ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 254
ಸಾರ
ದ್ರೌಪದಿಯು ಜಯದ್ರಥನಿಗೆ ತನ್ನ ಪತಿಯರಾದ ಐವರು ಪಾಂಡವರ ಪರಿಚಯವನ್ನು ಹೇಳಿ ತೋರಿಸುವುದು (1-21).
03254001 ವೈಶಂಪಾಯನ ಉವಾಚ।
03254001a ತತೋ ಘೋರತರಃ ಶಬ್ದೋ ವನೇ ಸಮಭವತ್ತದಾ।
03254001c ಭೀಮಸೇನಾರ್ಜುನೌ ದೃಷ್ಟ್ವಾ ಕ್ಷತ್ರಿಯಾಣಾಮಮರ್ಷಿಣಾಂ।।
ವೈಶಂಪಾಯನನು ಹೇಳಿದನು: “ಭೀಮಸೇನ ಅರ್ಜುನರನ್ನು ನೋಡಿ ಕ್ಷತ್ರಿಯರು ಸಹಿಸಲಾಗದ ಘೋರತರ ಶಬ್ಧವು ವನವನ್ನು ತುಂಬಿತು.
03254002a ತೇಷಾಂ ಧ್ವಜಾಗ್ರಾಣ್ಯಭಿವೀಕ್ಷ್ಯ ರಾಜಾ। ಸ್ವಯಂ ದುರಾತ್ಮಾ ಕುರುಪುಂಗವಾನಾಂ।
03254002c ಜಯದ್ರಥೋ ಯಾಜ್ಞಸೇನೀಮುವಾಚ। ರಥೇ ಸ್ಥಿತಾಂ ಭಾನುಮತೀಂ ಹತೌಜಾಃ।।
ಆ ಕುರುಪುಂಗವರ ಧ್ವಜಗಳ ತುದಿಯನ್ನು ಕಂಡ ದುರಾತ್ಮ ರಾಜಾ ಜಯದ್ರಥನು ತನ್ನ ರಥದಲ್ಲಿ ಹತಾಶಳಾಗಿ ನಿಂತಿದ್ದ ಭಾನುಮತಿ ಯಾಜ್ಞಸೇನಿಗೆ ಹೇಳಿದನು:
03254003a ಆಯಾಂತೀಮೇ ಪಂಚ ರಥಾ ಮಹಾಂತೋ। ಮನ್ಯೇ ಚ ಕೃಷ್ಣೇ ಪತಯಸ್ತವೈತೇ।
03254003c ಸಾ ಜಾನತೀ ಖ್ಯಾಪಯ ನಃ ಸುಕೇಶಿ। ಪರಂ ಪರಂ ಪಾಂಡವಾನಾಂ ರಥಸ್ಥಂ।।
“ಕೃಷ್ಣೇ! ಈ ಐದು ಮಹಾರಥಗಳಲ್ಲಿ ಬರುತ್ತಿರುವವರು ನಿನ್ನ ಪತಿಗಳೇ ಇರಬೇಕೆಂದು ತಿಳಿಯುತ್ತೇನೆ. ಸುಕೇಶೀ! ಅವರನ್ನು ನೀನು ಚೆನ್ನಾಗಿ ತಿಳಿದಿರುತ್ತೀಯೆ. ರಥದಲ್ಲಿರುವ ಪಾಂಡವರು ಯಾರು ಯಾರೆಂದು ಹೇಳು.”
03254004 ದ್ರೌಪದ್ಯುವಾಚ।
03254004a ಕಿಂ ತೇ ಜ್ಞಾತೈರ್ಮೂಢ ಮಹಾಧನುರ್ಧರೈರ್। ಅನಾಯುಷ್ಯಂ ಕರ್ಮ ಕೃತ್ವಾತಿಘೋರಂ।
03254004c ಏತೇ ವೀರಾಃ ಪತಯೋ ಮೇ ಸಮೇತಾ। ನ ವಃ ಶೇಷಃ ಕಶ್ಚಿದಿಹಾಸ್ತಿ ಯುದ್ಧೇ।।
ದ್ರೌಪದಿಯು ಹೇಳಿದಳು: “ಮೂಢ! ಈ ಹೊಲಸು ಮತ್ತು ಅತಿಘೋರ ಕರ್ಮವನ್ನು ಮಾಡಿ ಈಗ ಮಹಾಧನ್ವಿಗಳನ್ನು ತಿಳಿಯುವುದರಿಂದ ನಿನಗೇನಾಗುತ್ತದೆ? ಇಲ್ಲಿಗೆ ಬಂದಿರುವ ನನ್ನ ಪತಿಗಳು ಒಟ್ಟಾಗಿ ಯುದ್ಧದಲ್ಲಿ ನಿಮ್ಮನ್ನು ಯಾರನ್ನೂ ಉಳಿಸುವುದಿಲ್ಲ!
