ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 258
ಸಾರ
ರಾಮನು ಪತ್ನಿ ಸೀತೆಯ ಅಪಹರಣದಿಂದ ಪಟ್ಟ ಅಪ್ರತಿಮ ದುಃಖದ ಕುರಿತು ಮಾರ್ಕಂಡೇಯನು ಹೇಳಲು ಯುಧಿಷ್ಠಿರನು ಸಂಪೂರ್ಣ ರಾಮಕಥೆಯನ್ನು ಕೇಳಲು ಬಯಸುವುದು (1-5). ಇಕ್ಷ್ವಾಕುವಂಶದ ದಶರಥನಿಗೆ ರಾಮಾದಿ ನಾಲ್ವರು ಮಕ್ಕಳು - ಕೌಸಲ್ಯೆಯಲ್ಲಿ ರಾಮ, ಕೈಕೇಯಿಯಲ್ಲಿ ಭರತ ಮತ್ತು ಸುಮಿತ್ರೆಯಲ್ಲಿ ಲಕ್ಷ್ಮಣ-ಶತ್ರುಘ್ನರ ಜನನ; ಜನಕನ ಮಗಳು ಸೀತೆಯೊಂದಿಗೆ ರಾಮನ ವಿವಾಹ (6-10). ಪುಲಸ್ತ್ಯನ ಮಗ ವೈಶ್ರವಣನು ಪಿತಾಮಹ ಬ್ರಹ್ಮನೊಂದಿಗೇ ಹೆಚ್ಚುಕಾಲ ಇರುವುದನ್ನು ಕಂಡು ಕುಪಿತನಾಗಿ ತನ್ನಿಂದ ವಿಶ್ರವ ಎನ್ನುವವನ್ನು ಸೃಷ್ಟಿಸುವುದು; ಬ್ರಹ್ಮನು ವೈಶ್ರವಣ (ಕುಬೇರ)ನಿಗೆ ಅಮರತ್ವವನ್ನೂ, ಲೋಕಪಾಲತ್ವವನ್ನೂ, ಧನಾಧಿಪತ್ಯವನ್ನೂ, ಲಂಕೆಯನ್ನೂ ನೀಡಿದುದು (11-16).
03258001 ಮಾರ್ಕಂಡೇಯ ಉವಾಚ।
03258001a ಪ್ರಾಪ್ತಮಪ್ರತಿಮಂ ದುಃಖಂ ರಾಮೇಣ ಭರತರ್ಷಭ।
03258001c ರಕ್ಷಸಾ ಜಾನಕೀ ತಸ್ಯ ಹೃತಾ ಭಾರ್ಯಾ ಬಲೀಯಸಾ।।
ಮಾರ್ಕಂಡೇಯನು ಹೇಳಿದನು: “ಭರತರ್ಷಭ! ತನ್ನ ಪತ್ನಿ ಜಾನಕಿಯನ್ನು ರಾಕ್ಷಸನು ಬಲಾತ್ಕಾರವಾಗಿ ಅಪಹರಿಸಿಕೊಂಡು ಹೋದಾಗ ರಾಮನು ಅಪ್ರತಿಮ ದುಃಖವನ್ನು ಅನುಭವಿಸಿದನು.
03258002a ಆಶ್ರಮಾದ್ರಾಕ್ಷಸೇಂದ್ರೇಣ ರಾವಣೇನ ವಿಹಾಯಸಾ।
03258002c ಮಾಯಾಮಾಸ್ಥಾಯ ತರಸಾ ಹತ್ವಾ ಗೃಧ್ರಂ ಜಟಾಯುಷಂ।।
ರಾಕ್ಷಸೇಂದ್ರ ರಾವಣನು ಮಾಯೆಯಿಂದ ಅವಳನ್ನು ಆಶ್ರಮದಿಂದ ಕದ್ದು, ಹದ್ದು ಜಟಾಯುವನ್ನು ಸಂಹರಿಸಿ ಕ್ಷಣಮಾತ್ರದಲ್ಲಿ ಆಕಾಶಮಾರ್ಗದಲ್ಲಿ ಹೋದನು.
