256 ಜಯದ್ರಥವಿಮೋಕ್ಷಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 256

ಸಾರ

ಭೀಮನು ಜಯದ್ರಥನನ್ನು ಹಿಡಿದು ಅವನ ತಲೆಗೆ ಒದೆದು, ಮೂರ್ಛೆಗೊಳಿಸಿ, ಐದು ಜುಟ್ಟುಗಳನ್ನು ಮಾತ್ರ ಬಿಟ್ಟು ತಲೆಯನ್ನು ಬೋಳಿಸಿ, ರಥಕ್ಕೆ ಕಟ್ಟಿ ಯುಧಿಷ್ಠಿರನಲ್ಲಿಗೆ ಕರೆತಂದುದು (1-14). ಯುಧಿಷ್ಠಿರನು ಜಯದ್ರಥನನ್ನು ಬಿಡುಗಡೆ ಮಾಡಿದುದು (15-23). ಜಯದ್ರಥನು ಗಂಗಾದ್ವಾರಕ್ಕೆ ಹೋಗಿ ಹರನ ಕುರಿತು ತಪಸ್ಸನ್ನಾಚರಿಸಿ ಐವರು ಪಾಂಡವರನ್ನು ಕೊಲ್ಲಲು ವರವನ್ನು ಕೇಳಲು ಹರನು ಅದು ಆಗುವುದಿಲ್ಲವೆಂದು ಅರ್ಜುನನನ್ನು ಬಿಟ್ಟು ಇತರರನ್ನು ಯುದ್ಧದಲ್ಲಿ ತಡೆಯಬಲ್ಲನೆಂದು ವರವನ್ನಿತ್ತುದು (24-30).

03256001 ವೈಶಂಪಾಯನ ಉವಾಚ।
03256001a ಜಯದ್ರಥಸ್ತು ಸಂಪ್ರೇಕ್ಷ್ಯ ಭ್ರಾತರಾವುದ್ಯತಾಯುಧೌ।
03256001c ಪ್ರಾದ್ರವತ್ತೂರ್ಣಮವ್ಯಗ್ರೋ ಜೀವಿತೇಪ್ಸುಃ ಸುದುಃಖಿತಃ।।

ವೈಶಂಪಾಯನನು ಹೇಳಿದನು: “ಆಯುಧಗಳನ್ನು ಹಿಡಿದು ಓಡಿ ಬರುತ್ತಿರುವ ಸಹೋದರರನ್ನು ಕಂಡು ಜಯದ್ರಥನು ಬಹಳ ದುಃಖಿತನಾಗಿದ್ದರೂ ತನ್ನ ಜೀವವನ್ನು ಉಳಿಸಿಕೊಳ್ಳಲು ಇನ್ನೂ ಜೋರಾಗಿ ಓಡಿದನು.

03256002a ತಂ ಭೀಮಸೇನೋ ಧಾವಂತಮವತೀರ್ಯ ರಥಾದ್ಬಲೀ।
03256002c ಅಭಿದ್ರುತ್ಯ ನಿಜಗ್ರಾಹ ಕೇಶಪಕ್ಷೇಽತ್ಯಮರ್ಷಣಃ।।

ಬಲೀ ಭೀಮಸೇನನು ರಥದಿಂದ ಇಳಿದು ಓಡುತ್ತಿರುವವನ ಬೆನ್ನತ್ತಿ ಕೋಪದಿಂದ ಅವನ ಕೂದಲನ್ನು ಹಿಡಿದನು.

03256003a ಸಮುದ್ಯಮ್ಯ ಚ ತಂ ರೋಷಾನ್ನಿಷ್ಪಿಪೇಷ ಮಹೀತಲೇ।
03256003c ಗಲೇ ಗೃಹೀತ್ವಾ ರಾಜಾನಂ ತಾಡಯಾಮಾಸ ಚೈವ ಹ।।

ರೋಷದಿಂದ ಆ ರಾಜನನ್ನು ಮೇಲಕ್ಕೆತ್ತಿ ನೆಲಕ್ಕೆ ಬಡಿದು, ಕತ್ತನ್ನು ಹಿಡಿದು ಹೊಡೆಯತೊಡಗಿದನು.

