹಾರಾಜ! ಧರ್ಮಾತ್ಮ ವಿಭೀಷಣನಾದರೋ ಪರಮ ತೇಜಸ್ಸಿನಿಂದೊಡಗೂಡಿ ಸತ್ಯವಂತರ ಧರ್ಮವನ್ನು ಮನಸ್ಸಿನಲ್ಲಿಟ್ಟುಕೊಂಡು ಅನುಸರಿಸಿದನು.
03259037a ತಸ್ಮೈ ಸ ಭಗವಾಂಸ್ತುಷ್ಟೋ ಭ್ರಾತಾ ಭ್ರಾತ್ರೇ ಧನೇಶ್ವರಃ।
03259037c ಸೇನಾಪತ್ಯಂ ದದೌ ಧೀಮಾನ್ಯಕ್ಷರಾಕ್ಷಸಸೇನಯೋಃ।।
ಅಣ್ಣ ಭಗವಾನ್ ಧನೇಶ್ವರನು ಆ ಧೀಮಂತ ತಮ್ಮನಿಂದ ತುಷ್ಟನಾಗಿ ಅವನಿಗೆ ಯಕ್ಷರಾಕ್ಷಸ ಸೇನೆಗಳ ಸೇನಾಪತ್ಯವನ್ನು ಕೊಟ್ಟನು.
03259038a ರಾಕ್ಷಸಾಃ ಪುರುಷಾದಾಶ್ಚ ಪಿಶಾಚಾಶ್ಚ ಮಹಾಬಲಾಃ।
03259038c ಸರ್ವೇ ಸಮೇತ್ಯ ರಾಜಾನಮಭ್ಯಷಿಂಚದ್ದಶಾನನಂ।।
ನರಭಕ್ಷಕ ರಾಕ್ಷಸರು ಮತ್ತು ಮಹಾಬಲಶಾಲಿ ಪಿಶಾಚರು ಎಲ್ಲರೂ ಸೇರಿ ದಶಾನನನನ್ನು ರಾಜನಾಗಿ ಅಭಿಷೇಕಿಸಿದರು.
03259039a ದಶಗ್ರೀವಸ್ತು ದೈತ್ಯಾನಾಂ ದೇವಾನಾಂ ಚ ಬಲೋತ್ಕಟಃ।
03259039c ಆಕ್ರಮ್ಯ ರತ್ನಾನ್ಯಹರತ್ಕಾಮರೂಪೀ ವಿಹಂಗಮಃ।।
ಬಲೋತ್ಕಟನಾದ ಆ ಕಾಮರೂಪೀ ವಿಹಂಗಮ ದಶಗ್ರೀವನು ದೈತ್ಯ ಮತ್ತು ದೇವರಿಂದ ಅಕ್ರಮವಾಗಿ ರತ್ನಗಳನ್ನು ಅಪಹರಿಸಿದನು.
03259040a ರಾವಯಾಮಾಸ ಲೋಕಾನ್ಯತ್ತಸ್ಮಾದ್ರಾವಣ ಉಚ್ಯತೇ।
03259040c ದಶಗ್ರೀವಃ ಕಾಮಬಲೋ ದೇವಾನಾಂ ಭಯಮಾದಧತ್।।
ಲೋಕಗಳನ್ನು ರೋದಿಸುವಂತೆ ಮಾಡಿದುದರಿಂದ ಅವನನ್ನು ರಾವಣನೆಂದು ಕರೆಯುತ್ತಾರೆ. ಕಾಮಬಲ ದಶಗ್ರೀವನು ದೇವತೆಗಳಿಗೆ ಭಯವನ್ನುಂಟುಮಾಡಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ರಾವಣಾದಿವರಪ್ರಾಪ್ತೌ ಏಕೋನಷಷ್ಟ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ರಾವಣಾದಿವರಪ್ರಾಪ್ತಿಯಲ್ಲಿ ಇನ್ನೂರಾಐವತ್ತೊಂಭತ್ತನೆಯ ಅಧ್ಯಾಯವು.