03254005a ಆಖ್ಯಾತವ್ಯಂ ತ್ವೇವ ಸರ್ವಂ ಮುಮೂರ್ಷೋರ್। ಮಯಾ ತುಭ್ಯಂ ಪೃಷ್ಟಯಾ ಧರ್ಮ ಏಷಃ।
03254005c ನ ಮೇ ವ್ಯಥಾ ವಿದ್ಯತೇ ತ್ವದ್ಭಯಂ ವಾ। ಸಂಪಶ್ಯಂತ್ಯಾಃ ಸಾನುಜಂ ಧರ್ಮರಾಜಂ।।
ಆದರೆ ಸಾಯಬೇಕಾದ ನಿನಗೆ ಎಲ್ಲವನ್ನೂ ಹೇಳಬೇಕು. ನನ್ನನ್ನು ಕೇಳಿದ ನಿನಗೆ ಹೇಳುವುದು ಧರ್ಮ! ಅನುಜರೊಂದಿಗೆ ಧರ್ಮರಾಜನನ್ನು ನೋಡುತ್ತಿರುವ ನನಗೆ ನಿನ್ನಿಂದ ವ್ಯಥೆಯೂ ಭಯವೂ ಆಗುತ್ತಿಲ್ಲ.
03254006a ಯಸ್ಯ ಧ್ವಜಾಗ್ರೇ ನದತೋ ಮೃದಂಗೌ। ನಂದೋಪನಂದೌ ಮಧುರೌ ಯುಕ್ತರೂಪೌ।
03254006c ಏತಂ ಸ್ವಧರ್ಮಾರ್ಥವಿನಿಶ್ಚಯಜ್ಞಂ। ಸದಾ ಜನಾಃ ಕೃತ್ಯವಂತೋಽನುಯಾಂತಿ।।
ಯಾರ ಧ್ವಜಾಗ್ರದಲ್ಲಿ ನೋಡಬೇಕಾದ ನಂದ ಮತ್ತು ಉಪನಂದ ಮೃದಂಗಗಳು ಮೊಳಗುತ್ತಿವೆಯೋ, ಆ ಸ್ವಧರ್ಮಾರ್ಥನಿಶ್ಚಯಜ್ಞನನ್ನು ಸದಾ ಕೃತ್ಯವಂತ ಜನರು ಅನುಸರಿಸುತ್ತಾರೆ.
03254007a ಯ ಏಷ ಜಾಂಬೂನದಶುದ್ಧಗೌರಃ। ಪ್ರಚಂಡಘೋಣಸ್ತನುರಾಯತಾಕ್ಷಃ।
03254007c ಏತಂ ಕುರುಶ್ರೇಷ್ಠತಮಂ ವದಂತಿ। ಯುಧಿಷ್ಠಿರಂ ಧರ್ಮಸುತಂ ಪತಿಂ ಮೇ।।
ಶುದ್ಧ ಬಂಗಾರದ ಬಣ್ಣದ, ಉದ್ದವಾದ ತೆಳು ಮೂಗಿನ, ಅಗಲ ಕಣ್ಣಿನ ಆ ನನ್ನ ಪತಿಯನ್ನು ಕುರುಶ್ರೇಷ್ಠತಮನೆಂದೂ, ಧರ್ಮಸುತ ಯುಧಿಷ್ಠಿರನೆಂದು ಹೇಳುತ್ತಾರೆ.