03256004a ಪುನಃ ಸಂಜೀವಮಾನಸ್ಯ ತಸ್ಯೋತ್ಪತಿತುಮಿಚ್ಚತಃ।
03256004c ಪದಾ ಮೂರ್ಧ್ನಿ ಮಹಾಬಾಹುಃ ಪ್ರಾಹರದ್ವಿಲಪಿಷ್ಯತಃ।।

ಅವನು ಪುನಃ ಎಚ್ಚರನಾಗಿ, ಮೇಲೇಳಲು ಪ್ರಯತ್ನಿಸಿ ವಿಲಪಿಸುತ್ತಿರಲು ಮಹಾಬಾಹುವು ಅವನ ತಲೆಯನ್ನು ಕಾಲಿನಿಂದ ಒದ್ದನು.

03256005a ತಸ್ಯ ಜಾನುಂ ದದೌ ಭೀಮೋ ಜಘ್ನೇ ಚೈನಮರತ್ನಿನಾ।
03256005c ಸ ಮೋಹಮಗಮದ್ರಾಜಾ ಪ್ರಹಾರವರಪೀಡಿತಃ।।

ತೊಡೆಯಿಂದ ಕೆಳಗೊತ್ತಿ ಮುಷ್ಟಿಯಿಂದ ಭೀಮನು ಹೊಡೆಯಲು ಚೆನ್ನಾಗಿ ಪೆಟ್ಟುತಿಂದು ಪೀಡಿತನಾದ ರಾಜನು ಮೂರ್ಛಿತನಾದನು.

03256006a ವಿರೋಷಂ ಭೀಮಸೇನಂ ತು ವಾರಯಾಮಾಸ ಫಲ್ಗುನಃ।
03256006c ದುಃಶಲಾಯಾಃ ಕೃತೇ ರಾಜಾ ಯತ್ತದಾಹೇತಿ ಕೌರವ।।

ರೋಷದಲ್ಲಿದ್ದ ಭೀಮಸೇನನನ್ನು ಫಲ್ಗುನನು ತಡೆದನು: “ಕೌರವ! ದುಃಶಲೆಗಾಗಿಯಾದರೂ ರಾಜನು ಹೇಳಿದಂತೆ ಮಾಡು!”

03256007 ಭೀಮಸೇನ ಉವಾಚ।
03256007a ನಾಯಂ ಪಾಪಸಮಾಚಾರೋ ಮತ್ತೋ ಜೀವಿತುಮರ್ಹತಿ।
03256007c ದ್ರೌಪದ್ಯಾಸ್ತದನರ್ಹಾಯಾಃ ಪರಿಕ್ಲೇಷ್ಟಾ ನರಾಧಮಃ।।

ಭೀಮಸೇನನು ಹೇಳಿದನು: “ಮುಗ್ಧ ದ್ರೌಪದಿಯನ್ನು ಬಲಾತ್ಕರಿಸಿದ ಈ ಪಾಪಿ ನರಾಧಮನು ಜೀವಿಸಿರಬಾರದು!

03256008a ಕಿಂ ನು ಶಕ್ಯಂ ಮಯಾ ಕರ್ತುಂ ಯದ್ರಾಜಾ ಸತತಂ ಘೃಣೀ।
03256008c ತ್ವಂ ಚ ಬಾಲಿಶಯಾ ಬುದ್ಧ್ಯಾ ಸದೈವಾಸ್ಮಾನ್ಪ್ರಬಾಧಸೇ।।

ಸತತವೂ ಘೃಣಿಯಾಗಿರುವ ನಮ್ಮ ರಾಜನು ಹೇಳುವುದನ್ನು ನಾನು ಹೇಗೆ ತಾನೇ ಮಾಡಲು ಶಕ್ಯ? ನೀನು ಕೂಡ ನಿನ್ನ ಬಾಲಿಶ ಬುದ್ಧಿಯಿಂದ ಸದಾ ನನ್ನನ್ನು ಕಾಡುತ್ತಿರುತ್ತೀಯೆ!”

