255 ಜಯದ್ರಥಪಲಾಯನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 255

ಸಾರ

ತನ್ನ ಸೇನೆಯು ನಾಶವಾಗಲು ಜಯದ್ರಥನು ನಡುಗುತ್ತಾ ದ್ರೌಪದಿಯನ್ನು ಬಿಡುಗಡೆ ಮಾಡಿ ಪಲಾಯನ ಮಾಡಿದುದು (1-33). ಭೀಮಾರ್ಜುನರು ಸೈಂಧವನನ್ನು ಹುಡುಕಿಕೊಂಡು ಹೋಗಲು ಯುಧಿಷ್ಠಿರನು ನಕುಲ-ಸಹದೇವರೊಡನೆ ದ್ರೌಪದಿ-ಧೌಮ್ಯರನ್ನು ಕರೆದುಕೊಂಡು ಆಶ್ರಮಕ್ಕೆ ಮರಳಿದುದು (34-51). ಸೈಂಧವನ ಕುದುರೆಯನ್ನು ಕೊಂದು, ಓಡಿಹೋಗುತ್ತಿದ್ದವನನ್ನು ಭೀಮನು ಹಿಂಬಾಲಿಸಲು ಅವನನ್ನು ಕೊಲ್ಲಬೇಡವೆಂದು ಅರ್ಜುನನು ಹೇಳಿದುದು (52-59).

03255001 ವೈಶಂಪಾಯನ ಉವಾಚ।
03255001a ಸಂತಿಷ್ಠತ ಪ್ರಹರತ ತೂರ್ಣಂ ವಿಪರಿಧಾವತ।
03255001c ಇತಿ ಸ್ಮ ಸೈಂಧವೋ ರಾಜಾ ಚೋದಯಾಮಾಸ ತಾನ್ನೃಪಾನ್।।

ವೈಶಂಪಾಯನನು ಹೇಳಿದನು: “ಗಟ್ಟಿಯಾಗಿ ನಿಲ್ಲಿ! ಅವರನ್ನು ಸುತ್ತುವರೆದು ಪ್ರಹರಿಸಿ!” ಎಂದು ರಾಜ ಸೈಂಧವನು ಆ ನೃಪರನ್ನು ಪ್ರಚೋದಿಸಿದನು.

03255002a ತತೋ ಘೋರತರಃ ಶಬ್ದೋ ರಣೇ ಸಮಭವತ್ತದಾ।
03255002c ಭೀಮಾರ್ಜುನಯಮಾನ್ದೃಷ್ಟ್ವಾ ಸೈನ್ಯಾನಾಂ ಸಯುಧಿಷ್ಠಿರಾನ್।।

ಆಗ ರಣದಲ್ಲಿ ಭೀಮಾರ್ಜುನರನ್ನು ಮತ್ತು ಯುಧಿಷ್ಠಿರನೊಂದಿಗೆ ಯಮಳರನ್ನು ಕಂಡು ಸೇನೆಯಲ್ಲಿ ಘೋರತರ ಶಬ್ಧವು ಒಂದೇ ಸಮನೆ ಕೇಳಿಬಂದಿತು.

03255003a ಶಿಬಿಸಿಂಧುತ್ರಿಗರ್ತಾನಾಂ ವಿಷಾದಶ್ಚಾಪ್ಯಜಾಯತ।
03255003c ತಾನ್ದೃಷ್ಟ್ವಾ ಪುರುಷವ್ಯಾಘ್ರಾನ್ವ್ಯಾಘ್ರಾನಿವ ಬಲೋತ್ಕಟಾನ್।।

ವ್ಯಾಘ್ರದಂತೆ ಬಲೋತ್ಕಟರಾಗಿದ್ದ ಆ ಪುರುಷವ್ಯಾಘ್ರರನ್ನು ನೋಡಿ ಆ ಶಿಬಿ, ಸಿಂಧು, ತ್ರಿಗರ್ತರಲ್ಲಿ ವಿಷಾದವುಂಟಾಯಿತು.

03255004a ಹೇಮಚಿತ್ರಸಮುತ್ಸೇಧಾಂ ಸರ್ವಶೈಕ್ಯಾಯಸೀಂ ಗದಾಂ।
03255004c ಪ್ರಗೃಹ್ಯಾಭ್ಯದ್ರವದ್ಭೀಮಃ ಸೈಂಧವಂ ಕಾಲಚೋದಿತಂ।।

ಹೇಮಚಿತ್ರದಂತೆ ಹೊಳೆಯುತ್ತಿರುವ, ಉಕ್ಕಿನ ಎರಕವನ್ನು ಸುರಿದಿದ್ದ ಗದೆಯನ್ನು ಹಿಡಿದು ಭೀಮನು ಕಾಲಚೋದಿತ ಸೈಂಧವನಲ್ಲಿಗೆ ಓಡಿಬಂದನು.

03255005a ತದಂತರಮಥಾವೃತ್ಯ ಕೋಟಿಕಾಶ್ಯೋಽಭ್ಯಹಾರಯತ್।
03255005c ಮಹತಾ ರಥವಂಶೇನ ಪರಿವಾರ್ಯ ವೃಕೋದರಂ।।

ಅವರ ಮಧ್ಯದಲ್ಲಿ ಮಹಾ ರಥಗಳ ಸಾಲನ್ನು ತಂದಿರಿಸಿ ಕೋಟಿಕಾಶ್ಯನು ವೃಕೋದರನನ್ನು ತಡೆದನು.

03255006a ಶಕ್ತಿತೋಮರನಾರಾಚೈರ್ವೀರಬಾಹುಪ್ರಚೋದಿತೈಃ।
03255006c ಕೀರ್ಯಮಾಣೋಽಪಿ ಬಹುಭಿರ್ನ ಸ್ಮ ಭೀಮೋಽಭ್ಯಕಂಪತ।।

ಹಲವಾರು ಶಕ್ತಿ, ತೋಮರ, ಉಕ್ಕಿನ ಶರಗಳನ್ನು ವೀರಬಾಹುಗಳು ಅವನ ಮೇಲೆ ಸುರಿದರೂ ಭೀಮನು ಸ್ವಲ್ಪವೂ ಅಲುಗಾಡಲಿಲ್ಲ.