03254008a ಅಪ್ಯೇಷ ಶತ್ರೋಃ ಶರಣಾಗತಸ್ಯ। ದದ್ಯಾತ್ಪ್ರಾಣಾನ್ಧರ್ಮಚಾರೀ ನೃವೀರಃ।
03254008c ಪರೈಹ್ಯೇನಂ ಮೂಢ ಜವೇನ ಭೂತಯೇ। ತ್ವಮಾತ್ಮನಃ ಪ್ರಾಂಜಲಿರ್ನ್ಯಸ್ತಶಸ್ತ್ರಃ।।
ಶರಣಾಗತನಾದ ಶತ್ರುವಿಗೂ ಕೂಡ ಆ ಧರ್ಮಚಾರಿ ನನ್ನ ವೀರನು ಪ್ರಾಣವನ್ನು ಕೊಡುತ್ತಾನೆ. ಮೂಢ! ಅವನಿದ್ದಲ್ಲಿಗೆ ಬೇಗ ಓಡು. ನಿನ್ನ ಒಳ್ಳೆಯದಕ್ಕಾಗಿಯೇ ಶಸ್ತ್ರಗಳನ್ನು ತೊರೆದು, ಕೈ ಮುಗಿದು ಬೇಗ ಓಡು!
03254009a ಅಥಾಪ್ಯೇನಂ ಪಶ್ಯಸಿ ಯಂ ರಥಸ್ಥಂ। ಮಹಾಭುಜಂ ಶಾಲಮಿವ ಪ್ರವೃದ್ಧಂ।
03254009c ಸಂದಷ್ಟೋಷ್ಠಂ ಭ್ರುಕುಟೀಸಂಹತಭ್ರುವಂ। ವೃಕೋದರೋ ನಾಮ ಪತಿರ್ಮಮೈಷಃ।।
ಈಗ ಇನ್ನೊಂದು ರಥದಲ್ಲಿರುವ ಇನ್ನೊಬ್ಬ ಶಾಲದಂತೆ ಬೆಳೆದಿರುವ ಮಹಾಭುಜದವನನ್ನು ನೋಡುತ್ತಿರುವೆಯಲ್ಲಾ! ಅವನ ತುಟಿಗಳು ಬಿಗಿದಿವೆ. ಹುಬ್ಬುಗಳು ಗಂಟಿಕ್ಕಿವೆ. ಅವನೇ ವೃಕೋದರನೆಂಬ ಹೆಸರಿನ ನನ್ನ ಪತಿ.
03254010a ಆಜಾನೇಯಾ ಬಲಿನಃ ಸಾಧು ದಾಂತಾ। ಮಹಾಬಲಾಃ ಶೂರಮುದಾವಹಂತಿ।
03254010c ಏತಸ್ಯ ಕರ್ಮಾಣ್ಯತಿಮಾನುಷಾಣಿ। ಭೀಮೇತಿ ಶಬ್ದೋಽಸ್ಯ ಗತಃ ಪೃಥಿವ್ಯಾಂ।।
ಬಲಶಾಲಿಗಳಾದ, ಪಳಗಿದ, ಉತ್ತಮ ಥಳಿಯ, ಮಹಾಬಲಶಾಲಿ ಕುದುರೆಗಳು ಅವನನ್ನು ಒಯ್ಯುತ್ತಿವೆ. ಇವನ ಕೃತ್ಯಗಳು ಅಮಾನುಷವಾದವುಗಳು. ಇವನ ಕೂಗು ಈ ಭೂಮಿಯಲ್ಲಿ ಭೀಮ ಎಂದೇ ಆಗಿ ಹೋಗಿದೆ!
03254011a ನಾಸ್ಯಾಪರಾದ್ಧಾಃ ಶೇಷಮಿಹಾಪ್ನುವಂತಿ। ನಾಪ್ಯಸ್ಯ ವೈರಂ ವಿಸ್ಮರತೇ ಕದಾ ಚಿತ್।
03254011c ವೈರಸ್ಯಾಂತಂ ಸಂವಿಧಾಯೋಪಯಾತಿ। ಪಶ್ಚಾಚ್ಚಾಂತಿಂ ನ ಚ ಗಚ್ಚತ್ಯತೀವ।।
ಅಪರಾಧಿಗಳ್ಯಾರೂ ಇವನಿಂದ ಉಳಿದುಕೊಳ್ಳುವುದಿಲ್ಲ. ಇವನು ವೈರಿಯನ್ನು ಎಂದೂ ಮರೆಯಲಾರ! ವೈರತ್ವಕ್ಕೆ ಅಂತ್ಯವನ್ನು ನೀಡಿದನಂತರವೂ ತಕ್ಷಣವೇ ಇವನು ತಣ್ಣಗಾಗುವವನಲ್ಲ.