03256009a ಏವಮುಕ್ತ್ವಾ ಸಟಾಸ್ತಸ್ಯ ಪಂಚ ಚಕ್ರೇ ವೃಕೋದರಃ।
03256009c ಅರ್ಧಚಂದ್ರೇಣ ಬಾಣೇನ ಕಿಂ ಚಿದಬ್ರುವತಸ್ತದಾ।।

ಹೀಗೆ ಹೇಳಿ ವೃಕೋದರನು ಅರ್ಧಚಂದ್ರದ ಬಾಣದಿಂದ ಐದು ಜುಟ್ಟುಗಳನ್ನು ಮಾತ್ರ ಬಿಟ್ಟು ಅವನ ತಲೆಯನ್ನು ಬೋಳಿಸಿದನು. ಆಗ ಅವನು ಏನನ್ನೂ ಹೇಳಲಿಲ್ಲ.

03256010a ವಿಕಲ್ಪಯಿತ್ವಾ ರಾಜಾನಂ ತತಃ ಪ್ರಾಹ ವೃಕೋದರಃ।
03256010c ಜೀವಿತುಂ ಚೇಚ್ಚಸೇ ಮೂಢ ಹೇತುಂ ಮೇ ಗದತಃ ಶೃಣು।।

ಆಗ ರಾಜನಿಗೆ ಎರಡು ಆಯ್ಕೆಗಳನ್ನಿತ್ತು ಹೇಳಿದನು: “ಮೂಢ! ಜೀವಿಸಲು ಇಚ್ಛಿಸುತ್ತೀಯಾದರೆ ನಾನು ಈಗ ಹೇಳುವುದನ್ನು ಕೇಳು.

03256011a ದಾಸೋಽಸ್ಮೀತಿ ತ್ವಯಾ ವಾಚ್ಯಂ ಸಂಸತ್ಸು ಚ ಸಭಾಸು ಚ।
03256011c ಏವಂ ತೇ ಜೀವಿತಂ ದದ್ಯಾಮೇಷ ಯುದ್ಧಜಿತೋ ವಿಧಿಃ।।

ಸಂಸತ್ತು ಮತ್ತು ಸಭೆಗಳಲ್ಲಿ “ನಾನು ದಾಸ!” ಎಂದು ನೀನು ಹೇಳಬೇಕು. ಹೀಗೆ ಮಾತ್ರ ನಿನಗೆ ಜೀವಿಸಲು ಬಿಡುತ್ತೇನೆ. ಇದು ಯುದ್ಧದಲ್ಲಿ ಗೆದ್ದವರ ವಿಧಿ.”

03256012a ಏವಮಸ್ತ್ವಿತಿ ತಂ ರಾಜಾ ಕೃಚ್ಚ್ರಪ್ರಾಣೋ ಜಯದ್ರಥಃ।
03256012c ಪ್ರೋವಾಚ ಪುರುಷವ್ಯಾಘ್ರಂ ಭೀಮಮಾಹವಶೋಭಿನಂ।।

ಪ್ರಾಣಕ್ಕೆ ಕಷ್ಟಬಿದ್ದ ರಾಜಾ ಜಯದ್ರಥನು “ಹಾಗೆಯೇ ಆಗಲಿ” ಎಂದು ಯುದ್ಧದಲ್ಲಿ ಶೋಭಿಸುತ್ತಿದ್ದ ಪುರುಷವ್ಯಾಘ್ರ ಭೀಮನಿಗೆ ಹೇಳಿದನು.