03255007a ಗಜಂ ತು ಸಗಜಾರೋಹಂ ಪದಾತೀಂಶ್ಚ ಚತುರ್ದಶ।
03255007c ಜಘಾನ ಗದಯಾ ಭೀಮಃ ಸೈಂಧವಧ್ವಜಿನೀಮುಖೇ।।

ಅಲ್ಲದೇ ಭೀಮನು ಗದೆಯಿಂದ ಸೈಂಧವನ ಧ್ವಜದ ಮುಂದೆಯೇ ಆನೆಯನ್ನು, ಆನೆಯನ್ನು ಏರಿದವನನ್ನು ಮತ್ತು ಹದಿನಾಲ್ಕು ಪದಾತಿಗಳನ್ನು ಹೊಡೆದುರುಳಿಸಿದನು.

03255008a ಪಾರ್ಥಃ ಪಂಚಶತಾಂ ಶೂರಾನ್ಪಾರ್ವತೀಯಾನ್ಮಹಾರಥಾನ್।
03255008c ಪರೀಪ್ಸಮಾನಃ ಸೌವೀರಂ ಜಘಾನ ಧ್ವಜಿನೀಮುಖೇ।।

ಅವನ ಧ್ವಜದ ಎದುರೇ ಪಾರ್ಥನು ಐದುನೂರು ಶೂರ ಮಹಾರಥಿ ಪರ್ವತವಾಸಿಗಳನ್ನು ಸಂಹರಿಸಿ, ಸೌವೀರವನ್ನು ಸಮೀಪಿಸಿದನು.

03255009a ರಾಜಾ ಸ್ವಯಂ ಸುವೀರಾಣಾಂ ಪ್ರವರಾಣಾಂ ಪ್ರಹಾರಿಣಾಂ।
03255009c ನಿಮೇಷಮಾತ್ರೇಣ ಶತಂ ಜಘಾನ ಸಮರೇ ತದಾ।।

ಸ್ವಯಂ ರಾಜಾ ಯುಧಿಷ್ಠಿರನು ಸಮರದಲ್ಲಿ ಆಕ್ರಮಣ ಮಾಡಿದ ನೂರು ಸುವೀರಪ್ರಮುಖರನ್ನು ನಿಮಿಷಮಾತ್ರದಲ್ಲಿ ಸಂಹರಿಸಿದನು.

03255010a ದದೃಶೇ ನಕುಲಸ್ತತ್ರ ರಥಾತ್ಪ್ರಸ್ಕಂದ್ಯ ಖಡ್ಗಧೃಕ್।
03255010c ಶಿರಾಂಸಿ ಪಾದರಕ್ಷಾಣಾಂ ಬೀಜವತ್ಪ್ರವಪನ್ಮುಹುಃ।।

ಅಲ್ಲಿ ನಕುಲನು ರಥದಿಂದ ಧುಮುಕಿ ಖಡ್ಗವನ್ನು ಬೀಸಿ ಆನೆಗಳ ಪಾದರಕ್ಷಕರ ಶಿರಗಳನ್ನು ಬೀಜಗಳಂತೆ ತೂರಿದುದು ಕಂಡುಬಂದಿತು.

03255011a ಸಹದೇವಸ್ತು ಸಮ್ಯಾಯ ರಥೇನ ಗಜಯೋಧಿನಃ।
03255011c ಪಾತಯಾಮಾಸ ನಾರಾಚೈರ್ದ್ರುಮೇಭ್ಯ ಇವ ಬರ್ಹಿಣಃ।।

ಸಹದೇವನಾದರೋ ರಥದಲ್ಲಿಂದ ಗಜಯೋಧಿಗಳನ್ನು ಉಕ್ಕಿನ ಈಟಿಗಳಿಂದ ನವಿಲುಗಳನ್ನು ಮರಗಳಿಂದ ಕೆಳಗುರುಳಿಸುವಂತೆ ಬೀಳಿಸಿದನು.

03255012a ತತಸ್ತ್ರಿಗರ್ತಃ ಸಧನುರವತೀರ್ಯ ಮಹಾರಥಾತ್।
03255012c ಗದಯಾ ಚತುರೋ ವಾಹಾನ್ರಾಜ್ಞಸ್ತಸ್ಯ ತದಾವಧೀತ್।।

ಆಗ ಗದೆಯಲ್ಲಿ ಚತುರನಾದ ತ್ರಿಗರ್ತನು ಧನುಸ್ಸಿನೊಂದಿಗೆ ಮಹಾರಥದಿಂದ ಕೆಳಗಿಳಿದು ಧರ್ಮರಾಜನ ಕುದುರೆಗಳನ್ನು ಹೊಡೆದುರಿಳಿಸಿದನು.

03255013a ತಮಭ್ಯಾಶಗತಂ ರಾಜಾ ಪದಾತಿಂ ಕುಂತಿನಂದನಃ।
03255013c ಅರ್ಧಚಂದ್ರೇಣ ಬಾಣೇನ ವಿವ್ಯಾಧೋರಸಿ ಧರ್ಮರಾಟ್।।

ಆಗ ಕುಂತಿನಂದನ ರಾಜಾ ಧರ್ಮರಾಜನು ಅರ್ಧಚಂದ್ರದ ಬಾಣದಿಂದ ಪದಾತಿಯ ಎದೆಗೆ ಹೊಡೆದನು.

03255014a ಸ ಭಿನ್ನಹೃದಯೋ ವೀರೋ ವಕ್ತ್ರಾಚ್ಚೋಣಿತಮುದ್ವಮನ್।
03255014c ಪಪಾತಾಭಿಮುಖಃ ಪಾರ್ಥಂ ಚಿನ್ನಮೂಲ ಇವ ದ್ರುಮಃ।।

ಆ ವೀರನು ಹೃದಯವೊಡೆದು, ಬಾಯಿಯಿಂದ ರಕ್ತವನ್ನು ಕಾರಿ, ಬೇರುಕಡಿದ ಮರದಂತೆ ಪಾರ್ಥನ ಎದಿರು ಬಿದ್ದನು.

03255015a ಇಂದ್ರಸೇನದ್ವಿತೀಯಸ್ತು ರಥಾತ್ಪ್ರಸ್ಕಂದ್ಯ ಧರ್ಮರಾಟ್।
03255015c ಹತಾಶ್ವಃ ಸಹದೇವಸ್ಯ ಪ್ರತಿಪೇದೇ ಮಹಾರಥಂ।

ತನ್ನ ಕುದುರೆಗಳು ಹತವಾಗಲು ಧರ್ಮರಾಜನು ಇಂದ್ರಸೇನನ ಸಹಾಯದಿಂದ ರಥದಿಂದ ಕೆಳಗಿಳಿದು ಸಹದೇವನ ಮಹಾರಥವನ್ನು ಏರಿದನು.