03254012a ಮೃದುರ್ವದಾನ್ಯೋ ಧೃತಿಮಾನ್ಯಶಸ್ವೀ। ಜಿತೇಂದ್ರಿಯೋ ವೃದ್ಧಸೇವೀ ನೃವೀರಃ।
03254012c ಭ್ರಾತಾ ಚ ಶಿಷ್ಯಶ್ಚ ಯುಧಿಷ್ಠಿರಸ್ಯ। ಧನಂಜಯೋ ನಾಮ ಪತಿರ್ಮಮೈಷಃ।।
ಮೃದು, ಉದಾರಿ, ಧೃತಿವಂತ, ಯಶಸ್ವಿ, ಜಿತೇಂದ್ರಿಯ, ವೃದ್ಧಸೇವಿ, ನರವೀರ, ಯುಧಿಷ್ಠಿರನ ತಮ್ಮನ್ನೂ ಶಿಷ್ಯನೂ ಆದ ಧನಂಜಯನೆಂಬ ಇವನು ನನ್ನ ಪತಿ.
03254013a ಯೋ ವೈ ನ ಕಾಮಾನ್ನ ಭಯಾನ್ನ ಲೋಭಾತ್। ತ್ಯಜೇದ್ಧರ್ಮಂ ನ ನೃಶಂಸಂ ಚ ಕುರ್ಯಾತ್।
03254013c ಸ ಏಷ ವೈಶ್ವಾನರತುಲ್ಯತೇಜಾಃ। ಕುಂತೀಸುತಃ ಶತ್ರುಸಹಃ ಪ್ರಮಾಥೀ।।
ಕಾಮವಾಗಲೀ, ಭಯವಾಗಲೀ, ಲೋಭವಾಗಲೀ ಇವನನ್ನು ಧರ್ಮವನ್ನು ತ್ಯಜಿಸುವವನನ್ನಾಗಲೀ, ಕ್ರೂರಕರ್ಮಗಳನ್ನು ಮಾಡುವವನನ್ನಾಗಲೀ ಮಾಡಲಾರವು. ತೇಜಸ್ಸಿನಲ್ಲಿ ವೈಶ್ವಾನರನ ಸಮಾನನಾದ ಈ ಕುಂತೀಸುತನು ಶತ್ರುಗಳನ್ನು ಚೆನ್ನಾಗಿ ಕಡೆಯುತ್ತಾನೆ.
03254014a ಯಃ ಸರ್ವಧರ್ಮಾರ್ಥವಿನಿಶ್ಚಯಜ್ಞೋ। ಭಯಾರ್ತಾನಾಂ ಭಯಹರ್ತಾ ಮನೀಷೀ।
03254014c ಯಸ್ಯೋತ್ತಮಂ ರೂಪಮಾಹುಃ ಪೃಥಿವ್ಯಾಂ। ಯಂ ಪಾಂಡವಾಃ ಪರಿರಕ್ಷಂತಿ ಸರ್ವೇ।।
03254015a ಪ್ರಾಣೈರ್ಗರೀಯಾಂಸಮನುವ್ರತಂ ವೈ। ಸ ಏಷ ವೀರೋ ನಕುಲಃ ಪತಿರ್ಮೇ।
ಸರ್ವಧರ್ಮಾರ್ಥವಿನಿಶ್ಚಯಗಳನ್ನು ತಿಳಿದಿರುವ, ಭಯಾರ್ತರ ಭಯವನ್ನು ಅಪಹರಿಸುವ ಮನೀಷೀ, ಭೂಮಿಯಲ್ಲಿ ಉತ್ತಮರೂಪಿಯೆಂದು ಕರೆಯಲ್ಪಡುವ, ಎಲ್ಲ ಪಾಂಡವರಿಂದಲೂ ಪರಿರಕ್ಷಿತನಾದ, ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿರುವ, ಹಾಗೆಯೇ ನಡೆದುಕೊಳ್ಳುವ, ಆ ವೀರನೇ ನನ್ನ ಪತಿ ನಕುಲ.
03254015c ಯಃ ಖಡ್ಗಯೋಧೀ ಲಘುಚಿತ್ರಹಸ್ತೋ। ಮಹಾಂಶ್ಚ ಧೀಮಾನ್ಸಹದೇವೋಽದ್ವಿತೀಯಃ।।
ಲಘುವಾದ ಚಳಕದ ಕೈಯುಳ್ಳ ಖಡ್ಗಯೋಧೀ ಮಹಾಧೀಮಂತ, ಅದ್ವಿತೀಯನು ಸಹದೇವನು.