03258003a ಪ್ರತ್ಯಾಜಹಾರ ತಾಂ ರಾಮಃ ಸುಗ್ರೀವಬಲಮಾಶ್ರಿತಃ।
03258003c ಬದ್ಧ್ವಾ ಸೇತುಂ ಸಮುದ್ರಸ್ಯ ದಗ್ಧ್ವಾ ಲಂಕಾಂ ಶಿತೈಃ ಶರೈಃ।।
ರಾಮನು ಸುಗ್ರೀವನ ಸೇನೆಯ ಸಹಾಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ತೀಕ್ಷ್ಣಶರಗಳಿಂದ ಲಂಕೆಯನ್ನು ಸುಟ್ಟು ಅವಳನ್ನು ಪುನಃ ಪಡೆದನು.”
03258004 ಯುಧಿಷ್ಠಿರ ಉವಾಚ।
03258004a ಕಸ್ಮಿನ್ರಾಮಃ ಕುಲೇ ಜಾತಃ ಕಿಂವೀರ್ಯಃ ಕಿಂಪರಾಕ್ರಮಃ।
03258004c ರಾವಣಃ ಕಸ್ಯ ವಾ ಪುತ್ರಃ ಕಿಂ ವೈರಂ ತಸ್ಯ ತೇನ ಹ।।
ಯುಧಿಷ್ಠಿರನು ಹೇಳಿದನು: “ರಾಮನು ಯಾವಕುಲದಲ್ಲಿ ಜನಿಸಿದನು ಮತ್ತು ಅವನು ಎಷ್ಟು ವೀರನೂ ಪರಾಕ್ರಮಿಯೂ ಆಗಿದ್ದನು? ರಾವಣನು ಯಾರ ಮಗ ಮತ್ತು ರಾಮನೊಂದಿಗೆ ಅವನ ದ್ವೇಷವಾದರೂ ಏನಿತ್ತು?
03258005a ಏತನ್ಮೇ ಭಗವನ್ಸರ್ವಂ ಸಮ್ಯಗಾಖ್ಯಾತುಮರ್ಹಸಿ।
03258005c ಶ್ರೋತುಮಿಚ್ಚಾಮಿ ಚರಿತಂ ರಾಮಸ್ಯಾಕ್ಲಿಷ್ಟಕರ್ಮಣಃ।।
ಭಗವನ್! ಇವೆಲ್ಲವನ್ನೂ ನೀನು ನನಗೆ ಹೇಳಬೇಕು. ಅಕ್ಲಿಷ್ಟಕರ್ಮಿ ರಾಮನ ಕಥೆಯನ್ನು ಕೇಳಲು ಬಯಸುತ್ತೇನೆ.”
03258006 ಮಾರ್ಕಂಡೇಯ ಉವಾಚ।
03258006a ಅಜೋ ನಾಮಾಭವದ್ರಾಜಾ ಮಹಾನಿಕ್ಷ್ವಾಕುವಂಶಜಃ।
03258006c ತಸ್ಯ ಪುತ್ರೋ ದಶರಥಃ ಶಶ್ವತ್ಸ್ವಾಧ್ಯಾಯವಾಂ ಶುಚಿಃ।।
ಮಾರ್ಕಂಡೇಯನು ಹೇಳಿದನು: “ಮಹಾನ್ ಇಕ್ಷ್ವಾಕು ವಂಶದಲ್ಲಿ ಹುಟ್ಟಿದ ಅಜ ಎಂಬ ಹೆಸರಿನ ರಾಜನಿದ್ದನು. ಅವನ ಪುತ್ರ ದಶರಥನು ಯಾವಾಗಲೂ ಸ್ವಾಧ್ಯಾಯದಲ್ಲಿ ತೊಡಗಿದ್ದು ಶುಚಿಯಾಗಿದ್ದನು.