03255016a ನಕುಲಂ ತ್ವಭಿಸಂಧಾಯ ಕ್ಷೇಮಂಕರಮಹಾಮುಖೌ।
03255016c ಉಭಾವುಭಯತಸ್ತೀಕ್ಷ್ಣೈಃ ಶರವರ್ಷೈರವರ್ಷತಾಂ।।

ಅಷ್ಟರಲ್ಲಿಯೇ ಕ್ಷೇಮಂಕರ ಮತ್ತು ಮಹಾಮುಖರೀರ್ವರು ನಕುಲನನ್ನು ಎದುರಿಸಿ ಇಬ್ಬರೂ ತೀಕ್ಷ್ಣಶರಗಳ ಮಳೆಗಳನ್ನು ಅವನ ಮೇಲೆ ಸುರಿಸಿದರು.

03255017a ತೌ ಶರೈರಭಿವರ್ಷಂತೌ ಜೀಮೂತಾವಿವ ವಾರ್ಷಿಕೌ।
03255017c ಏಕೈಕೇನ ವಿಪಾಠೇನ ಜಘ್ನೇ ಮಾದ್ರವತೀಸುತಃ।।

ಮಳೆಗಾಲದ ಮೋಡಗಳಂತೆ ಶರಗಳ ಮಳೆಯನ್ನು ಸುರಿಸುತ್ತಿರುವ ಆ ಇಬ್ಬರನ್ನೂ ಮಾದ್ರವತೀಸುತನು ಒಂದೊಂದು ಅಗಲ ಬಾಣಗಳಿಂದ ಸಂಹರಿಸಿದನು.

03255018a ತ್ರಿಗರ್ತರಾಜಃ ಸುರಥಸ್ತಸ್ಯಾಥ ರಥಧೂರ್ಗತಃ।
03255018c ರಥಮಾಕ್ಷೇಪಯಾಮಾಸ ಗಜೇನ ಗಜಯಾನವಿತ್।।

ಆಗ ಗಜಯಾನವನ್ನು ತಿಳಿದಿದ್ದ ತ್ರಿಗರ್ತರಾಜ ಸುರಥನು ರಥಧ್ವಜವನ್ನು ಹಿಡಿದು ನಿಂತು ಆನೆಯಿಂದ ಅವನ ರಥವನ್ನು ಪುಡಿಮಾಡಿದನು.

03255019a ನಕುಲಸ್ತ್ವಪಭೀಸ್ತಸ್ಮಾದ್ರಥಾಚ್ಚರ್ಮಾಸಿಪಾಣಿಮಾನ್।
03255019c ಉದ್ಭ್ರಾಂತಂ ಸ್ಥಾನಮಾಸ್ಥಾಯ ತಸ್ಥೌ ಗಿರಿರಿವಾಚಲಃ।।

ಆದರೆ ನಕುಲನು ಭಯಪಡದೇ ರಥದಿಂದ ಕೆಳಗಿಳಿದು ಖಡ್ಗವನ್ನು ಹಿಡಿದು ಬೀಸುತ್ತಾ ಗಿರಿಯಂತೆ ಅಚಲವಾಗಿ ಸ್ಥಾನದಲ್ಲಿ ನಿಂತುಕೊಂಡನು.

03255020a ಸುರಥಸ್ತಂ ಗಜವರಂ ವಧಾಯ ನಕುಲಸ್ಯ ತು।
03255020c ಪ್ರೇಷಯಾಮಾಸ ಸಕ್ರೋಧಮಭ್ಯುಚ್ಚ್ರಿತಕರಂ ತತಃ।।

ನಕುಲನ ವಧೆಗೆಂದು ಸುರಥನು ಕ್ರೋಧದಿಂದ ಸೊಂಡಿಲನ್ನು ಮೇಲೆತ್ತಿ ಬರುತ್ತಿರುವ ಶ್ರೇಷ್ಠ ಗಜವೊಂದನ್ನು ಕಳುಹಿಸಿದನು.

03255021a ನಕುಲಸ್ತಸ್ಯ ನಾಗಸ್ಯ ಸಮೀಪಪರಿವರ್ತಿನಃ।
03255021c ಸವಿಷಾಣಂ ಭುಜಂ ಮೂಲೇ ಖಡ್ಗೇನ ನಿರಕೃಂತತ।।

ನಕುಲನಾದರೋ ಹತ್ತಿರ ಬರುತ್ತಿರುವ ನಾಗದ ಸೊಂಡಿಲು ದಂತಗಳನ್ನು ಮೂಲವಾಗಿ ಖಡ್ಗದಿಂದ ಕತ್ತರಿಸಿದನು.

03255022a ಸ ವಿನದ್ಯ ಮಹಾನಾದಂ ಗಜಃ ಕಂಕಣಭೂಷಣಃ।
03255022c ಪತನ್ನವಾಕ್ಶಿರಾ ಭೂಮೌ ಹಸ್ತ್ಯಾರೋಹಾನಪೋಥಯತ್।।

ಕಂಕಣಗಳಿಂದ ಅಲಂಕೃತವಾಗಿದ್ದ ಆ ಆನೆಯು ಮಹಾನಾದವನ್ನು ಕೂಗಿ ತಲೆಯನ್ನು ಭೂಮಿಯಲ್ಲಿರಿಸಿ ಬಿದ್ದು, ಗಜಾರೋಹಿಗಳನ್ನು ಅಪ್ಪಳಿಸಿತು.

03255023a ಸ ತತ್ಕರ್ಮ ಮಹತ್ಕೃತ್ವಾ ಶೂರೋ ಮಾದ್ರವತೀಸುತಃ।
03255023c ಭೀಮಸೇನರಥಂ ಪ್ರಾಪ್ಯ ಶರ್ಮ ಲೇಭೇ ಮಹಾರಥಃ।।

ಆ ಮಹಾಕೃತ್ಯವನ್ನು ಮಾಡಿದ ಶೂರ ಮಾದ್ರವತೀಸುತನು ಭೀಮಸೇನನ ರಥವನ್ನು ಸೇರಿ ಆ ಮಹಾರಥದಲ್ಲಿ ಆಶ್ರಯವನ್ನು ಪಡೆದನು.