03254016a ಯಸ್ಯಾದ್ಯ ಕರ್ಮ ದ್ರಕ್ಷ್ಯಸೇ ಮೂಢಸತ್ತ್ವ। ಶತಕ್ರತೋರ್ವಾ ದೈತ್ಯಸೇನಾಸು ಸಂಖ್ಯೇ।
03254016c ಶೂರಃ ಕೃತಾಸ್ತ್ರೋ ಮತಿಮಾನ್ಮನೀಷೀ। ಪ್ರಿಯಂಕರೋ ಧರ್ಮಸುತಸ್ಯ ರಾಜ್ಞಃ।।
ಮೂಢ! ಯುದ್ಧದಲ್ಲಿ ದೈತ್ಯಸೇನೆಯೊಡನೆ ಹೋರಾಡುವ ಶತಕ್ರತುವಿನಂತಿರುವ ಅವನ ಕೈಚಳಕವನ್ನು ಇಂದು ನೀನು ನೋಡುವೆ. ಈ ಶೂರ, ಕೃತಾಸ್ತ್ರ, ಮತಿವಂತ ಮನೀಷಿಯು ರಾಜ ಧರ್ಮಸುತನ ಪ್ರಿಯಂಕರ.
03254017a ಯ ಏಷ ಚಂದ್ರಾರ್ಕಸಮಾನತೇಜಾ। ಜಘನ್ಯಜಃ ಪಾಂಡವಾನಾಂ ಪ್ರಿಯಶ್ಚ।
03254017c ಬುದ್ಧ್ಯಾ ಸಮೋ ಯಸ್ಯ ನರೋ ನ ವಿದ್ಯತೇ। ವಕ್ತಾ ತಥಾ ಸತ್ಸು ವಿನಿಶ್ಚಯಜ್ಞಃ।।
ಇವನು ತೇಜಸ್ಸಿನಲ್ಲಿ ಸೂರ್ಯಚಂದ್ರರ ಸಮಾನನು. ಪಾಂಡವರ ಅತಿಕಿರಿಯ ಮತ್ತು ಪ್ರಿಯನಾದವನು. ಬುದ್ಧಿಯಲ್ಲಿ ಇವನ ಸಮನಾದ ನರನು ಗೊತ್ತಿಲ್ಲ. ಸತ್ಸಂಗದಲ್ಲಿ ವಿನಿಶ್ಚಯಗಳನ್ನು ತಿಳಿದವನಂತೆ ಮಾತನಾಡುತ್ತಾನೆ.
03254018a ಸ ಏಷ ಶೂರೋ ನಿತ್ಯಮಮರ್ಷಣಶ್ಚ। ಧೀಮಾನ್ಪ್ರಾಜ್ಞಃ ಸಹದೇವಃ ಪತಿರ್ಮೇ।
03254018c ತ್ಯಜೇತ್ಪ್ರಾಣಾನ್ಪ್ರವಿಶೇದ್ಧವ್ಯವಾಹಂ। ನ ತ್ವೇವೈಷ ವ್ಯಾಹರೇದ್ಧರ್ಮಬಾಃಯಂ।।
03254018e ಸದಾ ಮನಸ್ವೀ ಕ್ಷತ್ರಧರ್ಮೇ ನಿವಿಷ್ಟಃ। ಕುಂತ್ಯಾಃ ಪ್ರಾಣೈರಿಷ್ಟತಮೋ ನೃವೀರಃ।।
ಈ ಶೂರನು ನಿತ್ಯವೂ ಅಮರ್ಷಣ. ನನ್ನ ಪತಿ ಸಹದೇವನು ಧೀಮಂತ ಮತ್ತು ಪ್ರಾಜ್ಞ. ಅವನು ತನ್ನ ಪ್ರಾಣವನ್ನು ಅಗ್ನಿಯನ್ನು ಪ್ರವೇಶಿಸಿಯಾದರೂ ತ್ಯಜಿಸಿಯಾನು, ಆದರೆ ಧರ್ಮಕ್ಕೆ ಹೊರತಾಗಿ ನಡೆದುಕೊಳ್ಳುವುದಿಲ್ಲ. ಸದಾ ಕ್ಷತ್ರಧರ್ಮದಲ್ಲಿ ಮನಸ್ಸಿಟ್ಟು ನಡೆದುಕೊಳ್ಳುವ ಈ ನರವೀರನನ್ನು ಕುಂತಿಯು ತನ್ನ ಪ್ರಾಣಕ್ಕಿಂತಲೂ ಅಧಿಕವಾಗಿ ಕಾಣುತ್ತಾಳೆ.