03258007a ಅಭವಂಸ್ತಸ್ಯ ಚತ್ವಾರಃ ಪುತ್ರಾ ಧರ್ಮಾರ್ಥಕೋವಿದಾಃ।
03258007c ರಾಮಲಕ್ಷ್ಮಣಶತ್ರುಘ್ನಾ ಭರತಶ್ಚ ಮಹಾಬಲಃ।।
ಅವನಿಗೆ ಧರ್ಮಾರ್ಥಕೋವಿದರಾದ ಮಹಾಬಲಶಾಲಿಗಳಾದ ರಾಮ, ಲಕ್ಷ್ಮಣ, ಶತ್ರುಘ್ನ ಮತ್ತು ಭರತರೆಂಬ ನಾಲ್ವರು ಪುತ್ರರಾದರು.
03258008a ರಾಮಸ್ಯ ಮಾತಾ ಕೌಸಲ್ಯಾ ಕೈಕೇಯೀ ಭರತಸ್ಯ ತು।
03258008c ಸುತೌ ಲಕ್ಷ್ಮಣಶತ್ರುಘ್ನೌ ಸುಮಿತ್ರಾಯಾಃ ಪರಂತಪೌ।।
ರಾಮನ ತಾಯಿ ಕೌಸಲ್ಯೆ, ಭರತನ ತಾಯಿ ಕೈಕೇಯೀ ಮತ್ತು ಪರಂತಪರಾದ ಲಕ್ಷಣ-ಶತ್ರುಘ್ನರು ಸುಮಿತ್ರೆಯ ಮಕ್ಕಳು.
03258009a ವಿದೇಹರಾಜೋ ಜನಕಃ ಸೀತಾ ತಸ್ಯಾತ್ಮಜಾ ವಿಭೋ।
03258009c ಯಾಂ ಚಕಾರ ಸ್ವಯಂ ತ್ವಷ್ಟಾ ರಾಮಸ್ಯ ಮಹಿಷೀಂ ಪ್ರಿಯಾಂ।।
ವಿಭೋ! ವಿದೇಹರಾಜ ಜನಕ ಮತ್ತು ಅವನ ಮಗಳು ಸೀತೆ. ಸ್ವಯಂ ಬ್ರಹ್ಮನೇ ಅವಳನ್ನು ರಾಮನ ಪ್ರಿಯ ಮಹಿಷಿಯನ್ನಾಗಿ ಮಾಡಿದ್ದನು.
03258010a ಏತದ್ರಾಮಸ್ಯ ತೇ ಜನ್ಮ ಸೀತಾಯಾಶ್ಚ ಪ್ರಕೀರ್ತಿತಂ।
03258010c ರಾವಣಸ್ಯಾಪಿ ತೇ ಜನ್ಮ ವ್ಯಾಖ್ಯಾಸ್ಯಾಮಿ ಜನೇಶ್ವರ।।
ಇದು ರಾಮ ಮತ್ತು ಸೀತೆಯರ ಜನ್ಮಕಥೆ. ಜನೇಶ್ವರ! ಈಗ ರಾವಣನ ಜನ್ಮದ ಕುರಿತೂ ಹೇಳುತ್ತೇನೆ.
03258011a ಪಿತಾಮಹೋ ರಾವಣಸ್ಯ ಸಾಕ್ಷಾದ್ದೇವಃ ಪ್ರಜಾಪತಿಃ।
03258011c ಸ್ವಯಂಭೂಃ ಸರ್ವಲೋಕಾನಾಂ ಪ್ರಭುಃ ಸ್ರಷ್ಟಾ ಮಹಾತಪಾಃ।।
ಸಾಕ್ಷಾತ್ ದೇವ ಪ್ರಜಾಪತಿ, ಸ್ವಯಂಭೂ, ಸರ್ವಲೋಕಗಳ ಪ್ರಭು, ಸೃಷ್ಟಿಕರ್ತ, ಮಹಾತಪನೇ ರಾವಣನ ಪಿತಾಮಹ.
03258012a ಪುಲಸ್ತ್ಯೋ ನಾಮ ತಸ್ಯಾಸೀನ್ಮಾನಸೋ ದಯಿತಃ ಸುತಃ।
03258012c ತಸ್ಯ ವೈಶ್ರವಣೋ ನಾಮ ಗವಿ ಪುತ್ರೋಽಭವತ್ಪ್ರಭುಃ।।
ಅವನಿಗೆ ಪುಲಸ್ತ್ಯ ಎಂಬ ಹೆಸರಿನ ಮನಸ್ಸಿನಿಂದ ಹುಟ್ಟಿದ ಮಗನಿದ್ದನು. ಆ ಪ್ರಭುವಿಗೆ ಗೋವಿನಲ್ಲಿ ವೈಶ್ರವಣ ಎಂಬ ಹೆಸರಿನ ಪುತ್ರನಾದನು.