03255024a ಭೀಮಸ್ತ್ವಾಪತತೋ ರಾಜ್ಞಃ ಕೋಟಿಕಾಶ್ಯಸ್ಯ ಸಂಗರೇ।
03255024c ಸೂತಸ್ಯ ನುದತೋ ವಾಹಾನ್ ಕ್ಷುರೇಣಾಪಾಹರಚ್ಚಿರಃ।।

ರಾಜ ಕೋಟಿಕಾಶ್ಯನೊಂದಿಗೆ ಹೋರಾಡುತ್ತಿದ್ದ ಭೀಮನಾದರೋ ಕದುರೆಗಳನ್ನು ಪುಸಲಾಯಿಸುತ್ತಿದ್ದ ಸೂತನ ಶಿರವನ್ನು ಹರಿತವಾದ ಕತ್ತಿಯಿಂದ ಬೋಳಿಸಿದನು.

03255025a ನ ಬುಬೋಧ ಹತಂ ಸೂತಂ ಸ ರಾಜಾ ಬಾಹುಶಾಲಿನಾ।
03255025c ತಸ್ಯಾಶ್ವಾ ವ್ಯದ್ರವನ್ಸಂಖ್ಯೇ ಹತಸೂತಾಸ್ತತಸ್ತತಃ।।

ತನ್ನ ಸೂತನು ಬಾಹುಶಾಲಿಯಿಂದ ಹತನಾದುದು ರಾಜನಿಗೆ ತಿಳಿಯಲೇ ಇಲ್ಲ. ಸೂತನನ್ನು ಕಳೆದುಕೊಂಡ ಆ ಕುದುರೆಗಳು ರಣದಲ್ಲಿ ಎಲ್ಲಾಕಡೆ ಓಡತೊಡಗಿದವು.

03255026a ವಿಮುಖಂ ಹತಸೂತಂ ತಂ ಭೀಮಃ ಪ್ರಹರತಾಂ ವರಃ।
03255026c ಜಘಾನ ತಲಯುಕ್ತೇನ ಪ್ರಾಸೇನಾಭ್ಯೇತ್ಯ ಪಾಂಡವಃ।।

ಆಗ ಸೂತನನ್ನು ಕಳೆದುಕೊಂಡ ವಿಮುಖನಾದ ಅವನನ್ನು ಪ್ರಹರಿಗಳಲ್ಲಿ ಶ್ರೇಷ್ಠ ಪಾಂಡವ ಭೀಮನು ಚೂಪಾದ ಪ್ರಾಸದಿಂದ ಹೊಡೆದು ಸಂಹರಿಸಿದನು.

03255027a ದ್ವಾದಶಾನಾಂ ತು ಸರ್ವೇಷಾಂ ಸೌವೀರಾಣಾಂ ಧನಂಜಯಃ।
03255027c ಚಕರ್ತ ನಿಷಿತೈರ್ಭಲ್ಲೈರ್ಧನೂಂಷಿ ಚ ಶಿರಾಂಸಿ ಚ।।

ಧನಂಜಯನು ಹರಿತ ಭಲ್ಲಗಳಿಂದ ಎಲ್ಲ ಹನ್ನೆರಡು ಸೌವೀರರ ಧನುಸ್ಸುಗಳನ್ನೂ ಶಿರಗಳನ್ನೂ ತುಂಡರಿಸಿದನು.

03255028a ಶಿಬೀನಿಕ್ಷ್ವಾಕುಮುಖ್ಯಾಂಶ್ಚ ತ್ರಿಗರ್ತಾನ್ಸೈಂಧವಾನಪಿ।
03255028c ಜಘಾನಾತಿರಥಃ ಸಂಖ್ಯೇ ಬಾಣಗೋಚರಮಾಗತಾನ್।।

ರಣದಲ್ಲಿ ಬಾಣಗೋಚರಕ್ಕೆ ಬಂದಿದ್ದ ಶಿಬಿ, ಇಕ್ಷ್ವಾಕು, ತ್ರಿಗರ್ತ ಮತ್ತು ಸೈಂಧವ ಪ್ರಮುಖರನ್ನು ಅತಿರಥಿಯು ಸಂಹರಿಸಿದನು.

03255029a ಸಾದಿತಾಃ ಪ್ರತ್ಯದೃಶ್ಯಂತ ಬಹವಃ ಸವ್ಯಸಾಚಿನಾ।
03255029c ಸಪತಾಕಾಶ್ಚ ಮಾತಂಗಾಃ ಸಧ್ವಜಾಶ್ಚ ಮಹಾರಥಾಃ।।

ಸವ್ಯಸಾಚಿಯಿಂದ ಕೆಳಗುರುಳಿಸಲ್ಪಟ್ಟ ಬಹುಮಂದಿಗಳು ಅಲ್ಲಿ ಕಂಡುಬಂದರು - ಪತಾಕೆಗಳೊಂದಿಗೆ ಆನೆಗಳು ಮತ್ತು ದ್ವಜಗಳೊಂದಿಗೆ ಮಹಾರಥಿಗಳು.

03255030a ಪ್ರಚ್ಚಾದ್ಯ ಪೃಥಿವೀಂ ತಸ್ಥುಃ ಸರ್ವಮಾಯೋಧನಂ ಪ್ರತಿ।
03255030c ಶರೀರಾಣ್ಯಶಿರಸ್ಕಾನಿ ವಿದೇಹಾನಿ ಶಿರಾಂಸಿ ಚ।।

ರಣರಂಗದ ಎಲ್ಲೆಡೆಯೂ ಶಿರಗಳಿಲ್ಲದ ಶರೀರಗಳಿಂದ ಮತ್ತು ದೇಹಗಳಿಲ್ಲದ ಶಿರಗಳಿಂದ ಮುಚ್ಚಿಕೊಂಡಿತು.