03254019a ವಿಶೀರ್ಯಂತೀಂ ನಾವಮಿವಾರ್ಣವಾಂತೇ। ರತ್ನಾಭಿಪೂರ್ಣಾಂ ಮಕರಸ್ಯ ಪೃಷ್ಠೇ।
03254019c ಸೇನಾಂ ತವೇಮಾಂ ಹತಸರ್ವಯೋಧಾಂ। ವಿಕ್ಷೋಭಿತಾಂ ದ್ರಕ್ಷ್ಯಸಿ ಪಾಂಡುಪುತ್ರೈಃ।।
ಸಾಗರದ ಕೊನೆಯಲ್ಲಿ ಮಕರದ ಬೆನ್ನಿಗೆ ಸಿಲುಕಿ ಒಡೆದುಹೋಗುವ ರತ್ನಗಳಿಂದ ತುಂಬಿದ ನಾವೆಯಂತೆ ನಿನ್ನ ಈ ಸೇನೆಯ ಎಲ್ಲ ಯೋಧರೂ ಪಾಂಡುಪುತ್ರರಿಂದ ಹತರಾಗಿ ನಾಶವಾಗುವುದನ್ನು ನೀನು ನೋಡುವೆ!
03254020a ಇತ್ಯೇತೇ ವೈ ಕಥಿತಾಃ ಪಾಂಡುಪುತ್ರಾ। ಯಾಂಸ್ತ್ವಂ ಮೋಹಾದವಮನ್ಯ ಪ್ರವೃತ್ತಃ।
03254020c ಯದ್ಯೇತೈಸ್ತ್ವಂ ಮುಚ್ಯಸೇಽರಿಷ್ಟದೇಹಃ। ಪುನರ್ಜನ್ಮ ಪ್ರಾಪ್ಸ್ಯಸೇ ಜೀವ ಏವ।।
ಹೀಗೆ ನಾನು ನಿನಗೆ, ಯಾರನ್ನು ನೀನು ಮೋಹದಿಂದ ಅಪಮಾನಿಸಲು ತೊಡಗಿದ್ದೀಯೋ ಆ ಪಾಂಡುಪುತ್ರರ ಕುರಿತು ಹೇಳಿದ್ದಾಯಿತು. ಏನೂ ತಾಗದೇ ನಿನ್ನ ದೇಹವನ್ನು ಇವರಿಂದ ಉಳಿಸಿಕೊಂಡಿದ್ದೇ ಆದರೆ ನೀನು ಬದುಕಿದ್ದೂ ಪುನಃಜೀವವನ್ನು ಪಡೆದಂತೆ!””
03254021 ವೈಶಂಪಾಯನ ಉವಾಚ।
03254021a ತತಃ ಪಾರ್ಥಾಃ ಪಂಚ ಪಂಚೇಂದ್ರಕಲ್ಪಾಸ್। ತ್ಯಕ್ತ್ವಾ ತ್ರಸ್ತಾನ್ಪ್ರಾಂಜಲೀಂಸ್ತಾನ್ಪದಾತೀನ್।
03254021c ರಥಾನೀಕಂ ಶರವರ್ಷಾಂಧಕಾರಂ। ಚಕ್ರುಃ ಕ್ರುದ್ಧಾಃ ಸರ್ವತಃ ಸನ್ನಿಗೃಹ್ಯ।।
ವೈಶಂಪಾಯನನು ಹೇಳಿದನು: “ಆಗ ಪಂಚ ಇಂದ್ರರಂತೆ ತೋರುತ್ತಿದ್ದ ಪಂಚ ಪಾರ್ಥರು ಕೈಮುಗಿದು ನಡುಗುತ್ತಿದ್ದ ಪದಾತಿಗಳನ್ನು ಬಿಟ್ಟು ಕೃದ್ಧರಾಗಿ ರಥಾನೀಕರ ಮೇಲೆ ಶರಗಳ ಮಳೆಯನ್ನು ಸುರಿಸಿ ಎಲ್ಲೆಡೆಯೂ ಅಂಧಕಾರವಾಗುವಂತೆ ಮಾಡಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ದ್ರೌಪದೀವಾಕ್ಯೇ ಚತುಷ್ಪಂಚಾಶದಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ದ್ರೌಪದೀವಾಕ್ಯದಲ್ಲಿ ಇನ್ನೂರಾಐವತ್ನಾಲ್ಕನೆಯ ಅಧ್ಯಾಯವು.