03256013a ತತ ಏನಂ ವಿಚೇಷ್ಟಂತಂ ಬದ್ಧ್ವಾ ಪಾರ್ಥೋ ವೃಕೋದರಃ।
03256013c ರಥಮಾರೋಪಯಾಮಾಸ ವಿಸಂಜ್ಞಂ ಪಾಂಸುಗುಣ್ಠಿತಂ।।
03256014a ತತಸ್ತಂ ರಥಮಾಸ್ಥಾಯ ಭೀಮಃ ಪಾರ್ಥಾನುಗಸ್ತದಾ।
03256014c ಅಭ್ಯೇತ್ಯಾಶ್ರಮಮಧ್ಯಸ್ಥಮಭ್ಯಗಚ್ಚದ್ಯುಧಿಷ್ಠಿ। ರಂ।

ಆಗ ಪಾರ್ಥ ವೃಕೋದರ ಭೀಮನು ಮೂರ್ಛಿತನಾದ ಅವನನ್ನು ಹಂದಾಡದಂತೆ ಕಟ್ಟಿ ರಥದಲ್ಲಿ ಏರಿಸಿ, ಆಶ್ರಮ ಮಧ್ಯದಲ್ಲಿ ಕುಳಿತಿದ್ದ ಪಾರ್ಥ ಯುಧಿಷ್ಠಿರನಲ್ಲಿಗೆ ಬಂದನು.

03256015a ದರ್ಶಯಾಮಾಸ ಭೀಮಸ್ತು ತದವಸ್ಥಂ ಜಯದ್ರಥಂ।
03256015c ತಂ ರಾಜಾ ಪ್ರಾಹಸದ್ದೃಷ್ಟ್ವಾ ಮುಚ್ಯತಾಮಿತಿ ಚಾಬ್ರವೀತ್।।

ಆ ಅವಸ್ಥೆಯಲ್ಲಿದ್ದ ಜಯದ್ರಥನನ್ನು ಭೀಮನು ರಾಜನಿಗೆ ತೋರಿಸಲು ರಾಜನು ನೋಡಿ ನಕ್ಕು, “ಇವನನ್ನು ಬಿಟ್ಟುಬಿಡು” ಎಂದನು.

03256016a ರಾಜಾನಂ ಚಾಬ್ರವೀದ್ಭೀಮೋ ದ್ರೌಪದ್ಯೈ ಕಥಯೇತಿ ವೈ।
03256016c ದಾಸಭಾವಂ ಗತೋ ಹ್ಯೇಷ ಪಾಂಡೂನಾಂ ಪಾಪಚೇತನಃ।।

ಭೀಮನು ರಾಜನಿಗೆ ಹೇಳಿದನು: “ಈ ಪಾಪಚೇತನನು ಪಾಂಡವರ ದಾಸನಾಗಿದ್ದಾನೆ ಎಂದು ದ್ರೌಪದಿಗೆ ಹೇಳು!”

03256017a ತಮುವಾಚ ತತೋ ಜ್ಯೇಷ್ಠೋ ಭ್ರಾತಾ ಸಪ್ರಣಯಂ ವಚಃ।
03256017c ಮುಂಚೈನಮಧಮಾಚಾರಂ ಪ್ರಮಾಣಂ ಯದಿ ತೇ ವಯಂ।।

ಆಗ ಹಿರಿಯಣ್ಣನು ಮೃದುವಾಗಿ ಈ ಮಾತುಗಳನ್ನಾಡಿದನು: “ನನ್ನ ಮಾತುಗಳೇ ಪ್ರಮಾಣವೆಂದಾದರೆ ಈ ಅಧಮಾಚಾರನನ್ನು ಬಿಟ್ಟುಬಿಡು!”