03255031a ಶ್ವಗೃಧ್ರಕಂಕಕಾಕೋಲಭಾಸಗೋಮಾಯುವಾಯಸಾಃ।
03255031c ಅತೃಪ್ಯಂಸ್ತತ್ರ ವೀರಾಣಾಂ ಹತಾನಾಂ ಮಾಂಸಶೋಣಿತೈಃ।।

ನಾಯಿಗಳು, ಹದ್ದುಗಳು, ಕಾಗೆಗಳು, ಗಿಡುಗಗಳು, ನರಿಗಳು ಮತ್ತು ಪಕ್ಷಿಗಳು ಅಲ್ಲಿ ಹತರಾಗಿದ್ದವರ ರಕ್ತ-ಮಾಂಸಗಳ ಔತಣವನ್ನು ಉಂಡವು.

03255032a ಹತೇಷು ತೇಷು ವೀರೇಷು ಸಿಂಧುರಾಜೋ ಜಯದ್ರಥಃ।
03255032c ವಿಮುಚ್ಯ ಕೃಷ್ಣಾಂ ಸಂತ್ರಸ್ತಃ ಪಲಾಯನಪರೋಽಭವತ್।।

ಆ ವೀರರು ಹತರಾಗಲು ಸಿಂಧುರಾಜ ಜಯದ್ರಥನು ನಡುಗುತ್ತಾ ಕೃಷ್ಣೆಯನ್ನು ಬಿಡುಗಡೆ ಮಾಡಿ ಪಲಾಯನಮಾಡಲು ತೊಡಗಿದನು.

03255033a ಸ ತಸ್ಮಿನ್ಸಂಕುಲೇ ಸೈನ್ಯೇ ದ್ರೌಪದೀಮವತಾರ್ಯ ವೈ।
03255033c ಪ್ರಾಣಪ್ರೇಪ್ಸುರುಪಾಧಾವದ್ವನಂ ಯೇನ ನರಾಧಮಃ।।

ತನ್ನ ಸೇನೆಯು ಒಡೆದಿರಲು ಆ ನರಾಧಮನು ದ್ರೌಪದಿಯನ್ನು ಕೆಳಗಿಳಿಸಿ ಪ್ರಾಣವನ್ನು ಉಳಿಸಿಕೊಳ್ಳಲು ವನದ ಕಡೆ ಓಡಿದನು.

0325034a ದ್ರೌಪದೀಂ ಧರ್ಮರಾಜಸ್ತು ದೃಷ್ಟ್ವಾ ಧೌಮ್ಯಪುರಸ್ಕೃತಾಂ।
03255034c ಮಾದ್ರೀಪುತ್ರೇಣ ವೀರೇಣ ರಥಮಾರೋಪಯತ್ತದಾ।।

ಧೌಮ್ಯನೊಂದಿಗೆ ಬರುತ್ತಿದ್ದ ದ್ರೌಪದಿಯನ್ನು ನೋಡಿ ಧರ್ಮರಾಜನು ಅವರನ್ನು ವೀರ ಮಾದ್ರೀಪುತ್ರನ ರಥದಲ್ಲಿ ತೆಗೆದುಕೊಂಡನು.

03255035a ತತಸ್ತದ್ವಿದ್ರುತಂ ಸೈನ್ಯಮಪಯಾತೇ ಜಯದ್ರಥೇ।
03255035c ಆದಿಶ್ಯಾದಿಶ್ಯ ನಾರಾಚೈರಾಜಘಾನ ವೃಕೋದರಃ।।

ಜಯದ್ರಥನು ಇಲ್ಲದ ಸೇನೆಯನ್ನು ಗುರಿಯಿಟ್ಟು ವೃಕೋದರನು ಉಕ್ಕಿನ ಶರಗಳಿಂದ ಹೊಡೆದನು.

03255036a ಸವ್ಯಸಾಚೀ ತು ತಂ ದೃಷ್ಟ್ವಾ ಪಲಾಯಂತಂ ಜಯದ್ರಥಂ।
03255036c ವಾರಯಾಮಾಸ ನಿಘ್ನಂತಂ ಭೀಮಂ ಸೈಂಧವಸೈನಿಕಾನ್।।

ಆದರೆ ಓಡಿಹೋಗುತ್ತಿರುವ ಜಯದ್ರಥನನ್ನು ನೋಡಿದ ಸವ್ಯಸಾಚಿಯು ಭೀಮನನ್ನು ಸೈಂಧವನ ಸೇನೆಯನ್ನು ಸಂಹರಿಸುವುದರಿಂದ ತಡೆದನು.

03255037 ಅರ್ಜುನ ಉವಾಚ।
03255037a ಯಸ್ಯಾಪಚಾರಾತ್ಪ್ರಾಪ್ತೋಽಯಮಸ್ಮಾನ್ಕ್ಲೇಶೋ ದುರಾಸದಃ।
03255037c ತಮಸ್ಮಿನ್ಸಮರೋದ್ದೇಶೇ ನ ಪಶ್ಯಾಮಿ ಜಯದ್ರಥಂ।।

ಅರ್ಜುನನು ಹೇಳಿದನು: “ಯಾರ ಅಪಚಾರದಿಂದ ನಾವು ಈ ಕೊನೆಯಿಲ್ಲದ ಕ್ಲೇಶವನ್ನು ಪಡೆದಿದ್ದೇವೋ ಆ ಜಯದ್ರಥನನ್ನೇ ಈ ರಣರಂಗದಲ್ಲಿ ನಾನು ಕಾಣುತ್ತಿಲ್ಲ!

03255038a ತಮೇವಾನ್ವಿಷ ಭದ್ರಂ ತೇ ಕಿಂ ತೇ ಯೋಧೈರ್ನಿಪಾತಿತೈಃ।
03255038c ಅನಾಮಿಷಮಿದಂ ಕರ್ಮ ಕಥಂ ವಾ ಮನ್ಯತೇ ಭವಾನ್।।

ಅವನನ್ನು ಹುಡುಕು! ನಿನಗೆ ಮಂಗಳವಾಗಲಿ! ಈ ಯೋಧರನ್ನು ಕೊಲ್ಲುವುದೇಕೆ? ಇದರಿಂದ ಏನೂ ಪ್ರಯೋಜನವಿಲ್ಲ! ನಿನಗೇನನ್ನಿಸುತ್ತದೆ?””