03258013a ಪಿತರಂ ಸ ಸಮುತ್ಸೃಜ್ಯ ಪಿತಾಮಹಮುಪಸ್ಥಿತಃ।
03258013c ತಸ್ಯ ಕೋಪಾತ್ಪಿತಾ ರಾಜನ್ಸಸರ್ಜಾತ್ಮಾನಮಾತ್ಮನಾ।।
ಅವನು ತಂದೆಯನ್ನು ತೊರೆದು ಪಿತಾಮಹನಲ್ಲಿ ವಾಸಿಸಿದನು. ರಾಜನ್! ಇದರಿಂದ ಕೋಪಗೊಂಡ ತಂದೆಯು ತನ್ನಿಂದಲೇ ತನ್ನನ್ನು ಸೃಷ್ಟಿಸಿಕೊಂಡನು.
03258014a ಸ ಜಜ್ಞೇ ವಿಶ್ರವಾ ನಾಮ ತಸ್ಯಾತ್ಮಾರ್ಧೇನ ವೈ ದ್ವಿಜಃ।
03258014c ಪ್ರತೀಕಾರಾಯ ಸಕ್ರೋಧಸ್ತತೋ ವೈಶ್ರವಣಸ್ಯ ವೈ।।
ಹೀಗೆ ಎರಡುಬಾರಿ ಜನಿಸಿದ ಅವನು ವೈಶ್ರವಣನ ಮೇಲಿನ ಕ್ರೋಧದಿಂದ ಪ್ರತೀಕಾರವನ್ನು ಮಾಡಲು, ತನ್ನ ಅರ್ಧದಿಂದ ವಿಶ್ರವಾ ಎಂಬ ಹೆಸರಿನವನನ್ನು ಹುಟ್ಟಿಸಿದನು.
03258015a ಪಿತಾಮಹಸ್ತು ಪ್ರೀತಾತ್ಮಾ ದದೌ ವೈಶ್ರವಣಸ್ಯ ಹ।
03258015c ಅಮರತ್ವಂ ಧನೇಶತ್ವಂ ಲೋಕಪಾಲತ್ವಮೇವ ಚ।।
03258016a ಈಶಾನೇನ ತಥಾ ಸಖ್ಯಂ ಪುತ್ರಂ ಚ ನಲಕೂಬರಂ।
03258016c ರಾಜಧಾನೀನಿವೇಶಂ ಚ ಲಂಕಾಂ ರಕ್ಷೋಗಣಾನ್ವಿತಾಂ।।
ಪಿತಾಮಹನಾದರೋ ವೈಶ್ರವಣನ ಮೇಲೆ ಸಂತೋಷಗೊಂಡು ಅವನಿಗೆ ಅಮರತ್ವವನ್ನೂ ಧನೇಶತ್ವವನ್ನೂ ಲೋಕಪಾಲತ್ವವನ್ನೂ, ಈಶಾನನ ಸಖ್ಯವನ್ನೂ, ನಲಕೂಬರನೆನ್ನುವ ಪುತ್ರನನ್ನೂ, ರಾಕ್ಷಸಗಣಗಳಿಂದೊಡಗೂಡಿದ ಲಂಕೆಯನ್ನು ರಾಜಧಾನಿಯಾಗಿಯೂ ನಿವಾಸಸ್ಥಾನವಾಗಿಯೂ ನೀಡಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ರಾಮರಾವಣಯೋರ್ಜನ್ಮಕಥನೇ ಅಷ್ಟಪಂಚಾಶದಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ರಾಮರಾವಣರ ಜನ್ಮಕಥನದಲ್ಲಿ ಇನ್ನೂರಾಐವತ್ತೆಂಟನೆಯ ಅಧ್ಯಾಯವು.