03256018a ದ್ರೌಪದೀ ಚಾಬ್ರವೀದ್ಭೀಮಮಭಿಪ್ರೇಕ್ಷ್ಯ ಯುಧಿಷ್ಠಿರಂ।
03256018c ದಾಸೋಽಯಂ ಮುಚ್ಯತಾಂ ರಾಜ್ಞಸ್ತ್ವಯಾ ಪಂಚಸಟಃ ಕೃತಃ।।

ಯುಧಿಷ್ಠಿರನನ್ನು ನೋಡಿ ದ್ರೌಪದಿಯು ಭೀಮನಿಗೆ ಹೇಳಿದಳು: “ರಾಜನ ದಾಸನನ್ನು ಬಿಡುಗಡೆಗೊಳಿಸು. ಐದು ಜುಟ್ಟುಗಳನ್ನು ಮಾಡಿದ್ದೀಯೆ!”

03256019a ಸ ಮುಕ್ತೋಽಭ್ಯೇತ್ಯ ರಾಜಾನಮಭಿವಾದ್ಯ ಯುಧಿಷ್ಠಿರಂ।
03256019c ವವಂದೇ ವಿಹ್ವಲೋ ರಾಜಾ ತಾಂಶ್ಚ ಸರ್ವಾನ್ಮುನೀಂಸ್ತದಾ।।

ಬಿಡುಗಡೆಮಾಡಲ್ಪಟ್ಟ ರಾಜನು ಯುಧಿಷ್ಠಿರನ ಬಳಿಹೋಗಿ ವಂದಿಸಿದನು. ಆಗ ಅಲ್ಲಿ ಸೇರಿದ್ದ ಎಲ್ಲರೂ, ರಾಜನೂ ವಿಹ್ವಲರಾದರು.

03256020a ತಮುವಾಚ ಘೃಣೀ ರಾಜಾ ಧರ್ಮಪುತ್ರೋ ಯುಧಿಷ್ಠಿರಃ।
03256020c ತಥಾ ಜಯದ್ರಥಂ ದೃಷ್ಟ್ವಾ ಗೃಹೀತಂ ಸವ್ಯಸಾಚಿನಃ।।

ಘೃಣೀ ರಾಜ ಧರ್ಮಪುತ್ರ ಯುಧಿಷ್ಠಿರನು ಸವ್ಯಸಾಚಿಯಿಂದ ಹಿಡಿದು ನಿಲ್ಲಿಸಲ್ಪಟ್ಟ ಜಯದ್ರಥನಿಗೆ ಹೀಗೆ ಹೇಳಿದನು:

03256021a ಅದಾಸೋ ಗಚ್ಚ ಮುಕ್ತೋಽಸಿ ಮೈವಂ ಕಾರ್ಷೀಃ ಪುನಃ ಕ್ವ ಚಿತ್।
03256021c ಸ್ತ್ರೀಕಾಮುಕ ಧಿಗಸ್ತು ತ್ವಾಂ ಕ್ಷುದ್ರಃ ಕ್ಷುದ್ರಸಹಾಯವಾನ್।
03256021e ಏವಂವಿಧಂ ಹಿ ಕಃ ಕುರ್ಯಾತ್ತ್ವದನ್ಯಃ ಪುರುಷಾಧಮಃ।।

“ಅದಾಸನಾಗಿ ಹೋಗು! ಮುಕ್ತನಾಗಿದ್ದೀಯೆ! ಆದರೆ ಪುನಃ ಇದನ್ನು ಮಾಡಬೇಡ! ಸ್ತ್ರೀಕಾಮುಕನಾದ, ಕ್ಷುದ್ರನಾದ ನಿನಗೆ ಮತ್ತು ಕ್ಷುದ್ರರಾದ ನಿನ್ನ ಸಹಾಯಕರಿಗೆ ಧಿಕ್ಕಾರ! ನಿನ್ನಂಥಹ ನರಾಧಮನಲ್ಲದೇ ಇನ್ನ್ಯಾರು ಈ ರೀತಿ ಮಾಡುತ್ತಿದ್ದರು?”