03255039 ವೈಶಂಪಾಯನ ಉವಾಚ।
03255039a ಇತ್ಯುಕ್ತೋ ಭೀಮಸೇನಸ್ತು ಗುಡಾಕೇಶೇನ ಧೀಮತಾ।
03255039c ಯುಧಿಷ್ಠಿರಮಭಿಪ್ರೇಕ್ಷ್ಯ ವಾಗ್ಮೀ ವಚನಮಬ್ರವೀತ್।।

ವೈಶಂಪಾಯನನು ಹೇಳಿದನು: “ಧೀಮತ ಗುಡಾಕೇಶನು ಹೀಗೆ ಹೇಳಲು ಭೀಮಸೇನನು ಯುಧಿಷ್ಠಿರನನ್ನು ನೋಡಿ ವಾಗ್ಮಿಯ ಈ ಮಾತುಗಳನ್ನಾಡಿದನು.

03255040a ಹತಪ್ರವೀರಾ ರಿಪವೋ ಭೂಯಿಷ್ಠಂ ವಿದ್ರುತಾ ದಿಶಃ।
03255040c ಗೃಹೀತ್ವಾ ದ್ರೌಪದೀಂ ರಾಜನ್ನಿವರ್ತತು ಭವಾನಿತಃ।।

“ರಿಪುಗಳು ತಮ್ಮ ಪ್ರವೀರರನ್ನು ಕಳೆದುಕೊಂಡು ದಿಕ್ಕುಪಾಲಾಗಿದ್ದಾರೆ. ರಾಜನ್! ದ್ರೌಪದಿಯನ್ನು ಕರೆದುಕೊಂಡು ನೀನು ಹಿಂದಿರುಗು.

03255041a ಯಮಾಭ್ಯಾಂ ಸಹ ರಾಜೇಂದ್ರ ಧೌಮ್ಯೇನ ಚ ಮಹಾತ್ಮನಾ।
03255041c ಪ್ರಾಪ್ಯಾಶ್ರಮಪದಂ ರಾಜನ್ದ್ರೌಪದೀಂ ಪರಿಸಾಂತ್ವಯ।।

ರಾಜೇಂದ್ರ! ಯಮಳರು ಮತ್ತು ಮಹಾತ್ಮ ಧೌಮ್ಯನೊಂದಿಗೆ ಆಶ್ರಮಪದವನ್ನು ಸೇರಿ ದ್ರೌಪದಿಯನ್ನು ಪರಿಸಂತವಿಸಿ.

03255042a ನ ಹಿ ಮೇ ಮೋಕ್ಷ್ಯತೇ ಜೀವನ್ಮೂಢಃ ಸೈಂಧವಕೋ ನೃಪಃ।
03255042c ಪಾತಾಲತಲಸಂಸ್ಥೋಽಪಿ ಯದಿ ಶಕ್ರೋಽಸ್ಯ ಸಾರಥಿಃ।।

ಈ ಮೂಢ ಸೈಂಧವ ನೃಪನು ಪಾತಾಲಕ್ಕೆ ಹೋದರೂ ಇಂದ್ರನೇ ಇವನ ಸಾರಥಿಯಾದರೂ ಇಂದು ನನ್ನಿಂದ ಜೀವಂತವಾಗಿ ಉಳಿಯುವುದಿಲ್ಲ!”

03255043 ಯುಧಿಷ್ಠಿರ ಉವಾಚ।
03255043a ನ ಹಂತವ್ಯೋ ಮಹಾಬಾಹೋ ದುರಾತ್ಮಾಪಿ ಸ ಸೈಂಧವಃ।
03255043c ದುಃಶಲಾಮಭಿಸಂಸ್ಮೃತ್ಯ ಗಾಂಧಾರೀಂ ಚ ಯಶಸ್ವಿನೀಂ।।

ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ದುಃಶಲೆಯನ್ನು ಮತ್ತು ಯಶಸ್ವಿನೀ ಗಾಂಧಾರಿಯನ್ನು ಗೌರವಿಸಿ, ದುರಾತ್ಮನಾದರೂ ಸೈಂಧವನನ್ನು ಕೊಲ್ಲಬಾರದು.””

03255044 ವೈಶಂಪಾಯನ ಉವಾಚ।
03255044a ತಚ್ಚ್ರುತ್ವಾ ದ್ರೌಪದೀ ಭೀಮಮುವಾಚ ವ್ಯಾಕುಲೇಂದ್ರಿಯಾ।
03255044c ಕುಪಿತಾ ಹ್ರೀಮತೀ ಪ್ರಾಜ್ಞಾ ಪತೀ ಭೀಮಾರ್ಜುನಾವುಭೌ।।

ವೈಶಂಪಾಯನನು ಹೇಳಿದನು: “ಅದನ್ನು ಕೇಳಿದ ದ್ರೌಪದಿಯು ವ್ಯಾಕುಲಳಾಗಿ, ಕುಪಿತಳಾಗಿ, ನಾಚಿ, ತಿಳಿದು ತನ್ನ ಪತಿಯಂದಿರು ಭೀಮಾರ್ಜುನರಿಬ್ಬರಿಗೂ ಹೇಳಿದಳು:

03255045a ಕರ್ತವ್ಯಂ ಚೇತ್ಪ್ರಿಯಂ ಮಹ್ಯಂ ವಧ್ಯಃ ಸ ಪುರುಷಾಧಮಃ।
03255045c ಸೈಂಧವಾಪಸದಃ ಪಾಪೋ ದುರ್ಮತಿಃ ಕುಲಪಾಂಸನಃ।।

“ನನಗೆ ಪ್ರಿಯವಾದುದನ್ನು ಮಾಡಬೇಕೆಂದಿದ್ದರೆ ಆ ಪುರುಷಾಧಮ, ಸೈಂಧವರ ಗರ್ಭಪಾತಿ, ಪಾಪಿ, ದುರ್ಮತಿ, ಕುಲಪಾಂಸನನನ್ನು ವಧಿಸಿ!

03255046a ಭಾರ್ಯಾಭಿಹರ್ತಾ ನಿರ್ವೈರೋ ಯಶ್ಚ ರಾಜ್ಯಹರೋ ರಿಪುಃ।
03255046c ಯಾಚಮಾನೋಽಪಿ ಸಂಗ್ರಾಮೇ ನ ಸ ಜೀವಿತುಮರ್ಹತಿ।।

ವೈರತ್ವವಿಲ್ಲದೇ ಭಾರ್ಯೆಯನ್ನು ಅಪಹರಿಸಿದವನು, ಮತ್ತು ರಾಜ್ಯವನ್ನು ಅಪಹರಿಸಿದ ವೈರಿ ಇವರು ಬೇಡಿದರೂ ಸಂಗ್ರಾಮದಲ್ಲಿ ಜೀವಂತ ಉಳಿಯಬಾರದು.”

03255047a ಇತ್ಯುಕ್ತೌ ತೌ ನರವ್ಯಾಘ್ರೌ ಯಯತುರ್ಯತ್ರ ಸೈಂಧವಃ।
03255047c ರಾಜಾ ನಿವವೃತೇ ಕೃಷ್ಣಾಮಾದಾಯ ಸಪುರೋಹಿತಃ।।

ಅವಳು ಹೀಗೆ ಹೇಳಲು ಆ ಇಬ್ಬರು ನರವ್ಯಾಘ್ರರು ಸೈಂಧವನಿದ್ದಲ್ಲಿಗೆ ತೆರಳಿದರು. ರಾಜನು ಪುರೋಹಿತನೊಂದಿಗೆ ಕೃಷ್ಣೆಯನ್ನು ಕರೆದುಕೊಂಡು ಹಿಂದಿರುಗಿದನು.

03255048a ಸ ಪ್ರವಿಶ್ಯಾಶ್ರಮಪದಂ ವ್ಯಪವಿದ್ಧಬೃಸೀಘಟಂ।
03255048c ಮಾರ್ಕಂಡೇಯಾದಿಭಿರ್ವಿಪ್ರೈರನುಕೀರ್ಣಂ ದದರ್ಶ ಹ।।

ಆಶ್ರಮಪದವನ್ನು ಪ್ರವೇಶಿಸಿ ಅಲ್ಲಿ ದಿಂಬುಗಳು ಮತ್ತು ಲೋಟಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ಹಾಗೂ ಮಾರ್ಕಂಡೇಯನೇ ಮೊದಲಾದ ವಿಪ್ರರು ಅಲ್ಲಿ ಇರುವುದನ್ನು ನೋಡಿದನು.

03255049a ದ್ರೌಪದೀಮನುಶೋಚದ್ಭಿರ್ಬ್ರಾಹ್ಮಣೈಸ್ತೈಃ ಸಮಾಗತೈಃ।
03255049c ಸಮಿಯಾಯ ಮಹಾಪ್ರಾಜ್ಞಃ ಸಭಾರ್ಯೋ ಭ್ರಾತೃಮಧ್ಯಗಃ।।

ಅಲ್ಲಿ ನೆರೆದು ದ್ರೌಪದಿಗಾಗಿ ಶೋಕಿಸುತ್ತಿದ್ದ ಬ್ರಾಹ್ಮಣರಲ್ಲಿಗೆ ಆ ಮಹಾಪ್ರಾಜ್ಞನು ಭಾರ್ಯೆಯೊಂದಿಗೆ, ಸಹೋದರರ ಮಧ್ಯೆ ಹೋದನು.

03255050a ತೇ ಸ್ಮ ತಂ ಮುದಿತಾ ದೃಷ್ಟ್ವಾ ಪುನರಭ್ಯಾಗತಂ ನೃಪಂ।
03255050c ಜಿತ್ವಾ ತಾನ್ಸಿಂಧುಸೌವೀರಾನ್ದ್ರೌಪದೀಂ ಚಾಹೃತಾಂ ಪುನಃ।।

ಆ ಸಿಂಧು ಸೌವೀರನನ್ನು ಗೆದ್ದು ದ್ರೌಪದಿಯನ್ನು ಪುನಃ ಪಡೆದು ಹಿಂದಿರುಗಿದ ನೃಪನನ್ನು ಕಂಡು ಅವರೆಲ್ಲರೂ ಮುದಿತರಾದರು.

03255051a ಸ ತೈಃ ಪರಿವೃತೋ ರಾಜಾ ತತ್ರೈವೋಪವಿವೇಶ ಹ।
03255051c ಪ್ರವಿವೇಶಾಶ್ರಮಂ ಕೃಷ್ಣಾ ಯಮಾಭ್ಯಾಂ ಸಹ ಭಾಮಿನೀ।।

ಅವರೆಲ್ಲರಿಂದ ಪರಿವೃತನಾದ ರಾಜನು ಅಲ್ಲಿಯೇ ಕುಳಿತುಕೊಳ್ಳಲು ಭಾಮಿನೀ ಕೃಷ್ಣೆಯು ಯಮಳರೊಂದಿಗೆ ಆಶ್ರಮವನ್ನು ಪ್ರವೇಶಿಸಿದಳು.

03255052a ಭೀಮಾರ್ಜುನಾವಪಿ ಶ್ರುತ್ವಾ ಕ್ರೋಶಮಾತ್ರಗತಂ ರಿಪುಂ।
03255052c ಸ್ವಯಮಶ್ವಾಂಸ್ತುದಂತೌ ತೌ ಜವೇನೈವಾಭ್ಯಧಾವತಾಂ।।

ರಿಪುವು ಕ್ರೋಶಮಾತ್ರ ಹೋಗಿದ್ದಾನೆಂದು ಕೇಳಿ ಭೀಮಾರ್ಜುನರು ಸ್ವಯಂ ಕುದುರೆಗಳನ್ನೇರಿ ಬೇಗನೆ ಅವನನ್ನು ಹಿಂಬಾಲಿಸಿದರು.

03255053a ಇದಮತ್ಯದ್ಭುತಂ ಚಾತ್ರ ಚಕಾರ ಪುರುಷೋಽರ್ಜುನಃ।
03255053c ಕ್ರೋಶಮಾತ್ರಗತಾನಶ್ವಾನ್ಸೈಂಧವಸ್ಯ ಜಘಾನ ಯತ್।।

ಇಲ್ಲಿ ಪುರುಷ ಅರ್ಜುನನು ಅತ್ಯದ್ಭುತವಾದುದನ್ನು ಮಾಡಿದನು. ಕ್ರೋಶಮಾತ್ರ ದೂರ ಹೋಗಿದ್ದ ಸೈಂಧವನ ಕುದುರೆಯನ್ನು ಹೊಡೆದನು.