03256022a ಗತಸತ್ತ್ವಮಿವ ಜ್ಞಾತ್ವಾ ಕರ್ತಾರಮಶುಭಸ್ಯ ತಂ।
03256022c ಸಂಪ್ರೇಕ್ಷ್ಯ ಭರತಶ್ರೇಷ್ಠಃ ಕೃಪಾಂ ಚಕ್ರೇ ನರಾಧಿಪಃ।।

ಅಶುಭವನ್ನು ಮಾಡಿದ ಅವನಲ್ಲಿ ಸತ್ವವು ಹೊರಟುಹೋಗಿದೆ ಎಂದು ತಿಳಿದು ಭರತಶ್ರೇಷ್ಠ ನರಾಧಿಪನಿಗೆ ಕೃಪೆಯುಂಟಾಯಿತು.

03256023a ಧರ್ಮೇ ತೇ ವರ್ಧತಾಂ ಬುದ್ಧಿರ್ಮಾ ಚಾಧರ್ಮೇ ಮನಃ ಕೃಥಾಃ।
03256023c ಸಾಶ್ವಃ ಸರಥಪಾದಾತಃ ಸ್ವಸ್ತಿ ಗಚ್ಚ ಜಯದ್ರಥ।।

“ನಿನ್ನ ಬುದ್ಧಿಯನ್ನು ಧರ್ಮದಲ್ಲಿ ಹೆಚ್ಚಿಸಬೇಕು! ಅಧರ್ಮಕ್ಕೆ ಮನಸ್ಸು ಕೊಡಬೇಡ. ಜಯದ್ರಥ! ಮಂಗಳವಾಗಲಿ! ಅಶ್ವ, ರಥ, ಪದಾತಿಗಳೊಂದಿಗೆ ಹೋಗು!”

03256024a ಏವಮುಕ್ತಸ್ತು ಸವ್ರೀಡಂ ತೂಷ್ಣೀಂ ಕಿಂ ಚಿದವಾಙ್ಮುಖಃ।
03256024c ಜಗಾಮ ರಾಜಾ ದುಃಖಾರ್ತೋ ಗಂಗಾದ್ವಾರಾಯ ಭಾರತ।।

ಭಾರತ! ಇದನ್ನು ಕೇಳಿ ತುಂಬಾ ನಾಚಿಕೊಂಡು ಸುಮ್ಮನಾಗಿ ಮುಖವನ್ನು ಕೆಳಮಾಡಿಕೊಂಡು ದುಃಖಾರ್ತ ರಾಜನು ಗಂಗಾದ್ವಾರಕ್ಕೆ ಹೋದನು.

03256025a ಸ ದೇವಂ ಶರಣಂ ಗತ್ವಾ ವಿರೂಪಾಕ್ಷಮುಮಾಪತಿಂ।
03256025c ತಪಶ್ಚಚಾರ ವಿಪುಲಂ ತಸ್ಯ ಪ್ರೀತೋ ವೃಷಧ್ವ। ಜಃ।

ಅಲ್ಲಿ ಅವನು ವಿರೂಪಾಕ್ಷ, ಉಮಾಪತಿ ದೇವನಿಗೆ ಶರಣು ಹೊಕ್ಕು ವಿಪುಲ ತಪಸ್ಸನ್ನು ನಡೆಸಿದನು. ವೃಷಧ್ವಜನು ಅವನಮೇಲೆ ಪ್ರೀತನಾದನು.

03256026a ಬಲಿಂ ಸ್ವಯಂ ಪ್ರತ್ಯಗೃಹ್ಣಾತ್ಪ್ರೀಯಮಾಣಸ್ತ್ರಿಲೋಚನಃ।
03256026c ವರಂ ಚಾಸ್ಮೈ ದದೌ ದೇವಃ ಸ ಚ ಜಗ್ರಾಹ ತಚ್ಚೃಣು।।

ಪ್ರೀತನಾದ ತ್ರಿಲೋಚನನು ಅವನಿಂದ ಸ್ವಯಂ ತಾನೇ ಬಲಿಯನ್ನು ಸ್ವೀಕರಿಸಿದನು. ಅವನಿಗೆ ದೇವನು ವರವನ್ನಿತ್ತನು, ಅವನು ಸ್ವೀಕರಿಸಿದನು. ಅದನ್ನು ಕೇಳು.