03255054a ಸ ಹಿ ದಿವ್ಯಾಸ್ತ್ರಸಂಪನ್ನಃ ಕೃಚ್ಚ್ರಕಾಲೇಽಪ್ಯಸಂಭ್ರಮಃ।
03255054c ಅಕರೋದ್ದುಷ್ಕರಂ ಕರ್ಮ ಶರೈರಸ್ತ್ರಾನುಮಂತ್ರಿತೈಃ।।

ಆ ದಿವ್ಯಾಸ್ತ್ರಸಂಪನ್ನನು ಕಷ್ಟಕಾಲದಲ್ಲಿಯೂ ದಿಗ್ಭ್ರಮೆಗೊಳ್ಳದೇ ಅನುಮಂತ್ರಿತ ಶರಗಳನ್ನು ಬಿಟ್ಟು ಈ ದುಷ್ಕರ ಕರ್ಮವನ್ನೆಸಗಿದನು.

03255055a ತತೋಽಭ್ಯಧಾವತಾಂ ವೀರಾವುಭೌ ಭೀಮಧನಂಜಯೌ।
03255055c ಹತಾಶ್ವಂ ಸೈಂಧವಂ ಭೀತಮೇಕಂ ವ್ಯಾಕುಲಚೇತಸಂ।।

ಆ ಭೀಮ-ಧನಂಜಯ ವೀರರಿಬ್ಬರೂ ಅಶ್ವಗಳು ಹತರಾಗಿ, ಏಕಾಂಗಿಯಾಗಿ ಭೀತನೂ ವ್ಯಾಕುಲಚೇತಸನೂ ಆಗಿದ್ದ ಸೈಂಧವನಿದ್ದಲ್ಲಿಗೆ ಓಡಿ ಬಂದರು.

03255056a ಸೈಂಧವಸ್ತು ಹತಾನ್ದೃಷ್ಟ್ವಾ ತಥಾಶ್ವಾನ್ ಸ್ವಾನ್ ಸುದುಃಖಿತಃ।
03255056c ದೃಷ್ಟ್ವಾ ವಿಕ್ರಮಕರ್ಮಾಣಿ ಕುರ್ವಾಣಂ ಚ ಧನಂಜಯಂ।
03255056e ಪಲಾಯನಕೃತೋತ್ಸಾಹಃ ಪ್ರಾದ್ರವದ್ಯೇನ ವೈ ವನಂ।।

ಸೈಂಧವನಾದರೋ ಕುದುರೆಗಳು ಹತಗೊಂಡಿರುವುದನ್ನು ನೋಡಿ ಸುದುಃಖಿತನಾಗಿ, ಈ ವಿಕ್ರಮಕರ್ಮವನ್ನು ಮಾಡಿರುವ ಧನಂಜಯನನ್ನು ನೋಡಿ ಪಲಾಯನ ಮಾಡಲು ಮನಸ್ಸುಮಾಡಿ ವನದ ಕಡೆಗೆ ಓಡಿದನು.

03255057a ಸೈಂಧವಂ ತ್ವಭಿಸಂಪ್ರೇಕ್ಷ್ಯ ಪರಾಕ್ರಾಂತಂ ಪಲಾಯನೇ।
03255057c ಅನುಯಾಯ ಮಹಾಬಾಹುಃ ಫಲ್ಗುನೋ ವಾಕ್ಯಮಬ್ರವೀತ್।।

ಮಹಾಬಾಹು ಫಲ್ಗುನನು ಸೈಂಧವನು ಸಂಪೂರ್ಣವಾಗಿ ಪಲಾಯನಮಾಡುತ್ತಿದ್ದುದನ್ನು ಕಂಡು, ಅವನನ್ನು ಬೆನ್ನೆತ್ತಿ ಹೋಗಿ ಹೀಗೆ ಹೇಳಿದನು:

03255058a ಅನೇನ ವೀರ್ಯೇಣ ಕಥಂ ಸ್ತ್ರಿಯಂ ಪ್ರಾರ್ಥಯಸೇ ಬಲಾತ್।
03255058c ರಾಜಪುತ್ರ ನಿವರ್ತಸ್ವ ನ ತೇ ಯುಕ್ತಂ ಪಲಾಯನಂ।
03255058e ಕಥಂ ಚಾನುಚರಾನ್ ಹಿತ್ವಾ ಶತ್ರುಮಧ್ಯೇ ಪಲಾಯಸೇ।।

“ಈ ವೀರ್ಯವನ್ನಿಟ್ಟುಕೊಂಡು ಸ್ತ್ರೀಯನ್ನು ಏಕೆ ಬಲಾತ್ಕರಿಸಿ ಕೇಳಿದೆ? ರಾಜಪುತ್ರ! ಹಿಂದೆ ಬಾ! ನಿನಗೆ ಪಲಾಯನವು ಸರಿಯಾದುದಲ್ಲ. ಅನುಚರರನ್ನು ಕೊಲ್ಲಿಸಿ ಶತ್ರುಮಧ್ಯದಲ್ಲಿ ಏಕೆ ಪಲಾಯನ ಮಾಡುತ್ತಿರುವೆ?”

03255059a ಇತ್ಯುಚ್ಯಮಾನಃ ಪಾರ್ಥೇನ ಸೈಂಧವೋ ನ ನ್ಯವರ್ತತ।
03255059c ತಿಷ್ಠ ತಿಷ್ಠೇತಿ ತಂ ಭೀಮಃ ಸಹಸಾಭ್ಯದ್ರವದ್ಬಲೀ।
03255059e ಮಾ ವಧೀರಿತಿ ಪಾರ್ಥಸ್ತಂ ದಯಾವಾನಭ್ಯಭಾಷತ।।

ಆದರೆ ಪಾರ್ಥನ ಈ ಮಾತಿಗೂ ಸೈಂಧವನು ಹಿಂದಿರುಗಲಿಲ್ಲ. ಆಗ ಬಲೀ ಭೀಮನು “ನಿಲ್ಲು! ನಿಲ್ಲು!” ಎನ್ನುತ್ತಾ ತಕ್ಷಣವೇ ಅವನ ಹಿಂದೆ ಓಡಿಹೋಗಲು, ಅವನನ್ನು ಕೊಲ್ಲಬೇಡ ಎಂದು ದಯಾವಾನ್ ಪಾರ್ಥನು ಅವನಿಗೆ ಹೇಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ಜಯದ್ರಥಪಲಾಯನೇ ಪಂಚಪಂಚಾಶದಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಜಯದ್ರಥಪಲಾಯನದಲ್ಲಿ ಇನ್ನೂರಾಐವತ್ತೈದನೆಯ ಅಧ್ಯಾಯವು.