03256027a ಸಮಸ್ತಾನ್ಸರಥಾನ್ಪಂಚ ಜಯೇಯಂ ಯುಧಿ ಪಾಂಡವಾನ್।
03256027c ಇತಿ ರಾಜಾಬ್ರವೀದ್ದೇವಂ ನೇತಿ ದೇವಸ್ತಮಬ್ರವೀತ್।।

“ಯುದ್ಧದಲ್ಲಿ ರಥಿಕರಾಗಿರುವ ಐವರು ಪಾಂಡವರೆಲ್ಲರನ್ನೂ ನಾನು ಜಯಿಸುವಂತಾಗಲಿ” ಎಂದು ರಾಜನು ದೇವನಿಗೆ ಹೇಳಲು “ಇದಾಗುವುದಿಲ್ಲ” ಎಂದು ದೇವನು ಅವನಿಗೆ ಹೇಳಿದನು.

03256028a ಅಜಯ್ಯಾಂಶ್ಚಾಪ್ಯವಧ್ಯಾಂಶ್ಚ ವಾರಯಿಷ್ಯಸಿ ತಾನ್ಯುಧಿ।
03256028c ಋತೇಽರ್ಜುನಂ ಮಹಾಬಾಹುಂ ದೇವೈರಪಿ ದುರಾಸದಂ।।

“ದೇವತೆಗಳಿಗೂ ದುರಾಸದ ಮಹಾಬಾಹು ಅರ್ಜುನನನ್ನು ಬಿಟ್ಟು ಅಜೇಯರೂ ಅವಧ್ಯರೂ ಆದ ಅವರನ್ನು ನೀನು ಯುದ್ಧದಲ್ಲಿ ತಡೆಯಬಲ್ಲೆ.

03256029a ಯಮಾಹುರಜಿತಂ ದೇವಂ ಶಂಖಚಕ್ರಗದಾಧರಂ।
03256029c ಪ್ರಧಾನಃ ಸೋಽಸ್ತ್ರವಿದುಷಾಂ ತೇನ ಕೃಷ್ಣೇನ ರಕ್ಷ್ಯತೇ।।

ನಾವು ಯಾರನ್ನು ಅಜಿತ ದೇವನೆಂದು ಹೇಳುತ್ತೇವೋ ಆ ಶಂಖಚಕ್ರಗದಾಧರ, ಅಸ್ತ್ರವಿದುಷರಲ್ಲಿ ಪ್ರಧಾನನಾದ ಕೃಷ್ಣನಿಂದ ಅವನು ರಕ್ಷಿತನಾಗಿದ್ದಾನೆ.”

03256030a ಏವಮುಕ್ತಸ್ತು ನೃಪತಿಃ ಸ್ವಮೇವ ಭವನಂ ಯಯೌ।
03256030c ಪಾಂಡವಾಶ್ಚ ವನೇ ತಸ್ಮಿನ್ನ್ಯವಸನ್ಕಾಮ್ಯಕೇ ತದಾ।।

ಹೀಗೆ ಹೇಳಲ್ಪಟ್ಟ ನೃಪತಿಯು ತನ್ನ ಭವನಕ್ಕೆ ತೆರಳಿದನು. ಮತ್ತು ಪಾಂಡವರು ಆ ಕಾಮ್ಯಕ ವನದಲ್ಲಿಯೇ ವಾಸಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ಜಯದ್ರಥವಿಮೋಕ್ಷಣೇ ಷಟ್‌ಪಂಚಾಶದಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಜಯದ್ರಥವಿಮೋಕ್ಷಣದಲ್ಲಿ ಇನ್ನೂರಾಐವತ್ತಾರನೆಯ ಅಧ್ಯಾಯವು.